. ಅಯ್ಯಯ್ಯೋಕಷ್ಟದ

ಅಯ್ಯಯ್ಯೋ ಕಷ್ಟದ ಭವಬಂಧನಗೊಳಗೆ ನೀ
ನಯ್ಯೋ ಮೈಮರೆದೆ ಜೀವನೇ || ಪಲ್ಲವಿ

ನಿನ್ನೆ ಬಂದುದಿಲ್ಲದೆ ತಾಯೊಡಲೆಂಬ ಸೆರೆಯೊಳು
ಮುನ್ನವೆ ಮಾಸಿವಿರ್ದು
ಇನ್ನೊಬ್ಬ ತಾಯ ಒಡಲಿಗೆ ನಾಳೆ ಹೋಹುದಿಲ್ಲವೆ
ನೀ ನಿನ್ನ ಕೇಡ ನೋಡಲಿಲ್ಲವೆ|| ೧

ಕಾಣುವುದಿಲ್ಲವೆ ಮುಪ್ಪಿನವರು ಬಾಲಕರೆಂಬ
ಕೇಣವಿಲ್ಲದಳೆವರನು
ಪ್ರಾಣದ ಪಯಣವಿಂದು ನಾಳೆ ಎಚ್ಚರದೆ ನೀ
ಕೋಣನಂತೆ ಜಡನಹರೆ||  ೨

ಬೇಗ ಮುಕ್ತಿಯಾಗಬೇಕೆ ತಪಸು ಮಾಡಲಾರೆಯಾ ಲೇ
ಸಾಗಿ ದಾನಪೂಜೆಯ ಮಾಡೋ
ಆ ಗುಣಕ್ಕುಹರುಗೆಟ್ಟರಪರಾಜಿತೇಶನ ಚೆ
ನ್ನಾಗಿ ನಂಬಿ ಜಪವ ಮಾಡೋ||  ೩

 

. ಕಂಡರೆಕರ್ಮವಗೆಲ್ದ

ಕಂಡರೆ ಕರ್ಮವ ಗೆಲ್ದನಾಗಳೆ ಯೋಗಿ
ಕಾಣದವ ಭವರೋಗಿ|| ಪಲ್ಲವಿ

ಹತ್ತು ಗಾಳೆಯ ಹೆಜ್ಜೆಯರಿದು ಜಯವ ಮಾಡಿ ಮೈ ಬಿಟ್ಟಾಡಿ
ನೆತ್ತಿಗೆರೆದ ಹೊಳೆ ಬ್ರಹ್ಮನೊಡಗೂಡಿ ಅದನೆ ಕೊಂಡಾಡಿ
ಸುತ್ತುವ ಮನಸಿಗೆ ಸಂಕೋಲೆಯನು ಹೂಡಿ ನೊಸಲಲ್ಲಿ ಕೂಡಿ
ಮತ್ತೆ ಕಂಗಳು ತುದಿಮೂಗಿನೊಳಗೂಡಿ ತನ್ನಲಿ ತಾ ನೋಡಿ||    ೧

ಭದ್ರಾಸನವ ವಜ್ರಾಸನವ ಮೊದಲಾಗಿ ಆಸನ ಜಯವಾಗಿ
ನಿದ್ರೆಯನೀಗಿ ನಿರಾಹಾರ ನಿಜವಾಗಿ ಸಂತೋಷದಲಿ ತೇಗಿ
ರೌದ್ರತೆ ಗರ್ವ ವಂಚನೆಯಾಸೆ ಬಡವಾಗಿ ಶಾಂತಿಯಲಿ ಬೀಗಿ
ಚಿದ್ರೂಪನೊಂದನೆ ತಿಳಿದು ತೊನಲಿ ತೂಗಿ ನಿಶ್ಚಯವೆದೆತಾಗಿ||  ೨

ಬುದ್ದಿಯಲಂಗವ ದೇವಾಲಯವೆಂದು ಆತ್ಮನೆಂದು
ಶುದ್ಧನಿಶ್ಚಯವೆಂಬ ನಯಕೆ ತಾ ಸೆಲೆ ಸಂದು ಚಿನ್ಮಯನಿಹುದೊಂದು
ಸಿದ್ಧಸ್ವರೂಪಕೆ ಮನಮೆಚ್ಚಿ ಜಯವೆಂದು ಹರುಷಾಶ್ರು ಬಂದು
ಸಿದ್ಧಿಯಿನ್ನೆಂದಪರಾಜಿತೇಶ್ವರ ನೀನೆಂದು ತನ್ನಲಿ ತಾ ನಿಂದು||   ೩

 

. ಬಿಡುಬಿಡುತನುವೆ

ಬಿಡು ಬಿಡು ತನುವೆ ನಡೆನಡೆವುವವೆ
ಬಿಡದೆ ನೀನೆನ್ನೋಡದಿಹುದಿನ್ನು ಗುಣವೇ|| ಪಲ್ಲವಿ

ನನ್ನ ನಾನರಿಯದೆ ನಿನ್ನೊಡನಿರ್ದೆನು
ನನ್ನನೀಗ ಚೆನ್ನಾಗಿನರಿದು
ಪನ್ನಗಪತಿನುತನಂಘ್ರಿಯ ಪಿಡಿದೆನು
ನಿನ್ನ ಹಂಗೇತಕೆ ನನಗಿನ್ನು ತನುವೇ|| ೧

ಸತಿಸುತಪಿತರೆಂದು ಮತಿಗೆಟ್ಟು ನಿನ್ನಿಂದ
ಗತಿಗತಿಯೊಳು ದುಃಖತತಿಯೊಳು ನೊಂದು
ಯತಿಪತಿನುತ ಜಿನಪತಿಯ ಪಾದವ ನಂಬಿ
ಯತಿಶಯವತಿಯಾದೆನೆಲೆ ವೈರಿ ತನುವೇ|| ೨

ಕಪಟ ನಿನ್ನೊಡನಾಡಿ ಸುಪಥನರಿಯದೆ
ಕೂಪಥದೊಳಗೆ ತೊಳಲುತ ಪುಣ್ಯದಿಂದ
ಉಪಮಿಸಬಾರದ ಸುಖವಿತ್ತು ಪಾಲಿಸು
ವಪರಾಜಿತೇಶನ ಕೃಪೆಯ ಪಡೆದೆನು|| ೩

 

. ಆತ್ಮಧ್ಯಾನಿಸುನೀ

ಆತ್ಯಧ್ಯಾನಿಸು ನೀ ನಿಚ್ಚ ನಿನ್ನ ಮನ ಮೆಚ್ಚ
ಆತ್ಮಬಾಹ್ಯರ ಮಾತ ಕೇಳದಿರಾ||  ಪಲ್ಲವಿ

ಕಲಿವರು ಶಾಸ್ತ್ರವ ಕೆಲವರು ಮೈಯ
ಬಲಿದು ದಂಡಿಸುವರು ಕೆಲವರು
ಲಲಿತಾತ್ಮ ಧ್ಯಾನಕ್ಕೆ ಮುನಿವರು ಗರ್ವ
ಸುಲಭರವರು ಡಂಭಕವೇಕೆ ನಂಬೊ|| ೧

ಭವಿಗಾತ್ಮ ಧ್ಯಾನವು ಬಾರದು ಅನು
ಭವದ ಧ್ಯಾನಿಯ ಕಂಡು ಜರಿವರು
ಭವಿಗಳ ನಿಜ ಗುಣವಿದು ನಂಬು ನೀ
ನವರ ಲೆಕ್ಕಿಸದೆ ನಿನ್ನನೇ ನಂಬೊ || ೨

ಕಾಲವೆಲ್ಲೆಂಬರು ಕೆಲವರು ಗ್ರಹ
ಪಾಲಾಗಿಲ್ಲೆಂಬರು ಕೆಲವರು
ಸಾಲುಶಾಸ್ತ್ರವು ಬೇಕೆಂಬರು ಶಬ್ದ
ಮಾಲೆಯ ತೋರೆ ಢಾಳೈಸುವರು || ೩

ಕಲಿಕಾಲ ಉಂಟಾತ್ಮಧ್ಯಾನವು ಮುನಿ
ಗಳಿಗುಂಟು ಗೃಹವಂತರಿಗುಂಟು
ಬಲುಶಾಸ್ತ್ರ ಬಡಶಾಸ್ತ್ರಿಗಳಿಗುಂಟು ಭವ್ಯ
ತಿಲಕರಿಗುಂಟು ಭವ್ಯರಿಗಿಲ್ಲ||  ೪

ಸಾರಭವ್ಯರಿಗೆ ಧ್ಯಾನ ನಿಲ್ಲುವುದು ಮತ್ತೆ
ದೂರ ಭವ್ಯಗೆ ಅವಧಾನ ಮತ
ವೈರವಾಗಿಹುದು ನಿರ್ಭಾವ್ಯಗೆ ತತ್ವ
ಸಾರವಿದಪರಾಜಿತೇಶ ಮತ|| ೫

 

. ಎತ್ತಲಿಂದಬಂದೆಇನ್ನೆತ್ತ

ಎತ್ತಲಿಂದ ಬಂದೆ ಇನ್ನೆತ್ತ ಪಯಣ ಮುಂದೆ ನಿನಗೆ
ಮೊತ್ತದ ಹಗೆಗಳ ನಡುವೆ ಮೋಸವೇ|| ಪಲ್ಲವಿ

ಹಿಂದುಳಿದೆನೋ ನಾನು ಹಿಂದುಳಿದೆನೋ
ಮುಂದಾದರೆಮ್ಮವರು ಮೋಕ್ಷಪುರಕೆ
ಎಂದಿಗೆಮ್ಮವರಂತೆ ಸುಖಿಯಾದೆನು|| ೧

ಭರತೇಶನಂದು ಮುಕ್ತಿಗೆ ಹೋದನಾತನೊಳು
ಬೆರಸಿ ಮುಕ್ತಿಗೆ ಹೋದೆನೆ ಮತ್ತೆ
ವರಸುತರುಗೂಡಿ ಸಗರೇಂದ್ರ ಹೋಹಾಗಲ
ವರು ಕೂಡಿ ಹೋದನೆ ಭರದಿಂದ ಮಾಘವ
ಚಕ್ರೇಶನೈದಿದನವನ ನೆರವಿಯೊಳು ನಾ ಹೋದೆನೆ ಮತ್ತೆ
ಕರಚೆಲುವನೆನಿಪ ಸನತ್ಕುಮಾರೇಂದ್ರನೊಳು
ಸರಸವಾಡುತ ಹೋದೆನೆ|| ೨

ವಿಮಲನಾಥನ ಕಾಲದದಿ ಮೇರು ಮಂದಾರೋ
ತ್ತಮರ ಸಂಗಡ ಹೋದೆನೆ ಬಳಿಕ ಕಮಲ ಚಕ್ರಿಯ ಕೂ
ಡೆ ಮಲ್ಲಿನಾಥನ ದಿನದೊಳಮಮ ನಾ ಪೋದೆನೊ|| ೩

ವೀರನಾಥನ ಕಾಲದಲಿ ವಿಮಲವಾಹನನ
ಸಾರಥಿಯಾಗಿ ಹೋದನೆ ಅಯ್ಯಯ್ಯೋ
ಧೀರ ಜಂಬುಸ್ವಾಮಿಯೊಡನಾದರೂ ಮುಕ್ತಿ
ಗೋರಂತೆ ಲಂಘಿಸಿದನಾರು ಇಲ್ಲಿಗೆ ನಾನೆ
ಕಾರಿಯಾದೇನೋ ಕ್ರೂರಕಲಿಯುಗಕೆ ಸಿಕ್ಕಿ ನಿಜ
ದಾರಿ ತೊಳಲುತಿರ್ದವನ ಕೃಪೆಯೊಳು ವಿ
ಚಾರಿಸಪರಾಜಿತೇಶ || ೪

 

. ತೀರ್ಥವಂದನೆಗೇಳು

ತೀರ್ಥವಂದನೆಗೇಳುದಯ ಕಾಲವಿದು ಪುಣ್ಯಕಾಲವಿದು ಪು
ಣ್ಯಾರ್ಥಕೊಳ್ಳಿತು ಪಡೆದ ಮನುಷ್ಯ ಜನ್ಮವನು
ವ್ಯರ್ಥಕೆ ನೀಗದಿರು ಭಾವಪೂಜೆಯ ಮಾಡಿ
ಭವಕೆಟ್ಟು ಮುಕ್ತಿಯಹುದು|| ಪಲ್ಲವಿ

ಇದು ಭರತಭೂಮಿ ಇದರಲಿ ಜಿನವಾಸಗಳು
ಮೊದಲು ಕೃತಯುಗ ದ್ವಾಪರ ತ್ರೇತೆಯೆಂಬ ಕಾ
ಲದಲಿ ಲೋಕಾಶ್ಚರ್ಯವಾಗಿ ತೋರಿದವೀಗ ಕಲಿಯುಗದ ದೋಷದಿಂದ
ಸದರವಾದವು ಕಲಿಯುಗಂ ಹೋದ ಬಳಿಕ ಮುಂ
ಲೊದವಿ ಮುನ್ನಿನ ಹಾಗೆ ಮೆರೆವಂತಿರಲಿ ಕಾ
ಲದ ದೋಷ ಹೊದ್ದದೆ ಸಂತತಂ ಮೆರೆವ ಬಸದಿಗಳುಂಟು ಕೇಳೊರೆವೆನು || ೧

ಕುಂದಣ ಮೇರುಗಿರಿ ಐದುಂಟು ಮತ್ತದರೊಳು
ಒಂದೊಂದರಲ್ಲಿ ಹದಿನಾರು ಜಿನಗೃಹಗಳುಂಟು
ಒಂದುಗೂಡಿದರೈದು ಮೇರುವಿಗೆ ಎಂಬತ್ತು ನಲಯವಾಯಿತವ ವಂದಿಸು
ಮುಂದೆಂಟನೆಯ ದಿವಿಯುಂಟು ಅದರ ನಾಲ್ದೆಸೆಯೊ
ಳೊಂದೊಂದು ದೆಸೆಗೆ ಹದಿಮೂರು ಗಿರಿ ನಾಲ್ದೆಸೆಯೊ
ಳೊಂದೊಂದು ಗೂಡಿದರೆ ಅಯಿವತ್ತೆರಡು ಗಿರಿಯಲೈವತ್ತೆರಡು
ಬಸದಿಗಳುಂಟು ವಂದಿಸು || ೨

ಮತ್ತೆ ಹಿಮವತ್ಪರ್ವತ ಮಹಾ ಹಿಮವಂತ
ಉತ್ತುಂಗ ನಿಷದಗಿರಿ ನೀಲಗಿರಿ ರುಗ್ಮಗಿರಿ
ಬಿತ್ತರದ ಶಿಖರಿಯೆಂದಾರು ಕುಲಗಿರಿಗಳು ಇವು ಮೇರುವಿಗೆ ಎಡಬಲದಲಿ
ಬಿತ್ತಿಯಂದದಿ ಮುಡು ಪಡುವಣ ಸಮುದ್ರಮಂ
ಪತ್ತಿರಾಜಿಸುತಿಹವು ಪಂಚಮೇರುವಿಗೆ ಮೂ
ವತ್ತು ಕುಲಗಿರಿಗಳುಂಟಲ್ಲಿ ಮೂವತ್ತು ಜಿನ ನಿಲಯವುಂಟು ವಂದಿಸು || ೩

ವಿಜಯಾರ್ಧ ಪರ್ವತಗಳೆಮದು ನೂರೆಪ್ಪತ್ತು
ರಜತಗಿರಿ ಪರ್ವತಗಳುಂಟು ನೂರಿಪ್ಪೆತ್ತು
ಸುಜಿನ ವಾಸಗಳುಂಟು ಪೂಜಿಸೈ ನೀ ಮತ್ತೆ ನೂರುವಕ್ಷಾರ ಶೈಲಂ
ನಿಜದಲೊಪ್ಪುವವಲ್ಲಿ ನೂರು ಜಿನಗೃಹವುಂಟು
ಭಜಿಸಿವೆಲ್ಲವು ಕಲ್ಲು ಮರದ ಬಸದಿಗಳಲ್ಲ
ರಜತಮಯ ಹೇಮಮಯ ರತ್ನಮಯ ಬಸದಿಗಳು ನವರತ್ನ ದೇಹಾರವೂ || ೪

ಮಾನುಷೋತ್ತರ ಗಿರಿಗೆ ನಾಲ್ಕು ಮತ್ತಿಕ್ಷುಕಾರ
ಸಾನು ನಾಲ್ಕಕ್ಕೆ ನಾಲ್ಕು ಜಂಬೂ ಶಾಲ್ಮಲಿ ತರು
ಸ್ಥಾನದಲಿ ಹತ್ತು ಕುಂಡಲ ಪರ್ವತಕೆ ನಾಲ್ಕು ರುಚಕ ಶೈಲದಲಿ ನಾಲ್ಕು
ಈ ನೆಲದ ಕೆಳಗಿಹುದು ಭುವನನಾಸಿಕ ಲೋಕ
ವಾನೆಲದೊಳೇಳೇಳು ಕೋಟಿಯೆಪ್ಪತ್ತೆರಡು ಲಕ್ಷ
ಜಿನೇಂದ್ರ ಗೃಹವುಂಟು ಪುಷ್ಟಗಂಧಾಕ್ಷತೆ ಫಲಗಳಂ ನೆನೆದರ್ಚಿಸು || ೫

ಅದೆ ತೋರುತದೆ ನೋಡು ನಕ್ಷತ್ರಗಳ ಮೊತ್ತ
ವದನು ಜ್ಯೋತಿರ್ಲೋಕವೆಂಬರಲ್ಲಿಯ ವಿಮಾ
ನದಲಿ ತಪ್ಪದೆ ಜೀನಾಲಯವುಂಟು ಲೆಕ್ಕವಿಲ್ಲದಸಂಖ್ಯಾತಂಗಳೂ
ವಿದಿತ ವೆಂತರಲೋಕವುಂಟು ವೆಂತರಿಗರೆಂ
ಬುದು ಸುರರ ಭೇದ ಜ್ಯೋತಿರ್ಲೋಕದಂತೆ ಮ
ತ್ತದರಲ್ಲಿಯು ಲೆಕ್ಕವಿಲ್ಲದೆಯಸಂಖ್ಯಾತ ಜಿನನಿಲಯವುಂಟು ವಂದಿಸು || ೬

ಮೇಲೆಸೆವುದುಮ್ಮ ವೀಶಾನಂ ಸನತ್ಕುಮಾ
ರಾಲಿಂದ್ರ ಬ್ರಹ್ಮಬ್ರಹ್ಮೋತ್ತರಂ
ಶ್ರೀಲಾಂತವಂ ಸುಕಾಪಿಷ್ಟ ಭ ಶುಕ್ರಂ ಮಹಾಸ್ರುತಂಸ್ಸತಾರವೆಂದೂ
ಸಾಲಿಂ ಸಹಸ್ರರಾನಂತಂ ಪ್ರಾಣತಂ
ಪೇಳಲಾರಣ ಮೆಚ್ಚುತ ಸ್ವರ್ಗ ಪದಿನಾರು
ಕಾಲಕ್ಷಮವೆಂಬತ್ತನಾಲ್ಕು ತೊಂಬತ್ತಾರು ಸಾವಿರದೇಳುನೂರು ಬಸದಿ || ೭

ಅದರಿಂದ ಮೇಲೆ ಗ್ರೈವೇಯಕಂ ಮೊದಲಾದ
ತುದಿಗೆ ಸರ್ವಾರ್ಥ ಸಿದ್ದಿಯ ಮುಟ್ಟು ಮುನ್ನೂರು
x x x x  ಅರುಹು ಸಾಲೆವುಂಟು ಮನದಲ್ಲಿ ನೆನೆದರ್ಚಿಸು
ಅದರಿಂದ ಮೇಲೆ ಹನ್ನೆರಡು ಯೋಜನದಲ್ಲಿ
ಸದಮಳ ಸಲ್ಲಿಸಿದ ಭೂತಳವುಂಟು
ಅದರೊಳಗೆ ನೆಲಸಿಪ್ ಸಿದ್ಧಪರಮೇಷ್ಠಿಗಳ ನೆನೆದು ನೀ ಧ್ಯಾನಿಸುವರಾ || ೮

ಎಲ್ಲವಂ ಬಲಗೊಂಡ ಬಳಿಕ ನಿನ್ನಯ ತನುವ
ಮೆಲ್ಲನೆ ಜಿನವಾಸವೆಂದು ನಿನ್ನಾತ್ಮನಂ
ಸಲ್ಲಲಿತ ಜಿನನೇ ಕಣ್ಮುಚ್ಚಿ ಸುಜ್ಞಾನ ದೃಷ್ಟಿಯಿಂದೊಳಗೆ ನೋಡು
ಅಲ್ಲಿ ತೋರ್ಪನು ಚಿದಂಬರ ಪುರುಷ ಮೊತ್ತಮೊದ
ಲಲ್ಲಿ ತೋರನನುದಿನಕ್ರಮದಿ ತೋರ್ಪನು ಕರ್ಮ
ವೆಲ್ಲಾ ಕೆಡುಗುಂ ಮುಕ್ತಿಯಹುದ ನೀನಭ್ಯಾಸಿಸಪರಾಜೀತೇಶನಾಣೆ|| ೯

 

. ಪುತ್ಥಳಿಪುತ್ಥಳಿ

ಪುತ್ಥಳಿ ಪುತ್ಥಳಿ ತಿಂಗಳ ಬೆಳಕಿನ
ಪುತ್ಥಳಿ ನನ್ನ ಕಂಗಳಂ ಮನವ ನೀ
ಸೂರೆಗೊಂಡೆ ಬೆಳುದಿಂಗಳ ಬೆಳಕಿನ ಪುತ್ಥಳಿ || ಪಲ್ಲವಿ

ಮಾಯದ ಪುತ್ಥಳಿ ಬೇರೊಬ್ಬ
ಕೈಯ ಮುಟ್ಟಿ ಮಾಡದ ಪುತ್ಥಳಿ
ಬಾಯಿ ಮಾತಲಿ ಹೇಳಬಾರದ ಪುತ್ಥಳಿ
ಅಯ್ಯಾ ಮಜ್ಜನಾದಿಯ ಪುತ್ಥಳಿ|| ೧

ನುಡಿಗೆಟ್ಟ ಮೂಲೋಕದಲ್ಲಿ ಕಂಡ
ಕಡೆ ಹರಿದಾಡುವ ಪುತ್ಥಳಿ
ಕಡೆ ಮೊದಲೆ ಕಂಡದ ಪುತ್ಥಳಿ ಅವ
ಗಡ ನಿನ್ನ ರೂಪಿನ ಪುತ್ಥಳಿ|| ೨

ಉಪಸಮ ತಿಲದ ಪುತ್ಥಳಿ ನೋದದ
ತ್ರಿಪುರದ ಸುಡುವೆನ್ನ ಪುತ್ಥಳಿ
ಅಪರಾಜಿತೇಶನ ರೂಪಿನ ಪುತ್ಥಳಿ
ಅಪವರ್ಗವೆಯ್ದುವ ಪುತ್ಥಳಿ|| ೩

 

. ಸಾಧನೆಯಮಾಡು

ಸಾಧನೆಯ ಮಾಡು ಕಂಡ ಧೀರಯೋಗಿ ಬಂದು
ಮೂದಲಿಸಿ ಹಗೆಗಳು ಮುಟ್ಟಿ ಕೈ ಮಾಡದ ಮುನ್ನ || ಪಲ್ಲವಿ

ಆಯುಷ್ಯದಂತ್ಯದೊಳು ಮುಪ್ಪು ತಬ್ಬುತ
ನೋಯಿಸುತ ನಿನ್ನ ಕೊಲ್ಲುವ ಮುನ್ನ
ಒಯ್ಯಾರದಿ ದಿನ ನೂಂಕದೆ ನಿಲುತಾರು ತಪದಲ್ಲಿ
ಕಾಯ ದಂಡನೆಗರಳೆಂಬ ಕರ್ಮವ ಗೆಲುಮಲ್ಲ || ೧

ದುರ್ವಿಚಾರಗಳ ನಡೆನುಡಿಯಿಂದ ಸ್ವಸ್ಥವೆಂಬ
ಪರ್ವತವಲ್ಲಾಡಗೊಡದಿರು ದೃಢದಿಂ
ಸರ್ವರೊಳು ಸಮಚಿತ್ತವಿರಿಸಿ ಬಂದ ಕೋಪ
ಗರ್ವಮಾಯೆ ಲೋಭಗಳ ಕಳೆ ಕಠಾರಿಯಿಂ || ೨

ಬೀಜ ಮಾಡಿ ಬೆಳೆದು ವಿಶೋಧ ತಪ್ಪಿದೊಡೆ ಮೋಹ
ರಾಜ ನಾಳೆ ಕೆರಳಿ ಕೈ ಮಾಡದಿರನು
ಗಾಜಗೋಜನುಳಿದು ಸನ್ನದ್ಧ ಚಿತ್ತನಾಗಿಯಪ
ರಾಜಿತೇಶ್ವರನ ಧ್ಯಾನವೆಂಬ ವಜ್ರಾಯುಧದಿಂದ || ೩

 

. ಅರಿಹಂತಅತಿಶಾಂತ

ಅರಿಹಂತ ಅತಿಶಾಂತ ಕರುಣದಿಂದೆಮ್ಮ ನೋಡ|| ಪಲ್ಲವಿ

ಸಾವು ಹುಟ್ಟಿಗೆ ಸಿಕ್ಕಿದಾಹುತಿಗೊಂಬರ
ನೋವನುಗ್ಗೊತ್ತಿ ಸಂಭವಿಸಲಿಲ್ಲವೇ || ೧

ಕರ್ಮದೊಳಗೆ ಬಿದ್ದ ದುರ್ಮತಿಗಳನೆತ್ತಿ
ಧರ್ಮರೂಪಿನೊಳೆಮ್ಮ ನಿರ್ಮಿಸಲಿಲ್ಲವೇ || ೨

ಭವಸಾಗರದವರೆಗೆ ಧರ್ಮ ಹ
ಸ್ತವ ನೀಡಿ ತೆಗೆದುಸ್ತವ ಮಾಡಲಿಲ್ಲವೇ || ೩

ವಿಷಯದ ಸೊಕ್ಕೆಂಬ ವಿಷವೇರಿದವರಿಗೆ
ವಿಷ ಹರ ಕಿರನ ನಿರ್ವಿಷ ಮಾಡಲಿಲ್ಲವೇ|| ೪

ಕುಪಥಕ್ಕೆ ಬೀಳ್ವರ ಸುಪಥಕೆ ಪಿಡಿದೆತ್ತಿ ನ
ನ್ನಪರಾಜಿತೇಶನ ನೀ ಕೃಪೆದೋರಿಲ್ಲವೇ|| ೫

 

೧೦. ಬದ್ದುಬಸ್ತಿಯಹೋಗು

ಬದ್ದು ಬಸ್ತಿಯ ಹೋಗು ಬಾಳದೆ ಹೋಗು ಬಾಳು
ತಿರ್ದ್ದು ಬಸ್ತಿಯ ಹೋಗು ಮನುಜಾ
ಇದ್ದೊಮ್ಮೆ ಬಾಳಲಾರದೆ ಹೋಗು ನಾಲ್ಕಿವು
ಹೆದ್ದಾರಿಗಳು ಮೋಕ್ಷ ಪುರಕೆ ನಡೆ ಮನುಜಾ|| ಪಲ್ಲವಿ

ನಾಲ್ಕು ತೆರದಲಿ ಬಸ್ತಿಯ ಹೊಕ್ಕವಗೆ ದೀಕ್ಷೆ ಮೂರು
ನಾಲ್ಕು ಜಲ್ಮಕೆ ಮುತಿಯಹುದು
ನಾಲ್ಕು ತೆರದಲಿ ಬಸ್ತಿಯ ಹೋಗುವಂದವ
ನಾಲ್ಕನು ಕೇಳೆ ಹೇಳುವನು || ೧

ಪೊಕ್ಕು ಸಂಸಾರವ ಜವ್ವನರಿವನ್ನಕ ಸುಖಿಸಿ ಮ
ತ್ತಕ್ಕಾರು ಮಿಗೆ ದೀಕ್ಷೆಗೊಂಡು
ಚೊಕ್ಕ ತಪಸು ಮಾಡಿದರೆ ಬದ್ದು ಬಸ್ತಿಯ
ಹೊಕ್ಕನವ ಮುಂದೆ ಮುಕ್ತಾ || ೨

ಜಾಳು ವಿಷಯವಾವ ಸುಖವೆಂದು ಜವ್ವನ
ಕಾಲದೊಳೆ ದೀಕ್ಷಯನಾಂತು ಸಂಸಾರದೆ
ಬಾಳ ಬಸ್ತಿಯ ಹೊಕ್ಕನವನಿನ್ನು ನೀ
ನಾಳೆಯ ಮೋಕ್ಷದ ಪಟ್ಟದರಸು ಕಾಣಾ || ೩

ಸತಿಸುತ ಧನಕನಕಾದಿ ಸಂಪದದೊಳು
ಕ್ಷಿತಿ ಮೆಚ್ಚುವೊಲು ತಾನು ಬಾಳುತಲಿದ್ದು
ಯತಿ ಸನಿಹವ ಸಾರಿ ದೀಕ್ಷೆಯಾಂತವ ಬಾ
ಳುತ ಬಸ್ತಿಯ ಹೊಕ್ಕನವ ಮುಕ್ತ || ೪

ಸಾಲ ಶೂಲದಿ ಬಡತನ ಸತಿಸುತರ ಹೊಯಿ
ಮಾಲೆಗೆ ತಳೆ ತುಂಬಿಟ್ಟವನು
ಬಾಳಲಾರದೆ ಬಸ್ತಿಯ ಹೊಕ್ಕನವ ಮುಂದೆ
ಮೂಲೋಕ ಪದವವನಾಳುವೆನು || ೫

ಆವ ಪರಿಯಲಾದರೂ ಹೊನ್ನು ಹೆಣ್ಣು ಮ
ಣ್ಣ ವಿಧಿ ಮೂರನು ತೊರೆದು
ಜೀವಿಸಿದವಗೆ ಜಿನನಾಥನ ರೂಪಾಂತ
ಜೀವನವೇ ಜೀವರತ್ನ || ೬

ತಪಸಿಯಾಗಲಿ ಗೃಹವಂತನಾಗಲಿ ದೇಹ
ದುಪಭೋಗಗಳು ಮುಳುಗಿರಲಿ
ಸ್ವಪರ ತತ್ವವನರಿದಾತ್ಮನ ಕಂಡಡೆ
ಅಪರಾಜಿತೇಶ ಮೆಚ್ಚುವನು|| ೭