೨೦೧. ಜಿನರಾಜನೀನೆಜಯಶೀಲ

ಜಿನರಾಜ ನೀನೆ ಜಯಶೀಲನೆಂಬುದಕೆ
ಜನನಾದಿ ಪದಿನೆಂಟ ಜಯಿಸಿದುದೆ ಸಾಕ್ಷಿ ||   ಪಲ್ಲವಿ

ಧರೆಗೆ ನಿರ್ಭಯ ದಯಾಪರನು ನೀನೆಂಬುದಕೆ
ಕರದೊಳಾಯುಧವಿಲ್ಲದಿರುವುದೆ ಸಾಕ್ಷಿ
ನರ ಸುರೋರಗರಾಜರೊಡೆಯ ನೀನೆಂಬುದಕೆ
ಶಿರದ ಮೇಲಿಹ ಮೂರು ಸತ್ತಿಗೆಯ ಸಾಕ್ಷಿ ||    ೧

ಪೊಡವಿಗನುಪಮದಮಲ ಮೂರ್ತಿ ನೀನೆಂಬುದಕೆ
ಒಡವೆ ವಸ್ತಗಳಿಲ್ಲದಿರುವುದೇ ಸಾಕ್ಷಿ
ಸಡಗರದೊಳನಂತ ಸುಖ ನಿನ್ನೊಳುಂಟೆಂಬುದಕೆ
ಮಡದಿಯರನಗಲಿಹ ಮಹಿಮೆಯೇ ಸಾಕ್ಷಿ ||    ೨

ಆದೀಶ ನೀನಲ್ಲದಿನ್ನಿಲ್ಲವೆನಗೆಂಬುದಕೆ
ಈ ಧರೆಗೆ ಪಶ್ಚಿಮಾಂಬುಧಿಯೆ ಸಾಕ್ಷಿ
ಈ ದೇಹ ವಿಡಿದಿರ್ಪ ಆಸನ್ನ ಭವ್ಯರಿಗೆ
ನೀ ದೇವನೆಂಬುದಕೆ ನಿಜರೂಪೆ ಸಾಕ್ಷಿ ||       ೩

೨೦೨. ತನ್ನಿಂದತಾಸುಖಿ

ತನ್ನಿಂದ ತಾ ಸುಖಿ ತನ್ನಿಂದ ತಾ ದುಃಖಿ
ಚೆನ್ನಾಗಿ ನಂಬಿರೋ ಪರಮಾತ್ಮನ || ಪಲ್ಲವಿ

ದಾನಪೂಜೆಗಳಲಿ ನೋಂಪಿಗಳಲಿ ಕೃತಕಾರಿ
ತಾನಂದದಲಿ ವ್ರತ ಜಪಂಗಳಲಿ
ತಾನೆ ಪುಣ್ಯವಮಾಡಿ ಸ್ವರ್ಗಕ್ಕೆ ಹೋಹಾಗ
ಹೋ! ನಿಲ್ಲು ಬರಬೇಡ ಎಂಬುವರುಂಟೆ? ||    ೧

ಪರಮ ಧರ್ಮವ ಬಿಟ್ಟು ವ್ಯಸನದೆ ಮನವಿಟ್ಟು
ಸುರೆ ಮಾಂಸ ಪರಸತಿಯಾಸೆಯಲಿ
ಹಿರಿದು ಪಾಪವ ಮಾಡಿ ನರಕಕ್ಕೆ ಬೀಳ್ವಾಗ
ಭರದಿ ಬಂದಲ್ಲಿ ಹಿಡಿದೆತ್ತುವರುಂಟೆ? ||         ೨

ಪಾಪಪುಣ್ಯವನಾತ್ಮಯೋಗದಿ ಸುಟ್ಟು ನಿ
ರ್ಲೇಪದೀ ಒಡಲ ಬಿಸುಟು ಮುಕ್ತಿಗೆ
ತಾ ಪುಟನೆಗೆವಾಗ ತಡೆಯುಂಟೆ ಪರಮ ಪ್ರ
ತಾಪಿ ನಮ್ಮ ಚಿದಂಬರ ಪುರುಷನಿಗೆ ||         ೩

೨೦೩. ತಾರಮ್ಮಯ್ಯಜಿನಪತಿ

ತಾರಮ್ಮಯ್ಯ ಜಿನಪತಿಗಾರು ವಸ್ತುಗಳು ||    ಪಲ್ಲವಿ

ಬಲವನೆ ಕೊಡುವ ನಿರ್ಮಲ ತೀರ್ಥಾಂಬುವ
ಮಲಯಜ ಮಿಶ್ರತ ಜಲದ ಕುಂಭಗಳ ||       ೧

ಚಂದನ ಹಿಮಕುಂಕುಮ ಸಂಮಿಶ್ರದೊಳು
ಬಂಧುರವಾಗಿಹ ಗಂಧದ ತಟ್ಟೆಯನು ||       ೨

ಸುಕ್ಷೇತ್ರದೆ ಬೆಳೆದಕ್ಷಯ ಪರಿಮಲ
ದಕ್ಷೂಣಾಮಲದಕ್ಷತೆ ಪುಂಜವ ||     ೩

ಪರಿಮಳಮಲ್ಲಿಗೆ ಜಾಜೀ ಚಂಪಕಪುಷ್ಪ
ದರಳು ಸರಂಗಳನಿರಿಸಿದ ತಟ್ಟೆಯನು ||      ೪

ಮಿರುಗುವ ಘೃತಪಾಯಸ ಎಗ್ಗೂರಿಗೆ ಬಹು
ಪರಿಮಳ ಭರಿತದ ಪರಮಾನ್ನಗಳ || ೫

ಪಾಪವ ಕೆಡಿಸಿದಿಗ್ವ್ಯಾಪಿ ಸಮುಜ್ವಲ
ರೂಪಿನ ಕರ್ಪೂರದೀಪದಾರತಿಯ || ೬

೨೦೪. ದಯೆವೆಲಸೆನ್ನಿದಾರಿಗೆ

ದಯೆವೆಲಸೆನ್ನಿ ದಾರಿಗೆ ಬನ್ನಿ
ಜಯ ಜಯ ಅಪರಾಜಿತೇಶನೆಂದೆನ್ನಿ ||        ಪಲ್ಲವಿ

ತನು ನಿತ್ಯವಲ್ಲ ಜವನಿಗಿದಿರಿಲ್ಲ
ಕನಸಿನ ಬಾಳಿದು ಗರ್ವವು ಸಲ್ಲ ||   ೧

ಇಂದ್ರನಿಗೆರವು ಇನ್ನಾರಿಗಿರವು
ಚಂದ್ರನ ಕಲೆಯಂತೆ ಸಿರಿಯಿನ್ನೆರವು ||        ೨

ಅಪರಾಜಿತೇಶ ಅಧಿಕಪ್ರಕಾಶ
ಜಪಿಸಿರೋ ಕಾಡುವ ಕರ್ಮನಾಶ ||  ೩

 

೨೦೫. ದಾನಕೆಸಲ್ಲದಸಿರಿ

ದಾನಕೆ ಸಲ್ಲದ ಸಿರಿ ಇದ್ದೇನಿಲ್ಲದೇನು? ಆತ್ಮ
ಧ್ಯಾನಕೆ ಬಾರದ ಬುದ್ಧಿ ಇದ್ದೇನಿಲ್ಲದೇನು ||     ಪಲ್ಲವಿ

ಪರಹಿತಕಾಗದ ಬಲವಿದ್ದೇನು? ಇಲ್ಲದೇನು? ವ್ರತವ
ಧರಿಸಿ ನಡೆಯದ ದೇಹವಿದ್ದೇನು? ಇಲ್ಲದೇನು?
ಕರುಣೆಗೆಟ್ಟು ತಪವು ತಾನಿದ್ದೇನು? ಇಲ್ಲದೇನು ಬಂಧು
ವೆರಸಿ ಭೋಗಿಸದ ಭೋಗವಿದ್ದೇನು? ಇಲ್ಲದೇನು? ||    ೧

ಚಿಂತೆವೆರಸಿದ ರಾಜ್ಯವಿದ್ದೇನು? ಇಲ್ಲದೇನು ಕಾಮ
ತಂತ್ರಕೊಳಗಾದ ವಿದ್ಯೆ ಇದ್ದೇನು ಇಲ್ಲದೇನು?
ಭ್ರಾಂತರೊಳಗಣ ಗೋಷ್ಠಿ ಇದ್ದೇನು? ಇಲ್ಲದೇನು? ಅನ್ಯ
ಕಾಂತೆಗೊಲಿದನ ಬಾಳು ಇದ್ದೇನು? ಇಲ್ಲದೇನು? ||     ೨

ವಾದಿಸುವ ಬಂಟ ತಾನಿದ್ದೇನು? ಇಲ್ಲದೇನು? ತಪ್ಪ
ಸಾಧಿಸುವ ಒಡೆಯ ತಾನಿದ್ದೇನು? ಇಲ್ಲದೇನು?
ಕಾದು ಗೋಳಿಡುವ ಕಾಂತೆ ಇದ್ದೇನು? ಇಲ್ಲದೇನು? ಸಮು
ದ್ರಾಧೀಶನಲ್ಲದ ದೇವನಿದ್ದೇನು? ಇಲ್ಲದೇನು? ||         ೩

 

೨೦೬.   ನಾನೊಬ್ಬರಹಾಗಿಲ್ಲ

ನಾನೊಬ್ಬರ ಹಾಗಿಲ್ಲ ನನಗೊಬ್ಬರ ಒಲವಿಲ್ಲ
ನಾನು ನಾನಲ್ಲದೆ ಪರರಾರು ನನಗಿಲ್ಲ ||       ಪಲ್ಲವಿ

ಬಡಕೆಂದಾತ್ಮನ ಕಂಡು ಬಹುಕಾಲ ಬಳಲಿದೆನು
ಮಡಿಯುತ ಹುಟ್ಟುತ ಹಲವು ಜನ್ಮದಿ ತೊಳಲಿದೆನು
ನುಡಿಗೆ ಗೋಚರವಾದ ಪರಬೊಮ್ಮನೇ ತಾನಾಗಿದ್ದು
ನುಡಿಸದೆ ಎನ್ನೊಳು ನಿಂತು ನೋಡುವೆನೀಕ್ಷಣದಿ ||     ೧

ಹಾಲು ನೀರೊಡಗೂಡಿದ ಹಾಗೆನ್ನ ಜೀವನವು
ಮೇಳವಿಸಿದ ತನುವೆರವು ಇನ್ನುಳಿದವರೇನು?
ಸಾಲುಕರ್ಮವ ಸುಡುವ ಶಕ್ತಿಯುಂಟಾತ್ಮನೊಳು
ಬೀಳುವ ಚಿತ್ತವ ತರುಬಿ ನೋಡುವೆನೀಕ್ಷಣದಿ ||          ೨

ಅರಿಯದವರಿಗೆ ದೇವ ಅಲ್ಲಲ್ಲಿ ಹೊರಗಿಹನು
ಅರಿತಮೇಲಾ ದೇವ ಹೊರಗಿಲ್ಲೊಳಗಿಹನು
ಅರಿವುದು! ಕಾಂಬುದು! ಸುಪ್ರಭೆ ತಾನಾಗಿ
ಮೆರೆವ ಚಿದಂಬರ ಪುರುಷನ ನೋಡುವೆನೀಕ್ಷಣದಿ ||    ೩

 

೨೦೭.   ಪಾಪಿಬಲ್ಲನೇಪರರ

ಪಾಪಿ ಬಲ್ಲನೇ ಪರರ ಸುಖದುಃಖದಿಂಗಿತವ?
ಕೋಪಿ ಬಲ್ಲನೇ ನಿಜದಿ ಮನುಜರಂತರಂಗವ ||         ಪಲ್ಲವಿ
    
ಕತ್ತೆ ಬಲ್ಲುದೇ ಹೊತ್ತ ವಸ್ತುಗಳ ಬೆಲೆಗಳನು?
ಮೃತ್ಯುಬಲ್ಲುದೇ ತಾನು ದಯಾದಾಕ್ಷಣ್ಯವ?
ತೊತ್ತುಬಲ್ಲಳೇ ತನ್ನ ಮಾನ ಮಾರ್ಗಂಗಳನು?
ಬೆಕ್ಕುಬಲ್ಲುದೇ ಹಾಲು ಮೀಸಲೆಂಬುದನು? ||  ೧

ಹೇನು ಬಲ್ಲದೇ ಮುಡಿದ ಪರಿಮಳದ ವಾಸನೆಯ?
ಶ್ವಾನ ಬಲ್ಲುದೇ ತಾನು ರಾಗ ಭೇದಂಗಳನು?
ಮೀನು ಬಲ್ಲುದೇ ನೀರ ಸವಿ ಸ್ವಾದವೆಂಬುದನು?
ಮಾನ ಹೀನಬಲ್ಲನೇ ಭಕ್ತಿ ವಿಶ್ವಾಸವನು? ||   ೨
ಹೇಡಿ ಬಲ್ಲನೇ ರಣದ ಹಿಮ್ಮೆಟ್ಟು ಕುಂದೆಂಬುದನು?
ಕೋಡಗ ಬಲ್ಲುದೇ ತಾನು ರತ್ನದ ಬೆಲೆಗಳನು?
ಬೇಡಿದೊಡೆ ಗುಣವೀವ ಕಡಲಾದಿ ಜಿನನಲ್ಲದೆ ಮಿಕ್ಕ
ನಾಡಾದಿ ದೈವಗಳೆಲ್ಲ ತಾವು ಕೊಡಬಲ್ಲವೇನು? ||      ೩

 

೨೦೮.   ಭಜನೆಮಾತ್ರಸಾಲದೆ?

ಭಜನೆ ಮಾತ್ರ ಸಾಲದೇ? ಆ ಜಿನೇಂದ್ರನ
ಸುಜನ ಸುಜ್ಞಾನ ಜನಾನಂದರೂಪನ
ನಿಜಗುಣ ರತ್ನತ್ರಯನಪ್ಪ ಜಿನೇಂದ್ರನ ||       ಪಲ್ಲವಿ

ಪಿಂತಣಭವಂಗಳೊಳು ಅಂಟಿದಕರ್ಮ
ಸಂತತಿ ಜಯಿಸುವಲ್ಲಿ
ಅಂತರಂಗದ ಶುಕ್ಲಧ್ಯಾನವಾಸದೊಳರ
ಹಂತನೇ ತನ್ಮಾತ್ಮನೆಂದು ಭಾವಿಸುವಂಥ ||  ೧

ಕುಟಿಲ ವಿಧಿಯಾಟದ ನರ್ತನದಲ್ಲಿ
ಘಟಿಸುವ ಪಾಠಕದ
ಪಟುತರ ಕೆಡುವ ರಕ್ಷೆಯ ಭಕ್ತಿಯೊಳು ಕರ್ಮ
ಭಟರಗೆಲಿದ ನಿರಂಜನ ಸಿದ್ಧರಡಿಗಳ ||        ೨

ದುರ್ವಾರ ದುಃಖದೊಳು ವ್ಯಂತರ ಗ್ರಹ
ಪರ್ವಿದ ಸಮಯದೊಳು
ಗರ್ವಿತ ನೃಪ ಚೋರವ್ಯಾಘ್ರ ದುಃಖಂಗಳೊಳು
ನಿರ್ವಾಣಪತಿ ಸರ್ವತೋಮುಖ ಸಲಹೆಂಬ || ೩

ಭವರುಜೆಯಡಿಸಿದಾಗ ಅಂತರ ಚಾರರು
ಕವಿದು ಕಾಲ್ಗೆಡಿಸುವಾಗ
ಧ್ರುವಚಿತ್ತವಿಡಿದಾತ್ಮ ಯೋಗಭಾವದೊಳು
ರವಿಕೋಟಿದ್ಯುತಿಭಾಸಮಾನ ಸರ್ವಜ್ಞನ ||    ೪

ಯೋಗಾಭ್ಯಾಸವ ಮಾಳ್ವಾಗ ಮಾರ ನಿದ್ರೆ
ರಾಗ ಸಂಭವಿಸುವಾಗ
ರಾಗಾದಿ ದೋಷವ ನೀಗಿದ ನಿತ್ಯಾತ್ಮ
ಶ್ರೀಗಧಿನಾಥ! ಮಾಂ ಪಾಹಿ ಭಗವಾನೆಂಬ ||  ೫

 

೨೦೯.   ಮಾನವಜನ್ಮಕೆಬಂದು

ಮಾನವ ಜನ್ಮಕೆ ಬಂದು ಮುತ್ತನಾಗದೆ ವ್ರತವಿ
ಧಾನದಿಂದ ಶುದ್ಧನಹರೇನಾಯ್ತು? ||          ಪಲ್ಲವಿ

ನಾಕು ಸಂಘಕೊಲಿದು ನಾಕುದಾನವಕೊಟ್ಟು ಇರದ
ನೇಕ ಫಲಗಳ ಪಡೆವರೇನಾಯ್ತು?
ಜೋಕೆಯಿಂದ ಒಂದೆರಡು ನೋಂಪಿಯ ನೋಂತು ಸ್ವರ್ಗ
ಲೋಕದ ಪಟ್ಟವನಾಳವೊಡೇನಾಯ್ತು? ||     ೧

ಇರುಳೂ ಹಗಲು ಒಡಲ ಸುಖಕೆ ಕುಡಿಯುತಿದ್ದೆಯೈ ಸಂಜೆ
ಎರಡರೊಳಗೆ ಜಪವ ಮಾಡುವೊಡೇನಾಯ್ತು?
ಪರಮ ಭಕ್ತಿಯಿಂದ ಒಂದೆರಡು ಘಳಿಗೆಯಾದರೂ ಪುಣ್ಯ
ಚರಿತೆಯನಿರದೇ ಕೇಳುವೊಡೇನಾಯ್ತು? ||    ೨

ಈ ಮೈ ಬೇರೆ ನೀ ಬೇರೆಂದು ನಿಮಿಷವಾದರೂ ಆತ್ಮಾ
ರಾಮನಾಗಿ ಶುದ್ಧನಹರೇನಾಯ್ತು
ಶ್ರೀಮಂದರಸ್ವಾಮಿ ನೀನೆ ಶರಣೆಂದು ಆ ಮೋಕ್ಷ
ಸೀಮೆಗಧಿನಾಥನಹರೇನಾಯ್ತು? ||  ೩

 

೨೧೦.   ಲಾಭಲಾಭದಿನದಿನಕೆ

ಲಾಭ ಲಾಭ ದಿನದಿನಕೆ ಲಾಭ ಕಾಣಿರೋ
ಪ್ರಾಭೃತವನೋದಿ ಧ್ಯಾನಕೆ ಮನವಿಟ್ಟಂದಿನಿಂದ ||      ಪಲ್ಲವಿ

ಪೊಲ್ಲದೊಡಲ ತಪಸಿಗೊಡ್ಡಿ ಇಂದು ನಾಳೆ ಸ್ವರ್ಗ
ದಲ್ಲಿ ದಿವ್ಯ ದೇಹವಹುದು ಲಾಭ ಕಾಣಿರೋ
ಬಲ್ಲಿದ ನೀನಾತ್ಮ ಯೋಗ ಕೂಡಲು ಮತ್ತಾಸ್ವರ್ಗ
ದಲ್ಲಿಂದ ಬರಲಾತ್ಮ ತನು ಮೃತಲಾಭ ಕಾಣಿರೋ ||     ೧

ಪವನಯೋಗದಿ ಮನವ ಜಯಿಸಿ ಎನ್ನೊಡಲ ರೋ
ಗವನೊತ್ತಿ ಕಳೆವೆ ತಾನದು ಲಾಭ ಕಾಣಿರೋ
ಭವ ಭಯವನಳಿವ ಕಲೆಯನೆಳಿಸುವೆ ನಿಂದು ನಾಳೆ
ಜವನ ತೊತ್ತಳಿದುಳಿವೆನದು ಲಾಭ ಕಾಣಿರೋ ||        ೨

ನಿಚ್ಚ ನಿಚ್ಚ ಧ್ಯಾನ ಖಡ್ಗದಿಂದ ಕರ್ಮಗಳನು
ಕೊಚ್ಚಿ ಕೊಚ್ಚಿ ಕಳೆವೆ ತಾನದು ಲಾಭ ಕಾಣಿರೋ
ಮೆಚ್ಚಿ ನಿರಂಜನಸಿದ್ಧನ ನೆನೆವೆ ನಾನಿನ್ನು
ಅಚ್ಯತಾತ್ಮ ಸಿದ್ಧ ನನಗೆ ಲಾಭ ಕಾಣಿರೋ ||   ೩