೬೧. ಕೃಪೆಯಿಲ್ಲವೇಕೊಎನ್ನಮೇಲೆ
ರಾಗ: ಹುಸೇನ್‌   ತಾಳ: ರೂಪಕತಾಳ

ಕೃಪೆಯಿಲ್ಲವೇಕೊ ಎನ್ನ ಮೇಲೆ ದೇವದೇನೇ
ಅಪರಾಧಗಳನು ಕ್ಷಮಿಸಿ ಕಾಯೋ ಪಾರ್ಶ್ವನಾಥನೇ ||  ಪಲ್ಲವಿ

ಗತಿಯು ನೀನೆ ಹಿತರ ಕಾಣೆ ಪಿತನು ನೀನೆಂದು
ಅತಿಶಯದಿ ನಿನ್ನ ಚರಣ ಸ್ತುತಿಪೆ ನಾ ನಿಂತು ||         ೧

ನಾಡಾಡಿಗೊಡೆಯ ಬೇಡಿಕೊಂಬೆ ಗಾಢದಿಂದಲಿ
ತಾಡಮಾಡದೆ ಕೊಡು ವರವ ಪೂರ್ಣಹರುಷದಿ ||       ೨

ಘಾತಿಯಘಾತಿಯನ್ನು ಘಾತಿಸಿದನೇ
ಪ್ರೀತಿಯಿಂದ ಭಕ್ತರನ್ನು ಪೊರೆವ ದೇವನೇ ||   ೩

ಬೆಳ್ಗುಳಪುರದ ಪಾರ್ಶ್ವನಾಥ ಪ್ರೇಮದಿಂದಲಿ
ಕಾಮಿತಾರ್ಥವನ್ನು ಕೊಡುವ ಸ್ವಾಮಿಜಿನಪನೇ ||       ೪

 

೬೨. ನೇಮಿಶಜಿನಪೋತ್ತಮನೇ
ರಾಗ: ನಾರಾಯಣಿ           ತಾಳ: ಅಟ್ಟಿತಾಳ

ನೇಮಿಶ ಜಿನಪೋತ್ತಮನೇ ಭಕ್ತರ ಕಾಯ್ವ
ಪ್ರೇಮಶರಧಿ ಚಂದ್ರಮನೇ
ಕಾಮಹರಸುತ್ರಾಮವಂದಿತ ನಾಮನೇ ಗುಣಧಾಮನೇ
ಕ್ಷೇಮಕರ ಸುಮಕೋಮಲಾಂಗನೆ || ಪಲ್ಲವಿ

ಈ ತೆರ ಸ್ತುತಿಗೊಳುತಾ ನೇಮಿಶ್ವರ ಪಾತಕಸವರಿಡುತ
ಭೂತಳಕೆ ಪುರುಹೂತ ನಿತ್ಯದಿ ಕಳುಹಿದಾ ನಿಳುಹಿದಾ
ಪ್ರೀತಿದ್ರವ್ಯಗಳೋತುಗೊಳುತಲಿ ||  ೧

ಇರುತಿರಲೊಂದಿನದಿ ಬಲರಾಮಕೃಷ್ಣರವೆರಸುತಲತಿ ಮುದದಿ
ತರುಣಿಯರು ಸಹ ಚರಿಸಿ ವನದೊಳಗಾಡುತಾ ಪಾಡುತಾ
ಮೆರೆವ ಸರಸಿಯ ಸರಸಿಗೈದಲು ||  ೨

ಹರುಷದಿ ಜಲಕೇಳಿಯನಾಡುತಲಿ ಬಳಲಿ ಸರಿದರು ಮೇಲ್ಗಡೆಯ
ಪರಮ ನೇಮೀಶ್ವರನು ಧರಿಸಿದಂಬರವನು ಮೆರೆವನು
ತರುಣಿಭಾಮೆಯ ಕರಕೆ ನೀಡಲು ||  ೩

ಮೂರ್ಲೋಕದೊಳು ವೀರನು ಎನ್ನೊಲ್ಲಭನ ಸರಿ ಪೋಲುವರನು ಕಾಣೆನು
ಕೀಳು ಸತಿಯರವೋಲು ನೀನೆನಗಾಡಿದೆ ಏನಾಡಿದೆ
ಮೇಲನರಿಯದೆ ಪೇಳಬಹುದೇ ||

ಎನೆ ಸತ್ಯಭಾಮೆಯಳಾ ನುಡಿ ಕೇಳಿ ನೇಮಿಜಿನಪನು ಕೋಪಿಸಲು
ಬಳಿಕ ಶ್ರೀಧರಬಲರು ಬಂದತಿಮೋದದಿ ವಿನೋದದಿ
ಒಲಿದು ನೇಮವಗೊಳುತ ಪೋದರು ||        ೫

ನೀಲವರ್ಣದ ದೇವನು ಗಣರೊಡನೆ ಶಸ್ತ್ರದ ಶಾಲೆಗೆ ತೆರಳಿದನು
ಲೋಲನಯನಾ ಮೇಲೆ ಶಂಖವ ಕರದೊಳು ಭರದೊಳು
ಲೀಲೆಯಂ ಗುಣಪಾಲವಿಡಿದನು ||   ೬

ವಾಮನಾಸಿಕರಂಧ್ರದಿ ಆ ಪಾಂಚಜನ್ಯವನಾ ಮಹಿಮನು ಭರದಿ
ಭೀಮಬಲನಿಸ್ಸೀಮನೂದಲು ನಾದದಿಂ ಪಯೋದದಿಂ
ಆ ಮಹಾತ್ರೈಭೂಮಿ ನಡುಗಿತು ||    ೭

ಸುರರು ಕುಸುಮವೃಷ್ಟಿಯ ಧರೆಗೆರೆಯಲಾಕ್ಷಣ ಹರಿಬಹಳಾಚ್ಚರಿಯ
ವೆರಸಿ ಮನದೊಳಗರಿತು ಪೇಳ್ದನು ಭರದೊಳು ಮತ್ಸರದೊಳು
ಅರರೆ ನೇಮೀಶ್ವರನು ಮೆರೆವನು ||  ೮

ಧರೆಮೂರ ದೊರೆತನವು ಎನ್ನದು ನೇಮೀಶ್ವರ ಸೆಲೆಯುವ ದಿಟವು
ತ್ವರಿತದಿಂದುರು ತರದುಪಾಯವಗೈವೆ ತಾನೆನ್ನುತಾ
ಅರಸ ಬಲರಾಮರೊಳು ಪೇಳ್ದನು || ೯

ಪೊಸಯೌವನವನಾಂತನು ನಮ್ಮಯ ನೇಮಿಶಶಿಗೆ ವಿವಾಹವನು
ಕುಶಲದಿಂ ಪಸರಿಸಲು ಬೇಕೆನೆ ತೋಷದಿ ವಿಲಾಸದಿ
ಅಸಮಪುರರಂಜಿಸಿದುದಾಗಲು ||    ೧೦

ಐನೂರು ಕನ್ನೆಯರು ಶೃಂಗರಿಸಿ ಲಗ್ನಕೆ ಸಾನುರಾಗದಿಯಮರ
ಮಾನಿನೀಯರವರೇನನೆಂಬೆನು ಗಾನದಿಂ ಯಾನದಿಂ
ಭಾನುತೇಜನ ಧ್ಯಾನ ಗೈದರು ||     ೧೧

ಭರತಶೃಂಗಾರದೊಳು ಜಿನೇಶ್ವರ ಮೆರೆವಣಿಗೆಯ ಬರಲು
ತುರುಗಳನು ಕಟ್ಟಿರಿಸಿ ಸಾಲೊಳು ಬಿಸಿಲೊಳು ತೃಷೆಯೊಳು
ಉರುತರದಿ ಬಾಡಿರಲಿದೇನೆನೆ ||    ೧೨

ಅದರೊಳೋರುವ ಗೋಪನು ಪೇಳಿದನು ನಿಮ್ಮಯ ಮದುವೆ ಭೋಜನ
ಕೆಂದಿನ್ನು ಚದುರ ಕೃಷ್ಣನ ಪದುಳದಪ್ಪಣೆಯೆಂದವ
ನಂದವನರಿತು ಬಿಡಿಸಿದ ತುರುಗಳೆಲ್ಲವ ||     ೧೩

ಪಿಂತಿರುಗುತ್ತ ದೇವನು ವೈರಾಗ್ಯವ ನಂತರ ತಾಳಿದನು
ಇಂತಿರಲು ಲೌಕಾಂತಿಕರು ಬಂದೆಂದರು ನಿಂದರು
ಸಂತಸದಿ ಪರಮಾಂತೆ ಬೋಧೆಯ ||         ೧೪

ಅರಿತಾಗಲಮರಗಣವೆರಸುತಲಿ ಸುರಪನು ಪರಿನಿಷ್ಕ್ರ ಮಣಕಲ್ಯಾಣ
ಪರಮಪೂಜೆಯ ವರಜಿನೇಂದ್ರಗೆ ಹರುಷದಿ ಸರಸದಿ
ವಿರಚಿಸಿದನುರುತರದ ವಿಭವದಿ ||   ೧೫

ಶ್ರಾವಣಶುದ್ಧದೊಳು ಚತುರ್ಥಿಯ ತೀವಿದ ಚಿತ್ರೆಯೊಳು
ದೇವ ವಂದಿತ ದೇವ ದೀಕ್ಷೆಯಗೊಂಡನು ಮುಂಕೊಂಡನು
ಭಾವಶುದ್ಧದೊಳಾ ಉದ್ಯಾನದಿ ||    ೧೬

 

೬೩. ಪೋಷಿಸೈನೇಮೀಶಜಿನಪನೇ
ರಾಗ: ಕೇತಾರಗೌಳ         ತಾಳ: ರೂಪಕತಾಳ

ಪೋಷಿಸೈ ನೇಮೀಶ ಜಿನಪನೇ ತವ ದಾಸಜನರ ಬಹು
ದೋಷರಹಿತ ಶ್ರೀಶವಿನುತ ಭಾಸುರಾಂಗ ವಾಸವಾರ್ಚಿತ ||     ಪಲ್ಲವಿ

ಎಂದು ತ್ರಿದಶವೃಂದ ಸ್ತುತಿಸಲಂದು ಮನದೊಳು ಆ
ನಂದನೇಮಿಚಂದ್ರ ತಪದಿ ನಿಂದನಾ ಪೂರ್ಣೇಂದುಭಾಷ ||       ೧

ಆರುದಿನದಾಹಾರವಿಲ್ಲದೆ ಚಾರುತಪದಿರಲ್ ಅ
ಪಾರಮಹಿಮ ಪಾರಣೆಂಗೆ ಸಾರಿದಂ ಗಿರಿನಗರವದರ || ೨

ಅತ್ತಲಾ ವರದತ್ತನೆಂಬ ಪೃಥ್ವೀಪೋತ್ತಮ
ಸತ್ಯ ನಿಧಿಗೊಂಬತ್ತು ವಿಧದ ಭಕ್ತಿಯಿಂ ಮುದವೆತ್ತು ಪೂಜಿಸೆ ||    ೩

ಧರಣೀಪತಿಯ ಪರಮಭಕ್ತಿಗಿರದೆ ಮೆಚ್ಚುತಾ
ಹರುಷದಿಂದ ಹರಸು ತೆಂದ ನಿರುಪಮಸುಖ ತರದ ಬೋಧ ||   ೪

ಕಂತುವೈರಿಯನಂತರೋರ್ಜಯಂತಗಿರಿಯೊಳು
ಅನಂತಮಹಿಮ ನಿಂತನೇಕೋ ಚಿಂತನೆಯೊಳಾಂತು ತಪವ ||  ೫

ಈ ಸುಚಾತುರ್ಮಾಸ ತಪೋವಾಸನಾಗಿರಲ್
ಜಿನೇಶಘಾತಿದೋಷವೆಲ್ಲ ನಾಶಗೈದ ದಿನೇಶಭಾಸ ||   ೬

ಯತಿವರೇಣ್ಯ ನುತಗೆ ದಿವ್ಯ ಮತಿಯ ಪ್ರಾಪ್ತಿಸೇ
ಕ್ಷಿತಿಯ ತೊರೆದು ವ್ರತಿಪ ಗಗನಪಥದಿ ನಿಂದ ಸತತಾನಂದ ||    ೭

ಅರಿತನಾಗ ಸುರಪ ಬೇಗ ವರಕುಬೇರಗೆ
ತಾನೊರೆಯ ಸಮವಸರಣವನ್ನು ವಿರಚಿಸಿದನು ಪರಮ ವಿಧದಿ || ೮

ಕಾಣುತಾಮರರಾಣ್ಯ ಕೇವಲಜ್ಞಾನಪೂಜೆಯ
ಪರಮಾನುರಾಗದಿ ಧ್ಯಾನಮೂರ್ತಿಗೆ ತಾನೆಗೈದ ನಿನ್ನೇನನೆಂಬೆನು ||     ೯

 

೬೪. ಕೇಳಿಮನವೊಲಿದು
ರಾಗ: ಪೀಲು       ತಾಳ: ಆದಿತಾಳ

ಕೇಳಿ ಮನವೊಲಿದು ಚಂದ್ರಪ್ರಭಸ್ವಾಮಿ ಪದವಿಯನು || ಪಲ್ಲವಿ

ಶ್ರೀ ಸುರನರನಾಗ ವಂದಿತ ಚರಣಾಬ್ಜ
ಸಾಸಿರನಾಮದೊಡೆಯಗೆ ವಂದನೆ ಮಾಡಿ ಕೇಳಿ ||     ೧

ಚಂದ್ರನಾಥನ ಪಂಚಕಲ್ಯಾಣವನು ಪೇಳ್ವೆ
ಚಂದದಿಂದೇಳು ಭವಗಳು ಸಹಿತವಾಗಿ ||     ೨

ವರಪುಷ್ಕರದ್ವೀಪದ ಪೂರ್ವ ಮಂದರ
ದುರುತರಪರವಿದೇಹ ಮಧ್ಯದೊಳಿಹ ||        ೩

ಸೀತೋದಾನದಿಯುತ್ತರ ಗಂಧಿಲದೊಳು    
ಸಾತಿಶಯಕೆ ನೆಲೆಯೆನಿಸಿದ ಶ್ರೀಪುರ ||        ೪

ಆ ಪುರದಧಿಪತಿ ಶ್ರೀಷೇಣನೆಂಬಗೆ
ಚಾಪಲನೇತ್ರೆ ಶ್ರೀಕಾಂತೆ ವಲ್ಲಭೆಯಾಗಿ ||     ೫

ರಾಜ್ಯಭಾರವನನುಭವಿಸುತಲನುದಿನ
ರಾಜನೊಪ್ಪಿದನು ಶಚಿಯ ಪತಿಯಂದದಿ ||    ೬

ಪುತ್ರನ ಪಡೆಯಬೇಕೆಂದು ದಂಪತಿಗಳು
ಚಿತ್ತಶುದ್ಧದಲಿ ಜಿನೇಂದ್ರನ ಪೂಜಿಸೆ ||         ೭

ಶ್ರೀವರ್ಮನೆಂಬ ಕುವರನುದಯಿಸಿದನು
ಸಾರ್ವಭೌಮಗೆ ಸಮನೆನಿಸಿ ಸುಖದೊಳಿರೆ || ೮

ಶ್ರೀಪ್ರಭತೀರ್ಥೇಶ್ವರನ ಸಮವಸೃತಿ
ಆ ಪುರದುದ್ಯಾನವನಕೆ ಬರಲು ಕೇಳಿ ||        ೯

ಸುತ್ರಾಮನಂದದಿ ಶ್ರೀಷೇಣರಾಜನು
ಪುತ್ರಸಹಿತ ಪೋಗಿ ಜಿನರಿಗೊಂದನೆ ಮಾಡಿ || ೧೦

ತತ್ತ್ವೋಪದೇಶವ ಕೇಳಿ ರಾಜೇಂದ್ರಗೆ
ಚಿತ್ತಶುದ್ಧದೊಳು ನಿರ್ವೇಗಪುಟ್ಟಿತು ಮತ್ತೆ ||    ೧೧

ಜಿನವಚನವ ಕೇಳಿ ಶ್ರೀವರ್ಮಕುವರಗೆ
ಜನಿಸಿತು ಹೃದಯದಿ ಘನತರಸಮ್ಯಕ್ತ್ವ ||      ೧೨

ಜಿನರಿಗೊಂದನೆ ಮಾಡಿ ಮರಳಿ ಸಂಭ್ರಮದಿಂದ
ಅನಿಮಿಷಪತಿಯಂದದಿ ಪುರವನು ಪೊಕ್ಕು ||   ೧೩

ಪಟ್ಟವ ಕಟ್ಟಿ ಶ್ರೀವರ್ಮಕುಮಾರಗೆ
ಇಟ್ಟು ಮುಕ್ತಿಯ ರಮಣಿಗೆ ಮನವನು ರಾಜ ||  ೧೪

ಶ್ರೀಪ್ರಭತೀರ್ಥೇಶ್ವರನ ಸನ್ನಿಧಿಯೊಳು
ಪಾಪವ ಕೆಡಿಸುವ ದೀಕ್ಷೆಯ ಧರಿಸಿದ ||         ೧೫

ಇತ್ತಲು ಶ್ರೀವರ್ಮ ಸಕಲಸಾಮ್ರಾಜ್ಯವ
ನೊತ್ತಿ ಆಳುವ ಆಷಾಢಪೌರ್ಣಮಿಯೊಳು ||   ೧೬

ಘನತರವಾಗಿ ಜಿನರ ಪೂಜೆಯ ಮಾಡಿ
ಅನಶನವನು ಮಾಡಿಕೊಂಡು ರಾತ್ರಿಯ ಕಾಲ ||        ೧೭

ಸೌಧವನೇರಿ ಕುಳ್ಳಿರೆ ಸತಿಯರುಗೂಡಿ
ಔದಾರ್ಯಶೀಲನು ಕಂಡುಳ್ಕಪಾತವ ||       ೧೮

ಮನದೊಳು ವೈರಾಗ್ಯ ಜನಿಸಿತು ನೃಪತಿಗೆ
ತೃಣವೆಂದು ತಿಳಿದನು ಸಕಲಸಂಪದಗಳ ||   ೧೯

ಶ್ರೀಕಾಂತನೆಂಬ ಕುವರಗೆ ರಾಜ್ಯವ ಕೊಟ್ಟು
ಸ್ವೀಕರಿಸಿದನು ದೀಕ್ಷೆಯ ತೀರ್ಥಂಕರಲ್ಲಿ ||     ೨೦

ಶ್ರೀ ಪ್ರಭರಿಯೊಳು ಪ್ರತಿಮಾಯೋಗದಿ ನಿಂದು
ಪಾಪಹರನು ಸಮಾಧಿ ಮರಣದಿಂದ||         ೨೧

ಸೌಧರ್ಮಕಲ್ಪದೊಳಗೆ ಜನಿಯಿಸಲಾಗ
ಶ್ರೀಧರನೆಂಬ ನಾಮವನು ಧರಿಸಿದನು||       ೨೨

ಅಣಿಮಾದಿಗುಣ ಮೊದಲಾದ ಸುಖದೊಳಿರ್ದ
ಅನಿಮಿಷಗಾಯು ಸಂಪೂರ್ಣವಾಗಲು ಇತ್ತ|| ೨೩

ಧಾತಕಿಖಂಡ ದಕ್ಷಿಣದಿಷುಕಾರದ
ಖ್ಯಾತಿಗೆ ಪೂರ್ವದ ಭರತಾವನಿಯೊಳು||      ೨೪

ಅಲಕಾಖ್ಯವಿಷಯದ ಮಧ್ಯದೊಳಿರುತಿಹ
ಅಲಕಪುರಕೆ ಸಮವೆನಿಸಿ ಅಯೋಧ್ಯೆಯ ||     ೨೫

ಅಜಿತಂಜಯನೆಂಬರಸಗೆ ವಲ್ಲಭೆ
ಅಜಿಸೇನೆಯು ತಾನು ಸುಖದೊಳಗಿರುತಿರೆ|| ೨೬

ಪುತ್ರಾರ್ಥವಾಗಿ ಜಿನರ ಪೂಜೆಯ ಮಾಡಿ
ಸುಪ್ತಿಯೊಳಿರೆ ಶುಭಸ್ವಪ್ನವ ಕಂಡಳು||         ೨೭

ಶ್ರೀಧರದೇವ ಬಂದುದರದಿ ನೆಲಸಿರ್ದು
ಭೂಧರಧೈರ್ಯನು ಶುಭದಿನದೊಳು ಪುಟ್ಟಿ || ೨೮

ಪುತ್ರನಿಗಜಿತಸೇನನು ಎಂಬ ನಾಮವ
ಸುಪ್ರಸಿದ್ಧದಿ ಕರೆದನು ರಾಜೇಂದ್ರನು||         ೨೯

ಶುಕ್ಲಪಕ್ಷದ ಚಂದ್ರನಂದದಿ ಬೆಳೆಯಲು
ವಿಕ್ರಮಿಯಾಗಿರುತ್ತಿರಲೊಂದು ದಿನದೊಳು||   ೩೦

ಬಂದು ಸ್ವಯಂಪ್ರಭಜಿನರ ಸಮವಸೃತಿ
ನಿಂದುದಶೋಕವನದೊಳು ವಾರ್ತೆಯ ಕೇಳಿ|| ೩೧

ಇಂದ್ರವೈಭವದಿಂದ ಪೋಗಿ ರಾಜೇಂದ್ರನು
ವಂದನೆಯನು ಮಾಡಿ ಧರ್ಮತತ್ತ್ವವ ಕೇಳಿ|| ೩೨

ನಿರ್ವೇಗಪರನಾಗಿ ಬಂದು ಕುಮಾರಗೆ
ಸರ್ವಸಾಮ್ರಾಜ್ಯವನಿತ್ತು ಕೇವಲಿಯಾದ||      ೩೩

ಅಜಿತಸೇನನು ಚಕ್ರಧರನಾಗಿ ಕೀರ್ತಿಯ
ತ್ರಿಜಗದೊಳಗೆ ಪಸರಿಸುತ ಸುಖದೊಳಿರೆ||    ೩೪

ಒಂದಾನೊಂದು ದಿವಸ ಮನೋಹರವೆಂಬ
ಚಂದದುದ್ಯಾನವನಕೆ ಗುಣಪ್ರಭಜಿನ ||         ೩೫

ಬಂದರು ಎಂಬ ವಾರ್ತೆಯ ಕೇಳಿ ಪೋಗಿ ತಾ
ವಂದನೆಯ ಮಾಡಿ ಭಕ್ತಿ ಪೂರ್ವಕದಿಂದ ||     ೩೬

ತನ್ನ ಭವವ ಕೇಳಿ ನಿರ್ವೇಗಪರನಾಗಿ
ಸನ್ನುತ ಜಿತಶತ್ರುವಿಗೆ ರಾಜ್ಯವ ಕೊಟ್ಟು ||      ೩೭

ದೊರೆಗಳ ಒಡಗೂಡಿ ಸಂಯಮಧುರನಾಗಿ
ಇರುತಿರೆ ಗಗನತಿಲಕವೆಂಬ ಗಿರಿಯೊಳು ||    ೩೮

ಸನ್ಯಾಸನ ವಿಧಿಯಿಂದ ತನುವ ಬಿಟ್ಟು
ಉನ್ನತಚ್ಯುತಕಲ್ಪದೊಳಗೆ ಜನಿಸಿದನು||       ೪೦

ಮಾನಸಪ್ರವಿಚಾರ ಮೊದಲಾದ ಸುಖದೊಳು
ಅನಿಮಿಷಗಾಯು ಸಂಪೂರ್ಣವಾಗಲು ಇತ್ತ || ೪೧

ಧಾತಕಿಖಂಡದ್ವೀಪದ ಪೂರ್ವಭಾಗದ
ಸೀತಾನದಿಯ ತೆಂಕಣ ದಿಕ್ಕಿನೊಳಗಿಹ||      ೪೨

ಮಂಗಲಾವತಿಯೆಂಬ ದೇಶದೊಳಗೆ ಸರ್ವ
ಮಂಗಲನಿಗೆ ತಾ ನೆಲೆಯಾಗಿರುತಿಹ||         ೪೩

ರತ್ನಸಂಚಯವೆಂಬ ಪುರಕಧಿನಾಥನು
ರತ್ನಸಾನುವಿಗೆ ಸಮಾನಧೈರ್ಯವನುಳ್ಳ||    ೪೪

ಕನಕಪ್ರಭನೆಂಬರಸಗೆ ವಲಭೆ
ಕನಕಮಾಲೆಯ ರತಗೆಣೆಯೆನಿಪ್ಪಳು||         ೪೫

ಅವರ ಗರ್ಭದೊಳಚ್ಚುತೇಂದ್ರ ಬಂದುದಿಸಲು
ಅವನಿಗೆ ಪದ್ಮನಾಭನು ಎಂಬ ಪೆಸರಿಡೆ||      ೪೬

ನವಯೌವನ ಪಡೆದ ಪದ್ಮನಾಭಗೆ
ಯುವತಿಯಾದಳು ಸೋಮಪ್ರಭೆಯೆಂಬಳು|| ೪೭

ಪುತ್ರನುದಿಸಿದನು ಕನಕನಾಭನು ಎಂಬ
ಪುತ್ರಪೌತ್ರರುಗೂಡಿ ಸುಖದೊಳಗಿರುತಿರೆ||    ೪೮

ಒಂದು ದಿವಸದೊಳು ಪುರದುದ್ಯಾನಕೆ
ಕಂದರ್ಪವಿಜಯ ಶ್ರೀಧರಜಿನೇಂದ್ರನು||       ೪೯

ಬಂದುದ ಕೇಳಿ ರಾಜೇಂದ್ರ ಪುತ್ರರುಗೂಡಿ
ವಂದನೆಯನು ಮಾಡಿ ಧರ್ಮ ತತ್ತ್ವವ ಕೇಳಿ|| ೫೦

ನಿರ್ವೇಗಪರನಾಗಿ ಕನಕರಾಜೇಂದ್ರನು
ಉರ್ವಿಯ ಪತ್ರಗೆ ಕೊಟ್ಟು ಮುಕ್ತಿಗೆ ಸಂದ||    ೫೧

ಪದ್ಮನಾಭನು ಶ್ರಾವಕವ್ರತವನು ತಾಳಿ
ಇದ್ದನಾ ರಾಜ್ಯ ಸುಖದೊಳನವರತವು||         ೫೨

ಶ್ರೀಧರಜಿನರ ಸನ್ನಿಧಿಯಲ್ಲಿ ತತ್ತ್ವವ
ಮೇದಿನಿಪತಿ ಕೇಳಿ ನಿರ್ವೇಗ ಪರನಾಗಿ||       ೫೩

ತನುಜ ಸುವರ್ಣನಾಭನಿಗೆ ರಾಜ್ಯವ ಕೊಟ್ಟು
ಅನುಕರಿಸಿದ ನೃಪರೊಡಗೂಡಿ ದೀಕ್ಷೆಯ||     ೫೪

ಷೋಡಶ ಭಾವನೆಗಳನು ಭಾವಿಸಿ ಮುನಿ
ಕೂಡೆ ತೀರ್ಥಂಕರನಾಮವನು ಪಡೆದು ಮತ್ತೆ||         ೫೫

ಸಿಂಹನಿಷ್ಕ್ರೀಡಿತಘೋರತಪದಿ ಮುನಿ
ಸಿಂಹಸಮಾನದಿಂದಲಿ ತನುವನು ಬಿಟ್ಟು||     ೫೬

ಮುಕ್ತಿಗೆ ನೆರೆಮನೆಯೆನಿಸುವ ಪಂಚಾ
ಣುತ್ತರೆಯೊಳು ವೈಜಯಂತ ವಿಮಾನದಿ||     ೫೭

ಯುವರಾಜನೆಂಬಂತೆ ಶಿವರಾಜ ಪದವಿಗೆ ಅನು
ಭಿಸಿದನಹಮಿಂದ್ರ ಪದವಿಯನು||    ೫೮

ಮೂರು ಅಧಿಕ ಮೂವತ್ತು ಸಾಗರಕಾಲ
ಸಾರಸುಖದೊಳಿರಲಾರುದಿಂಗಳುಳಿಯಲು||  ೫೯

ಜಂಬೂದ್ವೀಪದ ಭರತಾರ್ಯಖಂಡದಿ
ಇಂಬಿನ ಚಂದ್ರಪುರವೆಂಬ ಪಟ್ಟಣ||  ೬೦

ಅಮರೇಂದ್ರನ ಪುರಕೆಣೆಯೆನಿರ್ಪುದು
ಅಮಲಗುಣನು ಮಹಾಸೇನನೆಂಬರಸನು||   ೬೧

ಆತಗೆ ಲಕ್ಷ್ಮಿಣೀದೇವಿಯೆಂಬರಸಿಯು
ಭೂತಳದೊಳು ಖ್ಯಾತಿವಡೆದ ದಂಪತಿಗಳು || ೬೨

ಉಪಮೆಯಿಲ್ಲದ ಸಂತೋಷದೊಳಿರುತಿರೆ
ಸಪವಿತ್ರ ಜಿನನುದಿಪನು ಅವಧಿಯೊಳು ||     ೬೩

ಇಂದ್ರಗೆ ತೋರೆ ಕುಬೇರಗೆ ಬೆಸಸಲು
ಚಂದದ ರತ್ನವೃಷ್ಟಿಯ ಕರೆಯೆನುತಲಿ ||       ೬೪

ಗರ್ಭಕೆ ಬರಲಾರುದಿಂಗಳು ಮೊದಲಾಗಿ
ನಿರ್ಭರಭಕ್ತಿಯಿಂದಲಿ ಕುಬೇರನು ||  ೬೫

ಮೂರುವರೆಯು ಕೋಟಿ ರತ್ನವೃಷ್ಟಿಗಳನು
ಮೂರು ಸಂಜೆಯೊಳು ರಾಜೇಂದ್ರನಂಗಣದೊಳು ||    ೬೬

ಈ ಪರಿಯಲಿ ರತ್ನವೃಷ್ಟಿಯಗರೆಯಲು
ಆ ಪುರಜನಕೆ ಸಕಲಸಂಪದವಾಗೆ || ೬೭

ಇಂದ್ರನ ಬೆಸನದಿ ಶ್ರೀದೇವಿ ಮೊದಲಾಗಿ
ಬಂದು ಲಕ್ಷ್ಮಿಣೀದೇವಿಗೊಂದನೆಯನು ಮಾಡಿ ||        ೬೮

ಗಂಗಾನದಿ ಮೊದಲಾಗಿ ಜಲಗಳನು
ಗಾಂಗೇಯಕುಂಭದೊಳಗೆ ತೀವಿ ತಂದಾಗ ||  ೬೯

ಅಭಿಷೇಕವ ಮಾಡಿ ಲಕ್ಷ್ಮಿಣೀದೇವಿಗೆ
ಅಭಿಮತಸಿದ್ಧಿಯು ನಮಗಾಗಲಿಯೆಂದು ||     ೭೦

ದಿವ್ಯಾಂಬರವನುಡಿಸಿ ಕೊಂಡಾಡುತ
ದಿವ್ಯಭೂಷಣಗಳನಿಟ್ಟು ದೇವಿಯರೆಲ್ಲ ||        ೭೧

ದಿವ್ಯ ಸುಗಂಧಚಂಪಕಪುಷ್ಟಮಾಲೆಯ
ದಿವ್ಯದೇಹನ ತಾಯ ಮುಡಿಗೆ ಮುಡಿಸಿದರು || ೭೨

ಕಣ್ಣಿಗಂಜನವಿಟ್ಟು ಕಮಲವಾಸಿನಿಯರು
ಚೆನ್ನೆಯ ನೊಸಲಿಗೆ ತಿಲಕವನಿಟ್ಟರು ||         ೭೩

ಛತ್ರವನೆತ್ತಿ ಡಾಳಿಸುತ ಚಾಮರಗಳ
ಮುತ್ತಿನ ಸೇಸೆಯನಿಕ್ಕಿ ನಮಿಸಿದರು ||         ೭೪

ನಿತ್ಯನರ್ತನವಾದ್ಯ ನೂತನಗಳ ಜಿನ
ಮಾತೆಯ ಮುಂದೆ ತೋರುತ ಸಂಭ್ರಮದಿಂದ ||       ೭೫

ಜಿನನುದಿಸುವ ಪರ್ಯಂತರ ಮಾತೆಯ
ಅನವರತವು ಸೇವೆಯ ಮಾಡುತಲಿರೆ ||       ೭೬

ಚೈತ್ರ ಬಹುಳ ಪಂಚಮಿಯಂತ್ಯಜಾವದಿ
ಮಾತೆಕಂಡಳು ಷೋಡಶ ಸ್ವಪ್ನಗಳನು||      ೭೭

ಮಂದಗಮನೆಯೆದ್ದು ಮಜ್ಜನವನು ಮಾಡಿ
ಚಂದದಾಭರಣವ ತೊಟ್ಟು ಸಂಭ್ರಮದಿಂದ ||  ೭೮

ಮಂಡಲೇಶ್ವರಗೆ ತಾ ಕಂಡ ಸ್ವಪ್ನವ ಪೇಳೆ
ಮಂಡೆಯ ತಡೆವುತ ಜಿನಪನಿನ್ನುದರದಿ ||     ೭೯

ಜನಿಸುವನೆಂದು ರಾಜೇಂದ್ರ ಪೇಳಲು ಕೇಳಿ
ಮನದೊಳು ಘನತರ ಹರುಷವ ತಾಳಿರೆ ||    ೮೦

ಮುನ್ನ ಪೇಳಿದ ಅಹಮಿಂದ್ರದೇವನು ಬಂದು
ಚೆನ್ನೆ ಲಕ್ಷ್ಮಿಣೀದೇವಿಯುದರದಿ ನೆಲಸಲು ||    ೮೧

ಗರ್ಭಾವತರಣಕಲ್ಯಾಣವ ಸುರಪತಿ
ನಿರ್ಭರಭಕ್ತಿಯಿಂದದಲಿಮಾಡಿ ಪೋದನು ||    ೮೨

ಪಳುಕಿನ ಕೊಡದೊಳಗಿರುವ ಸೊಡರಿನಂತೆ
ಬೆಳೆವುತ ತ್ರಿಜ್ಞಾನಿ ಮಾತೆಯುದರದಿ ||        ೮೩

ನವಮಾಸವು ತುಂಬೆ ಸುರಪತಿಯರು ಬೇಗ
ಭುವನದೊಳಗೆ ಸಡಗರಗೊಳಿಸುತಲಾಗ ||   ೮೪

ಪುಷ್ಯಬಹುಳ ಏಕಾದಶೀ ದಿನದೊಳು
ನಿಷ್ಕಲಂಕನು ಜಿನಚಂದ್ರನುದಿಸಿದನು ||       ೮೫

ಇಂದ್ರಗಾಸನಕಂಪವಾಗಲವಧಿಯಿಂದ
ಇಂದುವರ್ಣದ ಜಿನನುದಯವ ತಿಳಿದನು ||    ೮೬

ಉರಗಲೋಕದ ಶಂಖ ಸುರಲೋಕದ ಘಂಟೆ
ವರಜ್ಯೋತಿರ್ಲೋಕದೊಳಗೆ ಸಿಂಹನಾದದಿ || ೮೭

ವ್ಯಂತರಲೋಕದೊಳಗೆ ಭೇರೀಧ್ವನಿಯಿಂದ
ಕಂತು ವಿಜಯಜಿನನುದಯವ ತಿಳಿದರು ||    ೮೮

ನಾಲ್ಕು ವಿಧದ ದೇವಗಣವ ಬರಿಸಿ ಬೇಗ
ನಾಕಪತಿಯು ಶಚೀಸಹಿತಗಜವನೇರಿ ||       ೮೯

ಬಂದು ಶ್ರೀ ಚಂದ್ರಪುರದ ರಾಜೇಂದ್ರನ
ಅಂದವಾಗಿಹ ರಾಜಾಂಗಣದೊಳು ನಿಲೆ ||     ೯೦

ಇಂದ್ರನ ಸತಿ ಗೃಹವನು ಪೊಕ್ಕು ಕಂಡಳು
ಚಂದ್ರನ ಬಿಂಬದಿಂದತಿಶಯ ಶಿಶುವನು ||     ೯೧

ಬಲಗೊಂಡು ಮಾತೃಸಹಿತ ಜಿನಶಿಶುವನು
ಅಲಘು ಭಕ್ತಿಯೊಳು ವಂದಿಸಿ ಇಂದ್ರಾಣಿಯು || ೯೨

ನಿದ್ರೆಯ ಬರಿಸಿ ಮಾಯದ ಶಿಶುವನು ಇಟ್ಟು
ಶುದ್ಧಚಿತ್ತದಿ ಜಿನಬಾಲಕನನು ಎತ್ತಿ || ೯೩

ತನುವನು ಆ ಶಿಶುಪಾದಕ್ಕೆ ಫಣೆಯಿಟ್ಟು
ಅನುರಾಗದಿಂ ತಂದು ಪತಿಗೆ ಶಿಶುವ ಕೊಡೆ || ೯೪

ಇಂದ್ರ ತೆಗೆದುಕೊಂಡು ಕಂದರ್ಪವಿಜಯನ
ಚಂದವ ನೋಡಿ ಪಾದಕ್ಕೆ ಫಣೆಯನಿಟ್ಟು ||     ೯೫

ದೇವಸಭೆಯು ಜಯಜಯವೆಂದು ನಮಿಸಲು
ದೇವಲೋಕದ ವಾದ್ಯಗಳರವ ಮೊಳಗಲು ||  ೯೬

ಗಜದ ಸ್ಕಂಧಕ್ಕೆ ಶಿಶುವನು ಬಿಜಮಾಡಿ
ಭುಜದಿಂದ ತಾಳಿಕೊಂಡನು ದೇವೇಂದ್ರನು || ೯೭

ಬತ್ತೀಸ ಮುಖವನು ಧರಿಸಿ ಗಜೇಂದ್ರನು
ಮತ್ತೆ ಒಂದೊಂದು ಮುಖಕೆ ದಂತಗಳೆಂಟು || ೯೮

ಒಂದೊಂದು ದಂತಕೆ ಕಮಲಸರೋವರ
ಒಂದು ಸರಸಿಗೆ ಬತ್ತೀಸ ಸರೋಜವು ||        ೯೯

ಒಂದು ಸರೋಜಕೆ ಮೂವತ್ತೆರಡು ದಲ
ಒಂದು ದಲಕೆ ಮೂವತ್ತೆರಡು ನರ್ತಕಿಯರು || ೧೦೦

ಕಮಲದಲವ ಮುಟ್ಟದೆ ನರ್ತಿಸುತಿರೆ
ಅಮಲಗುಣಗಳ ಪಾಡುತ ಜಿನಚಂದ್ರನ ||     ೧೦೧

ಈಶಾನೇಂದ್ರನು ಆತಪತ್ರವನೆತ್ತಿ
ಸಾಸಿರನಾಮದೊಡೆಯ ಜಿನಶಿಶುವಿಗೆ ||      ೧೦೨

ಮೇಗಣೆರಡು ಇಂದ್ರರು ಚಾಮರಗಳ
ರಾಗದಿ ಡಾಳಿಸುತಿರೆ ಎಡಬಲದೊಳು ||       ೧೦೩

ಈ ಪರಿಯಲಿ ನಭದಲಿ ಸಂಭ್ರಮದಿಂದ
ಆ ಪರಮೇಶನ ಜನ್ಮಾಭಿಷೇಕಕೆ ||   ೧೦೪

ಉತ್ತರಮುಖವಾಗಿ ನಡೆದು ಮೇರುವಿಗಾಗಿ
ಉತ್ತಮಪಾಂಡುಕ ವನಕೆ ತೆರಳಿದರು ||       ೧೦೫

ಈಶಾನದಿಕ್ಕಿನ ರತ್ನಗಂಬಲವೆಂಬ
ಭಾಸುರ ಪಾಂಡುಕ ಶಿಲೆಯ ಮೇಲೊಪ್ಪುವ ||  ೧೦೬

ರತ್ನನಿರ್ಮಿತದಭಿಷೇಕದ ಪೀಠದಿ
ರತ್ನತ್ರಯವನುಳ್ಳ ಜಿನಶಿಶುವನು ಇಟ್ಟು||      ೧೦೭

ತಂದರು ಪದಿನಾಲ್ಕು ನದಿಗಳ ಜಲವನು
ಇಂದ್ರಪ್ರತೀಂದ್ರರು ಕಲಶಾರ್ಚನೆ ಮಾಡಿ ||   ೧೦೮

ನಿಂದರು ಜಿನಶಿಶುವಿನ ಎಡಬಲದೊಳು
ತಂದು ಕೊಡಲು ಕಲಶಗಳ ಕಲ್ಪೇಂದ್ರರು ||    ೧೦೯

ಮಂಗಲವಾದ್ಯ ಮೊಳಗಲು ಜಿನೇಂದ್ರಗೆ
ಮಂಗಲದಭಿಷೇಕವ ತೊಡಗಿದರಾಗ ||        ೧೧೦

ಎಂಟು ಯೋಜನದಗಲದ ಕುಂಭಗಳಿರೆ
ಒಂದೊಂದು ಯೋಜನಮುಖದ ವಿಸ್ತಾರವು || ೧೧೧

ಈ ಪರಿಯಲಿ ಸ್ವರ್ಣಘಟಗಳ ನಿರ್ಮಿಸಿ
ಆ ಪಂಚಮಾಬ್ಧಿಯ ಪರ್ಯಂತ ಸುರಸಂಘ ||  ೧೧೨

ಈ ತೆರದೊಳು ನಿಂದು ಸಕಲಸಂಭ್ರಮದಿಂದ
ಒತ್ತಿ ಕ್ಷೀರವ ಮೊಗೆಮೊಗೆದು ಸುರರು ತಂದು ||         ೧೧೩

ಇಂದ್ರ ಪ್ರತೀಂದ್ರರ ಹಸ್ತದೊಳಗೆ ಕೊಡೆ
ಸಂದಣಿಸಿದರು ಸಹಸ್ರ ತೋಳುಗಳನು ||     ೧೧೪

ಭಾಜನಂಗಳು ಕಲ್ಪತರುಗಳೊ ಎಂಬಂತೆ
ಸೋಜಿಗವಾಯಿತು ನೋಡುವ ಸುರರ್ಗೆಲ್ಲ ||  ೧೧೫

ದೇವಲೋಕದ ಸರ್ವವಾದ್ಯವು ಮೊಳಗಲು
ದೇವಸಭೆಯು ಜಯಜಯವೆಂದು ನಮಿಸಲು ||         ೧೧೬

ಕ್ಷೀರವರ್ಣದ ಶಿಶುವಿಗೆ ದೇವೇಂದ್ರನು
ಕ್ಷೀರಾಭಿಷೇಕವ ಮಾಡುತಲಿರಲಾಗ ||         ೧೧೭

ಮೇರುವಿನಿಂದ ಭೋರೆಂದು ಪಾಲಿಳಿಯಲು
ತೋರಿ ರಜತ ಗಿರಿಯೊ ಎಂಬಂದದಿ ||        ೧೧೮

ಈ ಪರಿಯಿಂದಭಿಷೇಕವಾಗಲು ಮತ್ತೆ
ಪಾಪಹರಗೆ ಗಂಧಾಭಿಷೇಕವ ಮಾಡಿ ||        ೧೧೯

ಅಷ್ಟವಿಧದ ವಸ್ತುಗಳಿಂದ ಪೂಜಿಸಿ
ಅಷ್ಟಕರ್ಮವ ಕೆಡಿಸುವ ಜಿನಶಿಶುವನು ||       ೧೨೦

ದಿವ್ಯಜಲಗಳಿಂದ ತನುವ ಪ್ರಕ್ಷಾಲಿಸಿ
ದಿವ್ಯವಸನದಿಂದೊರಸಿ ದಿವ್ಯಾಂಗವ ||        ೧೨೧

ಅನಿಮಿಷೇಂದ್ರನ ಸತೀ ಶಚೀಮಹಾದೇವಿಯು
ಅನುರಾಗದಿಂ ನೇತ್ರಗಳಿಗೆ ಕಜ್ಜಲವಿಟ್ಟು ||     ೧೨೨

ಬೊಟ್ಟುನಿಟ್ಟಳು ಜಿನಶಿಶುವಿನ ಫಣೆಯೊಳು
ಇಟ್ಟು ಮಸ್ತಕದೊಳು ರತ್ನದ ಶಿಖಿಯನು ||     ೧೨೩

ರತ್ನದ ಬಾಲದೊಡಿಗೆಯ ತೊಡಿಸಿದಳು
ರತ್ನತ್ರಯವನುಳ್ಳ ಜಿನಬಾಲಕನಿಗೆ || ೧೨೪

ಇಂದ್ರನು ಸಾಸಿರ ನೇತ್ರವ ಪಡೆದು ತಾ
ಚಂದವ ನೋಡಬೇಕೆಂದು ನೋಡಿದ ಮತ್ತೆ || ೧೨೫

ಕಂದರ್ಪವಿಜಯನೆ ಕರುಣಸಮುದ್ರನೆ
ಇಂದುವರ್ಣದ ಕಾಯವನುಳ್ಳ ಜಿನಪನೆ ||     ೧೨೬

ಭವ್ಯಾಬ್ಜಮಿತ್ರನೆ ಭವಭಯಹರಣನೆ
ಅವ್ಯಯಸುಖವನು ಪಡೆವ ಜಿನೇಂದ್ರನೆ ||     ೧೨೭

ಕರುಣಾಬ್ಧಿಚಂದ್ರನೆ ಕರ್ಮವಿದೂರನೆ
ಕರುಣಿಸು ನನಗೆ ನಿನ್ನಂಥ ಪದವಿಯನು ||     ೧೨೮

ಈ ಪರಿಯಲಿ ಪಾಡುತ ನೃತ್ಯವನಾಡಿ
ಪಾಪಹರನ ಪಾದಕೆರಗಿ ಸುರೇಂದ್ರನು ||      ೧೨೯

ಸುರವಾರಣವನೇರಿಸಿಕೊಂಡು ಶಿಶುವನು
ಸುರಗಿರಿಯನು ಬಲಗೊಂಡು ಪುರಕೆ ಬಂದು || ೧೩೦

ಜನನೀಜನಕರ್ಗೆ ಜಿನಕುವರನ ತೋರಿ
ಅನಿಮಿಷಪತಿ ಸಿಂಹಪೀಠದೊಳಗೆ ಇಟ್ಟು ||    ೧೩೧

ಪುರಜನ ಮೊದಲಾದ ಬಂಧುಜನಗಳನು
ಬರಿಸಿ ಸಂಭ್ರಮದಿಂದ ಅವರ ಮನ್ನಣೆ ಮಾಡಿ ||         ೧೩೨

ಚಂದ್ರನ ಕಾಂತಿಯಿಂದಧಿಕವಾಗಲು ದೇಹ
ಚಂದ್ರಪ್ರಭನೆಂಬ ನಾಮವನಿಟ್ಟನು || ೧೩೩

ಯತಿಗಣವಂದ್ಯನೆ ಸುರಸ್ತೋಮ ತಿಲಕನೆ
ಕ್ಷಿತಿಯೊಳು ಧರ್ಮಾಮೃತವನುಗರೆವವನೆ ||  ೧೩೫

ಮಂಗಲರೂಪನೆ ಅಮಲಶರೀರನೆ
ತುಂಗಮುಕ್ತಿಯ ಸುಖವನು ಕೊಡು ನನಗೆಂದು ||       ೧೩೬

ಆನಂದನರ್ತನವನ್ನು ಆಡಿ ಸುರಪತಿ
ಸಾನುರಾಗದಿ ಜಿನರಿಗೆ ವಂದನೆ ಮಾಡಿ ||     ೧೩೭

ಬಾಲಕ್ರೀಡೆಗೆ ತಕ್ಕ ಬಾಲಸುರರನಿಟ್ಟು
ಬಾಲಕಜಿನಪನ ತಾಯಿತಂದೆಗೆ ಕೊಟ್ಟು ||     ೧೩೮

ಚಂದ್ರನಾಥನಿಗೆ ಸಕಲದೇವೇಂದ್ರರು
ವಂದಿಸಿ ಜಯಜಯಘೋಷಣೆಯನ್ನು ಮಾಡಿ ||          ೧೩೯

ಅಮರೇಂದ್ರನು ತನ್ನ ಅಮರಗಜವನೇರಿ
ಅಮರರೊಡನೆ ಕೂಡಿ ಅಮರಲೋಕಕೆ ಪೋದ ||       ೧೪೦

ಬಾಲಕಾಲವು ಸಲೆ ಸಕಲಸಾಮ್ರಾಜ್ಯವ
ನಾಳುತ್ತ ಸುಖದೊಳಗಿರಲೊಂದು ದಿನದೊಳು ||       ೧೪೧

ರನ್ನಗನ್ನಡಿಯ ನೆಳಲ ನೋಡಿ ಜಿನಪತಿ
ತನ್ನ ಮನದೊಳು ವೈರಾಗ್ಯವ ತಾಳಿದ ||      ೧೪೨

ಲೌಕಾಂತಿಕದೇವರು ಬಂದು ಬೋಧಿಸೆ
ಲೋಕವಂದ್ಯಗೆ ವೈರಾಗ್ಯ ಹೆಚ್ಚಿಸಿ ಪೋಗೆ ||   ೧೪೩

ವರಚಂದ್ರನೆಂಬವನಿಗೆ ರಾಜ್ಯವ ಕೊಡೆ
ಸುರಪತಿ ದೇವಸಮೂಹಸಹಿತ ಬಂದು ||      ೧೪೪

ಪರಮೋತ್ಸವದಿಂದ ಪರಮಜಿನೇಂದ್ರಗೆ
ಪರಿಷ್ಕ್ರಮಣ ಕಲ್ಯಾಣಪೂಜೆಯ ಮಾಡಿ ||      ೧೪೫

ವಿಮಲೆಯೆಂದೆಂಬ ಪಲ್ಲಕ್ಕಿಯೇರಿಸಿ ಕೊಂಡು
ಅಮರರು ಸಹ ಸರ್ವತ್ರ ವನಕೆ ಪೋಗಿ ||      ೧೪೬

ಇಂದ್ರನು ರತ್ನದ ಪಡಲಿಗೆಯೊಳಗಾಂತು
ಪೊಂದಿಸಿದನು ಕ್ಷೀರಾಂಬುಧಿಯೊಳು ಬೇಗ ||  ೧೪೮

ಪೌಷೀಯ ಕೃಷ್ಣಪಕ್ಷದ ಏಕಾದಶಿಯೊಳು
ಸಾಸಿರ ಅರಸುಗಳೊಡನೆ ಸಂಯಮಿಯಾಗೆ ||          ೧೪೯

ವಾಸವಪತಿ ಮೊದಲಾಗಿ ನಮಿಸಿ ತಮ್ಮ
ವಾಸಕೆಪೋದರು ಜಯಜಯವೆನುತಲಿ ||     ೧೫೦

ಷಷ್ಟೋಪವಾಸಪಾರಣೆಗೆ ನಳೀಯೆಂಬ
ಪಟ್ಟಣಕ್ಕಾಗಿ ಭಾವರಿಯಿಡೆ ಜಿನಪತಿ ||         ೧೫೧

ಸೋಮದತ್ತನು ಎಂಬ ನೃಪನರಮನೆಯೊಳು
ಸ್ವಾಮಿಗೆ ಪಾರಣೆಯಾಗಲು ನಭದಿಂದ ||      ೧೫೨

ಪಂಚಾಶ್ಚರ್ಯವಾಯಿತು ಯೋಗ್ರೀಂದ್ರನು
ಚಂಚಲರಹಿತ ಯೋಗದಿ ನಿಲ್ಲೆ ವನದೊಳು ||  ೧೫೩

ಮೂರು ತಿಂಗಳು ಛದ್ಮಸ್ಥಕಾಲದಿ ಮೌನ
ಧರರಾಗಿರುತಿರೆ ತಪದೊಳು ಜಿನರು ||        ೧೫೪

ಧರ್ಮಧ್ಯಾನಗಳಿಂದ ಕರ್ಮವ ಸಡಿಲಿಸಿ
ನಿರ್ಮಲಶುಕ್ಲಧ್ಯಾನದಿ ಘಾತಿಗಳ ಸುಟ್ಟು ||    ೧೫೫

ಪಾವನಫಾಲ್ಗುಣಶುದ್ಧ ಸಪ್ತಮಿಯೊಳು
ಕೇವಲಜ್ಞಾನವಾಯಿತು ಜಿನಚಂದ್ರಗೆ ||        ೧೫೬

ಭೂಮಿಯಿಂದೈದು ಸಾಸಿರಬಿಲ್ಲಿ ನಂತರ
ಸ್ವಾಮಿ ಚಂದ್ರಪ್ರಭ ಗಗನದೊಳಿರಲಾಗ ||     ೧೫೭

ಇಂದ್ರನು ಬೆಸಸಿದಂದದಿ ಕುಬೇರನು
ಚಂದದ ಸಮವಸರಣವ ರಚಿಸಿದನು ||        ೧೫೮

ಸಾಸಿರದೆಂಟು ಎಸಳನುಳ್ಳ ಕಮಲವ
ಭಾಸುರಮೂರ್ತಿ ನಾಲ್ವೆರಳು ಸೋಂಕದೆ ನಿಂದು ||    ೧೫೯

ಇಂದ್ರನು ದೇವಸಮೂಹಸಹಿತ ಬಂದು
ವಂದಿಸಿ ಕೇವಲಜ್ಞಾನ ಪೂಜೆಯ ಮಾಡಿ ||     ೧೬೦

ಸಾಸಿರದೆಂಟು ನಾಮಗಳಿಂದ ಸ್ತುತಿಯಿಸಿ
ವಾಸವಪತಿ ಸಾಷ್ಟಾಂಗವೆರಗಿದದನು ||       ೧೬೧

ಅಷ್ಟಾದಶದೋಷರಹಿತ ಜಿನೇಂದ್ರನು
ಅಷ್ಟಮಹಾಪ್ರಾತಿಹಾರ್ಯ ಸಹಿತವಾಗಿ ||      ೧೬೨

ದ್ವಾದಶಗಣಪತಿವೃತನಾಗಿ ಜಿನರಾಜ
ದ್ವಾದಶಾಂಗವನುಪದೇಶವ ಮಾಡುತ ||     ೧೬೩

ಅಂಗವಂಗಾದಿದೇಶಗಳ ವಿಹಾರದಿ
ಮಂಗಲಧರ್ಮಾಮೃತವನು ಕರೆಯುತ ||     ೧೬೪

ಈ ಪರಿಯಿಂದ ಬಹುಕಾಲ ಸಂಚರಿಸಲು
ಪಾಪರಹಿತವಾಯ್ತು ಭವ್ಯಜನರಿಗೆಲ್ಲ ||         ೧೬೫

ಸಮವಸರಣವನು ತ್ಯಜಿಸಿ ಮುನಿಗಣಗೂಡಿ
ಅಮರೇಂದ್ರವಂದ್ಯನಘಾತಿ ಕೆಡಿಪೆನೆಂದು ||   ೧೬೬

ಸಮ್ಮೇದಗಿರಿಯೊಳು ಸಿದ್ಧಶಿಲೆಯ ಮೇಲೆ
ನಿರ್ಮಲಶುಕ್ಲಧ್ಯಾನವನು ಧ್ಯಾನಿಸುತಲಿ ||     ೧೬೭

ಒಂದು ತಿಂಗಳು ಪರಿಯಂತರ ಜಿನಪತಿ
ನಿಂದು ಪ್ರತಿಮಾಯೋಗದ ಕಡೆಯೊಳು ಮತ್ತೆ ||        ೧೬೮

ದಂಡ ಕವಾಟ ಪ್ರತರ ಪೂರಣೆಯಿಂದ
ಖಂಡಿಸಿ ಕ್ಷಣದೊಳಘಾತಿಕರ್ಮಗಳನ್ನು ||      ೧೬೯

ಫಾಲ್ಗುಣಶುದ್ಧ ಸಪ್ತಮಿಯಪರಾಹ್ನದಿ
ಪಾಲ್ಗಡಲನು ಮಿಂದ ಸ್ವಾಮಿ ಮುಕ್ತಿಗೆ ಸಂದ ||          ೧೭೦

ಗೀರ್ವಾಣಪತಿ ಸುರಸಮಿತಿಸಹಿತ ಬಂದು
ನಿರ್ವಾಣಕಲ್ಯಾಣವನು ಮಾಡಿ ಪೋದನು ||   ೧೭೧

ಶ್ರೀವರ್ಮ ಶ್ರೀಧರ ದೇವ ಅಜಿತಸೇನ
ದೇವ ಅಚ್ಚುತಕಲ್ಪದ ಪದ್ಮನಾಭನೆ || ೧೭೨

ಕ್ಷೇಮದಿ ವೈಜಯಂತದ ಅಹಮಿಂದ್ರನೆ
ಸ್ವಾಮಿ ಚಂದ್ರಪ್ರಭ ಕೊಡು ಮುಕ್ತಿಪದವಿಯ || ೧೭೩

ಧರೆಯೊಳಧಿಕವಾದ ಸಿಂಹಪುರದಿ ನಿಂದ
ವರಚಂದ್ರಪ್ರಭಜಿನರ ಸನ್ನಿಧಿಯೊಳು ||        ೧೭೪

ಸೇನಗಣಾಂಬರ ದಿನಕರನೆನಿಸಿದ
ಭೂನುತಲಕ್ಷ್ಮೀಸೇನಮುನಿಯ ಶಿಷ್ಯ ||        ೧೭೫

ಚಂದ್ರಸಾಗರವರ್ಣಿ ಪೇಳಿದನೀ ಪದ
ಚಂದ್ರಸೂರ್ಯರ ಕಾಲಪರ್ಯಂತಿರಲೆಂದು || ೧೭೬