೮೧. ಹೀಗೆಮೈಮರೆದಿಹರೆ

ಹೀಗೆ ಮೈ ಮರೆದಿಹರೆ ಮೈಮರೆಯೊಳೆದಾತ್ಮನ
ನೋಡಲಿಲ್ಲವೆ ನೀವು ನೋಡಲಿಲ್ಲವೇ ನಿಚ್ಚ
ನೋಡಲಿಲ್ಲವೇ || ಪಲ್ಲವಿ

ನಿಮ್ಮ ನಮ್ಮ ದೇಹವೆಂಬ ದೇಗುಲದೊಳಗೆ ತುಂಬಿ
ನಿಮ್ಮಾತ್ಮನೆಂದೆಂಬ ದೇವರುಂಟು ನೋಡಿರೋ
ಗೂಢದೊಳಾಡಿರೋ ಧ್ಯಾನವ ಮಾಡಿರೋ || ೧

ಧ್ಯಾನ x x x ಕರ್ಮವ ಸುಡುವ ಸಾಮರ್ಥ್ಯ ನಿಮ್ಮಾ
ತ್ಮನಿಗುಂಟು ನಂಬಿರೆಲ್ಲರೂ ಭವ್ಯರೆ ಬಲ್ಲರು
ನಿರ್ಭಾವ್ಯರೊಲ್ಲರು ||       ೨

ಜಿನನ ಸಿದ್ಧನೆಂದು ಶುದ್ಧನೆಂದು ಕಣ್ಮುಚ್ಚಿ ನಿರಂ
ಜನ ಸಿದ್ಧನ ನೋಡಿ ಧ್ಯಾನಿಸಿರೋ ಕರ್ಮ
ವ ನೀಗಿರೋ ಮುಕ್ತಿಗೆ ಹೋಗಿರೋ || ೩

೮೨. ತೊಳಲದಿರುಕಂಡಕಡೆಗೆ

ತೊಳಲದಿರು ಕಂಡಕಡೆಗೆ ಚಿದ್ರೂಪ
ನೊಳಗೆ ನೀ ನಿಂತು ಸುಖಿಸಾ ಮನವೇ ||     ಪಲ್ಲವಿ

ಲಿಪಿಯೊಳಖಿಳವ ಚಿಂತಿಸಿ ಕೊನೆಕೊನೆಗೆ
ಕಪಿಯಂತೆ ಹರಿದಾಡದೆ ಮನವೇ
ವಪುವಿನೊಳಗಿರ್ದಾತ್ಮನ ನೀ ನೋಡಿ
ಅಪರಮಿತ ಸುಖವ ಸುಖಿಸಾ ಮನವೇ ||      ೧

ನಾನಗರಸುರ ಲೋಕವ ನೆನೆನೆನೆದು
ಕಾಗೆಯಂತೆಡೆಯೂಡದೆ ಮನವೇ
ರಾಗರೋಷವ ತೊಲಗಿಸಿ ಪರಮಾತ್ಮ
ಯೋಗದೊಳಗಿಂತು ಸುಖಿಸಾ ಮನವೇ ||    ೨

ಪರರಿಗಿದ ಸೂಚಿಸದಿರು ಸಿದ್ಧಾಂತ
ಪರಮ ತತ್ವದ ತಿರುಳದು ಮನವೇ
ಗುರು ನಿರಂಜನ ಸಿದ್ಧನ ಧ್ಯಾನಿಸೈ
ಸಿರಿಯಹುದು ಮುಕ್ತಿಯಹುದು ಮನವೇ ||     ೩

೮೩. ಒಸಗೆಯಹೇಳುಕಂಡಾ

ಒಸಗೆಯ ಹೇಳು ಕಂಡಾ ನಿನ್ನಾಣೆ ಸೂರ್ಯ
ಹುಸಿಯಲ್ಲ ಹೋಗಿ ನಮ್ಮವರ ಕಂಡರೆ ನೀನೊಂ
ದೊಸಗೆಯ ಹೇಳು ಕಂಡಾ ||        ಪಲ್ಲವಿ

ಇಂದು ನೀನಲ್ಲದ್ದು ನಾಳೆ ಪೂರ್ವವೀದೇಹ
ವೆಂದೆಂಬ ಕ್ಷೇತ್ರಕೆ ಹೊಹೊಹೊ ಹೋಗಾ
ಗಂಧಕುಟಿಯಲಿ ನಮ್ಮವರ ಕಂಡರೆ ನಿಮ್ಮ
ಬಂಧುವ ಕಂಡುಬಂದೆನು ಕ್ಷೇಮವೆಂದು ||     ೧

ಭರತ ಭೂಮಿಯಲ್ಲಿ ತಾನಿದ್ದನೆಂದೆನ್ನು
ಬರುತ ಕಂಡೆನು ಬಹಿರಂಗಕ್ಕೆ ಬೀಳಾ
ಪರಮಾತ್ಮ ಯೋಗದೊಳಿರ್ದ್ದನೆಂದೆನ್ನು ಬಾ
ಪುರೆ ಎಮ್ಮ ಕೊಂಡಾಡಿ ಹರುಷ ಮಾಡುವರು ||         ೨

ಧ್ಯಾನಿಸಿ ಧ್ಯಾನಿಸಿ ತನ್ನ ಮೈಯೊಳಗಾತ್ಮ
ಭಾನುವ ಕಂಡೆನುಂಡೆನು ದಿವ್ಯವ್ರತವ
ನಾನೆನ್ನ ಬರುತಿರಲೆನ್ನ ಕರೆದು ನಿಮ
ಗಾನಂದಮಪ್ಪ ಹೇಳೆಂದನೆಂದು ||   ೩

ಕರ್ಮಸಡಿಲವಾಯಿತು ಕಾಯ ಮುಪ್ಪಾಯಿತು
ಧರ್ಮ ಸುಸ್ತಿರವಾಯಿತಾತ್ಮಗೆ ಪ್ರಾಯವೇರಿತು
ಕರ್ಮಣಾಂಗವನು ತ್ಯಜಿಸಿ ದೇಹವನು ಧ್ಯಾನ
ಧರ್ಮದಿಂದೊಯ್ಯನೆ ಸುಡುತಿರ್ದನೆಂದು ||   ೪

ಮರಣದಾ ನೆವದಿಂದ ಬಿಸುಟು ಸ್ವರ್ಗ
ದರಸಾಗಿ ಬಂದು ನಿಮ್ಮೆಲ್ಲರ ಕಂಡು
ಪರಮ ಮುಕ್ತಿಗೆ ಹೋಹನವನ ಹೆ
ಸರು ರತ್ನಾಕರ ಸಿದ್ದನನ್ನು ಎಮ್ಮವರು ಮೆಚ್ಚುವರು ||   ೫

೮೪. ಸುಖಿಸಲಿಲ್ಲವೆನಿಜ

ಸುಖಿಸಲಿಲ್ಲವೆ ನಿಜ ಸುಖಿಸಲಿಲ್ಲವೆ
ಅಖಿಳವಾಡುವೆ ಆತ್ಮಧ್ಯಾನದೊಳಗೆ ನಿಂದು
ಸುಖಿಸಲಿಲ್ಲವೆ ||   ಪಲ್ಲವಿ

ನಾನಾ ಚಿಂತೆಯ ಬಿಟ್ಟು ತನು ಬೇರೆಂದು ಪರ
ಮಾನಂದಮಯನೆಂದಾತ್ಮನೊಳಗೆ ನಿಂದು
ಜ್ಞಾನವೆಂದೆಂಬ ಪಾಲ್ಗಡಲೊಳು ನಿಂದು ಸುಖಿಸಿದೆನಯ್ಯ ಬರಿ
ದೆ ನೋಡೆಯೆಂದೆಂದೂ ||  ೧

ಘಾಟಪಟ ಕಂಬ ಕುಂಬಗಳ ಬಹುಚಿಂತೆ ಶಬ್ದ
ದಟು ಮಡುವೆಲ್ಲ ವಿಕಲ್ಪದ ಸಂತೆ
ಸ್ಪಟಿಕದೊಳೆಸೆವ ಜಿನಪ್ರತಿಮೆಯಂತೆ ದೇಹದಲ್ಲಿ
ಹೊಳೆವಾತ್ಮನನೋರಂತೆ ||         ೨

ಮತಿಶಾಸ್ತ್ರ ಮೊದಲಾದ ಪಂಚ ಕೆಟ್ಟು ವಿಶುದ್ಧ
ನುತ ಬೋಧ ಸೂರ್ಯ ಮಾಡುವನು ಶುದ್ಧ
ಅತಿವಾದ ಬೇಡ ಧ್ಯಾನಿಸು ಪ್ರಬುದ್ಧಾ
ಆತ್ಮಹಿತ ಇವನೊಲಿದು ನಿರಂಜನ ಸಿದ್ಧಾ ||   ೩

೮೫. ನಿನ್ನೊಳಗೆನೀನಿಂತು

ನಿನ್ನೊಳಗೆ ನೀನಿಂತು ನಿಜಸುಖವನಾಡಿಸಿದೆ
ಭಿನ್ನ ಪದಾರ್ಥದೊಳೇತಕೆ ತೊಳಲುವೆ
ಬಿಡು ಬಿಡು ಸುಜ್ಞಾನಿ ||     ಪಲ್ಲವಿ

ಕೈಯ್ಯೊಳೊಸ್ತುವ ಪಿಡಿದು ಕಾಡೊಳರಸುವಂತೆ
ಮೈಯ್ಯೊಳುಗಾತ್ಮನ ನೋಡದೆ ಲೋಕದ ಮಾಯೆಯ ಬಳಲುವರೆ
ಅಯ್ಯಯ್ಯೋ ಆತ್ಮನೆ ಆರೆಂದು ಕಂಡಿರ್ದ್ದೆ
ಸಯ್ಯರಿದೊಳಗೀಕ್ಷಿಸಿದೊಡೆ ಕರ್ಮವ ಸಂಹರಿಸುವೆ ಕಾಣಾ ||    ೧

ಚರ್ಮಾಕ್ಷಿಗಳ ಮುರ್ಚ್ಚಿ ಚಲಿಸಿದೆ ಭಾವದಿ ನೋಡು
ಕಾರ್ಮುಗಿಲೊಳಗಣ ರವಿಯಂತಾತ್ಮನು ಕಾಯಾಗಿ ತೋರುವನು
ಕರ್ಮದೊಳು ದುರುತದಿ ತನಗೆ
ಧರ್ಮದೊಳಗ್ಗಳವಿದು ಕೈವಲ್ಯಕ್ಕೆ ದಾರಿ ಕಾಣಾ ಸುಮ್ಮಖಾ ||    ೨

ನೋಡಿದರೊಂದೆ ದಿನಕೆನೋದದಿ ಕಾಣಿಸನಾತ್ಮ
ಕೂಡೆ ಕೂಡಲಸದೆ ಪರಿಭಾವಿಸುತಿರೆ ಕುಶಲ ತೋರುವನು
ನಾಡೆಲ್ಲರ ಕೇಳದಿರು ನಂಬು ನೀ ಚೆನ್ನಾಗಿ ನಂಬು
ನಿರಂಜನ ಸಿದ್ಧನ ಮುಕ್ತಿಗೆ ನೋಯದೆ ಹೋಗಣ್ಣಾ ||     ೩

 

೮೬. ಆರುಂಟುಕರುಣಿಗ

ಆರುಂಟು ಕರುಣಿಗ
ಳಾರುಂಟು ಜಗದ್ಗುಪಕಾರಿಗಳು ಮ
ಹಾಋಷಿ ಮಹೇಂದ್ರಕೀರ್ತಿ ಮುನೀಂದ್ರ ಮ
ನೋರಥನಾಯಕನೇ ||    ಪಲ್ಲವಿ

ನೆಲ್ಲಿಯ ಕಾಯಿ ಸವಿದು ನೀರ್ಗುಡಿದರೆ
ಬೆಲ್ಲವೆನಿಸುವಂದದಿ ಕರ್ಮಗಳು ತ
ನ್ನಲ್ಲಿರ್ದುದ ದಂಡಿಸಿದ ಸಂಸಾರವಿದೆಲ್ಲವ ಹಿತವಲ್ಲದೆ
ಎಲ್ಲಿಯಡಿ ಸುಖವಾತ್ಮಗೆಲಿವ ಸುಖವಲ್ಲದೆ ಸುಖ
ವಿಲ್ಲ ಕಾರಣ ನೀವಿಲ್ಲಿಯೆ ಮುಳುಗದಲ್ಲಿಗೆ ಮೋಹಿಸಿರೋ ಎಂ
ದಲ್ಲಿಗರುಹಿದಯ್ಯಾ ಗುರುವೇ ||      ೧

ಮದ್ದುಗುಣಿಕೆಯನು ಮೆದ್ದವನಿಗೆ ಮ
ಣ್ಣಿದ್ದಲು ಮರನೆಲ್ಲವು ಹೊಂಬಣ್ಣದ
ಹೊದ್ದಿಗೆಯೆನಿಸುವ ಪರಿಯಲಿ ತನ್ನೊಳ
ಗಿದ್ದ ಕರ್ಮಂಗಳಿಂದ ಹೊದ್ದಾ
ರಧೆಯ ತೊಗಲೆಲುವಿನ ಮೆದೆಯಲಿ
ತಿದ್ದಿದ ಹೆಂಗಳು ಸುರನಾರಿಯರಂತೆ
ಮುದ್ದಿಸಿ ಮೋಹಿಸಿಕೊಂಡರಲ್ಲಯೆಂದು
ಬಿದ್ದರೆ ನೆನಹಿಯ್ಯೆ ಗುರುವೇ ||        ೨

ಅಂಗವನೆಚ್ಚದೆ ಆತ್ಮನ ಮರೆಯದೆ
ಕಂಗಳು ಹರಿದತ್ತಮನ ಹರಿದಾಡದೆ
ಸಂಗಡಿಸಿದ ಸುವ್ರತಗಳ ಬಿಡದೆ ಸು
ಸಂಗದೊಳಿರೆಂದು ಹಂಗುದೊರೆದು ಲೋಕವ ಸುಖಿ ಮಾಡಿ
ಶೃಂಗಾರಕವಿ ಹಂಸರಾಜ ಗುರುವೇ ಕೃ
ಪಾಂಗನೇ ಮಹೇಂದ್ರಕೀರ್ತಿ ಮುನೀಂದ್ರ ಗು
ಣಂಗಳ ಕಾಯೆ ಗುರುವೇ ಗುರುವೇ ||         ೩

೮೭. ಬಲ್ಲೆನೆಂಬವರುಸುರುಬಣ್ಣ

ಬಲ್ಲೆನೆಂಬವರುಸುರು ಬಣ್ಣಗಾರಿಕೆಯಲ್ಲಾ
ಎಲ್ಲರ ಸಮ್ಮತವಲ್ಲದೆ ಏಕಾಂತವಲ್ಲ ||         ಪಲ್ಲವಿ

ನಾಟಕದ ಮೊದಲೇನೋ ನರ್ತನದ ಕಲೆಯೇನೋ
ವಿಟನ ಸುಖದೆಡೆಗೈವ ಸಖಿಯರ ಕುರುಹೇನೋ
ನೋಟದಲ್ಲಿ ಹುಸಿಯೇನೋ ನೋಡಿದಾ ಬಗೆಗೆ ದಿಟವೇನೋ
ಕೂಟದಿಂದ ನೋಯಿಸಬಲ್ಲ ಹೆಣ್ಣಿನ ಹೆಸರೇನೋ ||     ೧

ಕೆಡದ ಭೂಷಣವೇನೋ ಕೇಡಿಲ್ಲದ ಸಿರಿಯೇನೋ
ಒಡನೋಡನಾಡುತ ಸುಡುವ ಪಂಚಾಗ್ನಿಗಳೇನೋ
ಕಡೆಗೆ ಮತ್ತಾಕಿಚ್ಚ ನಂದಿಸುವ ನದಿಯೇನೋ
ನುಡಿವಾತನ ರೂಪೇನೋ ನೋವಿನಾ ಕಲೆಯೇನೋ ||          ೨

ಮನಸಿಗೆ ಸಂಗಡವೇನೋ ಸಂಗಡದಲ್ಲಿ ಹಿತವೇನೋ
ಅನುದಿನ ತೊಳಲುವ ಸಾಕಾರದ ನಿಲುಗಡೆಯೇನೋ
ಕನಸಿನ ಫಲವೇನೋ ಶೃಂಗಾರ ಕವಿ ಹಂಸರಾ
ಜನಪತಿ ಕಡಲೋದೀಶನನೊಲಿಸುವ ಗುಣವೇನೋ ||  ೩

೮೮. ಕೇಡಿನೊಳಗಾದನಾಡಿ

ಕೇಡಿನೊಳಗಾದ ನಾಡಿ ನಾಟ್ಯವ
ನಾಡಿ ಹೊರಹೊರಗಾಡಿ ಬೊಂಬಲು
ಬಾಡಿ ಮತಿಯನೀಗಾಡಿ ಇಹದಾವ
ಗಾಡಿ ತನ್ನಾತ್ಮನ ನೋಡಬೇಡವೇ ||          ಪಲ್ಲವಿ

ಹಲವು ಚಿಂತೆಯ ತೋರದೇಕಾಂತದ
ಸ್ಥಳದೊಳಗೊಬ್ಬನೆ ಕುಳಿತು
ಸಲೆ ತನ್ನಾತ್ಮನ ಭಾವಿಸಿ ನೋಡಲು
ಹಳಚುವ ಕಂಗಳ ಮುಚ್ಚಿ ಆಸೆಯ ಕೊಚ್ಚಿ ಮನ
ದೊಳು ಹೆಚ್ಚಿ ಮುಕ್ತಿಯನಚ್ಚಿ ನೋಡಬೇಡವೇ ||         ೧

ಉದ್ದಿನೊಳಗೆ ಬೆಳೆಯ ತುಂಬಿದೊಳೆದ್ದ ಸ್ಫಟಿಕದ ಗೊಂಬೆಯು
ಹೊದ್ದಿಯೂ ಹೊದ್ದ ಮೈಯೊಳು ಸುಪ್ರಭೆ
ಇದ್ದಂತೋರುವರಾಗ ಕರ್ಮವಿಭಾಗ ಧ್ಯಾನ
ದುದ್ಯೋಗ ಇದು ಶಿವಯೋಗಿ ನೋಡ ಬೇಡವೇ ||      ೨

ದೇಹಿಗಳೆಲ್ಲರ ಮೈದಪ್ಪದೆ ಶ್ರೀ ಹಂಸೇಶ್ವರ
ನಿಹನಿಹನು ಭಾವಿಸಿ ನೋಡಿ ಬಾಹ್ಯವಿರಾಗಿ
ಮೋಹಿದ ಕರ್ಮವಿನಾಶ ಕೆಡದ ಸಂತಾಪ
ಮುಕ್ತಿ ನಿವಾಸ ನೋಡಬೇಡವೇ ||   ೩

೮೯. ಸಂಸಾರಸುಖದೊಮ್ಮೆ

ಸಂಸಾರ ಸುಖದೊಮ್ಮೆ ಒಳಿತೊಳೆತು ಕೇಳಿ
ಸಂಸಾರ ಸುಖವೆಂಬುದುತ್ತಮ ಸಾರ
ಹಂಸನನರಿದು ಭಾವಿಸುವುದೇ ಸಂಸಾರ
ಹಂಸನನರಿಯದ ಸುಖವೇ ದುಃಸ್ಸಾರ ||      ಪಲ್ಲವಿ

ಆತ್ಮನನರಿದು ಭೋಗಿಪಭೋಗ ಸಂಭೋಗ
ಆತ್ಮನನರಿಯದ ಭೋಗದುಬ್ಬೇಗ
ಆತ್ಮನನರಿದು ಕೂಡುವ ಯೋಗ ಸಂಯೋಗ
ಆತ್ಮನನರಿಯದ ಯೋಗ ಕುಂಯೋಗ ||      ೧

ಸುಜ್ಞಾನಿಗೆ ಬಂದ ಸಿರಿಯೆಲ್ಲ ಸಂಪತ್ತು
ಅಜ್ಞಾನಿಗೆ ಬಂದ ಸಿರಿಯೆಲ್ಲ ವಿಪತ್ತು
ಸುಜ್ಞಾನಿ ಮೋಹಿಪುದೆಲ್ಲ ಸಮ್ಮೋಹ
ಅಜ್ಞಾನಿಯ ಮೋಹವೆಲ್ಲ ದುರ್ಮೋಹ ||        ೨

ತನ್ನ ಬಲವನ ಜೀವನವೇ ಸಂಜೀವನ
ತನ್ನನರಿಯದಿರ್ದಡದು ದುರ್ಜೀವನವು
ತನ್ನ ತಾನರಿದಾಳ್ವ ರಾಜ ಸಾಮ್ರಾಜ್ಯ
ತನ್ನ ತಾನರಿಯದಿರ್ದಡದು ಕಷ್ಟ ರಾಜ್ಯ ||     ೩

ಆಧ್ಯಾತ್ಮ ಮುಟ್ಟಿ ಹಾಡುವ ಗೀತ ಸಂಗೀತ
ಆಧ್ಯಾತ್ಮ ಮುಟ್ಟಿ ಹಾಡದ ಗೀತ ದುರ್ಗಿತ
ಆಧ್ಯಾತ್ಮ ಮುಟ್ಟಿದ ಬೋಧೆ ಸುಬೋಧೆ
ಆಧ್ಯಾತ್ಮ ಹೊರತಾದ ಬೋಧೆ ದುರ್ಬೋಧೆ || ೪

ಭರತ ಚಕ್ರೇಶ್ವರ ರಾಜ್ಯ ಪಟ್ಟಣದೊಳಿರ್ದು
ವಿರತ ಭಾವನೆಯಿಂದ ಮುಕ್ತಿಗೆ ಸಂದನು
ನರಕಕ್ಕಿಳಿದನು ಸುಭೌಮನು ಚಕ್ರೇಶ್ವರ
ಗುರು ಚಿದಂಬರ ಪುರುಷನ ಬಿಡದಿರಾ ||       ೫

೯೦. ನಾನಾವಸ್ತುವಿಗೊಂದೂರ

ನಾನಾ ವಸ್ತುವಿಗೊಂದೂರ ಹಂಗು ಹಂಸ
ನೀ ನೋಂದನು ಹೊರೆಯ ಪಾಂಗು ||         ಪಲ್ಲವಿ

ಲೋಕವೆಲ್ಲವೊಂದೊಂದರ ಆಧಾರದೊಳಿಹುದೈಸೆ
ಆಕಾಶಕ್ಕೆ ಯಾವುದರಾಧಾರ ನೋಡ
ವಾಕಾಶಕ್ಕೆ ನೀನತಿ ವಿಸ್ತಾರ ನೀ
ಲೌಕಿಕ ದೃಷ್ಟಾಂತ ಉಪಚಾರ ||     ೧

ಆರ್ಯರ ಬೀಡಿಗೆ ರಾಜರ ಮನೆ ದೀಪವುಂಟು
ಸೂರ್ಯನ ಚಾವಡಿಗುಂಟೆ ದೀಪ ನೀನು
ಸೂರ್ಯಗೆ ಹೆಚ್ಚಿನ ಕಾಂತರೂಪ ನಿನ್ನ
ಕಾರ್ಯವರ್ಗ್ಗೆ ಗೋಚರ ನಿರ್ಲೇಪ ||  ೨

ಯತ್ನದೆಣ್ಣೆ ಹಣತೆ ಬತ್ತಿ ಹೊರೆದಾ ದೀಪದಂತಲ್ಲ
ರತ್ನದೊಂದು ದೀಪದಂದದಲಿರುವೆ ನೀನು
ರತ್ನಾಕರ ಸಿದ್ಧನ ಶ್ರೀಗುರುವೆ ದೇವ
ರತ್ನ ಹಂಸೇಶ್ವರ ಸುಜ್ಞಾನದ ತರುವೇ ||       ೩