೧೦೧. ಸಾಲದೆಶುದ್ಧಾತ್ಮಯೋಗ

ಸಾಲದೆ ಶುದ್ಧಾತ್ಮಯೋಗ
ಲಾಲಿಸಿ ನೋಡುವಾಗ
ಡಾಳಿಸಿಯೇಳ್ಪದಸುರಾಗ
ಪಾಲುಂಡು ಮೇಲುಂಬುದಾವ ಭೋಗ ||      ಪಲ್ಲವಿ

ನೆಲಮಾಳಿಗೆಯೊಳು ಬೆಳಗಿನಾ ದೀಪದಂತೆ
ಹೊಳೆವಾತ್ಮನ ಕಣ್ಣಮುಂದೆ ಧ್ಯಾನದಲ್ಲಿ
ಹೊಳೆದಿಹನದನೋರಂತೆ ಅಲ್ಲಿ ಮನ
ಮುಳುಗಿದಡಾವ ಚಿಂತೆ ||  ೧

ಧರೆಯ ಮನೆಯೊಳೆಷ್ಟರಗಿಸದೊಂದು ಬಿಡು
ಜರಿವುದು ಕರ್ಮದ ಗೂಡು ಜ್ಞಾನದಲ್ಲಿ
ಹೊಳೆದಿಹದನೆ ನೋಡು
ನಾಳೆ ಮುಕ್ತಿಪುರವೆಲ್ಲ ನಿನ್ನ ನಾಡು || ೨

ಸುಜ್ಞಾನಿಗೆ ಕರ್ಮ ಮೇಲೊಂದು ಮಣ್ಣ ಹಿಂ
ದೆ ಜ್ಞಾನವೇ ವಜ್ರದ ಕೊಂಡೆ ಪರಸಂಗ
ದಾನದೊಂದೆನಂದೆ ಹಂಸ
ನಾಥನ ಧ್ಯಾನವರಿಯುವಂತೆ ||     ೩

೧೦೨. ಬುದ್ದಿಸದರವೆಯೆಲ್ಲಕೆ

ಬುದ್ದಿ ಸದರವೆಯೆಲ್ಲಕೆ ಬುದ್ದಿ ಸದರವೇ
ಬದ್ಧಕರ್ಮವ ಬಯಲು ಮಾಡಿ
ಸಿದ್ಧಪದವಿಗೆ ಧ್ಯಾನಿಸುವ || ಪಲ್ಲವಿ

ಒಡಲೊಡವೆ ಗೊರವಿನಾಂ
ತೊಡಗೆಯೊಂದು ಕಂಡಿರಬೇಕು
ಬಿಡದೆ ಮೂರು ರತ್ನವನು ತ
ನ್ನೊಡವೆಯೆಂದು ಕಂಡಿರಬೇಕು ||   ೧

ಹೆಣ್ಣ ತೊರೆಯಬೇಕು ಮತ್ತೊಂದು
ಹೆಣ್ಣಿನಾ ಕೂಟಕ ಮೋಹಿಸಬೇಕು
ಕಣ್ಣಿಗೆ ಕಾಣಿಸಿಕೊಳ್ಳದ ತನ್ನಂ
ಬಣ್ಣವ ಭಾವಿಸಿ ಕಾಣಬೇಕು ||        ೨

ಚಂದ್ರನಂತೆ ಶಾಂತನಾಗಿ
ರುಂದ್ರ ಶೃಂಗಾರಕವಿಯ ಗುರು ಮ
ಹೇಂದ್ರ ಕೀರ್ತಿಯಾಗಿಹಂತೆ
ಇಂದ್ರಿಯ ವಿಜಯಿಯಾಗಬೇಕು ||    ೩

೧೦೩. ಆದಿಜಿನೇಶಜಿನನಾದರೋ

ಆದಿ ಜಿನೇಶ ಜಿನನಾದರೋ ಎಂಥವನು
ಆದಿ ಜಿನೇಶ ಆದಿ ಜಿನೇಶ ಅಘುಕುಲ ನಾಶ || ಪಲ್ಲವಿ

ನಿರ್ಮಲ ರೂಪ
ನಿರ್ಜಿತ ಕೋಪ
ಧರ್ಮ ದೀಪ ಪಾಪ ವಿಲೋಪ ||     ೧

ನಿರ್ಜಿತ ಮದನ
ಸದ್ಗುಣ ಸದನ
ಸ್ಫೂರ್ಜಿತ ಜ್ಞಾನ ವರ್ಜಿತ ಕದನ ||   ೨

ಶಕ್ತಿ ನಿಭವದನ
ಮುಕ್ತಿ ನಿವಾಸಾಧೀಶ
ಭಕ್ತಾಬ್ಜ ವಂದಿತ ವ್ಯಕ್ತ ಕಡಲಾಧೀಶ ||          ೩

೧೦೪. ಆರುಕಾಣರುದೇವನಾ

ಆರು ಕಾಣರು ದೇವನಾ ಮೋಕ್ಷಾರ್ಥವೀವನಾ ||        ಪಲ್ಲವಿ

ತನುವೆಂಬ ಚೈತ್ಯಾಲಯದೊಳಗಿಪ್ಪನಾ
ತನುಸೋಂಕಿಯು ಸೋಂಕದವನಾ
ತನುವಿಲ್ಲದ ಪರಮನಾ ಸುಜ್ಞಾನವೇ
ತನುವಾದನುಪಮನಾ
ಶಾಶ್ವತ ಪೂರ್ಣವಾಗಿಹನಾ ನಿರಂಜನ ಪುರುಷಾಕಾರನಾ ||      ೧

ಕನಕ ಕಲ್ಲೊಳು ಕಾಷ್ಠದೊಳಗ್ನಿ ಪಾಲೊಳು
ಮಿನುಗುವ ಘೃತವಿರ್ಪಂತೆ
ತನುವಿನೊಳಿರ್ದಾತ್ಮನ ಕಣ್ಮುಚ್ಚಿ ಮೆ
ಲ್ಲನೆ ತೋರುವನಾ
ಪಳುಕಿನ ಬೊಂಬೆಯಂತಿಹನಾ
ಬೆಳಕಿನ ಬಿಂಬವಾಗಿಹನಾ ||         ೨

ನಾನಾ ನಯನಿಕ್ಷೇಪ ಪ್ರಮಾಣ ವಿಧಾನದಿಂದಗಲ್ದವನಾ
ಆನಂದ ರೂಪ ಚಿದಂಬರ ಪುರುಷನ
ಸ್ವಾನುಭಾವಕೆ ಗಮ್ಯನಾ ಭವ್ಯಮಾನಸ ಶ್ರೀ ಹಂ
ಸನಾಥನನ ಸ್ತುತಿಸೈ ||    ೩

೧೦೫. ಇಷ್ಟಕಾಣಿರೋಮುಕ್ತಿಗೆ

ಇಷ್ಟ ಕಾಣಿರೋ ಮುಕ್ತಿಗೆ ಇಷ್ಟ ಕಾಣಿರೋ
ದೃಷ್ಟಿಗಳೆರಡು ಮುಚ್ಚಿ ತನ್ನಾತ್ಮನ ತಾ ಕಾಂಬುದು
ಇಷ್ಟ ಕಾಣಿರೋ ಮುಕ್ತಿಗಿಷ್ಟ ಕಾಣಿರೋ ||       ಪಲ್ಲವಿ

ಸಿದ್ಧಾಂತ ವೇದಾಗಮದ
ಸುದ್ದಿಯೆಲ್ಲ ಪರಚಿಂತೆ
ಸಿದ್ಧರಂತೆ ತನ್ನತಾನೆ
ಬದ್ಧಿಸಿ ಕಾಬುದೊ ಹೆಚ್ಚು ||  ೧

ಮೈಯ ದಂಡಿಸಿದೊಡಿಲ್ಲಾ
ಕೈಯಾಸೆಯ ಬಿಟ್ಟೊಡಿಲ್ಲಾ
ಮೈಯೊಳಿರ್ದಾತ್ಮನ ತಾ
ವೊಯ್ಯನೆ ಕಾಬುದೆ ಹೆಚ್ಚು ||         ೨

ತನ್ನ ಧ್ಯಾನವೊಂದೆ ಮುಖ್ಯ
ಇನ್ನಿದಿವೆಲ್ಲವುಪಚಾರ
ರನ್ನ ಮೂರು ತಾನೆ ಸುಪ್ರ
ಸನ್ನ ಹಂಸನಾಥನಾಣೆ ||   ೩

೧೦೬. ಎಂದಿಗಹುದೋ

ಎಂದಿಗಹುದೋ ಎನಗೆಂದಿಗಹುದೋ
ಸಂದ ಸಂಸಾರದ ನೋವ ನಂದಿಸಿ ನಲಿವ ಸುಖ ||     ಪಲ್ಲವಿ

ಹಸಿಯ ಚರ್ಮದ ಪೈರಣೆಯೆ
ಬಿಸುಟು ಎನ್ನ ದಿವ್ಯಕಾಂತಿ
ಎಸೆವ ಚಿನ್ಮಯ ರೂಪನ
ಪಸರಿಸುವ ಪರಿಣಾಮ ||   ೧

ಕಾಡುವ ದುಃಖ ಕರ್ಮಂಗಳ
ನೀಡಾಡಿ ಸುಜ್ಞಾನದಲ್ಲಿ
ಕೂಡೆ ಮುಕ್ತಿ ಸುಖದೊಳೋ
ಲಾಡುವ ಮೋಹವಿಲಾಸ || ೨

ಕ್ರೋಧಾದಿ ಕಷಾಯಂಗಳ
ಬೂದಿ ಮಾಡಿ ಮುಂದೆ ಸಮು
ದ್ರಾಧಿ ಪರಮೇಶ ಶ್ರೀ
ಪಾದವನೆ ಕಾಣ್ಬ ಭಾಗ್ಯ ||  ೩

೧೦೭. ಎಚ್ಚರಿಕೆಜತನಎರವಿನ

ಎಚ್ಚರಿಕೆ ಜತನ ಎರವಿನ ತನುವ ನೀ
ನೆಚ್ಚಿ ಬರಿದೇಕೆ ಕೆಡುವೆ ಜಗದ
ಹುಚ್ಚರಿಗೆ ಪರಮ ಗುರುವೆ ಜವನ
ರೆಚ್ಚಿಗೊಳಗಹುದು ತರವೆ ಮನುಜಯೆಚ್ಚರಿಕೆ ಜತನಾ || ಪಲ್ಲವಿ

ಗಳಿಗೆಗಳಿಗೆಗೆ ವಿಕಾರವನೈದಿ ನಿಮಿಷ
ದೊಳಗಳಿಪುತಿದೆ ನಿತ್ಯವೆಂದು
ತಿಳಿದು ನಿಶ್ಚಿಂತನಾಗದೆ ಬಹಳ ಭ
ಗಳೊಳು ಸುಳಿಸುಳಿದು ನೀನೋವರೆ
ಬಲು ವಿಷದಳದ ಕಿಚ್ಚಲಿ ಬೇವರೆ
ವೊಳವೊಳಗೆ ಸುಮ್ಮನೆ ಸಾವರೆ
ಮನುಜ ಎಚ್ಚರಿಕೆ ||         ೧

ಹೇಸಿಕೆಯ ಸುತ್ತ ಅಪವಿತ್ರದಾ
ವಾಸನೆಯ ದುರ್ಗಂಧವೆಂದೂ
ಮಾಸು ಮೈ ಮುಸುಕು
ಕಿಸುಕುಳದ ಹಂಗಿನ ದೇಹ
ದಾಸೆಯಿಂದೇನು ಸಿದ್ಧಿ ಜವನ
ಮಿಸಲಾಗದಿರು ಮುಂದೆ
ಮೋಸಹೋಗದಿರು ನೀ ಬುದ್ಧಿಯೆಚ್ಚರಿಕೆ ||     ೨

ನುಂಗಿ ನೀರ್ಗುಡಿದು ನಿಶ್ಚಿಂತನಾಗದೆ ಭವಭ
ವಂಗಲೊಳು ನೀ ಕೆಡದಿರು ಕಾಯ
ಜಂಗೆ ಸಲುಗೆಯ ಕೊಡದಿರೋ ಜಿನರ
ಸಂಗನೊಂದನು ಬಿಡದಿರೂ ||       ೩

೧೦೮. ಎಚ್ಚರೆಚ್ಚರವಿರಲಿ

ಎಚ್ಚರೆಚ್ಚರವಿರಲಿ ಅನುದಿನದಲ್ಲಿ ಎಚ್ಚರೆಚ್ಚರವಿರಲಿ ||    ಪಲ್ಲವಿ

ಬಲ್ಲಿದ ತಾನೆಂದು ಬಡವನ ಬಾಯ್ಗಳ ಬಡಿಯದಿರೆಚ್ಚರಿಕೆ
ಎಳ್ಳಷ್ಟು ತಪ್ಪಿ ನೀ ನಡೆದರೆ ನರಕವ ಪೋಗುವೆ ಎಚ್ಚರಿಕೆ ಹೇ ಮನುಜಾ ||  ೧

ಮಾಡು ದಾನವ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ
ಕೇಡು ಬಯಸದಿರು ನಂಬಿದೆಡೆಗೆ ಬೇಗ ಕೆಡುವೆ ನೀ ಎಚ್ಚರಿಕೆ ಹೇ ಮನುಜಾ ||       ೨

ನಾಡಿನ ಜನರನ್ನು ನೋಡಿ ನಡೆಯೋ ಮುಂದೆ ನಟನೆ ಬೇಡೆಚ್ಚರಿಕೆ
ಬೇಡಿ ಪಡೆಯವನ್ಯ ವಸ್ತುವ ವಂಚನೆ ಮಾಡದಿರೆಚ್ಚರಿಕೆ ಹೇ ಮನುಜಾ ||   ೩

ಹೆಣ್ಣು ಹೊನ್ನು ಮಣ್ಣು ನಿನ್ನ ವಂಚಿಸಿಬಿಟ್ಟು ಪೋಗುವುದೆಚ್ಚರಿಕೆ
ಮುನ್ನ ಮಾಡಿದ ಪುಣ್ಯದಿಂದೀಗ ಬಂದಿಹುದು ಮುಂದಕ್ಕೆ ಎಚ್ಚರಿಕೆ ಹೇ ಮನುಜಾ
ಚೆನ್ನಾಗಿ ಗಳಿಸಿಯು ಬದುಕುವೆ ನಾನೆಂಬ ಚೇಷ್ಟೆ ಬೇಡೆಚ್ಚರಿಕೆ ||  ೪

೧೦೯. ಎಲ್ಲೆಲ್ಲಿಯುನಿಲಬಹುದು

ಎಲ್ಲೆಲ್ಲಿಯು ನಿಲಬಹುದು ತನ್ನಾತ್ಮನಲ್ಲಿ ತಾ ನಿಲಲರಿದೂ ||       ಪಲ್ಲವಿ

ನೆಲದ ಮೇಲಿರಬಹುದೂ ಅಂಬರದೊಳಗಾಗಿರಬಹುದೂ
ಹಲಬರೊಳಿರಬಹುದೂ ತನ್ನಾತ್ಮನ ನೆಲೆಯ ಕಂಡಿರಲರಿದೂ ||  ೧

ಹರಿಣಗೆ ಭೂಗಮನಾ ಹಂಸೆಗೆ ಹರುಷ ಅಂಬರ ಗಮನಾ
ಪರದೃಷ್ಟಿ ಭವಿಗಳಿಗೆ ಆತ್ಮಲಾಭದ ದಷ್ಟಿ ಭವ್ಯರಿಗೆ ||    ೨

ಭೇದವಿಜ್ಞಾನವಿದೂ ಮುಕ್ತಿಗೆ ಹೋಗಿ ಸಂಶಯ ಬೇಡ
ವಾದವಲ್ಲಾತ್ಮಹಿತ ಇದು ಸಮುದ್ರಾಧೀಶನ ಮತಾ ||   ೩

೧೧೦. ಏಕಯ್ಯಹೀಗೆನ್ನನೋವ

ಏಕಯ್ಯ ಹೀಗೆನ್ನ ನೋವ ನೀ ನೋಡುವೆ
ಸಾಕೆನ್ನಲಾಗದೇ ಅಪರಾಜಿತೇಶ್ವರಾ ||        ಪಲ್ಲವಿ

ಹಗಲಿರುಳೆನ್ನದೆ ಹಲವ ಹಂಬಲಿಸಿ ದಂ
ದುಗದಲ್ಲಿ ದಾವತಿಗೊಂಬವನಾ x x x x
x x x x x x x ಗುಡವ
ತೆಗೆದರೆ ನಿಮಗೆ ಕೊರತೆಯೇ ಸ್ವಾಮಿ ||       ೧

ಕಂಡುದ ಕಣ್ಣಿಟ್ಟು ಬಾರದಿರ್ದುದ ಬಯಸಿ
ಬೆಂಡಾಗಿ ಬೆದೆಬೆದೆಗೊಂಬುವನ
ಕಂಡು ಕರುಣದಿಂದ ಕಾಮಿತವಿತ್ತ ಸ್ವಾಮಿ ||   ೨

ಅಂಗಜ ತಾಪದಿಂದಳಲುತ್ತ ಬಳಲುತ್ತ ನಿಮ್ಮ ಪಾ
ದಂಗಳನು ಒಮ್ಮೆ ನೆನೆವನಾ
ಶೃಂಗಾರ ಕವಿಹಂಸರಾಜ ಬಾರೆಂದೊಡೆ ನಿಮ್ಮ
ಭಂಗಾರವೇನು ಬರಿದಪ್ಪುದೆ ಸ್ವಾಮಿ ||        ೩