೨೧೧.   ಲೀಲೆಲೀಲೆದಿನದಿನಕೆ

ಲೀಲೆ ಲೀಲೆ ದಿನದಿನಕೆ ಲೀಲೆ ಕಾಣಿರೋ
ಜೋಲಿ ಮಾಲೆಗಳನು ಬಿಟ್ಟು ತನ್ನ ತಾನು ನೋಡಿದಂದಿಗೆ ||     ಪಲ್ಲವಿ

ಕಂಡ ಕಂಡ ಕಡೆಗೆ ಹರಿವ ಮನವೊಂದು ಹುಚ್ಚು ಕುದುರೆ
ಚಂಡಿಗೆಯೊಳಗೆ ಇರ್ದುದದು ಲೀಲೆ ಕಾಣಿರೋ
ಮಂಡಿತಾತ್ಮರೂಪೆಂಬ ಬಟ್ಟಬಯಲೊಳದನೇರಿ
ಕೊಂಡು ವೈಹಾಳಿ ಮಾಳ್ಪುದದು ಲೀಲೆ ಕಾಣಿರೋ ||    ೧

ಹಗೆಗಳುಳ್ಳವರಂತೆ ಹಲವ ಚಿಂತಿಸಿ ಕುದಿವ
ಬೆಗಡವನು ತೊಲಗಿಸುವುದದು ಲೀಲೆ ಕಾಣಿರೋ
ಹಗಲಿರುಳು ಪರಮಾತ್ಮ ಧ್ಯಾನವೆಂಬಮೃತವನು
ಮೊಗೆ ಮೊಗೆದು ಸುಖಿಸುತಿಹುದು ಲೀಲೆ ಕಾಣಿರೋ ||   ೨

ಸ್ವಸ್ಥಗೆಟ್ಟ ಬಾಹ್ಯ ತಪದೊಳು ಸಿಕ್ಕದ ಪರಮ ವಿ
ರಕ್ತಿಯ ತಪವೆ ತಾನಿದು ಲೀಲೆ ಕಾಣಿರೋ
ಭಕ್ತಿಯಿಂದ ಹಂಸನಾಥನೊಳಿಹೆನು ಇಂದು ನಾಳೆ
ಮುಕ್ತಿಕಾಂತೆ ಎನಗೆ ಒಲಿವಳಿದು ಲೀಲೆ ಕಾಣಿರೋ ||    ೩

 

೨೧೨.   ಸಂಗವತೊರೆವುದೆ

ಸಂಗವ ತೊರೆವುದೆ ದೀಕ್ಷೆ ಅಂತ
ರಂಗ ಶುದ್ಧಾತ್ಮನೆ ರಕ್ಷೆ ||   ಪಲ್ಲವಿ
    
ಶುಚಿಯಾನುಕೂಲ ಸನ್ಯಾಸ ಅದ
ಕುಚಿತಾತ್ಮ ಯೋಗದಭ್ಯಾಸ
ವಚನಗುಪ್ತಿಯೆ ಸುಖವಾಸ ತನ್ನ
ಶುಚಿಯೊಂದೆ ಪರಮವಿಲಾಸ ||      ೧

ಪರಮ ಪ್ರಾಭೃತವೆ ಸಿದ್ಧಾಂತ ಅದ
ಪರಿಭಾವಿಸಿದರಾಧ್ವಾಂತ
ಪರಮಾತ್ಮ ರಚನೆ ನಿಶ್ಚಿಂತ ತ
ನ್ನಿರವೆಲ್ಲ ತಾನನೇಕಾಂತ ||          ೨

ಪರಿತೃಪ್ತಿ ನಿಜಸುಖದರ್ಥ ಭವ
ಜ್ವರಹರ ಸ್ಮರಿಪೆನನಾಥ
ಸುರುಚಿರ ಶೀಲಸನಾಥ ಸ್ವಾಮಿ
ಪರಮ ಶ್ರೀ ಗುರುಹಂಸನಾಥ ||      ೩

 

೨೧೩.   ಸಂತಸಬರುತಿದೆನಿನಗೆ

ಸಂತಸ ಬರುತಿದೆ ನಿನಗೆ ಹೇಳುವೆ ಮುಕ್ತಿ
ಕಾಂತೆಯೆ! ಕಾದಲ ಬರುವನು ನಿನ್ನ ಮನೆಗೆ ||          ಪಲ್ಲವಿ

ಇತ್ತಲೀ ದೇಶದಲಿ ಎರಡೂವರೆ ದ್ವೀಪದಲಿ
ಉತ್ತುಂಗ ಗಿರಿಯಲ್ಲಿ ವನದಲ್ಲಿ ಕಡಲೊತ್ತಿನಲಿ
ಸುತ್ತುತಲಿಹನು ನಿನ್ನ ವಿರಹದೊಳೇಕಾಕಿಯವನು
ಮತ್ತೊಂದು ಹೆಣ್ಣ ನೋಡನು ನುಡಿಸನು ತಾನು ||      ೧

ಜಾಣರದೇವನು ಚೆಲುವನು ಮೂಜಗವನು ಪಿಡಿದೆತ್ತುವ
ತ್ರಾಣಿಯು ಜಗದೊಳಗನು ಹೊರಗನು ನಿಚ್ಚವರಿವ
ಕಾಣುವಧ್ಯಕ್ಷನು ಕಡುಸುಖಿ ತನ್ನಿಂದಲೇ ತನ್ನನು
ಕಾಣುತಲಾತ್ಮಧ್ಯಾನದ ಕೋಣೆಯೊಳಿರುತಿಹನು ||     ೨

ಎಂದಿಗೆ ಬಂದಪನೆಂದು ಕೈಹೊಸೆದು ಶೋಕಿಸದಿರು
ಒಂದು ಎರಡು ಮೂರೆ ಭವದಲಿ ಭವವಳಿದು
ಇಂದು ರವಿಕೋಟಿ ಪ್ರಭೆಯಾಂತ ಚಿದಂಬರ ಪುರುಷನು
ಇಂದೆ ಬರುತಹನೆ ಸಿಂಗರಿಸಿ ನಿಲ್ಲು ಲಂತಾಗಿ ||         ೩

 

೨೧೪.   ಸಾಧನೆಯಮಾಡುಕಂಡ

ಸಾಧನೆಯ ಮಾಡು ಕಂಡ ಧೀರ ಯೋಗಿ
ಬಾಧಿಸುವ ಹಗೆಗಳು ಮುಟ್ಟಿ ಮೀರದ ಮುನ್ನ ||         ಪಲ್ಲವಿ
    
ಆಯುಷ್ಯದಂತ್ಯದೊಳು ಮುಪ್ಪು ತಬ್ಬುತ
ನೋಯಿಸುತ ನಿನ್ನ ಕೊಲ್ಲುವ ಮುನ್ನ
ಒಯ್ಯಾರದಿ ದಿನ ನೂಂಕದೆ ನಿಲುತಾರು ತಪದಲ್ಲಿ
ಕಾಯ ದಂಡನೆಗಳೆಂಬ ಕರ್ಮವ ಗೆಲುಮಲ್ಲ || ೧

ದುರ್ವಿಚಾರಗಳ ನಡೆನುಡಿಯಿಂದ ಸ್ವಸ್ಥವೆಂಬ
ಪರ್ವತವಲ್ಲಾಡಗೊಡದಿರು ದೃಢದಿಂ
ಸರ್ವರೊಳು ಸಮಚಿತ್ತವಿರಿಸಿ ಬಂದ ಕೋಪ
ಗರ್ವ ಮಾಯೆ ಲೋಭಗಳ ಕಳೆ ಕಠಾರಿಯಿಂ ||         ೨

ಬೀಜಮೂಡಿ ಬೆಳೆದು ವಿಶೋಧ ತಪ್ಪಿದೊಡೆ ಮೋಹ
ರಾಜ ನಾಳೆ ಕೆರಳಿ ಕ್ಕೆ ಮಾಡದಿರನು
ಗಾಜಗೋಜನುಳಿದು ಸನ್ನದ್ಧ ಚಿತ್ತನಾಗಿಯಪ
ರಾಜಿತೇಶ್ವರನ ಧ್ಯಾನವೆಂಬ ವಜ್ರಾಯುಧದಿಂದ ||     ೩

 

೨೧೫.   ಸುವ್ವಲಾಲೀಸುವ್ವಿ

ಸುವ್ವಲಾಲೀ ಸುವ್ವಿ ಸುವ್ವಲಾಲೀ ||  ಪಲ್ಲವಿ

ಆರು ತಪದೊಳೊಣಗಿ ಸುಮ್ಮನೆ
ಮೂರು ದೇಹವೊರಳೊಳಿಟ್ಟು
ಚಾರುಧ್ಯಾನದೊನಕೆ ಪಿಡಿದು
ಕೇರು ಬೇಗ ಬುದ್ಧಿಯ ಮೊರದಿ ||     ೧

ದ್ರವ್ಯಭಾವ ಕರ್ಮವೆಂಬ ಆ
ಸವ್ಯತೃಷೆ ತವಡು ಹೋಗೆ
ನವ್ಯ ಪ್ರಭೆಯಾತ್ಮ ತುಂಡುಲ
ದಿವ್ಯವಾಗುವಂತೆ ಚಲಿಸು ||          ೨

ತಕ್ಕ ಗುಣವ ಪಿಡಿಯುತಾತ್ಮನು
ಚೊಕ್ಕವಾಗಿ ಮತ್ತ ಜನುಮವಿಲ್ಲವು
ಸಕ್ಕ ನೊಗದ ಮುಕುತಿ ಮಾತಿಗೆ
ಹೊಕ್ಕ ಹೋ! ಚಿದಂಬರ ಪುರುಷನು ||        ೩

 

೨೧೬.  ಸಾಲದೇನಿನ್ನಕಲ್ಯಾಣ

ಸಾಲದೇ ನಿನ್ನ ಕಲ್ಯಾಣ ಭಾವನೆಯೊಂದೇ? ಮೇಲಾದ ಶಿವಪದಕೆ!
ಮೂಲೋಕ ನಾಯಕ! ನಮಗನ್ಯ ಚಿಂತೆಯ ಮಾಲೆಗಳಿನ್ಯಾತಕೋ ||     ಪಲ್ಲವಿ

ಧರೆಗೆ ನಿನ್ನಯ ಬರವಾರುದಿಂಗಳೆಂದಾಗ ಸುರರಾಜನವಧಿಯಿಂದ
ಕರೆದು ಕುಬೇರಗೆ ಬೆಸಸಲವನು ದಿನದೊಳು ಮೂರು ಸಂಜೆಯಲಿ
ಅರಮನೆಯಂಗಣದಲಿ ಮೂರುವರೆಕೋಟೆ ನವರತ್ನದ ಮಳೆಯ ನಿನ್ನ
ಚರಣ ಕಾಂಬನ್ನಗಂ ಕರೆದ ತೆರನನವ ಧರಿಸಿದವನೆ ಧನ್ಯನು ||   ೧

ಅಂಬರೇಚರ ನರಸುರ ನಾಗರಾಜ ಕದಂಬವೆಲ್ಲವು ನೆರೆನೆರೆದು
ತೊಂಬತ್ತೊಂಬತ್ತು ಸಾಸಿರ ಗಾವುದದ ಹೊಂಬೆಟ್ಟದೊಳು ನಿನ್ನನು ಒಡನೆ
ಇಂಬುಗೊಳಿಸಿ ಪಾಲ್ಗಡಲಮೃತವ ತುಂಬಿತುಂಬಿ ಪೊಸಗೊಡಗಳ ತಂದು
ಬೆಂಬಡದಂದು ನಿನಗೆ ಮಾಡಿದಭಿಷವದಿಂಬನೇ ನೆನೆವನೇ ಸುಖಿ ||        ೨

ಪೇಳಲೇನಮರಲೋಕದ ಚೀನ ಚಮರದುಡಿಗೆಯಿಂ ಸಿಂಗರಿಸಿ ತಂದು
ಮೇಳದಿಂದಲಿ ನಿನ್ನನು ಬಿಜಯಂಗೈಸಿ ಬಾಳೆಂದು ಹರಿಸಿ ನಮಿಸುತ
ಏಳೇಳು ಹೆಜ್ಜೆಯೊಳು ಮನುಜ ಖೇಚರ ಸುರವ್ಯಾಲಿರಾಜರು ನೆರೆದು ತಾವು
ಲೀಲೆಯಿಂದರದಾಂತು ಕೊಂಡೊಯ್ದ ಮಹಿಮೆಯ ಕೇಳಿದವನೇ ನಿತ್ಯನು ||          ೩

ನೆಲದಿಂದ ಮೇಲೈದುಸಾಸಿರ ಬಿಲ್ಲುದ್ದದಲಿ ರನ್ನವಪರಂಜಿಯೊಳು ಯಕ್ಷ
ರಲಸದೆ ರಚಿಸಿದ ದ್ವಾದಶ ಯೋಜನವಲಯದಾವತ ವಡೆದ
ಪೊಳೆವ ಸಮವಸರಣದ ನಟ್ಟನಡುವೆ ಪಜ್ಜಳಿಪ ಸಿಂಹಾಸನದಿ
ನಳಿನಕೆ ನಾಲ್ವೆರಳುದ್ದದೊಳಿದ್ದ ನಿನ್ನಳವ ಧ್ಯಾನಿಪನೆ ತಾ ಸುಖಿಯು ||     ೪

ಹಿಂಗದೆ ನಿಜಪದಯುಗವನೋಲೈಸುವ ಬೆಡಂಗಿನೊಳಿದ್ದವರ
ಸಂಗವನೆಲ್ಲವ ತೊರೆದದ್ದು ಕರ್ಮದ ತೊಗಲ ಪರಿದೀಡಾಡಿ ಉರೆ
ಲಂಘಸಿ ಮೂಲೋಕದ ತುತ್ತತುದಿಯ ಮುಕ್ತ್ಯಂಗನೆಯೊಳು ನೆರೆದ
ಶೃಂಗಾರಕವಿಯ ನೆಚ್ಚಿನಸ್ವಾಮಿ! ಕಡಲೊಳು ಕಣ್ಗೆಸವಾದಿ ಜಿನ! ||         ೫

 

೨೧೭.ಹಂಗುಬೇಡವಿನ್ನೆನಗೆ

ಹಂಗು ಬೇಡವಿನ್ನೆನಗೆ ಪರರ ನಿ
ಸಂಗ ವೃತ್ತಿವಿರಕ್ತಿ ಕ್ಷಮೆ ಮೂರು
ಹಿಂಗದಿದ್ದರೆ ಸಾಕು ಮುಕ್ತಿ ಎನ್ನಂಗಣದ ಜಗುಲಿ ||       ಪಲ್ಲವಿ

ಬಂದು ಷಟ್ಖಂಡ ಭುವನವೆಲ್ಲ ಜೀ
ಯೆಂದು ಬೆಸೆಗೆಯ್ಯುತಿರೆ ಇದು ನನ್ನ
ದೆಂದು ಮನದೊಳು ಬಗೆಯದವ ಮುಂದೆ ಮೋಕ್ಷಗೊಂಡು
ಒಂದು ಚಣದೊಳೆ ಕರ್ಮವ ಸುಟ್ಟು
ನಿಂದ ಭರತೇಶನೊಲು ಪರರನು
ಹೊಂದಿ ಹೊದ್ದದ ನಿಸ್ಸಂಗವೃತ್ತಿಯೆಂದು ಗಳಿಸುವೆನೋ? ||      ೧

ಪ್ರಾಯದೊಳು ತಪವು ಸಲದೆಂದು
ತಾಯಿ ತಂದೆಯರಿರದೆ ನಾಲ್ವರು
ಸ್ತ್ರೀಯರನು ತಂದು ಮದುವೆ ಮಾಡಿದರಾ ಇರುಳಿನೊಳು
ಸ್ತ್ರೀಯರಿಗು ತಾಯಿಗೊರ್ವಕಳ್ಳಗು
ಹೇಯದೋರಿದ ಜಂಬುಸ್ವಾಮಿಯ
ನ್ಯಾಯದಂತೆ ವಿರಕ್ತ ಎನಗೆ ಸಹಾಯವೆಂದಹುದೋ? ||          ೨

ದುರ್ನಯದಸುರಗೈದುಪಸರ್ಗ
ಘೂರ್ಣಿನೆ ಬೆಚ್ಚದಿನಿಸು ಮುನಿಯದೆ
ನಿರ್ಣಯಿಸಿ ಬೇಗ ಸಿದ್ಧವಡೆದ ಸುವರ್ಣ ಭದ್ರನೊಲು
ಪೂರ್ಣ ಕ್ಷಮೆ ಮೇಣ್ ಧ್ಯಾನದಿಂದಲಿ
ವರ್ಣ ಕರ್ಮವ ಕೊಡಹಿ ನಿಂದ ಸು
ಖಾರ್ಣವ ಚಿದಂಬರ ಪುರುಷನನು ಚಣಾರ್ಧದೊಳು ಕಾಣ್ಪೇಂ ||  ೩

 

೨೧೮.   ಹೆಚ್ಚುಬಾಳ್ವರೆ

ಹೆಚ್ಚು ಬಾಳ್ವರೆ ನರರಾಯಷ್ಯನೂರು
ವೆಚ್ಚತಾನುಂಟಲ್ಲಿಯು ನೋಡು ರೂಪಾರು ||  ಪಲ್ಲವಿ

ತೊಡಗೆ ಪನ್ನೆರಡರ್ಧ ಶಿಶುವೆಂಬನೆಪ್ಪು
ಕಡೆಗೆ ಎಪ್ಪತ್ನಾಲ್ಕು ನಿಲ್ವುದದು ಮುಪ್ಪು
ನಡುವೆ ಇಪ್ಪತ್ನಾಲ್ಕು ನಿದ್ದೆಗೆ ನೆಪ್ಪು
ಕಡು ಬಾಳ್ದರೆಪ್ಪತ್ನಾಲ್ಕರಿಂದೊಪ್ಪು || ೧

ಅದು ತಾನು ಸ್ಥಿರವಲ್ಲ ಸ್ಥಿರವಾದರೊಮ್ಮೆ
ಕದನ ಬಂಧುವಿಯೋಗ ರೋಗದ ಸೊಮ್ಮು
ಎದೆಗೆಡುವುದಡಿಗಡಿಗೆ ಇದೇತರ ಬಲ್ಮೆ
ಇದರೊಳಗೆ ನಿನಗೇಕೆ ಭೋಗದ ಹೆಮ್ಮೆ ||     ೨

ಕಟ್ಟಿದ ಸಿರಿಯೊಳಾತ್ಮ ನಿನಗೇಕೆ ನಂಟು?
ಕುಟಿಲ ವಿಷಯಗಳ ಬೆಳಿವುದಾಗಂಟು
ದಿಟವಾಗಿ ಭವಾಂಬುಧಿಯನಿರದೆ ದಾಂಟು
ದಿಟ್ಟನಪರಾಜಿತೇಶ ನಲ್ಲೆ ನಿನಗುಂಟು ||       ೩

 

೨೧೯.   ಹೊರಹೊರಗಾಡಿಮೈಮರೆತಿದೆಲೋಕವೆಲ್ಲಆತ್ಮನ

ಕುರುಹ ತಾವರಿತಿಲ್ಲ ಶರೀರದ ಸೆರೆಗಾದರೆಲ್ಲ ||         ಪಲ್ಲವಿ

ಒಡಲೆಂಬ ವಾದ್ಯವ ಜೀವನೆಂದೆಂಬ ವಾದ್ಯಕಾರನು ತಾ
ನುಡಿಸುತಿಹ ನಾಲಗೆಯೆಂಬ ಕುಡುಹಿಂದ
ನುಡಿಸುತಿರ್ದು ಕಡೆಗದ ಬಿಟ್ಟು ಹೋಹನು ಒಡನೆ ಮತ್ತೊಂ
ದೊಡಲ ಹೊಕ್ಕು ಕುಳಿತಿಹನಯ್ಯಯ್ಯೋ ||     ೧

ದೇಹವೆಂಬ ಚರಚೋಹವ ಜೀವನೆಂಬ ಅತಿಹಳಬ
ಚೋಹಕಾರ ತಾ ತೊಟ್ಟಾಡುತಲಿರ್ದು ಕಡೆಗೆ
ಹೋಹನಿರದೊಮ್ಮೆ ಬಾರನೀ ಕಡೆ ಧರಿಸಿ ತನಗೊಂದು
ಚೋಹದ ಹೊಸ ತೊಡಿಗೆಯ ತೊಟ್ಟು ಅಯ್ಯಯ್ಯೋ ||  ೨

ಮಾಂಸ ರಕ್ತದ ಮೈಯ ಸೋಂಕಿಯ ಸೋಂಕದಿಹ
ಹಂಸನಾಥನ ನೋಡಿ ಕೂಡಿರೋ ನಿಜವ ನೀವರಿತೆಲ್ಲ
x x x x x x x x x x x x x x x x x x x x
ಸಂಸಿದ್ಧಿಯಲ್ಲಿ ತನುವ ದೂಡಿ ನಿಲ್ಲಿರಯ್ಯೋ ||  ೩

 

೨೨೦.   ಹೊಯ್ಯೋಡಂಗೂರವ

ಹೋಯ್ಯೋ ಡಂಗೂರವ ಜಿನ್ನಯ್ಯಗಲ್ಲದೆ ಬೇರೆ
ಬಯಲು ಬಿನುಗುದೈವಕೆರಗೆ ನಾನೆಂದು ||    ಪಲ್ಲವಿ

ಕಾಡುವ ಕರ್ಮವ ನಿಲಗೊಡದೋಡಿಸುವ
ಬೇಡದ ಗುಣವ ಬೋಧಿಸಿ ಬೇಗ ಕೊಡುವ
ರೂಢಿಗೊಡೆಯ ಜಿನ್ನಯ್ಯನಿಗಲ್ಲದೆ ಮಿಕ್ಕ
ನಾಡಾಡಿದೈವಕೆ ಕೈಯ ಮುಗಿಯೆನೆಂದು ||   ೧

ಜನನ ಮರಣಕೆ ದೂರದೂರ ನೀ ದೇವ
ನೆನೆವ ಭವ್ಯರ ಮನದೊಳಗೇ ಇರುವ
ವನಿತೆ ವಸುಧೆಯಿಂದ ತಾ ದೂರನಿರುವ
ಜಿನಗಲ್ಲದೆ ಮಿಕ್ಕಿದೈವಕೆರಗೆನೆಂದು ||         ೨

ಉಪ್ಪುಗಡಲ ನಡುಮಧ್ಯದಿ ಬಲುತಪ
ಕೊಪ್ಪಿ ನಿಂದಾದಿ ಜಿನೇಶನ ಪದಯುಗಕೆ
ಎಪ್ಪತ್ತೆರಡು ತೀರ್ಥಂಕರಿಗಲ್ಲದೆ ಬಿಡು
ತಪ್ಪಿಯಾದರೂ ಮಿಕ್ಕ ದೈವಕೆರಗೆನೆಂದು ||   ೩

 

೨೨೧.   ಹೋ! ಹೋ! ಭೋಗಬಾಳು

ಹೋ! ಹೋ! ಭೋಗಬಾಳು ಸಾಕು ಇನ್ನು
ಮೋಹಮಲ್ಲನ ನೀ ನೂಕು ನೂಕು
ಶ್ರೀ ಹಂಸನ ಕಾಣಬೇಕು ಕೂಡೆ
ಮೋಹಮಾಯೆಯ ನೀ ಬಿಡಬೇಕು || ಪಲ್ಲವಿ

ಕಡಲ ಹೀರುವ ತೃಪೆಯಷ್ಟು ಕೆ
ಟ್ಟೊಡಲ ಸುಖದ ಪರಿಯೆಷ್ಟು
ಒಡಲು ಭೋಗವನುಂಡಷ್ಟು ತೃಷೆ
ಯಡಗದು ಸುಡು ಪಣತೊಟ್ಟು ||     ೧

ವಲ್ಲಭಯರೊಡನಾಟವದು
ಬೆಲ್ಲಗೂಡಿದ ಆಕಾಶಕೂಟ
ಕೊಲ್ಲದುಳಿಯದ ಈ ಬೇಟ ಇದ
ಬಲ್ಲವರೆಂಬರು ಮರುಳಾಟ ||        ೨

ಅಂಗನೆಯರೊಡೆ ಸರಸ ಉರು
ಪಿಂಗಳಕೆರೆದ ಪಾದರಸ
ಹಿಂಗಿಹೋಹುದು ಧರ್ಮರಸ ಇದ
ಪಿಂಗಿಸೋ ಕಾಂಬ ಶ್ರೀಮಂಧರೇಶ ||          ೩

 

೨೨೨.   ಎತ್ತಣಿಂದಬಂದೆಯಿನ್ನೆತ್ತ

ಎತ್ತಣಿಂದ ಬಂದೆಯಿನ್ನೆತ್ತ ಪಯಣ ಮುಂದೆ
ಮೊತ್ತದ ಪಗೆಗಳ ನಡುವೆ ಮೋಸವೇಕಾತ್ಮ || ಪಲ್ಲವಿ

ಕಟ್ಟಿದಾಯುಷ್ಯ ಕೈಯೊಳಾಂತ ನೀರಂತೆ ಸೋರುತಿವೆ
ಕೆಟ್ಟಮನ ವಿಷವೆಂಬ ವಿಷವನುಣುತಿದೆ ಕೊ
ಕುಟ್ಟೆಗೊಂಡ ಮರದಂತೆ ಮೈಸಡಲುತಿದೆ ಬೇಗೆಯ
ಬೆಟ್ಟದ ಮೇಲ್ಮಲಗಿ ಮರೆವರೇಕಾತ್ಮಾ ||       ೧

ವ್ರತದ ಲಾಭವೆ ಲಾಭ ಜಪವೆ ತಪ ಮೋಹವನು
ಗತಿಗೆಡಿಸುವದೆ ಪಂಥ ಸಕಲ ಜೀವಗಳ
ಪ್ರತಿಪಾಲಿಪುದೆ ಧರ್ಮ ಮೈಯ ಭೇದವೆ ಬೋಧ
ಧ್ರುತಿ ವಿರಕ್ತಿಯ ಮುಕ್ತಿ ಹಲವೇನು ಆತ್ಮಾ ||   ೨

ಇಂದ್ರಜಾಲದೊಡ್ಡಣೆಯ ಸಿರಿಗೆ ಮರುಳಾಗದೆ ಮಾ
ಹೇಂದ್ರ ಕೀರ್ತಿಯಂತೆ ಧೀರನಾಗಿ ಸಕಲ
ಇಂದ್ರಿಯಂಗಳ ಜಯಿಸಿ ಶಾಂತರಸ ವಾರಿಧಿಗೆ
ಚಂದ್ರನಂತೆ ಸಾರು ಶ್ರೀ ಮಂದರಸ್ವಾಮಿಯನು ||      ೩

 

೨೨೩.ಬೇಡಿಕೊಂಬೆನುನಿಮ್ಮ

ಬೇಡಿಕೊಂಬೆನು ನಿಮ್ಮ ಬಡವ ನಾ ನಿಮ್ಮ
ಮಾಡುವ ಪೂಜೆಗೆ ಮೈಗೊಡು ಗುರುವೇ ||    ಪಲ್ಲವಿ

ಭರತೇಶ ರಾಮಚಂದ್ರರ ವಜ್ರದೇಹವೆಂ
ಬರವನೆಗೆಯ್ದಿ ಪೂಜಿಸಿಕೊಂಡ ಸ್ವಾಮಿ
ಹುರುಡಿಲ್ಲದೀ ದೇಹವೆಂಬ ಹುಲ್ಮನೆಗೆನ್ನ
ಗುರುವೇ ನೀನೊಯ್ಯನೆ ಚಿತ್ತೈಸಬೇಕು ||       ೧

ಸಗರ ಚಕ್ರಿಯ ಪದ್ಮಚಕ್ರಿಯ ಮನದ ಗ
ದ್ದುಗೆಯಲ್ಲಿ ನೆಲಸಿ ಪೂಜಿಸಿಕೊಂಡ ಸ್ವಾಮಿ
ಬಡವನ ಮನವೆಂಬ ಮ
ನೆಗೆ ಮೆಲ್ಲನೆ ಬಿಜಯಂ ಮಾಡೊ ಕೃಪೆಯಿಂದ ಗುರುವೇ ||        ೨

ಅಷ್ಟವಿಧದ ಭಾವಪೂಜೆಯ ಮುನಿಗಳು
ಶಿಷ್ಟಗಾಲದಲಿ ಮಾಡಿದರಂದು ನಿಮಗೆ
ಕಷ್ಟಗಾಲವಿಂದು ನಾನು ಮಾಡುವೆನು ಸಂ
ತುಷ್ಟನಾಗಿ ಭಾವಪೂಜೆಗೆನ್ನೊಡೆಯ ||        ೩

ಮೂವರು ಕುಂದಿದ ನವಕೋಟಿ ಮುನಿಗಳು
ಭಾವ ಪೃಥವನನಭಿಷೇಕ ಮಾಡಿದರು
ದೇವ ನಾ ನಿಮಗೆ ಬ್ರಹ್ಮಾನಂದ ರಸವ
ದ್ಭಾವಲಭಿಷೇಕವೆರೆವೆ ಚಿತ್ತೈಸೊ ||   ೪

ರತ್ನನಿವಾಳಿ ಪುಷ್ಟಂ ಜಾಜಿಗಳ ಯೋಗಿ
ರತ್ನರಂ ನಿನಗೆ ಭಾವದಲ್ಲಿ ಮಾಡುವರು
ರತ್ನ ಮೂರು ನೀನೆ ನಿಗೆ ನೀ ಜಯ ಜಯ
ರತ್ನಾಕರ ಸ್ವಾಮಿ ನಿಜಂ ಪರಂಜ್ಯೋತಿ ||     ೫

 

೨೨೪.ಧೀರನೆಂದೆನ್ನಿತ್ರಿಭುವನ

ಧೀರನೆಂದೆನ್ನಿ ತ್ರಿಭುವನ ಸಾರನೆಂದೆನ್ನಿ
ಆರೊಳು ಬೆರಸದ ಪರಮಾತ್ಮನ ಕಂಡು
ಸಾರಿ ಸದಾ ಸುಖಿಯಾದ ಶಾಶ್ವತನ ||        ಪಲ್ಲವಿ

ಹಂಸೆ ಹಾಲನೆಳೆದು ಕುಡಿದು ನೀ
ರಂ ಸೇವಿಸದೆ ಉಳಿಸುವಂದದಿ
ದಂಸಣ ಣಾಣ ಚರಿತವ ತಾ ಹೊಂದಿ
ಹಂಸನ ಪಿಡಿದಂಗವ ತೊರೆದವನ || ೧

ಬಹುಚಿಂತೆಯೊಳಗೆ ಸುಟ್ಟು ಹೊರಗಷ್ಟು
ಕಹಿಯನೆಲ್ಲವ ತಾ ಬಿಸುಟು
ಅಹಮೇವ ಮಮ ನಹಿ ಸುಹೃದಪರೋ ಎಂದು
ಸಿಹಿಯೇರುವ ಚಿತ್ರದ ಪಿಡಿದವನ ||  ೨

ವಾಕುಮೈ ಮನಕಂ ತೃಣ ಸಹ
ಸೋಕದಿಹ ನಿರಾಕಾರ ಪರಬೊಮ್ಮ
ಏಕೋಹಂ ನಿರ್ಮಲ ಎನುತ ರ
ರತ್ನಾಕರ ಸ್ವಾಮಿಯ ಮತವಿಡಿದವನ ||       ೩

 

೨೨೫.ಯಾಕೆಮೈಮರೆದೆತನು

ಯಾಕೆ ಮೈಮರೆದೆ ತನು ಕೆಡದಿರದು ವಿಷಯ ರತಿ
ಸಾಕು ದಾನಾರ್ಚನೆಯು ಶೀಲವುಪವಾಸಗಳೆಂಬೀ
ನಾಲ್ಕರಲಿ ನಡೆ ತಪಸ ಮಾಡು ಮುನ್ನದರಿಂದ ಆ
ನೇಕ ಫಲಗಳ ಪಡೆದರು ಭವ್ಯಾ ||   ಪಲ್ಲವಿ

ಕಡುಬಡವನೊಬ್ಬ ಬ್ರಾಹ್ಮಣನೊರ್ವ ಜಿನಮುನಿಯ
ತಡೆದು ಮೂರೆ ತುತ್ತನಿತ್ತ ಭಕ್ತಿಗೆ ಮೆಚ್ಚಿ
ಒಡನೆ ಜಯಜಯವೆಂದು ಸುರರು ಪೂಮಳೆ
ಗರೆದರದು ಪಾತ್ರದಾನ ಮಹಿಮೆಯೆಂದು ||   ೧

ಒಡನೆ ಪುಷ್ಪವ ಕಚ್ಚಿ ಕೊಂಡೊಂದು ಕಪ್ಪೆ ಜಿನ
ರಡಿಗಳು ಪೂಜಿಸಲು ಬರುತಿರ್ದು ಗಜ ಮೆಟ್ಟಿ ಮರಣ
ವೆಡೆಗೊಂಡು ಜಿನಸಭೆಗಾಕ್ಷಣವೆ ಬಂದಿತದು
ಜಿನಾರ್ಚನೆಯ ಮಹಿಮೆಯೆಂದು ||   ೨

ವಿನುತ ಶ್ರೀ ಪಂಚಮಿಯ ಉಪವಾಸವನು ಕೈಕೊಂಡು
ತನುವಿಗತಿ ಕ್ಷುಧೆಯಾಗಿ ತಾಯಿ ತಂದೆ ಪೇಳಿದರುಣ್ಣನು
ಅನುನಯದೊಳಳಿದು ಸುರನಾದ ನಾಗಕುಮಾರ
ರನುಪವಾಸದತಿಶಯ ಮಹಿಮೆಯೆಂದು ||     ೩

x x x ತಾನಿರ್ದಂತೆ ಕಿರಿಯ ಗೈಯ್ಯ x ರುದನೆಂದು
x x x
ಕಡು ನಾಣ್ಚಿ ಮುನಿವರನಾ ಅಂದಿನಿರುಳು
ಪರಿದಿಡುವ ಪುತ್ತದಲಿ ಪಾವು ಕಚ್ಚಿ ಮರಣವೆಡೆಗೊಂಡು ಖೇ
ಚರನಾಗಿ ಸುರನಾಗಿ ಮಹಿಮೆಯೆಂದು ||      ೪

ವರಮುಕ್ತಿಯನು ಕೇಳ ಬೇಡ ಕಾಗೆಯ ಮಾಂಸವನು
ತೊರೆದ ಫಲದಿ ಯಕ್ಷಿಗೆ ಗಂಡನೆಂದು ಮೈದುನ
ಪೇಳೆ ಪಂಚವ್ರತವನು ಕೈಕೊಂಡು
ಸುರನಾಥನದು ವ್ರತದ ಮಹಿಮೆಯೆಂದು ||    ೫

ಈ ನರ ಜನ್ಮವನು ಬರಿದೆ ನೀಗದಿರು ಅಪರಾಜಿತೇಶ್ವ
ರನ ಸನ್ನಿಧಿಯ ಸಾರಾ ||   ೬