೧೪೦. ನಾನಾರುನಾನಾರುದೇಹ

ನಾನಾರು ನಾನಾರು ದೇಹವಾರು ಜ್ಞಾನವೆ ನಾನು
ನಾನೆಲೆ ಜ್ಞಾನ ತನುವೆ ಮತ್ತೇನು ನನ್ನದಿಲ್ಲ || ಪಲ್ಲವಿ

ದೇಹಮುಂತರದೆ ಬಾಹ್ಯ ಸಂಗದ ಸ್ನೇಹದಿಂದೆನಗೆ ಮೋಹರಿಸಿತೈಸೆ
ಕರ್ಮ ನಾನೆಂದು ನಿರ್ಮೋಹಿಯಾದ ಮೇಲೆ ||          ೧

ಹೊರಗನೆ ಮೆಚ್ಚಿ ಹುಚ್ಚನಾಗಿ ಮುಂದರಿಯದಿಷ್ಟುದಿನ ನಾ
ನೆರೆ ನೊಂದನೈಸೆ ನಾನಿನ್ನು ಜೀವವೆಂದರಿದು ಕೊಂದ ಮೇಲೆ ನಾನಾರು ||         ೨

ಪರವಿದೆನ್ನಯದೆಂಬ ತತ್ವದ ಪರಿಯನರಿಯದೆ ತಿರುಗಿದೆನೈಸೆ
ಗುರು ಚಿದಂಬರ ಪುರುಷನಾದ ಮೇಲೆ ನಾನಾರು ||     ೩

೧೪೧. ನಾನಾವರ್ಣಗಳಿಂದ

ನಾನಾ ವರ್ಣಗಳಿಂದ ನುತಿಸಿಕೊಂಬಾತನು
ನೀನೆ ನೀನೆ ನೇಮಿನಾಥ ನೀನೆ ನೀನೇ ||      ಪಲ್ಲವಿ

ಹರಿಹರ ಶಂಭು ಸ್ವಯಂಭು ಶಂಕರ ಸರ್ವ
ಪುರುಷೋತ್ತಮ ಪುಣ್ಯ ಪುರುಷನೆಂಬಾತನು ನೀನೇ ನೀನೆ ||     ೧

ಕೃಷ್ಣ ಕೃಷ್ಣಾಂಬುಧಿ ವಿಷ್ಣು ಜಗನ್ನಾಥ
ವಿಷ್ಣು ಸದ್ಧರ್ಮ ಚಾರಿಷ್ಣು ಎಂಬಾತನು ನೀನೆ ನೀನೆ ||   ೨

ನಿರಘ ನಿಶ್ಚಲ ನಿತ್ಯ ನಿರುಪ ಬೋಧನೆ
ಗುರು ಹಂಸನಾಥ ಸದ್ಗುರುಯೆಂಬಾತನು ನೀನೇ ನೀನೆ ||        ೩

ಬದ್ಧ ಕರ್ಮವ ಗೆಲಿದು ಶುದ್ಧ ಚಿನ್ಮಯನಾದ
ಬುದ್ಧ ನಿರಂಜನ ಸಿದ್ಧನೆಂಬಾತನು ನೀನೆ ನೀನೆ ||       ೪

ಧರೆಯೊಳಮ್ಮಿನಭಾವಿ ಅರಸು ಹೊಬ್ಬಾಂಬುಧಿ
ಬಿರುದಾಂಕ ಬಾಲಕನ ಬ್ರಹ್ಮಕುಲ ಸ್ವಾಮಿ ನೀನೆ ನೀನೆ ||         ೫

೧೪೨. ನಿಚ್ಚಪುಟವಿಕ್ಕುದೇಹ

ನಿಚ್ಚ ಪುಟವಿಕ್ಕು ದೇಹ ಘಟದಲ್ಲಿ ಮಾಡಿದ ಚಿನ್ನವಾ ||   ಪಲ್ಲವಿ

ಕೇಳಾತ್ಮನೆಂದೆಂಬ ಚಿನ್ನ ಕರ್ಮದ ಕೆಟ್ಟಾ
ಕಾಳಿಕೆ ಕೂಡಿ ಕೀಳೆನಿಸಿತೂ
ಮೇಲು ಚೆನ್ನವ ಮಾಡು ತ್ರೈರ
ತ್ನ ಲತೆಯೆಂಬ ಮೂಡಲಿಕೆ ರಸವೆರದೊಳಗಿಕ್ಕೂ ||     ೧

ತಪದಿಂದ ನಾದ ನುಡುವಿರಿಸಿ ಮೈ ಗೋವೆಯ
ಪಿಪುಲಾತ್ಮದ ಧ್ಯಾನಾಗ್ನಿಯ ಹೊತ್ತಿ ಸೂ
ಸ್ವಪರ ವಿವೇಕ ಜಾರದಹಾಗೆ ಯಾತ್ಮನೆಂ
ಬಪರಂಜಿಯ ನೋಡುತಿರು ಕಂಡಾ ||         ೨

ಕರ್ಮ ಕಲಂಕವೆಲ್ಲವು ಭಸ್ಮವಹುದೂ
ನಿರ್ಮಲಾತ್ಮನೆಂಬಪರಂಜಿ
ಕಾರ್ಮುಗಿಲೊಳಗಿರ್ದ ಸೂರ್ಯನಂತೆ ಸವುಡು
ಪೆರ್ಮೆಯ ಸಿರಿ ನನಗಹುದಾಗಾ ||   ೩

ತನು ಕೋವೆಯದು ಪುರುಷಾಕಾರದೊಳಗಿರ್ದ
ಕನಕಪುರುಷಾx x x x ರಾ
ತನು ಮೂರ ಸುಟ್ಟು ಪರಂಜ್ಯೋತಿರೂಪ ತೊ
ಟ್ಟನೆ ಲೋಕಾಗ್ರದಗೆನೆಗೆವಾನು ||    ೪

ಉರಿ ಚಿನ್ನ ಮೂಲಿಕೆ ನುಡಿವಾಗ ಬೆರವುದೆ
ದೆರವಿಲ್ಲ ದೊಡ್ಡಾತ್ಮನೊಳೈಕ್ಯ
ಪರಮ ಚೋದ್ಯದ ವಸ್ತುವಿದು ಶಂಕೆಗೊಳದೆ
ಗುರು ಹಂಸನಾಥನೆನಿಸುವನೂ ||   ೫

೧೪೩. ನಿನ್ನನಾನೆಂತುಚೋಪಾನ

ನಿನ್ನ ನಾನೆಂತು ಚೋಪಾನ ಮಾಡುವೆಯೆ ಗಿಣಿಯೇ ನಿನ
ಗುನ್ನತ ಬಲು ಕಂಟಕ ಬರುತ್ತದೆ ಗಿಣಿಯೇ ಗಿಣಿಯೇ ||   ಪಲ್ಲವಿ

ಅಳವಲ್ಲದ ಮೂರು ಬಲೆ ನಿನಗೊಡ್ಡಿವೆಯೇ ಗಿಣಿಯೇ ಗಿಣಿಯೇ
ಕಳವಳಿಸದೆ ಅದರೊಳು ಬೀಳದಿರು ಕಂಡಾಯೇ ಗಿಣಿಯೇ ಗಿಣಿಯೇ
ಸುಳಿದರೆ ಮುರಿದು ನುಂಗುವೆನೆಂಬ ಬಲು ಬೆಕ್ಕುಯೇ ಗಿಣಿಯೇ ಗಿಣಿಯೇ
ಎರಡು ದಿಕ್ಕಿಲಿ ಎಂಟು ಮದಗಜ ಕಟ್ಟಿವೆಯೇ ಗಿಣಿಯೇ ಗಿಣಿಯೇ
ನಿನ್ನ ಮೀಂಟಿಯೆಲೆಚ್ಚಿ ಕೊಲ್ಲುವೆನೆಂತೆನುತಹರೆ ಗಿಣಿಯೇ ಗಿಣಿಯೇ
ಬಂಟರೈವರು ಬಲು ಸಾಹಸಿಗಳು ಕಂಡಾಯೇ ಗಿಣಿಯೇ ಗಿಣಿಯೇ | ನಿನ್ನ
ಬೇಂಟೆಯನಾಡಿ ಕೊಲುವೆನೆಂದನುತಿಹರೆ ಗಿಣಿಯೇ ಗಿಣಿಯೇ
ಒಂಭತ್ತು ಬಾಗಿಲೊಳು ಸುಳಿದಾಡದೆಯೆ ಗಿಣಿಯೇ ಗಿಣಿಯೇ | ಗಗ
ನಾಂಬರ ಪಂಜರದೊಳಗೆ ನೀನಿರು ಕಂಡಾಯೇ ಗಿಣಿಯೇ ಗಿಣಿಯೇ
ತುಂಬಿರ್ದ ಅಮೃತದ ಸವಿದುಂಡಾನಂದದಿಯೇ ಗಿಣಿಯೇ ಗಿಣಿಯೇ
ಚಿದಂಬರ ಪುರುಷನ ಧ್ಯಾನದೊಳಿರು ಕಂಡಾಯೇ ಗಿಣಿಯೇ ಗಿಣಿಯೇ

೧೪೪. ನಿನ್ನನುನಾನೇನೆಂಬೆ
ರಾಗ: ಪೂರ್ವಿಕಲ್ಯಾಣ       ತಾಳ: ಆದಿತಾಳ

ನಿನ್ನನು ನಾನೇನೆಂಬೆ ಸದ್ಗುರುವೆ
ಕೃಪೆಯಾ ಸಮುದ್ರನೆಂಬೆ ಸೌಖ್ಯದ ನಿಧಿಯೆಂಬೆ
ಅಪರಾಜಿತೇಶ್ವರಾ ನಿನ್ನ ನಾನೇನೆಂಬೆ ||      ಪಲ್ಲವಿ

ಭಕ್ತವತ್ಸಲನೆಂಬೆ ಭವರೋಗ ಹರನೆಂಬೆ ವಿ
ರಕ್ತರ ಮನದ ವಿಲಾಸನೆಂಬೇ
ಮುಕ್ತಿಯ ಮೊದಲೆಂಬೆ ಮೂಜಗದ ಅರಸನೆಂಬೆ
ಮುಕ್ತಿ ರಮಣಿ ಕೈಯ ಪಡಿದ ನಿನ್ನ ನಾನೇನೆಂಬೆ ||      ೧

ಮಂಗಲ ರೂಪನೆಂಬೆ ಕಂಗಳ ಕಾಂತಿಯೆಂಬೆ
ರಂಗು ಢಾಳಿಪ ರತ್ನ ರೂಪನೆಂಬೆ
ಶೃಂಗಾರದ ಶಿಖಾಮಣಿಯೆಂಬೆ ಎನ್ನಂತ
ರಂಗವ ಬೆಳಗುವ ಮಣಿದೀಪ ನಿನ್ನ ನಾನೇನೆಂಬೆ ||     ೨

ದುರಿತದಲ್ಲಣನೆಂಬೆ ಪುಣ್ಯಶರಣ್ಯನೆಂಬೆ
ನರಸುರ ಫಣಿರಾಜರೊಡೆಯ ನೀನೆಂಬೆ
ಅರಿತಿಹೆ ಅಪರಾಜಿತೇಶ ನಿನ್ನನು ರತ್ನಾ
ಕರ ಬ್ರಹ್ಮಚಾರಿಯ ಪ್ರಾಣೇಶ ನೀನೆಂಬೆ ||     ೩

೧೪೫. ನೀನುತ್ರಿಭುವನಸಾರ

ನೀನು ತ್ರಿಭುವನ ಸಾರನಲ್ಲವೆ ನನ್ನ ಗುರುವೆ ಸುಭವ್ಯರ
ಮನದೊಳಗಿರುವೆ ಅಭವ್ಯರಿಗೆ ನೀನೇಕೆ ಬರುವೆ ||      ಪಲ್ಲವಿ

ಚರ್ಮ ನೆತ್ತರು ಮಾಂಸದ ಕೆಚ್ಚಲೊಳು ನಿರ್ಮಲ ಪಾಲಿಪಂತೆ
ಕರ್ಮ ಕಷಾಯದ ಕಷ್ಟದ ಮೈಯಲಿ ರತಿ ನಿರ್ಮಲನು ನೀನು
ಮೋಡದ ಮರೆಯೊಳಿಹ ಭಾನು ನೀನೆ ನಾನು ನಾನೇ ನೀನು ||  ೧

ಉರಿ ಪ್ರಭಕೆಂಬ ವೃತ್ತ ಸೂರ್ಯನೊಳು ಎರವಿಲ್ಲದೆಸೆವಂತೆ
ದರುಶನ ಜ್ಞಾನ ಚಾರಿತ್ರ್ಯ ತಪಸು ನಿನ್ನೊಳೆರವಿಲ್ಲದಿಹ
ಮುನ್ನ ಗುರುಶಾಸ್ತ್ರ ತಪಸಹುದು ಮತ್ತೆ ನಿನ್ನ ಸ್ವರೂಪದೊಳಗಿಹವೂ ||    ೨

ಮರದೊಳಗ್ನಿ ಹೊಸೆದರೆ ಮರವ ತಾ ಸುಡುವಂತೆ
ಪರಮಾತ್ಮ ನಿನ್ನ ಧ್ಯಾನಿಸುತ ಮೂರು ಭರದಿಂದ ನೀ ಸುಡುವೆ
ಕೋಟಿ ಸೂರ್ಯ ಪ್ರಕಾಶವ ಪಡೆವೆ ಮುಕ್ತಿಗೆ ಲಂಘಿಸುವೆ ||        ೩

ಬಿಳಿದು ಸಿಹಿಯು ಶೈತ್ಯರಸ ತಂಪು ಸಲೆ ಪಾಲೊಳೆಸೆವಂತೆ
ಚೆಲುವ ಸಂಪದ ಶಕ್ತಿ ಸುಖ ಸುಜ್ಞಾನಿಗಳು ನಿನ್ನೊಳಗೆ ಕೂಡಿಹವು
ನೋಡಿದರೆ ಭೇದವಾಗಿಹವು ನೋಡಿದರೆ ತಾನೆಯಾಗಿಹವು ||    ೪

ಪದುಳದಂಬರದಂತೆ ಬಯಲ ನೀನದರಲ್ಲಿ ಚಿನ್ಮಯನೂ
ಸದಮಲ ಪುರುಷಾಕಾರನಿದರಿಂದ ಚಿದಂಬರ ಪುರುಷಾ
ನಿರ್ಮಲಾಕಾರ ಸತ್ಪುರುಷ ಜಯಜಯ ಪರಮಾತ್ಮಾನಂದ ಪುರುಷಾ ||   ೫

೧೪೬. ನೀನೇಕೆಹೊರಗಾಡುವೆ

ನೀನೇಕೆ ಹೊರಗಾಡುವೆ ಆತ್ಮ
ಧ್ಯಾನದೊಳಗೆ ನಿಂದು ಸುಖಿಸಬೇಡವೆ ಭವ್ಯ ||         ಪಲ್ಲವಿ

ನಾನಾ ಚಿಂತೆಯ ಬಿಟ್ಟು ಬೇರೆಂದು ಪರ
ಮಾನಂದಮಯನೆಂದಾತ್ಮನೊಳು ನಿಮ್ಮ
ಜ್ಞಾನವೆಂದೆಂಬ ಪಾಲ್ಗಡಲ ಮಿಂದು ಸುಖಿಸಿ
ದೇನಯ್ಯ ಬರಿದೆ ನೀ ನೋವೆಯೆಂದೆಂದೂ ||  ೧

ಘಟ ಘಟ ಕುಂಭಂಗಳ ಬಹು ಚಿಂತೆ ಶಬ್ದ
ಮಟವೆಲ್ಲ ವಿಕಲ್ಪದ ಸಂತೆ
ಸ್ಫಟಿಕದೊಳೆಸೆವ ಜಿನ ಪ್ರತಿಮೆಯಂತೆ ದೇಹ
ಘಟದಲ್ಲಿ ಹೊಳೆವಾತ್ಮನನೋರಂತೆ ||        ೨

ಮತಿ ಶಾಸ್ತ್ರ ಮೊದಲಾದ ಪಂಚ ವಿರುದ್ಧ ಕೆಟ್ಟೆ
ನುತ ಬೋಧ ಸೂರ್ಯ ಮಾಡುವ ನೀತಿ ಶುದ್ಧ
ಅತಿವಾದ ಧ್ಯಾನಿಸು ಪ್ರಬುದ್ಧ ಆತ್ಮ
ಹಿತವ ನಿರಂಜನ ಸಿದ್ಧ ||    ೩

೧೪೭. ನೀವುನಿಮ್ಮಹಾಗೆ

ನೀವು ನಿಮ್ಮ ಹಾಗೆ ನಾನು ನಮ್ಮ ಹಾಗೆ
ನೀವು ಕರ್ಮಿಗಳು ನಾವು ಕೂಡುವಂದ ಹೇಗೆ ||         ಪಲ್ಲವಿ

ನಿಮ್ಮ ರೂಪು ಬಹು ಪರಮಾಣುಗಳ ಕೂಟ
ನಿಮ್ಮ ರೂಪು ನಿರ್ಮಲವಾದ ಕೆಂಡದ ಕೂಟ
ನಿಮ್ಮ ರೂಪು ಬಹುಪx x x ನಮ್ಮ ಸಾಹಸ ಜನ ಬೇಂಟ
ನಮ್ಮ ಕೂಟವೆಂಬುದಿದು ಮರುಳಾಟ ||       ೧

ಸಿರಿ ಬಿಸಿಟೆಂಬ ಗುಣ ನಿಮಗೆರಡುಂಟೂ
ನೆರೆ ಪ್ರೀತಿ ಕೋಪದಿಂದ ನಿಮ್ಮ ನಮ್ಮ ಗಂಟೂ
ಅರಿಯದಿಂದೊತ್ತಿ ತಮ್ಮ ನಿಮ್ಮ ನೆನೆಯಂಟೂ
ಅರಿದೇವಿನ್ನೇಕೊ ನಿಮಗೆಮ್ಮ ಕೂಡೆ ಬಂಟೂ ||         ೨

ಹೇಗೆ ನೋಡಿದರು ನಿಮ್ಮೊಳು ಲೇಸ ಕಾಣೆ
ಹೇಗೆ ಭೇದ ಹುಟ್ಟಿಯ ನೀವಿಹುದೊಂದು ಜಾಣೆ
ಹೋಗಿರೊ ನಾ ನಿಮ್ಮನೆಂತು ಕೆಡಿಸದೆ ಮಾಣೆ
ಶ್ರೀ ಚಿದಂಬರ ಪುರುಷನ ಬಿಡರಿರಾ ||          ೩

೧೪೮. ನೋಡಬೇಡವೆತನ್ನಾತ್ಮನ

ನೋಡಬೇಡವೆ ತನ್ನಾತ್ಮನ ನೋಡಬೇಡವೇ
ಕೇಡಿನೊಳಗಣ ನಾಡಿನಾಟ್ಯವ ಹೊರ ಹೊರ
ಗಾಡಿ ಬೊಂಬಿಲು ಬಾಡಿ ಮತಿಯ ನೀ
ಗಾಡಿಯಹುದಾವ ಪ್ರಹುಡೀ ||        ಪಲ್ಲವಿ

ಹಲವು ಚಿಂತೆಯ ತೊರೆದೇಕಾಂತ ಸ್ಥಳದೊಳಗೊಬ್ಬನೆ ಕುಳಿತು
ಸಲೆ ತನ್ನಾತ್ಮನ ಭಾವಿಸಿ ನೋಡಲು ಹಳಚುವ ಕಣ್ಗಳು ಮುಚ್ಚಿ
ಅಸಿಯ ಕೊಚ್ಚಿ ಸುಖದಲ್ಲಿ ಹೆಚ್ಚಿ ಮುಕ್ತಿಯ ನೆಚ್ಚಿ ||        ೧

ಉದ್ದಿನೊಳಗಣ ಬೆಳೆಯ ಕಂಭದೊಳಿದ್ದ ಸ್ಫಟಿಕದ ಬೊಂಬೆಯು ಬೊಂಬೆಯಲಿ
ಹೊದ್ದಿಯ ಹೊದ್ದದೆ ಮೈಯೊಳು ಸುಪ್ರಭೆಯದಂತೋರುವುದಾಗ
ಕರ್ಮ ವಿಭಾಗ ಬಾಹ್ಯ ವಿರಾಗ ಧ್ಯಾನದುದ್ಯೋಗಯಿದು ಶಿವಯೋಗ ||    ೨

ದೇಹಿಗಳೆಲ್ಲರ ಮೈಮೈದಪ್ಪದೆ ಶ್ರೀ ಹಂಸೇಶ್ವರನಿಹನು ನಿಹನು ನಿಹನು
ಬಾಹ್ಯ ವಿಭಾಗ ಭಾವಿಸಿ ನೋಡಲು ಮೋಹಿದ ಕರ್ಮ ವಿನಾಶ ಜ್ಞಾನಪ್ರಕಾಶ
ಕೆಡದ ಸಂತೋಷ ಪರಮ ವಿಲಾಸ ಮುಕ್ತಿ ನಿವಾಸ ||    ೩

೧೪೯. ನೋಡಿರೆಲ್ಲರುಕೊಂಡಾಡಿರೆಲ್ಲರು

ನೋಡಿರೆಲ್ಲರು ಕೊಂಡಾಡಿರೆಲ್ಲರು ನಾಡು ಮಾತು
ಬೇಡ ಭಕ್ತಿಗೂಡಿ ಸಮುದ್ರಾಧೀಶ್ವರನಾ ||      ಪಲ್ಲವಿ

ಹೊಳೆವ ಲವಣ ವಾರ್ಧಿಯ ನಡುವೆಯಳತೆಯಾದುದ ಮಹಾತ್ಮನ
ನೆಳಲು ಸೋಂಕಿದುಪ್ಪು ನೀರ ಎಳೆನೀರಂತೆ ಮಾಳ್ಪ ದೇವನ ||  ೧

ಏನೆಂದೆಂಬೆನೈಯ ಹಲವು ಮೀನು ಮೊಸಳೆ ಸರ್ಪಂಗಳು
ಜ್ಞಾನಿಗಳಂದದಲಿ ಕೂಡೆ ಆನಂದದಲಿ ಬಲಗೊಂಬುವನ ||       ೨

ಅಂದೊಬ್ಬರಿಸುರಿತಾಳ ಭಕ್ತಿಯಿಂದ ಭಾಜವನೆಳೆಯುತಿರಲು
ತಂದೆಷ್ಟು ಪಟ ಸೂತ್ರಕ್ಕೆ ಮೂರೊಂದೊಂದುಬ್ಬಿ ಬೆಳೆವ ದೇವನ ||         ೩

ಹಲವು ಹಡಗು ಹೋಗದಲ್ಲಿ ಬಲಕಿಕ್ಕಿದರೆ ಲಾಭ ನಿಲದೆಯೆಡಕೆ
ತೊಲಗೆ ನಷ್ಟಂ ಬಲಗೊಳ್ಳಿರೊ ಬಲ್ಲವರೂ ||   ೪

ದ್ವಾರಾವತಿಯೊಳಂದು ಬಲನಾರಾಯಣರ ಪೊರೆದವನ ಶೃಂ
ಗಾರ ಕವೀಂದ್ರನ ಸ್ವಾಮಿ ಚಾರು ಸಮುದ್ರಾಧೀಶ್ವರನಾ ||        ೫

೧೫೦. ನೋಡುನೋಡುತನು

ನೋಡು ನೋಡು ತನುವೆನ್ನ ಕೂಟ ಕಂಡಾ
ಮೋಡದಂದದಿ ತಾನು ಸೂರ್ಯನಂದದಿ ನಾನು
ಕೂಡುವುದೇರಾಟ ಕರ್ಮ ಮಾಡಿದ ಮರುಳು ಮಾಟ ಮೈಯೊ
ಳಾಡುವದಿದು ಪೇಚಾಟ ||  ಪಲ್ಲವಿ

ಕರ್ಮವೇ ತನ್ನ ಬಾಳಿನ ಮೂಲ ನಿರುಪಮ ಧರ್ಮವೇ ನನ್ನ ಮೂಲಾ
ಕೂರ್ಮೆ ಕೋಪವೆ ತನಗಾಸೆ ನನಗೆ ಕ್ಷಮೆ ನಿರ್ಮಮಕಾರವೈಸೆ
ದುರ್ಮೋಹವೆಂಬುದು ತನ್ನ ತತ್ತಿನ ದಿನ ನಿರ್ಮೋಹ ನನ್ನದಲ್ತು
ಚರ್ಮ ಮಾಂಸವೆ ತನ್ನ ರೂಪು ಸುಜ್ಞಾನ ಜ್ಯೋತಿರ್ಮಯ ನನ್ನ ರೂಪು ||  ೧

ಆವಾನ ಬಾಧೆಗೆ ತಾಳೊಳಗಹುದು ನಾನ್ನೋವಿಗೆ ಸಿಲುಕುವೆನೆ
ಬೇವುದು ಮನ ಬೆಂದ ಮನೆಯೊಳಗಣ ಬಾ ಬೇವುದೆ ಬೆಂಕಿಯಿಂದ
ಮೂವಿಧಿಯೊಳಗಾದ ದೇಹದ ಸೋಂಕಿಂದ ಧಾವತಿಪಟ್ಟವನು
ಗಾವಿಲರೊಡನಾಡಿ ಗರ್ವನು ಕೆಟ್ಟೆನೆಂಬ ವಾರ್ತೆ ತೋರಿತಲ್ಲಾ || ೨

ದೇಹ ಬೇರೆ ದೇಹದೊಳಗೆ ನಿಲಿಸಿರ್ದೆಯೆಂದೂಹಿಸಿ ಧ್ಯಾನಿಸದೆ
ಹಾಹಾ ನಾನಿಷ್ಟು ಕಾಲವು ದುರಿತಾಜ್ಞೆಯಿಂದಾವತಿ ಪಟ್ಟೆ ನಾನೂ
ಹೋಹೋ ಇನ್ನೇಕೆ ನಾನಾ ಚಿಂತೆ ನಮಗಿನ್ನೂ ಸಾಹಸಿಯಾಗಿ ನಿಂದು
ಶ್ರೀ ಹಂಸನಾಥನ ನೋಡು ಕರ್ಮವ ನೀಗಿ ಹೋಹೆನು ಕೈವಲ್ಯಕೆ ||        ೩