೬೦. ಇಲ್ಲಿಯೇನಿನಗೆನಿತ್ಯಪದ
ಇಲ್ಲಿಯೇ ನಿನಗೆ ನಿತ್ಯಪದವಾದುದು ಪರ
ಗಲ್ಲದರೆ ಧರ್ಮವನೆ ಮರೆದೆ ಹೇಯ ಮನವೇ || ಪಲ್ಲವಿ
ಈ ನರಲೋಕದ ಬಾಳುವಯ್ಯ ಹೆಂಗಳಾಟವೆ ಮ
ಹಾನಂದವಾಗಿ ಪರಿಣಮಿಸಿತಲ್ಲದೆ
ದಾನ ಪೂಜೆಗಳ ಫಲದಿಂದ ದೊರೆಕೊಂಬ ರಂಭೆ
ಮೇನಕೆಯರಾಟ ಕಡು ಮೋಸವಾಯಿತಲ್ಲದೆ || ೧
ತಾಳೆದೊಂದು ಧರ್ಮದ ಶರೀರವಂ ನೇತಾಂಬ್ರದ ಕ
ಪಾಲವೆಂದು ಕಡುಬೇಡೊ ಚಿತ್ತೈವಿಡಿದೆ
ಯಲ್ಲದೆ ಶೀಲ ವೃತಗಳಿಗೆ ಮೈಯೊಡ್ಡಿದ
ಫಲದಿ ಬಹು ನಾಳೆನ ದಿವ್ಯ ದೇಹವಾಯಿತಲ್ಲದೆ || ೨
ತಾದೊಂದತ್ತತ್ತ ಮೊದಲಾಗಿ ನೀನಾಡಿದಕ್ಕೆ
ಹೋದರಾವು ಹೊತ್ತ ಮೈಗೆ ಕಡೆ ಮೊದಲುಂಟೆ
ಓದಿ ಮರುಳಾದರೆಂಬ ಗಾದೆಗೆ ಈಡಾಗದೆ ಸ
ಮುದ್ರಾಧೀಶನೆ ಶರಣೆಂದು ಸಾಧಿಸು ಮುಕ್ತಿಯನು || ೩
೬೧. ತನ್ನನರಿದಮೇಲೆಜಗವೆಲ್ಲ
ತನ್ನನರಿದ ಮೇಲೆ ಜಗವೆಲ್ಲ
ತಾನೆ ಮತ್ತಿನ್ನೊಂದು ನೋಡಬೇಕೆಂಬಾಸೆಯುಂಟೆ || ಪಲ್ಲವಿ
ಮೂಡಗಿರಿಯೊಳೆದ್ದು ಕ್ಷಣದಲ್ಲಿ ದಶದಿಕ್ಕು
ಗೂಡಿ ಲೋಕವ ಬೇಧಿಸುವ ಸೂರ್ಯನಂತೆ
ಕೂಡಿ ದೇಹವ ಜೋರು ಮಾಡಿ ತನ್ನೊಳೆಸೆದು
ಒಡನೆ ಸಕಲ ವಸ್ತುವನೊಂದಬೇಕು || ೧
ಮೇರುವನೇರಿದವಗೆ ಮಿಕ್ಕ ಗಿರಿಗಳ
ತೋರಿದೊಡೆ ಚುಳುಕಾಗಿ ಕಾಂಬಂತೆ
ವೈರಾಗ್ಯಧಾತೃ ಭಾವನೆಯೊಳಗಿರ್ದವಗೆ ಸಂ
ಸಾರಿಗಳೊಡೆ ಸದ್ಭಾವವಾಗಿರದೇ || ೨
ತೊಟ್ಟ ಚೋಹವನೊಂದನಿಳುಹಿ ಕಲ್ಮಷವನು
ಸುಟ್ಟು ಬೂದಿ ಮಾಡಬೇಕೆಂಬಾ
ದೃಷ್ಟಿಯಲ್ಲದೆ ಬೇರೆ ಮನದಿಚ್ಛೆಯುಂಟೆ ಕ
ಣ್ಣಿಟ್ಟು ಸಮುದ್ರಾಧೀಶನ ಕಂಡವಗೆ || ೩
೬೨. ಬಣ್ಣಿಸಬಲ್ಲವರೆ
ಬಣ್ಣಿಸಬಲ್ಲವರೆ ಲೋಕದಲ್ಲಿ ತಮ್ಮ
ಕಣ್ಣಿಗೆ ಕಾಣ್ಪದುದಿ ಆವಾಸರೆಯೋ || ಪಲ್ಲವಿ
ದಿನದಿನ ಬಿಡದೂಟ ಪಾಯಸಂ ಓಗರಂ
ಮನೆದೊರಕಿದೊಡರ್ತಿಯಾಗುತಲಿದ್ದು
ನೆನೆದೊಮ್ಮೆ ದೊರಕದೊಡುಬ್ಬೆಯ ಪೊಡುವ
ಮನುಜರ ಸಿರಿಯಿದು ಭೋಗರೋಗವ || ೧
ಬಿಸಿಲಾಗಲಿ ಬೆಳದಿಂಗಳಾಗಲಿ ಸವಿ
ರಸವಾಗಲಿ ವಿರಸವಾಗಲಿ
ನಸುನೋಟಗಾಣದೆ ಪರಿಣಾ
ಮಿಸುತಿಹರು ಜಗದ ಯೋಗವೋ ರೋಗವೋ || ೨
ಮರಣವಾಹರ ಕಂಡು ಮಹಿಜಗಳ್ವುದ ಕಂಡು
ವರುಷಗಳೆಣಿಸಿ ಹೋಹುದನೆ ಕಂಡು
ಪರಮ ಸಮುದ್ರಾಧೀಶನ ಸಾರಿದ
ನರರ ಬಲ್ಲವಿಕೆ ತಾನರಿವೋ ಮರೆವೋ || ೩
೬೩. ಸಾಮಾನ್ಯನಲ್ಲಲ್ಲಕಾಣಿರೋ
ಸಾಮಾನ್ಯನಲ್ಲಲ್ಲ ಕಾಣಿರೋ ಆತ್ಮಯೋಗಿ
ಭೂಮಿಯೊಳು ದೇವ ಕಾಣಿರೋ || ಪಲ್ಲವಿ
ಪುಣ್ಯ ಕಾಲಕಸ ಕಾಣಿರೋ ಅವಗೆ ಪಾಪಾ
ರಣ್ಯದೊಳೆ ಕೋಟಿ ಕಾಣಿರೋ
ಗಣ್ಯವವಗಿಲ್ಲ ಕಾಣಿರೋ ಸುಜ್ಞಾನವ ಲಾ
ವಣ್ಯವಾದ ಶಿವಕಾಣಿರೋ || ೧
ವಿಷ ತಾನು ಪಥ್ಯ ಕಾಣಿರೋ ಅವಗೆ
ಬ್ರಹ್ಮರುಚಿ ಮಾತು ಸಿದ್ಧಿ ಕಾಣಿರೋ
ತುಷಮಾಸದಷ್ಟ ಕಾಣಿರೋ ಭವಗೆ
ವಿಷಯಾತ್ಮ ಭೇದ ಕಾಣಿರೋ || ೨
ಸುರಲೋಕ ತೃಣಕಾಣಿರೋ ಅವಗೆ ಮುಕ್ತಿ
ಕರತಳವಶ ಕಾಣಿರೋ
ಎರಡೊಂದೆ ಭವ ಕಾಣಿರೋ ಕಡಲಾಧಿಪ
ಪರಮೇಶ ತಾನೇ ಕಾಣಿರೋ || ೩
೬೪. ನಿಮ್ಮನಾಮನಮ್ಮಪರಿಣಾಮ
ನಿಮ್ಮ ನಾಮ ನಮ್ಮ ಪರಿಣಾಮ
ನಮ್ಮ ಪರಿಣಾಮ ಸಮುದ್ರಾಧೀಶ || ಪಲ್ಲವಿ
ಶಿಸುವಿನಕ್ಕರಿಗೆ ಸಿಹಿಯ ವಸ್ತುವಿನ ನಾಮ
ವಿಷ ಮುಟ್ಟಿದಾತಗೆ ಗರುಡನ ನಾಮ || ೧
ಬಡವನಿಗೊಬ್ಬ ಬಲ್ಲಿದನಾದನ ನಾಮ
ಎಡರು ಬಂತಾಗೆ ಗುರುವಿನ ನಾಮ || ೨
ಹಾದಿ ಸುಂಕಿಗಗೆ ರಾಜನ ನಾಮ ಸಮು
ದ್ರಾಧೀಶನ ನಾಮ ನಮಗೆ ಕ್ಷೇಮ || ೩
೬೫. ಇಂದ್ರನಾಥನೆಶೃಂಗಾರ
ಇಂದ್ರನಾಥನೆ ಶೃಂಗಾರ ಕವೀಂದ್ರನ ದಿವ್ಯಗುರು ದೇ
ವೇಂದ್ರ ಕೀರ್ತಿಯೋಗಿ ರಾಯನ ಸುಜ್ಞಾನಾಂಬುಧಿಗೆ
ಚಂದ್ರನೋ ಸಮುದ್ರಾಧೀಶನ || ಪಲ್ಲವಿ
ಶತರುಚಿ ಸೂರ್ಯಕೋಟಿ ನೂತನ ಪ್ರಕಾರದ ಮಹಾ
ಅತಿಶಯವಾದ ಕಾಂತಿಯ ದಿವ್ಯ ಪರಂಜ್ಯೋತಿಯೇ ಬಾ || ೧
ಮಣಿಮಾಲೆ ವಸ್ತ್ರಗಳೆಣಿಸದೆ ಕಾಂತಿಯ ತಿಂ
ಥಿಣಿಗೊಂಡ ಚೆಲ್ವರೂಪಿನಾ ಮೂಲೋಕದ ಭೂಷಣನೇ ಬಾ || ೨
ಉಡದೆ ತೊಡದೆ ಕಾಂತಿ ಕಡೆಗೆ ಸೂಸುವ ಚೆಲ್ವ
ಬಿಡದೆ ಥಳಥಳಿಸುವ ಮಾಣಿಕ್ಯದ ಕನ್ನಡಿಯೇ ಬಾ || ೩
ಬೆಳುದಿಂಗಳಂತೆ ನೋಡ ಕಳವಟ್ಟು ಪಿಡಿಯೆ ಕೈ
ಗೊಳಗಾಗದಿಹ ರೂಪಿನಾ ಸುಜ್ಞಾನದ ಪುತ್ಥಳಿಯೇ ಬಾ || ೪
ಮಣಿಯನರಸುವ ನಾಗಗಣಕೆ ಸುಖವ ಚಿತ್ತ
ದಣಿವಂತೆ ಕರುಣಿಸುವ ದೇವ ಶಿರೋಮಣಿಯೇ ಬಾ || ೫
ಭವಸಮುದ್ರದಲಿ ತೇಲುವರಿಗೆ ಧರ್ಮದ ಹ
ಸ್ತವ ನೀಡಿ ಮೇಲೆ ತೆಗೆವನಾಥರ ಬಂಧುವೇ ಬಾ || ೬
ಕಾಳಕೂಟ ವಿಷದಂತೆ ಗೋಳುಗುಟ್ಟಿಸುವ ಪಾಪ
ಜಾಳಿಸಿ ಭಕ್ತರ ಕಾವ ಕರುಣಾಳುವೇ ಬಾ ಸಮುದ್ರಾಧೀಶ || ೭
೬೬. ಭಿಕ್ಷೆಮಾಡಿಯೂನಿಚ್ಚ
ಭಿಕ್ಷೆ ಮಾಡಿಯೂ ನಿಚ್ಚ ಜ್ಞಾನಿಗುಪವಾಸ ತನು
ಸಾಕ್ಷಿಗಂಬರವಿದ್ದು ನಿರ್ವಾಣಿಯೇ || ಪಲ್ಲವಿ
ಕೂರ್ಮೆ ಮುನಿಸೆಂಬೆರಡ ಬಿದ್ದು ಸೂಷುಪ್ತಿಯಲಿಹುದು
ಕರ್ಮದೊಳೆಯದುಣ್ಣದುಪವಾಸವು
ಕರ್ಮದಾವರನೋವನೆ ತೊಲಗಿ ನಿಜಾತ್ಮನಾ
ನಿರ್ಮಡಿ ಕಂಡರದು ನಿರ್ವಾಣವೇ || ೧
ಅನ್ನವಂ ತೋರುವುದುಪಚಾರದಿಂದುಪವಾಸ
ಚಿನ್ನ ವಸ್ತ್ರವ ಬಿಡುವುದಂದುವೆ ಹೇಗೆ
ತನ್ನನರಿದಾತ ನೀವು ಮೋಕ್ಷ ಸಹಕಾರಿಗಳು
ಸನ್ಯಾಸರಿದವನೆ ಹಿಡಿದರೆ ಸ್ವರ್ಗವು || ೨
ಹೊದಲೆಲ್ಲ ಹಸಿದಿರ್ದ ಶಾಸ್ತ್ರಗಳ ಕಲಿತೆಯೆಂದಿ
ರದಲ್ಲಿ ದಣಿಯದಿರು ನಿನ್ನ ನೋಡು
ಅದನರಿದು ತಪಸು ಮಾಡಮೃತವಹುದೆಂಬು
ದಿದು ಶಾಸನ ಸಮುದ್ರಾಧೀಶನ || ೩
೬೭. ತಾಲೆಲ್ಲೆಲೆಲ್ಲೆಲ್ಲೆಮಾಯಿ
ತಾಲೆಲ್ಲೆ ಲೆಲ್ಲೆಲ್ಲೆ ಮಾಯಿ
ತಾಲೆಲ್ಲೆ ಲೆಲ್ಲೆಲ್ಲೊ ತಾಲೆಲ್ಲೆ || ಪಲ್ಲವಿ
ವೇದ ಸಿದ್ಧಾಂತಗಳೊಡೆಯನ ದೃಷ್ಟಿ
ವಾದಕೆ ಸಿಲುಕದ ಮಹಿಮನ
ಮೂದೇವನ ಜಗದೀಶನ ಸ
ಮುದ್ರಾಧೀಶನ ಭಂಟಿ ನಾನೆಲೋ || ೧
ಉಪ್ಪುಗಡಲೊಳಿರ್ದ ನೀರನು ತ
ನ್ನೊಪ್ಪುವನೆ ಜಲ ಸೋಂಕಿದಲಿ
ಸಿಪ್ಪನೆ ಸಿಪ್ಪನ್ನೆ ಮಾಡುವ ಜಿ
ನ್ನಪ್ಪ ನಮೋ ಸಾಧು ನಾನೆಲೋ || ೨
ಉಡಿಯ ಪುಟ್ಟುವ ಲವಣಾಬ್ದದಿಯು ಮುಗಿ
ಲೆಡೆಯ ಮುಟ್ಟುವ ಉತ್ತುಮಾಂಗದ ನಗೆ
ನೋಟ ಸ್ಪಟಿಕದ ಕಾಂತಿಯು ಜಗ
ದೊಡೆಯ ನಮೋ ಸಾಧು ನಾನೆಲೋ || ೩
ಡಿಳ್ಳಿಯ ಸುರಿತಾಳ ಭುಜಗಳಾವಂದು
ಸಲ್ಲಿಲೆ ಇಂದವೆಯಳೆಯಲು
ಅಲ್ಲಿಗಲ್ಲಿಗೆ ಮೂರು ಹೆಜ್ಜೆ ವಾಜಿತ
ಮಲ್ಲಸಮ ಸಾಧು ನಾನೆಲೋ || ೪
೬೮. ಏತರವಿವೇಕಏತರಜನ್ಮ
ಏತರ ವಿವೇಕ ಏತರ ಜನ್ಮ ತಮ್ಮ ಕಾ
ರ್ಯ್ಯಾತುರವ ಮರೆದು ಮರುಳಾಗುವವರಿಗೆ || ಪಲ್ಲವಿ
ಮನವಿತ್ತ ತನುವಿರಲ್ಕೆ ಬಹಿರಂಗ ವ
ರ್ತನೆಯಲ್ಲಿ ನಡೆದರೇನಾಯಿತೆಂದು
ನೆನಪ ಈ ಮೂಲೋಕದ ತುಟ್ಟತುದಿಗೇರಿಸಿದ್ದ
ಪದವನ ಜಗದೋದ್ಗಾರಿದಾಡುತಿರಬೇಡವೇ || ೧
ಕನಸಿನಲಿ ಮನಸಿನಲಿ ರಾಗದಲಿ ರೋಗದಲಿ
ಮನಸಂದು ನುಡಿವ ಮಾತುಗಳೆಡೆಯೊಳು
ತನಗೆ ತಾನಡಿಗಡಿಗೆ ನಾಲಗೆಯ ತುದಿಗೆ ಸು
ಮ್ಮನೆ ಪಂಚಪದವೊದಗುತಿರಬೇಡವೇ || ೨
ಅಂಗವಿದು ನನ್ನದೆಲ್ಲೆನಗೆರೆವ ಕಾಣ್ಬ ಎರ
ಡಂಗ ಉಂಟೆಂದು ಭವವರಿವತನಕ
ಶೃಂಗಾರಕವಿವೊಡೆಯ ಸಾಗರಾಧಿಪನ ಮ
ತಂಗದೊಳು ಮತಿಭೇದಾಗುತಿರಬೇಡವೇ || ೩
೬೯. ಇದ್ದಿತುಎದ್ದಿತುಬಿದ್ದಿತಲ್ಲಾ
ಇದ್ದಿತು ಎದ್ದಿತು ಬಿದ್ದಿತಲ್ಲಾ ಕೂಡೆ
ಉದ್ದವನೇರಿತು ಮನವೆಂಬ ಹುಸಿ || ಪಲ್ಲವಿ
ನೋಡಿರೆ ಮೋಸದಲ್ಲಿ ಆಡುತ ಕರ್ಮವೆಂಬ
ಬೆಡಗ ಸಿಕ್ಕಿತು ಬೇಂಟೆಯಲ್ಲಿ
ಕೂಡೆ ಸಲಹುತಿಹ ನಿಚ್ಚಲೊಂದೊಂದು ಮೈಯ್ಯ
ಗೂಡ ಹೊಕ್ಕಾಡಿತು ಗುಟ್ಟಿನ ಹಂಸೆ || ೧
ಸೆರೆಯಲ್ಲಿ ಸಿಕ್ಕಿದೆನಲ್ಲಾ ಪೆಣ್ಣಿಂಕೆಯ
ಮರದು ಮತಿಗೂಡನ ಮೆಚ್ಚಿ
ತೊರೆದದು ಕಾಲದ ಮೇಲೆ ತನ್ನಿಂದ ತಾನೆ ಎ
ಚ್ಚರಿಂದೊರೆಯದೆ ಹಾರುಗೊಂಡಿತು ಹಂಸೆ || ೨
ಭೇದಿಸಿ ನೋಡಿ ನೋಡಿ ಗೂಡಿನಿಂ
ದದಲಿ ಹಾರಾಡುವ ಹಾಗೆ ಕಂಡಿತು ಹರು
ಷದಲಿ ಶೃಂಗಾರಕವಿಯ ಪಾಲಿಪ ಸ
ಮುದ್ರಾಧೀಶನ ಪಾದಂಬುಗಳಲಿ || ೩
೭೦. ದೀಪಜತನವಯ್ಯ
ದೀಪ ಜತನವಯ್ಯ ಪರಂಜ್ಯೋತಿ
ರೂಪು ಜತನವಯ್ಯ
ಭಾಪುರೆ ಕತ್ತಲೆ ಬಟ್ಟೆಗಾಣಿಸದು ಸಿ
ದ್ಧಾಪುರವ ಸೇರಬೇಕು ನಮಗಿನ್ನು || ಪಲ್ಲವಿ
ಕಾಳಿಕೆ ಕಗ್ಗುಡಿಗಳ ತೆಗೆ ತೆಂಕಣ
ಗಾಳಿ ಬಂದಾಗ ಕದಲದಂತೆ ಪಿಡಿದಿರೋ || ೧
ಮುಂಗುಡಿಯೊಳು ನುಗ್ಗಿ ಬರುತಿರುವ ನಾಲ್ಕು ಪ
ತಂಗಗಳ ಹೊರ್ದ್ದಲಿದೆ ಪಿಡಿದಿರೆ || ೨
ಹಣತೆ ಉರಿದು ಬತ್ತಿ ಬಯಲಾಗಿದೆ ಪಾ
ಕ್ಷಾಣ ಸಮುದ್ರಾಧೀಶನ ಕೂಡುವೆನುತಾಗಿ || ೩
Leave A Comment