೨೧. ಸುಮತಿಸುಮತಿಯೆಂದು

ಸುಮತಿ ಸುಮತಿಯೆಂದು ನನ್ನ ಕರೆದು
ಸಮರತಿ ಕುಟಿಲ ರಮಣ ಹಂಸವೀರನನಗಿದೇಕೆ ತೋರದೆ || ಪಲ್ಲವಿ

ಮೂರು ಯೋಗವ ಬಲ್ಲಿದ ಮೈಯೊಳವನ ನೋಡುವೆ ದೇಹ
ಮೂರು ಸೋಂಕದೆ ತೊಳೆತೊಳೆಸುತ ಕಾಣಿಸಿಕೊಂಬನ
ತೋರುವಾಗಳೆ ಮೈಯ ಹೋಗು ಕೂಡೆ ತೋರುವಾ ದಾಳಿ
ಗಾರನಲ್ಲವೇ ಅವನನೆಂತು ಗೆಲುವ ನಾ ಕಾಣೇ || ೧

ಕಂಡ ಮಾತ್ರದೊಳೊಂದು ಸುಖಮೈರುಮ್ಮು ತೊಟ್ಟುತಿದೆ ಮುಂ
ಕಂಡು ಕೇಳಿ ಸುಖದಂತಲ್ಲ ಪರಮಸುಖವಿದು
ಉಂಡು ದಣಿಯಬಹುದು ನುಡಿವೆನೆಂದರೆ ಬಾರದು ಸವಿಯ
ಕಂಡು ನನಗಾಕಾಂಕ್ಷೆ ಬಿಡದು ಕೈವಶವಾಗದು || ೨

ಪರಮಾಣು ಮಾತ್ರವಾದರೂ ಸ್ನೇಹಮೋಹ
ವೈರವ ಮತ್ತೆ ಪರವಸ್ತುವಿನಲ್ಲಿ ಮಾಡದೆ ಪ್ರಾಕೃತ ಪಾಪಾಸ್ತ್ರವ
ಮರುತನ ಜಯಿಸಿ ಕಣ್ಮುಚ್ಚಿ ಮೌನವಿಡಿದು ಕುಳಿ
ದಿರೆ ಚಿದಂಬರ ಪುರುಷ ತಾನೇ ಮೆಚ್ಚಿ ಬಂದಳಂಗನೆ ||

 

೨೨. ಇದನೀವುಕಣ್ಣಾರೆ

ಇದ ನೀವು ಕಣ್ಣಾರೆ ಕಾಬುದಿಲ್ಲವೆ ಕ
ರ್ಮದಾಟವ ಸಂಸಾರದ ಮಾಟವ ದುಃಖದ ಕಾಲ ಕೂಟವ || ಪಲ್ಲವಿ

ಆಳುದ್ದವಾದ ರೂಪು ಅಳೆದು ಹೋಹ ನಾಳೆ ಗೇಣುದ್ಧವಾಗಿ
ಬಾಳುತಲದೇಕೊ ಮತ್ತೊಬ್ಬ ತಾಯೊಡಲೆಂಬ
ಜಾಳು ಸೆರೆಯಲ್ಲಿ ಮಲಮೂತ್ರದ ಕೆರೆಯಲ್ಲಿ ಮಾಸಿನ ಮುಸುಕು ಮರೆಯಲ್ಲಿ || ೧

ಪ್ರಾಯದಿ ಮೋಹಿಸಿದ ತನ್ನಯ ಕಾಯವೆ ಮುಪ್ಪಾಗಿ
ಹೇಯದೋರುತಲ್ಲದೆ ಮುನ್ನಿನ ಸೊಬಗೆಲ್ಲ
ಮಾಯವಾಗುತದೆ ತಲೆ ಕೈ ನಡುಗಿ ತೂಗುತಿದೆ || ೨

ಕಾಯ ಬೇರಾತ್ಮ ಬೇರೆ ಒರೆಯೊಳಿದ್ಧಾ ಯುಧದಂತೆಂದು
ಈ ಯುಕ್ತಿಯರಿದು ಚಿದಂಬರ ಪುರುಷನ ಕಾಯದಲಿ ನೋಡಿ ಕರ್ಮವನಿರ್ಜ
ರೆಯ ಮಾಡಿ ನೀವೆಲ್ಲ ಮುಕ್ತಿಯಲಿ ಕೂಡಿ || ೩

 

೨೩. ಅಜ್ಞಾನಿಬಳಲಿಯೂ

ಅಜ್ಞಾನಿ ಬಳಲಿಯೂ ಬಂಧ ಮುಕ್ತನಹನೆ
ಸುಜ್ಞಾನಿಯೆ ಮುಕ್ತನಹನೈ || ಪಲ್ಲವಿ

ಊಡಿ ಸುಟ್ಟಾಡುವ ಕಾರುಕರೆಲ್ಲ ರಸ
ವಾಡಿಯಂತಪರಂಜಿ ಮಾಡುವರೇ
ಓದುವರೆಲ್ಲ ತಮ್ಮಾತ್ಮನ ಬಲ್ಲರೇ
ಭೇದ ವಿಜ್ಞಾನಿಯೇ ಬಲ್ಲನೇ ||

ಬೇಸರದೆಗೆವಡರು ನಿಧಿಗಾಣ್ಬರೆ
ಭಾಷೆ ರಂಜನ ಸಿದ್ಧಕಾಣ್ಪನೆ
ಏಸು ತಪಸು ಮಾಡಿಯೂ ಭವಿ ನಿಜ ಕಾಣಾ
ಆಸನ್ನ ಭವ್ಯ ತಾನೊಬ್ಬ ಕಾಣ್ಬೆನೈ ||

ತನು ಮನವೆಂಬಷ್ಟರಲಿ ಶಿವಭೂತಿಗೆ
ಹಾಸಲೊಚ್ಚಲಿ ಭರತೇಶಗೆ
ವಶವಾಯಿತು ಮುಕ್ತಿ ಚಿದಂಬರ ಪು
ರುಷನ ಅಸಮಗುಣವನರಿದೀಕ್ಷೆ || ೩

 

೨೪. ಸುಖವಬಯಸಿಸುಖ

ಸುಖವ ಬಯಸಿ ಸುಖದೊಳಗೆ ಕಾಣದೇ ಹೋದೆ

ಮುಖದಿಂದ ನೋಡುವರೆ ಮನವೇ || ಪಲ್ಲವಿ

ನೆರೆ ಕಬ್ಬನೊಳಿರ್ದ ರಸವ ಕಾಣದೆ
ಕುರಿ ಹೊರಗೆ ಸೋಗೆಯ ತಿಂಬಂತೆ
ಉರಿ ಮೈಯೊಳಿಹ ಪರಮಾತ್ಮಾಮೃತವ ಬಿಟ್ಟು
ಬರಿ ಮೈಯ ಸುಖಕೆ ಸೋಲುವರೇ || ೧

ರಸದಾಳೆ ಕಬ್ಬಿನ ಸೋಗೆಯ ಬಿಟ್ಟೊಳಗಿರ್ದ
ರಸವ ಕೊಂಬಾನೆಯಂತೆ ವಿಷಯ
ದಾಸೆಯ ಬಿಟ್ಟು ನೆಚ್ಚಲು ಬ್ರಹ್ಮಾನಂದ
ರಸವ ಸೇವಿಸಲಿಲ್ಲವೇ || ೨

ಮೊದಲೊಂದಿಸೆಂಬರಿಸಹುದು ಮತ್ತಾ ಸುಖ
ತುದಿಗಾತ್ಮ ಸಿದ್ಧಿಯಕ್ಕು ಅದರಿಂದ
ಚಿದಂಬರ ಪುರುಷನನ ನೋಡು ಬಾ
ಹ್ಯದೊಳಾಡಿ ಭ್ರಮಿಸುವರೇ || ೩

 

೨೫. ಯೋಗವೆಭೋಗವಯ್ಯ

ಯೋಗವೆ ಭೋಗವಯ್ಯ ತಿಳಿದರೆ
ಯೋಗವೆ ಭೋಗವಯ್ಯ ತಿಳಿಯದಿರೆ ತನ್ನ
ಯೋಗವೆ ರೋಗವಯ್ಯ ತಿಳಿದರೆ ||  ಪಲ್ಲವಿ

ಈರೈದು ಹಳೆಯ ಸಾಧ್ಯ ಮಾಡಿದರೆ
ಶರೀರಕೆ ಲಘು ಮನಸ್ಥಿರವಹುದು
ಸಾರುವುದಾತ್ಮನು ಭವದಲ್ಲಿದ್ದೊಡೆ ಮೈಗೆ
ಭಾರ ತಪ್ಪುದು ಮನತೊಟ್ಟು ನೆಚ್ಚಲು ಮೆಚ್ಚಿ ಚಿದಂ
ಬರ ಪುರುಷನನೊಳವದಾಗಿ || ೧

ಅಸನ ಜಯವುಪವಾಸ ಜಯವು ನಿ
ದ್ರಾಸತಿ ಜಯವಾದಡಾನಂದವ

ಸೂಸುತ ಧ್ಯಾನ ನಿಲ್ಲುವುದಲ್ಲದೊಡೆ ಮೈಗೆ
ಬೇಸರ ಬಳಲಿಕೆ ಬೆಳೆದಿಹುದಾಗಿ ||   ೨

ಹಂಬಲವೆಲ್ಲವ ಬಿಟ್ಟು ನಿಚ್ಚಲು ನಚ್ಚಿ ಚಿ
ದಂಬರ ಪುರುಷನ ನೋಡಿರೊ
ಬಿಂಬಿಸುತಿಹುದು ಸುಜ್ಞಾನವಲ್ಲದೊಡೇಕೆಂ
ದೆಂಬಂಗಜ್ಞಾನ ಕವಿದಿಹುದಾಗಿ || ೩

 

೨೬. ಸುಜನಸುಜ್ಞಾನಜಿನಾನಂದ

ಸುಜನ ಸುಜ್ಞಾನ ಜಿನಾನಂದ ರೂಪನೇ ಜಾಣರ ದೇವ
ತ್ರಿಜಗದ್ಗುರುವೇ ನಿರಂಜನ ಸಿದ್ಧನೇ ಜಾಣರದೇವ ||    ಪಲ್ಲವಿ

ತನು ಮೂರು ಹೊದ್ದಿಯೂ ಹೊದ್ದದೆ
ನೀನದರಿಂದ ಭವ್ಯ
ಜನರಿಗಲ್ಲದೆಯಭವ್ಯರಿಗೆ
ಕಾಣಿಸಿಕೊಳ್ಳ ಜಾಣರದೇವ ||        ೧

ಷಡುದರುಶನಕೆ ಬಹುಮತಕೆ ನೀನಿದ್ದಿಲ್ಲ ಕೈಗೆ
ಹಿಡಿದರೆ ನಿಲ್ಲೆ ಧ್ಯಾನದಲಿ ನೀ ಸಿಕ್ಕುವೆ
ಬಿಡದೆ ಧ್ಯಾನಿಸಿದರೆ ಕೊಡುವೆ ಕೈವಲ್ಯವ ನಿನ್ನ
ನಡು ಮೋಕ್ಷಗಾಮಿ ಮೆಚ್ಚೆ ಮೂಢಗಹುದು ||  ೨

ಪರಮ ಚಿನ್ಮಯ ಮೂರ್ತಿಯಂಬರದಂತೆ ನೀ ಸಿದ್ಧ
ಪುರುಷಕಾರನೇ ಮೂರು ಬೇಹವನಾಂತೆ
ಗುರುದೈವ ಶಾಸ್ತ್ರ ತೀರ್ಥಂಗಳ ಫಲ ನೀನೆ ನಿಜ
ಗುರುವೇ ಚಿದಂಬರ ಪುರುಷ ನೀನೊಬ್ಬನೇ || ೩

೨೭. ಸಾಕುಸಾಕುಸವಿ

ಸಾಕು ಸಾಕು ಸವಿಗೆಟ್ಟಿತು ನನಗಿನ್ನು
ಸಾಕಾಯಿತೀ ಸಂಸಾರದ ಸುಖವು || ಪಲ್ಲವಿ

ಸಂಜೀವನವನವ ಕಂಡಮೇಲೆ
ಗಂಜಿಗಾಸೆ ಮಾಡುವರೇನಣ್ಣ?
ರಂಜಿಸುವ ಪರಮಾತ್ಮನ ಕಂಡಮೇಲೀ
ಗಂಜಿನ ಮೈಸುಖದಾಸೆಯೇಕಣ್ಣ ||  ೧

ಹಾಲು ಸಮುದ್ರವ ಕಂಡಮೇಲೆ ಪಶು
ಜಾಲವ ಕಾಯ್ವರೇನಣ್ಣ?
ಲಾಲಿಸುವ ನಿಜಾತ್ಮನ ಕಂಡಮೇಲೀ
ಜಾಳುವಿಷಯದಾಸೆಯೇಕಣ್ಣ ? ||    ೨

ಪರುಷದ ಪರ್ವತನ ಕಂಡಮೇಲಾ ಹೊನ್ನ
ನೊರಜಿನಾಶೆ ಮಾಡುವರೇನಣ್ಣ ?
ಗುರುಚಿದಂಬರ ಪುರುಷನ ಕಂಡಮೇಲೀ
ಶರೀರದ ಹಂಗೇತಕಣ್ಣ? ||  ೩

 

೨೮. ಸುವಿಚಾರವೊಂದಕೇಳು

ಸುವಿಚಾರವೊಂದ ಕೇಳು ಸುವಿಚಾ
ರವೊಂದ ಕೇಳೆಂದರಾತ್ಮನಿಗೆ ಭವವೊಂದೆ ದಿ
ವ್ಯವದು ಕೃತಯುಗಂ ಮೊದಲಾಗಿ
ಹವಣರಿದು ಕಲಿಕಾಲ ಮುಟ್ಟಿ ಸಂದಿತು ಸಂದವಿಪ ತಾನೆಂದೆಂದರೆ ||      ಪಲ್ಲವಿ

ಆವೇಶ ಮೊದಲು ವೀರೇಶ ಕಡೆಯಾಗಿ ಜಂಬೂ
ದೇವ ಭದ್ರಬಾಹು ಸ್ವಾಮಿ ಕಡೆಯಾಗಿ ಅದರುಂಡಖಿಲ
ಕೈವೋದಾಡ್ಯರುಂ ತ್ರತಯೋಗ ಸಂಪನ್ನರುಂ ||        ೧

ಆದರಹುದಮೃತಕ್ಕೆ ಹೋದರವರಿಂದ ಬಳ
ರೆದುಷ್ಟ ಕಲಿಯೊಳೆಂಬಹು ಶಾಸ್ತ್ರಿಗಳು ಹಲಬ
ರಾದರಹುದಾದರೆನವರಲ್ಲಿ ಪರಮಾತ್ಮ ವೇದಿಗಳು ಹಲಬರಿಲ್ಲ || ೨

ಕುಂದಕುಂದಾಚಾರ್ಯ ಪೇಳ್ದನಾ ಮತದೊಳಗೆ
ಕಂಡಮೃತ ಚಂದ್ರಸೂರ್ಯರು ಟೀಕು ಮಾಡಿದಂ
ಕಂಡಕಂಡವರೆಲ್ಲ ನೋಡಿವರೆದು ಸೂರೆಯ || ೩

ಉಂಡುಟ್ಟ ಕಾವ್ಯಕಥೆಯ ಸುಡುಗಾಯೊಳಡಗಿಸಿದ ವೃತಾಬ್ಧಿಯಂತೆ ಚಿ
ತ್ಪಿಂಡ ಜಗದ್ಭರಿತನಾತ್ಮ ನೀ ಬಡ ಮೈ ಕ
ರಂಡಗೆಯೊಳೆದ್ದ ಪನ್ನಂಬು ತಿಳಿನೆಲವನೊಳು ಮೂರು ರತ್ನ ಕಾಣಾ ||     ೪

ತಣ್ಣಿತ್ತು ಬೆಳೆದು ಸಿಹಿಕಂಪು ಪಾಲಿಂಗೆ ಕೆಂ
ಬಣ್ಣ ಪ್ರಭೆ ಉರಿ ಹವಿಗೆ ರವಿಗೊಪ್ಪುವವೊಲು ಮೊದಲು
ಬಣ್ಣಿಸಿದ ಗುಣವೆಂಟು ನಿನ್ನೊಳುಂಟೆಂದು ಕರ್ಮದೊಳು ಕವಿದಿರ್ದಪೈ ||   ೫

ಕಣ್ಣಿಟ್ಟು ನೀರಿನ ನಿರ್ಮಲನೆಂದು ನೋಡುತಿರುವ
ಮಣ್ಣಬೆನಕಗೆ ಮಜ್ಜನವೇ ಮರಣವೆಂಬಂತೆ
ಮಣ್ಣು ಜರೆವುದು ಚಿದು ಚಿದಂಬರ ಪುರುಷ ಪದವಿಯಲಿ
ತಣ್ಣನಿರಬಹುದು ಕಾಣಾ ||  ೬

೨೯. ಯೋಗಿಯೆಂಬೆನೋ

ಯೋಗಿಯೆಂಬೆನೋ ಆತ್ಮನೇ
ತ್ಯಾಗಿಯೆಂಬೆನು ಆತ್ಮಯೋಗವರಿತಡೆ ||     ಪಲ್ಲವಿ

ಈರೈದು ಹೊಳೆಯ ಜಯಿಸಿ ಧರ್ಮ ಸದಾ ಸಂ
ಚಾರವ ತಡೆದವನಾ
ನೀರ ಸುಳಿದು ಹಂಸೆ ಹಾಲ ಕೊಂಬಂತೆ
ಶರೀರವ ತೊರೆದವನ ಆತ್ಮ
ಸಾರವ ಪಿಡಿದವನ ಧ್ಯಾನ ಪಾರಗನಾದವನ ||         ೧

ಜ್ಞಾನವೆಂಬಕ್ಷಿಯಲ್ಲಾತ್ಮನ ನಿಜ
ವ ನೀಡಾಡಿಸಿ ಕಾಣ್ಬದರ್ವ
ತಾನೆ ತನ್ನೊಳಗಾತ್ಮಾಮೃತ
ವನೆ ನಿಚ್ಚವಾಸವ ಮಾಡುವ
ವನ ಒಳಗಾನಂದವೇ ಇ
ದನ ಹೊರಗೇನೆಂದರಿಯದವನ ||   ೨

ಅಣು ಮಾತ್ರವಾದರೂ ವಿಷಯ ಕಷಾಯದ
ಕುಣಿಕೆಗೆ ಸಿಲುಕದನ
ಕ್ಷಣವು ಚಿದಂಬರ ಪುರುಷಧ್ಯಾನ ಲ
ಕ್ಷಣದಿಂದ ತೊಲಗದನ ಕರ್ಮ
ಗುಣವ ಸುಟ್ಟರುಹುವನ ಸಿದ್ಧ ಗಣದೆಣಿಕೆಗೆ ಬಂದವನ || ೩

೩೦. ಆರೈದುಹೇಳಿರಣ್ಣಾತ್ಮ

ಆರೈದು ಹೇಳಿರಣ್ಣಾತ್ಮ ಯೋಗಿಯ ವ್ಯವ
ಹಾರದುದ್ಯೋಗದೋಲಗದ ಗುಣಗಳ ||      ಪಲ್ಲವಿ

ನೀರ ಬೊಬ್ಬುಳಿಯಂತೆ ತೋರಿಯಡಗುವ
ಶರೀರವ ತಪಸಿಗೆ ಮಾರುಗೊಂಡು
ಓರಂತೆ ಕೆಡದ ಮುಕ್ತಿ ಕೊಂಬವನ ವ್ಯವ
ಹಾರವೆಂಬುದು ಮಹಾ ಲಾಭವೋ ನಷ್ಟವೋ ||         ೧

ಆಧ್ಯಾತ್ಮದಲ್ಲಿ ಧ್ಯಾಣಿಸಿದಲಾತ್ಮ ಭೂಮಿಯ
ಆಧ್ಯಾತ್ಮವರಿತು ಸಾಧಿಸಿಗೆಯ್ದು
ವಿದ್ಯಮಯದ ಬೆಲೆಸಿರಿ ಬೆಳೆವವನ
ಉದ್ಯೋಗವದು ಸಫಲವೋ ನಿಃಫಲವೋ ||   ೨

ನಾಲಿಗೆ ಕೈಕಾಲು ಬಳಲಲಿಂ ಒಮ್ಮೆಗೆ
ಸೂಲವಿಲ್ಲ ನುಡಿಗೆ ನೆಲವುಂಟು
ಮೇಲುಂಟು ಮುಕ್ತಿ ಚಿದಂಬರ ಪುರುಷನ
ಓಲೈಸುವುದು ವಿಶಿಷ್ಟವೋ ಕಷ್ಟವೋ ||        ೩