೧೧. ಹಂಸೆಹಾರಿದೇಕೊ

ಹಂಸೆ ಹಾರಿದೇಕೊ ಮನವೆಂಬ
ಹಂಸೆ ಹಾರಿದೇಕೊ
ಮಾಂಸಮಯ ತನು ಸುಖದ ಕೆಸರಲ್ಲಿ
ಕಾಂಸೆಯೇತಕೆ ಬೇಡ ಬಿಡುಬಿಡು|| ಪಲ್ಲವಿ

ಆವಾವ ವಸ್ತುಗಳನು
ಸೇವಿಸಿದ ಮೇಲೆ ನಷ್ಟ
ಆವಕಾಲಕು ತಿದ್ದಿ ಕೆಡದ ಸಂ
ಜೀವನಮೃತವನೆ ಏನು ನಿಚ್ಚ || ೧

ಮೂರು ತನುಗಳ ಬೇರು ಮಾಡು
ಬೇರೆ ಜಾತಿ ರೂಪನೊಳು
ಮೀರಿ ಕಡು ಸವಿದೋರುತಿದೆಡೆಗೆ
ಯಾರುವಂತೆ ಕೊಳತಾಮೃತವ || ೨

ಮೂಜಗದೊಳಗೆ ಸುತ್ತಿ
ಈ ಜನ್ಮ ಕೊಜಗಳನ್ನು
ಮಾಜ ಸವಿಗಂಡೆಯೂ ಅಪ
ರಾಜಿತೇಶನ ಕರುಣಾಮೃತ ತೀವಿದ || ೩

 

೧೨. ಆಡಿಬಾಆಡಿಬಾ

ಆಡಿ ಬಾ ಆಡಿ ಬಾ ಆಡಿ ಬಾ
ಆಡಿ ಬಾ ನೀ ಹಂಸೆ ಬೆಂದ
ಗೂಡು ನಿಜವಲ್ಲ ಮೇಲು
ನಾಡಿಗೆ ನೀ ಹೋಗಿ || ಪಲ್ಲವಿ

ಆಯಿದು ಹೊನ್ನ ಬೆಟ್ಟಗಳ ಪೂರ್ವ ಪಶ್ಚಿಮದಲ್ಲಿ
ಈರೈದು ದೇವ ದಶದಿಕ್ಕು ತಪ್ಪದೆ ಮತ್ತಲ್ಲಿ
ಮಯಿದೋರಿದ ಸಿದ್ಧರುಂಟು ನೀನವರ ಸುಧೆಯೆಂಬ
ನೆಯ್ದಿಲುಗಳ ಹೊಕ್ಕು ಹೂವಿನ ವಸಂತವಾ || ೧

ಮೇರುವಿದೇಹದಿ ಸಾರು ಸರ್ಗಕ್ಕೆಲ್ಲಾಗಿಸಿ ಮೇಲೆ
ಭೂರಿ ವಿಮಾನವ ದಾಂಟಿ ಮುಂದೆ ಮುಕ್ತಿಪುರದ
ಸಾರ ಸುಖಿಗಳ ಸಂಗವೆಂಬ ಪಾಲ್ಗಡಲಲ್ಲಿ
ಸಾರಿ ಮೂಡಿ ಮುಳುಗಿ ನಿನ್ನ ಮೃತದೋಕುಳಿಯಾ || ೨

ಹೋಗಿ ಬಂದು ನಿಚ್ಚದಾರಿಗಂಡಿದ್ದರೆ ಜವನೆಂಬ
ಬೇಗೆಯಟ್ಟಿದಾಗಲತ್ತ ನೋಡಿ ಬಾಳಬಹುದು
ಆಗೀಗಿವೆಂದೆನ್ನದೆ ನಿನಗಪರಾಜಿತೇಶ್ವರನ
ರಾಗರಸರಂಜಿತ ಪಾದಾಂಬುಜಗಳಲ್ಲಿ || ೩

೧೩. ವೈದ್ಯವಿದೇಕೊಕೂಡೊಂದು

ವೈದ್ಯವಿದೇಕೊ ಕೂಡೊಂದು ವಶ್ಯಗಳು ಧ
ರ್ಮದೊಳವೆ ಮನಸಿಗೆ ವೇದ್ಯ ವಾ
ದುದ ಮಾಡಿಕೂಳಲೆ ಮನುಜಾ || ಪಲ್ಲವಿ

ನಾನಾ ವಿಧಿಗೈವ ಪಾಪವೆಂಬರ್ಥದಲಿ
ಬೇನೆಗೆ ಜಪವೆಂಬ ಲೇಪವಿದೆ
ಮೇನಕೆ ರಂಭೆಯರೊಲಿಯಬೇಕಾದರೆ ನೂ
ರು ನೋಂಪಿಯ ಸ್ತ್ರೀವಶ್ಯವಿದೇಕೊ|| ೧

ದಾರಿದ್ರ್ಯವೆಂದೆಂಬ ಕ್ಷಯರೋಗಕೆ ಸಿಂ
ಧೂರವಿದೇಕೊ ವ್ರತ ಶೀಲವೆಂಬಾ
ಧೀರ ನೀ ಲೋಕದ ವಾಸ ಮಾಡಿಕೊಂಬರೆ
ಈರಾರು ತಪವೆಂಬ ಜಪವಿದೇಕೊ|| ೨

ಜ್ಞಾನತತ್ವವ  ಕಾಣೇ ಸದಮೋಹವೆಂಬ ಕ
ಣ್ಬೇನೆಗೆ ಗದ್ಯಾತ್ಮಂಜನವಿದೇಕೊ
ನೀನಪರಾಜಿತೇಶನನೊಲಿಸುವರಾತ್ಮ
ಧ್ಯಾನವೆಂಬುತ್ತಮ ರಾಜವಶ್ಯವಿದೇಕೊ|| ೩

 

೧೪. ಕೆಳಗೆಬಿದ್ದುಕುಳಿಕುಂಡು

ಕೆಳಗೆ ಬಿದ್ದು ಕುಳಿಕುಂಡು ಮೊಗ ಬಾಡಿ ಸವೆವರಯ್ಯ|| ಪಲ್ಲವಿ

ಆಳುದ್ದವಾದ ರೂಪಳೆಯದಗಲ ತಪ ಶೀಲಗೆಡಿಸಿದ ನೆಯ್ದದೆ
ಬಾಳು ವಿಷಯಕಿಕ್ಕಿ ಗೇಣುದ್ದವಾಗಿನ್ನು
ನಾಳೆ ತಾಯೊಡಲೊಳಗೆ ಬಾಳುವರೆಂತು|| ೧

ನೆರೆಸಂದಿಸಿತು ನರರಲ್ಲಿ ಕುಟ್ಟಿಯ ಹುಳು ತೋರಿದ
ಕ್ಕರಗಳಂತೆ ಅರಿದಲ್ಲಿ ಮುಕ್ತಿ ಸಂಪದವ
ಸಾಧಿಸದಿನ್ನು ಮರದು ಹಲವು ಯೋನಿಗೆ ಬೀಳುವರಿಂತು|| ೨

ತಪಕಾರಿದರೆ ದಾನಪೂಜೆಯುಂಟೆಷ್ಟ
ರ ಪುಣ್ಯವಿಲ್ಲದಿರೆ ನಮ್ಮ ಅಪರಾಜಿತೇಶನ
ಜಪಿಸಿ ಸುಖಿಗಳಾಗದೆ ನೋವವರಿಂತು||  ೩

 

೧೫. ಹೆಚ್ಚುಬದುಕಿನರರಾಯುಷ್ಯ

ಹೆಚ್ಚಿ ಬದುಕಿ ನರರಾಯುಷ್ಯ ನೂರು
ವೆಚ್ಚದಾದಲ್ಲಿ ನೋಡಿದರೇರುಪೇರು|| ಪಲ್ಲವಿ

ತೊಡಗಿ ಹನ್ನೆರಡಬ್ದ ಸೀಮೆಯೆಂಬ ತಪ್ಪು
ಗಡೆಗಡೆವತ್ತರಿಂ ನಾಲ್ವತ್ತು ಮುಪ್ಪು
ನಡುವೆ ಇಪ್ಪತ್ನಾಲ್ಕು ನಿದ್ರೆಗೆ ಮುಪ್ಪು
ಕಡು ಬದ್ಧರೆಪ್ಪತ್ತನಾಲ್ಕರಿಂದೊಪ್ಪು || ೧

ಅದು ತಾನು ಸ್ಥಿರವಲ್ಲ ಸ್ಥಿರವಾದೊಡೆ
ಕದನ ಲೋಕವಿಯೋಗ ರೋಗದ ಸೊಮ್ಮು
ಎದ್ದರು ತಪ್ಪದಿರೆ ತೆರಬಲ್ಲೆ
ಇದರೊಳಗೇತಕೊ ಭೋಗದ ಹೆಮ್ಮೆ|| ೨

ಸಟೆಯೊ ಸಿರಿಯೊದಾತ್ಮ ನಿನಗೇಕೊ ನಂಟು
ನಟುದೆರವಾದಪರಾಜಿತೇಶ್ವರನುಂಟು
ಕುಟಿಲ ವಿಷಯಗಳ ಗೆಲ್ವುದೆ ಬಂಟು
ಪಟುವಾಗಿ ಜಲ್ಮ ಸಮುದ್ರವ ದಾಂಟು||  ೩

 

೧೬. ಲೋಕಭರಿತನೀ

ಲೋಕಭರಿತ ನೀ ಸಲ್ವಕೆ ಬಂದೆಯಾ ಪರಮಾತ್ಮ
ಜಗದ್ಗುರವೇ ನೀ ಎನಗೆ ಸಂದೆಯಾ ಪರಮಾತ್ಮ
ಪಾಪಹರವೇ ನೀ ಭವದಲ್ಲಿ ನೊಂದೆಯಾ ಪರಮಾತ್ಮ|| ಪಲ್ಲವಿ

ಜಗದುಷ್ಟ ತೆರೆಪಡುವುಳ್ಳನ ನೀನು ಸೊಗಸು ಪವಿತ್ರ ಮಾ
ರಗಲದ ಮೈಯೊಳಡಗಿದೆಯಾ ಪರಮಾತ್ಮಾ|| ೧

ಅಂಬುಜ ಸುಖಕೋಜ ಕಿರಣಾತ್ಮ ಕರ್ಮ
ವೆಂಬರುಹುಗೊಳಗಾಡಿಯೂ ಸೊಗಸು ಪರಮಾತ್ಮ|| ೨

ಪವಿತ್ರ ರೂಪಾತ್ಮ ಹಸಿದೊಗಲದ ಕಂತಿಯ
ಹೇಸದಾಂತೆಯಾ ಪರಮಾತ್ಮಾ|| ೩

ಆವ ಭಾಧೆಯು ತಾಗಬಾರದ ಮಹಾ
ದೇವ ಮೃತ್ಯುವಿಗೆ ತುತ್ತಾದೆಯಾ ಪರಮಾತ್ಮಾ|| ೪

ರಾಜಿಸಿ ನಿನ್ನ ನೀ ನೋಡದೆ ಅಪ
ರಾಜಿತೇಶಗೆ ದೂರ ಹೋದೆಯಾ ಪರಮಾತ್ಮಾ|| ೫

೧೭. ಸಾಕಿನ್ನುಹಲವುಹಂಬಲಿನಾಸೆ

ಸಾಕಿನ್ನು ಹಲವು ಹಂಬಲಿನಾಸೆ ದೇವಾ ನೀ
ಸಾಕಿದಂದದೊಳೊಪ್ಪೆಯಪರಾಜಿತೇಶಾ ||    ಪಲ್ಲವಿ

ಕಾಡಿದೆನಯ್ಯಾ ನಾ ಕರಕರಸಿದು ನಿಂದು
ಬೇಡಿದೆ ಬೆರೆದೆ ದೇವ ನಿಂದು
ನಾಡ ಮಾತೇಕೆನ್ನ ಪದಕೆ ಜಯ
ನೋಡದೆ ನಿಮ್ಮ ಗುಣವ ಮೆರೆ ಕರುಣೆ || ೧

ತನ್ನ ಮೋರೆಯ ಕಂದನರಿಯದೆ ಮುನ್ನಲೊಬ್ಬ
ಕನ್ನಡಿ ಕಷ್ಟವೆಂದಿಡಿಸಿದಂತೆ
ತನ್ನ ದುಃಖ ತನಗಾರುಗೊಳಿಸಿದರೆ
ನಿನ್ನ ಮೇಳಲಿ ನೊಂದಿಸು ಪರಮಾತ್ಮಾ|| ೨

ಮೂಜಗದೊಳಗುಳ್ಳ ಸಕಲ ಸಂಪದ ನಿಮ್ಮ
ಪೂಜಿಸಿದವರಿಗೆ ತೃಣಮಾತ್ರವಯ್ಯ
ಮಾಜಲೇಕದರಿಂದ ನಮಗಿನ್ನಮೋನಮೋ ಅಪ
ರಾಜಿತೇಶ್ವರನೆಂಬ ಭಕ್ತಿಯೆ ಮುಕ್ತಿ||            ೩

 

೧೮. ಏನೆಂದುಹೇಳಲಿಸುಖ

ಏನೆಂದು ಹೇಳಲಿ ಸುಖವಾದೊಂದು ಸುಖವ
ಏನೆಂದು ಹೇಳಲಿ ಆತ್ಮಾಭಿಮುಖವ || ಪಲ್ಲವಿ

ನನ್ನಲ್ಲಿ ನಾನಡಗಿ ಕಣ್ಮುಚ್ಚಿ
ನನ್ನಿಂದ ನಾ ನೋಡಿದರೆ
ಮುನ್ನ ನಾ ಕಂಡು ಕಳೆದುದಲ್ಲಿ ನವಸುಖ
ತನ್ನ ತಾ ಹೊಳೆವುತಿದೆ ಪ್ರಭೆ
ಬಿನ್ನನೋ ಬೆಳಗುತಿದೆ ಅಂತರಂಗವು ತೊಳೆವುತಿದೆ || ೧

ಇಂಗಡಲೊಳು ಮುಳುಗಿದ
ಹೊಂಗದ ಬೆಳುದಿಂಗಳೊಳಡಗಿದಂತೆ
ಹಿಂಗದೆ ಸಿದ್ಧರಸದೊಳ್ಯೆ ಕ್ಯವಾದಂತೆ
ಮಂಗಲದೋರುತಿದೆ ಅಂತ
ರಂಗ ತಂಪೇರುತಿದೆ ಸರ್ವಸಂಗ ಮೈಚಾರುತಿದೆ ||  ೨

ಉಂಡುದಣಿಯಬಹುದಲ್ಲದೆ ಸುಖವ
ಕೊಂಡು ಸುಯಲರಿದು
ಕಂಡವರ್ಗವಲ್ಲದೆ ಬಾರದು ಒಬ್ಬ ಸು
ಪಂಡಿತನಿಗೆ ಬಹುದು ದೇಹ
ಮಂಡಲದೊಳಗಿಹುದು ಸ್ವರ್ಗ
ಖಾಂಡ ತಾನಾಗುತಿಹುದು || ೩

ಸಲೆ ಜಿಹ್ವೆ ನಯನ ನಾಸಿಕ ಕರ್ಣ ತೆರ ಸೋಂಕಿ
ನಲಿ ಮುನ್ನ ಕಂಡೆ ಸುಖ
ಹುಲು ಮಾನವರಿಗೆ ಕಾಣಿಸುತದೆ ಹೊಸತಾಗಿ
ಬಲು ಸುಖ ಹುಟ್ಟುತದೆ ಮುಕ್ತಿಲಲನೆಯ ಮುಟ್ಟುತದೆ || ೪

ಹರಿವ ಹೊಳೆವ ಜಯ ಮಾಡು ಪ್ರಾಕೃತವೆಂಬ
ಪರಮಾಗವ ನೋಡು ತಿರುಗಿ ಚಿದಂ
ಬರ ಪುರುಷನ ಕಾಣ್ಬಸ
ತ್ಪುರುಷನೊಬ್ಬನೆ ಧನ್ಯ ಮುನಿ
ವರೊಳಾತ್ಮನೆ ಮಾನ್ಯ ನಾಳೆ ಜಿನನ ಮನೋಶೂನ್ಯ ||     ೫

 

೧೯. ಸುಜ್ಞಾನಿಯಲ್ಲವೆ

ಸುಜ್ಞಾನಿಯಲ್ಲವೆ ಪರಮಾತ್ಮನು
ಅಜ್ಞಾನದಲ್ಲಿ ಸುಳಿವರೇ || ಪಲ್ಲವಿ

ಎಲು ಚರ್ಮ ಮಾಂಸ ಮಲದ ಮೈಯೊಳನಿರ್ದು
ಚೆಲುವನೆಂದು ಗರ್ವಿಸುವರೆ

ಹಲವು ಯೋನಿಯೊಳಗೆ ಹುಟ್ಟಿ ಬರುತಿರ್ದು
ಕುಲವಂತ ತಾನೆಂದು ನಡೆವರೇ ||  ೧

ಆಹಾರೊಂದಿನ ತಪ್ಪಿದರೆ ಬೀಳ್ವೆ
ಸಾಹಸಿಯೆಂದು ಬೀಗುವರೇ?
ದೇಹದಾಸೆಯೊಳಗಾದ ಬಾಳಿಗೆ
ನೀ ಹೀಗೆ ಹೇಸದಿರುವರೇ ||  ೨

ಮುಗಿಲೊಳಗಿರ್ದ ರವಿಯಂತೆ ಅಲ್ಲಿಯೆ
ಮಗೆ ಚಿದಂಬರ ಪುರುಷನ
ಬಗೆಗಂಡು ನೋಡಿ ಕರ್ಮವ ಸುಟ್ಟು ನೀ ಮುಕ್ತಿ
ಹೋಗುವಲ್ಲಿ ತಡೆವರೇ || ೩

೨೦. ನಿನಗೆಸೋತೆನಿಲ್ಲಿ

ನಿನಗೆ ಸೋತೆನಿಲ್ಲಿ ನಲ್ಲ ನಾಳೆ ನಾಳೆದ್ದು ನಿಂದ
ಮನೆಗೆ ಹಂಸಕಾಂತ ಬಹುಚಿಂತೆ ಬೇಡ ಭಾವಕಿ ||      ಪಲ್ಲವಿ

ಕಂಡು ಬಂದೆನವನ ಪರಿಯ ಕೇಳು ಪೇಳ್ವೆನು ಮಾಂಸ
ಪಿಂಡವೆಂದು ತನ್ನ ತನುವಿಗೋಚರಿಸಿದನು
ಭಂಡರೆರಗಿ ಮುಗಿಲೊಡಗಿದಂತೆ ತಾನೆಂದು ತನ್ನ
ಕಂಡು ಮೈಯ ಮರೆಯೊಳಾತ್ಮ ರೂಪ ಹಿಡಿದನು ||     ೧

ರತಿ ವಿಷಾದವೆಂಬ ಕುಂದಣಿಗಳು ನಿನ್ನನು ನಾಲ್ಕು
ಗತಿಯ ಹೆಂಗಳೆಡೆಗೆ ಕರೆವರೆಂದು ಬಿಟ್ಟನು
ನುತ ವಿರಕ್ತಿ ಕ್ಷಮೆಗಳೆಂಬ ನಿನ್ನ ಸುಖಿಯರ ಕೂಡೆ
ಅತಿ ವಿನೋದ ಮಾಡುತಾತ್ಮ ಪುರದೊಳೈದನೆ || ೨

ದುರಿತ ಮಲಿನ ಹಿಂಗುವಂತೆ ಧ್ಯಾನ ಜಲದಲಿ ಮಿಂದು
ವರಗುಣಂಗಳಿಂದ ತೊಟ್ಟು ಸೊಬಗು ಸೂಸೂತ
ಮರಣವೆಂಬ ನೆವದಿ ಹೊತ್ತ ಮೈಯ ಬೀಸಾಡಿ ಚಿದಂ
ಬರ ಪುರುಷ ಬಹನು ಚಿಂತೆ ಬೇಡ ಮುಕ್ತಿಕಾಮಿನಿ || ೩