೫೧. ರಕ್ಷಿಸುಜಿನನೇ
ರಾಗ: ಬೇಹಾಗ್ ತಾಳ: ಚಾಪುತಾಳ
ರಕ್ಷಿಸು ಜಿನನೇ ಶಾಂತಿನಾಥನೇ || ಪಲ್ಲವಿ
ಸ್ಮರಕರಿಸಿಂಹನೆ ಪರಮ ಪವಿತ್ರನೇ
ಸುರನರನುತನೇ ವರಗುಣಯುತನೇ || ೧
ಕರ್ಮವಿಘಾತನೆ ಧರ್ಮಸುತೇಜನೆ
ಶರ್ಮಸಾಗರನೇ ಧರ್ಮದಾಯಕನೇ || ೨
ಭಾಸುರ ಪರಿಯೊಳು ಭಾಸುರಶಾಂತನೆ
ದೊಷರಹಿತನೇ ನಾಶವರ್ಜಿತನೇ || ೩
೫೨. ಶಾಂತಿಜಿನೇಂದ್ರನಚರಣವ
ರಾಗ: ಧನ್ಯಾಸಿ ತಾಳ: ಆದಿತಾಳ
ಶಾಂತಿಜಿನೇಂದ್ರನ ಚರಣವ ನಂಬಿರಿ
ಭ್ರಾಂತಜೀವಿಗಳಿರಾ
ಸಂತೆಕೂಟವೀ ಸಂಸಾರವು ತಿಳಿ
ದಂತರ್ಬಾಹ್ಯದೊಳನುದಿನ ಪಾಡುತ || ಪಲ್ಲವಿ
ಸಂಚಿತಗಳು ಬಹು ಮಿಂಚಿದ ಕರ್ಮವು
ಚಂಚಲಪಡಬೇಡಿ
ವಂಚನೆಯಿಲ್ಲದೆ ಪಂಚನಮಸ್ಕೃತಿ
ಚಿಂತಿಸಿರಿ ನಿರಂತರದೊಳು ಶ್ರೀ || ೧
ಪರಸತಿ ಪರಧನ ಪರನಿಂದೆಗಳಾ
ವರಿಸಿದ ಮನುಜಗೆ ನರಕವು ತಿಳಿಯೈ
ದುರಿತ ಕ್ಲೇಶಪಾಶಗಳ ತೊರೆದು ಜಿನ
ಸ್ಮರಣೆ ಮಾಡಿ ಪರಗತಿಯ ಕೊಡುವ ಶ್ರೀ || ೨
ಬರಿದೆ ಬರಿದೆ ಈ ಘನಸಂಸಾರವು
ನರರಿಗೆ ಸ್ಥಿರವಿಲ್ಲ
ಧರೆಯೊಳು ಬೆಳ್ಗೊಳಗಿರಿಯೊಳು ನೆಲಸಿದ
ವರಶಾಂತೀಶನ ಪರಮಾರ್ಥದಿ ಶ್ರೀ || ೩
೫೩. ಅಂತಕನಗೆಲಿದ
ರಾಗ: ಭೈರವಿ ತಾಳ: ಆದಿತಾಳ
ಆಂತಕನ ಗೆಲಿದ ಶಾಂತಿನಾಥನೇ
ಭ್ರಾಂತನಾದೆನ್ನೆಯ ಚಿಂತೆಯ ನೀಡಾಡು || ಪಲ್ಲವಿ
ದಂತಿಪುರಿಯ ಕಾಂತವಿಶ್ವಸೇನನ
ಕಾಂತೆ ಪ್ರಿಯಕಾರಿಣೀ ಸ್ವಾಂತಜಾತಪೂತ || ೧
ಯಕ್ಷ ಕಿಂಪುರುಷ ರಕ್ಷಿತಾಂಗ ಶೋಭ
ಲಕ್ಷಣಾನ್ವಿತನೇ ಈಕ್ಷಿಸಿ ನುತಿಪರ್ || ೨
ಧರ್ಮದಿಂದ ಘನಕರ್ಮನಾಶ ಗೈದ
ನಿರ್ಮಲಾತ್ಮನೆಂದು ಪೆರ್ಮೆಯಿಂ ಧ್ಯಾನಿಪೇ || ೩
೫೪. ಶಾಂತಿನಾಥಭವವಿದೂರ
ರಾಗ: ಕಾನಡ ತಾಳ: ರೂಪಕತಾಳ
ಶಾಂತಿನಾಥ ಭವವಿದೂರ ಶಾಂತಮತಿಯ ಪಾಲಿಸೈ
ಧ್ವಾಂತತತಿಯ ಪರಿಹರಿಸಿ ಶಾಂತಮೂರ್ತಿ ಪಾಲಿಸೈ || ಪಲ್ಲವಿ
ಜವನಬಾಧೆಯನ್ನು ಬಿಡಿಸ ಭವದ ಭ್ರಮಣ ಪರಿಹರಿಸಿ
ತವಕದಿಂದ ಶಿವಸುಖವನು ಶಿವಮಯಘನ ಜವದಿ ಪಾಲಿಸು || ೧
ರಾಜರಾಜಪದವ ಪಡೆದು ಮೂಜಗದಲಿ ತೇಜನೆನಿಸಿ
ರಾಜ್ಯಸುಖವ ತ್ಯಜಿಸಿ ಪಾರಿವ್ರಾಜ್ಯಪದದಿ ನೆಲಸಿದೇ ಶಾಂತಿನಾಥ || ೨
೫೫. ಮುಮದೇನುಗತಿಯುಹಾ
ರಾಗ: ಆನಂದಭೈರವಿ ತಾಳ: ಅಟ್ಟತಾಳ
ಮುಂದೇನುಗತಿಯು ಹಾ ಜಿನನೇ ಕುಂಥುಜಿನನೇ
ಚಂದದಿ ನೀ ಬಂದು ಕಾಯೊ ಶ್ರೀ ಜಿನನೇ || ಪಲ್ಲವಿ
ಧರೆಯೊಳು ನಾನುದ್ಭವಿಸಿ ದುಃಖವೆರಸಿ
ಮಾರವಿಜಯ ನಿನ್ನ ಮರೆ ಹೊಕ್ಕೆ ದೊರೆಯೇ || ೧
ಸತಿ ಸುತಹಿತರೊಳು ಮುಳುಗಿ ಬಹುಬಳಲಿ
ಗತಿಯ ಕಾಣದೆ ಕೆಟ್ಟೆ ಕ್ಷಿತಿ ಭಾರನಾಗಿ || ೨
ರವಿಶಶಿಕೋಟಿಪ್ರಕಾಶ ದೀನಪೋಷ
ಸಾನುರಾಗದಿ ಪೊರೆಯೋ ಆನಂದಮೂರ್ತಿಯೇ || ೩
೫೬. ಜಯತಿರ್ಥಂಕರಜಯತೀರ್ಥಂಕರ
ರಾಗ: ಬೇಹಾಗ್ ತಾಳ: ಆದಿತಾಳ
ಜಯತಿರ್ಥಂಕರ ಜಯತೀರ್ಥಂಕರ
ಜಯತಿರ್ಥಂಕರಾ ನೆನೆ ಮನವೇ || ಪಲ್ಲವಿ
ಸರಸಿಜನೇತ್ರನ ಸಾರಗುಣಾಢ್ಯನ
ಪರಮಪವಿತ್ರನ ನೆನೆ ಮನವೇ
ತರಣಿಪ್ರಕಾಶನ ವರಮುನಿವಂದ್ಯನ
ಅರಹಂತನ ನೀ ನೆನೆ ಮನವೇ || ೧
ಘೋರಪಾಪಗಳನ್ನು ದೂರಗೈದಿರುವನ
ಕಾರಣ ದೇವನ ನೆನೆ ಮನವೇ
ಮಾರನ ಗೆಲಿದನ ಶೂರಜಿನೇಂದ್ರನ
ಅರಿತು ಬಿಡದೆ ನೀ ನೆನೆ ಮನವೇ || ೨
ಮುಕ್ತಿಗೊಡೆಯನ ಶಕ್ತಿಪ್ರಭಾವನ
ಭಕ್ತಿಯಿಂದಲಿ ನೀ ನೆನೆ ಮನವೇ
ಯುಕ್ತಿಯ ಬೋಧಿಪ ಮಧುಗಿರಿವಾಸನ
ಮಲ್ಲಿಜಿನೇಶನ ನೆನೆ ಮನವೇ || ೩
೫೭. ನೇಮಿಜಿನನನೋಡಿರೋ
ರಾಗ: ಬೇಹಾಗ್ ತಾಳ: ರೂಪಕತಾಳ
ನೇಮಿಜಿನನ ನೋಡಿರೋ ನಮನವನ್ನು ಮಾಡಿರೋ
ಕಾಮಿತಾರ್ಥವನ್ನು ಬೇಡುವ ಕಾಮಿನೀ ಮಣಿಯರೆಲ್ಲರು || ಪಲ್ಲವಿ
ಶುದ್ಧಮನವ ತಾಳಿರೋ ವಿಶುದ್ಧಫಲವ ಬೇಡಿರೋ
ಬದ್ಧಕರ್ಮವನ್ನು ಕೆಡಿಸಿ ಸಿದ್ಧರೂಪನಾಗಿ ಬರುವ || ೧
ಸೋಮರವಿಪ್ರಕಾಶನ ಪ್ರೇಮದಿಂದ ಸ್ತುತಿಯಿಸೋ
ಕಾಮಲೀಲೆಯನ್ನು ಧರಿಸಿ ಕಾಮರೂಪವಾಗಿ ಬರುವ || ೨
ರಕ್ಷಕ ನೀನೆಂದು ಇವನ ಪಕ್ಷವನ್ನು ಸೇರಿರೋ
ಮೋಕ್ಷವನ್ನು ಹೊಂದಲೆಂಬಪೇಕ್ಷಯುಳ್ಳ ಮನುಜರೆಲ್ಲರು || ೩
೫೮. ನೇಮಿನಾಥನೆಸೋಮಶಾಂತನೆ
ರಾಗ: ಹಿಂದೂಸ್ಥಾನಿ ತೋಡಿ ತಾಳ: ಆದಿತಾಳ
ನೇಮಿನಾಥನೆ ಸೋಮಶಾಂತನೆ ಪ್ರೇಮದಿಂದಲಿ ಭಜಿಸುವೇ
ಕಾಮಿತಾರ್ಥವ ನೇಮದಿಂದಲಿ ಶ್ರೀಮಹೀಶನೆ ಪಾಲಿಸೈ || ಪಲ್ಲವಿ
ಜ್ಞಾನಹೀನದಿ ನಾನು ತಿರುಗಿದೆ ಮಾನಮದಗರ್ವಗಳಿಂ
ಸಾನುರಾಗದಿ ಪಾಲಿಸೆನ್ನನು ದೀನಜನಪರಿಪಾಲನೆ || ೧
ಮಂಗಳಾಂಗನೆ ಭಂಗರಹಿತನೆ ನೊಂದೆನೈ ಸಂಸಾರದಿ
ಅಂಗಜಾರಿಯೆ ಹಿಂಗಿಸೈ ಭವಸಾಗರದ ದುಃಖಂಗಳ || ೨
ರಾಜಪೂಜಿತತೇಜಗುಣನಿಧಿ ಮೂಜಗಾಧಿಪರೊಂದ್ಯನೇ
ಈ ಜಗದ್ವಿಭ್ರಾಜಹರಪುರಿ ಶ್ರೀಜಿನೇಶನೆ ರಕ್ಷಿಸೈ || ೩
೫೯. ಶ್ರೀನೇಮಿಜಿನರಾಜ
ರಾಗ: ಶಂಕರಾಭರಣ ತಾಳ: ಏಕತಾಳ
ಶ್ರೀ ನೇಮಿಜಿನರಾಜ ರಾಜಪೂಜ
ರಾಜಾಧಿರಾಜ ರವಿಕೋಟಿತೇಜ || ಪಲ್ಲವಿ
ಕರುಣಾಸಾಗರ ಭರಿತಸುಪೂರ
ಚರಣಾನತಭವ್ಯೋಪಕಾರ || ೧
ಪರಮ ದಯಾಕರ ಭರಿತಸುಗಾತ್ರ
ಸರಸೀರುಹನೇತ್ರ ಭವ್ಯಸುಮಿತ್ರ || ೨
ಭಾವಶುದ್ಧಿಯೋಳ್ನಿಮ್ಮಡಿಯ ಕೊಂಡಾಡಿ
ತೀವಿದ ಪ್ರೇಮದಿ ಪಾಡುವೆನಿಂದು || ೩
ಮುನಿಕುಲವರ್ಯ ಯತಿಪಂಡಿತಾರ್ಯ
ನತವರ್ಯಾನಂತವೀರ್ಯ || ೪
ಭುವನಾಧೀಶ ಬೆಳ್ಗುಳವಾಸ
ಭವನೇಶಚವ್ವೀಶಜಿನೇಶ || ೫
೬೦. ಶ್ರೀನೇಮಿನಾಥಾದಯಮಾಡೈ
ರಾಗ: ಬಿಲಹರಿ ತಾಳ: ಆದಿತಾಳ
ಶ್ರೀನೇಮಿನಾಥಾ ದಯಮಾಡೈ ದಿವ್ಯ
ಜ್ಞಾನಮೂರುತಿ ನಿನ್ನ ಧ್ಯಾನವ ನೀಡೈ
ದೀನಸಂರಕ್ಷಕ ನೋಡೈ ಪದ
ಕಾನತನನಾದೆನ್ನ ನೀನೇ ಕಾಪಾಡೈ || ಪಲ್ಲವಿ
ಧರೆಯೊಳುತ್ತಮವೆಂದೆನಿಸಿದ ಶೌರಿಪುರ
ವರವನು ತಾನು ಕರುಣದಿಂ ಪೊರೆದಾ
ಹರಿವಂಶೋದ್ಭವನಾಗಿ ಮೆರೆದ
ಭವಹರಣಸುಮಂಗಳ ಕರಕೀರ್ತಿ ತಳೆದಾ || ೧
ಶರಧಿವಿಜಯಮಹಾರಾಜನೆಂ
ಬರಸನ ಸತೀ ಶಿವದೇವಿಯ ತನುಜಾ
ಸರಿ ನೀಲವರ್ಣದೊಳೆಸೆದೆ ತಪ
ವರ ಊರ್ಜಯಂತೆಂಬ ಗಿರಿಯೊಳು ಗೈದೇ || ೨
ಸೃಷ್ಟಿಗಧಿಕ ಬೆಳುಗುಳದೊಳ್ ಮನ
ಮುಟ್ಟಿ ಭಜಿಸುವರಿಂಗಿಷ್ಟಾರ್ಥಶರಧಿ
ಕೊಟ್ಟು ನೀ ನೆಲಸಿದೆ ಮುದದಿ ದಯ
ವಿಟ್ಟು ಸಲಹೊ ನಿನ್ನ ಸ್ಮರಿಸುವೆ ಮನದಿ || ೩
Leave A Comment