೧೮೨. ತಿಳುಹಿದರಿಲ್ಲಯ್ಯ

ತಿಳುಹಿದರಿಲ್ಲಯ್ಯ ನನ್ನವರಾಗಿ
ತಿಳುಹಿದರಿಂದುತನಕ ತೊಳಲುವೆನೆ ||        ಪಲ್ಲವಿ

ಹೀನವಿಷಯ ಸುಖವಿಷವೆಂದು ಭಾವಿಸೋ
ಜ್ಞಾನರಸವನೆ ಸೇವಿಸೋ
ತಾನೆ ಕೆಡುವ ಮೈಯ ತಪಕಾಗಿ ಸಲಿಸಿ ನಿ
ತ್ಯಾನಂದ ಪದವಿ ಪಡೆಯೆಂದು ||    ೧

ಕಾಕು ಕಥೆಗೆ ಕಿವಿಗೊಡದಿರು ದೇವ ಶ
ಲಾಕರ ಕಥೆ ನೀ ಕೇಳು
ಸಾಕು ಮನವ ಬರಿದೆ ಬಳಲಿಸದೆ ರ
ತ್ನಾಕರಾಧೀಶನ ಭಜಿಸೆಂದು ||       ೨

ರಾಗರೋಷವ ಬಿಡುಕಂದ ಕಡುಶಾಂತ
ನಾಗಿ ಕರ್ಮವ ನೀ ಗೆಲ್ಲೆಂದ
ಯೋಗಿ ಮಹೇಂದ್ರಕೀರ್ತಿಯಂತೆ ಕೃಪೆವಂತ
ನಾಗಿ ಕರ್ಮಾರಿಗೆಲ್ಲೆಂದು ಸದ್ಧರ್ಮವ ||        ೩

೧೮೩. ನಮ್ಮಮನೆಯೊಳಿಂದು

ನಮ್ಮ ಮನೆಯೊಳಿಂದು ಹಬ್ಬ ನಮಗೆ ಸಂದಣಿಬಹಳ
ನಿಮ್ಮನುಡಿಸುವರೆ ಹೊತ್ತಿಲ್ಲ ಹೋಗಿ ವಿಷಯಗಳಿರ ||   ಪಲ್ಲವಿ

ತನುವೆಂಬ ಮನೆಯೊಳು ಪರಮಾತ್ಮನೆಂದೆಂಬ
ಮನೆಯದೇವರ ಹಬ್ಬ ಆ ಹಬ್ಬಕಿಂದು
ನೆನೆಯದೆ ಮೀಯಬೇಕು ನಡೆಯದೆ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು ||     ೧

ನೆರವಿಯಿಂದಗಲದೇಕಾಂತದೊಳಿರಬೇಕು
ಮೆರೆಯಬೇಕಮಲಗುಣವೆಂಬ ವಸ್ತುಗಳ
ಪರಿಹರಿಸಿ ಕಳೆಯಬೇಕನ್ಯ ಚಿಂತೆಗಳ
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು ||    ೨

ನೋಡದೆ ಕಂಡು ನುಡಿಯದೆ ಪೊಗಳಿ ಬಾಯ್ದೆರೆದು
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವವಲ್ಲವಸಮಾನವದು ಧ್ಯಾನ
ರೂಢಿಯೊಳು ಹಂಸನಾಥನ ಭಜಿಸಬೇಕು ||   ೩

೧೮೪. ಘನವೆನಿನಗೆಮನವೇ?

ಘನವೆ ನಿನಗೆ ಮನವೇ? ಇದು ಬಹು ಘನವೇ?
ತನು ಸುಖಕಾಡುತ ಜಿನಪನ ಮರೆವುದು ಘನವೇ ||     ಪಲ್ಲವಿ

ಅನುದಿನ ಎಡೆಬಿಡದನಘ ಜಿನಪನೆ ಶರ
ಣೆನುತ ಸದ್ಧರ್ಮವ ತಳೆಯದೀ ಬುದ್ಧಿ ||        ೧

ವಿಷಯದಾಶೆಯಿಂ ಮನದೊಳು ಕೋಟಲೆಗೊಂಡ ಸ
ದೃಶ ಧ್ಯಾನವು ಪುಸಿಯೆಂಬೀ ಮಾಯೆ ||       ೨

ಹಂಬಲಿಸುತೆ ಹಲವನು ಮನದೊಳಗೆ ಚಿ
ದಂಬರ ಪುರುಷನ ನೋಡಲೆಳಸದಿಹುದು ||   ೩

೧೮೫. ಶೃಂಗಾರವಾಗಾತ್ಮಸುಮ್ಮನೇಕೆ

ಶೃಂಗಾರವಾಗಾತ್ಮ ಸುಮ್ಮನೇಕೆ ಇದ್ದೆಯೈ? ಮು
ಕ್ತ್ಯಂಗನೆಯ ಮದುವೆ ಶುಭಲಗ್ನ ಬಂದಿತು
ಚಿನ್ನವೆಂಬ ಕೆಂಪಿನಕಲ್ಲ ತೊಡಲವಳು ಮೆಚ್ಚಳು
ರನ್ನ ಮೂರರ ಭೂಷಣವ ತೊಡೆಲೋ ಮದುವಣಿಗ ||   ಪಲ್ಲವಿ

ನಿರ್ಜರೆ ಸಂವರೆಯೆಂಬ ಕುಂಡಲವ ಧರಿಸು
ನಿರ್ಜಿತಾತ್ಮನೆಂಬ ಚೊಕ್ಕ ತಿಲಕವನಿಕ್ಕು
ಊರ್ಜಿತ ಮೌನವೆಂಬ ಕಂಕಣಕಟ್ಟು ಸಂಗ
ವರ್ಜಿತ ಬಾಸಿಂಗವ ಕಟ್ಟೆಲೋ ಮದುವಣಿಗ || ೧

ಪರಮಧೈರ್ಯವೆಂಬ ಕಠಾರಿಹಿಡಿ ರಾಗ
ರೋಷ ಹಾವುಗೆ ಮೆಟ್ಟಿನಡೆ ಆತ್ಮ ಮಂಟಪಕೆ
ಧೀರ ಚಿದಂಬರ ಪುರುಷನ ನೋಡಿ ಕರ್ಮವೆಂಬ
ತೆರೆ ಜಾರಿತು ಮುಕ್ತಿ ಕೈವಿಡಿ ಶೋಭನ ಶೋಭನ ||     ೨

೧೮೬. ಸರಸ್ವತಿಧವಲವಕೊಡು

ಸರಸ್ವತಿ ಧವಲವ ಕೊಡು ಲಕ್ಷ್ಮೀ ಶೋಭನವ ಪೇಳು
ಪರಮಾತ್ಮ ರಾಜನಿಗೆ ಮುಕ್ತಿಕನ್ನೆಯೊಡನಿಂದು ಮದುವೆ ||       ಪಲ್ಲವಿ

ದ್ವಾದಶಾನುಪ್ರೇಕ್ಷೆಯೆಂಬ ಹನ್ನೆರಡು ಕಂಬದಲ್ಲಿ
ಆದರಿಸಿ ಮದುವೆಯ ಮಂಟಪ ರಾಜಿಸಿತು
ಆದರ್ಶಭಕ್ತಿಗಳೆಂಬ ಬಂಧುಗಳು ಬಂದಾರು ಸು
ನಾದ ಬಿಂದು ಬಿಂದುವೆಂಬ ವಾದ್ಯ ಮೊಳಗಿತು ||       ೧

ಷಡ್ದ್ರವ್ಯ ಪಂಚಾಸ್ತಿಕಾಯ ಸಪ್ತತತ್ವ ನವಪದಾರ್ಥ
ಬಿಡದೆಣಿಸಲಿಪ್ಪತ್ತೇಳು ತಾರಾಬಲಕೂಡಿತು
ಒಡನೆ ಶುಕ್ಲ ಧ್ಯಾನವೆಂಬ ಚಂದ್ರ ಬಲಸೇರಿತು ಕೈ
ವಿಡಿದನಹೋ ಚಿದಂಬರ ಪುರುಷ ಮುಕ್ತಿಕಾಂತೆಯನು ||          ೨

 

೧೮೭. ಚಿದ್ರೂಪನಮರೆಯದಿರು

ಚಿದ್ರೂಪನ ಮರೆಯದಿರು ಮನವೆ ಉ
ಪದ್ರವಕೆ ಬೆಚ್ಚದಿರು ತನುವೆ ||        ಪಲ್ಲವಿ

ಕೋಪಕ್ಕೆ ಗರ್ವಕ್ಕೆ ಹಾನಿಬಹುದು ಲೋಭ
ರೂಪಿಗೆ ಮಾಯಕ್ಕೆ ನಾಶವಹುದು
ಪಾಪ ಪುಣ್ಯವೆರಡಕ್ಕೆ ಕೇಡಹುದು ಜ್ಞಾನ
ದೀಪವೊಂದೆ ಆರದಿರುತಿಹುದು ||    ೧

ಮೋಹದ ಶಕ್ತಿಗೆ ಮುಪ್ಪಹುದು ಕೊಂ
ಬಾಹಾರ ಔಷಧವಾಗುತಿಹುದು
ಸ್ನೇಹ ಕೋಪಂಗಳಿಗೆ ಭಂಗವಹುದು ಸಿ
ದ್ಧೋsಹಂ ಭಾವನೆಯೊಂದಿಹುದು || ೨

ಕೀರ್ತಿಯಾಶೆ ಲಾಭದಾಶೆ ಮುಗಿದು ಲೋಕ
ವರ್ತನೆಯ ಭ್ರಾಂತೆನಿಸಿಹುದು
ಮಾರ್ತಾಂಡನ ಮಿಗುವ ಬಲುತೇಜವದು ತೀರ್ಥ
ನಾಥ ಚಿದಂಬರನ ಪೆಂಪಹುದು ||   ೩

೧೮೮. ಕೂಸಕಂಡರಿಯಿರೊ

ಕೂಸ ಕಂಡರಿಯಿರೊ ಬಲ್ಲವರೆಲ್ಲ
ಸಾಸಿರನಾಮದ ಶಶಿಕೋಟಿ ತೇಜವ
ಸೂಸುವ ಸುಜ್ಞಾನದ ಸುಖದ ನಿಧಾನದ ||    ಪಲ್ಲವಿ

ಜ್ಞಾನ ಸಮುದ್ರದೊಳಾಡುವ ಕೂಸು
ಜ್ಞಾನಿಯ ಹೃದಯದೊಳಡಗಿಹ ಕೂಸು
ಏನೆಂದು ನುಡಿಯದುಮ್ಮಾನದ ಕೂಸು
ತಾನೇ ಬಲ್ಲದು ತನ್ನ ಮಹಿಮೆಯ ಕೂಸು ||    ೧

ಲೋಕತ್ರಯವೆಲ್ಲ ನೋಡುವ ಕೂಸು
ಬೇಕಾದ ಮುನಿಗಳೊಳಾಡುವ ಕೂಸು
ಆಕಾರವುಂಟು ನಿರಾಕಾರ ಕೂಸು
ಸಾಕಾರ ದೃಷ್ಟಿಗೆ ತೋರದ ಕೂಸು || ೨

ತನುವಾಂತ ಮನೆಯೊಳು ಕುಳಿತಿರ್ಪ ಕೂಸು
ಘನ ಮೈಯನುಳ್ಳ ಚೆಲುವಾದ ಕೂಸು
ಬಿನಗು ಬುದ್ಧಿಗಳಿಗೆ ಸಿಲುಕದ ಕೂಸು
ಜಿನನಾಥ ತ್ರಿಜಗದೊಲ್ಲಭ ಕೂಸು ||  ೩

೧೮೯. ಬಲ್ಲಿದನೀನೆಂದುಬಡವರ

ಬಲ್ಲಿದ ನೀನೆಂದು ಬಡವರ ಬಾಯ್ಗಳ ಬಡಿಯದಿರೆಚ್ಚರಿಕೆ
ಜಳ್ಳಷ್ಟು ತಪ್ಪಿದರೆ ಖಳನರಕವ ಹೋಗುವೆ ನೀನೆಚ್ಚರಿಕೆ ||        ಪಲ್ಲವಿ

ಮಾಡು ದಾನಧರ್ಮ ಪರೋಪಕಾರವ ಮರೆಯದಿರೆಚ್ಚರಿಕೆ
ಕೇಡ ಬಯಸಿದರೆ ನಂಬಿದವರೊಳು ಕೆಡುವೆ ನೀನೆಚ್ಚರಿಕೆ
ಮೂಢರೊಳೊಡನಾಡಿ ಮುಂದುವರಿದು ಮುಳುಗಾಡದಿರೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆಮುಂದೆ ನಟನೆ ಬೇಡೆಚ್ಚರಿಕೆ ||          ೧

ಹೊನ್ನು ಹೆಣ್ಣು ಮಣ್ಣು ನಿನ್ನನೆ ವಂಚಿಸಿ ಹೋಗುವುದೆಚ್ಚರಿಕೆ
ಚೆನ್ನಾಗಿ ಗಳಿಸಿ ನಾ ಬದುಕಿದೆನೆಂದೆಂಬ ಚೇಷ್ಟೆ ಬೇಡೆಚ್ಚರಿಕೆ
ಮುನ್ನ ಮಾಡಿದ ಪುಣ್ಯ ಫಲದಿಂದ ಬಂದಿತು ಬೆರೆಯದಿರೆಚ್ಚರಿಕೆ
ಬೆನ್ನನೊದೆವ ಯಮದೂತರು ಬರುವರು ಮುಂದೆ ನೀನೆಚ್ಚರಿಕೆ || ೨

ಬಾಳು ಬದುಕು ಬಲದಿ ತಂದೆ ತಾಯ್ಗಳ ಬೈಯದಿರೆಚ್ಚರಿಕೆ
ಹಾಳು ಬದುಕಿಗಾಗಿ ಹಲಬರ ಕೂಡಣ ಹಗೆ ಬೇಡೆಚ್ಚರಿಕೆ
ಕಾಲನವರು ಬಂದು ಆವಾಗ ಕರೆವರೊ ಕಾಣೆಯದೆಚ್ಚರಿಕೆ
ಮೂಲೋಕಪತಿ ಶ್ರೀಮಂಧರೇಶನ ಚರಣವ ಮರೆಯದಿರೆಚ್ಚರಿಕೆ ||         ೩

೧೯೦. ನಿಜವರಿಯದಮನುಜ

ನಿಜವರಿಯದ ಮನುಜ ದನುಜ
ಸುಜನರಲ್ಲದವನ ಸಂಗ ಭಂಗ ದೇವ ||       ಪಲ್ಲವಿ

ದರುಶನವಿಲ್ಲದ ಮಾನವ ದಾನವ
ಪರಿಣಾಮವಿಲ್ಲದ ವ್ರತವು ವ್ಯರ್ಥ
ಕರುಣವಿಲ್ಲದ ಧರ್ಮ ಕರ್ಮ ಮನದಲ್ಲಿ
ಮರುಕವಿಲ್ಲದನಂಟು ಬರಿಯಗಂಟು ||         ೧

ಒಕ್ಕಲಗೋಳು ದೊರೆಗೆ ಹಾಳು ಮನೆಯೊಳು
ಮಕ್ಕಳಿಲ್ಲದ ಬಾಳು ವಂಶಹಾಳು
ರೊಕ್ಕವಿಲ್ಲದ ಶೆಟ್ಟಿ ಮಾಳ್ಪಬಿಟ್ಟಿ ಕರೆ
ದಿಕ್ಕದುಣ್ಣುವ ಕೂಳು ಬರಿಯ ಧೂಳು ||        ೨

ಖ್ಯಾತಿಯಿಲ್ಲದ ಬಾಳು ನೋಡೆ ಹಾಳು ಬಹು
ಪ್ರೀತಿಯಿಲ್ಲದ ಗಂಡ ಬೆಂಕಿ ಕೆಂಡ
ನೀತಿ ನಿಧಾನವಿಲ್ಲದ ನಾರಿ ಹೆಮ್ಮಾರಿ ಹಿರಿಯರ
ಮಾತ ಕೇಳದ ಬಂಟ ತಾನೆ ತುಂಟ ||         ೩

ದಾನವಿಲ್ಲದ ಭವನ ವನ ಮನದೊಳು
ಜ್ಞಾನವಿಲ್ಲದ ಪಾಠ ಬರುಡು ಓಟ
ಹೀನಮಾಡುವ ಪುಣ್ಯ ಕಳ್ಳನಾಣ್ಯ ತನ್ನ
ತಾನರಿಯದ ತಾಣ ಎಮ್ಮೆ ಕೋಣ || ೪

ಭಂಡನ ಶೀಲವೆದೆಯಶೂಲ ಚೆನ್ನಾಗಿ
ಖಂಡಿತವಿಲ್ಲದವನ ಮಾತು ತೂತು
ಉಂಡು ದೂರುವನವನೆ ಭಂಡ ಜೀವ ನೆರೆ
ಪಂಡಿತರಿಲ್ಲದಾ ಸ್ಥಾನ ಹೀನ ||       ೫

ಅಧಿಕವಿಲ್ಲದ ಗುಣ ಕಪಿಗಣ ಸಮರಕೆ
ಹೆದರುವ ವೀರ ಪಾಪಿ ಪೋರ
ಮದದಿಂದ ತನ್ನತಾ ಹೆಚ್ಚೆಂಬುದೇ ಹುಚ್ಚು
ಬಂಧನಲ್ಲದನ ಮೆಚ್ಚು ಹೊಟ್ಟೆಕಿಚ್ಚು || ೬

ಗುರುವ ನಿಂದಿಪ ದೋಷ ತನಗೆ ನಾಶ ತನ್ನ
ಹಿರಿಯರ ಶಾಪ ಘೋರಪಾಪ
ತರುಣಿಗೊಲಿದ ಗಂಡ ಬಲುಭಂಡ ಬಲು
ಮರುಳರ ಕೂಟವೆ ದಯ್ಯಕಾಟ ||    ೭

ವಂಚನೆಮಾಡುವ ಮಿತ್ರ ಶತ್ರು ಕೊಟ್ಟ
ಲಂಚದಾಸೆಯ ಭೂಪ ವ್ಯಾಘ್ರರೂಪ
ಹಿಂಚು ಮುಂಚರಿಯದ ಕೋಪಿ ತಾಪಿ ಗುರು
ಪಂಚಕವರಿಯದವನಸುವೆ ಪಶು ||  ೮

ಬಿಡದ ಕಷಾಯ ಸಂಯುತಯೋಗಿ ಭವರೋಗಿ
ಕಡು ದಯೆಯಿಲ್ಲದ ನರ ಪಾಮರ
ಅಡಿಗಡಿಗಾತ್ಮನ ಪೊಗಳದ ಕವಿ ತಾನೆ ಭವಿ
ಪಡೆಯದೆ ಬಯಸುವ ಸುಖಿಯೆ ದುರ್ಮುಖಿ || ೯

ಧರ್ಮವನೊಲ್ಲದ ಜನ ಭೂಮಿಗೆ ವಜನ
ದುರ್ಮತಿಗಳ ನೋಟ ಕರ್ಮದಾಟ
ಮರ್ಮಹೃದಯರ ನಗೆಯ ಹಗೆ ಜನಕೊಂದೆ
ಸ್ವರ್ಮೋಕ್ಷಪತಿ ನಿನ್ನ ಪಾದವೆ ಗತಿ || ೧೦

ಬರಿಯ ಡಂಬದಗುಟ್ಟು ಬೂದಿಯ ಹಿಟ್ಟು ಪುಣ್ಯ
ವರಿಯದವರ ತ್ರಾಣ ಮರುಳಗಾಣ
ಎರವಿನ ಸಿರಿ ಮಾತಿಗೆ ಗುರಿ ತಾನೀ
ನರರ ಹಮ್ಮಿನ ಬಾಳು ಕೊನೆಗೆ ಗೋಳು ||    ೧೧

ಅರುಹ ನಿನ್ನಯ ನಾಮವೆನಗೆ ಕ್ಷೇಮ ನಿನ್ನ
ಚರಣಕಮಲ ಭಕ್ತಿ ತಾನೆ ಮುಕ್ತಿ
ಪರಮ ಚಿದಂಬರಗೆರಗದ ಜೈನ ಪರಮಹೀನ
ನಿರಂಜನ ಸಿದ್ಧನೇ ಗುಣಬದ್ಧ ||       ೧೨