೧೯೧. ಹೊರಹೊರಗಾಡಿದರೇನುಂಟು?

ಹೊರ ಹೊರಗಾಡಿದರೇನುಂಟು? ಒಳ
ವರಿದು ನೋಡಿದರಲ್ಲವೆ ದೇವನುಂಟು ||      ಪಲ್ಲವಿ

ಹರಿಹಂಚಾಗಿ ಹೊರಗೆ ಸುಳಿದಾಡಲು
ಕೆರೆಮನೆ ಹೊಲನಲ್ಲದೇನುಂಟು?
ತರುಬಿ ತನ್ನ ಮನವ ಮೈಯೊಳಿರಬಿಟ್ಟು
ಅರಸಿ ನೋಡಿದರಾದೇವನುಂಟು ||  ೧

ಧ್ಯಾನ ಒಂದಲ್ಲದೆ ಬರಿಸ್ನಾನವ ಮಾಡಲು
ನಿನ್ನ ಮೈಸುಖವಲ್ಲದೇನುಂಟು ?
ಧ್ಯಾನಪೂರಿತನಾಗಿ ಜಪವ ಮಾಡಲು ಮ
ಹಾನುಭಾವನ ಮುಂದೆ ಕಾಣಲುಂಟು ||       ೨

ಅಂಗವ ನೋಡಲೆಲುಬು ರಕ್ತ ಮಾಂಸ ಚರ್ಮದ
ಬೊಂಬುಳಿಯಲ್ಲದೇನುಂಟು?
ಅಂಗಬೇರಾತ್ಮ ಬೇರೆಂದು ನೋಡಿದರಲ್ಲಿ ಬೆಳ
ದಿಂಗಳ ಬೊಂಬೆಯಂತಾ ದೇವನುಂಟು ||    ೩

ಗುರುದೇವರೆಂದಿದಿರಿಟ್ಟು ನೋಡಿದರಲ್ಲಿ
ಸುರಪದ ಸುಖವಲ್ಲದೇನುಂಟು?
ಗುರುಹಂಸನಾಥನ ಧ್ಯಾನಮಾಡಲು ಇರದೆ
ಪರಮ ಮುಕ್ತಿ ಸುಖವ ಕಾಣಲುಂಟು ||         ೪

೧೯೨. ಮನುಜಜನ್ಮಕೆಬಂದು

ಮನುಜ ಜನ್ಮಕೆ ಬಂದು ಮೈಮರೆದಿರಬೇಡಿ
ಜಿನ ಜಿನ ಎನ್ನಿರೋ ||      ಪಲ್ಲವಿ

ತನು ಮನ ವಚನ ವ್ಯರ್ಥಕೆ ನೀಗದೆ
ಜಿನ ಜಿನ ಎನ್ನಿರೋ
ಜವನ ಬಾಧೆಯ ಜಯಿಸಬೇಕಾದೊಡೆ
ಜಿನ ಜಿನ ಎನ್ನಿರೋ ||      ೧

ಭವನಕ್ಕೆ ಬಲ್ಲಿದರಾಗ ಬೇಕಾದೊಡೆ
ಜಿನ ಜಿನ ಎನ್ನಿರೋ ಬೇಗ
ಶಿವಪದವಿಯು ನೀವು ಸೇರಬೇಕಾದೊಡೆ
ಜಿನ ಜಿನ ಎನ್ನಿರೋ ||      ೨

ಆಗಮ ಸಿದ್ಧಾಂತ ಮುಖ್ಯದ ಜಪವಿದು
ಜಿನ ಜಿನ ಎನ್ನಿರೋ ಭವ
ರೋಗವ ಕೆಡಿಸುವ ಬಲುಮೆಯ ಜಪವಿದು
ಜಿನ ಜಿನ ಎನ್ನಿರೋ ||      ೩

ನಾಗೇಂದ್ರ ಬಣ್ಣಿಸಲರಿದ ಜಪವಿದು
ಜಿನ ಜಿನ ಎನ್ನಿರೋ ನಿತ್ಯ
ರಾಗ ಬೇಕಾದೊಡೆ ನೇಮದ ಜಪವಿದು
ಜಿನ ಜಿನ ಎನ್ನಿರೋ ||      ೪

ಉಪಮಿಸಬಾರದ ಸುಖವೀನ ಜಪವಿದು
ಜಿನ ಜಿನ ಎನ್ನಿರೋ ನಂಬಿ
ಜಪಿಸುವರಿಗೆ ಆತ್ಮ ಸಿದ್ಧಿಯ ಜಪವಿದು
ಜಿನ ಜಿನ ಎನ್ನಿರೋ ||      ೫

ಅಪರಾಧಕೋಟಿಗೆ ಪರಿಹಾರ ಜಪವಿದು
ಜಿನ ಜಿನ ಎನ್ನಿರೋ ನೀವು
ಅಪರಾಜಿತೇಶನ ಕಾಣಬೇಕಾದೊಡೆ
ಜಿನ ಜಿನ ಎನ್ನಿರೋ ||      ೬

೧೯೩. ಇಂದೇಮುಕ್ತನವಂ

ಇಂದೇ ಮುಕ್ತನವಂ ನಿರ್ಮಲ ಮನ
ದಿಂದ ನಿಜಾತ್ಮ ತತ್ವದೊಳಡಗಿದೊಡೆ ||      ಪಲ್ಲವಿ

ಹಳಿದೊಡೆ ಹೊಗಳಿದೊಡುಂಡೊಡೆ
ತಿಳಿಯುವುದಾದೊಡೆ ಸವಿಯಾದೊಡೆ
ಮಳೆಗೆ ಹೆಚ್ಚದೆ ಬೇಸಿಗೆಗೆ ಕುಂದದೆ ಮಹಾ
ಜಲನಿಧಿಯೊಳು ಸಹಜದೊಳಿಹನಾದೊಡೆ ||  ೧

ರೋಗ ಬಂದೊಡೆ ಉಪಸರ್ಗ ಬಂದೊಡೆ ಕಡು
ಬೇಗದಿಂ ಮರಣವೇ ದೊರಕೊಂಡೊಡೆ
ಲೋಗರ ನೋವ ನೋಡುವನಂತುದಾಸೀನ
ಸಂಗದ ಬುದ್ಧಿಯೊಳಿಹನಾದೊಡೆ ||  ೨

ಇವರವರೆನ್ನವರೆಂಬ ಪಕ್ಷವ ಬಿಟ್ಟು
ತವಕದಿಂದಲಿ ವಿಷಯದಾಶೆಯ ಸುಟ್ಟು
ಶಿವಪದದೊಳು ನಿಚ್ಚ ಸುಖಿಸುವ ಕಡಲಾದಿ
ಶಿವ ತಾಂ ಸುಳಿದಂತೆ ತೋರುವನಾದೊಡೆ || ೩

೧೯೪. ಊರಿಗೆಹೋಗುವಬನ್ನಿ

ಊರಿಗೆ ಹೋಗುವ ಬನ್ನಿ ಕಾಡ ಈ
ದಾರಿ ಸಂಸಾರ ಮಾರ್ಗವಲ್ಲೆನ್ನಿ ||    ಪಲ್ಲವಿ

ಕ್ರೋಧದಾವಾಗ್ನಿ ಹತ್ತಿಹುದು ಮುಂದೆ
ಹೋದರೆ ಮಾನಪರ್ವತ ಕಾಣಗೊಡದು
ಬಾಧಿಪ ಕಾಮೇಭವಿಹುದು ಬಂದು ತಾ
ಕಾದಿಕೊಲ್ಲುವ ಮಾಯಾಮೃಗವಿಹುದು ||      ೧

ಭೋಗೋಪಭೋಗ ಕೀಟಕವು ಬಂದು
ತಾಗಿ ವೇದನೆಯ ಮಾಡುವ ಖಗಗಣವು
ರಾಗ ಚಿತ್ತವು ಸುತಾದಿಗಣ ತಾ ತಲೆ
ಬಾಗಿಪ ವಿಷಯ ವಜ್ರದುಂಬಿಗಳು ||  ೨

ಈ ಸಂಸಾರ ನೀ ಬಿಟ್ಟು ಜಿನ
ಶಾಸನಮಾರ್ಗದಿ ತಪಕಳವಟ್ಟು
ಲೇಸಾಗಿ ಕರ್ಮವಸುಟ್ಟು ಮುಕ್ತಿ
ವಾಸರಾಗಿ ನಿರಂಜನನೊಳು ಮನವಿಟ್ಟು ||    ೩

೧೯೫. ಕೊಡಗೈಯವನಲ್ಲಜಿನ

ಕೊಡಗೈಯವನಲ್ಲ ಜಿನ
ರಡಿಗಳ ನಂಬದೆ ನಾ ಕೆಟ್ಟೆನಲ್ಲ ||    ಪಲ್ಲವಿ

ದೇವ ಜಿನ ನಂಬೆ ಒಪ್ಪುದಲ್ಲ ಮುಂದೆ
ದೇವೇಂದ್ರನಾಗಿ ನಾನಿರ್ಪೆನಲ್ಲ
ಭೂವಲಯಕೆ ಚಕ್ರಿಯಷ್ಟೆನಲ್ಲ ನೆರೆ
ಭಾವಿಸೆ ಜಿನನೆ ನಾನಪ್ಪೆನಲ್ಲ ||      ೧

ಐದು ಕಲ್ಯಾಣವ ಪಡೆವೆನಲ್ಲ ನಾನು
ಐದಾಚಾರದಿ ನಡೆವೆನಲ್ಲ
ಐದು ಸಂಸಾರವ ಸುಡುವೆನಲ್ಲ ಮ
ತ್ತೈದನೆ ಜ್ಞಾನವ ಪಡೆವೆನಲ್ಲ ||        ೨

ಧರ್ಮ ಶುಕ್ಲಧ್ಯಾನವಿಡಿವೆನಲ್ಲ ಅಷ್ಟ
ಕರ್ಮಗಳ ಬೇರ ಕಡಿದಿಡುವೆನಲ್ಲ
ನಿರ್ಮಲ ಸೌಖ್ಯವ ಪಡೆವೆನಲ್ಲ ಜ್ಯೋ
ತಿರ್ಮಯ ಶ್ರೀಯ ಕೈವಿಡಿವೆನಲ್ಲ ||   ೩

೧೯೬. ಗುರುಪಾದವಿರಲಿಕೆಪರದೈವ

ಗುರುಪಾದವಿರಲಿಕೆ ಪರದೈವ ದಾರಿಯಾಕೊ?
ವರಮಾಣಿಕವಿರೆ ಕಲ್ಲಿನ ಚೂರು ಬಯಸಲೇಕೊ? ||      ಪಲ್ಲವಿ

ಹೆತ್ತ ಮಾತಾಪಿತರ ಮಾತ ಕೇಳದ ಪುತ್ರನೇಕೊ? ತನ್ನ
ಚಿತ್ತಪಲ್ಲಟದಂತೆ ತಿರುಗುವ ಸತಿಯ ಸಂಗವೇಕೊ?
ಉತ್ತಮ ಗುರುವ ನಿಂದಿಸಿ ಮಾತನಾಡುವ ಶಿಷ್ಯನೇಕೋ
ಶಕ್ತಿಹೀನನಾಗಿ ಸರ್ವಜನರ ಕೂಡೆ ಕ್ರೋಧವೇಕೊ? ||   ೧

ಭಾಷೆಯ ಕೊಟ್ಟು ತಪ್ಪುವ ಪ್ರಭುವಿನೊಳಿನ್ನಾಸೆ ಏಕೋ?
ವೇಶ್ಯೆಯ ನೆಚ್ಚಿ ವರನಾರಿಯ ಬಿಡುವಂಥ ಪುರುಷನೇಕೋ?
ಕಾಸಿಗೆ ಕಷ್ಟಪಡುವ ಲೋಭಿಯೊಡನುಂಬ ಗೆಳೆಯನೇಕೋ? ತನ್ನ
ಹಾಸಿಗೆಯರಿತು ಕಾಲುಗಳನೀಡಲರಿಯದ ಮನುಜನೇಕೋ? ||  ೨

ಚೆನ್ನಾಗಿ ಬಾಳ್ವಾಗ ಧರ್ಮವ ಮಾಡದ ಜನವಿನ್ನೇಕೋ?
ಮುನ್ನ ಪಡೆಯದೆ ಲಾಭವ ಬಯಸುವ ಪ್ರೌಢನೇಕೊ?
ತನ್ನ ತಾನರಿದಾತ್ಮ ಧ್ಯಾನವ ಮಾಡದ ಯೋಗಿಯೇಕೊ?
ಸನ್ನುತ ಶ್ರೀಮಂಧರೇಶನ ನೆನೆಯದ ಮನುಜನೇಕೊ? ||         ೩

೧೯೭. ಗ್ರಂಥವನೋದಿಗ್ರಂಥ

ಗ್ರಂಥವನೋದಿ ಗ್ರಂಥವಬಿಟ್ಟ ಮುನಿಗಳ
ಪಂಥವ ಕೇಳ್ದುದಿಲ್ಲವೇ ಭವಿಗಳಿರಾ ||          ಪಲ್ಲವಿ

ದಶವಾಯುಗಳ ಗೆಲಿದು ನವರಂಧ್ರಗಳ ಬರಿದು
ವಿಷಯ ವೇದನೆಯ ಸೆರೆಮಾಡುವ ಪಂಥ
ವಶಗೊಳದತ್ತಿತ್ತ ಹರಿವ ದುರ್ಮನವ
ಮಿಸುಕಲೀಯದೆ ನಿಲಿಸುವಾ ಪರಿ ಪಂಥ ||    ೧

ವೀರಾಸನ ಕುಕ್ಕುಟಾಸನದೊಳು ನಿಂದು ಶ
ರೀರದ ಜಾಡ್ಯವನು ಕೆಡಿಸುವ ಪಂಥ
ಮಾರನನ್ನಟ್ಟಿ ಮೃತ್ಯುವಮೆಟ್ಟಿ ಕರ್ಮ
ಬೇರೆಲ್ಲವನು ಸುಟ್ಟುರುಹುವ ಪಂಥ ||          ೨

ಇಂದು ಹೊತ್ತಿರ್ದ ದೇಹವ ಬಿಸುಟು ಬಳಿಕ
ಮುಂದೊಬ್ಬ ತಾಯ ಹೊಟ್ಟೆಯ ಹೋಗದ ಪಂಥ
ನಿಂದು ಚಿದಂಬರ ಪುರುಷನ ಧ್ಯಾನದೊಳು
ಕುಂದದೆ ಮೋಕ್ಷಪಟ್ಟವನಾಳುವ ಪಂಥ ||     ೩

೧೯೮. ಚಿಂತೆಯಮೇಲೆಚಿಂತೆ

ಚಿಂತೆಯ ಮೇಲೆ ಚಿಂತೆಬಹುದು ನಿ
ಶ್ಚಿಂತನಾಗಿರು ಮನವೆ ||   ಪಲ್ಲವಿ

ಬಡತನವಾದಂದು ಉಣಬೇಕು
ಉಡಬೇಕೆಂಬ ಚಿಂತೆ
ಉಂಡು ಉಡಲಾದ ಬಳಿಕ ಮತ್ತೊಬ್ಬ
ಮಡದಿ ಬೇಕೆಂಬ ಚಿಂತೆ ||  ೧

ಮಡದಿಯಾದ ಬಳಿಕ ಮಕ್ಕಳ
ಪಡೆಯಬೇಕೆಂಬ ಚಿಂತೆ
ಪಡೆದ ಬಳಿಕಾ ಮಕ್ಕಳ ಮದುವೆಗೆ
ಒಡೆವ ಬೇಕೆಂಬ ಚಿಂತೆ ||   ೨

ಪರರಿಗೆ ಚಿಂತಿಸಿ ನಿನ್ನ ಮೈ
ಜರಿವುದು ಕಾಂಬುದಿಲ್ಲ
ಎರಡು ಘಳಿಗೆಯಾದರೂ ಮಿಗೆ ಚಿದಂ
ಬರ ಪುರುಷನ ಧ್ಯಾನಿಸು || ೩

೧೯೯. ಜಯತುಜಯತು

ಜಯತು ಜಯತು ಜಗತ್ರಯಾರ್ಚಿತ
ಜಯತು ಮುನಿಜನ ಸೇವಿತ
ಜಯತು ಶಾಶ್ವತ ಸೌಖ್ಯದಾಯಕ ವಿನುತ
ಜಯತು ರಕ್ಷಿಸು ಸಂತತ || ಪಲ್ಲವಿ

ನಿನ್ನ ನಂಬದೆ ಹಲವು ಚಿಂತಿಸಿ
ಮುನ್ನ ಕೆಟ್ಟುದು ಸಾಲದೆ
ಭಿನ್ನ ಬುದ್ಧಿಗೆ ಸಿಲುಕಿ ನೊಂದೆನು
ಎನ್ನ ಸಲಹು ದಯಾನಿಧೆ || ೧

ಜ್ಞಾನವಿಲ್ಲದೆ ಲೋಕಮೂಢದಿ
ಹೀನನಾದೆನು ಕುರುಡನು
ಭಾನುಬಿಂಬವ ಕಾಣದಂದದಿ
ನಾನು ತೊಳಲದೆ ಭವದೊಳು ||     ೨

ಸ್ವಾನುಭವಾಮೃತವ ಕಾಣಿಸಿ
ನೀನು ರಕ್ಷಿಸದಿರ್ದೊಡೆ
ಮಾನವತ್ವವು ವ್ಯರ್ಥವಪ್ಪುದು
ನೀನೆ ರಕ್ಷಿಸಿ ತೋರೆಡೆ ||   ೩

ಬಾಳುವಾಗಲು ಬದುಕುವಾಗಲು
ಮೇಳದೊಳಗಿಹ ನೆಂಟರು
ಆಲಿಪರೀಗಲಾರೂ ಬಾರರು
ಘಾಳಿಗೊಡ್ಡಿದ ಮೇಘವು ||  ೪

ಜಾಳು ಸಂಸಾರವನು ನಂಬಿ ನಿ
ರಾಳವಿಲ್ಲದೆ ಕೆಟ್ಟೆನು
ಶೀಲ ಸುಗುಣವನಿತ್ತು ಸಲಹು ಕೃ
ಪಾಳು ನಾ ಶರಣಾದೆನು || ೫

ಮಡದಿ ಮಕ್ಕಳು ಒಡನುದಿಸಿಹರು
ಎಡೆಯ ನೇಹಿಗರಿಷ್ಟರು
ಕೊಡುವ ಕಾಲದಿ ಸ್ವಾಮಿ ನೀನೆ
ನ್ನೊಡಯನೆಂದೋಲಿಪರು ||         ೬

ಬಡವನಾಗಿಯು ತಿರುಗು ವೇಳೆಗೆ
ನುಡಿಸಿ ನೋಡರು ಕುಡರು
ಅಡಿಗಡಿಗೆ ನಾ ನೆನೆರವೆ ರಕ್ಷಿಸು
ಬಿಡದೆ ಪುರುಪರಮೇಶ್ವರ ||          ೭

ಹರಿಹರಾಮಲ ಸಿದ್ಧಶಂಕರ
ಪುರುಷರೊಳಗುತ್ತಮ
ಕರುಣನಿಧಿ ಶಿವಶಂಭು ರಕ್ಷಿಸು
ನಿರಂಜನ ಸಿದ್ಧ ಗುಣಧಾಮ ||        ೮

೨೦೦. ಜಾಣರದೇವಾಜಿನಪತಿ

ಜಾಣರ ದೇವಾ ಜಿನಪತಿ ಜಾಣರ ದೇವಾ
ಏಣಾಕ್ಷಿಯರ ಲಾವಣ್ಯಕ್ಕೆ ಸಿಲುಕದ ಜಾಣರ ದೇವ ||    ಪಲ್ಲವಿ

ತನು ಮೂರ ಹೊದ್ದಿಯೂ ಹೊದ್ದೆ ನೀನದರಿಂದ ಜಾಣರದೇವ ಭವ್ಯ
ಜನರಿಗಲ್ಲದೆ ಅಭವ್ಯರಿಗೆ ಕಾಣಿಸಿಕೊಳ್ಳೆ ಜಾಣರದೇವ
ಜನನ ಮರಣ ಮುಪ್ಪು ಮುಟ್ಟಿಯೂ ಮುಟ್ಟೆ ನೀ ಜಾಣರದೇವ
ಜಿನಯೋಗ ಶಿವಯೋಗ ಸಿದ್ಧಯೋಗಕೆ ನಿಂತೆ ಜಾಣರದೇವ ||   ೧

ಷಡುದರುಶನ ಬಹುಮತಕೆ ನೀನೊಬ್ಬನೇ ಜಾಣರದೇವ ಕೈಯ
ಹಿಡಿದರೆ ಸಿಕ್ಕೆ ಧ್ಯಾನಕ್ಕೆ ಸಿಕ್ಕುವೆ ಜಾಣರದೇವ
ಬಿಡದೆ ಧ್ಯಾನಿಸಿದರೆ ಕೊಡುವೆ ಕೈವಲ್ಯವ ಜಾಣರದೇವ ನಿನ್ನ
ನಡೆ ಮೋಕ್ಷಗಾಮಿಗೆ ಮೆಚ್ಚು ಮೂಢಗೆ ಹುಚ್ಚು ಜಾಣರದೇವ ||    ೨

ಪರಮಚಿನ್ಮಯ ರೂಪು ಅಂಬರದಂತೆ ನೀ ಜಾಣರದೇವ ಶುದ್ದ
ಪುರುಷಾಕಾರ ನೀ ಮೂರು ರನ್ನಗಳಂತೆ ಜಾಣರದೇವ
ಗುರುದೈವ ಶಾಸ್ತ್ರ ತೀರ್ಥಂಗಳ ಫಲ ನೀನೆ ಜಾಣರದೇವ ನಿಜ
ಗುರುದೇವ ಚಿದಂಬರ ಪುರುಷ ನೀನೊಬ್ಬನೇ ಜಾಣರದೇವ ||    ೩