೭೧. ದೇವನಮೋಜಿನದೇವ
ದೇವ ನಮೋ ಜಿನದೇವ ನಮೋ ವಿಶ್ವ
ಜೀವ ರಕ್ಷಕ ಸಂಜೀವ ನಮೋ || ಪಲ್ಲವಿ
ಮಾತಿನಾ ಮಾಲೆಯಲ್ಲಿ ಬರಿದೆ ಹೊತ್ತುಗಳೆ
ದೇತಕ್ಕೆ ಕೆಟ್ಟು ಹೋಗುತಿಹರಯ್ಯ
ವೀತರಾಗ ನಿಮ್ಮ ನಾಮವ ನೆನೆದರೆ
ಪಾತಕ ಕೋಟಿ ಪರಿಹಾರವಯ್ಯ || ೧
ಅರುಹದೇವ ನಮೋ ಅಬ್ಜಕರ್ಣಿಕೆಗೆ ನಾ
ಲ್ವೆರಳಷ್ಟು ಸೋಂಕದಿರ್ಪ್ಪ ಮುಖಗೆ ನಮೋ
ನರ ಸಾರೋರನ ರಾಜರಾಜೀ ಮಕುಟಮಣಿ
ಕಿರಣ ರಂಜಿತ ಪದಪದ್ಮ ನಮೋ || ೨
ದೇವೋತ್ತಮ ನಮೋ ದಿವ್ಯವಾಕ್ಪತಿ ನಮೋ
ದೇವದೇವೇಶ ವಂದಿತನೇ ನಮೋ
ದೇವಗಿರಿಯಲಂದು ಪಾಲುಗಡಲು ಮಿಂದ
ದೇವ ಶಿರೋಮಣಿ ನಮೋ ನಮೋ || ೩
ಕೋಟಿ ಚಂದ್ರಾರ್ಕರ ಕಾಂತಿಯ ಮಿನುಪ ಅ
ಪೂಟ ಪರಂಜ್ಯೋತಿ ರೂಪ ನಮೋ
ಲೂಟಿವರಿವ ಘಾತಿಕರ್ಮ ಸಂತತಿಗೆ ನೇ
ರ್ದ್ದಾಟಿ ನಮೋ ನಿರಪೇಕ್ಷ ನಮೋ || ೪
ಮಂಗಲಮಯವಾದ ಸೊಬಗಿನ ದಿವ್ಯ ಮು
ಕ್ತಾಂಗನೆಯರಸನೆ ನಮೋ ನಮೋ
ಶೃಂಗಾರಕವಿ ಹಂಸರಾಜನೊಡೆಯ ನಿರ್ಮ
ಲಾಂಗ ಸಮುದ್ರಾಧೀಶ ನಮೋ ನಮೋ || ೫
೭೨. ಏನೆಂಬೆನೋಡುನರರ
ಏನೆಂಬೆ ನೋಡು ನರರ ಬಾಳೆಲ್ಲ ವೃ
ತಾನಿಂದ್ರಜಾಲವಾಗಿದೆ || ಪಲ್ಲವಿ
ಮರೆವಲ್ತು ಮುದ್ದುದೋರಿದೇಕೆಂಬಲ್ಲ
ಹೊರಹುದೋರಿ ಮೋಹಿಸುತಿದೆ
ಘಳಿಲನೆ ಬಾಡುವಾಯಿ ವಿಳ್ಯವ
ದೋರಿ ಹಲಬರ ನಗಿಸುತಲಿದೆ || ೧
ಬರುಮೊರೆ ಮುದ್ದುದೋರಿದೆ ಎಳಮಿಸಿ
ಸರಿದೊರೆದುರೆ ಮರೆಮಾಸುತಿದೆ
ಮರೆಯೇಕೆ ಮತ್ತೆ ಕರಿದು ಬಿಳಿದುವಾಗಿ
ಸಿರ ಮಂಡಿಗೆ ಸವಿಗೆಡುತಿದೆ || ೨
ಆಡುತಾಡುತಲಿರ್ದು ಬಯಲಾಗಿ
ಕೂಡೊಂದು ರೂಪದೋರಿದೆ
ನೋಡಿರೆ ಸಮುದ್ರಾಧೀನಾಥನ ಪೂಜೆ
ಮಾಡದೆ ದುಃಖಬಡುತಿದೆ || ೩
೭೩. ಎಂತಾಗಲಿರುವೆನಾ
ಎಂತಾಗಲಿರುವೆ ನಾ ನಿನ್ನೆಂತು ಮರೆವೆ
ಚಿಂತಿಸಿದರ್ಥವನೀವ ನಿರಂಜನ ಸಿದ್ಧನ || ಪಲ್ಲವಿ
ಉಡದೆ ತೊಡದೆ ಸೊಬಗನ ಚೆಲುವನ ದೇಹ
ವಿಡಿದು ನಿರ್ದ್ದೆಹಿಯಾದ ಚಿನ್ಮಯಾಂಗನ
ಪಿಡಿದು ಧ್ಯಾನಿಸುತಿಹ ತನ್ನೊಳಿರ್ದ ಮೂರು ದೇಹವ
ಸುಡುವ ಸಾಮರ್ಥ್ಯವುಳ್ಳ ಪರಂಜ್ಯೋತಿ ಜಾತನ || ೧
ಮೂರು ರತ್ನ ಪನ್ನೆರಡು ತಪಸು ಪಂಚಾ
ಚಾರದಿ ಬೇರಿಟ್ಟು ಮೊದಲು ತೋರಿ ಮತ್ತೆ ತನ್ನೊಳು
ಬೇರಾಗದೆ ಕಾಣಿಸಿ ತನ್ನಿಂದ ತನ್ನನೆ ನೋಳ್ಪ
ಮೂರು ಲೋಕದ ವಿಸ್ಮಯ ಪರಂಜ್ಯೋತಿ ರೂಪನ || ೨
ಸರ್ವಥಾ ಮುಖನ ಸರ್ವತೋದಯನ ಸುಖ
ಸರ್ವಾಂಗ ತುಂಬಿ ತೋರುವ ಪರಂಜ್ಯೋತಿಯ
ಸರ್ವಜ್ಞನ ಶಾಂತನ ನಿಶ್ಚಿಂತನ ಸುಖಾಂತನ ಸು
ಪರ್ವರಾಜ ಪದವಿಯ ಮೀರಿ ಮುಕ್ತಿಗೇರುವನಾ || ೩
೭೪. ಹಾಹಾಕಷ್ಟಜ್ಞಾನದೇಹಿ
ಹಾಹಾ ಕಷ್ಟ ಜ್ಞಾನದೇಹಿ ಭ್ರಾಂತಿ ಸಿಕ್ಕದ ನೋಡಾ || ಪಲ್ಲವಿ
ಪೇಳಲಂಬರದಂತಿಹಾತ್ಮನ ಕರ್ಮ
ದೊಳೆಯೊಳಾರು ಹೂಳಿದರಯ್ಯಾ || ೧
ತಾನೆ ತನ್ನೊಳು ನಿಂದರಮೃತಕೆ ಹೋಹ
ಶ್ರೀನಿರಂಜನ ಸಿದ್ಧಗಿಂತಾಯಿತೆ || ೨
೭೫. ಗೆದ್ದೆಹೋಗೂಮೈಯೊಳೆದ್ದ
ಗೆದ್ದೆ ಹೋಗೂ ಮೈಯೊ
ಳೆದ್ದ ಜಾತಿಯ ಕಂಡು ಮಾಯೆಯು || ಪಲ್ಲವಿ
ಶಬ್ದಭ್ರಾಂತಿಗೆ ಸಿಕ್ಕಿ ಮರುಗದೆ ನಿಃ
ಶಬ್ದ ನಿಶ್ಚಿಂತ್ವಂತ ರೂಪಿನೊಳಾಡೆ || ೧
ತನು ಕಂಗೆಡಿಸಿತಪ್ಪಾರಾದೆ ನಿನ್ನ
ಮನವ ದಂಡಿಸಿ ನಿಜದೊಳು ಕೂಡಿ || ೨
ರಂಜನ ಲೌಕಿಕತೆ ಆಗದೆ ನಿ
ರಂಜನ ಸಿದ್ಧನನ ಮೆಚ್ಚಿ || ೩
೭೬. ಭೇದವಿಜ್ಞಾನರಾಜ್ಯ
ಭೇದ ವಿಜ್ಞಾನ ರಾಜ್ಯದೊಳು
ವೇದನೆಯ ತಾಳು ಸುಬೋಧೆ ಇದು ಕೇಳು || ಪಲ್ಲವಿ
ನುಡಿ ಮನಸೇಂದ್ರಿಯ ಶ್ವಾಸ ನಿಶ್ವಾಸ ಮೂ
ರೊಡಲು ಬೇಧವು ಜಾತಿ ನಿನ್ನವಲ್ಲ ಕರ್ಮ
ದೊಡವೆಯಲ್ಲ ಇದ್ದರೂ ನೀರಸಲ್ಲ || ೧
ಮೇಣ ಸೋರಿದೊಂದು ಮೂಷಿಯೊಡಲಬನಾದಂತೆ
ಕೋಣೆಯೊಳಗಿರ್ದೆನೆಂದು ನಿನ್ನ ನೋಡಿ ಸುಖ
ಶ್ರೇಣಿಗಿದು ಬಿಡು ಕರ್ಮವ ಕ್ಷೀಣವ ಮಾಡು || ೨
ಧ್ಯಾನವೊಂದಲ್ಲದೆ ಮಿಕ್ಕವೇನೂ ನನ್ನವಲ್ಲೆಂದು
ಧ್ಯಾನದಲಿ ನೋಡು ನಿರಂಜನ ಸಿದ್ಧನ ಯಜ
ಮಾನ ಬುದ್ಧನಾ ಸರ್ಪಸ್ಥಾನ ಶುದ್ಧನಾ || ೩
೭೭. ಜಿನರೆನ್ನುನಿಚ್ಚಜಿನ
ಜಿನರೆನ್ನು ನಿಚ್ಚ ಜಿನರೆನ್ನು ನಿಚ್ಚ
ಜಿನ ಜಿನಸಿದ್ಧರೆಂದೆನ್ನು ಕಂಡು ಮನವೇ || ಪಲ್ಲವಿ
ಜಿನಜಿನರೆಂದು ಜಿನುಗುವ ಮನುಜನ
ಮನದೊಳು ಹೊರಗೆಲ್ಲ ಮಂಗಳ ಕಂಡಾ || ೧
ಕನಸಿನೊಳಗೆ ಕಳವಳವೆಂಬುದಾಗದು
ನೆನೆದ ಕಾರ್ಯಕೆ ನಿಮಿಷದಿ ಸಿದ್ದಿ ಕಂಡಾ || ೨
ಬದ್ಧಕರ್ಮಕೆ ಸಿಕ್ಕಿ ಬಳಲುವವರಿಗೆ ಜಿನ
ಸಿದ್ಧನಾಮವೆ ಜೀವನ ಸಿದ್ಧಿ ಕಂಡಾ || ೩
ಆಗಮ ತತ್ವದ ತಿರುಳಿದು ಶ್ರೀ ವೀತ
ರಾಗ ವಿದ್ಯಾನಂದ ಜಯವೆನ್ನು ಮನವೇ || ೪
ಭ್ರಾಂತಿಯ ಕೆಡಿಸುವ ಬಲು ಮಂತ್ರವಿದು ಅರಿ
ಹಂತರಿರ್ಪ ಅಸಿ ಆಉಸಸಾಯೆನ್ನು || ೫
ನಿದ್ರೆ ಪೊರೆವದು ನಿರಾತಂಕವಹುದು ಸ
ಮುದ್ರಾಧಿ ಪರಮೇಶ ಶರಣೆನ್ನು ಮನವೇ || ೬
ಬಂಧನವಳಿದು ಬೇಗ ಶಿವಪದವಹುದು ಶ್ರೀ
ಮಂದರಸ್ವಾಮಿ ನಮೋ ನಮೋ ಎನ್ನು || ೭
ತಪಸು ಮಾಡಿದ ಫಲ ತನ್ನ ತಾ ದೊರೆಕೊಂಬು
ದಪರಾಜಿತೇಶ್ವರ ಜಯವೆನ್ನು ಮನವೇ || ೮
ಅಂಬರ ಚಿನ್ಮಯ ಪುರುಷಾಕಾರ ಚಿ
ದಂಬರ ಪುರುಷ ನಮೋ ನಮೋಯೆನ್ನು || ೯
ದಂಸಣಾನೊ ಚರಿಂತೆ ಮೂರೆ ಗುರು
ಹಂಸನಾಥ ನಮೋಯೆನ್ನು ಮನವೇ || ೧೦
ಅಂಜನವೆನಿಪ ಕರ್ಮಾಂಜನವಳಿದ ನಿ
ರಂಜನ ಸಿದ್ಧ ನಮೋಯೆನ್ನು || ೧೧
೭೮. ಅರಿದರಿದೆಜಿನತಪಸು
ಅರಿದರಿದೆ ಜಿನ ತಪಸು ಅರರೆ ಮತ್ತೆ
ಡರೊಳಗಾತ್ಮ ಧ್ಯಾನವೆಂಬುದ
ನರಿದೆನೊಳರಿದೆ ತತ್ವದಲಿ ಹಿರಿದಿಗೆ
ಹಿರಿದು ಕರ್ಮವೆಂಬ ಅರಿಗೆದ್ದು ತೊಟ್ಟ ಬಿರುದು || ಪಲ್ಲವಿ
ಹಲವು ಶಾಸ್ತ್ರವನೋದಬಹುದು ನುಡಿಯಿಂದ
ಹಲಬರ ತಲೆದೂಗಿಸಬಹುದು
ಹಲವು ಕಡೆಗೆ ಹೋಹ ಮನವೆಂಬ ಮರ್ಕಟವ
ನಿಲಿಸುವುದರಿದು ತನ್ನಲ್ಲಿ ತಾ
ನೆಲೆಗಾಣ್ಬುದರಿದು ಆತ್ಮಧ್ಯಾನ
ದಲ್ಲಿ ನಿಲ್ಲ ಯೋಗ ಪರಿವಿದೂ || ೧
ತನುವ ತಾ ದಂಡಿಸಲಿಬಹುದು ತೀರ್ಥಜಾತ್ರೆ
ಯನು ದೇಶವ ಸುತ್ತಬಹುದು ಆತ್ಮ
ಧ್ಯಾನದಲಿ ನಿಲ್ಲು ಯೋಗವರಿದು
ಮನವ ದಂಡಿಸಲರಿದೊಡಲೊಳಾಧ್ಯಾತ್ಮ ದೇ
ವನ ನೋಡಲರಿದು ತನ್ನಲ್ಲಿ ತಾ
ಮನೆ ಮಾಡಲರಿದು ಬಾಹ್ಯ ಚಿಂತನೆಯ ತಾ ತೋರುವುದರಿದು || ೨
ಒಡಕಾಗಿಹುದು ಕೈಧ್ಯಾನ ಆತ್ಮಧ್ಯಾನ
ತುಡುಕಿ ಸಾಧಿಸುವಾಗ ಬೆರೆದು
ಬಿಡದೆ ವಿಸ್ತಾರದ ಪೊಡವಿಯಷ್ಟುದ್ದ ಮೂರಂಗದ
ನಡುವಿದು ಶುದ್ಧ ಧ್ಯಾನಿಸಿದವ
ಕಡೆಗೆ ನಿರಂಜನ ಸಿದ್ಧ || ೩
೭೯. ನಿನ್ನಹೆಸರೇನೊ
ನಿನ್ನ ಹೆಸರೇನೊ ನಿನ್ನ
ಮುನ್ನ ಕಂಡುದಿಲ್ಲ ಇಂದು ಕಂಡೆನಾ || ಪಲ್ಲವಿ
ಪಂಚವರ್ಣ ನಿನಗಿಲ್ಲ ಪ್ರಕಾಶವೇ ರೂಪಾಗಿಸಿದೇಕೊ
ಪಂಚೇಂದ್ರಿಯವೆಲ್ಲ ಸುಖ ಸೊಂಪಾಗಿದೆ ಜ್ಞಾನ ಪೆಂಪಾಗಿದೆ || ೧
ಗಂಧವಿಲ್ಲ ರಸವಿಲ್ಲ ಮೈಯೊಳಿರ್ದು ಮೈಯಸಂ
ಬಂಧವಿಲ್ಲ ಮಾತು ಮನ ನಿನಗಿಲ್ಲ ಚೋದ್ಯವು ಜಗಕೆಲ್ಲ || ೨
ಅಂಜನವೆಂದರೆ ಕರ್ಮ ಕರ್ಮಂಜನ ಹೊದ್ದದೆ ನಿ
ರಂಜನ ಸಿದ್ಧವೆಂದಲ್ಲವೆ ನಿನ್ನ ನಾಮ ಅದು ನನ್ನ ಕ್ಷೇಮ || ೩
೮೦. ಒಳಗೆಬೇಧಿಸಬೇಕು
ಒಳಗೆ ಬೇಧಿಸಬೇಕು ನಿಚ್ಚ || ಪಲ್ಲವಿ
ಧ್ಯಾನವಿಲ್ಲದೆ ಮುಕ್ತಿಯಹುದೆ
ತನ್ನ ತಾ ನೋಡದವನ ಬಲ್ಲವ
ನೆನ್ನಬಹುದೆ ಜ್ಞಾನವೆಂಬುದು ಹೊರಗಿಹುದೆ
ಮೈಯ ಬೇನೆ ಬಿಡಿಸಲದು ಮೋಕ್ಷಕೇತಹುದೇ || ೧
ತನುವ ದಂಡಿಸಿದೊಮ್ಮೆ ಮಾಣಾ
ನಿನ್ನ ಮನವ ದಂಡಿಸಿ ಪರಮಾತ್ಮನ ಕಾಣಾ
ನೆನಹು ಸುತ್ತುವುದಾವ ಜಾಣಾ ಮುಕ್ತಿ
ನಿನ್ನಗಿನ್ನು ದೂರವಲ್ಲಲ್ಲೊಂದೆ ಕಾಣಾ || ೨
ತನ್ನ ಕಂಡವಗೆ ಕೇಡಿಲ್ಲ ಮುಕ್ತಿ
ಕನ್ನೆಗಾತನೇ ಮೆಚ್ಚಿದನಲಿ
ಭಿನ್ನ ವಸ್ತುವ ಸರಸಲ್ಲಿ ಸುಪ್ರ
ಸನ್ನ ನಿರಂಜನ ಸಿದ್ಧನೇ ಬಲ್ಲ || ೩
Leave A Comment