೧೨೧. ಕಾಯವದಂಡಿಸಬೇಕಾದರೂ

ಕಾಯವ ದಂಡಿಸಬೇಕಾದರೂ
ಪಾಯ ಬೇಕು ತಪಸೀ ||    ಪಲ್ಲವಿ

ದೇಹ ಬಡವಾಗಬೇಕು ಶಕ್ತಿಗೆಡಬಾರದೊಮ್ಮೆ x x x
ತಾ ಹೆಚ್ಚಲಿ ಜಡ ಭಾರವಿರಬಾರದು
ವಾಹಕರು ದಂಡಿನ ಕುದುರೆಯ ಸಲಹುವಂತೆ
ಸಾಹಸಗುಂದದೆ ತಪಸು ಮಾಡಬೇಕು ||      ೧

ನೋಡಿದರಿಗುಗ್ರ ತಪವಾಗಿ ಕಾಣಿಸಬೇಕು ತಾ
ಮಾಡುವ ತಪಸು ಲೀಲೆಯಾಗಬೇಕು ತನಗೆ
ನೋಡಿದರಂಜಿದರು ಹಾವಾಡಿಗನಂಜದೆ ಹಾವ
ನಾಡಿಸಿದಂದದೊಳು ತಪಸು ಮಾಡಬೇಕು || ೨

ಶಕ್ತಿಗೆ ತಕ್ಕಷ್ಟು ವಿರಕ್ತಿಗೂಡಿ ತಪಸು ಮಾಡಬೇಕು ಕ್ರಮದಿ
ವ್ಯಕ್ತನಾಗಿ ನೋಡುತಿರಬೇಕು ಪರಂಜ್ಯೋತಿಯನು
ಮುಕ್ತಿ ಮಾರ್ಗವಿದು ಶ್ರೀ ಮಂದರಸ್ವಾಮಿಯಾಣೆ ||      ೩

೧೨೨. ಕಾವುದೆನ್ನಶ್ರೀಹಂಸ

ಕಾವುದೆನ್ನ ಶ್ರೀ ಹಂಸನಾಥ ||        ಪಲ್ಲವಿ

ಅಕ್ಷರಭರಣ ನಿರಕ್ಷರ ಭೋದಪ ಪಕ್ಷಯ ಪಾವನಗಂಗಾ
ಲಕ್ಷ ಕೋಟಿಕೋಟಿ ಸೂರ್ಯ ಪ್ರಕಾಶ ಕಟಾಕ್ಷಿತ ತೇಜೋ ರಂಗಾ
ಮೋಕ್ಷ ಕಾರಣ ರೂಪ ಮೋಕ್ಷ ಸನ್ಮುನಿಗಳ ಸುಕ್ಷೇಮ ಹೃದಯ ಸಂಗಾ
ದಕ್ಷರದಕ್ಷ ದೇವರದೇವ ಜಯ ಜಯ ರಕ್ಷಿಸು ಪ್ರಾಣಲಿಂಗ ಸ್ವಾಮಿ ||        ೧

ಕಾಲನಗಂಡ ಕಾರ್ಯದ ಮಿಂಡ ಕ್ರೋಧ ಶಾರ್ಧೂಲ ಮರ್ದನ ವೈಭವ
ಲೀಲೆ ಯೌವ್ವನ ಜರೆ ತ್ರಿಪುರ ನಿರ್ಧೂಮ ಧ್ಯಾನಾಲಿಲಿಢಾ ಸುಖ ಪ್ರಭಾವ
ಕಾಳಕೂಟೋಪಮ ವಿಷಯವನುಂಡು ಮೂಚ್ಛಾಲಂಬನ ಗೆಟ್ಟಭಾವ
ಲೀಲಾ ಮಾತ್ರದಿ ಮೋಕ್ಷ ದುರ್ಗವನಾಗಳೆ ಕೋಳುಗೊಂಡತಿ ವೈಭವವಾ ||         ೨

ಪರಮಾತ್ಮ ಪರಮೇಶ ಪರಬೊಮ್ಮ ಪರಶಿವ ಪರವಸ್ತು ಚಿನ್ಮಯನೆ
ಸ್ಮರಹರ ಭವಹರ ಸಂಹರ ದುರಿತಂಜಯನೆ
ಶರಣಾಗು ಸಲಹು ಪ್ರಸನ್ನನಾಗೆನ್ನನುದ್ಧರಿಸು ನಿಶಾಮಯನೆ
ಗುರು ಹಂಸನಾಥ ರತ್ನಾಕರಸಿದ್ಧನ ಗುರುವೇ ಮೃತ್ಯುಂಜಯನೆ ಸ್ವಾಮಿ ಕಾವುದೆನ್ನ ||        ೩

೧೨೩. ಕುರುಹಹೇಳಿನೂಬಾ

ಕುರುಹ ಹೇಳಿನೂ ಬಾ ಕುರಿತುದ ಹೇಳಿನೂ ಬಾ
ಕೊರವಂಜಿಯಲ್ಲ ನಾ ಸರಸತಿ ಕಾಣಯ್ಯ ||    ಪಲ್ಲವಿ

ಕೇಳಕ್ಕ ನೀನು ಉತ್ತಮ ಸತಿಯಹುದು ಇಂದು
ಬಾಲಕಿಯರಂತೆ ನೀ ಹೊರಗಾಡ ಸಲ್ಲಾ
ಮೂಲೋಕದರಸನಲ್ಲಾ ನಿನ್ನರಸ ತನುವೆಂಬ ನಿ
ನ್ನಾಲಯದೊಳಗೈದನೆ ನೀನೋಡಿರುದುಂಡಿ ||         ೧

ಅಕ್ಕ ನೀನೆಂದೆಂದು ನಿನ್ನರಸನ ಅಗಲದಿರು ಮುಂದೆ
ಮಿಕ್ಕಿದಾವಧಿಜ್ಞಾನ ಸುಜ್ಞಾನರೆಂಬ
ಮಕ್ಕಳ ನಿನಗಿಹರು ಸಂಪತ್ತಿನೊಳೋಲಾಡುವೆ ಪೇ
ಳಕ್ಕ ತಲೆ ಮಣಿಯ ಸಿರಿವಂತೆ ಗುಣವಂತೆ ||  ೨

ಅದರಿಂದ ಮುಂದೆ ನಿನಗೆ ಅಡಿಗಡಿಗೆ ಸಿರಿಯದು
ದದನು ಹೇಳಿನು ಚನ್ನಾಗಿ ಕೇಳಮ್ಮಾ
ಪುದಿದ ಔಷಧಿ ಋದ್ಧಿ ಚಾರಣತೆ ಮೊದಲಾದ ಸಂ
ಪದವಹುದು ಕಾಣೆ ಪ್ರವೀಣೆ ನಿನ್ನಾಣೆ ||        ೩

ಅಂಬರದಂದಲಿ ಬಯಲಾ
ದಂಬರ ಸುಜ್ಞಾನಿಯಹುದು
ತುಂಬಿದ ಚಿನ್ಮಯನು ಪುರುಷಾಕಾರನಿಂದೂ
ಚಿದಂಬರ ಪುರುಷಾಕಾರ ಕೆಟ್ಟು ||    ೪

ಉರ್ವಿಯೊಳವರಿವರ ಜಾಳಿಸಿ ಹೊಟ್ಟೆಯ ಹೊರೆವ
ಪೂರ್ವದಲಿ ಬಂದ ಕೊರವಂಜಿಯಲ್ಲಾ
ಪೂರ್ವವಿದೇಹದೊಳೆಸೆವ ಶ್ರೀಮಂದರಸ್ವಾಮಿಯ ವಾ
ಕ್ಪೂರ್ವೆಯಲಿ ಬಂದವಳು ನಂಬೆನ್ನ ಮಾತಾ ||          ೫

೧೨೪. ಕೊಲೆಹುಸಿಯುಕಳವು

ಕೊಲೆ ಹುಸಿಯು ಕಳವು ಪರದಾರ ಅತಿಕಾಂಕ್ಷೆಗಳ
ಸಲೆ ವಿಸರ್ಜಿಸಿ ಸಮುದ್ರಾಧಿ ಪರಮೇಶ್ವರನ
ನಲವಿನಲಿ ಧ್ಯಾನಿಸಲು ಸ್ವರ್ಗಾದಿ ಮೋಕ್ಷಗಳ
ಸುಲಭದಲಿ ಪಡೆಯಬಹುದೈ ಮನುಜ ||       ಪಲ್ಲವಿ

ಕೊಲೆಯೆಂಬುದೀಗ ತನ್ನಯ ಕೊಲೆಗೆ ಕೊಟ್ಟ ಬೆಲೆ
ಕೊಲೆ ತನ್ನ ಕೊರಳೆದೆಯ ಬಿಡದೊತ್ತಿ ಕೊಲುವ ಕೊಲೆ
ಕೊಲೆಯು ಹಿಂಸಾವೃತ್ತಿ ಚರಣಕ್ಕೆ ಹೊತ್ತ ಹೊಲೆ
ಕೊಲೆಯು ಅಂತಕನ ಸಂಕೋಲೆ ||  ೧

ಕೊಲೆ ಕರ್ಮರಾಜನೆಂದೆಂಬ ಲುಬ್ಧಕನ ಬಲೆ
ಕೊಲೆ ಘೋರ ದುರಿತ ದುಷ್ಟ ಮೃಗಗಳಿಪ್ಪ ಮಲೆ
ಕೊಲೆ ನಿಗೋದತ್ಯಂತ ಬಹುಘೋರ ನರಕ ನೆಲೆ
ಕೊಲೆಯನದರಿಂದ ನುಳಿಯೈ ಆತ್ಮಾ ||       ೨

ಪುಸಿ ತನ್ನ ಮುರಿದು ನುಂಗುವ ಮೃತ್ಯುದೇವಿಯಸಿ
ನಿಜೈಶ್ವರ್ಯ ಲಕ್ಷ್ಮೀ ಮುಖಾಂಬುಜಕೆ ಶಶಿ
ಪುಸಿಯು ಸುಜ್ಞಾನರಮನೆಗೆಡರಾದ ರಕ್ಕಸಿ
ಪುಸಿ ಪುಣ್ಯ ಮಾರ್ಗದಲಿ ನೆಟ್ಟ ಕಬ್ಬಿಣದರಸಿ
ಪುಸಿಯಲಾಗದದು ನಂಬಿಸಿ ||       ೩

ಪುಸಿ ವಿಮಲಕೀರ್ತಿ ಕಾಂತೆಯ ಮುಖಕೆ ತೊಡೆದದ ಮಸಿ
ಪುಸಿ ಸಕಲ ಸುವ್ರತದ ಫಲವವ ಕೆಡಿಸುವುದು ಈ
ಪುಸಿ ಪೊಲ್ಲಮೆಂದು ಮನದೊಳಗೆ ನಿಶ್ಚೈಸಿ ನೀ
ಪುಸಿಯೆ ಕನಸಿನಲಿ ಮರೆಯೈ ಆತ್ಮಾ ||       ೪

ಕಳವು ತನ್ನಲ್ಲಿ ಪೊಕ್ಕದೆಯಲ್ಲಿ ಕಳಕಳವು
ಕಳವು ಕೇಳಿದ ಕಂಡೆಯಾ ಲೋಕಲೋದಳಿವು
ಕಳವು ಕೈಕಾಲು ಕಿವಿ ಮೂಗು ಕಣ್ಗಳ ಅಳಿವು
ಕಳವು ವರ್ಣಗಳ ಸುಳಿವು ||          ೫

ಕಳವು ಕಡುದುಃಖದಾವಾಗ್ನಿಗೊಡ್ಡಿದ ವನವು
ಕಳವು ಸಂಸಾರ ಘೋರಾಂಬುರಾಶಿಯ ಸೆಳವು
ಖಳ ಕಳವು ಕಡುಪೊಲ್ಲಮೆಂದಾತ್ಮ ತತ್ವಗಳಿವು
ಕಳವನದರಿಂದನುಳಿಯೈ ಆತ್ಮಾ ||  ೬

ಪರದಾರರೊಳು ಸ್ನೇಹ ಪರಮ ಪಾಪದ ಗೇಹ
ಪರನಾರಿಯರ ಸಂಗ ಪರಮಾಯುಷ್ಯಕೆ ಭಂಗ
ಪರವನಿತೆಯರ ಕೂಟ ಪರಗತಿಗೆ ತೆಗೆದೋಟ
ಪರಸತಿಯ ನಗೆಯು ಬಲು ಹಗೆಯು ||        ೭

ಪರವೆಣ್ಗಳಿಗೆ ಸೋಲ ಪ್ರತ್ಯಕ್ಷ ಎದೆಶೂಲ
ಪರನಾರಿಯರ ಮೇಳ ಪತಿತ ಕೊರಳಾ ಗರಳ
ಪರಮಾತ್ಮವಿದನರಿತು ಪರವೆಳ್ಗಳಂ ತೊರೆದು
ಪರಿಶುದ್ಧನಾಗಿ ಬಾಳೈ ಆತ್ಮಾ ||     ೮

ಅತಿಕಾಂಕ್ಷೆ ಯಾವಂಗೆ ಅತಿಕ್ಲೇಶ ಆತಂಗೆ
ಅತಿಕಾಂಕ್ಷೆ ಯಾವಂಗೆ ಅತಿ ದುಃಖ ಆತಂಗೆ
x x x x x x x x x x x x x x
ಅತಿಕಾಂಕ್ಷೆಯಾಗದೆಂದು || ೯

ಕ್ಷಿತಿಯೊಳಗೆ ಬಹಳ ಸನ್ಮತಿಯುತರು ಮೆಚ್ಚುವಂ
ತತಕಾಂಕ್ಷಿಯಂ ಬಿಟ್ಟು ಮತಿ ಬುದ್ಧಿಗಳವಟ್ಟು
ಪ್ರತಿಯಾಗಿ ಪಡೆದಾದಿ ಹಂಸನಂ ಭಜಿಸಿ ಸ
ದ್ಗತಿಪಡೆದು ಮುಕ್ತನಾಗೈ ಆತ್ಮಾ ||   ೧೦

 

೧೨೫. ಚಿದ್ರೂಪನಧ್ಯಾನವೆಂಬ

ಚಿದ್ರೂಪನ ಧ್ಯಾನವೆಂಬ ಹಡಗನೇರಿ ಸಂಸಾರ
ಸಮುದ್ರವನೆ ದಾಂಟಿ ಮೋಕ್ಷದ್ವೀಪಗೆ ಹೋಗಾತ್ಮನೆ ||  ಪಲ್ಲವಿ

ಸಾವುಹುಟ್ಟುಗಳೆಂಬೆರಡು ಹೆಣ್ಣು ಗಂಡು ತೆರೆಗಳು
ಆವಾಗ ತಾವು ಮಕ್ಷುಧೆಯೆಂಬ ವಡಬಾಗ್ನಿ
ತೀವಿದ ಸಂಸಾರವೆಂಬ ಮೀನು ಮೊಸಳೆ ಸರ್ಪಂಗಳು
ಈ ವಿಕಾರವೆಂಬ ಕರ್ಮಕಡಲೊಳೇಕೆ ಮುಳುಗಿದೈ ||   ೧

ನಿನ್ನಾತ್ಮವೆಂಬ ಹಡಗಿಗೈವತ್ತೇಳು ಛಿದ್ರವುಂಟು
ಚೆನ್ನಾಗಿ ತ್ರಿಷಷ್ಟಿಗಳಿಂ ಛಿದ್ರವನೆ ನೀ ಮುಚ್ಚಿ
ಮುನ್ನ ಹೊಕ್ಕ ಪಾಪವೆಂಬ ನಿರನಾತ್ಮ ಧ್ಯಾನವೆಂಬ
ಹೊನ್ನ ತಟ್ಟೆಯಲಿ ಚೆಲ್ಲಿ ವೋಜೆಯಿಂದ ನಡೆಸೊ ||      ೨

ಹೀಗೆ ಆತ್ಮಧ್ಯಾನವೆಂಬ ಹಡಗನೇರಿಕೊಂಡು ಹೋಗು
ಹೋಗಲಾ ದಾರಿ ಮೋಕ್ಷವೆಂಬ ದ್ವೀಪಕ್ಕೆ ಹೋಗುವದು
ರೋಗ ಮುಪ್ಪು ಸಾವು ಹುಟ್ಟು ಆವ ಬಾಧೆ ಇಲ್ಲದಲ್ಲಿ
ಶ್ರೀ ಗುರುಚಿದಂಬರ ಪುರುಷನಾಣೆ ಮಹಾನಂದಾ ||    ೩

೧೨೬. ಜ್ಞಾನಿಹೊರಗೊಂದ

ಜ್ಞಾನಿ ಹೊರಗೊಂದ ಚಿಂತಿಸದಿರಾ ಹೊರಗೊಂದ
ಚಿಂತಿಸದಿರೆರಡು ಕಂಗಳ ಮುಚ್ಚಿ ಮಿರುಪ ಸು
ಜ್ಞಾನ ದೃಷ್ಟಿಯಲಿ ನಿನ್ನಯ ಮಯ್ಯ ಮರೆಯಲಿರ್ದಮಲಾತ್ಮನಂ
ನೋಡು ಭವಪಾಶ ಪರಿಪಟ್ಟು ಮುಕ್ತಿಯಹುದೂ ||       ಪಲ್ಲವಿ

ಉತ್ತಮಾಂಗಂ ಎನ್ನಂ ನಿಚ್ಚಮೆಂಬೀ ಭೇದ ಮೈಗೈಸಿ ನಿನಗವಿಲಾ
ನೆತ್ತಿಯಿಂದುಂಗುಷ್ಟ ತನಕ ಸರ್ವತ್ರ ನೀ
ನುತ್ತಮಾಂಗನೆ ಪ್ರಾಕಾನಾಂಗನೆ ಶುಭಾಂಗನೆ
ವೃತ್ತದ್ರದ್ಭೋದ ಶಕ್ಯವಗಹನೆ ಸೂಕ್ಷ್ಮ ನಿರ್ಲೇಪ x x x ಬಾದಾಂಗನೈ ||   ೧

ಉಂಗುಷ್ಟ ಮೊದಲಾಗಿ ನೆತ್ತಿ ಕಡೆಯಾಗಿ ಸರ್ವಾಂಗದಲಿ ನೋಡು ಸ
ರ್ವಾಂಗದಲ್ಲಿ ತಿಳಿದು ಸರ್ವಾಂಗದಲಿ ಸುಖಿಸಿದು ನಿಜಾನುಭಾವರಮ್ಯ ಚಿತ್ತಾತ್ಮಾ
ಸಂಧಾನ ರಮ್ಯಂ ಕಂಗಳೆರಡರ ಬೊಂಬೆಯೊಳಗೆಷ್ಟ ಕಾಣ್ಬೆ ಹೃದ
ಯಾಂಬು ಜಡಜಡ ಮನದೊಳೆಷ್ಟು ತಿಳಿವೆ ಭಂಗುರದ ||         ೨

ಪಂಚೇಂದ್ರಿಯದೊಳಷ್ಟು ಸುಖಿಸುವೈ ಬಿಡುಬಿಡಿದು ಪಿಸುಣರಂಗಂ
ಇಂದಿಷ್ಟು ಮರತೆ ನೆನಲೇಕೆ ನೀನು ಧ್ಯಾನಿಸಲು ನಿನ್ನಂದೆನಗೆ
ಮುಕ್ತಿಯೇ ಅಲ್ಲಲ್ಲಾ ನನಗೆ ನಿನ್ನಿಂದ ಶಿವದಾದರೇನು ಜಿನಮತ
ಯಥಾರ್ಥದೊಪ್ಪುದದರ ಸಹಜಾ ಸಂದೇಹ ಬೇಡ ನಂಬೆನ್ನಾಣೆ ||          ೩

ನಿನ್ನಾಣೆ ಮುಂದೆನ್ನ ಗುರು ಚಿದಂಬರ ಪುರುಷನಾಣೆ ಎಂದ
ಭಯವಿತ್ತನೆನ್ನಪ್ಪಾಜಿ ಪರಮ ಶ್ರೀ ಮಂದರಸ್ವಾಮಿಯಾಣೆ ||      ೪

೧೨೭. ಜಿನಜಿನಜಿನಎನ್ನಿರೋ

ಜಿನಜಿನ ಜಿನ ಎನ್ನಿರೋ ನೀವೆಲ್ಲರು
ಜಿನಜಿನ ಜಿನ ಎನ್ನಿರೋ
ತನುಮನ ವಚನವ ವ್ಯರ್ಥಕ್ಕೆ ನೀಗದೆ ||       ಪಲ್ಲವಿ

ಜವನ ಬಾಧೆಗಳನ್ನು ಜಯಿಸಬೇಕಾದರೆ
ಜಿನಜಿನ ಜಿನ ಎನ್ನಿರೋ
ಭವಣೆ ಪಡಿಸುವ ಪಾಪವ ಪರಿದಿಡುವರೆ
ಜಿನಜಿನ ಜಿನ ಎನ್ನಿರೋ ನೀವೆಲ್ಲರು ||         ೧

ಶಿವ ಪದವಿಯ ನೀವು ಪಡೆಯಬೇಕಾದರೆ
ಜಿನಜಿನ ಜಿನ ಎನ್ನಿರೋ
ಭವರೋಗ ಕೆಡಿಸುವ ಹಿರಿದಾದ ಜಪವಿದು
ಜಿನಜಿನ ಜಿನ ಎನ್ನಿರೋ ನೀವೆಲ್ಲರು ||         ೨

ಆಗಮ ಸಿದ್ಧಾಂತಗಳ ಮುಖ್ಯ ಜಪವಿದು
ಜಿನಜಿನ ಜಿನ ಎನ್ನಿರೋ
ನಾಗೇಂದ್ರ ಬಣ್ಣಿಸಲರಿಯದ ಜಪವಿದು
ಜಿನಜಿನ ಜಿನ ಎನ್ನಿರೋ ನೀವೆಲ್ಲರು ||         ೩

ಉಪಮೆಗೆ ನಿಲುಕದ ಸುಖವೀವ ಜಪವಿದು
ಜಿನಜಿನ ಜಿನ ಎನ್ನಿರೋ
ಜಪಿಸುವರಿಗೆ ಆತ್ಮ ಸಿದ್ಧಿಯ ಜಪವಿದು
ಜಿನಜಿನ ಜಿನ ಎನ್ನಿರೋ ನೀವೆಲ್ಲರು ||         ೪

ಅಪರಾಧ ಕೋಟಿಗೆ ಪರಿಹಾರ ಜಪವಿದು
ಜಿನಜಿನ ಜಿನ ಎನ್ನಿರೋ
ಅಪರಾಜಿತೇಶನ ಕಾಣಬೇಕಾದರೆ
ಜಿನಜಿನ ಜಿನ ಎನ್ನಿರೋ ನೀವೆಲ್ಲರು ||         ೫

 

೧೨೮. ತಾನುತನ್ನರೂಪು

ತಾನು ತನ್ನ ರೂಪು ತನ್ನ ಧ್ಯಾನದಿಂದ ಕಂಡ ಮೇಲಿ
ನ್ನೇನು ಬೇಕೊ ಮತ್ತಿನ್ನೇನು ಬೇಕೊ ||         ಪಲ್ಲವಿ

ಆಸೆ ರೌದ್ರ ದುರ್ಮೋಹನಂಗಳ ಕಡೆಗೊತ್ತಿ ಸೂಸಿ
ಸೂಸುವ ಸುಜ್ಞಾನ ರೂಪ ಶುದ್ಧನಾಗಿ ಕಂಡ ಮೇಲಿನ್ನೇನು ಬೇಕೊ ||       ೧

ಕಂಗಳ ಮಾನವನೊಮ್ಮೆ ಭಾರಿ ಸೂರೆಗೊಂಬೊ ಬೆಳ
ದಿಂಗಳ ಬೊಂಬೆಯ ತನ್ನ ಕಣ್ಣ ತುಂಬ ಕಂಡ ಮೇಲಿನ್ನೇನು ಬೇಕೊ ||      ೨

ಸೋಜಿಗವಿದೊಂದು ಮುನ್ನ ಕಂಡುದಿಲ್ಲಿಲ್ಲವಾದಿ ಅಪ
ರಾಜಿತೇಶ್ವರನ ರೂಪು ತನ್ನೊಳಗಿಂತು ಕಂಡ ಮೇಲಿನ್ನೇನು ||   ೩

೧೨೯. ತುಂಬಿದಪಟ್ಟಣವನು

ತುಂಬಿದ ಪಟ್ಟಣವನು ಪೊಕ್ಕು ನೀವೆಲ್ಲ ನಡುವೆ ತುಂಬಿ
ತುಂಬಿದವರು ಮೂರು ಮನೆಯೊಳಗೆಲ್ಲ ತುಂಬಿ ||      ಪಲ್ಲವಿ

ಕರಿದು ಬಿಳಿದು ಕೆಂಪು ವರ್ಣವಾಗಿಹುದೊಂದು ತುಂಬಿ
ತಿರುಗುತಿಹುದು ಈರೇಳು ಲೋಕವನೆಲ್ಲದೊಂದು ತುಂಬಿ
ಬೆರಸದರ್ಭನಂತೆ ನಾನಾ ವರ್ಣದೊಂದು ತುಂಬಿ
ತರುಣಿಯರಾರು ಮಂದಿಯ ಭೋಗಿಸುತಿಹುದೊಂದು ತುಂಬಿ ||  ೧

ಮೂರು ಮುಖವು ಅಯಿದು ಬಾಯೊಳಗುಂಬುವದೊಂದು ತುಂಬಿ
ತೋರುತಿಹವು ಕವಿಯೆಂಟು ಕಾಲೆಳರದೊಂದು ತುಂಬಿ
ಮೂರು ಹಸ್ತವು ನಾಲ್ಗಣ್ಣಿಂದ ಮೆರೆವುದೊಂದು ತುಂಬಿ
ಹಾರುವ ಹತ್ತು ರೆಕ್ಕೆಗಳಿಂದ ಮೆರೆವುದೊಂದು ತುಂಬಿ || ೨

ತುಂಬಿಯನರಸ ಹೋದವರಾರು ಮಂದಿಯ ಹೊಟ್ಟೆ ತುಂಬಿ
ತುಂಬಿಗಲ್ಲದೆ ಮತ್ತಾರಿಗೂ ತಿಳಿಯದು ಪ್ರಾಣ ತುಂಬಿ
ತುಂಬಿಯನರಿವರೆ ಶ್ರೀಮಂದರೇಶನವೊಲಿವೆ ತುಂಬಿ
ತುಂಬಿಯ ನರಸುವ ಹಂಬಲ ಮರೆಯಿರೊ ನೀವೆಲ್ಲಾ ನಡುವೆ ತುಂಬಿ ||    ೩

೧೩೦. ತೋರವ್ವಕೆಳದಿ

ತೋರವ್ವ ಕೆಳದಿ ಸಾರಾತ್ಮರೊಡೆಯನ
ಕಾರುಣ್ಯರೂಪನ ತೋರವ್ವ ಕೆಳದಿ
ವಿರಕ್ತಿಯ ತೊರೆದನ ಮುಕ್ತಿಯ ರಮಣನ
ಮಂದರವಾಸನ ಕಂದರ್ಪ ವಿಜಯನ
ಅಂಗಜ ವಿಜಯನ ಮಂಗಲ ಮಹಿಮನ ತೋರವ್ವ ಕೆಳದಿ ||      ಪಲ್ಲವಿ

ಚಂದಿರ ರವಿ ಶತಕೋಟಿ
ಸೌಂದರೆಗಾವುದು ಸಾಟಿ
ದಂದುಗಾಂಬುಧಿಯನು ದಾಂಟಿ
ನಿಂದಿಹ ನಿತ್ಯಾನಂದನ ಬೇಗದಿ ||   ೧

ಜ್ಞಾನಸುಧಾಂಬುಧಿ ಚಂದ್ರ
ಭೂನುತ ಸದ್ಗುಣ ಸಾಂದ್ರ
ಧ್ಯಾನದರ್ಪಕಹಮಿಂದ್ರ
ಶ್ರೀನಿಧಿ ಸಂಸುಖ ಪೀನಪಯೋನಿಧಿಯೆ ||     ೨

ಕ್ರೂರಾತ್ಮರಿಗತಿ ತಪ್ತ
ಮೂರು ಲೋಕಕೆ ತಾನಾಪ್ತ
ಯಾರಿಗೂ ತೋರದ ಗುಪ್ತ
ಸಾರಥಿಯಪ್ಪೊಲು ಬಾರದಿ ಬೇಗದಿ ||         ೩

ನಿರ್ಮಲ ಸುಜ್ಞಾನ ರೂಪ
ದುರ್ಮತಿ ತಿಮಿರ ಪ್ರದೀಪ
ಕರ್ಮವ ಗೆಲಿದ ಪ್ರತಾಪ
ಮರ್ಮವ ತೋರ್ವ ಸದ್ಧರ್ಮ ಚಕ್ರೇಶನ ||     ೪

ವರವೇಣುಪುರಿಯೊಳು ನೆಲಸಿ
ಚಿರಭವ್ಯರಿಷ್ಟವ ಸಲಿಸಿ
ನಿರುತದಿ ಸ್ತುತಿಗಳ ಕಲಿಸಿ
ನೆರೆದಿಹ ನಿತ್ಯನಿರಂಜನ ಸಿದ್ಧರಾ ||   ೫