೯೧. ನೋಡಿರೆಲ್ಲನೋಡಿರೆಲ್ಲ

ನೋಡಿರೆಲ್ಲ ನೋಡಿರೆಲ್ಲ ವರಮತಿ ಹೊರ
ಗಾಡ ಸಲ್ಲ ಶರೀರದ ಮೂರು ಗೂಡು ಹೊಲ್ಲ ಹೊಲ್ಲ ||   ಪಲ್ಲವಿ

ಏಕಾಂತದೊಳಗೊಮ್ಮೆ ಕುಳಿತೊಮ್ಮೆ ನಿಂದು
ಜೋಕೆಯಿಂ ಕಣ್ಮುಚ್ಚಿ ಮನದೊಳ ಸಂದು
ಈ ಕಾಯ ಬೇರೆ ತನ್ನಾತ್ಮ ಬೇರೆಂದು
ತಾ ಕೂತು ನೋಡಲು ಬೆಳಗಹುದೊಂದು ||   ೧

ಕೊಡ ತುಂಬಿದೊಂದು ತಂಪಿನ ದೀಪದಂತೆ
ಒಡಲ ಒಡಲಲ್ಲಿವೀಮಾತ್ಮ ತಾ ತೋರ್ಪನಂತೆ
ಕೆಡುವುದು ಕರ್ಮ ಸೇರದು ಬಾಹ್ಯ ಚಿಂತೆ
ಕಡೆಗೆ ಕಣ್ಣುಟ್ಟು ಸೋಲ್ವಳು ಮುಕ್ತಕಾಂತೆ ||    ೨

ನೆಲ್ಲಕ್ಕಿಯೊಳಗೊಬ್ಬನಹುದಹುದೆನಂ
ಮೆಲ್ಲಮೆಲ್ಲನೆ ಸಾಧ್ಯವಹುದು ಸನ್ಮಾನ
ಎಲ್ಲ ಶಾಸ್ತ್ರದ ತಿರುಳದು ಮುಕ್ತಿಸ್ಥಾನ
ಒಳ್ಳಿತು ಗುರು ಹಂಸನಾಥನ ಧ್ಯಾನ ||        ೩

೯೨. ಕರೆತಂದರಾರೋನಿನ್ನ

ಕರೆತಂದರಾರೋ ನಿನ್ನ ನರಜನ್ಮವೆಂ
ಬರೇಕೆ ಹಲವರಿಂದ ||      ಪಲ್ಲವಿ

ಮರವಾಗಿ ಕಲ್ಲಾಗಿ ಹುಲ್ಲಾಗಿ ಲತೆಯಾಗಿ
ಎರೆಹುಳು ಉಡ ಓತಿಯಾದಾಗ ನಿನಗೆ
ಗುರುದೈವವೆಂಬರಿಕೆಯಿಲ್ಲವಂದಿನ ಪಾಪಿ
ಹರೆಂದು ದಾರಿಂದಿತ್ತಲಾರ್ತಂದರೋ ||       ೧

ನರಜನ್ಮವದು ಹಲವು ಬಾರಿ ಪಡೆದೆಯೊ ಮುನ್ನ
ಸುರನಾದೆ ಮರನಾದೆ ನರಕನಾದ್ಯೆ
ತಿರುಗಿ ಮತ್ತಾ ಕಲ್ಲು ಪುಳು ರೂಪಾದೆ
ಕರುಣದಿಂದೆತ್ತಿತ್ತಲೊರ್ತ್ತಂದರೋ || ೨

ಕರ್ಮವ ಕೊಂಡೊಯ್ವುದಲ್ಲಿಗೆ ಮತ್ತೆ
ಕರ್ಮವೆ ತಂದುದಿಲ್ಲಿಗೆ ನಿನ್ನನು
ಕರ್ಮ ಬೇರನು ಬೇರೆಂದು ತಿಳಿಯದೆ ನೀನು
ಕರ್ಮಕ್ಕೊಳಗಾಗಿಹರೆ ಕರ್ಮವೈರಿ || ೩

ತೋರುತಿಹ ತನು ತಾನೆ ಕರ್ಮವ
ದರೊಳಗೆರಡು ಕೂರುಗೊಂಡಿಹುದು ತನು
ಮೂರು ಕರ್ಮಮೂರು ದೇಹದೊಳಡಗಿ ನೀ
ನಿರ್ದೆ ನಿನ್ನ ಕಣ್ಣಾರೆ ನೋಡೈ ಕರ್ಮ ನಾಶವಹುದು ||   ೪

ಗುರು ದೈವವೆಂದು ಪೂಜಿಸಿ ನರಂಮರನಾದೆ
ಗುರುವ ನಿಂದಿಸಿ ಹುಲ್ಲು ಹುಳುವಾದೆಯೈ
ಗುರುದೈವಗಳ ಬಿಟ್ಟು ಹಂಸನಾಥನ ಪಿಡಿಯೆ
ತಿರುಗದ ಕೈವಲ್ಯವಹುದು ||         ೫

೯೩. ಜಪತಾನೆಬಲು

ಜಪತಾನೆ ಬಲು ತಪತಾನೆ ತನ್ನ
ವಪುವಿನೊಳಾತ್ಮನ ನೋಡಿದರೆ ಒಡಗೂಡಿದರೆ
ರತಿಯಾಡಿದರೆ || ಪಲ್ಲವಿ

ಬ್ರಹ್ಮವೆಂದರೆ ತನ್ನತ್ಮಾನ ಹೆಸರು
ಬ್ರಹ್ಮದೊಳಗೆ ಮನ ಬೆರಸಿದರೆ
ಬ್ರಹ್ಮಚಾರಿಯವ ಬ್ರಹ್ಮವ್ರತವದು
ಬ್ರಾಹ್ಮಣನವ ಪರಬ್ರಹ್ಮವದೂ ||     ೧

ನಿರ್ಮಲನೆಂದಾತ್ಮ ರೂಪ ಧ್ಯಾನಿಸುವಾಗ
ಕರ್ಮರಜಸುವೊಳ ಹೋಗಲಿಲ್ಲ
ಕರ್ಮಾಹಾರವ ಕೊಳದಾಚರಿಸುವ
ನೂರ್ಮಡಿ ಗುಣದುಪವಾಸವದೂ || ೨

ಕವಿದೆಂಟು ಕರ್ಮದ ವಸ್ತ್ರವ ಧ್ಯಾನನು
ಭವದಲ್ಲಿ ಓಲಗಿಸಿ ನೋಡಿದರೆ
ನವಪ್ರಭೆ ಮೈಯಾಗಿ ತೋರುವನಾತ್ಮನ
ಸುವಿವೇಕಿಯ ನಿರ್ಮಾಣವದೂ ||    ೩

ಜ್ಞಾನವೆ ಮೈ ದರ್ಶನವೆ ಮೈಯದಾತ್ಮ
ಸ್ಥಾನದಲ್ಲಿಯೇ ಮನ ಚರಿಸಿದರೆ
ಜ್ಞಾನವೆಂದರು ತಾನೆ ದರುಶನವೆಂದರು
ತಾನೆ ಚರಿತ್ರವೆಂದರು ತಾನೆ ||      ೪

ಪರಮ ರಹಸ್ಯವಿದಾಸನ್ನ ಭವ್ಯ ಜೀ
ವರಿಗಲ್ಲದುಳಿದರ್ಗ್ಗೆಗಮ್ಯವಲ್ಲ
ಗುರು ಹಂಸನಾಥನ ಧ್ಯಾನವೊಂದಲ್ಲದೆ
ಎರಡಿಲ್ಲ ಮುಕ್ತಿಗೆ ನೆರೆನಂಬೋ ||    ೫

೯೪. ನೋಡುವಾಗೆನಿನ್ನ

ನೋಡುವಾಗೆ ನಿನ್ನ ಕೂಡಿಕೊಂಡ
ಮೋಡದಂದದಿ ನೀನು ಸೂರ್ಯದಂದದಿ ನಾನು
ಕೂಡುವುದೇ ತಡದೂ ಕರ್ಪ್ಪು
ಮಾಡಿದ ಪುರುಳು ಮಾಡಾ ಮಯ್ಯೊಳಾಡುವುದಿದುವೇ ಜಾಣಾ ||          ಪಲ್ಲವಿ

ಕರ್ಮವೇ ತನ್ನ ಬಾಳಿನ ಮೂಲ ನಿರುಪಮ
ಧರ್ಮವೇ ಸಂಸಾರ ಮೂಲ
ದುರ್ಮೋಹವೆಂಬುದು ತನ್ನ ಕತ್ತಿನಡಿನ ನಿರ್ಮೋಹವೆನ್ನ ಕತ್ತು
ಕೂರ್ಮೆ ಕೋಪವೇ ತನಗಾಸೆ ನಿನಗಕ್ಷಮ್ಯ
ನಿರ್ಮಮಕಾರ ವಾಸಿ ಚರ್ಮ ಮಾಂಸದಿ ತ
ನ್ನ ರೂಪು ಸುಜ್ಞಾನ ಜ್ಯೋತಿರ್ಮೂರ್ತಿ ನಿನ್ನ ರೂಪು ||  ೧

ಆವಾವ ಬಾಧೆಗೆ ತಾನೊಳಗಹುದು ನಾ
ನೋವಿಗೆ ಸಿಕ್ಕುವೆನೆ ಜಾರಿದೆ ಮನ ಬೆಂದ
ಮನೆಯೊಳಗಣ ಗೋಡೆ ಬೇವುದೆ ಬೆಂಕಿಯಿಂದ
ಮೂವಿಧಿಗೊಳಗಾದ ದೇಹದ ಸೋಂಕಿರದ ದಾವುತಿ ಬಟ್ಟೆ ನಾನು
ಗಾವಿಲರೊಡನಾಡಿಗರುವನು ಕೆಟ್ಟೆನೆಂ
ದಿ ವಾಕ್ಯ ತೋರಿತಲ್ಲ ||     ೨

ದೇಹ ಬೇರೆ ದೇಹದೊಳಗೆ ನಾನಿದ್ದೆನೆಂ
ದು ಹೇಸಿ ಧ್ಯಾನಿಸದೆ
ಆಹಾ ನಾನಿಷ್ಟು ದಿನವೂ ದುರಿತಗ್ನಿಯ
ದಾಹದಿಂ ಕಡುನೊಂದೆನು
ಹೋಹೋ ಇನ್ನೇಕೆ ನಾನಾ ಚಿಂತೆ ನನಗಿನ್ನು
ಸಾಹಸಿಯಾಗಿ ನಿಂದೆ ಶ್ರೀ ಹಂಸನಾಥನ ನೋಡಿ
ದೇಹವ ನೀಗಿ ಹೋಹೆನು ಕೈವಲ್ಯಕೆ ||         ೩

೯೫. ಇಹಪರವೆರಡರಚಿಂತೆ

ಇಹಪರವೆರಡರ ಚಿಂತನೆಯಿಲ್ಲದೆ
ಬಹುಚಿಂತೆಯ ಮಾಡಿ ಫಲವೇನೋ ||        ಪಲ್ಲವಿ

ತಾನುಣ್ಣ ಪರರಿಗಿಕ್ಕದೆ ಹೊನ್ನ ಕಾದಿದ್ದ
ಹೀನನ ಸಿರಿಯಿದ್ದು ಫಲವೇನೋ? ಸ್ನಾನಕೆ
ಪಾನಕೆ ಸಲ್ಲದ ಕೊಳ ನೀರು ಕಾನನ ತುಂಬಿದ್ದು ಫಲವೇನೋ?
ಏನೆಂದು ತನ್ನ ಶುದ್ಧಾತ್ಮನನರಿಯದೆ
ನಾನಾ ಶಾಸ್ತ್ರವನೋದಿ ಫಲವೇನೊ?
ಹೀನ ನಿಧಿಯ ಕಾಣದಡವಿಯೆನಗದಾ
ವನೋವನುಂಡ ಫಲವೇನೊ? ||     ೧

ದಿನ ಬಂಜೆಯಿಲ್ಲದೆ ಧರ್ಮವ ಗಳಿಸದೆ
ಮನುಜ ಜನ್ಮಕೆ ಬಂದು ಫಲವೇನೋ?
ಧನವನೆಲ್ಲವು ಗಳಿಸುವ ಪೇಟೆಗೆಯ್ದು ಸು
ಮ್ಮನೆ ಕುಳಿತಿರ್ದಲ್ಲಿ ಫಲವೇನೋ?
ಮನಮನ ದಂಡಿಸಿ ತನ್ನ ನೋಡದೆ ಮೈಯ
ಯನುದಿನ ದಂಡಿಸಿ ಫಲವೇನೋ? ಘನ ವಿಷವುಳ್ಳ ಸ
ರ್ಪನ ಬಡಿಯದೆ ಹುತ್ತವ ನಿಚ್ಚ ಬಡಿದಲ್ಲಿ ಫಲವೇನೋ? ||         ೨

ನಾಳೆ ಸಾವುಂಟೆಂದು ಬಲ್ಲರೆಲ್ಲರು ಸಾವ
ಬಾಳನಚ್ಚಿರಲಲ್ಲಿ ಫಲವೇನೋ?
ಬೀಳುವ ಮರದೊಳುಯ್ಯಾಲನಾರೆ
ಹೂಳಿಟ್ಟನದರಲ್ಲಿ ಫಲವೇನೋ
ಕಾಲಕರ್ಮವ ಗೆಲ್ವ ಕಾರ್ಯ ಸಜ್ಜಾಗಿದೆ
ಯಾವ ಕಾರ್ಯವ ಮಾಡಿ ಫಲವೇನೋ?
ಆಲಿ ಮುಗಿದು ಹಂಸನಾಥನ ನೋಡದೆ
ಆಲಸ್ಯದೊಳಗಾಡಿ ಫಲವೇನೋ ||  ೩

 

೯೬. ಬ್ರಹ್ಮಯೋಗವೇಸುಖ

ಬ್ರಹ್ಮಯೋಗವೇ ಸುಖವೃದ್ಧಿ ಪರ
ಬ್ರಹ್ಮವೊಂದನೆ ಸಾಧಿಸೆಲ್ಲವು ಸಿದ್ಧಿ || ಪಲ್ಲವಿ

ವಾಯುಗಳಿರೈದ ಜಯಿಸು ಮತ್ತೆ
ವಾಯುವೆರಡ ತನು ಬಂಧಿಕೆಗೆಯಿಸು
ವಾಯುವ ಗಗನಕೊಟ್ಟಿಸು ಮಾಯ
ವಾಯವಗಿದು ಉಪಚಯಿಸು ||      ೧

ಕಮಲಗಳೇಲೊಳಗುಂಟು ಒಂದು
ಕಮಲದೊಳಮೃತವುಂಡದನೊಲಿದಂದು
ಕಮಲವೇಳಕೆ ಒಂದೆದಂಟು ಆರು
ಕಮಲ ಲಿಪಿಯ ನೋಡು ವಿದ್ಯೆ ಕೈಗಂಟು ||   ೨

ಹಂಸನಂದದಿ ಜಾಣನಾಗು ಶುದ್ಧ
ಹಂಸನ ಪಿಡಿಯುವ ಆಸೆಗೆ ನಾಗ
ಹಂಸನಾಥನ ನೋಡಿ ಮುಕ್ತಿಗೆ ಹೋಗು
ಹಂಸನ ಪಿಡಿ ಮುಕ್ತಿಗೆ ಹೋಗು ||     ೩

೯೭. ತನ್ನಾತ್ಮನತಾನೇ

ತನ್ನಾತ್ಮನ ತಾನೇ ನೋಡಬೇಕು ಮುಕ್ತಿ
ಗಿನ್ನೊಂದ ಪೇಳ್ವರ ಮಾತು ಸಾಕು ||          ಪಲ್ಲವಿ

ಆನೆ ಕೆಸರಲ್ಲಿ ಬಿದ್ದರೆತ್ತುವರಾರುಂಟು
ತನ್ನ ತಾನೇ ಧೈರ್ಯವಿಡಿದೇಳುವಂತೆ ಆತ್ಮ
ಧ್ಯಾನವ ಮಾಡುವುದೋರಂತೆ ಕರ್ಮ ಹೋಗಿಯಹು
ದೆನ್ನ ಅನ್ಯ ಚಿಂತೆ ||         ೧

ಸುಜ್ಞಾನ ಸ್ವರೂಪ ನಾನು ಅಜ್ಞಾನರು ಪೊಡಲೆಂದು
ವಿಜ್ಞಾನಿ ತನ್ನ ತಾ ಕಂಡು ಧ್ಯಾನ
ಯಜ್ಞವ ಮಾಡುವೆ ನಿಗಗೊಂಡು ಸುಯೋ
ಗಜ್ಞಗಂಜುವುದು ಕರ್ಮದಾ ಹಿಂಡು ||          ೨

ಸಂಸಿದ್ಧಿ ಸುಪಾಯದಷ್ಟ ಪೇಳನೈಸಿ ಗುರು ತನ್ನ
ಸಂಸಾರವ ತಾನೇ ಕೆಡಿಸಬೇಕು ಇದಕೆ
ಸಂಶಯ ಬಿಟ್ಟವನ ಯೋಗ ಕಾಕು ಗುರುವಾರ ಹಂಸನಾಥ ಬರೆದ ತತ್ವದ ಟೀಕು || ೩

೯೮. ದೇವಕಂಡೆನುನಿಮ್ಮನು

ದೇವ ಕಂಡೆನು ನಿಮ್ಮನು ನೀನೆ
ಪಾವನ ಪರಂಜ್ಯೋತಿ ಪರಂಧಾಮ ||         ಪಲ್ಲವಿ

ಅಂಗದೇಶದೊಳಗೆ ಸಮ್ಯಕ್ತ ಪರ್ವತದ ಮೇಲಾಂತ
ರಂಗ ಶುದ್ಧವೆಂಬ ಜಿನವಾಸದಲ್ಲಿ ಸಿಂಹಪೀಠದಲ್ಲಿ
ಸುವಿಲಾಸದಲ್ಲಿ || ೧

ಜ್ಞಾನವೇ ಮೈಯಾಗಿ ಶಕ್ತಿಯಾಭರಣವಾಗಿ ಸುಖ
ತಾನೇ ವಜ್ರವಾಗಿ ಪೊಳೆ ಮೆರೆವೆನ್ನ ಪ್ರಭೆಯು
ಕರೆವನ್ನ ಸೊಬಗು ಮೆರೆವೆನ್ನ ||      ೨

ನೋಡುವ ಭಕ್ತನು ತಾನೇ ನೋಡಿಸಿಕೊಂಬ ದೇವನು
ಕೂಡೊಂದಾಗಿ ಇದು ಚೋದ್ಯ ಹಂಸನಾಥ ದಿವ್ಯಗುಣ
ಯೂಢಾ ಶುದ್ಧಾ ನವರೂಢಾ ||      ೩

೯೯. ಸಾಕುಹೋಗುನಿಲ್ಲು

ಸಾಕು ಹೋಗು ನಿಲ್ಲು ಮೋಹಾಸುರ
ಸಾಕು ಹೋಗು ನಿಲ್ಲು
ಏಕಿನ್ನು ಮರೆ ನಿನ್ನ ಪರಿಯ ನಾನರಿತೆನು ||    ಪಲ್ಲವಿ

ಸ್ನೇಹಕೋಪವೆಂಬೆರಡು ನಿನ್ನ ದಾರಿಗಳು ಮೂರು
ದೇಹವೆಂಬುವು ರಾಕ್ಷಸ ನಿನ್ನ ಹೊಳಲಲ್ಲವೇ
ನೀ ಕಾಣಲಿಲ್ಲವೇ ಕರ್ಮಗಳೇಳು ಪರಿವಾರವಲ್ಲವೇ
ಅವು ನನ್ನ ಗೆಲಲಿನ್ನು ಬಲ್ಲವೇ ||      ೧

ದೇಹವನೆ ನಾನೆಂದೆಂಬ ಬಹಿರಾತ್ಮರ ತಿಂದ
ಸಾಹಸದೆ ಸೊಕ್ಕು ನನ್ನೊಳು ಸಲ್ಲದಾತ್ಮ ವಿಜ್ಞಾನಿ
ನಾನು ಅದರಿಂದೆನಗಿದಿರಲ್ಲ ನೀನು ಸುಮ್ಮ
ನೇ ಹೋಗು ಹಲವು ಮಾತೇನು ||   ೨

ಇರಬೇಡ ಹೋಗು ಹೋಗದಿರ್ದೆಯಾದರೆ ಶ್ರೀ
ಗುರು ಹಂಸನಾಥನಾಣೆ ನನ್ನಾತ್ಮ ಧ್ಯಾನವೆಂಬ
ಉರಿಗಣ್ಣ ತೆರೆವೆ ನಿನ್ನನು ನಿನ್ನ ಬಲ್ಲವರ
ಸುಡುವೆ ಮುಕ್ತಿಗೆ ಕೂಡೆ ನಾ ದಾಳಿಯಿಡುವೆ || ೩

೧೦೦. ಆನಂದಯೋಗಿಆಧ್ಯಾತ್ಮ
ರಾಗ: ಪರಜು

ಆನಂದಯೋಗಿ ಆಧ್ಯಾತ್ಮ ಯೋಗಿ
ಜೈನಾಗಮಯೋಗಿ ಜಯ ಸಿದ್ಧಯೋಗಿ ||      ಪಲ್ಲವಿ

ಪವನ ವಿಜಯ ಯೋಗಿ ಪರಮಾತ್ಮಯೋಗಿ
ಜವನ ದಾಳಿಯ ಗೆಲ್ದ ಜಗದೇಕಯೋಗಿ ||      ೧

ಧೈರ್ಯಜಾರದ ಯೋಗಿ ದಯವುಳ್ಳಯೋಗಿ
ಸೂರ್ಯ ಪ್ರಕಾಶದ ಸುಜ್ಞಾನಯೋಗಿ ||        ೨

ಗಗನದೊಳಾಡುವ ಗಂಧರ್ವಯೋಗಿ
ಸುಗುಣಮಣಿಯ ತೊಟ್ಟ ಶೃಂಗಾರಯೋಗಿ ||  ೩

ಅಕ್ಷರಾಭರಣದ ಅಸಮಾನ ಯೋಗಿ
ಮೋಕ್ಷಕಾಂತೆಗೆ ಸೋತ ಮೋಹಗಾರ ಯೋಗಿ ||       ೪

ಮೋಹಶೂರನ ಗೆಲ್ದ ಮೊನೆಗಾರಯೋಗಿ
ಶ್ರೀ ಹಂಸನಾಥನ ಸಿದ್ಧಾಂತಯೋಗಿ ||        ೫