೧೫೧. ಪಾರಿತಾತ್ಮನೆಚ್ಚರಿಕೆ
ಪಾರಿತಾತ್ಮನೆಚ್ಚರಿಕೆ || ಪಲ್ಲವಿ
ಮೂರು ಕೋಣೆಯ ದಾಂಟಿ ಸಿರಿ ತನ್ನ ವಕ್ಕಿ
ಆರೇಳರ ಬೇಳುವೆಯ ತಳಿದು
ಮೂರು ಕೋಣೆಯ ರತ್ನವ ಕಳಬಂದರು
ಆರು ದಳದ ತಳವಾರರೆಚ್ಚರಿಕೆ || ೧
ಹತ್ತು ಮಗ್ಗಲ ದಾಂಟಿ ಸುತ್ತ ತನ್ನವನಿಕ್ಕಿ
ಹತ್ತೆಂಟರ ಬೇಳುವೆಯ ತಳಿದು
ಮತ್ತೆ ಬಚ್ಚಿಟ್ಟು ರತ್ನ ಕಳ ಬಂದರು
ಹತ್ತು ದಳದ ತಳವಾರರೆಚ್ಚರಿಕೆ || ೨
ಹದಿನೆಂಟು ಮಾಯದ ಹೊಗರುಗತ್ತಲೆಯೊಳು
ಸದಮಲ ಜ್ಯೋತಿಯ ಬೆಳಕ ತುಂಬಿ
ವಿಧವನರಿದು ಹರಿಧನಕೊಳಗಾದರು
ಚದುರ ನೀ ಕಾಯೊ ಚಿದಂಬರ ಪುರುಷಾ || ೩
೧೫೨. ಪುಣ್ಯಫಲಾಆಹಾ
ರಾಗ: ನಾದನಾಮಕ್ರಿಯಾ ತಾಳ: ಆದಿತಾಳ
ಪುಣ್ಯಫಲಾ ಆಹಾ ಪುಣ್ಯಫಲಾ
ನರದೇಹ ಪಿಡಿದು ಜಿನಮತದೆ ಜನಿಸುವುದು || ಪಲ್ಲವಿ
ಸೇವ್ಯಾಸೇವ್ಯವನರಿತಿರಬಹುದು ಸು
ಭವ್ಯರ ಗೋಷ್ಠಿಯೊಳಿರಬಹುದು
ದಿವ್ಯ ವ್ರತವನಾಂತು ನೋಡಲುಬಹುದು ಮುಂ
ದಿವ್ಯಯ ಪದವನು ಪಡೆಯಲುಬಹುದು || ೧
ಸಿರಿವಂತ ದಾನವ ಮಾಡಲುಬಹುದು ಶಾಸ್ತ್ರ
ಪರರಿಗೆ ಉಪದೇಶಿಸಬಹುದು ಇನಿತು
ದೊರೆಯದಿರ್ದೊಡೆ ಮಾಳ್ಪ ಜನರ ಪೂಜೆಯ ಕಂಡು
ಪರಿಣಾಮ ಶುದ್ಧಿಯ ಪಡೆಯಲುಬಹುದು || ೨
ಪೂವಿಂದ ಪರಮನ ಪೂಜಿಸಬಹುದು ಒಮ್ಮೆ
ಭಾವನೆಯಿಂದಲಿ ಭಾವಿಸಬಹುದು
ಜೀವಶುದ್ಧಿಯ ಮುಂದೆ ಕಾಣುವ ಪದಿನಾರು
ಭಾವನೆಗಳನು ಭಾವಿಸಬಹುದು || ೩
ಭೋಗದಿ ವಿರಕ್ತಿಯದೋಲು ಯೋಗಿಯಾಗಿ ಮ
ಹಾಗುಣ ಪಡೆದು ನಡೆಯಲುಬಹುದು
ಆಗಮ ಸಂಸಿದ್ಧನಾದರೆ ಮಹಾಯೋಗಿ
ಯಾಗಿ ಕರ್ಮಗಳ ಖಂಡಿಸಬಹುದು || ೪
ಮಂಗಲ ರತ್ನತ್ರಯ ದೊರಕಿದರೆ ಮು
ಕ್ತ್ಯಾಂಗನೆಯೊಡನೆ ಮೋಹಿಸಬಹುದು
ಶೃಂಗಾರ ಕವಿಯಾಣ್ಮ ಕಡಲಾದಿ ಜಿನರಾಜ
ಸಂಗದೊಳೈಕ್ಯವಾಗಿ ಬಾಳಲುಬಹುದು || ೫
೧೫೩. ಬಯಿದವರಾರೊನಿನ್ನ
ಬಯಿದವರಾರೊ ನಿನ್ನ ಪಾಪವವೊಯಿದು ನೋಯಿಸಿತೊ ನಿನ್ನ ದಿಟಕೆ
ಬಾಯಿದೆರೆದು ನುಡಿದರೆನ್ನ ಆತ್ಮಾ ಬಯಿದವರಾರೊ ನಿನ್ನ || ಪಲ್ಲವಿ
ಹೊಲೆಯನೆಂದೊಬ್ಬನು ಬೈದರೆ ನಿನಗದು
ಬಲುದೋಷವೆಂದು ನೋವೆ
ಹೊಲೆಗೊಂಡ ತಾಯ ಗರ್ಭದಲಿ ಜನಿಸಿ ಮುನ್ನ
ಹೊಲಸಿನೊಳಿರ್ದೆಯಲ್ಲೋ
ಮಲದ ಕುಳಿಯೊಳಿರ್ದೆಯಲ್ಲೋ ಜವನ
ಕೊಲೆಗೆ ನೀ ಸಂದೆಯಲ್ಲೋ ಆತ್ಮ || ೧
ಹಲಬರಿಗೆ ಹುಟ್ಟಿದೆಯೆಂದೊಬ್ಬ ಬೈದರೆ
ಹಲುಬಿಂದ ಮೊರೆದೇಳುವೆ
ಎಲೆ ಜೀವ ಎಂಭತ್ತು ನಾಲ್ಕು ಲಕ್ಷ ಯೋನಿ
ಯೊಳಗೆ ನೀ ಬಿದ್ದೆಯಲ್ಲೋ
ತೊಟ್ಟಿಲೊಳು ಕಡು ಬಾಳ್ದೆಯಲ್ಲೋ
ದುಃಖದಲಿ ಕಡುನೊಂದೆಯಲ್ಲೋ || ೨
ಹಳಿದಾಡೆ ಹೊಗಳಿದೊಡತ್ತಿತ್ತ ನೋಡದೆ
ಒಳಗೆ ನಿನ್ನಡಿ ನೀ ನೋಡು
ತಳತಳಿಸುವ ಹಂಸನಾಥ ನಿನ್ನೆದೆ ತುಂಬಿ
ಬೆಳಗಾಗಿ ತೋರುವನೂ
ಬೇಗದಿ ಮುಕ್ತಿಗೇರುವನೂ || ೩
೧೫೪. ಬರಿಯಬೊಮ್ಮದಮಾತು
ಬರಿಯ ಬೊಮ್ಮದ ಮಾತು ಕೇಡು | ಗುರುವಾರ
ಕರುಣವಿಡಿದು ಪರಮಾತ್ಮನ ನೋಡು || ಪಲ್ಲವಿ
ದಳ ನಾಲ್ಕರಲಿ ಜನ್ಮವಾಡು ಮುಂದೆ
ದಳವಾರರುಂಟಲ್ಲಿ ನೀ ತಿರುಗಾಡು
ಒಳಗೆ ಯೋಚಿಸಿ ನಿನ್ನ ನೋಡು ತಿಳಿ
ಗೊಳನುಂಟಲ್ಲಿ ನೀ ಮುಳಿದಾಡು || ೧
ವಾಯು ಮನವನೊಂದು ಮಾಡು | ನಿನ್ನ
ಕಾಯವಿಡಿದು ಪರಮಾತ್ಮನ ನೋಡು
ಮಾಯ ಪಾಶವ ಹೋಗಲಾಡು ನಿನ
ಗಾಯುಷ್ಯವುಂಟಲ್ಲಿ ಇಲ್ಲಿಲ್ಲ ನೋಡು
ಬ್ರಹ್ಮನಾಳವ ಪೊಕ್ಕು ನೋಡು | ಪರಿ
ಬ್ರಹ್ಮಮಂಪಟದೊಳಗಾನಂದವಾಡು || ೨
ಧರ್ಮ ಗುರುವನೊಮ್ಮೆ ಪಾಡು ನಮ್ಮ
ನಿರ್ಮಲ ಗುರು ನಿರಂಜನ ಸಿದ್ಧನ ಕೂಡು || ೩
೧೫೫. ಬರೆದದೆಬರೆದದೆ
ಬರೆದದೆ ಬರೆದದೆ ಅಂಜದಿರು
ಬರೆದ ಬರಹ ತಪ್ಪದಂದದಿ || ಪಲ್ಲವಿ
ತಾನೆಸಸಿದ ಹಾಗೆ ತನಗಾಗಲರಿಯದು
ಹೀನ ಮನವ ನೆಚ್ಚಿ ಮರುಗದಿರಾ
ಏನಹುದೊ ಎದೆ ಹಾರುಗೊಳ್ಳದೆ
ತಾನೆ ಬಪ್ಪದು ತಪ್ಪದಂಜದಿರೂ || ೧
ಉದಯಾಸ್ತಮಾನವು ಕುದಿದು ಕೋಟಲೆಗೊಂಡು
ಎದೆ ಹಾರು ತಪ್ಪದು ಅಂಜದಿರು
ಮೊದಲೆ ಆಯುಷ್ಯ ಕರ್ಮವು ಇಷ್ಟೊಂದು
ವಿಧಿ ಮುನ್ನ ಬರೆದಿದೆ ಅಂಜದಿರು || ೨
ಮನವೊಂದು ಚಿಂತಿಸಿ ಮರುಗಿ ಕೋಟಲೆಗೊಂಡು
ಅನುದಿನದಲಿ ನೊಂದು ಕುದಿಯದಿರು
ತನುವ ದಂಡಿಸಿ ಪರಮಾತ್ಮನ ಧ್ಯಾನಿಸಿ
ಧರೆ ಗುರು ಹಂಸನಾಥಗೆ ಶರಣಾಗು ಮನವೆ || ೩
೧೫೬. ಬಿಡದುಕಾಣಯ್ಯಚಿನ್ನಯ್ಯಾ
ರಾಗ: ಶಂಕರಾಭರಣ ತಾಳ: ಮಿಶ್ರಚಾಪುತಾಳ
ಬಿಡದು ಕಾಣಯ್ಯ ಚಿನ್ನಯ್ಯಾ ನೀ ಎನ್ನ
ಬಿಡಿಸು ಬಿಡಿಸು ದಮ್ಮಯ್ಯ
ಒಡನಾಡುತ್ತಾಡುತ್ತನಂತ ಕಾಲದಿ ಕರ್ಮ
ಪಿಡಿದು ಜಡಿದು ಅಂಟಿ ಅಡರಿಕೊಂಡೆನ್ನ || ಪಲ್ಲವಿ
ಹಿಂದೆನ್ನ ಕಾಯ ಗರ್ಭದೊಳಿಕ್ಕಿ
ಮುಂದಕ್ಕುಪಾಯದಿಂದಲಿ ಹೊಂದಿಸಿ
ಇಂದಿಲ್ಲಿ ಹುಟ್ಟಿ ಬೆಲೆದು ಜವ್ವನವಾಂತು
ಮುಂದೂ ಕೆಡಿಸಿ ಮುದ್ದು ಮಾಡಿ ಕೆಡಿಸಿತೆನ್ನಾ || ೧
ಜರೆಯ ತೋರಿತು ಸರ್ವಾಂಗ ಆವರಿಸಿತು
ಕರಿಯ ಕೂದಲು ಬಿಳಿದಾಗಿ ಹಾಸಿಗೆಯಲ್ಲಿ
ಹೊರಳಿ ಹೊರಳಿ ಮುಂದೆ ಹೊಮ್ಮಿದ ರೋಗಗಳು
ಕೆರಳಿ ಕೆರಳಿ ಮತ್ತೆ ನರಳಿ ಕೆಡಿಸಿತೆನ್ನ || ೨
ಮರಣ ವೇದನೆಗಳ ತೋರಿಸಿ ಸದ್ಗುರು
ಚರಣಾರಾಧನೆಯನ್ನು ಮರೆಸಿ ಮಮತೆಯೊಳು
ಬೆರಸಿ ದುರ್ಗತಿಗೆನ್ನ ಗುರಿಮಾಡಿ ಸದ್ಗುಣ
ಚರಿತವನಡಗಿಸಿ ಕೆಡಿಸಿತು ಇಂದೆನ್ನ || ೩
ಹೀಗೆನ್ನ ಪೀಡಿಸಿ ಅನಂತ ಕಾಲದಿ ಕರ್ಮ
ಹೋಗಿಲ್ಲ ಕರ್ಮ ನಿರ್ಜರೆಯಿಲ್ಲಾ
ಹೇಗಿನ್ನುಪಾಯವ ಪೇಳು ನಿನಗೆ ತಲೆ
ಬಾಗಿದೆ ಶ್ರೀ ಗುರು ಚರಣಂಗಳಾಣೆ || ೪
ಬಂದೆ ನಿಮ್ಮೆಡೆಗೆ ನಾ ಎನ್ನ ಭವಾಬ್ಧಿಯ
ಕುಂದಿಸು ನೀ ಬೇಗ ಅಡಿಗಡಿಗೆ
ಹೊಂದಿಸು ರವಿ ಇಂದು ಕಿರಣನೆ ನಿನ್ನ ನಾ
ನೆಂದಿಗು ಬಿಡೆ ಶ್ರೀ ಗುರು ಹಂಸನಾಥ || ೫
೧೫೭. ಮಂಗಳನಿಜ
ಮಂಗಳ ನಿಜ ಪರಂಜ್ಯೋತಿಗೆ ಜಯ
ಮಂಗಳ ಗುರು ಹಂಸನಾಥನಿಗೇ || ಪಲ್ಲವಿ
ಪದಿನೆಂಟು ದೋಷವ ಗೆಲಿದಷ್ಟಕರ್ಮವ
ಸದೆದಷ್ಟ ಗುಣ ವಿಶ್ವರೂಪಾದಗೇ
ಮದನ ವಿಜಯನಿಗೆ ಮಂಗಳ ಮೂರ್ತಿಗೆ
ಮುದಿತ ಬೋಧಾಮೃತದರಹಂತಗೇ || ೧
ಬದ್ಧ ಕರ್ಮಾರಿ ಪ್ರಬುದ್ಧ ಸುಜ್ಞಾನ ಸ
ಮೃದ್ಧ ನಿರಂಜನ ಸಿದ್ಧರಿಗೇ
ಶುದ್ಧ ರತ್ನತ್ರಯ ರೂಪಾತ್ಮನಾದ ಪ್ರ
ಸಿದ್ಧ ಬೋಧದಾಚಾರ್ಯರಿಗೇ || ೨
ಸುರನರ ನಾಗೇಂದ್ರರಿಗುಪದೇಶವ
ಪರಿಪಾಲಿಸಿದುಪಾಧ್ಯಾಯರಿಗೆ
ಪರಮ ಸಂಪದವೀವ ಸರ್ವ ಸಾಧುಗಳಿಗೆ
ವರ ವೇಣುಪರಿ ಪರಬ್ರಹ್ಮನಿಗೇ || ೩
೧೫೮. ಮಹಾನವಮಿಯಮಾಡಿದ
ಮಹಾನವಮಿಯ ಮಾಡಿದನೋರ್ವ ಮುನಿರಾಯ
ಇದು ನವ ಚೋದ್ಯವಮ್ಮಾ || ಪಲ್ಲವಿ
ಲಕ್ಷಣವಿಡಿದಾತ್ಮ ಪುರದೊಳೆಂಭತ್ತುನಾಲ್ಕು
ಲಕ್ಷ ಗುಣಗಳೆಂಬ ತೇಜಿಗೆ
ರಕ್ಷೆಗಟ್ಟಿಸಿದರೆ ಕರ್ಮಗಳೆಂಬನ್ಯ
ಪಕ್ಷದ ಧರೆಯೆಲ್ಲ ನಡುಗಿತು || ೧
ಹದಿನೆಂಟು ಸಾವಿರ ಶೀಲಗುಣಗಳೆಂಬ
ಮದದಾನೆಯೊಡ್ಡುತಾ ಕಾದಾ
ಮದನಗೆ ಜವನಗೆ ಮೋಹತಾಕ್ಷರಸನೆನೆ
ಯೆದೆ ದಮ್ಮದುಡುಕು ಜಗ್ಗೆಂದಿತೂ || ೨
ಅಷ್ಟಾಂಗ ಯೋಗವೆಂದೆಂಬ ರಥಗಳನು
ತ್ಕೃಷ್ಟವೆರಸಿತಾ ಕಾಬಾಗ
ಕಷ್ಟ ಜನನ ಮೃತ್ಯು ಮುಪ್ಪು ರೋಗಂಗಳ
ದುಷ್ಟರ ಸೇನೆ ಕಂಗೆಟ್ಟಿತೂ || ೩
ನೂರುಹನ್ನೆರಡು ಕೋಟಿಯು ಲಕ್ಷವೆಂಭತ್ತು
ನೂರು ಆಯಿವತ್ತೆಂಟು ಸಾವಿರದೈದೆಂಬ
ತೋರಿದಾಗ ಮದಸೇನೆಯ ತಾ ಕಾಬಾ
ನೂರು ಮಿಥ್ಯಾತ್ಮತ್ವದೇಳೈಸಿತೂ || ೪
ಜ್ಞಾನತನುವಿಲ್ಲಾತ್ಮ ಧ್ಯಾನ ಬಾಣವ ತೊಟ್ಟು
ತಾನಿಂದೊಡಾತ್ಮ ವೈರಿಗಳೆಲ್ಲ
ಸ್ಥಾನಗೆಟ್ಟೋಡಿದರೊಳಗಾಯಿತು ಮುಕ್ತಿ ಸು
ಜ್ಞಾನ ಚಿದಂಬರ ಪುರುಷಗೆ || ೫
೧೫೯. ಮಿಂದುಬಾಮಿಂದು
ಮಿಂದು ಬಾ ಮಿಂದು ಬಾ ಮಿಂದು ಬಾ ಕಂದಾ
ಅಂದದ ಶ್ರೀ ಜಿನಮತವೆನಿಪ ಗಂಗೆಯಲ್ಲಿ || ಪಲ್ಲವಿ
ಮೂರು ಮೂಢಗಳೆಂಬ ಹೊಗೇರಿಯಲ್ಲಿ
ಆರನಾಯತನವೆಂಬ ಬೇಡರ ಹಳ್ಳಿಯಲ್ಲಿ
ಮೀರಿದೆಂಟು ಮದಗಳ ಕಾಳಗುಡಿಗಳಲ್ಲಿ
ಸೇರಿಪಾಡುವ ಗೋಷ್ಠಿಯೊಳಿದ್ದೆಯಲ್ಲಾ || ೧
ಏಳು ವ್ಯಸನವೆಂಬ ಕೀಳು ಕುಲದವರ
ಮೇಳದಲ್ಲಿ ಶಂಕಾದಿ ಮಲದೋಷಗಳಲಿ
ಏಳು ಭಯಗಳೆಂಬ ಮಸಣದೊಳಿರುತಿಹ
ಧೂಳಿನೊಳಗಾಡುತ್ತ ನೀ ಬಂದೆಯಲ್ಲಾ || ೨
ಕಡು ಪಂಚಪಾತಕರೊಡನಾಡಿ ಬಂದೆ | ಕೈ
ಪಿಡಿದೆ ದುಷ್ಕಲ ಕಾನನದ ಕನ್ಯೆಯರಾ
ಮಡಗಿದೆ ಕಲೆಯುಳ್ಳ ಮರಣವೆಂಬ ರನ್ನಗ
ನ್ನಡಿಯ ತಾರದೆ ಅರಮನೆಗೆ ಬಾರದಿರು || ೩
ಮಿಂದು ನೀನು ಶುದ್ಧವಾದಲ್ಲದೆ ನಮ್ಮ ಶಿವಪುರ
ದೊಂದು ಸಣ್ಣ ಪಿಳ್ಳಕೋಟೆಯ ಮುಟ್ಟಲುಬಾರದು
ಇಂದು ನಮ್ಮಯ ಮಾತ ಲಾಲಿಸಿ ಕೇಳದಿರ್ದೊಡೆ ಹಿಂದಿನಂತೆ
ಮುಂದಕೂ ದುರ್ಗತಿಗಳು ತಪ್ಪದಯ್ಯಾ ನಿನಗೆ || ೪
ಷೋಡಶ ಭಾವನೆಗಳು ಎಂದು ಕಂಗೊಳಿಸುವ
ಷೋಡಶಾಭರಣಗಳ ತೊಟ್ಟು ಕ್ಷತ್ರಿಯರಾ
ಕೂಡಿ ನಿರ್ವಾಣ ಸಾಮ್ರಾಜ್ಯವನು ಆಳಿ
ಕೂಡಬಹುದು ಶ್ರೀಮಂದರಸ್ವಾಮಿಯ ಸಂಪದವನು || ೫
೧೬೦. ಮೋಸದಿಂದಾದಪಾಪಕೆ
ಮೋಸದಿಂದಾದ ಪಾಪಕೆ ಬೆಚ್ಚಲೇಕೆ ಜಿ
ನೇಶನ ಮತದೊಳುಂಟದು ಪರಿಹಾರ || ಪಲ್ಲವಿ
ಕೆಟ್ಟ ವಾಸನೆ ತೀಡೆ ನಶಿಸಿ ಪರಿಹಾರ
ಮುಟ್ಟಿ ಸೋಂಕಲು ಗಂಧೋದಕ ಪರಿಹಾರ
ಪುಟ್ಟಿದ ಪೊಲ್ಲೆನೋಟಕೆ ಅನುಬಿಂಬವ
ದಿಟ್ಟಿಸಿ ನೋಡಲಂತದು ಪರಿಹಾರ || ೧
ಅಪಶಬ್ದ ಶತವ ಕೇಳಿದಡೊಮ್ಮೆ ಜಿನಪದ
ವಿಪುಳ ನಾಮವ ಕೇಳಲದು ಪರಿಹಾರ
ಕೃಪೆ ಹೀನರೊಡನೆ ಮಾತಾಡಲಂತರುಹನ
ಜಪಿಸಿ ನೋಡಲಂತದು ಪರಿಹಾರ || ೨
ಪರುಷ ವಿಷಯದಲ್ಲಿಯು ಏನಾದಡೂ
ದುರುದುಃಖವ ಬಂಧವ ಮಾಡಿಕೊಂಡದಕೆ
ನಿರುತ ಶೃಂಗಾರ ಕವಿಯ ಸ್ವಾಮಿಯ ಜಲಧಿಯ
ಪುರ ಜಿನೇಶನ ಧ್ಯಾನವೊಂದೆ ಪರಿಹಾರ || ೩
Leave A Comment