೫೧. ಆತ್ಮನೆಲೋಕವೆಲ್ಲವು

ಆತ್ಮನೆ ಲೋಕವೆಲ್ಲವು ಸಲೆಯ ಸಂಭ್ರಮಕೆ ಮರುಳಾಗಿ
ವ್ಯಾಕುಲದೊಳೊತ್ತಿ ನೋವುದೆ
ಆತ್ಮನ ನೀ ಕಂಡ ಕಳೆಯು ಮತ್ತಿಲ್ಲ ತಡೆವರೆ ಸಾಕೇಳು
ಮುಕ್ತಿಗೆ ನಿಜಾತ್ಮ ||         ಪಲ್ಲವಿ

ಆತ್ಮನೆ ಭರತೇಶ್ವರನು ಮುನ್ನ ತನ್ನದೆಂದಾಗಿ ಧರೆಯ
ಮತ್ತಾಳ್ದ ಸಗರೇಂದ್ರ ಆತ್ಮನೆ ಪರಮ ರಾಮನು
ಸುಜಾಮನು ರಾವಣನು ರಘುದೇವರ ಪಾಂಡು
ಪುತ್ರರಾಳಿದರು
ಆತ್ಮನೆ ನೆರೆದಾಳ್ದ ರಾಜವಿದರುಗಳೆಲ್ಲ ಹೋದರು
ದೊರೆಯೆಂಬಗ್ಗಳಿಕೆ ಹೋಯಿತಲ್ಲ
ಅತ್ತನೆ ಅರರೆ ಮತಿಗಳು ನನಗೆ ತನಗೆಂದವಳೆ
ನಿಂದೆರೆದಾಡುತಿರ್ದ ಲೋಕವೆಲ್ಲ ||  ೧

ನೂರ ಗಳಿಸಿದೊಡೆ ಸಾವಿರದಾಸೆ ಸಾ
ವಿರವು ತೊರೆದಡೆ ಲಕ್ಷಕೋಟಿಗಳು ಆತ್ಮನೆ
ಮೆರೆವುದು ಧನದಾಸೆ ಅಗ್ನಿಂಧನದಷ್ಟ
ಪೊರೆದಷ್ಟಕೆ ಹೆಚ್ಚುವಂತೆ ಆತನೆ
ನೂರು ವರುಷದ ಮೇಲೆ ನರರಿಗಿರವಿಲ್ಲ ತನು
ಬೇರಹುದು ಜೀವ ಬೇರಹುದು ಆತ್ಮನೆ
ಮೂರು ದಿನದ ಬದುಕಿಗಾರು ತೋಡಿಟ್ಟವಳದೂಡಿ
ಗೊಳೆಗಾದಗದಿರು ಕಂಡಾ ||         ೨

ಇಂದಾದಯೋ ನಿನ್ನೆ ಮೊನ್ನೆಯಾದಯೋ ನಿನಗೆ
ಹಿಂದಾದ ಯುಗಕೆ ಗಡಿಯಿಲ್ಲ ಆತ್ಮನೆ
ಅಂದಿಂದ ಹೊತ್ತ ಮೈ ಸತಿಸುತರು ಸಿರಿ ಕನಸಿ
ನಂದದೊಳು ಮಾಯವಾದುದರೆಯೂ ಆತ್ಮನೆ
ಮುಂದೆ ಭಕ್ತಿ ಪರಬ್ರಹ್ಮ ಪಾಹೃತಶಾಸ್ತ್ರ
ದಂದದೊಳು ತಪಸು ಮಾಡೇಳು ಆತ್ಮನೆ
ಮುಂದೆ ಕರ್ಮಗಳಳಿದು ಕೈವಲ್ಯವಹುದು ಶ್ರೀ
ಮಂದರಸ್ವಾಮಿ ಮೆಚ್ಚುವನು ||       ೩

 

೫೨. ಹಲಹಲವಚಿಂತಿಸದಿರು

ಹಲ ಹಲವ ಚಿಂತಿಸದಿರು ಅತ್ತ
ಕಲೆಯ ನೋಂಪಿಯ ಪಿಡಿದಿರು ಯೋಗಿ ||     ಪಲ್ಲವಿ

ಉಂಗುಷ್ಟದಿಂದುತ್ತಮಾಂಗ ಪರಿಯಂತ ಸ
ರ್ವಾಂಗ ಪರಿಪೂರ್ಣವಾಗಿ
ಅಂಗದೊಳಗಿಹನಾತ್ಮ ಸಂಗವಿಲ್ಲಾತ್ಮ ನಿ
ರಂಗ ಸುಜ್ಞಾನಾಂಗನು ಹೊದ್ದೆ
ದಂಗ ಸೋಂಕಿಯೂ ಸೋಂಕನು ತಾಳೆ
ಸಂಗದಾಕಾರ ಕಾಣಾ ಯೋಗಿ ||     ೧

ನೀರಿಂದ ನೆನೆಯ ಕಿಚ್ಚಿಂದ ಬೇಯನು ಖಡ್ಗ
ಧಾರಿಗಳವಡುವನಲ್ಲ
ನೀರು ಕಿಚ್ಚು ಯುದ್ದದಾ ಬಾಧೆ ಮೈಗಲ್ಲದೆ
ಧೀರಕೆದಾತ್ಮನಿಗಲ್ಲ ದೇಹ
ಧಾರುಣಿಯ ಹಾಗೆ ನಿಜಾತ್ಮ ಕಾಣಾ ಯೋಗಿ || ೨

ಇಂಧನದೊಳಿರುದಗ್ನಿ ಹೊಸೆದೊಡೆದು ತಾನಿರ್ದ
ಇಂಧನವ ಸುಡುವದರಿಯ
ನಿಂದು ದೇಹವ ಸುಟ್ಟು ಮುಕ್ತಿಗೈವನಾತ್ಮ
ನಿಂದೊಳಗೆ ಧ್ಯಾನಿಸಿದೊಡೆ ಧ್ಯಾನ
ಮಂದಿರದೊಳಿರುತಿಹನು ಶ್ರೀ
ಮಂದರ ಸ್ವಾಮಿಯಾಣೆ ಯೋಗಿ ||   ೩

 

೫೩. ಸುಖಿಸಲಿಲ್ಲವೆನಿಚ್ಚ

ಸುಖಿಸಲಿಲ್ಲವೆ ನಿಚ್ಚ ಸುಖಿಸಲಿಲ್ಲವೆ
ಅಖಿಳ ಚಿಂತೆಯ ನೀಗಿ ಧ್ಯಾನ
ಮುಖದಲೊಸರುವಾತ್ಮ ಸುಖವ ||  ಪಲ್ಲವಿ

ಕಂಗಳು ಮನವ ಕಟ್ಟಿಯಂತ
ರಂಗದೊಳಗೆ ನೋಡಿದರೆ
ಉಂಗುಷ್ಟದಿಂದ ನೆತ್ತಿ ಮುಟ್ಟಿ ಸ
ರ್ವಾಂಗ ತುಂಬಿ ಹೊಳೆವ ||         ೧

ಸುಖಮ್ಯತಾದ ಭವ್ಯರಿಗೆ
ಯಗಮ್ಯವಾದ ದಿವ್ಯ
ಸುಖವ ತಾನೆ ತನ್ನೊಳು ಸು
ವ್ಯಕ್ತವಾಗಿ ನಿಂತು ನಿಚ್ಚ ||   ೨

ಇಂದು ಬ್ರಹ್ಮಾನಂದದ ಸವಿಯ ತೋರಿ
ಮುಂದೆ ಮುಕ್ತಿ ಸುಖವ ತೋರುವ
ಸಂದಾತ್ಮ ಸುಖವ ಕರುಣದಿಂದ ಶ್ರೀ
ಮಂದರಸ್ವಾಮಿಯ ಮೇಲೆ ||        ೩

೫೪. ಎಂದಿಗೆಹಿಂಗುವುದೊ

ಎಂದಿಗೆ ಹಿಂಗುವುದೊ ಸಂಸಾರ ಪಾಶ ಶ್ರೀ
ಮಂದರ ಜಿನೇಶ ಕಾಯೋ ಪಾಪನಾಶ ||      ಪಲ್ಲವಿ

ದಾಹವೆಂಬ ಸೆರೆಮನೆಗೆನ್ನ ಕೂಡಿ ಮಾಯಾ
ಮೋಹವೆಂಬ ಸೊಕ್ಕಸವಿಗೆ ಮಾಡಿಯೂಡಿ
ರೂಹುಗೆದ್ದ ಕಾಮನಂಬಿಗೀಡು ಮಾಡಿ ಎನ್ನ
ಮೋಹರಿಸಿ ಕಾಡುತಿದೆ ಕಾಯೋ ನೋಡಿ ||    ೧

ಉಂಡು ಉಂಡು ಉದರಾಗ್ನಿ ಕೆಟ್ಟುದಿಲ್ಲ ಕೇಡ
ಕಂಡುಕಂಡು ಹೇಯ ಮನ ನಟ್ಟಡಿಲ್ಲ
ಕೊಂಡುದನೆ ಕೊಂಬುದನೆ ಬೇರೊಂದಿಲ್ಲ ಕರ್ಮ
ದಂಡಣೆ ನೀನೆ ಸುಧಾಯ ಜಿನಮಲ್ಲಾ ||       ೨

ಈ ಮೈ ಬೇರೆ ನಾ ಬೇರೆ ನೋಡೆನ್ನ ಭಿನ್ನ ನಿ
ನ್ನ ಮೆಚ್ಚಿದ ನಡೆ ಕಲ್ಲೋಳಿಹ ಚಿನ್ನ
ಹೇಮ ಸಿದ್ಧನೆಂದು ಬಲ್ಮೆನೈ ನಿನ್ನ ಕಾಯೋ
ಶ್ರೀಮಂದರಸ್ವಾಮಿ ತಳುಮಾಡದೆನ್ನ ||       ೩

 

೫೫. ಕ್ಷೇಮವೇಮತ್ತೂಕ್ಷೇಮವೇ

ಕ್ಷೇಮವೇ ಮತ್ತೂ ಕ್ಷೇಮವೇ ನಿಮ್ಮ
ಸೀಮೆಗೆ ನೀ ಹೋದಂದಿಂದ ಪರಿ
ಣಾಮವೇ ಹೇಳು ನನ್ನಾಣೆ ಹಂಸಾ || ಪಲ್ಲವಿ

ಹೋಗದ ಠಾವಿಲ್ಲವಿಲ್ಲದತ್ತಿತ್ತ ಮುನ್ನ
ಹಗಲಿರುಳೆನ್ನದೆ ಸುತ್ತುತ್ತಿದ್ದೆ
ಅಗೆದು ನೆಟ್ಟಂತೆ ನಿಂದೆ ನಿನ್ನಲಿ ಮೂರು
ಜಗದ ವಿಶಾಲವ ಕಂಡೆ ಹಂಸಾ ||   ೧

ಬಾಯಿಗೆ ಬಂದುದ ನುಡಿದು ಕಣ್ಣಿಗೆ ಮನ
ಮೈಯ ಮೆಚ್ಚಿದಾಟವನಾಡುತಿದ್ದು
ಸುಯಿಗಳ ಬಾಧೆ ಸುಮ್ಮನಿರ್ದಪೆ ನೀನು
ಕೈವಲ್ಯನಾದೆ ಹಂಸಾ ||    ೨

ದಂದುಗದೊಳಗಾಗಿ ದಾವುತಿಬಟ್ಟೆ
ಕುಂದುತ ಹೆಚ್ಚುತಲ್ಲದೆ ನೀ ಮುನ್ನ
ಮಂದರದಂತೆ ಮಹಿಮೆಯ ಪಡೆದೆ ಶ್ರೀ
ಮಂದರಸ್ವಾಮಿಯೊಲಿದನೆ ಹಂಸಾ ||         ೩

೫೬. ಪಾಡಿರೆಲ್ಲರೂದೇವನ

ಪಾಡಿರೆಲ್ಲರೂ ದೇವನ ನೋಡಿರೆಲ್ಲರೂ ಕೊಂ
ಡಾಡಿರೆಲ್ಲರೂ ನಾಡ ಮಾತುಬೇಡ ಭಕ್ತಿ
ಗೂಡಿ ಸಮುದ್ರಾಧೀಶ್ವರನಾ ||       ಪಲ್ಲವಿ

ಹೊಳೆಯ ಲವಣವಾರ್ಧಿಯ ನಡುವೆ
ಅಳತೆಯಾದುದ ಮವತೆನ್ನ x x x x x ನಿರ
ಯೊಳೆ ನಿರಂತ ಮಾಳ್ಪೆ ದೇವನಾಂ ||         ೧

ಏನೆಂಬೆನಯ್ಯಾ ಹಲವು
ಮೀನ ಮೊಸಳೆ ಸರ್ಪಂಗಳು
ಜ್ಞಾನಿಗಳಂದದಲಿ ಬಲಗೊಂಬುವನಾ ||       ೨

ಹಲವು ಹಡಗು ಹೋಗುವಲ್ಲಿ
ಬಲಕಿಕ್ಕಿದರೆ ಲಾಭ ಎಡಕೆ
ತೊಲಗಿದರೆ ನಷ್ಟ ಕಂಡ
ಬಲಗೊಳೆ ಬಲ್ಲವರು ||      ೩

ಅಂದೊಬ್ಬ ಸುರಿತಾಣ ಭಕ್ತಿ
ಯಿಂದ ಭುಜವನಳವುತಿರಲು
ತಂದ ಪಟ್ಟು ಸೂತ್ರಕೆ ಮೂರೊಂ
ದೊಂದುಬ್ಬಿ ಬೆಳೆವ ದೇವನಾ ||      ೪

ದ್ವಾರಾವತಿಯೊಳೊಂದು ಬಲ
ನಾರಾಯಣರ ಪಾರವನ ಶೃಂ
ಗಾರ ಕವೀಂದ್ರನ ಸ್ವಾಮಿ
ಬಾರಾ ಸಮುದ್ರಾಧೀಶ್ವರನಾ ||      ೫

೫೭. ಕರುಣದೋರುಕರುಣದೋರು

ಕರುಣದೋರು ಕರುಣದೋರು
ದುರಿತ ವಶವಾಗಿ ನೊಂದೆ ಪುರುಜಿನ ಚಂದ್ರಾ ||        ಪಲ್ಲವಿ

ಹಸಿಯ ಚರ್ಮದೊಂದು ಮಯ್ಯ ತಳೆದು ತಾಯ
ಬಸಿರ ಹೊಕ್ಕು ಪೆಸರಲ್ಲಿ ಬೆಳೆದು
ಮುಸುಕಿ ಮತ್ತೆ ಭೂಮಿಗೊಯ್ಯನಿಳಿದು
ಕಿಸುಕೊಳದೊಳೆಂತು ಬಾಳ್ವೆನಯ್ಯ ನೀನೆ ತಿಳಿದು ||    ೧

ನೋಡಿ ನೋಡಿಂತುಟಾ ಕಷ್ಟವಲ್ಲದೆ ಪುಟ್ಟಿ
ಯಾಡಬೇಕು ಹೀಗೆ ಲೆಕ್ಕವಿಲ್ಲದೆ
ಕೊಡಬೇಕು ಕೂಡಿ ಹೊದ್ದಿನಿಲ್ಲದೆ ನಿನ್ನ
ಬೇಡಿಕೊಂಬೆನಯ್ಯ ಜಿನ್ನಯ್ಯ ತಳುವಿಲ್ಲದೆ ||   ೨

ಶಾಂತಿಯಂತೆ ಮಾಡುವ ಕರ್ಮದ ಪಡೆಯ ಸಾ
ಕಿನ್ನು ದಂಡಿಸಯ್ಯ ಜವನಗಡಿಯಾ
ಕಿನ್ನರಿ ಸಾವಂತರಾಯನೊಡೆಯ ಸುಪ್ರ
ಸನ್ನ ಸಮುದ್ರಾಧಿಪ ಬಿಡೆ ನಾ ನಿಮ್ಮಡಿಯ ||  ೩

೫೮. ಸಾರಿದೆನಿಮ್ಮಡಿಗಳನು

ಸಾರಿದೆ ನಿಮ್ಮಡಿಗಳನು ದೇವಾ ||   ಪಲ್ಲವಿ

ನಾನಾ ಗರ್ಭದಿ ಪುಟ್ಟಿ ಹೊಂದಿನೊಂದ ನೂಕುತ
ನಾನೊಲ್ಲೆನೀ ಸಂಸಾರ ಸಾಕು
ಏನಯ್ಯ ಏನಯ್ಯ ಸ್ವಾಮಿ ನಿನಗೆನ್ನ ಬಿನ್ನಹ ಪರಾಕು
ನೀನೆನ್ನ ಸಾಕೆಂದು ಮನ್ನಿಸಬೇಕು || ೧

ಕರುಣಾಳುವೆಂದೆಂಬ ಪೆಸರುಳ್ಳರೆನ್ನ
ಮರುಹ ಅರುಹನಾದೊಡೆನ್ನ ನಿನ್ನದು
ದುರಿತ ವೈರಿಯೆಂಬ ಬಿರಿದು ಕರ್ಮವ ಸೀಳಿ
ಬಿರಿದೊಂದೆಸೆ ನೀನೊಂದೆಸೆಯೊಪ್ಪುದು ||    ೨

ಸೇವಕತನ ಸಲುಗೆ ಎಲ್ಲೆನಭಯ ಬಂತು
ದೇವಾ ನಿಮ್ಮನೊತ್ತುವ ಮಾತಾ
ಆವಾಗ ಸಮುದ್ರಾಧಿಪ ತ್ರಾಹಿಯೆಂಬ
ಈ ವಾಕ್ಯ ಸಂಸಾರ ವಾರ್ಧಿಗೆಸಿತು ||         ೩

೫೯. ಚಿತ್ರವಕಂಡುದಿಲ್ಲವೆ

ಚಿತ್ರವ ಕಂಡುದಿಲ್ಲವೆ ನೀವು ಹೊಸ
ಚಿತ್ರವ ಕಂಡುದಿಲ್ಲವೇ ಪ
ಮಿತ್ರ ಪುರುಷನೊಬ್ಬನಾಟದ ವಿ
ಚಿತ್ರವ ಕಂಡುದಿಲ್ಲವೇ ||    ಪಲ್ಲವಿ

ಕಿರಿದಿನೊಳಣು ಮಾತ್ರದ ರೂಪಾದ
ನೆರೆದು ಸಾಸಿರಗಾವುದ
ನೆರೆ ಮೈದೋರುವ ನಡುವಿನ ನಾನಾ
ತೆರೆದಲಡಕದಲಾಡುವ ||   ೧

ಹಿಡಿದ ಮೈ ತುಂಬಿಹನು ಆ ಮೈಗಿಷ್ಟು
ಕಡಿಮೆಯಹನು ತುದಿಗೆ
ಪೊಡವಿ ಮೂರನು ತುಂಬುವನು ಕಡೆಗೆ
ಪೊಡವಿಯ ಕಡೆಗಂಡು ನಿಂದಿಹನು ||          ೨

ಭವಪಕ್ಷ ಮೋಕ್ಷಪಕ್ಷ ಗುಣವಸ್ತು
ಧ್ರುವಲಯ ಜನ್ಮಪಕ್ಷ
ಇವರವರಿಗೆ ತಿಳಿಯದು ನಮ್ಮ ಕಡಲಾದಿ
ಶಿವನ ಸ್ಯಾದ್ವಾದ ಚಿತ್ರವಿದು ||       ೩