೩೧. ಮಂದಾರಗಿರಿಯಲ್ಲಿಮಿಂದ

ಮಂದಾರ ಗಿರಿಯಲ್ಲಿ ಮಿಂದ ಮಹಿಮನಹುದೊ ಜಯ ಜಯ
ಮಂದಾರ ಗಿರಿಯಲ್ಲಿ ||     ಪಲ್ಲವಿ

ಕಡಲು ಹೆಚ್ಚಿ ಗಾಳಿ ಘಮ್ಮನೆ ತೀಡಲು
ಒಡನೆ ದಿಕ್ಕು ಚೊಕ್ಕವ ಮಾಗೆ
ಬಿಡದೆ ಕಲ್ಪತರು ಪುಗೆದೊರಲು ಜಗ
ದೊಡೆಯನ ಪಡೆದಳು ಶಿವದೇವಿ ||  ೧

ಒಂದು ಲೋಕದ ಶಂಖ ಬೋಂ ಬೋಂ ಬೋಂರೆನ
ಲೊಂದು ಲೋಕದ ಭೇರಿ ಬಾರಿಸಲು
ಒಂದು ಲೋಕದ ಘಂಟೆ ಢಂಡಂ ಢಣರೆನುತ
ಒಂದು ಲೋಕದ ಸಿಂಹನಾದಗಳು || ೨

ಸಗ್ಗಿಗರಾಸನ ನಡುಗಲಿದೆವೆಂದು
ಭೋಗ್ಗನೆದ್ದು ಕೈಗಳ ಮುಗಿಯೆ
ಸ್ವರ್ಗದೊಡೆಯ ಇಂದ್ರಾಣಿಯನೊಡಗೊಂಡು
ಸಗ್ಗಿಗರೆಲ್ಲ ಸಹಿತ ಸಹಿತ ಬಂದು ||   ೩

ಇಂದ್ರನೈರಾವತ ಗಜವೇರಿಯೇ ಬಂದು
ಒಂದನ ಮಾಲೆಯ ಮುಂದೆ
ನಿಂದು ಶಚಿದೇವಿಯನೊಳಹಗಿಸಲು
ತಂದು ಕೊಟ್ಟಳು ಜಿನಬಾಲಕನ ||    ೪

ಮೂವತ್ತೆರಡು ಮುಖದ ದಂತಂಗಳು ಸ
ರೋವರ ಕಮಲದ ಅಂಗಳಲ್ಲಿ
ದೇವಾಂಗನೆಯರು ನರ್ತಿಸುತಿರಲೈ
ರಾವತ ಗಜಕುಣಿಯತ ನಡೆಯೆ ||    ೫

ಹರಿವ ನೆಗೆವ ನೆಲದಲ್ಲಿ ಕುಪ್ಪಳಿಸುವ
ಕರವ ಮುಗಿವ ಹರುಷದಿ ಕುಣಿವ
ಕರವ ಮುಗಿವ ಗಗನಕೆ ಲಂಘಿಸುವ
ಸುರಸಂತತಿಯ ಸಂದಣಿ ನಡೆಯೆ || ೬

ಸುರಶೈಲದ ಪಾಂಡುಕ ಶಿಲೆಯೊಳ್ತಂದಿರಿಸಿ
ಮೆರೆವ ಜಿನಬಾಲಕನ ಅಮರೇಂದ್ರರು
ನೆರೆದಿಕ್ಕಲ್ಲದಲಿ ನಿಂದರು
ಹರಿಗಭಿಷೇಕವನೆಸಗಿ ||    ೮

ಕ್ಷೀರಾಂಬುದಿ ನೀರನೆ ಮೊಗೆಮೊಗೆದು
ಓರೋರವರ ಕೈಗಳಲಿ
ಸಿರಿ ಕೊಡುವ ಕೊಳುವತಿ ಸಂಭ್ರಮದಿಂ
ದಾರುಣಿಗಾಯಿತ್ತ ಹೊಸಗಂಗೆ ||     ೯

ಸುರರಭಿಷ್ಟಿತವ ಮಾಡಿದ ಕ್ಷೀರವು
ಸುರಗಿರಿಯಿಂದಿಳಿತರುತಿರಲು
ವರ ಕನಕಜ್ವಲವಾದುದು ಬಿಳಿಯ
ಗಿರಿಯಿಂದ ಆಚಾರ್ಯ್ಯಮದಿಳೆಗೆ ||  ೧೦

ಇಂದ್ರಶತಂ ನೆರದಭಿಷೇಕವನು ಜಿ
ನೇಂದ್ರಗೆಸಗಿ ಮುನಿಯಲೊಡನೆ
ಇಂದ್ರಾರ್ಚಿತ ದಿವ್ಯಾಭರಣಗಳನು
ಇಂದ್ರನ ಸತಿ ತಂದು ತೊಡಿಸಿದಳು ||         ೧೧

ಹಾಡಿ ದಣಿಯರು ಕೆಲಂಬರಲ್ಲಿ ನೃತ್ಯ
ನಾಡಿ ದಣಿಯರು ಕೆಲಂಬರಲ್ಲಿ
ನೋಡಿ ನೋಡಿ ಜಿನಪುಂಗವನನು ಕೊಂ
ದಾಡಿ ದಣಿವರು ಕೆಲಂಬರಲ್ಲಿ ||       ೧೨

ತಮತಮರ್ಚಿಸಿ ಪೂಜಿಸಿ ಪೊಡ
ಮಮಯೆಂದು ಮಹಿಮೆಯ ಹೊಗಲಿ
ಅಮರೇಂದ್ರರು ಜಿನಶಿಶುವಿಗೆ ಹೆಸರಿಟ್ಟು
ಅಮರಗಜದ ಬೆನ್ನಿಗೆ ತಂದು ||       ೧೨

ಭವನ ವಿಮಾನವು ಜ್ಯೋತಿರ್ವೆಂತರ
ದಿವಿಜರ್ನೆರೆದೆಂತೆನಲು
ಭುವನಚ್ಚರ್ಯ್ಯವೆನಲು ಜನಜನನಿಯ
ಭುವನಕ್ಕೆ ತಂದರು ಜಯ ಜಯವೆನುತಾ ||   ೧೪

ಜಿನಜನನಿಯನಭಿವಂದಿಸಿ ಬಳಿಕಾ
ಜಿನಜನಕನ ನೆನೆಕೊಂಡಾಡಿ
ಜಿನಪತಿಯನು ಬೀಳ್ಕೊಂಡೈದಿದರಾ
ದನುಜಾರ್ತ್ತತಮಿರ್ದೆಡೆಗೆ ||          ೧೫

ಜನ್ಮ ಜರಾಮರಣಂಗಳ ಭೀತಿಯನೊ
ಮೊದಲೊಳೆ ತೊಲಗಿಸು ಓಡಿಸು
ಮನ್ಮಥಹರ ನೇಮಿಶ್ವರಗೆಸಗಿದ
ಜನ್ಮಾಭಿಷೇಕವು ಕಲ್ಯಾಣ ||          ೧೬

 

೩೨. ನೇಮಿಜಿನೇಶ್ವರಸ್ವಾಮಿ

ನೇಮಿಜಿನೇಶ್ವರಸ್ವಾಮಿ ಕೇಳಿಮನವೊಲಿದು
ನೇಮೀಶ್ವರಸ್ವಾಮಿ ಪದವಿಯನು ||  ಪಲ್ಲವಿ

ಭವ್ಯಾಬ್ಜ ಭವಭಯ ಹರಣನೆ
ಭವ್ಯವು ಸುಖವೀವ ಜಿನರಗೊಂದನೆ ಮಾಡಿ || ೧

ವರಪಂಚಗುರುಗಳ ಸ್ಮರಿಸುತ ಮನದೊಳು
ಉರುತರ ಪದವಿಯ ಪಡೆಯಬೇಕೆನುತಲಿ ||  ೨

ಜಿನ ಮುಖಾಂಬುಜದೊಳಗುದಿತ ಬಾರದೆ ಎನ್ನ
ಮನವಚನದಿ ಸ್ಮರಿಸುತ ವರಗಳ ಬೇಡಿ ||     ೩

ವೃಷಭನನಾದಿ ಹೆತ್ತ ಮಗಣದರರಂತ್ಯ
ರುಷಿಗಳಿಗೆರಗಿ ಬೇಡುವೆ ಮತಿಯೀಯಲೆಂದು ||        ೪

ಜಿನಯಕ್ಷ ಯಕ್ಷಿ ಶಾಸನ ದೇವಿಯರನ್ನು
ಅನುನಯನದಿಂ ಬಲಗೊಂಡು ಜಪಿಸಿದೆನು || ೫

ನೇಮಿನಾಥನ ಪಂಚಕಲ್ಯಾಣವನು ಹೇಳ್ವೆ
ನೇಮದಿಂದ ಶಮಭವಗಳು ಸಹಿತವಾಗಿ ||    ೬

ವರಜಂಭುದ್ವೀಪದ ಪೂರ್ವವಿದೇಹದೊಳು
ದುರುತರ ಪುಷ್ಕಳ ವಿಷಯ ದೇಶದೊಳಿಹೆ ||   ೭

ಜಾಳಾಂತಕವೆಂಬ ಕಾನನವಿಹುದಲ್ಲಿ
ಕಳನ ಪರಕಿಣಿಯೆನಿಸಿ ಗುರ್ಣಿಸುತಲಿ ||        ೮

ಅದರಧಿಪತಿ ವಿಂದ್ಯಕನೆಂಬ ಶಬರನು
ಸುದತಿಯಾದಳು ವಾಗುರೆಯೆಂಬ ಹೆಸರಿಂದ ||         ೯

ಕ್ರೂರನು ಭೀಕರಾಕಾರ ದುರ್ಮನವನು
ಸಾರಿ ಇರುತಲಿರುತಿರಲೊಂದು ದಿನದೊಳು || ೧೦

ಸತಿಯ ಸಹಿತ ಶಬರನು ಕಾನನದೊಳು
ಪತಿಸುತ ಘೋರ ಮೃಗವ ಬರುತಿರುವಾಗ ||  ೧೧

ಅಮಲಬುದ್ದಿಗಳು ವಿಮಲ ಬುದ್ಧಿಗಳೆಂಬ
ಅಮಲಜ್ಞಾನಿಗಳು ಯೋಗದೊಳಿರುತಿರೆ ಕಂಡಾ ||      ೧೨

ಮಾನವ ರೂಪಿನ ಮೃಗವೆಂದು ಶಬರನು
ಉನ್ನತ ಮನದಿಂದ ಶರವ ಕರ್ಣಕೆಸೆದೆ ||     ೧೩

ಸತಿಲಾಗುರೆ ಕಂಡು ಅತಿನೋವುತ ಬಂದು
ಪತಿಯ ಕರವ ಪಿಡಿದತಿ ಶಂಕಿಸುತಲಿ ||        ೧೪

ಅವರು ಮೃಗಗಳಲ್ಲ ಮಹಾಮುನಿಗಳುಯೆಂದು
ಅವನು ಸಹಿತವಾಗಿ ಮುನಿಗೆ ವಂದನೆ ಮಾಡಿ ||        ೧೫

ಅವರಿರ್ವರಿಗೂ ಮುನಿಗಳು ಹರಸಲಾಗಿ
ಸುವಿನಯದಿಂದ ಪತಿಗಳು ಹರುಷದಿಂದ ||    ೧೬

ಧರ್ಮವ ಕೇಳಿ ಬಳಿಕ ಮನದಲ್ಲಿ ಭವ್ಯ
ದುರ್ಮನವನು ಹರಿಸಿದ ಸಮ್ಯಕ್ತ್ವವು ಹುಟ್ಟಿ ||  ೧೭

ಅಣುವೃತ ಮೊದಲಾಗಿ ಹಿಂಸಾವೃತವಕೊಂಡು
ಪ್ರಣುತವಾಗಿ ನಾಡ ಸುತ್ತುತ ತನುವನ್ನು ಬಿಟ್ಟು ||       ೧೮

ಅವಿಷಯದ ಮಂದರಕಿನಿ ಪುರದೊಳು
ಭಾವಜ ರೂಪ ವೈಶೋತ್ತಮ ಜಿನಪರ ಭಕ್ತಾ ||          ೧೯

ಋಷಭದತ್ತನು ಎಂಬ ಪರದನಾಥನ ಸತಿ
ಶಸಿನಿ ಭವದನೆ ರತಿಗೆ ಸಮಯೆನಿಪಳು ||     ೨೦

ಜಿನಪದ ಭಕ್ತೆಯ ಘನಶೀಲವತಿ ಬಂದೂ
ಜನಕೆ ಸಂಪ್ರೀತೆ ಪದ್ಮಶ್ರೀಯೆಂಬಳು ||        ೨೧

ಅವರ ಗರ್ಭದಿ ವಿಂಧ್ಯಕನು ಬಂದುದಿ ಸಖಾ
ಅವನಿಗೆ ವಿಭೃಕೇತುಯೆಂಬ ಹೆಸರಿಡೆ ||        ೨೨

ನವಯವ್ವನವ ಪಡೆದ ವಿಭ್ರಕೇತುವಿಗೆ
ಯುವತಿಯಾದಳು ಸೌಂದರಿಯೆಂಬ ರಮಣಿಯು ||     ೨೩

ಸಾರಸುಖವನುಭವಿಸುತ್ತಲನುದಿನ
ಸಾರ ಹೃದಯ ನಿರುತಿರವೊಂದು ದಿನದೊಳು ||        ೨೪

ನಿರ್ಮಲಧರರೆಂಬ ಮುನಿಗಳು ಬರಲಾಗಿ
ಧರ್ಮಧರ್ಮವಕೇಳಿ ವೈರಾಗ್ಯ ಪರನಾಗಿ ||   ೨೫

ಸುತನು ಸುಕೇತು ಎಂಬವಗೆ ರಾಜ್ಯವಕೊಟ್ಟು
ಅತಿ ಮುದದಿಂ ದೀಕ್ಷೆ ಪಡೆದು ಮುನಿಗಳಲ್ಲಿ ||  ೨೬

ಉಗ್ರೋಗ್ರದಿಂದ ತಪಸು ಮಾಡಿ ತನುವ ಬಿಟ್ಟು
ಶೀಘ್ರದಿಂದಲಿ ಹೋಗಿ ಸೌಧರ್ಮದಲಿ ಹುಟ್ಟಿ || ೨೭

ಶ್ರೀಧರನೆಂಬ ನಾಮವನು ಪಡೆದು ಮತ್ತೆ
ಆದರಿಸುತ ದಿವ್ಯಸುಖದೊಳಗಿರಲಿತ್ತ ||        ೨೮

ಪಡುವಣ ಪುಷ್ಕರಾ ದೀಪದೊಳಗಿರುತಿಹ
ಪಡೆದತಿ ಶೋಭೆಯೊಳಿರುವ ವಿದೇಹದಿ ||     ೨೯

ಗಂಧಿಳ ವಿಷಯದೊಳಿಹ ವಿಜಯಾರ್ಧದಾ
ಅಂದವಡೆದ ಉತ್ತರ ಶ್ರೇಣಿಯೊಳಗಿಹ ||      ೩೦

ಅಮರೇಂದ್ರನ ಪುರಕೆಣೆಯೆಂದೆನಿಸುತ
ಅಮಿತ ಸಿರಿಯೊಳಿರುತಿಹ ಸೂರ್ಯ ಪ್ರಭೆಯೆಂಬ ||     ೩೧

ಪಟ್ಟಣದಧೀಪತಿ ಸೂರ್ಯ ಪ್ರಭನುಯೆಂಬ
ದಿಟ್ಟನಾಥನ ಪಟ್ಟದರಸಿ ಗಾಂಧಾರಿಯು ||     ೩೨

ಅವರ ಗರ್ಭದಿ ವಿಭ್ಯಕೇತು ಚರದೇವಾ
ಕುವರನಾದನು ಚಿಂತಾಗತಿ ಹೆಸರಲಿ ||       ೩೩

ಬಾಲಕ ಹಲವು ಸೆಲೆ ಸಕಲ ವಿದ್ಯೆಗಳನೂ
ಲೀಲೆಯಿಂ ಕಲಿತು ಸುಖಾಸುಧೆಯೊಳಗಿರೆ ||  ೩೪

ಸ್ತ್ರೀಯ ಕಥನದಿಂದ ಹೇರ ಮನಸನಾಗಿ
ಸೈಯಮಿಯಾಧಾರದಿಂದ ದೀಕ್ಷೆಯಗೊಂಡು ||         ೩೫

ದ್ವಾದಶ ತಪದೊಳಗಾಚರಿಸುತ ಮುನಿ
ಆದರದಿಂ ಸನ್ಯಾಸನದಿ ತನುವ ಬಿಟ್ಟು ||      ೩೬

ಮಹೇಂದ್ರ ಕಲ್ಪವೆಂದೆಂಬ ಸ್ವರ್ಗದಿ ಪುಟ್ಟಿ
ಮಹಿಮನು ಸುಖಸುಧೆಯಿಂದಿರುತಿರಲಿತ್ತ ||   ೩೭

ಜಂಬೂದ್ವೀಪದೊಳಿಹ ಭರತಾರ್ಯ ಖಂಡದ
ಇಂಬಾಗ ಚಪ್ಪನ್ನದೇಶಕೆ ಅತಿಶಯವಾದ ||    ೩೮

ವಾತ್ಸಲ್ಯ ವಿಷಯಕೆ ಅತಿಲೋಭೆಯೊಳಗಿಹೆ
ಶತಪತ್ರಮಿತ್ರನ ಪುರಕೆಣೆಯೆನಿಸಿಹೆ ||         ೩೯

ಸಿಂಹಪುರವುಯೆಂಬ ಪಟ್ಟಣದೊಳಗಿಹ
ಸಿಂಹ ಪರಾಕ್ರಮಿ ಶಶಿಶಾಂತ ಸ್ಮರ ರೂಪಾ || ೪೦

ಜಿನಪದ ಸರಿಸಿ ಬೃಂಗನೆಂದೆನಿಪನೂ
ಘನಮುನಿ ಜನಕೆ ತಾ ಸುರಧೇನುಯೆನಿಸುವಾ ||       ೪೧

ಅರಘದಸನುಯೆಂಬ ಧರಣೀಶ್ವರನಿಗೆ
ಅರಸಿಯಾದಳು ಜಿನದತ್ತೆ ಸುಶೀಲೆ ಜಾತೆ ||   ೪೨

ಇಂತೆಸೆದಿಹ ದಂಪತಿಗಳು ಹರುಷದಿ
ಕಂತು ವಿಜಯ ಜಿನರಾಜನ ಪೂಜೆಯ ಮಾಡಿ ||        ೪೩

ಅವರ ಗರ್ಭದಿ ಚಿಂತಾಗದಿ ಚರದೇವ ಬಂದೂ
ಕುವರನಾದನು ಅಪರಾಜಿತಾ ನಾಮದಿ ||     ೪೪

ನವಯೌವ್ವನವ ಪಡೆದ ಅಪರಾಜಿತಗೆ
ಯುವತಿಯಾದಳು ಪ್ರೀತಿಮತಿಯೆಂಬ ನಾಮದಿ ||      ೪೫

ಪುತ್ರನುದಿಸಿದನು ಪ್ರೀತಿಂಕುರನುಯೆಂಬ
ಪುತ್ರ ಪಾತ್ರರುಗೂಡಿ ಸುಖದಿಂದಲಿರಲೊಂದು ||        ೪೬

ದಿನದೊಳು ಬಿಜಯಂಗೈದರು
ಧ್ಯಾನಕ್ಕೆ ನವಪದಾರ್ಥವ ತಿಳಿದತಿಶಯ ಮುನಿಗಳು || ೪೭

ಬಂದರುಯೆಂಬುದ ಕೇಳಿ ರಾಜೇಂದ್ರನು
ವಂದನೆಯನು ಮಾಡಿ ಧರ್ಮತತ್ವವ ಕೇಳಿ ||  ೪೮

ನಿರ್ವೇಗಪರನಾಗಿ ಸಕಲ ಸಾಮ್ರಾಜ್ಯವ
ಸರ್ವಧಿಕಾರವ ಅಪರಾಜಿತಗೆ ಕೊಟ್ಟು ||       ೪೯

ಮುನಿವರನಿಂದ ದೀಕ್ಷೆಯ ಕೊಡು ತಪದಿಂದ
ಅನಘನು ಪಡೆದ ಗಂಧಕುಟ್ಟಿ ಪದವಿಯ ||     ೫೦

ಧರ್ಮಾವೃತವ ಭವ್ಯ ಜನರಿಗೆ ಪೇಳುತ
ಕರ್ಮಕ್ಷಯವ ಮಾಡಿ ಮುಕ್ತಿಗೆ ಸಂದ ದೇವಾ ||          ೫೧

ಅಮರೇಂದ್ರನು ಬಂದು ನಿರ್ವಾಣ ಪೂಜೆಯ
ಅಮರೇಂದ್ರ ಮಾಡಿ ಹೋದುದ ಕೇಳು ಕುವರನು ||     ೫೨

ದರುಶನವನು ಮಾಡಿ ಬರುವ ಪರಿಯಂತರವು
ಹರುಷದಿಂದನಶನವನು ಕೊಳ್ಳೆನೆನುತಲಿ ||   ೫೩

ವೃತವ ಧರಿಸಿ ಅಪರಾಜಿತ ಕುವರನು
ಉತ್ತರಮುಖವಾಗಿ ದಳವು ಸಹಿತ ನಡೆಯೆ ||  ೫೪

ಸುರಪತಿ ತಿಳಿದು ಕುಭೇರಗೆ ಬೆಸಸಿದ
ಉರುತರ ವೃತವನು ತೀರಿಸಿಕೊಡುಯೆಂದು ||          ೫೫

ಧನಪತಿ ಬಂದು ರಚಿಸಿ ಗಂಧಕುಟ್ಟಿಯನು
ಅನುನಯದಲಿ ಕುವರನಾ ವೃತವನು ಅರ್ಚ್ಚಿ ||          ೫೬

ತನ್ನ ಪ್ರತಿಜ್ಞೆ ತೀರಲು ಕುವರನು ಮತ್ತೆ
ತನ್ನ ಪುರಕೆ ಬಂದು ಸುಖದಿಂದಲಿರುತಿರೆ ||    ೫೭

ಒಂದಾನೊಂದು ದಿವಸವು ಧ್ಯಾನದೊಳಿಹ
ಚಂದದಿ ಸಮೆದ ಮುತ್ತಿನ ಚೈತ್ಯಾಲಯದೊಳು ||       ೫೮

ದರುಶನವನು ಮಾಡಿಕೊಂಡು ಮಂಟಪದೊಳು
ಹರುಷದಿ ಕುಳಿತಿಹ ಸಮಯದೊಳೆಚ್ಚರನು ||  ೫೯

ಮುನಿಗಳು ಬಂದರು ಮಿತಗತಿಯ ಮಿತಗತಿ
ಘನತರ ಜಿನರ ಸ್ತುತಿಸಿ ಬಂದು ಕುಳಿತರು ||   ೬೦

ಅಪರಾಜಿತರಾಜನು ಕಂಡು ನಮಿಸಿ ತಾ
ಅಪರಮಿತವನೊಳು ಧರ್ಮ ತತ್ವವ ಕೇಳಿ ||   ೬೧

ತನ್ನ ಭವವ ಕೇಳಿ ವೈರಾಗ್ಯವನು ತಾಳಿ
ತನ್ನ ಮಗನು ಪ್ರೀತಿಂಕರಗೆ ರಾಜ್ಯವ ಕೊಟ್ಟು ||          ೬೨

ಘನತರವಾಗಿ ನಂದೀಶ್ವರ ನೋಂಪಿಯ ಮಾಡಿ
ಘನ ಮಹಿಮನು ದೀಕ್ಷೆವಡೆದ ತಪಕೆ ನೀವೆ ||  ೬೩

ಸನ್ಯಸನ ವಿಧಿಯಿಂದ ತನುವ ಬಿಟ್ಟು
ಉನ್ನತಚ್ಯುತ ಕಲ್ಪದೊಳಗೆ ಜನಿಸಿದರು ||     ೬೪

ಮನಸ ಪ್ರವಿಚರ ಸುಖವನುಭವಿಸುತಾ
ಸಾನುರಾಗದಿ ಅಚ್ಯುತ ಕಲ್ಪವನು ಬಿಟ್ಟು ||     ೬೫

ಜಂಭೂದ್ವೀಪದ ಭರತಾರ್ಯ್ಯ ಖಾಂಡದೊಳಗಿಹ
ಇಂಬಿನ ಕುರುಜಾಂಗಣ ವಿಷಯದೊಳಿಹ ||    ೬೬

ಹಸ್ತಿನಪುರದಧಿಪತಿ ಆ ಚಂದ್ರನೃಪಾ
ವಿಸ್ತಾರದಿಂ ರಾಜ್ಯವನಾಳುತಿರಲಾಗ ||        ೬೭

ಆ ನೃಪತಿಯ ಪಟ್ಟದರಸಿ ಶ್ರೀಮತಿಯೆಂಬ
ಮಾನುನಿ ಜಪದ ಭೃಂಗೆಯೆಂದೆನಿಪಳು ||     ೬೮

ಪುತ್ರನಾ ತಡೆಯಬೇಕೆನುತ ದಂಪತಿಗಳು
ಚಿತ್ತಶುದ್ಧದಿ ಜಿನೇಂದ್ರವಂದನೆ ಮಾಡಿ ||       ೬೯

ಅವರ ಗರ್ಭದಿ ಅಚುತೇಂದ್ರ ಒಂದು ದಿನವು
ಅವನಿಗೆ ಸುಪ್ರತಿಷ್ಠನುಯೆಂಬ ಹೆಸರಿಡೆ ||      ೭೦

ಶೋಡಷ ಪ್ರಾಯವಾಗಲು ಸುಪ್ರತಿಷ್ಠನಿಗೆ
ಮಡದಿಯಾದಳು ನಂದನದೇವಿಯೆಂಬಳು ||  ೭೧

ಆ ಪುಣ್ಯದಂಪತಿಗಳವರ ಗರ್ಭದೊಳು
ಚಾಪಲನೇತ್ರೆ ಸುದ್ರುಷ್ಟಿಯೆಂಬವ ಹುಟ್ಟಿ ||     ೭೨

ರಾಜ್ಯಭಾರವನಾಳುತಿರಲನುದಿನಾ
ರಾಜನು ಸೃಷ್ಟಿಯೊಳಿರುತಿರಲೊಂದು ದಿನ ||  ೭೩

ಉಳ್ಕಪತನು ಕಂಡು ವೈರಾಗ್ಯ ಪರನಾಗಿ
ನಿಷ್ಕಲಂಕನು ಸೂದೃಷ್ಟಿಗೆ ರಾಜ್ಯವಕೊಟ್ಟು ||  ೭೪

ನಂದನರೆಂಬ ಮುನಿಗಳಿಂದೀಕ್ಷೆಯನಾತೂ ಆ
ನಂದದಿಂದ ತಪಸು ಮಾಡಲನುದಿನ ||        ೭೫

ಗಿರಿಗಳು ವೃಕ್ಷನದಿಗಳ ಮೂಲದಿ ನಿಂತು
ಸಾರಹೃದಯ ಧರ್ಮಧ್ಯಾನನಿಷ್ಠೆಗಳಿಂದಾ ||  ೭೬

ಮೂರು ತಿಂಗಳು ಸನ್ಯಾಸನ ವಿಧಿಗಳಿಂದ
ಧೀರನು ಪ್ರತಮಾನುಯೋಗದಿಂದಿರುತಲಿ ||  ೭೭

ಶೋಡಷ ಭಾವನೆಗಳು ಭಾವಿಸಿ ಮುನಿ
ಕೂಡೆ ತೀರ್ಥಂಕರ ನಾಮವನು ಪಡೆದ ಮತ್ತೆ ||         ೭೮

ಸಿಂಹ ವಿಕ್ರೀಡಿತ ಘೋರತಪದೊಳಿರ್ದು
ಸಿಂಹ ಸಮಾಧಿ ವಿಧಿಗಳ ತನುವ ಬಿಟ್ಟು ||     ೭೯

ಮುಕ್ತಿಗೆ ನೆರೆಮನೆಯೆನಿಸುವ ಸರ್ವಾರ್ಥ ಸಿದ್ಧಿ
ಸೂಕ್ತಿಯಿಂದಲಿ ಅಹಮಿಂದ್ರಪದವಿಯನು ||    ೮೦

ಮೂರು ಅಧಿಕ ಮೂವತ್ತು ಸಗರಕಾಲಾ
ಸಾರಸುಖವನನುಭವಿಸುತಲಿರಲೀತಾ ||      ೮೧

ಜಂಬುದ್ವೀಪದೊಳಿಹ ಭರತಾರ್ಯ್ಯ ಖಾಂಡದ
ಇಂಬಗಿಯಿರುತಿಹದ್ವಾರಕ ದೇಶದೊಳು ||     ೮೨

ದ್ವಾರವತಿವೆಂಬ ಪುರವಿರುತಿಹುದಲ್ಲಿ
ದ್ವಾದಶ ಯೋಜನದಗಲ ವಿಸ್ತಾರವೂ ||       ೮೩

ರತ್ನಮಯದ ಕೋಟೆ ಸೌಧ ಉಪ್ಪರಿಗೆಯುಂ
ನೂತ್ನವಾಗಿಹುದತಿ ಸುರಪುರದಂದದಿ ||       ೮೪

ಇಂತೆಸೆದಿಹ ಪುರವರಕಧಿನಾಥನು
ಕುಂತು ಸದ್ರುಶ ಸಮುದ್ರ ವಿಜಯರಾಜ ||     ೮೫

ಶರಣಾಗತ ವಜ್ರ ಪಂಜರವೆನಿಪನು
ಸುರಚಿರಸಮ್ಯಕ್ತ್ವದಿರಯೆಂದೆನಿಪನು ||        ೮೬

ಇಂತೆಸೆದಿಹ ನೃಪತಿಯ ಪ್ರಾಣವಲಭೆ
ಕಂತುಹರನು ಜಿನಪದ ಭಕ್ತೆ ಕಡುಶೀಲೆ || ೮೭

ಮುನಿಜನ ಪರಿಮಾಲೆ ವ್ರತಗುಣ ಸೈಯುತೆ
ಜನನುತೆ ಬಂದು ಜನಕೆ ಚಿತಾಮಣಿ ||         ೮೮

ಶಿವದೇವಿಯೆಂಬ ನಾಮದ ಕಡುಶೀಲೆಯು
ನವಮಣಿ ಮುಕುರಂದತಿಹರು ದಂಪತಿಗಳೂ ||         ೮೯

ಇಂತಿರುತಿಹ ದಂಪತಿಗಳ ಉದರದಿ
ಕಂತುವಿಜಯ ಜಿನಚಂದ್ರನುದಿಪನೆಂದು ||    ೯೦

ಅವಧಿಯಿಂದರಿದು ಕೆಲವರಿಗೆ ಬೆಸಸಿದಾ
ನವರತ್ನ ವೃಷ್ಟಿಯಾ ಕರೆ ದ್ವಾರಾವತಿಲೆಂದು || ೯೧

ದಿನಪತಿ ಬಂದು ರಾಜೇಂದ್ರನಂಗಣದೊಳು
ದಿನ ಮೂರು ಸಂಜೆಯೊಳಗೆ ಮಳೆಗರೆಯಲು ||         ೯೨

ಇಂದ್ರನಾ ಬೆಸದಿ ಶ್ರೀ ಹ್ರಿಂಬುದಿ ಲಕ್ಷ್ಮೀಯು
ಬಂದು ಶ್ರೀಜಿನಮಾತೆಯ ಪಾದಕೆರಗಿ ತಾ ||  ೯೪

ಗಂಗಾನದಿ ಮೊದಲಾದ ಜಲವ ತಂದು
ತುಂಗಸುವರ್ಣ ಕುಂಭದಿ ತಂದೆರೆದರಾ ||     ೯೫

ಅಭಿಷೇಕವ ಮಾಡಿ ಜಿನಮಾತೆಗೆ ತಾವು
ಅಭಿಮತ ಸಿದ್ಧಿಯು ಮನಗಾಗಲಿಯೆಂದು ||    ೯೬

ದಿವ್ಯಾಂಬರಗಳನುಡಿಸಿ ಕಂಚುಕಿಯಿಟ್ಟು
ದಿವ್ಯದೇವಿಯರು ಅಭರಣವ ನಿಟ್ಟರೊ ||       ೯೭

ಕಾಲಲಂದುಗೆ ಗೆಜ್ಜೆ ಕಿರಿವೆಲ್ಲಿ ಮಂತುಕೆ
ಮೇಲೆ ವಢ್ಯಾಣವನಿಟ್ಟು ದೇವಿಯರಾಗಾ ||    ೯೮

ಕಡಗ ಕಂಕಣ ಭುಜಕೀರ್ತಿ ಭಾಪುರಿಗಳು
ಬೆಡಗಿನ ರತ್ನ ಮುದ್ರಿಕೆಗಳನಿಟ್ಟರು || ೯೯

ಹಾರ ಪದಕ ಮುತ್ತಿನಹಾರ ವ್ರಜದ ಸರ
ತೋರಮುತ್ತಿನ ಹತ್ತಕಟ್ಟು ಚಿಂತಕವನು ||     ೧೦೦

ಮುತ್ತಿನೋಲೆಯು ಮೂಗುತಿ ಕರ್ಣಪತ್ರಗಳು
ರತ್ನನಿರ್ಮಿತ ಚಳ ತುಂಬು ಬುಗುಡಿಗಳು ||    ೧೦೧

ರತ್ನಖಚಿತದರ್ಯ್ಯ ಗೆಜ್ಜೆ ಚೌರಿ ತುಂಬಿ ನಿಂದಾ
ನೂತ್ನವಾಗಿಹ ಜೆಡೆ ಬಂಗಾರಗಳಿಟ್ಟರೂ ||     ೧೦೨

ಕಣ್ಣಿಗಂಜನವಿಟ್ಟ ಕಮಲ ವಾಸಿನಿಯರೂ
ಕನ್ನೆಯನೊಸಲಿಗೆ ತಿಲಕವನಿಟ್ಟರೂ ||         ೧೦೩

ಇಂತು ಶೃಂಗರಿಸಿ ದೇವಿಯನು ದೇವಿಯರೆಲ್ಲಾ
ಕಂತುಹರನ ಮಾತೆಗೆ ಛತ್ರ ಚಾಮರವಿಕೆ ||   ೧೦೪

ಗೀತನರ್ತನ ವಾದ್ಯ ನೂತನರ್ತನಗಳೂ
ಕೃತಿವಡೆದ ಜಿನ ಮಾತೆಗೆ ತೋರಿಸುತಾಗಾ || ೧೦೫

ಇಂತು ಸಂಭ್ರಮದಿಂದ ನವನ್ಮಾಸ ಪರಿಯಂತಾ
ಸಂತೋಷದಲಿ ಜಿನಮಾತೆಯನರ್ಚಿಸಿದರು || ೧೦೬

ಒಂದು ದಿನ ಮಾಣಿಕವ ಪಡೆಯೆ ದೇವಿ
ಚಂದದಾ ರತ್ನಾಭರಣಗಳನಿಟ್ಟರೂ ||          ೧೦೭

ಚತುರ್ಥದಿವಸದೊಳು ತೀರ್ಥ ಜಲವ ತಂದು
ಅತಿ ಮುದದಿಂದೆ ದೇವಿಗೆ ತಾವೆರೆದರು ||     ೧೦೮

ದುಗುವಾಂಬರವ ನುಡಿಸಿ ದೇವಿಯರೆಲ್ಲಾ
ದಿಗಿಲನೆ ಪೂಜೆ ಗೃಹಕೆ ಕಳುಹಿದರಾಗ ||       ೧೦೯

ಸುಪ್ತಿಯೊಳಿರೆ ಅಂತ್ಯಜಾವದ ಕಡೆಯೊಳು
ನಿ ಸ್ತ್ರೀ ಕಂಡಳು ಷೋಡಶ ಸ್ವಪ್ನಂಗಳನು ||   ೧೧೦

ಇನನುದಯದೊಳೆದ್ದು ತನುವ ಪ್ರಕ್ಷಲಿಸಿ
ಜನನುತೆ ಸರ್ವಾಭರಣ ಭೀಷಿತೆಯೊಳು ||    ೧೧೧

ಪತಿಯ ಬಳಿಗೆ ಅತಿ ಹರುಷದೊಳಿಂತು
ಪತಿಯೊಳು ತಾ ಕಂಡ ಕನಸುಗಳನು ಹೇಳೆ ||          ೧೧೨

ಮಡದಿ ಹೇಳಿದ ಮಾತ ಕೇಳಿ ರಾಜೇಂದ್ರನು
ಮಂಡೆಯ ತಡವುತ ಜಿನನುದಿಸುವನೆಂದೂ || ೧೧೩

ಪತಿಯು ಹೇಳಲು ಕೇಳಿ ಅತಿ ಹರುಷವ ತಾಳಿ
ಅತಿ ಮುದದಿಂ ಶಿವದೇವಿಯಿರಲು ಮತ್ತೆ ||    ೧೧೪

ಮುನ್ನ ಹೇಳಿದ ಅಹಮಿಂದ್ರದೇವನು ಬಂದು
ಚೆನ್ನೆಯ ಉದರಾಬ್ದಿಯೊಳು ಜನಿಸಿದನು ||    ೧೧೫

ಕಾರ್ತಿಕ ಶುದ್ಧ ಸೃಷ್ಠಿಯು ಉತ್ತಾಷಾಢದೊಳು
ಅರ್ತಿಯೊಳಗೆ ಗರ್ಭಾವತರಣವಾಗೆ ||        ೧೧೬

ಇಂದ್ರನು ದೇವಸಮೂಹಸಹಿತ ಬಂದು
ಸಂದ ಭಕ್ತಿಯೊಳು ಪೂಜಿಸಿ ಪೊಡಮಟ್ಟು ಹೋಗೆ ||     ೧೧೭

ಪುಳುಕಿನಾ ಕೊಡದೊಳು ಹೊಳೆವ ಸೊಡರಿನಂತೆ
ಹೊಳೆವುತ ತ್ರಿಜ್ಞಾನಧರ ಮಾತೆಯುದರದಿ ||  ೧೧೮

ನವಮಾಸ ತುಂಬೆ ಸುರಸುಧೆ ತ್ರಿಯರಾಗ
ಭುವನದೊಳಗೆ ಸಡಗರಿಸುತಲಿರುವಾಗಾ ||   ೧೧೯

ಶ್ರಾವಣ ಶುದ್ಧ ಸೃಷ್ಟಿಯ ಚಿತ್ರತಾರೆಯೊಳು
ಭಾವಜಹರ ಜಿನರಾಜನುದಿಸಿದನು ||          ೧೨೦

ಇಂದ್ರನ ಪಾದ ಕಂಪನವಾಗಲು ಜಿನಾ
ಚಂದ್ರನುದಯವ ಸುರೇಂದ್ರನು ತಿಳಿದನು ||   ೧೨೧

ಸುರಲೋಕದಿ ಘಂಟೆ ನಾಗಲೋಕದಿ ಶಂಕ
ವರಜ್ಯೋತಿರ್ಲೊಕದಿ ಸಿಂಹನಾದವು ||       ೧೨೨

ವ್ಯಂತರಲೋಕದೊಳಗೆ ಭೇರಿಧ್ವನಿಯಿಂದ
ಕಂತು ವಿಜಯ ಜನನುದಯವ ತಿಳಿದರು ||    ೧೨೩

ನಾಲ್ಕುವಿಧದ ದೇವಗಣವ ಬರಿಸಿ ಬೇಗ
ನಾಕಧಿಪತಿ ಶಚಿಸಹಿತ ಗಜವನೇರಿ ||         ೧೨೪

ದ್ವಾರವತಿಯ ಸುರದ ರಾಜಧಾನಿಯ ಸುರಚಿರ
ರಾಜಾಂಗಣದೊಳು ಬಂದು ನಿಲೆ ||  ೧೨೫

ಲಲನೆ ಶಚಿಯು ಗೃಹವನು ಹೊಕ್ಕು ಕಂಡಳು
ಲಲಿತದಿ ನೀಲವರ್ಣದ ಜಿನ ಶಿಸುವನೂ ||     ೧೨೬

ಮಾತೆ ಸಹಿತ ಜಿನ ಶಿಸುವನು ಬಲವಂದು
ಸಾತಿಶಯದಿ ಸಾಷ್ಟಾಂಗವೆರಗಿ ನಿಂದು ||     ೧೨೭

ನಿದ್ರೆಯಾ ಬರಿಸಿ ಮಾಯದ ಶಿಸುವನು ಇಟ್ಟು
ಶುದ್ಧ ಚಿತ್ತದಿ ಜಿನ ಬಾಲಕನನುಯೆತ್ತಿ ||        ೧೨೮

ಜಿನಶಿಸುವಿನ ಪಾದವ ಪಣಿಯೊಳಗಿಟ್ಟು
ಅನುನಯದಲಿ ತನ್ನ ಪತಿಗೆ ಶಿಸುವ ಕೊಡೆ ||  ೧೨೯

ಸುರಪತಿ ಜಯಜಯವೆನುತ ಶಿಸುವಕೊಂಡು
ಸಿರದೊಳಗಾಂತು ಪದಗಳ ಪಣಿಯೊಳಗಿಟ್ಟು ||         ೧೩೦

ಸುರರ ಸಭೆಯು ಜಯಜಯವೆಂದು ನಮಿಸಲು
ಶರಧಿಗೊರ್ನ್ನಿಸುವಂತೆ ಸುರವಾದ್ಯ ಮೊಳಗಿತು ||      ೧೩೧

ಗಜದ ಸ್ಕಂದಕೆ ಶಿಸುವನು ಬಿಜಮಾಡಿಸಿ
ಭುಜಗಳಿಂದಾಂತು ಕೊಂಡನು ದೇವೇಂದ್ರನೂ ||       ೧೩೨

ಮುತ್ತಿನಾ ಮುಕ್ಕೊಡೆಯನು ಈಶನೀಂದ್ರನೂ
ಮುಕ್ತಿದಯಕೆ ಜಿನ ಶಿಸುವಿಗೆ ಪಿಡಿದನು ||      ೧೩೩

ಮೇಗಣವೆರಡು ಕಲ್ಪದ ದೇವೇಂದ್ರರೂ
ಅಗೋಚರಮರ ಅರವತ್ನಾಲ್ಕು ಢಾಳಿಸಿದಾರೂ ||       ೧೩೪

ಧರಣಿರಾಜನ ಜಿನರಾಜನ ಹೊಗಳುತ
ಉರುತರ ಭಕ್ತಿಯೊಳು ಉರಗದೀಶರು ಸಹ || ೧೩೫

ಜಿನರಾಜನೇರಿದ ಗಜದ ಮುಖಗಳೆಂಟು
ಅನುನಯದಲಿ ಮುಖಗಳಿಗೆ ದಂತಗಳೆಂಟು || ೧೩೬

ಒಂದು ಹಂತಕೆ ಒಂದೊಂದು ಸರೋವರ
ಒಂದು ಸರಸಿಗೆ ಬತ್ತೀಶ ಸರೋಜವೂ ||       ೧೩೭

ಒಂದು ಕಮಲಕೆ ಮೂವತ್ತೆರಡೆಸಳ್ಗಳೂ
ಒಂದು ಗಳಕೆ ಮೂವತ್ತೆರಡು ನರ್ತಕಿಯರೂ ||          ೧೩೮

ಕಮಲವ ಸೋಂಕದೆ ಮುಟ್ಟದೆ ನರ್ತಿಸುವರೂ
ಅಮಲಗುಣಗಳ ಪಡುತ ಜಿನೇಂದ್ರನಾ ||      ೧೩೯

ನಾನಾ ತೆರದ ವಾದ್ಯ ನೃತ್ಯಗೀತಗಳಿಂದ
ನಾನಾ ತೆರೆದ ವಾಹನವೇರಿ ನಡೆದರು ||      ೧೪೦

ಇಂತಪ್ಪ ಸಂಭ್ರಮದೊಳು ನಭದೊಳಗೆಲ್ಲ
ಉತ್ತರ ಮುಖವಾಗಿ ನಡೆದು ಮಂದರಕಾಗಿ || ೧೪೧

ಈಶಾನ ದಿಕ್ಕಿನ ರತ್ನಗಂಬಲವೆಂಬಾ
ಭಾಸುರ ಪಾಂಡುಕ ಶಿಲೆಯ ಮೇಲೊಪ್ಪುವ ||  ೧೪೨

ರತ್ನನಿರ್ಮಿತದ ಬಿಸಿಕ ಪೀಠದ ಮೇಲೆ
ರತ್ನತ್ರಯವುಳ್ಳ ಜಿನಬಾಲಕನ ಇಟ್ಟು ||        ೧೪೩

ಕ್ರಮದಿಂದ ಕಳಶಾರ್ಚನೊಳ ಮಾಡಿ ತಾ
ಅಮಲ ಗುಣವನುಳ್ಳ ಜಿನಬಾಲಕನಿಗೆ ||       ೧೪೪

ಈಶನೀಂದ್ರನು ದಕ್ಷಿಣೇಂದ್ರರೀಶ್ವರೂ ಸಹಾ
ಸಾಸಿರ ತೋಳ ನಿರ್ಮಿಸಿಕೊಂಡು ನಿಂದರು || ೧೪೫

ಛತ್ರವನ್ನೆತ್ತಿ ಢಾಳಿಸುವ ಚಾಮರಗಳು
ನೂತ್ನವಾಗಿಹ ವಾದ್ಯ ಭೋರೆಂದು ಮೊರೆಯಲು ||      ೧೪೬

ಬತ್ತೀಶ ಕೋಶದಗಲದ ಕುಂಭಂಗಳೂ
ಚತುರ್ಥಕೋಶದಗಲದ ವಿಸ್ತಾರವೂ ||        ೧೪೭

ಈ ಪರಿ ಸ್ವರ್ಣ ಕಳಶವ ನಿರ್ಮಿಸಿಕೊಂಡು
ಆ ಪಂಚಮಾಬ್ದಿಯ ಪರಿಯಂತೆ ಸುರ ಸಂದಾ ||        ೧೪೮

ಒತ್ತಿ ಕ್ಷೀರವ ಮೊಗೆಮೊಗೆದು ಸುರರು ತಂದು
ಅರ್ತಿಯಿಂ ಕೊಡಲಭಿಷೇಕ ಮಾಡಿದರಾಗಾ || ೧೪೯

ಇಂಥ ಅಭಿಷೇಕವಾಗಲು ಸುರಾಸುದತಿಯ
ರ್ಕ್ಕಂತು ಹರನ ಕೊಂಡಾಡಿ ನರ್ತಿಸಿದರೂ ||  ೧೫೦

ಸುರರೆಲ್ಲ ಜಯಜಯವೆಂದೂ ನೋಡುತಲಿರೆ
ಸುರಗಿರಿ ತೋರಿತು ರಜತ ಪರ್ವತದಂತೆ ||   ೧೫೧

ಇಂತು ಕ್ಷೀರಾಭಿಷೇಕವ ಮಾಡಿ ಸುರ ರಾಜ
ಕಂತು ವಿಜಯಗೆ ಗಂಧಾಭಿಷೇಕವ ಮಾಡಿ ||  ೧೫೨

ಅಷ್ಟವಿಧಾರ್ಚನೊಳ ಮಾಡಿ ಸುರಪತಿ
ಸಾಷ್ಟಾಂಗವೆರಗಿ ಸಂಪೂರ್ಣ ಅರ್ಗ್ಗ್ಯವನೆತ್ತಿ || ೧೫೪

ರತ್ನದಾ ಬಾಲದುಡಿಗೆಯದುಡಿಸಿ ಶಚಿ
ರತ್ನಶಿಬಿಯು ಸಹ ಕಣ್ಗೆ ಅಂಜನವಿಟ್ಟು ||        ೧೫೫

ಹರಪದಕ ಅರಳೆಲೆ ಮಾಗಾಯಿ ಗೆಜ್ಜೆ
ತೋರಹಾರಗಳಿಟ್ಟು ತಿಲಕವ ಪಣಿಗಿಟ್ಟು ||     ೧೫೬

ಕಾಲಲಂದುಗೆ ಗೆಜ್ಜೆ ಸರಪಣಿ ಉಡಿದಾರಾ
ಲೀಲೆಯಿಂದಲಿಟ್ಟು ಎರಗಿ ಶಚಿಯು ನೀವೇ ||  ೧೫೭

ಇಂದ್ರನು ಸಾಸಿರ ನೇತ್ರವ ಪಡೆದು ತಾ
ಸಾಂದ್ರ ಭಕ್ತಿಯೊಳು ಸಾಷ್ಟಾಂಗವೆರಗಿ ನಿಂದೂ ||       ೧೫೮

ಭವ್ಯಾಬ್ಜ ಮಿತ್ರನೆ ಭವಭಯ ಹರಣನೆ
ನವ್ಯಯಸುಖವ ಪಡೆವ ಜಿನರಾಜನೆ ||         ೧೫೯

ಕಾಲನ ಗಂಡ ಕರ್ಮದ ಮಿಂಡ ದುರ್ಮೋಹಾ
ಜಲಾಂಧಕಾರವ ಪರಿವ ಜಿನೇಂದ್ರನೇ ||       ೧೬೦

ನೀಲವರ್ಣದ ರೂಪ ಅಘವನುಗೇಶವನೆ
ಆಲಸ್ಯ ಮಾಡದೆ ನಿನ್ನಂಥ ಪದವಿಕೊಡು ||    ೧೬೧

ಈ ಪರಿಯಲಿ ಸುರಸಭೆಯು ಕೊಂಡಾಡುತ
ಅಪರಮೇಶನ ಗಜವನೇರಿಸಿಕೊಂಡೂ ||      ೧೬೨

ಮೇರುಗಿರಿಯ ಬಲಗೊಂಡು ಪುರಕೆ ಬಂದೂ
ಮೇರುವಿಜಯನನು ತಾಯಿ ತಂದೆಗೆ ತೋರಿ ||         ೧೬೩

ರತ್ನನಿರ್ಮಿತ ಸಿಂಹಾಸನವ ನಿರ್ಮಿಸಿ ದೇವಾ
ರತ್ನತ್ರಯವನುಳ್ಳ ಜಿನನ ಕುಳ್ಳಿರಿಸಾಗ ||      ೧೬೪

ನಾಮ ಸಾಸಿರ ಪಡೆಯನು ನೇಮಿನಾಥನೆಂದು
ನೇಮದಿ ಕರೆವುತ ಸುರರು ನಮಿಸಿ ನಿಂದೂ ||           ೧೬೫

ಕರ್ಮವಿದೂರನೆ ಕರುಣಾ ಸಮುದ್ರನೇ
ಕಮಲಭರಣನಹಂ ಮುರಿವ ಜಿನೇಂದ್ರನೇ ||  ೧೬೬

ಅಜ್ಞಾನ ತಿಮಿರಾಂಧಕೆ ಭಾನುಯೆನಿಪನೆ
ಸುಜ್ಞಾನದಿಂ ತ್ರಿಪುರವ ಸುಟ್ಟವುರುಹನೇ ||    ೧೬೭

ಜಯಜಯ ಮಾರಮರ್ಧನ ಭವದೂರನೇ
ಜಯಜಯ ಶ್ರೀ ಮೋಕ್ಷಲಕ್ಷ್ಮೀಯ ಅರಸನೇ || ೧೬೮

ಕರುಣಾಬ್ಜಮಿತ್ರನೆ ಕರ್ಮವಿನಾಶನೇ
ಕರುಣಿಸುಯೆನಗೇ ನಿನ್ನಂತ ಪದವಿಯನೂ ||  ೧೬೯

ಆನಂದ ನರ್ತನವಾಡಿ ಸುರೇಂದ್ರನೂ
ಸಾನುರಾಗದಿ ಜಯವೆನುತ ನಮಿಸಿದನೂ ||  ೧೭೦

ಬಾಲಕ್ರೀಡೆಗೆ ತಕ್ಕ ಸುರರ ಬಾಲಕರಿಟ್ಟೂ
ಬಾಲಕ ಜಿನರನು ತಾಯಿ ತಂದೆಗೆ ಕೊಟ್ಟು ||  ೧೭೧

ಸುರರೆಲ್ಲರೂ ಜಯಜಯವೆಂದು ನಮಿಸೆ
ಸುರವಾಹನವೇರಿ ಸುರಲೋಕಕ್ಕೆ ಹೋಗೆ ||   ೧೭೨

ಬಾಲಕವು ಮುನ್ನೂರು ವರುಷ ಸಲೆ
ಲೀಲೆಯೊಳಗಿರುತಿರವೊಂದು ದಿವಸದಿ ||     ೧೭೩

ಬಲಕೇಶವರೀರ್ವರೂ ಬಂದೂ ಅಭವಗೆ
ಲೀಲೆಯಿಂದಲಿ ನಮಿಸಿನಿಂದೂ ಹೇಳ್ದರೂ ||   ೧೭೪

ವನಕೆ ವಸಂತ ಬಂದುದು ಚಿತ್ರೈಸುವುದೆಂದು
ನಾನಾ ವಿಧದಿ ಪ್ರಾರ್ಥಿಸಿ ಗಜವನುಯೇರಿ ||   ೧೭೫

ನಾನಾವಿಭವದಿಂದ ವನಕೆ ತೆರಳೆ ದೇವಾ
ವನಿತೆಯರು ಸಹ ಬಲಹರಿಗಳು ತೆರಳಲೂ || ೧೭೬

ವನಜಲಕ್ರೀಡೆಯ ನಾಡುತ ಜಿನಪತಿ
ವನಿತೆಯು ಸತ್ಯಭಾವೆಗೆ ವಸ್ತ್ರತಾಳಿಯನೆ ||   ೧೭೭

ಭೂಮಿ ತ್ರಿಭಾಂಡಪತಿಯ ವಲ್ಲಭೆಯು ಮಾತೆ
ಭೂಮಿ ತೂಕದ ಶಂಭ ಎತ್ತಿದ ಎನ್ನ ಪತಿ ||     ೧೭೮

ಈತನೋಸ್ತ್ರವ ತೊಳಿವೆನೆಯೆಂದೂ ಗರ್ವದಿ
ಓತು ನುಡಿಯೆ ರುಗ್ಮಣಿ ಕೇಳಿ ಮರುಗುತಾ ||  ೧೭೯

ಅಕ್ಕ ನೀನಿಂ ತಪ್ಪನು ನುಡಿಯಬಹುದೆಯೆಂದು
ಗಕ್ಕನೆ ವಸ್ತ್ರವ ತೆಗೆದು x x ಸಿರದೊಳಿಟ್ಟೂ ||  ೧೮೦

ಇಂತು ಸತ್ಯಭಾಮೆ ನುಡಿದ ಮಾತನು ಕೇಳಿ
ಕಂತು ಹರನು ಗಕ್ಕನೆ ಗಜವನುಯೇರಿ ||      ೧೮೧

ಶಸ್ತ್ರಶಾಲೆಗೆ ಬಂದು ಶತಪತ್ರನೇತ್ರನೂ
ಶತ್ರುಂಜಯನು ಶಂಭವ ವಾಮಕರದಿಂದಾ || ೧೮೨

ಎಡದ ನಾಸಿಕದೊಳಿಟ್ಟು ಶ್ವಾಸವ ಬಿಡೆ
ಬೆಡಗಡಿಸಲು ದೇವತೆಗಳು ಬೆಚ್ಚುತಾ ಓಡೆ ||  ೧೮೩

ಹರಿಯು ಕೇಳುತ ಅತಿ ಶಂಕಿಸುತಲಿ ಚಿಂತಾ
ಧರನಾಗಿ ಇರುತಾನೊಂದಾನು ದಿವಸದೊಳೂ ||       ೧೮೪

ಒಡ್ಡೊಲಗದೊಳು ಕುಳಿತಿಹ ಸಮಯದಿ
ಎಡದ ಹಸ್ತದ ಕಿರು ಬೆರಳಕೊಂಕಿಸಿ ಜಿನಾ ||   ೧೮೫

ಬಲಯುತರಿದನು ಜಗ್ಗಿಸಿ ಎಂದು ಕೈನೀಡಿ
ಬಲಹರಿಗಳು ಅತಿಲೀಲೆಯಿಂ ಪಿಡಿಯಲೂ ||   ೧೮೬

ಸೂತ್ರದ ಪ್ರತಿಮೆಗಳಂದದಿ ನೇಮಿಚಂದ್ರ
ಅರ್ತಿಯೊಳಗೆ ತೂಗಾಡಿಸಿ ಹರಿಯು ನಾಚಿ ||  ೧೮೭

ಮನದೊಳು ಯೋಚಿಸಿ ಬಲರಾಮನ ಕೂಡೆ
ಜಿನನಿಂದ ನಮಗೆ ರಾಜ್ಯಗಳಿಲ್ಲವೆಂದು ಪೇಳೆ ||         ೧೮೮

ಇಂತೆಂದ ಅನುಜನ ಮಾತಿಗೆ ಬಲರಾಮ
ಚಿಂತಿತಾರ್ಥವನೀವ ಮೋಕ್ಷವಾಳುವ ಜಿನಾ ||          ೧೮೯

ಅವರಿಗೆ ಭೂಮಿಯಾಳುವ ಆಸೆಗಳು ಇಲ್ಲ
ತವಕವೇತಕೆಯೆಂದು ಅನುಜನ ಸಂತೈಸಿ ||  ೧೯೦

ಇಂತು ಕೆಲವು ದಿನ ನಡೆಯಲು ಹರಿ ಮತ್ತೆ
ಸಂತೋಷದಲಿ ಬಲಭದ್ರನಿಗೆ ಕೇಳಿದನು ||    ೧೯೧

ನೇಮಿಚಂದ್ರಗೆ ಯೌವ್ವನವಾಯಿತು ಮದುವೆಯ
ಪ್ರೇಮದಿ ಮಾಡಬೇಕೆನುತ ಹೇಳಿದ ಮತ್ತೇ ||  ೧೯೨

ಅನುಜನ ಮಾತ ಕೇಳುತ ಬಲರಾಮನೂ
ವನದಿ ವಿಜಯನ ಸನ್ನಿಧಿಗೈದು ನಮಿಸುತಾ || ೧೯೩

ನೇಮಿನಾಥಗೆ ಮದುವೆಯು ಆಗಬೇಕೆಂದೂ
ನೇಮದಿ ಪೇಳೆ ಜನಕ ಸಹ ನಡೆತಂದೂ ||    ೧೯೪

ಸ್ವಾಮಿಗೆರಗಿ ನಿಂದು ಮದುವೆಗೆ ಮನವನು
ಪ್ರೇಮದಿ ಮನವೀವುದೆಂದೂ ಪ್ರಾರ್ಥಿಸಿ ಹೇಳೆ ||        ೧೯೫

ನಸುನಗುತಲಿ ನೇಮಿಚಂದ್ರ ಮೌನದಿಯಿರೆ
ಶಶಿಮುಖಿ ರಾಜೀವ ಮತಿಯ ನೇಮಿಸಿದಾರೂ ||        ೧೯೬

ಪಟ್ಟಣವನು ಶೃಂಗರಿಸಿ ವಿಸ್ತಾರದಾ
ಮಂಟಪವನು ಮಾಡಿಸಿದರು ಸಂಭ್ರಮದಿಂದ ||         ೧೯೭

ಸ್ವಾಮಿ ಮದುವೆಯೆಂದು ದೇಶದಿಶರು ಸಹ
ಪ್ರೇಮದಿ ಕುಟುಂಬ ಪರಿಹಾರ ಸಹವಾಗಿ ||    ೧೯೮

ದ್ವಾರಾವತಿಯ ಪುರಕೆ ಬಂದು ಶೀಘ್ರದಿಂದ
ದೊರೆಗಳು ನೇಮಿನಾಥನ ಕಂಡು ಎರಗಲು || ೧೯೯

ಬಂದ ದೊರೆಗಳಿಗೆ ಪಡಿ ಬೀಡಾರಗಳಾದಿ
ಚಂದಛಂದದಿ ಬಲಹರಿಗಳು ಮನ್ನಿಸಿದರು ||   ೨೦೦

ದಿವ್ಯ ಜಲವ ತಂದು ದಿವ್ಯ ನಾರಿಯರೆಲ್ಲಾ
ದಿವಿಜೇಂದ್ರವಂದ್ಯಗೆ ಮಂಗಲಾಭಿಷೇಕವ ಮಾಡಿ ||     ೨೦೧

ಷೋಡಶಾಭರಣಗಳಿಂದ ಸಿಂಗರಿಸಿ ತಾ
ನಾಡೊಡೆಯಗೆ ಮಂಗಲ ಬಾಸಿಂಗವ ಸೂಡಿ ||         ೨೦೨

ನಾಡದೊರೆಗಳೆಲ್ಲ ನಾನಾ ವಾದ್ಯಗಳಿಂದಾ
ನಾಡಿಗೊಡೆಯನು ವಾರಣವಯೆಸಿಕೊಂಡೂ ||          ೨೦೩

ಬಿರಿಸು ಬಾಣಗಳಿಂದ ಗೀತನರ್ತನದಿಂದ
ನಾರಿಯರು ಪಾಡುವ ಢವಳ ಶೋಭನದಿಂದ ||         ೨೦೪

ಇಂತು ಸಂಬ್ರಮದಿ ನಿಬ್ಬಣ ಬಹು ಸಮಯದಿ
ಕಂತು ಪಿತನು ಮಾಡಿಸಿದ ಕೃತಿಮದಿಂದಾ ||  ೨೦೫

ಕರು ಬೇರೆ ಪಶು ಬೇರೆ ಬೆಳ್ಗಳಿವುದ ಕಂಡೂ
ಕರುಣಾಳು ನೇಮೀಶ ಕೇಳಿದ ಚರರನೂ ||    ೨೦೬

ನಿಮ್ಮ ನಿಬ್ಬಣಕೆ ನಿವಾಳಿಗೆಯನೆ ಚರಾ
ಸುಮ್ಮನವಳಿದು ವೈರಾಗ್ಯಯೋಚಿಸೆ ದೇವಾ ||         ೨೦೭

ಲೌಕಿಕಾಂತ ದೇವರ ಬಂದು ಬೋಧಿಸಿ
ಲೋಕದೊಳಗೆ ಧರ್ಮಾಮೃತವನು ಕರಿರೆಂದೂ ||      ೨೦೮

ನಾನಾವಿಧದಿ ಬೋಧಿಸಿ ತೆರಳಿದ ಮತ್ತೆ
ಸಾನುರಾಗದಿ ಗಜವಿಳಿದರಮನೆಗೈದೆ ||       ೨೦೯

ಜನನಿಜನಕ ರತಿಶೋಕಿಸುತಲಿ ನೀವೆ
ಜನತಾದೀಶನವರ ಸಂತೈಸಿದ ಮತ್ತೆ ||       ೨೧೦

ಪತಿರಾಜೀವಮತಿ ಅತಿಶೋಕದಿಂದಲಿ
ಪತಿಯ ಒಡನೆ ದೀಕ್ಷೆ ಧರಿಸುವೆನೆನುತಿರೆ ||    ೨೧೧

ಇಂದ್ರನಾಸನ ಕಂಪನವಾಗಲು ಜಿನ
ಚಂದ್ರನ ವೈರಾಗ್ಯ ತಿಳಿದ ದೇವೇಂದ್ರನೂ ||   ೨೧೨

ಇಂದ್ರನು ದೇವಸಮೂಹ ಸಹಿತ ಬಂದು
ಇಂದ್ರರು ಸಹ ಪರಿನಿಃಕ್ರಮಣ ಪೂಜೆಯ ಮಾಡಿ ||      ೨೧೩

ಮುತ್ತಿನ ಪಲ್ಲಕ್ಕಿಯನೇರಿಸಿಕೊಂಡು
ಚಿತ್ತಶುದ್ಧದಿ ಸರ್ವವಾದ್ಯ ಮೊರವಿನಲ್ಲಿ ||       ೨೧೪

ಭೂಚರಕೆ ಚರ ಇಂದ್ರರು ಸಹವಾಗಿ
ಚರ್ಚಿಯಿಂದಲಿ ಯೇಳಡಿ ಹೊತ್ತು ನಡೆದರೂ ||          ೨೧೫

ಇಂತು ಸಂಭ್ರಮದಿಂದ್ರನಂದನವೆಂಬ ವನಕಾಗಿ
ಸಾತಿಶಯದ ಭಕ್ತಿಯಿಂದ ತೆರಳಿಸಿದರೂ ||    ೨೧೬

ಇಂದ್ರನಾ ಸತಿ ಶಚಿದೇವಿ ಗದ್ದುಗೆಯನ್ನು
ಚಂದದ ಚಂದ್ರಕಾಂತದ ಶಿಲೆಯೊಳು ಮತ್ತೆ || ೨೧೭

ಜಿನರಾಜ ಹೋಗಿ ಕುಳಿತು ಸರ್ವಾಭರಣವಾ
ಮನವಾರೆ ತೆಗೆದಿಡಾಡಿದ ನಿಮಿಷದಿ ||         ೨೧೮

ಇಂದ್ರನ ರತ್ನದ ಪಡಲಿಗೆಯಾಂತು ನೀವೆ
ಮಂಧರ ಧೈರ್ಯಕುಂತಳಗಳನು ಪರಿದಿಡೆ || ೨೧೯

ಇಂದ್ರನು ದೇವ ಸಮೂಹದಿ ಕುಂತಳಂಗಳಾ
ಹೊಂದಿಸಿ ಕ್ಷೀರಾಂಬುಧಿಯೊಳು ದೇವೇಂದ್ರನೂ ||      ೨೨೦

ಶ್ರಾವಣ ಶುದ್ಧ ಸೃಷ್ಟಿಯ ಚಿತ್ರ ತಾರೆಯೊಳೂ
ದೇವಗೆ ಪರಿನಿಷ್ಕ್ರಮಣ ಕಲ್ಯಾಣವಾಗೆ ||       ೨೨೧

ದೇವಸಭೆಯು ಜಯಜಯವೆಂದು ನಮಿಸಿ ತಾ
ದೇವೇಂದ್ರ ಸಹ ದೇವಲೋಕಕೆ ತೆರಳಲು ||   ೨೨೨

ಇತ್ತಲು ನೇಮಿನಾಥನು ತಪದೊಳು ನಿಂತು
ಅರ್ತಿಯೊಳಿರೆ ಪರಕಾಲಯೋಗಗಳಿಂದಾ ||   ೨೨೩

ಮಷ್ಠೊಪವಾಸದಂತ್ಯದಿ ಪಾರಣಿಗೆಂದೂ
ವಶವಾರ್ಚಿತ ಗಿರಿಪುರಿಗೆ ಭಾವರಿಯದೆ ||      ೨೨೪

ವರದತ್ತನೆಂದೆಂಬರಸನು ಇದಿರ್ಬಂದೂ
ಹರುಷದಿ ಬಿಜಮಾಡಿಸಿದ ಜಿನಪತಿಯನು ||   ೨೨೫

ಸಪ್ತಗುಣವು ನವವಿಧಪುಣ್ಯ ಸಹಿತಲಿ
ಸ್ತಪಿಸಿ ಜಿನಪನ ಪಾದಪೂಜೆಯ ಮಾಡಿ ||     ೨೨೬

ಸಿದ್ಧ ಭಕ್ತಿಯು ಪೇಳೆ ಜಯಗಂಟೆ ಮೊರೆಯಲು
ಶುದ್ಧ ಚಿತ್ರದಿ ಬಗೆಬಗೆ ಭಕ್ಷ್ಯಗಳ ನೀಡೆ ||       ೨೨೭

ಸೃಗ್ದೆಯೊಳಿಡೆ ಜಿನಸಿದ್ಧ ತೃಪ್ತಿಸುತಾ
ಸಿದ್ಧರ ನೆನೆವುತ ಕರವ ಪ್ರಕ್ಷಾಲಿಸಿ ||  ೨೨೮

ಆತ್ಮಧ್ಯಾನವನೋಡೆ ಅಂತರಂಗದ ಪ್ರಭೆ
ಚಿಂತಾರ್ಥವ ನೋಡಿ ಕಣ್ಬಿಟ್ಟ ಜಿನಪತಿ ||      ೨೨೯

ಅಕ್ಷಯಾದಾನವೆನುತ ಜಿನಪರಸಲೂ
ತಕ್ಷಣದಲಿ ಅಮರರು ಪಂಚಚರ್ಯ್ಯ ಮಾಡೆ || ೨೩೦

ಪುಷ್ಟವೃಷ್ಟಿಯು ರತ್ನ ವೃಷ್ಟಿಯು ಸುರಭೇರಿ
ಪುಷ್ಟ ಸೌರಭಗಾಳಿ ಜಯರವ ಸಹವಾಗಿ ||    ೨೩೧

ಧಾತೃವ ಹೊಗಳುತ ಸುರರೆಲ್ಲ ಹರುಷದಿ
ಮಿತ್ರರು ಸಹ ಸುರಲೋಕಕೆ ತೆರಳಲೂ ||     ೨೩೨

ಇತ್ತಲು ನೇಮಿನಾಥನು ಮನವನು ಹೊಕ್ಕು
ಸೂಸ್ಥಾನದೊಳು ಪ್ರತಿಮಾನುಯೋಗದಿ ನಿಲೆ ||         ೨೩೩

ಶುಕ್ಲಧ್ಯಾನಗಳಿಂದ ಘಾತಿ ಕರ್ಮವ ಸುಟ್ಟು
ಮುಕ್ತಿದಾಯಕ ಕೇವಲ ಜ್ಞಾನ ಪಡೆಯಲು ||    ೨೩೪

ಧರೆಯಿಂದೈಸಾಸಿರ ಬಿಲ್ಲಾತರದಿ ನಿಲೆ
ವರನೇಮಿಚಂದ್ರನನಘ ಸರ್ವಜ್ಞನೂ ||        ೨೩೫

ಸುರಪತಿ ತಿಳಿದು ಕುಭೇರಗೆ ಬೆಸಸಿದಾ
ಸುರಚಿರ ಸಮವಸರಣವ ರಚಿಸುಯೆಂದೂ ||  ೨೩೬

ಧನಪತಿ ಬಂದು ರಚಿಸೆ ರತ್ನಮಯವಾದ
ಅನುನಯದಲಿ ಸಮವಾಶ್ರತಿಯನು ಬೇಗ ||   ೨೩೭

ಮೂರು ಮೇಕಲೆಯ ಪೀಠದ ಅಗ್ರದೊಳಗಿಹ
ಸುರಚಿರ ಸಾಸಿರದೆಂಟೆಸಳ ಪಂಕಜವನೂ ||  ೨೩೮

ನಾಲ್ವೆರಳನೂ ಸೋಂಕದೆ ಅಭವನು ನಿಲೆ
ನಾಲ್ಕಧಿಪತಿ ಬಂದು ಜಯಜಯವೆನುತಲಿ ||  ೨೩೯

ಆಶ್ವೀಜ ಶುದ್ಧ ಪಾಡ್ಯದಿ ಚಿತ್ರತಾರೆಯೊಳೂ
ಶೇಷವಂದಿತಗೆ ಕೇವಲ ಜ್ಞಾನ ಪೂಜೆಯ ಮಾಡಿ ||      ೨೪೦

ಸುರಪತಿಯೆರಗಿ ಸಾಷ್ಟಾಂಗದಿ ಜಿನರಿಗೆ
ಕರಗಳ ನೊಸಲಿಗೆ ತಂದು ನಿಂದನು ಮತ್ತೆ ||  ೨೪೧

ಚತುರಗತಿಯ ಗೆದ್ದು ಚತುರ್ಮುಖನೆನಿಸಿದೆ
ಚತುರ್ನಿಕಾಯಮರ ವಂದಿತ ಜಿನ ಜಯ ಜಯಾ ||     ೨೪೨

ಕೋಟಿ ಚಂದ್ರಾದಿತ್ಯ ಕೋಟಿ ಪ್ರಕಾಶದೇವಾ
ಕೋಟಲೆ ಹರಿಸೆನ್ನ ಭವವ ಹರಿಸೋ ತಂದೆ || ೨೪೩

ಅಷ್ಟಮಹಾ ಪ್ರತಿಹಾರ್ಯ್ಯ ಶೋಭಿತ ಜಿನ
ಶ್ರೇಷ್ಠ ಮೋಕ್ಷದ ಪದವನು ತೋರು ಅಭವನೇ ||        ೨೪೪

ಇಂತು ಶಕ್ತಿ ಶತಸಹಸ್ರದಿಂ ಸ್ತುತಿಯಿಸಿ
ಕಂತುಹರಗೆ ಸಾಷ್ಟಾಂಗವೆರಗಿ ಮತ್ತೆ ||        ೨೪೫

ವರದತ್ತಗಣಧರರ್ಗ್ಗೆರೆಗಿ ದೇವೆಂದ್ರನೂ
ಹರುಷದಿ ದೇವಕೋಷ್ಟದೊಳು ಕುಳಿತ ಮತ್ತೆ ||          ೨೪೬

ದಿವ್ಯಧ್ವನಿಯ ಪುಟ್ಟಿ ತಾ ಜಿನನೋದನದಿ
ದಿವ್ಯಭಷಿಗಳಿಂದ ಗಣಧರರ್ವ್ವಿ ರಚಿಸಿ ||       ೨೪೭

ಧರ್ಮಾಮೃತವ ಪೇಳುತ ಧರೆಯೊಳು ಜಿನ
ಧರ್ಮ ಪ್ರಭಾವನೆಯೆನು ಮೆರೆಸುತ ಬರೆ ||    ೨೪೮

ಅಂಗವಂತ ಕಾಶ್ಮೀರ ಕರ್ನಾಟ ವಾದಿ
ಮಂಗಲ ಕೌಶಲ್ಯ ಕುರುದೇಶ ಮೊದಲಾಗಿ ||  ೨೪೯

ಈ ಪರಿಯಿಂದ ಸಮವ ಶ್ರುತಿ ಚರಿಸಲು
ಪಾಪರಹಿತವಾಯಿತು ಸಕಲ ಜನರಿಗೆಲ್ಲ ||     ೨೫೦

ಇಂದು ಸಮವಸರಣವು ಚರಿಸುತಲಿರೆ
ಕಂತುವಿಜಯಗೊಂದು ತಿಂಗಳಗಾಯುಷ್ಯ ಉಳಿಯೆ ||  ೨೫೧

ಸಮವಸರಣವ ತ್ಯೆಜಿಸಿ ಮುನಿಗಣ ಸಹ
ಅಮರೇಂದ್ರ ವಂದ್ಯ ಉಜ್ಜಂತಗಿರಿಗೆ ಬಂದೂ ||         ೨೫೨

ಸಿದ್ಧಶಿಲೆಯ ಮೇಲೆ ಪ್ರತಿಮಾನುಯೋಗದಿ ನಿಂತು
ಸಿದ್ಧರ ಧ್ಯಾನಿಸುತಲಿ ನಿಂತಭವನೂ ||         ೨೫೩

ಒಂದು ತಿಂಗಳ ಪರಿಯಂತ ತಪದೊಳಿರ್ದ್ದು
ಸಂಧ ಶುಕ್ಲಧ್ಯಾನದೊಳು ಅಘತಿಯಸುಟ್ಟು ||  ೨೫೪

ಜ್ಞಾನನಯನದಿಂದ ಲೋಕವಿಲೋಕವನು
ನಾನಾ ಜೀವಗಳ ನೆಲೆಯ ನೋಡಿ ಜಿನಪತಿ || ೨೫೫

ದಂಡ ಕವಾಠ ಪೆರಣಿಯಿಂದ ಜಿನರಾಜ
ಕಂಡನಾ ಕ್ಷಣದೊಳು ಅಘತಿ ಕರ್ಮವ ಸುಟ್ಟು ||         ೨೫೬

ಆಷಾಢ ಶುದ್ಧ ಸಪ್ತಮಿ ಅಂತ್ಯ ಜಾವದಿ
ದೋಷವ ಕೆಡಿಸಿದ ಚಿತ್ತ ನಕ್ಷತ್ರದೊಳೂ ||      ೨೫೭

ಸಾವಿರೊರುಷ ಸಂಪೂರ್ಣ ಆಯುಷ್ಯನು
ಸಾವದನದಿಂದೆಸೆದನುವುತ್ಸೆದನೂ ||         ೨೫೮

ನೀಲವರ್ಣದ ತನುನಿಗಮ ಸೇರಿದನೂ
ಆಲಸ್ಯ ಮಾಡದೆ ಮುಕ್ತಿಗೆ ಸಂದ ದೇವಾ ||    ೨೫೯

ಸುರರಾಜ ತಿಳಿದೂ ಸಮೂಹ ಸಹಿತ ಬಂದು
ಅರುಹನ ನಿರ್ವಾಣ ಕಲ್ಯಾಣ ಪೂಜೆಯ ಮಾಡೆ ||       ೨೬೦

ಅಗ್ನಿಕುಮಾರ ನಿರ್ಧಾರ ಭಕ್ತಿಯಿಂದ ಬಂದು
ಅಗ್ಮಿಮಸ್ತಕದಿಂದ ದಂದಹಿಸಿದ ಮತ್ತೆ ||       ೨೬೧

ವರಚಿಂತಾಭಸ್ಮವ ಧರಿಸಿ ಸುರೇಂದ್ರನೂ
ಪರಮ ಹರುಷದಿ ಆನಂದ ನೃತ್ಯವನಾಡಿ ||    ೨೬೨

ಅಷ್ಟದಶ ದೋಷರಹಿತ ಸರ್ವಜ್ಞಾನಿ
ಶ್ರೇಷ್ಠ ಮೋಕ್ಷ ಲಕ್ಷ್ಮೀಗೆ ಕಂಠಾಭರಣನೇ ||     ೨೬೩

ಜನನ ಮರಣ ದೂರ ಭವವಾರುದಿಸೆವಾ
ಜನನ ಮರಣವ ಹರಿಸಿ ರಕ್ಷಿಸುಯೆನ್ನ ||        ೨೬೪

ಇಂತು ಕೊಂಡಾಡಿ ನೃತ್ಯವನಾಡಿ ಸುರಪತಿ
ಸಂತೋಷದಲಿ ಜಯಜಯವೆಂದು ಹೋದನು ||        ೨೬೫

ಧರೆಯೊಳಧಿಕವಾಗಿ ಬೆಳ್ಗೊಳಿದೊಳಗಿಹ
ವರದೇಶಿಗಣಕಗ್ರಗಣ್ಯನೆಂದೆನಿಸುವಾ ||       ೨೬೬

ವಿಂದ್ಯಕರ ಚರವಿಭ್ಯಕೇತು ಶ್ರೀಧರದೇವಾ
ಸಾಂದ್ರಕೆ ಚರಚಿಂತಾಗತಿಯೆನಿವನೆ ||         ೨೬೭

ದೇವಮಹೇಂದ್ರ ಕಲ್ಪವು ಅಪರಾಜಿತನೇ
ಭೂವಲಯದಿ ಅಚ್ಯುತೇಂದ್ರನೆಂದೆನಿಪನೇ ||  ೨೬೮

ಭೂವರ ಸುಪ್ರತಿಷ್ಠನೆ ಅಹಮಿಂದ್ರದೇವಾ
ಭವಜಹರ ನೇಮಿನಾಥನೇ ಸಲಹೆನ್ನ ||        ೨೬೯

ವರಚಾರುಕೀರ್ತಿ ಪಂಡಿತಾಚಾರ್ಯವರ್ಯರ
ಪರಮ ಶಿಷ್ಯ ಗೊಮ್ಮಟನಾಥ ರಚಿಸಿದ ಕೃತಿಯನು ||   ೨೭೦

ನೇಮಿನಾಥನ ಪಂಚಕಲ್ಯಾಣವಿದು ಮತ್ತೆ
ಪ್ರೇಮದಿ ಚಂದ್ರಸೂರ್ಯರ ಕಾಲ ಪರಿಪರಿಯಂಥ ||    ೨೭೧

ನೇಮಿನಾಥನ ಪದವನು ಕೇಳಿದವರೆಲ್ಲ
ನೇಮದಿ ಶ್ರೀಮುಕ್ತಿ ಲಕ್ಷ್ಮಿಯ ಪಡೆವರು ||      ೨೭೨

ಮಂಗಲಮಸ್ತು ಶುಭಮಸ್ತು ಸುರಮಸ್ತು
ತುಂಗನೇಮೀಶಮಸ್ತು ಶುಭಮಸ್ತು ಶ್ರೀರಸ್ತು || ೨೭೩

 

೩೩. ಜಿನಜಿನಜಿನರೆಂದು

ಜಿನ ಜಿನ ಜಿನರೆಂದು ನೆನೆ ಮನವೇ
ಜನನಾದಿ ದುಃಖವ ಕಳೆ ತನುವೇ ||  ಪಲ್ಲವಿ

ಅಸುರನು ತನುಜಾತಸುತ ಸಖರೂ
ಎಸೆವ ಜನನಿ ಜನಕಾದಿಗಳು
ಹಸಿದು ಯಮನು ಬಂದು ಮುನಿವಾಗಲದು
ಬಿಸಿಲರಿಸಿನಯೆಂದರಿ ಮನವೇ ||    ೧

ಕೊಲ್ಲದೆ ಪುಸಿಯದೆ ಕಳದಿರನ್ಯಪರ
ವಲ್ಲಭೆಯರ ಸಂಗಮಾಡದಿರು
ಬೆಲ್ಲಗೂಡಿದ ವಿಷದಂತವೊಲು ಅದು
ನಿಲ್ಲದೆ ಪ್ರಾಣವ ಕೊಂಬುದದು ||     ೨

ನಡೆವಲ್ಲಿ ನುಡಿವಲ್ಲಿ ಕೆಡುವಲ್ಲಿ
ಒಡಲ್ಲಿಗೆ ಧೈರ್ಯ್ಯಗೆಡಿಸುವಲ್ಲಿ
ಘುಡಿಘುಡಿಸುವ ಸಿಡಿಲೆರಗುವಲ್ಲಿ
ಅಡಿಗಡಿಗರುಹ ನೆನೆ ಮನವೇ ||     ೩

ಹಲವು ದೈವಂಗಳ ನಂಬಿ ನೀನು
ಹಲವು ದುರ್ಗತಿಯೊಳು ತಿರುಗಿ ಬಂದೆ
ನೆನೆಯಿಲ್ಲದ ದುಃಖವನುಂಡೆ
ಎಲೆಪಾಪಿ ಮನವೇ ಜಿನರ ನೆನೆಯೋ ||       ೪

ಧರೆಯೊಳು ಚಾರಣಗಿರಿಯೊಳಿಹ
ವರಭವ್ಯಜನರ ಸಂತತಿಗೆ
ಪರಮಸುಖವನಿತ್ತು ಪಾಲಿಸುವ
ವರಗುಣ ಪಾರೀಶ್ವಜಿನರ ನೆನೆಯೋ ||        ೫

 

೩೪. ನೆನಹಿರೋಮನಸಿಜನನು

ನೆನಹಿರೋ ಮನಸಿಜನನನು ಗೆಲಿದ
ಕನಕಗಿರಿಯ ಶ್ರೀ ಜಿನಪತಿಯ ||     ಪಲ್ಲವಿ

ಉರಗೇಂದ್ರಾರ್ಚಿತ ಪದಯುಗನಾ
ಸುರಲೋಕದಮೃತವ ಕೊಡುತಿಹನಾ
ಪರಮದಯಾ ಹರನೆನಿಸಿಹನಾ
ಪರಪರ ವಸ್ತುತನಾಗಿಹನಾ ||        ೧

ಗತಿನಾಲ್ಕನು ಗೆಲಿದತಿಬಲನ
ಯತಿ ಜನಗಳ ಹೃದಯದೊಳಿಹನ
ಕ್ಷಿತಿಪತಿನುತನೆಂದೆನಿಸಿದನಾ
ಶತಪತ್ರ ಪೀಠದೊಳ್ನೆಲಸಿಹನಾ ||    ೨

ಭೂಮಿಕಾಮಿನಿಯ ಬಿಟ್ಟ ಭವನ್ನಾ
ನಾಮ ಸಾಸಿರವನು ಪಡೆದವನಾ
ಈ ಮಹಿಗತಿಶಯವೆನಿಸಿಹನಾ
ಹೇಮಗಿರಿಯ ಪಾರಿಶ್ವಜಿನೇಶನನ್ನಾ ||        ೩

 

೩೫. ಎಚ್ಚರಿಕೆಎಚ್ಚರಿಕೆಪಾರಿಶ್ವ

ಎಚ್ಚರಿಕೆ ಎಚ್ಚರಿಕೆ ಪಾರಿಶ್ವ ಎಚ್ಚರಿಕೆ
ಕರ್ಮಹರ ಕುಂತುಹರ ಎಚ್ಚರಿಕೆ ಎಚ್ಚರಿಕೆ
ಜಿನರಾಜ ಕರ್ಮಹರ ಕಂತುರೂಪ ಎಚ್ಚರಿಕೆ || ಪಲ್ಲವಿ

ಸುರನರೋರಗ ವಂದ್ಯ ಸುರಗಣ ಸೇವಿತ
ಸುರುಚಿರ ಗುಣ ರೂಪ ಸುಜ್ಞಾನ ಭರತಿ ||     ೧

ಕರ್ಮಷ್ಠೋಪ ವಿಜಯನೆ ಕರ್ಮವಿನಾಶನೆ
ಕರ್ಮಕಳಂಕಹರ ಕಮಲಾಸನರೂಢ ||       ೨

ಪಂಚಬಾಣನ ರೂಪ ಪಂಚಕಲ್ಯಾಣಕೆ ದೀಪ
ಪಂಚಮಗತಿಗೊಡೆಯ ಪಾಹಿ ಜಿನನಾಥ ||    ೩

ಫಣಿಪತಿಗಧಿನಾಥ ಫಣಿಪನರೋಹನ
ಪಾಪವಿನಾಶನ ಪರಮ ಸುಖಗಧಿಪ ||         ೪

ಸೂರ್ಯ ಪ್ರಕಾಶನೆ ಸುಜ್ಞಾನ ಕಾಯನೆ
ಸುಜ್ಞಾನ ಪ್ರತಿಷ್ಠಿತನೆ ತ್ರಿಜ್ಞಾನ ಧರನೆ ||        ೫

ಅನಂತ ಜ್ಞಾನನೆ ಅನಂತಕಾಯನೆ
ಅನಂತ ಶುಕದೀಪ ಆತ್ಮ ಪ್ರತಿಷ್ಠಿತನೆ ||        ೬

ವಿಶ್ವಸ್ವರೂಪನೆ ಶಾಶ್ವತ ಕಾಯನೆ
ಶಾಶ್ವತ ಸುಖವಿತ್ತು ಸಲಹು ಜಿನನಾಥ ||      ೭

ಚಂದ್ರಗಿರಿಯವಾಸ ಚಂದ್ರನ ಸಮ್ಯಕ್ತತಾ
ಚಂದ್ರಕೋಟಿಪ್ರಭ ಚಂದ್ರಜಿನಚಂದ್ರ ||         ೮

ಮೋಕ್ಷ ಲಕ್ಷ್ಮೀಯಕಾಂತ ಸೂಕ್ಷ್ಮಸ್ಥಳ ನಿವಾಸ
ಸಾಕ್ಷತಾ ಸುಖದೊಡೆಯ ಸುಜ್ಞಾನ ಕಾಯ ||  ೯

ಸರ್ವದೋಷವ ಗೆಲ್ದು ಸರ್ವಜ್ಞಾನನೆನಿಸಿದೆ
ಸರ್ವವಿಘ್ನಪ ಹರನೇ ಸರ್ಪಾಸನರೂಢ ||     ೧೦

ಬೆಳ್ಗುಳ ಪುರವಾಸ ಚಂದ್ರಗಿರಿಯವಾಸ
ಭಕ್ತರ ಸಲಹಯ್ಯ ಪಾರೀಶ್ವನಾಥ ಎಚ್ಚರಿಕೆ ಎಚ್ಚರಿಕೆ ||   ೧೧

 

೩೬. ನಿಮ್ಮಪಾದವಎಲ್ಲಿ

ನಿಮ್ಮ ಪಾದವ ಎಲ್ಲಿ ಕಾಣೆ
ಸ್ವಾಮಿ ಸನ್ನುತ ಪಾರೀಶ್ವ ಜಿನರೆ ನಿಮ್ಮಾಣೆ || ಪಲ್ಲವಿ
ಹಲವು ಯೋನಿಯೊಳು ನಾ ಬಂದೆ ಬಹು
ನೆಲೆಯ ಕಾಣದೆ ಬಹಳ ಪಾಶದಲಿ ನೊಂದೆ
ಕಾಲದೂರವ ಮಾಡೋ ತಂದೆ ಮುಕ್ತಿ
ಲಲನೆನಿಸಿ ನಾ ನಿಮ್ಮ ಪಾದದೊಳು ನಿಂದೆ || ೧

ಅರಿತು ವಿಚಾರಿಸಬೇಕು ಇದರೊಳು ಸಂ
ಸಾರವು ನಮಗಿದು ಸಾಕು ನಿಮ್ಮ
ಅರ್ಹನಲ್ಲದೆ ಉಳಿದೆಲ್ಲ ಸಾಕು
x x x x x x x x x x x 
|| ೨

ಭೂಮಿ ಶೃಂಗಾರ ಭವನಿಯವಳೆ
ಪ್ರೇಮದಿ ಶೋಭಿತ ಅನುಮಿಶ ಗಿರಿಯ
ನೆ ಮಾಡಿ ನೆರೆನಾಥ ತತ್ವವಧಿಯಾ ಕರ್ತೃ
ತಾ ಮದ್ದಳೆಯ ಕಾಶಿಯ ಜಿನರಾಜ ನಿಮ್ಮ ||  ೩

 

೩೭. ಭಾವಿಸಿಕೇಳಿರೋಎಲೆ

ಭಾವಿಸಿ ಕೇಳಿರೋ ಎಲೆ ಜೀವ
ಭಾವಜಹರ ಜಿನ ವಚನವನು ||      ಪಲ್ಲವಿ

ಶ್ರೀ ಜಿನಶಾಸನಾಜ್ಞೆಯ ಮೀರಿಯೆ
ಜೂಜಿಂ ಪಾಂಡುವರೊಲಿದಾಡಿ
ರಾಜಾರ್ಥವನುಳಿದಡವಿಯ ಹೊಕ್ಕರು
ಜೂಜಿನ ದೆಸೆಯನು ಬಿಡು ಜೀವ ||   ೧

ವೈಶ್ಯಕುಲೋತ್ತಮ ಚಾರುದತ್ತಾಖ್ಯನ
ವೇಶ್ಯಗಿದ್ದುದನೆಲ್ಲವನಿತ್ತು
ಹಾಸ್ಯಕೆ ಭಾಜನವಾದನು ಜಗದೊಳು
ವೇಶಿಯ ವ್ಯಸನವ ಬಿಡು ಜೀವ ||    ೨

ಪರಬಲ ಜಲಧಿಗೆ ಒಡಬನೆಂದೆನಿಸಿದ
ಉರವಿ ಕ್ರಮಯುತ ರಾವಣನು
ಪರಸತಿಗಳಳುಪಿಯೆ ನರಕಕ್ಕಿಳಿದನು
ಪರಸತಿಯಾಸೆಯ ಬಿಡು ಜೀವ ||    ೩

ಬೇಂಟೆಯ ದೆಸೆಯಿಂ ಬ್ರಹ್ಮದತ್ತಾಖ್ಯನು
ಕಂಟಕ ಬಹುದುರ್ಗತಿಯೊಳಗೆ
ಟೆಂಟೆನಿಸಿಹೆ ಬಹುದುಃಖವನುಂಡನು
ಬೇಂಟೆಯ ದೆಸೆಯಂ ಬಿಡು ಜೀವ || ೪

ಕಳವಿನ ದೆಸೆಯಿಂ ಶಿವಭೂತಾಖ್ಯನು
ಪಳಿಯುಂ ಪಾಪಕ್ಕೆ ನೆಲೆಯಾಗಿ
ಇಳಿದು ದುರ್ಗತಿ ಏಳುದುಃಖವನುಂಡನು
ಕಳವಿನ ದೆಸೆಯನು ಬಿಡು ಜೀವ ||   ೫

ಮಾಂಸದ ದೆಸೆಯಿಂದ ಭಟನೆಂಬರಸನು
ಹಿಂಸೆಯೊಳೆಸಗಿದ ಪಾತಕದಿಂ
ಸಂಸಾರದೊಳತಿ ದುಃಖವನುಂಡನು
ಮಾಂಸದಾಕಾಂಕ್ಷೆಯ ಬಿಡು ಜೀವ || ೬

ವಿದ್ಯೆಯು ಬುದ್ಧಿಯುವೆಂದತಿ ಧರ್ಮವ
ನಿರ್ದ್ದಡೆಯಿಂ ನೆರ x x ಲಗಿಸುವ
ಮದ್ಯದ ದೆಸೆಯಿಂ ಯಾದವರಳಿದರು
ಮದ್ಯದಾಕಾಂಕಾಂಕ್ಷೆಯ ಬಿಡು ಜೀವ ||        ೭

ಈ ಸಪ್ತವ್ಯಸನವನುಳಿದವರ್ಗೆ
ವಾಸವ ಪದವಿಯನನುಭವಿಸಿ
ಭಾಸುರ ನಿತ್ಯ ನಿರಂಜನ ಮೋಕ್ಷ ನಿ
ವಾಸಿಗಳಪ್ಪರು ಕ್ರಮದಿಂದ ||        ೮

ಇಂತಿ ಪದಗಳನೋದುವ ಕೇಳುವ
ಚಿಂತಿಪ ಭವ್ಯ ಜನಗಳಿಗೆ
ಕಂತುಮದನ ಪಾರೀಶ್ವ ಜಿನೇಶ್ವರ
ಸಂತತ ಪದವಿಯನಮಗೀಯ್ವಾ ||   ೯

 

೩೮. ಹೆಚ್ಚಿನವನೀನು

ಹೆಚ್ಚಿನವ ನೀನು ಮೂರು ಲೋಕಕ್ಕೆ
ಹೆಚ್ಚಿನಾ ಸ್ವಾಮಿ ನೀನು
ನಿಶ್ಚಲ ಪೆನಗೊಂಡೆ ಪುರದೊಳು ನೆಲಸಿದ
ಪಚ್ಚೆ ಪಾರೀಶ್ವ ಜಿನ ||      ಪಲ್ಲವಿ

ಜಗವ ಸೃಷ್ಟಿಸಿದನಲ್ಲ ಎಲೆಸ್ವಾಮಿ
ಮಗಳಿನೆಸೊ ತಾನಲ್ಲ
ಮುಖನಾಲ್ಕು ಪಡೆಯಲಿಲ್ಲ ಎಲೆಸ್ವಾಮಿ
ಜಗದೊಳು ಭಂಡನಲ್ಲ ||    ೧

ಹತ್ತಾವತಾರನಲ್ಲ ಎಲೆಸ್ವಾಮಿ
ಪತ್ತಿಲ್ಲಿ ಸ್ತ್ರೀಯರಿಲ್ಲ
ಬೆತ್ತಲೆ ಮೀಯ್ವ ಹೆಣ್ಗಳ ಕಂಡು ಸೀರೆಯ
ಎತ್ತಿಕೊಂಡೊಯ್ಯಲಿಲ್ಲಾ ||  ೨

ಶಿರಮಾಲೆ ಸುಡಲಿಲ್ಲ ಎಲೆಸ್ವಾಮಿ
ಕರಿಚರ್ಮ ಹೊದೆಯಲಿಲ್ಲ
ಕರದೊಳು ತ್ರಿಶೂಲವಿಲ್ಲ ಎಲೆಸ್ವಾಮಿ
ಉರಿಗಣ್ಣು ನೊಸಲೊಳಿಲ್ಲ ||          ೩

ಹರನು ಭಿಕ್ಷವ ಬೇಡಿದ ಎಲೆಸ್ವಾಮಿ
ಹರಿಗೋವುಗಳ ಕಾಯ್ದನು
ಶಿರವ ನೀಗಿದ ಬ್ರಹ್ಮ ಇವರು ಮೂ
ವರು ಹಗರಣಕೊಳಗಾದಾರು ||      ೪

ಪೆನಗೊಂಡಾಚಾರ್ಯರಿಗೆ ಎಲೆಸ್ವಾಮಿ
ಘನತರ ಸುಖವನಿತ್ತೆ
ಅನುದಿನ ರಕ್ಷಿಸು ಪಾರೀಶ್ವ ಜಿನತಂದೆ ಶ
ರಣಯ್ಯ ನಿಮ್ಮ ಪಾದಕ್ಕೆ ||  ೫

 

೩೯. ನೀನೆಕಾರುಣ್ಯಸಂಪನ್ನ

ನೀನೆ ಕಾರುಣ್ಯ ಸಂಪನ್ನ ಸಮ್ಯಜ್ಞಾನ ವಿ
ತ್ಪನ್ನ ವರ್ಧಮಾನ ಮುನಿಪರನ್ನ ||   ಪಲ್ಲವಿ

ಐದು ಬಾಣಗಳನೆ ತೊಟ್ಟು ಡಾಮ
ಯಿದೋರದೆ ಯೇಸುವಂಗಜನ
ಹೊಯ್ದಡೆ ವೈದನೆಯಲಿವನೇನೊ
ನೊಂದ ಹಸಲ್ಮನೆಂದು ಬಾಯಿ ಪಿ
ಡಿದು ಕೈದಿಲ್ಲದೆ ಗೆಲ್ದು ರಕ್ಷಿಸಿಬಿಟ್ಟೆಯಲ್ಲಾ ||     ೧

ದೇಹಿಗಳೆಲ್ಲರು ತಮಗೆ ಆಹಾರವೆಂದಿಡಿರಾಂತ
ಮಹಾರಾಕ್ಷಸಂ ನಕಾದ್ರಯೆಂದೆಂಬರೆಬ್ಬ
ವಿಹತ ಮೋಹ ಶಾಂತಿ ರಸದಿ ನಂದಿಸಿ ಪೆರುಗದಕೆ
ಜ್ಜ ಹಲ್ಲು ಹಾವು ಪಡಿವಂತೆ ಪಡೆದು
ಸಾಹಸದ ಪೆಜ್ಜನುಡಿಯ ಬಾಹರಾವಲರು
ಗೆಲ್ದು ತಲೆನಾಯ್ದು ಭೂಲೋಕ ಮೆಚ್ಚ ||        ೨

ಕಲಹ ಗೆಯ್ದವರನು ಕಾಯಿದ ಸಲೆ ಒಬ್ಬರಿಗೆಂತು ಕರುಣ
ಲಲಿತಕೀರ್ತಿಯೋಗಿ ಎತ್ತ ಜಾಡಿರದೆ ಜೀವ
ಕುಲಕೆ ಇಷ್ಟಾರ್ಥವನು ಪಾಲಿಪ ತ್ರಿಕಲ್ಪ ತರುವೆ ನುಡಿಯ
ಗೆಲುವೆಂತೊ ಶೃಂಗಾರಕವಿಯ ಪಾವನ್ನಗುರುವೆ ಯೋಗಿ
ತಿಲಕ ವರ್ಧಮಾನಮುನಿ ತಾ ಪುಣ್ಯದಾ ಕರುವೆ ||      ೩

 

೪೦. ತಾಯೇನೀನೋಡಿ

ತಾಯೇ ನೀನೋಡಿ ವರ್ಧಮಾನಮುನಿ
ರಾಯನೆ ತೆರಜಾನನೆ ||    ಪಲ್ಲವಿ

ತೋರಾ ಕುಚಗಳ ತೊಂಡೆವಾಯ್ದೆರೆಯ
ಈ ರಾಜ್ಯದ ನೀರೆಯರನೊಲ್ಲದೆ x x x ಟು
x x x x x x x x x x x
ತನ್ನ
ಶರೀರವ ದಂಡಿಸುತಿಹನು ||         ೧

ಕ್ಷೋಣಿಯೊಳೆಲ್ಲರು ಧರಿಸಲಾದೊಂಬತ್ತು
ಮಾಣಿಕ್ಯಾಭರಣವನೊಲ್ಲದೆ
ಕಾಣಬಾರದ ಮೂರು ರನ್ನವ
ಮಾಣದೆ ತಾಳ್ದು ರಂಜಿಸುತಿಹನು ||  ೨

ತರಳೆ ಪೊಗೆನ್ನದಿರು ನೀನರಿಯೆ
ನ್ನರುವರ ಸ್ಥಿರಸುಖಕೊಲಿವರೆ
ಪರಮ ಶೃಂಗಾರಕವಿ ಬೊಮ್ಮರಸನ ಶ್ರೀ
ಗುರು ವರ್ಧಮಾನ ಮುನೀಂದ್ರನಾ ||          ೩