೧೩೧. ದುರಿತಾರಿತ್ರಿಜಗದುನ್ನತದ

ದುರಿತಾರಿ ತ್ರಿಜಗದುನ್ನತದ ಭಾಗ್ಯದ ನಿಧಿಯೆ
ಪರಮ ಸುಖ ಸಂಪದವನೀವ ಚಿಂತಾಮಣಿಯೆ
ವರಮೋಕ್ಷ ಲಕ್ಷ್ಮೀಪತಿಯೆನಿಪ ನಿರ್ದೋಷಿಯನು
ದೋಷಿಯೆಂಬರು ಮೂಢಜನರು ||  ಪಲ್ಲವಿ

ಆದಿಯೊಳುತ್ಪನ್ನನಾದ ಕಾರಣದಿ ಸುಬೋಧ ನಿಧಿ ವೃಷಭವಾಹನವನೇ
ರಿದೆಯಾಗಿ ಭೇದಿಸಿ ನಿನ್ನ ಚರಣವ ಕಾಣಲರಿಯದೆ ಬಳಲುತಿವೆ ಹರಿವಿರಂಚಿ
ಮೇದಿನಿಯೊಳಗೆ ಹದಿನೆಂಟು ದೋಷಂಗಳನು ಬಾಧೆಯಿಲ್ಲದೆ ಗೆಲ್ದು ಸರ್ವಜ್ಞಾನಿ
ಯಾದೆ ಸಾಧಿಸಿ ಚವುರಾಸೀತಿ ಲಕ್ಷಗುಣಗಳ ತಳೆದ ದೇವಾದಿದೇವ ನೀನೇ ||       ೧

ಸಲೆ ಲೋಕದ ವಸ್ತು ವಿಸ್ತಾರದಾ ಅಳುವಿಲ್ಲದಾಗಮ ತತ್ವನಿರ್ಣಯದನಿಧಿ
ವಿಲಸಿತಾ ವಾಗ್ವಧೂಮುಖದೊಳುದಯಿಸಲರ್ಧನಾರೀಶನೆಂದೆನಿಸಿದೈ
ಅಳಿವಿಲ್ಲದ ಶಾಶ್ವತಾಮೃತದ ಶರಧಿ ತಾನೊಲಿದು ಸುದತಿಯ
ರೂಪವನಾಂತು ಬಂದಳು ಕಂಡೂ
ಘಳಿಲನೆ ತೆಗೆದುತ್ತಮಾಂಗದಲಿ ಧರಿಸಿ ಗಂಗಾಧರನೂ ನೀನಾದೆಯೈ ||   ೨

ಅಷ್ಟ ವಿಧ ಕರ್ಮಂಗಳನು ಗೆಲಲು ನೀ ಪರಮ
ನಿಷ್ಠೆಯಿಂದಲಿ ತಪಸು ಮಾಡುತ್ತವಿರಲಾಗಿ
ಬಿಟ್ಟ ಕೇಶವು ಬೆಳೆದು ಜೆಡೆಗಳಾದವು ಜಟಾಮುಕುಟಧರನೆಂದೆನಿಸಿದೈ
ಉಟ್ಟುದನೂ ತೊರೆದು ಇಂದ್ರಿಯ ವಿಷಯ ವ್ಯಸನಗಳ
ಸುಟ್ಟು ಮುರುಳ್ಗಳ ಕೂಡಾಡುತ್ತ ಮಿರಲಾಗಿ
ಕಷ್ಟ ಭವಗೆಡಿಸಿ ತಿರಿದುಂಡನೆಂಬರು ಜಗದಕರ್ತ ಸರ್ವಜ್ಞ ನಿನ್ನ ||          ೩

ಅಷ್ಟಮದವೆಂಬ ಗಜಾಸುರನ ಸಮರದಲಿ
ಮೆಟ್ಟಿ ಮೂದಲಿಸಿ ತಿವಿದಾಳ್ದುದೆಲೆ ಗಜಚರ್ಮ
ವುಟ್ಟು ಮೆರೆದನುಯೆಂದು ಜಡರು ಬಣ್ಣಿಪರು ಮದವೈರಿ ಹರನೆ ನಿನ್ನಾ
ದುಷ್ಟ ಮನಸಿಜನ ತಪವೆಂಬ ತೀವ್ರಾಗ್ನಿಯಿಂ
ಸುಟ್ಟರುಹಿ ಕಳೆದು ಭುವನಕೆ ಅತಿಧೀರ ನೀ ಭಸ್ಮ
ವಿಟ್ಟಕಾರಣದಿ ವಿಭೂತಿಭೂಷಣನಾದೆ ಶಂಭು ಜಗವಂದ್ಯ ನೀನೇ ||         ೪

ಎಸೆವ ಜ್ಞಾನೋದಯದಿ ನೊಸಲ ಕಣ್ಣುದಯಿಸಲು
ವಿಷಮ ಜಾತಿ ಜರಾಮರಣ ತ್ರಿಪುರಗಳನುರುಪಿ
ಅಸದಳವೆನಿಪ ಅಜ್ಞಾನಂಧಕಾಸುರನ ಮೆಟ್ಟಿ ನಾಟ್ಯವನಾಡಿದೈ
ಮಿಸುಪ ತ್ರಿಜ್ಞಾನ ತ್ರಿಶೂಲವನೂ ಪಿಡಿದು ನೀ
ವಸುಧೆಯೊಳಗುಳ್ಳ ಜೀವಂಗಳನೆಲ್ಲವನು ತ
ನ್ನಸುವ ಕಾಯ್ವಂತೆ ಕಾಯ್ದನುಯೆಂದು
ಪಸರಿಸಿತು ಮೃಡನ ಢಮರುಗದ ಧ್ವನಿಯೂ || ೫

ಸುರನರೋರಗ ಖಚರ ಜ್ಯೋತಿಷ್ಕರಾದಿ ಕಿನ್ನರರು ಕಿಂಪುರುಷರಂ
ಗರುಡ ಗಂಧರ್ವರಂ ನೆರೆದು ಬಂದರು ಪರಮ
ಹರುಷದಿಂದಲೆ ಸದಾಶಿವನ ಬಲಗೊಂಡು ಪೂಜಿಸಲೆಲ್ಲರೂ
ಹರುಷದಿಂದೆರಗೆ ಮಣಿಮುಕುಟರಂಜಿತಕಿರಣ ಹರನ ತನು ಪ್ರಭೆಯೊಳಗೆ
ಶಿರದ ಗೊಂಚಲ ಎಸೆಯೆ ಧರೆಯೊಳಗೆ ರುಂಡಮಾಲಾಧರನು ಯೆಂ
ಬರೆಲೆ ನಿರ್ದೋಷಿ ರುದ್ರ ನಿನ್ನಾ ||    ೬

ಉರವಣಿಸಿ ಜಾತಿಜರಾಮರಣಗಳ ಸಂಹರಿಸಿ
ಹರನಾದೆ ಶಾಶ್ವತ ಮುಕ್ತಿ ಲಕ್ಷ್ಮಿಗೆ ನೀನು ವರನಾದ ಕಾರಣದಿ ನಿತ್ಯ
ನಿರಂಜನನು ನಿರ್ಭಯ ಸದಾಶಿವನ ನೀನಾದೆಯೈ
ಹರಿಹರನು ಅಜನು ಅರುಹನಾದೊಡಾಗಲಿ
ತಿರುತ ಹದಿನೆಂಟು ದೋಷವ ಗೆಲಿದವನೆ ದೇವರ ದೇ
ವರದಾದಿ ಶಿವನು ಜಾಯಣ್ಣನಾಧಾರ ತ್ರಿಜಗಾಧಿಪತಿಯು ನೀನೆ ||          ೭

೧೩೨. ದೇಗುಲವನೆಪೂಜಿಸುತಹರೆ

ದೇಗುಲವನೆ ಪೂಜಿಸುತಹರೆ ದೇವನಾರು ಕಾಣರಲ್ಲಿಯೋ ||     ಪಲ್ಲವಿ

ಒಂದು ದೇಗುಲವೆರಡು ದೇಗುಲ ರೂ
ಪಂದ ನುಂಗಿತು ಮೂರು ದೇಗುಲವು
ಒಂದುಗೂಡಿಕೊಂಡು ದೇವನ ನುಂಗಿದ
ಪಿಂದಿದನಾರು ತಿಳಿಯರಯ್ಯೋ ||    ೧

ಆವರುಂಟು ಕೆಲಬರು ಸಾಮರ್ಥ್ಯವ ಪಿರಿದು ಮಾಡಿ
ದೇವನ ಕಾಣುತಲಿಹರೆ
ಕುರುಬರೊಂದು ಕನ್ನಡಿ ಹುಲ್ಲುಗಿರಿ ತನ್ನ
ಮರಿಯೆಂದು ಮುಟ್ಟಿ ಕೊಡುವಂದದಲಿ ||      ೨

ಉಂಟೆಲ್ಲಾ ಹಲವುವೊಂದು ಹಿರಿದು ಕಿರಿ
ದುಂಟೆರಡು ಗುಣದೊಳಗರಿದೂ
ವಂಟಿಗಾರಿಕೆಯಲ್ಲಿ ನಿನ್ನ ಕಂಡವ
ರುಂಟು ಮುಕ್ತಿ ಚಿದಂಬರ ಪುರುಷಾ ||          ೩

೧೩೩. ದೊರೆತನವೆನಿನಗೆ

ದೊರೆತನವೆ ನಿನಗೆ ಎನ್ನೊಡನೆ ಭಾಕ್ತಿಕ ರನ್ನ
ಸರಿಯೆಂದು ಭಾವಿಸದೆರವು ಕಾಣುವರೆ ||      ಪಲ್ಲವಿ

ಉತ್ತಮ ನಿಮ್ಮಲಿರುವ ಚಿತ್ತದ ಕೊನೆಯೊಳಗಿರಿಸಿ
ಮತ್ತನ್ಯ ವಸ್ತುವ ಕೈವಿಡಿಯದ ಸಜ್ಜನರು
ಹೊತ್ತರಿದು ನಿಮ್ಮ ಹಾದಿಯ ನೋಡುತಹರೆ
ತೆತ್ತರ ನಿಮಗೇನು ತೆರದಿದ್ದರೆ ||      ೧

ಭಕ್ತಿಯಿಂದ ಪೂಜಿಸಿ ಮೋಕ್ಷದೊಳಗಿಷ್ಟ ಸುಖ ಭೋಜನವ
ನಿಪ್ಪತ್ತು ನಿಮ್ಮ ಸನ್ನಿಧಿಯೊಳುಣುತ ಹರೆ
ವೊಪ್ಪತ್ತೆ ಸಾಕು ನಿಮ್ಮ ರಮನೆಯ ತೂಂಭಾರ
ಕಪ್ಪಣೆಯ ಪಾಲಿಸೂ ಕೃಪೆಯಿಂದೆನಗೊಲಿದರುಹಾ ||   ೨

ಒಡೆಯನಿಲ್ಲದ ಬಂಟನಲ್ಲ ನಿಮ್ಮಯ ಗುಣವ
ಬಿಡದೆ ನೋಡಿದೆನು ಮಾಹೇಂದ್ರ ಕೀರುತಿಯಾ
ವೊಡನೆ ಬಂದರೆ ನಿಮ್ಮೂರ ಹೆಬ್ಬಾಗಿಲೊಳು ತಡೆ
ವುದಕೆ ಸೇಂಗೆಯುಂಟೆ ನಿನಗೆಯಾಧೀಶಾ ||   ೩

೧೩೪. ಧರ್ಮವೆಬಲ್ಲಿತಲ್ಲಾಬಹು

ಧರ್ಮವೆ ಬಲ್ಲಿತಲ್ಲಾ ಬಹು
ಕರ್ಮವ ಕೆಡಿಸಿ ಮೋಕ್ಷ ಮನೆಯೊಳಿರಿಸುವ ಜಿನ
ಧರ್ಮವೇ ಬಲ್ಲಿತಲ್ಲಾ ||     ಪಲ್ಲವಿ

ಉಂಡಾಕ್ಷಣ ಭಸ್ಮವಹ ರೋಗದಿಂದ ಜಗ
ಭಂಡನಾದಾರ್ಯನು ನಂದೀಶನೂ
ಕಂಡು ಕೈವಿಡಿದೆತ್ತೀಶ ಸರ್ವರ ಕೈಯಲಿ
ಕೊಂಡಾಡಿ ಸಿದ್ಧರೆನಿಸಿತಾ ಹೊ ||    ೧

ಸಿದ್ಧಾಂತಿತಾನಹ ಮಾಘಣಂದೀಶನು
ದೊದ್ದೆಗಳಂತೆ ಮೋಹಕೆ ಸಿಲುಕಿ
ಬಿದ್ದನ ಮೈ ಹೊಯಿದೆಬ್ಬಿಸಿ ಮೊದಲಂತೆ
ಸಿದ್ಧಾಂತಿಕರೆಂದೆನಿಸಿತಾ ಹೊ ||     ೨

ದೇವ ಸಮಂತಭದ್ರಾರ್ಯನುದರದೊಳು
ತೀವಿದಸನ ಲಯವಾಗುತಿರೆ
ಭಾವಿಸಿ ನೋಡಿ ಕಾಂಚಿಪುರದೊಳಾಗದಿ
ರಾವರು ಸರಿಯಿಲ್ಲೆಂತೆನಿಸಿತಾ ಹೊ ||         ೩

ಎಲ್ಲಾ ಶ್ರಾವಕಯೆಲ್ಲಾ ಮುನಿಜನ
ವೆಲ್ಲ ಭವ್ಯ ಸಮ್ಮೋಹಗಳೂ
ಕೊಲ್ಲದ ಜೀವದಯಾಪರ ಸಮಯದ
ಯೆಲ್ಲರು ತಮ್ಮ ವರೆನಿಸಿತಾ ಹೊ ||  ೪

ಕ್ರೋಧ ಮೋಹ ಮಾಯಲೋಭವೆನ್ನಯ
ಬೋಧವಡಂಗಿದ ವೇಳೆಯೊಳು
ಓದುವರೋದನಾಲಿಸಿ ಇಂದಿನದೊಂದು
ದಾರಿಯ ತೋರಿ ಸಂತೈಸಿತಾ ಹೊ ||         ೫

ಜಿನಮತದೊಳು ಇನಿತುಂಟು ಭವ್ಯರು
ಮುನಿಜನರುಂಟೆನಿತನಿತೂ
ನೆನೆವೆನು ನಿತ್ಯ ನಿರಂಜನ ಸಿದ್ಧನ
ತನುಜ ರತ್ನಾಕರ ಸಿದ್ಧನಾ ಹೊ ||    ೬

ಸತ್ಯದಾಚಾರ ಸದ್ಧರ್ಮವೆ ಶರಣೆಂದು
ಉತ್ತಮ ಜಿನಕುಲದೊಳಗೆ ಪುಟ್ಟಿ
ನಿತ್ಯ ನಿರಂಜನನ ಪಾದವ ನೆನೆಯದೆ
ಯತ್ತಲಲ್ಲದೆ ನಾನು ಕೆಟ್ಟಿಹೆನಲ್ಲ ಹೊ ||        ೭

೧೩೫. ನಗೆಯಲ್ಲವೆಇದು

ನಗೆಯಲ್ಲವೆ ಇದು ನಗೆಯಲ್ಲವೆ
ಸುಗುಣರೆಲ್ಲರು ಕೇಳಿ ನಗರೆ ಗುರುವೇ ||       ಪಲ್ಲವಿ

ಅವರೆಂಟು ಮಂದಿಯು ಹೆಡ್ಡರು ಕುರುಡರು
ಅವರವ್ವೆ ಹೆಡ್ಡೆ ಕುರುಡಿಯಲೈಯ
ಅವರ ತಾಯಿಗೆ ಮೂವರು ಮಕ್ಕಳ
ಅವರು ಹೆಡ್ಡರು ಕುರುಡಲಾರದರಲೈಯಾ ||   ೧

ಹೆಡ್ಡರು ಕುರುಡರು ಕೂಡಾಡಿ ಮತ್ತೊಬ್ಬ
ದೊಡ್ಡ ಸುಜ್ಞಾನಿ ತಾನೆ
ಹೆಡ್ಡಾದ ಕುರುಡಾದ ವೊಂದು ಕಡ್ಡಿಗೆ
ಕಡೆಯಾಗಿ ಬಳಲಿದೆ ಗುರುವೆ ||      ೨

ಅವರನರಸಲಾಗಿ ಅವರ ತಡೆಯಲಾಗಿ
ಅವರ ಮೈಯಿಂದ ತನ್ನವರು ಪುಟ್ಟಿದರು
ಅವರು ಮೂವರು ಬೇಟಕ್ಕೆ ಹೋದರು
ಭವ ಮುಕ್ತಿ ಚಿದಂಬರ ಪುರುಷನ ||   ೩

೧೩೬. ನನ್ನಮಾತಕೇಳು

ನನ್ನ ಮಾತ ಕೇಳು ನನ್ನ ಮನವೆ ಕೇಳ್ದ
ಡಿನ್ನು ನಿಜಾನಂದವನೇ ಘನವ ||    ಪಲ್ಲವಿ

ಹತ್ತು ಗಾಳಿಗಳ ಸಾಧ್ಯ ಮಾಡು ನಡು
ನೆತ್ತಿಗೆ ವಾಯುವ ತಂದು ಕೊಡು
ಮತ್ತೆ ಕಣ್ಮುಚ್ಚಿ ಆತ್ಮನ ನೋಡು ಪ್ರಭೆ
ಮೊತ್ತದಲ್ಲಿ ಮೂಡಿ ಮೊಳಗಾಡು ||   ೧

ಜುಮ್ಮುದಟ್ಟುತಿದಕೊ ಸರ್ವಾಂಗವೊಳ
ಗುಮ್ಮುರೆದೆಕೊ ಸುಜ್ಞಾನಂತರಂಗ
ವೊಮ್ಮೆಯು ಸೇರದು ಬಹಿರಂಗಾ ಪರ
ಬೊಮ್ಮವಿದು ಮುಕ್ತಿ ಪ್ರಸಂಗಾ ||     ೨

ಧ್ಯಾನವೊಂದರಿಂದ ಆತ್ಮ ಶುದ್ಧ ಜಲ
ಸ್ನಾನದಿಂದ ಮೈಗೆ ಪ್ರಸಿದ್ಧ
ಧ್ಯಾನಿಸಿ ನೋಡಲ ಸ್ವಯಂ ಬುದ್ಧ ಆತ್ಮ
ತಾನೆ ಗುರು ನಿರಂಜನ ಸಿದ್ಧ ||       ೩

೧೩೭. ನಮ್ಮವರೆಲ್ಲರುಹೋದ

ನಮ್ಮವರೆಲ್ಲರು ಹೋದ ಹಾದಿಯಲಿ ನಾವು
ನಮ್ಮ ಸೀಮೆಗೆ ಹೋಹರೇನಂಜಿಕೆ || ಪಲ್ಲವಿ

ಸಪ್ತ ವ್ಯಸನದಲಿ ನಡೆದಾಡಿ ಲಲಿತಾಂಗವಾ
ತಪದಲ್ಲಿ ಮುಕ್ತನಾಯಿತಲ್ಲಲ್ಲ
ಗುಪ್ತಿಗಳ ಪಾರಿಷೇಣ ಕುಮಾರ ಸು
ಖಾಪ್ತಿಯನಂದು ಪಡೆದತ್ತಿಲ್ಲವೆ ||     ೧

ಯುಕ್ತಿಗೆಂದಲ್ಲ ವಿದ್ಯಾರ್ಥಕೆ ಮುನಿಯಾಗಿ
ಮುಕ್ತನಾಯಿತಲ್ಲವೆ ರವಿಮಿತ್ರನೂ
ಶಕ್ತಿಯೊಂದಾಚಮನವೆಂಬ ನೋಂಪಿಯ ನೋಂತು
ವ್ಯಕ್ತನಾಯಿತಿಲ್ಲವೆ ಶಿವಕುಮಾರ ||   ೧

ಮಿಗೆ ವಜ್ರಜಂಘರು ತೊಂಭತ್ತೆಣ್ಬರು
ಸುಗಮ ತಪದಿಂದ ಮುಕ್ತರಾಗಿಲ್ಲವೆ
ಸಗರ ಕುಮಾರರು ನೂರರುವತ್ತನಾಲ್ಕು ಸಾವಿರ
ಸಗರನೊಡನೆ ಮುಕ್ತರಾಯಿತಲ್ಲವೆ || ೨

ಕಪಟವಾಹನ ತಮ್ಮ ನೊಂದವರಾಗನು
ತಪಸಿನಿಂದ ತಾ ಸುಖಿಯಾಯಿತಲ್ಲವೆ
ಅಪರಾಜಿತೇಶ್ವರ ಮೆಚ್ಚಲು ಭೀಮಯೋಗಿಯ
ನ್ನ ಪವರ್ಗದ ಪಡೆಯಿತಲ್ಲವೆ x x x ||         ೩

೧೩೮. ನೆಮಿನಮಿಸಿಎಡೆಬಿಡದೆ

ನೆಮಿನಮಿಸಿ ಎಡೆಬಿಡದೆ ನೆನೆವೆ ಜಿನಪತಿಯ
ಶ್ರೀಮದಮರೇಂದ್ರ ನಾಗೇಂದ್ರ ಚಕ್ರೇಶ್ವರ ||   ಪಲ್ಲವಿ

ಸ್ತೋಮ ಮಣಿಮಕುಟ ಕೀಲಿತ ದಪಯುಗಲು
ಸಾಮಚಾಂಕ ಪೀಠವಾಂತ ಛತ್ರತ್ರಯವು
ಚಾಮರ ವ್ರಜ ದಿವ್ಯ ಶಬ್ದ ಹೂಮಳೆಯು
ವ್ಯೋಮದಿಂ ಕರೆವ ನಿರಂಜನ ಸಿದ್ಧ ||          ೧

ದುಂದುಭಿಯು ಕಂಕೇಲಿ ತರು ಪ್ರಭಾಮಂಡಲಗ
ಳೆಂದೀ ಮಹಾಪ್ರಾತಿಹಾರ್ಯ ರಂಜಿಸುವ
ಸಂದ ಶಂಭರಾರಿ ತ್ರಿಜಗದಿಂದ ಪೂಜಿತನಾದ
ಸುಂದರಾಂಗನಿಗೆ ನಲವಿಂದ ವಂದಿಪೆನು ||   ೨

ಪಂಚ ಕಲ್ಯಾಣಗಳ ತಾಳೀ ಮೂಲೋಕ ಪ್ರ
ಪಂಚ ಕಾಲತ್ರಯವನರಿದು ತನ್ನೊಳಗೆ
ಪಂಚಮ ಜ್ಞಾನ ಸಂಪನ್ನ ಮೂರ್ತಿ
ಪಂಚ ಸಂಸಾರವನು ಕಳೆದು ರಕ್ಷಿಪುದು ||     ೩

ಸಹಜದೊಳು ಬಂದವತಿಶಯ ಹತ್ತು ಘಾತಿಗಳ
ದಹನದಿಂ ಹತ್ತು ದೇವೋಪನೀತಾ
ವಹವು ಪದಿನಾಲ್ಕಿಂತು ಮೂವತ್ತನಾಲ್ಕು ಭರ
ಸಹಿತ ಮೆರೆವಮಲ ಸಂಪದನೆ ರಕ್ಷಿಸುವುದು || ೪

ಜ್ಞಾನ ದರ್ಶನ ವೀರ್ಯ ಸುಖವನಂತಗಳುಳ್ಳ
ಭಾನು ಶಶಿಕೋಟೆ ಸಂಕಾಶ ನಿರ್ಮೋಹ
ಧ್ಯಾನಕಳವಟ್ಟು ಬಂದೆನ್ನ ಮನದೊಳು ನಿಂದು
ಶ್ರೀ ನಿರಂಜನ ಕಡಲ ಶಿವನೇ ರಕ್ಷಿಪುದು ||

೧೩೯. ನಮೋನಮೋನಮೋ

ನಮೋ ನಮೋ ನಮೋ ನಮೋ ಸ್ವಾಮಿ ನಮೋ ಗುರುದೇವ ನಮೋ
ನಿಮ್ಮ ಮಹಾತ್ಮ್ಯಕೆ ಸರಿಯುಂಟೆ ಸ್ವಾಮಿ ಕುಮಾರ ಯೋಗೀಂದ್ರ ||       ಪಲ್ಲವಿ

ಅಗ್ನಿರಾಜನ ಕುಮಾರ ನಗ್ನ ವೇಷಧಾರಿ ಶುಭ
ಲಗ್ನದೆ ಕರ್ಮವ ಧ್ಯಾನದಗ್ನಿಯಿಂದ ಸುಟ್ಟೆಯಲ್ಲ ||       ೧

ಸಿರಿದೆಂಟು ಪ್ರಾಯದ ಕುಮಾರ ಮುನಿ ತಪಸೆಯಿಂದ
ಕಾರುಣ ದೀಪ ಕುಮಾರಾದಿಯೆಂದಾಯಿತಲ್ಲಾ ||        ೨

ಬಿಸಿರಹಳ್ಳಿಯ ಬೆಟ್ಟದಲ್ಲಿ ಹೊಸ ಮಲೆಯೆ ಗುಹೆಯಲ್ಲಿ
ಎಸೆದಿರ್ದ ಕಾರಣ ನಿನ್ನ ಹೆಸರು ಕೀರ್ತಿವಾಯಿತಲ್ಲಾ ||  ೩

ತ್ರಾಂಬೆನಾರೋಹಿಳು ಸುರದಿ ಮುಂಚೆ ನವಿಲೇಟೆಕಾಯ
ಕೈಯನಿಳುಹಿ ಮೋಕ್ಷದಂಚೆಗೆ ಬಾಗಿಸಿದೆಯಲ್ಲಾ ||      ೪

ಕೀರ್ತಿಸಲಳವೆ ಪುಣ್ಯಮೂರ್ತಿ ರತ್ನಾಕರನ ಸಂ
ಪೂರ್ತಿಯ ಗುರುವೇ ಸ್ವಾಮಿ ಕಾರ್ತೀಕ ಯೋಗೀಂದ್ರ ||          ೫