೩೧. ಭಾವಿಸಿಹೇಳಿರಣ್ಣಾತ್ಮ

ಭಾವಿಸಿ ಹೇಳಿರಣ್ಣಾತ್ಮ ದೇಹದ
ಭಾವನೆಯುಳ್ಳವ ದೇವನೋ ಜೀವನೋ ||    ಪಲ್ಲವಿ

ಮನದೊಡನೈದಿಂದ್ರಿಯಗಳನಡಗಿಸಿ
ತನು ಮೂರನೆರಡ ನುಡಿಯನಗಲಿ
ತನಗೆ ತಾ ತನ್ನಲಿ ಬ್ರಹ್ಮಾನಂದವ
ಅನುಭವಿಸುವವ ಯೋಗಿಯೋ ಅಯೋಗಿಯೋ ||      ೧

ಬೋಧನೆ ನಾನೆಂದು ನಾನೆಂಬುದಳಿದು ಸ
ಮಾಧಿಯೊಳಗೆ ನಿಂತ ಸಮಯದಲ್ಲಿ
ವ್ಯಾಧಿ ಹಸಿವು ತೃಷೆ ಮೊದಲಾದ ಕವಿದ
ಬಾಧೆಗಳೆಲ್ಲವು ತನುವಿಗೋ ತನಗೋ ||      ೨

ಪರಮ ಸಂದರೆಯ ತೊಲಗಿಸಿ ಕರ್ಮಗಳ ನಿ
ಜ್ಜಾರಿಸುತಾಕ್ಷಣಾತ್ಮನೊಳು
ಬೆರಸುವ ಬೆಳಗ ನಿಟ್ಟಿಸುತ ಚಿದಂಬರ
ಪುರುಷನಾದವ ಭವಹರನೋ ಹರನೋ ||    ೩

೩೨. ನಿನ್ನವನೆಂದೆನ್ನಮನ್ನಿಸಾ

ನಿನ್ನವನೆಂದೆನ್ನ ಮನ್ನಿಸಾ ದೇವರ ದೇವ ||    ಪಲ್ಲವಿ

ಸಂದ ಮಾಯಾ ಮೋಹವೆಂಬ ಕನಕದ ಕಾಯ ಮೆದ್ದು
ಮಂದವಾಗಿ ಭಾಷ್ಯಕೆ ಬಿದ್ದು ನೊಂದಿಸು ನಾ
ನೊಂದ ನೋವು ನಿನಗಲ್ಲದಾರಿಗೆ ಮುದ್ದು
ಬಂಧುವೆ ಸಲಹೋಗಿನ್ನು ನೀನಿಂದು ||         ೧

ಮೆಲ್ದನರಿಯದೆ ಮುನ್ನ ನಾ ಮಾಡಿದ ಕರ್ಮದಿಂದ
ತಾಳಿದೆನು ಹಲವು ರೂಪ ಸಾರಿದೆ ಸಂಸಾರ
ದಲ್ಲಿ ನಾ ಮುನ್ನ ನೊಂದ ಸಂತಾಪ
ಪಾಲಿಸಾ ಪರಂಜ್ಯೋತಿಯ ಚಿದ್ರೂಪ ||       ೨

ಆ ಭಾವದನ್ನ ಚಿಂತೆ ನನಗೊಂದು ತೋರಿದ ವರುಷ
ಸ್ಥಿರ ನಿಮ್ಮ ಚಿಂತೆ ಹರುಷ ಅರರೆ
ಮೂರು ಜನ್ಮಲೋಕಕೆ ನೀನೊಂದು
ಪರುಷ ಪಾಲಿಸೋ ಗುರುವೇ ಚಿದಂಬರ ಪುರುಷ ||     ೩

೩೩. ದಾನಿಯಸಂಪತ್ತುಜಗದ

ದಾನಿಯ ಸಂಪತ್ತು ಜಗದ ಪೀಡೆಗೆ ಮಿತ್ತು ಸು
ಜ್ಞಾನಿಗೆ ನೀಡಿದಾ ತುತ್ತು ಸ್ವರ್ಗ ಸುಖದ ಬಿತ್ತು ||        ಪಲ್ಲವಿ

ಬಡವನ ದಾನ ಶಶಿ ಮರ್ತ್ಯಕನ ಸಮಾಧಾನ
ಕಡು ಶುಚಿಯುಳ್ಳನ ವ್ರತದ ವಿಧಾನ
ದೃಢ ಭಕ್ತಿಯುಕ್ತಿ ದೀಕ್ಷೆವಡೆದನ ಸುಜ್ಞಾನ
ನುಡಿ ಜಾಣನ ಮೌನ ಮುಕ್ತಿಗೆ ಸೋಪಾನ ||   ೧

ದೊರೆಯ ವಿವೇಕ ಯುಕ್ತಿ ಶಕ್ತಿ ಭಕ್ತಿ
ಸಿರಿ ಸೊಬಗುಳ್ಳನ ವಿಷಯ ವಿರಕ್ತಿ
ಗುರುವಿಗೆ ತೃಪ್ತಿಮಾಡಿ ತಾನುಂಬ ಸುಭಕ್ತಿ
ಪರಮಾತ್ಮಧ್ಯಾನ ವ್ಯಕ್ತಿನೇಮದಿಂದ ಮುಕ್ತಿ ||  ೨

ಮೊದಲಧ್ಯಾತ್ಮದ ಪಾಠ ಶುಭವೆರ ಕೂಡ
ಇದು ಪರವಿದು ನನ್ನದೆಂದರಿವಭೇದ
ಇದಕೆ ಮೈ ಬೇರಾತ್ಮನೊಳು ನಲಿದಾದ
ಚಿದಂಬರ ಪುರುಷನನೋದ ಕರ್ಮದೋರಾ || ೩

 

೩೪. ಸುಖವೆಂಬೆನನ್ನಸೊಬಗೆಂಬೆ

ಸುಖವೆಂಬೆ ನನ್ನ ಸೊಬಗೆಂಬ ನನ್ನ
ಅಖಿಳ ಸಂಪದವೆಂಬೆ ಗುರುವೇ ನಾ ನಿನ್ನ ||   ಪಲ್ಲವಿ

ಮುಕ್ತಿಯೆಂಬೆ ಮುಕ್ತಿಯ ದಾರಿಯೆಂಬೆ
ಮುಕ್ತಿಯ ಸುಖವೆಂಬೆ ಶಕ್ತಿ
ಯುಕ್ತಿಯ ನೆಲೆಯೆಂಬೆ ತಾ ಬಳಿಕ ನನ್ನ
ಭಕ್ತಿಯಿಂದ ನಿನ್ನನೆ ನಾಥನೆಂಬೆ ||   ೧

ಜ್ಞಾನನೆಂಬೆ ಜ್ಞಾನದರುಶನನೆಂಬೆ
ಜ್ಞಾನದರುಶನ ಚಾರಿತ್ರ ನೀನೆಂಬೆ
ಜ್ಞಾನದರುಶನ ಚಾರಿತ್ರ ತಪಂಗಳು ನೀನೆಂಬೆ
ನೀನೆ ನಾನೆಂಬೆ ಗುರುವೇ ||         ೨

ಗುರುವೆಂಬೆ ದೇವನೆಂಬೆ ಸಿದ್ಧಾಂತದ
ತಿರುಳೆಂಬೆ ತೀರ್ಥವೆಂಬೆ ನಾ ನಿನ್ನ
ಪರಿಪರಿಯೊಳಗಿಂತು ಕಂಡು ಚಿದಂಬರ
ಪುರುಷನೆಂಬೆ ನಿನ್ನೊನೊಳು ನೆಲೆಗೊಂಬೆ ||  ೩

೩೫. ದೇಹಕೆಟ್ಟರೆನಾಕೆಟ್ಟೆ

ದೇಹ ಕೆಟ್ಟರೆ ನಾ ಕೆಟ್ಟೆನೆಂದೆಂಬವ ಮೂಢ
ದೇಹ ಕೆಟ್ಟಡೆ ನಾ ಕೆಡೆನೆಂಬವ ಪ್ರೌಢ ||       ಪಲ್ಲವಿ

ತಿತ್ತಿಯೊಳಗೆ ಗಾಳಿಯ ಕೂಡಿ ಬಾಧಿಸುವಂತೆ ಮೈಯ
ಸುತ್ತಿನೊಳೆದಾತ್ಮನ ನೋಯಿಸುವರೋರಂತೆ
ತಿತ್ತಿ ಹರಿದ ಮೇಲೆ ಗಾಳಿಕೈವಶವಾಗದಂತೆ ಮೈಯ
ಪತ್ತುಗೆಯಿಂದಗಲಿದ ಮೇಲೆ ಮತ್ತಾ ಚಿಂತೆ ||  ೧

ತನಗಿಚ್ಚಾದರೆ ಭಸ್ಮವಹುದು ಮನೆಯೆಲ್ಲಾ
ಮನೆಯೊಳಗಿರ್ದ ತಾಪಕೆ ಶಕೆ ತಾಗಲಿಲ್ಲಾ
ಅನಲ ಖಡುಗ ವ್ಯಾಧಿ ಮೊದಲಾದ ಬಾಧೆಗಳೆಲ್ಲಾ
ತನ್ನ ತನುವಿಗಲ್ಲದೆ ಆತ್ಮನಿಗಾವ ಬಾಧೆಗಳಿಲ್ಲ ||        ೨

ಇದನರಿದಂತಾತ್ಮ ಬಾಧೆಗಳಿಲ್ಲವೆಂದು
ಬೆದರದೆ ತನ್ನಾತ್ಮ ಭಾವನೆಯೊಳಗೆ ತಾನಿದ್ದು
ಕ್ಷುದೆ ತೃಷೆ ಮೊದಲಾದ ಬಾಧೆಗಳೆನಗಿಲ್ಲವೆಂದು
ಚಿದಂಬರ ಪುರುಷನ ಧ್ಯಾನಿಸುವನೊ ಗುಣಸಿಂಧು ||    ೩

 

೩೬. ಸಾವಾರಿಗೆಹುಟ್ಟಾರಿಗೆ

ಸಾವಾರಿಗೆ ಹುಟ್ಟಾರಿಗೆ ಸಂಸಾರದ ಬದುಕ್ಯಾರಿಗೆ
ಜೀವಗಿಲ್ಲವಿವು ಮೈಯ ಸಂಬಂಧದಿಂದಲ್ಲದಣ್ಣ ||        ಪಲ್ಲವಿ

ದೇಹವೆಂಬ ಚೋಹ ತೊಟ್ಟಿದರಿದು ಬದುಕೆಂಬರು
ದೇಹವ ಬಿಟ್ಟರೆ ಸಾವೆಂಬರು ಮತ್ತೊಂದು
ದೇಹವ ತೊಟ್ಟರೆ ಹುಟ್ಟೆಂಬರಾತ್ಮನೊಂದು ಮೈಯ
ಚೋಹವ ಹೊಗದೆ ನಿಂದರದು ಮುಕ್ತಿಯೆಂಬರಣ್ಣ ||     ೧

ಮನೆಯಿಂದ ಮನೆಗೆ ಹೋಹಂತೆ ಜೀವಕಾಲ ತೊಟ್ಟು
ತನುವಿರದ ತನುವಿಗೆ ಹೋಗುತಿಹನು
ತನುವಗೆಡಿಸಿ ಮುಕ್ತಿಗೆ ಇದುವೆ ತಂತ್ರವ ತಾ
ನೆನೆಯದೆ ಮೈಮರೆದು ನೋವುತಿಹ ಕಾಣಿರಣ್ಣ ||       ೨

ಮರದಗ್ನಿ ಹೊಸೆದರೆ ತಾಗಿರ್ದ ಹೆ
ಮ್ಮರನ ಸುಟ್ಟರುಹುವಂತಾತ್ಮನ ಧ್ಯಾನಿಸಿ ತನ್ನಿಂದ
ಶರೀರ ಮೂರನು ಸುಟ್ಟು ಮುಕ್ತನಹುದು ಚಿದಂ
ಬರ ಪುರುಷನ ನೆಚ್ಚಿ ನಂಬಿ ನಿಚ್ಚ ಧ್ಯಾನಿಸಿರಣ್ಣ ||        ೩

 

೩೭. ಚಂದಮಾಚಂದಮಾ

ಚಂದಮಾ ಚಂದಮಾ ಏನೆಂಬೆನಾತ್ಮನ ಪರಿಣಾವ
ಚಂದಮಾ ಚಂದಮಾ ಬ್ರಹ್ಮಾಂಡಯೋಗಿಯ ನಡೆದಂದವೆಲ್ಲಿಯೂ ||      ಪಲ್ಲವಿ

ಕಣ್ಣ ಮುಚ್ಚಿಯು ಸೂಕ್ಷ್ಮಾರ್ಥ ಸೂ
ಕ್ಷ್ಮಾಣು ರೇಣಹುದು ಚಂದಮಾ
ಐದು ಬಣ್ಣವಳಿದು ಹೊಸ ಬಣ್ಣದೊಳೆ ಹೊಸೆದು ಚಂದಮಾ
ಬಣ್ಣಗಳಡಗಿಯು ಮಾಸದೆ ಇಹನದು ಚಂದಮಾ ಉಂಡ
ಉಣ್ಣದುಣ್ಣದನುಂಡು ತೃಪ್ತನಾಗಿ ಹಸಿದು ಚಂದಮಾ ||  ೧

ಪೊಳೆಯಿಂದಾನೆಯ ಪಿಡಿದು ಕಟ್ಟುವನದು ಚಂದಮಾ ಹತ್ತು
ಹೊಳೆಯಿಂದೊಳೆಗನೈಯ್ಸಿಕೊಂಡಿಹನದು ಚಂದಮಾ
ಒಂದು ಪಕ್ಷವಿಲ್ಲದಂಬರನೊಳಾಡುತಿಹನದು ಚಂದಮಾ
ಮೋಕ್ಷ ಸಂಹರೆ ನಿರ್ಜರೆಯ ಪಿಡಿಹನದು ಚಂದಮಾ
ಯೋಗ ಲಕ್ಷಣವಿದು ಚಿದಂಬರ ಪುರುಷನೆ ಬಲ್ಲ ಚಂದಮಾ ||     ೨

೩೮. ಏನ ಕಂಡು ಮೆಚ್ಚಿದೆ

ಏನ ಕಂಡು ಮೆಚ್ಚಿದೆ ನೀನೀ ಸಂಸಾರವ
ಅನುಭಾವ ನಿನಗಿದು ತರವೇ ನಿಜಾತ್ಮಾ ||    ಪಲ್ಲವಿ

ನಿರ್ಮಲ ಭಾವದ ನಿನ್ನ ಚಿನ್ಮಯ ರೂಪೆತ್ತ ಮಾಂಸ
ಚರ್ಮಮಯವಾಗಿ ನಿಂದ ನಿಲವಿದೆತ್ತ
ಧರ್ಮವೇ ಸ್ವರೂಪವಾದ ನಿನ್ನ ನಿಜವೆತ್ತ ಕಷ್ಟ
ಕರ್ಮಗಳ ಶಯವಶಲಾಡುವುದೆತ್ತ || ೧

ಮೂಲೋಕವ ಮುಸುಕುವ ನಿನ್ನ ಕರವೆತ್ತ ಸೆರೆ
ಸಾಲೆಯ ಸಂಕೋಚದಲಿ ಬಾಳುವುದೆತ್ತ
ಮೇಲೆ ನಿತ್ಯಾನಂದದ ಸಂಪದವೆತ್ತ ಪಂಚೇಂದ್ರಿಯ
ದೊಲನಡಿ ಬಾಳ್ವ ಬಡತನವಿದೆತ್ತ ||  ೨

ಕಾಮಿಸಿದರ್ಥವ ಲೋಕಕೆರೆವ ನಿನ್ನ ಗುಣವೆತ್ತ
ಪಾಮರನಂತಾಸೆಯಲ್ಲಿ ಬಾಳುವುದೆತ್ತ
ಶ್ರೀಮಂದರಸ್ವಾಮಿಯ ಕುಹೂರಕನಿದೆತ್ತ ಬಹು
ನಾಮದಲ್ಲಿ ಹುಟ್ಟಿ ಹೊಂದುತಿಹುದಿದೆತ್ತ ||      ೩

೩೯. ಒಲ್ಲೆನುನಿನ್ನಾತ್ಮಧ್ಯಾನವ

ಒಲ್ಲೆನು ನಿನ್ನಾತ್ಮ ಧ್ಯಾನವ ಸ್ವಾಮಿ ನಿಮ್ಮಲ್ಲಿಯೆ ಸುಳಿವೆನೆಂಬೆ
ಮೆಲ್ಲನೆ ಶ್ರೀಮಂದರಸ್ವಾಮಿ ತತ್ತವ ಸ್ತುತಿಸಿದೆ ಕೇಳಿರೋ ||       ಪಲ್ಲವಿ

ಶಿಲೆಯಲ್ಲಿ ಕಂಚು ಬೆಳ್ಳಿ ರತ್ನದಲಿ ಇಂಥ ಚೇತನದಿ
ಸೆಲೆ ನನ್ನನರ್ಚಿಸಿ ಭವ್ಯರು ಸ್ವರ್ಗಾದಿ ಫಲವ ಪಡೆಯುತಿಲ್ಲವೆ
ಎಲೆ ಭವ್ಯ ನಿನ್ನ ಚೇತವಹಾತ್ಮನೊಳೆನ್ನ
ನೆಲೆಗೊಳಿಸಿದರೆಂದು ಫಲದೊಳದುತ್ಕ್ರಷ್ಟ
ಧ್ಯಾನಿಸೆಂದಾಚೆಯ ಕಳಿಸಿದನೇಕಾಂತದಿ ||   ೧

ಸ್ವಾಮಿ ನಿನ್ನಂಗವಿದ ಶುಭ ನಾನಿನ್ನನತಿ ಮಹಿಮನೆಂದೆನೋ
ಆ ಮಾತು ಬೇಡವಯ್ಯೆಂದು ಶ್ರೀಮಂದರಸ್ವಾಮಿ ಮತ್ತಿಂತೆಂದನು
ಈ ಮಾತು ಬಿಡು ತನುವಿಂ ನೆರದೊಳಗೊಂಡು ಮೂರು ಮೈ ಸೋಂಕದೆ
ತಾ ಮನದೊಳಗಿಪ್ಪ ಶುದ್ಧಾತ್ಮದೊಳಗೆನ್ನ ನಮಿಸೆಂದರುಹಿದನು ||        ೨

ನನ್ನರೆಷ್ಟು ಕಂಡರೆ ಭಿನ್ನಭಕ್ತಿ ನಿನ್ನೊಳೆನ್ನನೆ ಕಂಡರೆ
ಭಿನ್ನವಿಲ್ಲ ಭಕ್ತಿಯದರಿಂದ ಮುಕ್ತಿ ಇಂ
ದೆನ್ನಾಜ್ಞೆ ಮಗನೆಯೆಂದು ತನ್ನ ಹಸ್ತವ
ನನ್ನ ಮಂಡೆಯ ಮೇಲೆಯಿರಿಸಿ ನನ್ನಂತೆ
ನೀನಾಗೆಂದು ಚೆನ್ನಾಗಿ ಹರಸಿ ಮಂದರಸ್ವಾಮಿ
ತಾನೆನ್ನನುದ್ಧರಿಸಿದನು ||   ೩

೪೦. ಮುಕ್ತಿಯೆಂಬುದುಲಿಹೊ

ಮುಕ್ತಿಯೆಂಬುದುಲಿಹೋ ಆತ್ಮ
ಶಕ್ತಿಯನರಿದು ಧ್ಯಾನಿಸಬಲ್ಲ ಸುಖಿಗೆ ||         ಪಲ್ಲವಿ

ಮರದೊಳಿದ್ದ ಕಿಚ್ಚು ಮರನ ಸುಡವ ಶಕ್ತಿ ಇರುತದೆ
ಇರ್ದು ತಾ ಹೊಸೆಯದೆ ಸುಡದು ಹೆಮ್ಮರದಿಂದ ಬಿಡದು ||       ೧

ತನು ಮೂರು ಸುಟ್ಟು ಮುಕ್ತಿಗೆ ಹೋಹ ಶಕ್ತಿ ಆ
ತ್ಮನೊಳಗುಂಟು ಧ್ಯಾನವಿಲ್ಲದ ಕಥನದಿಂದ ಪಾ
ಳ್ಮನೆಯಲ್ಲಿ ನಿನ್ನ ದುಃಖದಲಿಂತು ನೊಂದಾ || ೨

ಧ್ಯಾನಿಸುವರಾರು ಕೆಲಬರುಂಟು ತದ್ಪಾದ ಹಾನಿಯನರಿತು
ಧ್ಯಾನಿಸಿದೊಡೆ ಹೊಲ್ಲ ಅಮೃತಕ್ಕೆ ಸಲ್ಲ ಮಂದರಸ್ವಾಮಿ ಬಲ್ಲ ||  ೩