೧೭೧. ಹಾರಿತುಉದ್ದಕೆ

ಹಾರಿತು ಉದ್ದಕೆ ಹಾರಿತು ಹಂಸ
ಮೀರಿದ ಪರಮಾನಂದದ ಸುಖತಲೆ
ಗೇರಿದ ಬಳಿಕಲದೇಕೆ ನಿಲ್ಲುವದು ||   ಪಲ್ಲವಿ

ತನುವವಿನ ಸುಖವೆಂಬ ಅಸುಖವನೆ
ಅನುದಿನ ತಾನುಂಡು ಚಿನುಮಯ ರೂಪ ಸೀಮೆಯ ಸುಗ್ಗಿಯ

ತನಿಪಾಲನೆ ಕಂಡುದಕೆ ನಿಲ್ಲುವದು || ೧
ಸಾರವಲ್ಲದ ಬಯಲಾಭವ ಕಾಂ
ತಾರದಿ ತಿರುತಿರುಗಿ ಸೇರಿದುರುವೆಂಬ ಬೆಟ್ಟವನಮೃತ ಶೃಂ
ಗಾರವ ಕಂಡೊಳಿದಕೆ ನಿಲ್ಲುವದು ||  ೨

೧೭೨. ಹೆಸರೇನೂನಿನ್ನ

ಹೆಸರೇನೂ ನಿನ್ನ ಹೆಸರೇನೂ ಮುನ್ನ ಕಂಡುದಿಲ್ಲ
ಇಂದು ಕಂಡೆ ನಾನೂ ||    ಪಲ್ಲವಿ

ಪಂಚ ವರ್ಣ ನಿನ್ನೊಳುಯಿಲ್ಲ ಪ್ರಕಾಶವೆ ರೂಪಾಗಿದೇಕೊ
ಪಂಚೇಂದ್ರಿಯವಿಲ್ಲ ಸುಖ ಸೊಂಪಾಗಿದೆಕೋ ರೂಪು
ತಂಪಾಗಿದೆ ಜ್ಞಾನ ಪೆಂಪಾಗಿದೆ ||    ೧

ಗಂಧವಿಲ್ಲ x x x ಮೈಯೊಳಿರ್ದು ಮೈಯ್ಯ ಸಂ
ಬಂಧವಿಲ್ಲ ಮಾತುಮನ ನಿನಗಿಲ್ಲ ನುಡಿಗಳವಲ್ಲ
ಚೋದ್ಯ ಜಗಕೆಲ್ಲಾ ||        ೨

ಅಂಜನವೆಂದೊಡೆ ಕರ್ಮಾಂಜನವು ಹೊದ್ದದ ನಿ
ರಂಜನಸಿದ್ಧನೆಂದೆಲ್ಲಾ ನಿನ್ನ ನಾಮಾ ಅದು ನನ್ನ
ಕ್ಷೇಮಾ ಶುದ್ಧ ಪರಿಣಾಮಾ ||         ೩

೧೭೩. ಹೇಗೆಭೋಗಿಸುವಿರಿ

ಹೇಗೆ ಭೋಗಿಸುವಿರಿ ದುರ್ವಿಷಯದ ಮಾತು ಕಿಡಿ
ದಾಗಿದಾಗ ಎದೆ ಧಿಗಿಲೆನುತಿದೆ ಅಕಟಾ ||     ಪಲ್ಲವಿ

ಬಾಳಿನ ಬಾಯಧಾರೆಯಲ್ಲಿ ತೊಡೆದ ಜೇನೆಯ ನೆಕ್ಕೆ
ನಾಲಿಗೆ ನೀಗುವರಂದದಿ ಕಾಮಸುಖಕ್ಕೆ
ಬೇಳಾಗಿ ಬೆರೆದು ಬಂದಂತೆ ನಡೆದು ನಾಳೆ
ಬೀಳುವರೊ ನರಕಕುಂಡಕೆ ಜಡರಕಟಾ ||     ೧

ಸುಣ್ಣದ ಬಿಳುಪ ನೋಡಿ ಕೈದುಡಿಕಿ ಹೊಸ
ಬೆಣ್ಣೆಯಂದು ಮೆದ್ದು ಮರಗುವ ಮಕ್ಕಳಂದದಿ
ಹೆಣ್ಣು ಹೊನ್ನು ಮಣ್ಣಿನಿಂದ ಸುಖವೆಂದು ಹೊದ್ದಿಸುಡುವ
ಸುಣ್ಣದಂತೆ ಕುಡಿವರೊ ಜಡರಕಟಾ ||         ೨

ಬೀಜವ ಸುಟ್ಟಾಗಳೆ ವೃಕ್ಷವು ಕೆಡುವಂದದಿ
ಮಾಜಿ ವಿಷಯವ ಬಿಟ್ಟವಗೆ ಪಾಪವಿಲ್ಲಾ
ಈ ಜೋಕೆಯನರಿದು ಜಿತೇಂದ್ರಿಯರಾಗಿ ಅಪ
ರಾಜಿತೇಶ್ವರನ ಸನ್ನಿಧಿಯ ಸಾರಲೊಲ್ಲದೆ ||   ೩

೧೭೪. ಹೇಳಬೇಕೆಂದೊಮ್ಮೆ

ಹೇಳಬೇಕೆಂದೊಮ್ಮೆ ಹೇಳಿದೆನೈಸೆ
ಕೇಳದಿರ್ದರೇನಾಯಿತೊ ನನಗೇನು ನಷ್ಟ ||   ಪಲ್ಲವಿ

ಎಲೆ ಜೀವಗಳಿರಾ ಈ ತನು ನಿತ್ಯವಲ್ಲಾ ನಿ
ಚ್ಚಲು ದಾನಧರ್ಮವ ಮಾಡಿರೋಯೆಂದೆ
ಛಲವ ತೊಟ್ಟೆಲ್ಲರು ಕೇಳದಿರ್ದೊಡೆ ನಾಳೆ
ಹಲವು ಜನ್ಮಕೆ ಬಿದ್ದರೆಮಗೇನು ನಷ್ಟ ||        ೧

ಹಗಲಿರುಳೆರಡು ಬಳ್ಳದಲಾಯುಷ್ಯದ ರಾಸಿ
ತೆಗೆದಳವುತಲಿದೆ ತೀರದ ಮುನ್ನ
ಮಿಗೆ ಪುಣ್ಯ ಸಂಗ್ರಹಗಳ ಮಾಡಿರೆಂದೆ ಸು
ಮ್ಮನೆಯಿದ್ದು ಕೆಟ್ಟಡೆಮಗೇನು ನಷ್ಟ ||          ೨

ತನುವಿಗೆ ಕೇಡಿಲ್ಲದಾತ್ಮಗೆ ಕೇಡಿಲ್ಲ
ಮನುಜರಲ್ಲಾತ್ಮ ಸಿದ್ಧಿಯ ಮಾಡಿರೆಂದೆ
ಜನರು ಚಿದಂಬರ ಪುರುಷನ ಮರೆದು ಮೈ
ಯ ನೆಚ್ಚಿ ಹುಚ್ಚಾದರೆಮಗೇನು ನಷ್ಟ ||         ೩

೧೭೫. ಹೋಯಿತುಹೋಯಿತು

ಹೋಯಿತು ಹೋಯಿತು ಹೋಯಿತಿನ್ನೆತ್ತಳ ಕಾಂಸೆ
ಮಾಯದ ತಂತ್ರವ ಮೀರಿ ಮಗುಳದ ಪದವಿಗೆ ಹಂಸಾ ||        ಪಲ್ಲವಿ

ತೊಗಲ ಬೊಂಬೆಯ ಹೊಕ್ಕಾಡಿದ ಎದೆ
ಧಿಗಿಲೆಂದೊಡನೆ ಭೀತಿ ಮಾಡಿ ಮಾಡಿ
ಹಗೆಗಳ ಹರಿಹಂಚ ಮಾಡಿ ನಸು
ನಗುತಿತ್ತು ಹೊಮ್ಮರಿದಾಡಿ ||        ೧

ನಾಲ್ಕು ಗತಿಗೆ ಮುನ್ನ ಹೋಗಿ ಹಲ
ವಾಕಾರದಿ ತೂಗಿ ನೀಗಿ
ಶೋಕದಿ ತಳುವೆಳಗಾಗಿ ಇನ್ನು
ಸಾಕೆಂದು ತಲೆದೂಗಿ ಬಾಗಿ ||        ೨

ಈ ಜನ್ಮವ ಮರಣ ವಾರುಧಿಗೆ ಮೋಹ
ಬೀಜವಂದಿಲ್ಲದಾ ನಿಧಿಗೆ
ವೋಜೆಯಿಂ ಸೌಖ್ಯಾಂಬುಧಿಗೆ ಅಪ
ರಾಜಿತೇಶ್ವರನ ಸನ್ನಿಧಿಗೆ || ೩

೧೭೬. ಹೋಹೋಪುರೇ

ಹೋ ಹೋ ಪುರೇ ಪುರೇ ಸಾಕು ಇನ್ನು
ಮೋಹ ಮಲ್ಲನ ನೂಕು ತಾಕು
ಶ್ರೀಹಂಸನಾಥನ ದಿನ ಕಾಣಬೇಕು ಕೂಡೆ
ಸ್ನೇಹ ವೈರವ ಬಿಡಬೇಕು || ಪಲ್ಲವಿ

ಕಡಲ ಹೀರುವ ತೃಷೆಯಷ್ಟು ಕೆ
ಟ್ಟೊಡಲ ಸುಖದ ಸವಿಯಿಷ್ಟು
ಬಿಡದೆ ಭೋಗಗಳನುಂಡಷ್ಟು ತೃಷೆ
ಕಡಮೆಯಾಗದು ಈ ದೇಹದ ಗುಟ್ಟು ||        ೧

ವಲ್ಲಭೆಯರೊಳೊಡನಾಟ ಅದು
ಬೆಲ್ಲಗೂಡಿಹ ಕಾಲಕೂಟ
ಕೊಲ್ಲುವ ವೆಂಚಿಪ ನೋಟ ಇದು
ಬಲ್ಲವರಿಗೆ ಮರುಳಾಟ ||   ೨

ಅಂಗನೆಯರೊಳಗಾದ ಸರಸ ಕುರು
ವಿಂಗಳಕೆರೆದ ಪಾದರಸ
ಹಿಂಗಿ ಪೋಪುದು ಆತ್ಮ ಧರ್ಮರಸ ಇದ
ಪಿಂಗಿಸು ಅಪರಾಜಿತೇಶಾ ||         ೩

೧೭೭. ಲೋಕವೆಲ್ಲವುಸಟೆ

ಲೋಕವೆಲ್ಲವು ಸಟೆ ಸಂಭ್ರಮಕೆ ಮರುಳಾಗಿ
ವ್ಯಾಕುಲದೊಳಾಡುತಿದೆ ಕಂಡ
ನೀ ಕಂಡು ತಿಳಿ ಮತ್ತಿಲ್ಲಿ ತಡೆವರೇನೋ?
ಸಕೇಳು ಮುಕ್ತಿಗೆ ನಿಜಾತ್ಮ ||         ಪಲ್ಲವಿ

ಭರತೇಶ್ವರ ಮುನ್ನ ತನ್ನದೆಂದಾಳ್ದನೀ
ಧರೆಯ ಮತ್ತಾಳ್ದ ಸಗರೇಂದ್ರ
ಪರಶುರಾಮನು ಸುಭೌಮನಾರಾವಣರಘು
ಜರು ಪಾಂಡವರು ಆಳಿದರು ||       ೧

ನೆರೆದಾಳ್ದ ರಾಜವಿಟರುಗಳೆಲ್ಲ ಹೋದರೂ
ಧರೆಯೆಂಬ ಗಣಿಕೆ ಹೋಗಲಿಲ್ಲೈ
ಅರರೆ ಮತ್ತೀಗಳೂ ಎನಗೆ ತನಗೆಂದೊದ
ರಿರಿದಾಡುತಿದೇಕೊ ಜಗವೆಲ್ಲ ||      ೨

ನೂರಗಳಿಸಿದೊಡೆ ಸಾವಿರದಾಶೆ ಸಾವಿರವು
ತೋರುವುದು ಲಕ್ಷಕೋಟಿಯನು
ಮೀರುವುದು ಧನದಾಶೆ ಅಗ್ನಿಗೆ ಕಾಷ್ಠವನು
ತೋರಿದಷ್ಟಕೆ ಹೆಚ್ಚುವಂತೆ ||         ೩

ನೂರು ವರುಷದಮೇಲೆ ನರರಿಗಿರವಿಲ್ಲ ತನು
ಬೇರಹುದು ಜೀವ ಬೇರಹುದು
ಮೂರು ದಿನದ ಬದುಕಿಗಾರು ದಿನಕರೆಯದೆ
ದೂರಿಗೊಳಗಾಗದಿರು ಕಂಡ ||       ೪

ಇಂದಾದೆಯೊ? ನೆನ್ನೆ ಮೊನ್ನೆಯಾದೆಯೋ? ನೀ
ಹಿಂದಾದ ಯುಗಕೆ ಗಡಿಯಿಲ್ಲ!
ಅಂದಿಂದ ಹೊತ್ತ ಮೈ ಸತಿಸುತರು ಸಿರಿ ಕನಸಿ
ನಂದದಿ ಮಾಯವಾದುದರಿಯ ||    ೫

ಮುಂದಾದರೆಚ್ಚರೈ ನೀ ಪರಬ್ರಹ್ಮ ಪ್ರಾಭೃತ
ದಂದವರಿತು ತಪಸಮಾಡು
ಕರ್ಮಗಳಳಿದು ಕೈವಲ್ಯ ತಾನಹುದು ಶ್ರೀ
ಮಂದರಸ್ವಾಮಿ ಮೆಚ್ಚುವನು ||       ೬

೧೭೮. ಆರಿಗಾರುಬಹರು

ಆರಿಗಾರು ಬಹರು ಸಂಗಡ? ಮೀರಿ ನಡೆಯಬೇಡ
ಧರ್ಮಸಾರವೊಂದೇ ನಿನಗೆ ಸುಮುಂಗಡ ||  ಪಲ್ಲವಿ

ಸತಿಯು ಸುತಸಮಸ್ತ ಮಿತ್ರರತಿಶಯ
ದ ತಂದೆ ತಾಯಿ ವಿನೋದದ ಬಾವಮೈದುನ
ಜತನವೆಂಬತ್ತೆ ಮಾವ ಜತೆಯೊಳುದಿಸಿದ
ಣ್ಣ ತಮ್ಮರು ನೀ ಮೃತಿಯೈದಲೊಡನಿಹರೆ? || ೧

ಬರೆಹ ತೊಡೆದಮೇಲೆ ಕರೆದೊಡನೆ ನೀ ಪೋಗೆ
ಭರದಿ ಬಂದಾ ಬಂಧುವರ್ಗ ಮುತ್ತಿ ಕುಳಿತು
ಇರಿಸಬೇಡ ಸುಡುಸುಡೆಂಬರು ಸುಟ್ಟೊಡನೆ
ಭರದಿ ಉಂಬರು ಪಾಪಿಸುತ್ತ ತರುಣಿ ಕೆಟ್ಟಳೆಂಬರು ||   ೨

ಎಷ್ಟು ಬದುಕೆಷ್ಟು ಜನರು ಕಷ್ಟ ಬಂದರಿಲ್ಲ
ಇಷ್ಟರು ಕೂಡ ಸೃಷ್ಟಿಯೊಳು ಬರುವರುಂಟೆ?
ಭ್ರಷ್ಟ ನಿನಗೇಕಾಸೆ? ದಿಟ್ಟನಾ ಧರ್ಮವೊಂದ
ಕಟ್ಟಿಕೊ ಹೋಗು ಮುಟ್ಟಿಸುವುದು ಮುಕ್ತಿ ಪುರಕೆ ||       ೩

೧೭೯. ಆರದೆಂದಾರ್ಜಿಸಿಡುತಿಹೆ

ಆರದೆಂದಾರ್ಜಿಸಿಡುತಿಹೆ ಧನವ ಮನುಜ?
ಆರಿಗೂ ಸ್ಥಿರವಲ್ಲ ಯಾಕೆ ಬರಿಯಾಸೆ? ||       ಪಲ್ಲವಿ

ದಾಯಾದ್ಯರೆಳೆಯಲುದ್ಯೋಗಿಪರು ತಸ್ಕರರು
ನೋಯಿಸೆಳೆದೊಯ್ಯಲೆಣಿಸುತ್ತಿಹರು
ನ್ಯಾಯವಿಲ್ಲದೆ ತೆಗೆಯ ಬಗೆಯ ಯೋಚಿಸುತಿಹ
ರಾಯನಗ್ನಿಯು ಸುಟ್ಟು ಭಸ್ಮ ವೈದಿಪುದು ||   ೧

ನೀರದೆಳೆವುದು ಭೂಮಿತಾನೆ ಮರೆಸುವುದು
ಯಾರು ಕಂಡರೂ ಒಡನೆ ಅಪಹರಿಸುತಿಹರು
ಜಾರಿಸುವರದನು ನಿನ್ನವರು ಕಾದುಕೊಂಡಿದ್ದು
ಯಾರಿಗಹುದೋ ಮುಂದೆ ನೀ ಪಡೆದ ಕಾಸು ||         ೨

ಹಲಬರಾದಿಯಾದರ್ಥವದು ಬಂದಲ್ಲಿ
ನಿಲ್ಲದು ಧರ್ಮಕೆಳಸದು ಪಡೆಸುವ
ಕಲಿಲಹರ ಅಪರಾಜಿತೇಶನ ಶ್ರೀ ಪಾದ
ಜಲರುಹಂಗಳ ನಂಬಿ ಭಜಿಸನುದಿನವು ||      ೩

೧೮೦. ಆತ್ಮನಂಬದಿರುಸಿರಿ

ಆತ್ಮ ನಂಬದಿರು ಸಿರಿ ನೆಲೆಯೆಂದು ಪರ
ಮಾತ್ಮನ ನಂಬಿಪಡೆ ಮುಕ್ತಿಯನು ಸುಗುಣ ಸಿಂಧು ||   ಪಲ್ಲವಿ

ಬುದ್ಧಿಯಿಲ್ಲದೆ ನಾನು ಸದ್ದರ್ಮವರಿಯದೆ ವಿ
ರುದ್ಧ ಶಾಸ್ತ್ರವನೋದಿ ಭ್ರಷ್ಟನಾಗಿರ
ಲುದ್ಧರಿಸಿ ದರ್ಶನಾಮೃತವರೆದೆನಗೆ
ಶುದ್ಧ ಸುಜ್ಞಾನವನಿತ್ತೆ ದೇವನೆ ||     ೧

ಭವರೋಗ ನಾಶಮಾಗಲೌಷಧಿಗೊಟ್ಟು
ಅವಿವೇಕಿಯಾದೆನ್ನ ಭ್ರಮೆಯ ಬಿಡಿಸಿ
ಶಿವಲೋಕದ ದಾರಿಕವಿದ ಕರ್ಮವ ತೂರಿ
ಜವನಲ್ಲಿಗೇರು ನೀನೆಂದೆ ಗುರುವೆ || ೨

ರಾಗ ರೋಷವ ಬಿಡುಮಗನೆ ಕ್ಷಮೆದಮೆಯಿಂದಾ
ಯೋಗಗಳ ಕೂಡಾಡಿ ನಿನ್ನೊಳಗೆ ನೋಡಿ
ಸಾಗರಾಧೀಶ್ವರನ ಸಮಯದೊಳಗೋಲಾಡಿ
ಶ್ರೀಗುರು ಜಿನನ ಕೂಡೆಂದೆ ಬಂಧುವೆ ||       ೩