. ಶ್ರೀಮದಮರಪತಿನರ

ಶ್ರೀಮದಮರಪತಿ ನರಸುರ ವಂದ್ಯೆಗೆ
ಸೋಮಾರ್ಕಕೋಟಿ ತೇಜನಿಗೆ
ಕಾಮಿತಾರ್ಥವನಿತ ವೃಷಭ ಜಿನೇಶಗೆ
ಪ್ರೇಮದಿಂದಲಿ ವಂದಿಸುವೆ ||        ೧

ಭಜಿಸುವ ಭಕ್ತಿಯಿಂದಲಿ ನಾನೊಮ್ಮೆ
ಅಜಿತಜಿನರ ಪಾದಯುಗವಾ
ರುಜನ ಕೆಡಿಸಿದಾರು ಹುಲ್ಲದೆವಾಗಿ
ನಿಜಬಕ್ತಿಯಿಂದ ವಂದಿಸುವೆ ||        ೨

ತುಂಬಿದ ಸುಖಗಳ ಶಂಭವ ಜಿನರಿಗೆ
ನಂಬಿದವರಿಗೆ ಇವಲೇಸ
ಸಂಭ್ರಮದಿಂದಲಿ ಸಲಹುವ ದೇವಾಗಿ ಗು
ಣಾಂಬುಧಿಯನೀವ ಸರ್ವೇಶಾ ||    ೩

ಉಭಯ ಲಕ್ಷ್ಮಿಯ ನೆರೆ ತಾಳಿದವಾಗಿ
ಶುಭಲಕ್ಷಣಾಂಗ ಮೂರುತಿಗೆ
ಅಭಿನಂದನ ಜಿನರೆಡೆಗಳ ನೆನೆವೆನು
ಶುಭಮತಿ ಎನಗಾಗಲೆಂದು ||        ೪

ಮಮತೆಯಿಂದಲಿ ಸರ್ವಜನರನು ಸಲಹುವ
ಸುಮತಿ ಜಿನರ ಪಾದ ಮುಗಿವಾ
ಕ್ರಮದಿಂದ ನೆನೆವೆನು ಅನುದಿನ ನಿಮ್ಮನು
ಕ್ರಮದ ದೋಷವು ಕೆಡಲೆಂದು ||     ೫

ಪದ್ಮಾವಶಾಂತದ ಪಾವನದ ತಳೆದ
ಪ್ರದ್ಮಪ್ರಭಾರೆ ನಿಮ್ಮಡಿಯ
ಬುದ್ದಿಯಿಂದಲಿ ನೆನೆವೆನು ಬದ್ಧಸುಖಗಳ
ಹೊದಿಸಲೆಂದು ಬೇಗದೊಳು ||      ೬

ಸುಖವಿತ್ತು ಸಲಹುವ ಸುಪಾರ್ಶ್ವ ಜಿನೇಶಗೆ
ಸುಖದುಃಖಗಳನರಿದವಗೆ
ಸುಖದೋರಿಸ್ಯೆಂದೊರಗುವೆನು ನಿಮ್ಮಡಿಗಳ
ಸುಖವೆನಗಾಗದು ಸುರಪದವಿ ||     ೭

ಚಂದ ಚಂದನದಿಂದ ಬೆಸಗೆಯ್ವೆ ನಿಮ್ಮಡಿಗಳ
ಬಂದ ಭವರ ಕೆಡಲೆಂದು
ಹೊಂದೆನೀ ಸಂಗದೆ ನೆನೆವೆನಾ ಮನದೊಳು
ಚಂದ್ರಪ್ರಭರೆ ನಿಮ್ಮಡಿಯಾ ||        ೮

ಅಲ್ಪಸುಖವ ಬಿಟ್ಟು ಅಮೃತಾಂಗನೆಯೊಳು
ನಿಲ್ವಗೆ ನಿಂದ ದೇವನಿಗೆ
ಪುಷ್ಪದಂತ ಜಿನರಡೆಗಳ ನೆನೆವೆನು
ತಪ್ಪದೆ ನನಗಣುವ್ರತವಾ || ೯

ಜಾತಿ ಚೋರ ಮರಣವ ತಾಳದೆ ನಿಜ
ಜಾತರೂಪವ ತಾಳಿದವಗೆ
ಪಾತಕವೆಲ್ಲವ ಪರಿದೀಡಾಡಿದ
ಶೀತಳ ಜಿನರೆ ನಿಮ್ಮಡಿಯ ||         ೧೦

ಕಾಮಿತ ಫಲವನು ಕೊಡುವ ತಾನಿಹನು
ಸ್ವಾಮಿ ಶ್ರೇಯಾಂಶ ಜಿನಪನು
ನಿಮ್ಮಡಿ ನಮಿಸುವೆ ಮುಕ್ತಿಕಾಮಿನಿ ಸುಖ
ಪ್ರೇಮದಿಗೀಯಲೆಂದು ||   ೧೧

ಲೇಸದೋರಿಸಿ ಆ ಭೀತಿಯ ಬಿಟ್ಟು
ಲೇಸಾ ಭಕ್ತಿಯೊಳು ನಾ ನಿಮ್ಮ
ವಾಸುಪೂಜ್ಯನೆ ದೇವನೆಂದು ನಂಬಿದೆನು
ದಾಸೀನ ಬೇಡೆನ್ನೊಡೆಯ ||         ೧೨

ವಿಮಲಜಿನರ ಪಾದಕಮಲವ ನೆನೆವೆನು
ಅಮರಗತಿಯ ಕೊಡಲೆಂದು
ಕ್ರಮದಿಂದ ಕೈವಲ್ಯ ಸಾಧಿಸಬೇಕೆಂದು ಕರ
ಕಮಲವ ಮುಗಿದೆರಗುವೆನು||        ೧೩

ಭ್ರಾಂತನುಳಿದು ಭವಭವದೊಳು ಸುಖವುಂಡು
ಚಿಂತಿಯಲಾದ ರಾಜ್ಯನಾಣೆ
ಮುಂತಾಗಿ ಮುಕ್ತಿಯ ಪಡೆದೆ ಬೇಗದಿ ಆ
ನಂತ ಜಿನರೆ ಸಲಹೆನ್ನ ||   ೧೪

ಕರ್ಮವನೆರೆ ಸುಟ್ಟು ನಿರ್ಮೂಲ ಮಾಡಿದೆ
ದುರ್ಮತಿಗಳ ಕೆಡಲೆಂದು
ಧರ್ಮವ ಧರೆಯೊಳುದ್ಧರಿಸಿ ಭಾವರ್ಗ್ಗೆ
ಧರ್ಮ ಜಿನರೆ ಸಲಹುಯೆನ್ನ ||        ೧೫

ಅಂತಿಂತು ಎನ್ನದೆ ಅಗಣಿತ ಸುಖಗಳ
ಮುಂತಾಗಿ ಮುಕ್ತಿಗಳ ಪಡೆದೆ
ಶಾಂತಿ ಜಿನರೆ ನಿಮ್ಮಡಿಗಳ ನೆನೆವೆನು
ಸಂತೋಷಯೆನಗಾಗಲೆಂದು ||      ೧೬

ಕಂಥುರಾಜನ ನೆರೆಗೆಲ್ದ ತಾಳದೆ
ಭ್ರಾಂತನುಳಿದು ಭವನಾಶ
ಕುಂತು ಜಿನರೆ ನಿಮ್ಮಡಿಗಳ ನೆನೆವೆನು
ಅಂತಾದಯನಾಗಲೆಂದು ||          ೧೭

ಮರೆಯದೆ ನೆನೆವೆನು ಅರಜಿನ ಪತಿಯನು
ಚರಣ ಎನಗೆ ಶರಣೆಂದು
ಧರೆಯ ಜನರನೆಲ್ಲ ಸಲಹುವ ದೇವನೆ
ಕರುಣವಿಲ್ಲವೆ ಎನ್ನ ಮೇಲೆ ||         ೧೮

ಎಲ್ಲ ದೇವರ ದೇವನಲ್ಲ ನಿಮ್ಮೊಳು
ಚಲ್ಲಾಟವಲ್ಲ ನಿಮ್ಮೊಡನೆ
ಬಲ್ಲವ ನಾನು ಲೋಭವಕೊಳಗಾದೆನು
ಮಲ್ಲಿಜಿನರೆ ಸಲವೆನ್ನ ||     ೧೯

ಕನಸು ಮನಸಿನೊಳು ಕಾಡುವ ಕರ್ಮವ
ಇನ್ನು ಸುಳಿಯದೆ ಕೆಡಿಸುವ
ಅನುಪಮ ಮತಿಗಣ ವೀತರಾಗಯೆಂಬರು
ಮುನಿ ಸುವ್ರತರೆ ಸಲವೆನ್ನ ||         ೨೦

ತಮತಮಗೆಲ್ಲರೂ ತಮ್ಮೊಳು ನೋಡದೆ
ಕ್ರಮದಿಂದ ತೋರಿದೆ ನೀ
ಪ್ರೇಮದಿ ನೆನೆವೆನು ಕ್ಷೇಮದಿ ಸಲಹೆಂದು
ಕೋಮಲಾಂಗನೆ ನೇಮಿಸು ನಮಿಜಿನೇಶಾ || ೨೧

ಘೋರುಪಸರ್ಗವನರಿದೆ ತಾಳದೆ
ಧರೆನಹುದು ಧರೆಯೊಳಗೆ
ಸೇರಿದವರೆಗೆವ ಪಾರ್ಶ್ವಜಿನೇಶ
ತೋರಿಸು ಮೋಕ್ಷ ಸಂಪದವ ||      ೨೨

ಸದ್ಯದಿ ನೆನೆವೆನು ವರ್ಧಮಾನ ಸ್ವಾಮಿಯ
ಸಿದ್ಧಪದವಿ ಕೊಡಲೆಂದು
ಸಿದ್ಧರಸವ ಸೋಂಕಿದ ಲೋಹದಂತಾತ್ಮ
ಸಿದ್ಧಿಯ ಪಡೆವುದೊಂದರುವೆ ||      ೨೩

ತಪ್ಪದೆ ನೆನೆವೆನು ಇಪ್ಪತ್ತು ನಾಲ್ವರ
ಅಲ್ಪಮತಿಯೊಳು ನಾ ನಿಮ್ಮ
ತಪ್ಪಿದೆನಾದರೆ ತರಳೆ ನಾ ಮಾತಿಗೆ
ಒಪ್ಪುಗೊಳಿರೈ ಸ್ವಾಮಿಗಳರೈ ||      ೨೪

 

.ಉದಯಕಾಲದೊಳೆದ್ದು
ಉದಯ ರಾಗ

ಉದಯ ಕಾಲದೊಳೆದ್ದು ಮುದದಿ ಸ್ನಾನವ ಮಾಡಿ
ಮೃದುವಚನದಿಂದ ಶ್ರೀ ಜಿನರ ಪಾದವ ನೆನೆಯೈ
ಸದಮಲ ಯೋಗ್ಯ ಸಂಪದವಿತ್ತು ಕಡೆಯಲ್ಲಿ
ಮುಕ್ತಿಮಾರ್ಗವ ತೋರುವಾ ||       ಪಲ್ಲವಿ

ಹೆಸರಾದ ಪೆನಗೊಂಡೆ ಪಚ್ಚಪಾರೀಶ್ವೇಶ ಹರದ
ಬಸದಿಯ ಪಾರೀಶ್ವಮತಿಯ ಕೂಡೆ
ಹಸನಾದ ಗುಡಿಬಂಡೆ ಚಂದ್ರನಾಥಸ್ವಾಮಿ
ಕುಸುಮಶರಣ ಗೆಲಿದ ಪಾರೀಶ್ವಜಿನರ ನೆನೆಯೈ ||      ೧

ಪೊಡವಿಗಗ್ಗಳವದ x x x x x x x x
ಮಿಡಿಗರಸಿ ಚಂದ್ರಜಿನ ಕಂಡ ಅನಂತ ಜಿನಪ
ಪೊಡಮಡುವೆ ಎಡಬಿಡದೆ ನಿಲ್ಲು ಪಾರೀಶ್ವ ಎ
ನ್ನೊಡೆಯ ಸಲಹು ಬೇಗ ರತ್ನಗಿರಿ ಜಿನರ ನೆನೆಯೈ ||   ೨

ನಾಮಸಾಸಿರದೊಡೆಯ ನಾಮಗೊಂಡಲ ಅನಂತಜಿನಪ
ಪ್ರೇಮದಿಂ ಸಲಹೆನ್ನ ಗಗನಗಿರಿ ಮಲ್ಲಿನಾಥ
ಕಾಮಿತಾರ್ಥವ ಕೊಡುವ ರಾಂಪುರದ ಆದೀಶ್ವರ
ಸ್ವಾಮಿ ರಕ್ಷಿಸು ಬೇಗ ಹಿರಿಯೂರ ಜಿನರ ನೆನೆಯೈ ||    ೩

ನಿಚ್ಚ ವೈಭವದೊಳೆಸೆವ ವೇಣುಪುರಿ ಚಂದ್ರಜಿನ
ಆಶ್ಚರ್ಯವಾದಂಥ ಅಗಳಿವಾಸೂಕುಚ್ಚಂಗಿ ಪಾರೀಶ್ವ
ಹೆಚ್ಚಿನ ಜಿನರಾಜ ಪಂಚಬಾನನ ಗೆಲಿದ ಅಂದ
x x x x x x x x
x ಪುರಿ ಜಿನರ ನೆನೆಯೈ ||  ೪

ಇಳಿಯೊಳಧಿಕವಾದ ಬೇಳೂರು ವಿಮಲಜಿನ ಕೂ
ಡಲೂರು ಅನಂತಜಿನಪ ಪೊಡಮಡುವೆ ಎಡ
ಬಿಡದೆ ನಿಡಗಲ್ಲು ಪಾರೀಶ್ವ ಎನ್ನೊಡೆಯ ಸಲಹು ಬೇಗ
x x x x x x x x
x ರತ್ನಗಿರಿ ಜಿನರ ನೆನೆಯೈ ||        ೫

ಜಗದೊಳತಿಶಯವಾದ ಶಿರ್ಯದ ಬಸದಿಯೊಳು
ನಗೆಮುಖದ ಶಾಂತಿಜಿನರಾಜನನು ಬಗೆ
ಬಗೆಯ ಮಂಟಪದ ವಾದಿಗಳು ನೀ ತಂದು
ಸುಗುಣ ಮನದಲಿ ತನದರ್ಚಿಸೋ ||          ೬

ಇಷ್ಟದೈವರನೆಲ್ಲ ಮುಟ್ಟಿ ಪೂಜಿಸು ನೀನು
ಬ್ರಷ್ಟ ಸಂಸಾರವನು ಸುಟ್ಟುಬಿಟ್ಟು ಅಷ್ಟದಶ
ದೋಷ ಚಿಂತನೆನಿಸುತ್ತಿಹ ನಿಟ್ಟೂರ ಶಾಂತಿ ಜಿ
ನ ಶ್ರೀ ಚರಣವನು ಗಟ್ಟ್ಯಾಗಿ ನೀ ನಂಬಿ ಮುಕ್ತನಾಗು ||  ೭

ಅತ್ಯಧಿಕ ಭಕ್ತಿಯಲಿ ನಿತ್ಯವಂದನೆ ಮಾಡು
ನಿತ್ಯನಿಧಿ ಲಕ್ಷ್ಮೀಶಯನೈಶ್ವರ್ಯಂಗೆ
ಅರ್ಥಿಯಿಂದಲಿ ನೀನು ಓದಿಸುವ ಮನದಣಿಯ
ಮುಕ್ತಿಮಾರ್ಗವ ತೋರಿಸೈ ||        ೮

ಚಪ್ಪನ್ನದೇಶದೊಳಗಿಪ್ಪ ಜಿನಗೇಹದೊಳು
ಇಪ್ಪತ್ತನಾಲ್ಕು ಜಿನಬಿಂಬಗಳಿಗೆ
ಪುಷ್ಪಗಂಧಕ್ಷತೆಯ ಫಲಗಳಿಂದರ್ಚಿಸು ಚಂ
ಪಪುರಿ ಚನ್ನಗಿರಿ ಜಿನೇಶ ಮುಕ್ತಿಮಾರ್ಗವ ತೋರಿಸೈ || ೯

 

.ಪರಮಪರಂಜ್ಯೋತಿಕೋಟಿ

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ
ಕಿರಣ ಸುಜ್ಞಾನ ಪ್ರಕಾಶ
ಸುರರ ಮಕುಟಮಣಿರಂಜಿತ ಚರಣಾಬ್ಜ
ಶರಣಾಗು ಪ್ರಥಮ ಜಿನೇಶ ||        ೧

ನಿಲಲಿ ಶಕಮಾತು ಹದಿನಾರು ಸ್ವಪ್ನದ
ಫಲವ ನಿರೂಪಿಸೆಂದೊಡನೆ
ತಲೆಮಣಿಧಾರೆಯ ನುಡಿಯುತಿರ್ದನು ಸ್ವಾಮಿ
ತಿಳಿವುದನೇನು ಬಣ್ಣಿಪೆನೋ ||

ಒಂದೊಂದು ಸಿಂಹದೊಳ್ಕೊಡೆ ಹಲವು ಸಿಂಹ
ಸಂದಣಿಸಿಯೇ ಪೋಗುತಿರ್ಪ
ಚಂದದಿಂದಿಪ್ಪತ್ತಮೂರು ಸಿಂಹವ ಕಂಡೆ
ಮುಂದಾ ಫಲಗಳಿಂದ ||    ೩

ನಾವು ಮುಂತಾಗಿ ತೀರ್ಥಂಕರಿಪ್ಪತ್ತ
ಮೂವರ ಕಾಲಕ್ಕೆ ಕುಮುತಾ
ಜೀವದೊಳ್ಪುಟ್ಟಿಯು ಹೆಚ್ಚಾದ ಜಿನಧರ್ಮ
ದಾವಾಲ್ಯಬಹುದೆಂದನಭವಾ ||      ೪

ಕಂಡೆನೊಂದು ಸಿಂಹದೊಳ್ಬಹು ಮೃಗವೈದಿವೆ
ಸಿಡಿದು ಪೋಪುದ ಕಂಡೆನೆನಲು
ಕಡೆಯ ತೀರ್ಥೇಶನ ಕಾಲಕ್ಕೆ ಕುಮುತರ
ಪಡೆಯೊಳುದೆಂದೆನಾ ಸ್ವಾಮಿ ||     ೫

ಆನೆಯನೇರಿ ಕೋಡಗವಿಪ್ಪುದೊಂದು ಕ
ಟ್ಟಾನುಗತಿಯ ಕಂಡೆನೆನಲು
ಮಾನಿತ ಕ್ಷತ್ರಿಯ ಕುಲಗೆಟ್ಟು ಕಡೆಯೊಳು
ಹೀನರೇ ನೃಪರಹರೆಂದಾ ||          ೬

ಜಲ ನಟ್ಟನಡುವೆ ಭಾರತ ಕಡೆಯೊಳು ನಿಂದ
ಬಲು ಕಟಕವ ಕಂಡೆನೆನಲು
ಕಲಿಕಾಲ ಜಿನಧರ್ಮ ನಡುನಾಡೊಳ್ನಿರಂತರದೊಳು
ನಿಲ್ಲುದೆಂದನಾ ಸ್ವಾಮಿ ||   ೭

ಹೋತಗಳೆಳೆ ಮೇವ ಬಿಟ್ಟೋತೆರನ ಬಾ
ಯಾಂತು ಮೇವುದೊಡನೆನಲು
ಜಾತಿವರ್ತನೆಯ ಸ್ತ್ರೀಪುರುಷರಲ್ಲದೇ ವಿಪ
ರೀತ ಮತಿಗೆ ಸಲ್ವುದೆಂದ ||          ೮

ಎಲೆಯ ದುರಿತ ತರುಗಳ ಕಂಡೆನೆಂದನು
ಕಲಿಕಾಲದೊಳು ಸಿರಿಬರಲು
ಫಲಿಸುವರಲ್ಲ ನಾನ್ಗೆಟ್ಟು ಮೈಸಿರಿಗೆಟ್ಟು
ಸುಳಿವರು ಮಾನವರೆಂದ ||          ೯

ವಸುಧೆಯೊಳೆತ್ತ ನೋಡಿದತ್ತೆರಗಿಪ್ಪ
ರಸವೀ ಪರಿದಿರ್ದುನೆನಲು
ರಸಹೀನ ವಸ್ತುವೇ ಉಪಭೋಗ ಪರಿಭೋಗ
ಪರಗಣ್ಣಿಂಗೆ ಸಲ್ವುದೆಂದ || ೧೦

ಮರುಳು ಶೃಂಗರಿಸಿಬಪ್ಪುದು ಕಂಡೆನೆನನೆಂ
ದರ ನಾಮ ಬಿಟ್ಟು ನರ
ಹುರುಳುಗೆಟ್ಟತ್ತರ ತೆತ್ತರ ನಾಮವ
ಧರಿಸುವರೆಂದನಾ ಸ್ವಾಮಿ ||         ೧೧

ಪೊಂಬರಿವಾಣದೊಳಗೆ ಶ್ವಾನ ತಾಯ್ವಾಲ
ನುಂಬುದ ಕಂಡೆನೆನಲು
ಡಂಭತಾ ಬಿನುಗಾರು ಕಡೆಯ ಕಾಲಕೆ ಪೂಜೆ
ಗೊಂಬರೊಳಿತನುಂಬರೆಂದ ||       ೧೨

ಕಾಗೆ ಗೂಗೆಗಳೆದ್ದು ರಾಜ ಹಂಸೆಯ ಪಿರಿ
ದಾಗಿ ಬಾಧಿಸುವ ಕಂಡೆನೆನಲು
ರಾಗ ರೋಷಗಳನು ಹಂಸಯೋಗಿಯ ಹಂಸ
ಯೋಗಿಯ ನಿಂದಿಪುದೆಂದ ||         ೧೩

ವಿಧಿವಶದಿಂದಾನೆ ಹೊರುವರಂಜಿಕೆಯ ಸ
ನ್ನಿಧಿಯಶ್ವ ಹೊತ್ತು ಹೊಯೆನಲು
ಅಧಿಕಾರ ಧರಿಸುವ ಜೈನಧರ್ಮವ ಕಡೆ
ಗಧಮರ ಧರಿಸುವರೆಂದ ||           ೧೪

ಚಿಕ್ಕಬಸವನೊಂದು ಹಿಂಡಾನ ಕಲಿಘಟ
ಕಿಕ್ಕುತೈದಾ ಕಂಡೆನೆನಲು
ಬೆಕ್ಕೊಂದು ದೀಕ್ಷೆ ಪೊಡೆಯರ ಬಹಳ ಪ್ರಾಯ
ಮಿಕ್ಕು ದೀಕ್ಷೆತರಲ್ಪದೆಂದ ||          ೧೫

ಎರಡು ಗೂಳಿಗಳೊಂದು ಕೂಡಿ ಭೂತಳದಲ್ಲಿ
ಚರಿಸುತಿರ್ದುದ ಕಂಡೆನೆನಲು
ಗಿರಿವನ ಗುಹೆಗಳೊಬ್ಬರೆ ಗೋಷ್ಠಿ
ವೆರಸಿ ತಾಪ ಪರಿಹಾರೆಂದ ||        ೧೬

ಪಸರಿಹ ಪ್ರಭೆಯೊಳ ರತ್ನರಾಸಿಗೆದೊಳು
ಕೂಸಾಗಿ ಕೊಂಡುದ ಕಂಡೆನೆನಲು
ರಸ ಬುದ್ದಿಗಳು ಮೊದಲಾದ ಬುದ್ದಿಗಳು ತಾ
ಪಸರಿಗೊಂದುದಯಿಸದೆಂದ ||       ೧೭

ಧವಲ ಪ್ರಕಾಶದ ಚಂದ್ರಂಗೆ ಪರಿವೇಶ
ದವಿದುದ ಕಂಡೆ ನಾನೆನಲು
ಅವಧಿಜ್ಞಾನ ಚಿತ್ರಜ್ಞಾನ ಒಂದು ಸಂ
ಭವಿಸದು ಮುನಿಗಳಿಗೆಂದ ||         ೧೮

ದೇವರದೇವ ಚಿತ್ತೈಸು ಸೂರ್ಯಗೆ ಮುಗಿ
ಲಾವರಿಸಿದ ಕಂಡೆನೆನಲು
ಕೇವಲ ಬೋಧವಾಗಲು ಕಲಿಯುಗದೊಳು
ಭಾವಿಸೆಂದನು ಬಲಾಂತಕನು||      ೧೯
ಆ ಉಗ್ರ ಕಲಿಯುಗವೆಂಬುದಿಪ್ಪೊಂದು
ಸಾವಿರ ವರ್ಷ ಮುಂದೆತ್ತ
ಆವ ಧರ್ಮದಸೋಂಕ ಸುಳಿಯದಿಪ್ಪತ್ತೊಂದು
ಸಾವಿರ ವರುಷ ಸಾಗುವುದು ||       ೨೦

ಪ್ರಳಯವಹುದು ಮತ್ತೆ ಪ್ರಳಯವಾಗದು ಮುನ್ನ
ಮೇಳಹುದು ಧರ್ಮಕರ್ಮಗಳು
ಬೆಳೆದು ಮರ್ತ್ಯಂತದೊಳು ಕೆಡುತ ಕೊಂಡಾಡುತ
ಸುಳಿವುದೀ ಪರಿಯಂತನುಭವ ||     ೨೧

 

. ಏಳುಮನೋಹರಜಾವ
ಉದಯ ರಾಗ

ಏಳು ಮನೋಹರ ಜಾವದಲ್ಲಿ ಕೇವಲ ಜ್ಞಾನ
ವೇಳೆಯಾಯಿತು ವ್ಯರ್ಥದಲಿ ದಿನ
ಗಳೆಯಬೇಡ ಶಜಕುಜಲ ಧ್ಯಾನ ಕಪಟ
ಗಳೆಲ್ಲವ ಬಿಟ್ಟು ಜಿನರ ಧ್ಯಾನಿಸು ಸ್ತುತಿಸು ಭವ್ಯಾ ||     ಪಲ್ಲವಿ

ಕೈಲಾಸಗಿರಿಯಲ್ಲಿ ಆದಿ ಜಿನದೇವಂಗೆ ಚಂಪಾಪುರದ
ವಾಸುಪೂಜ್ಯನಾಥನು ಮತ್ತು ಪಾವಾಪುರದ ವರ್ಧಮಾನ
ಉಜಂತಗಿರಿ ನೇಮಿಜಿನರ ವಂದಿಸುತ ಸಮ್ಮೇದ ಶಿಖರದಲಿ
ಇಪ್ಪತ್ತು ಚೂಳಿಕೆಯ ಇಪ್ಪತ್ತು ತೀರ್ಥಂಕರು ಮೊದಲಾಗಿ
ಅಗಣಿತರು ಲೆಕ್ಕವಿಲ್ಲದ ಅಸಂಖ್ಯಾತ ಮುಕ್ತಿಗೆ ಹೊಂದವರ
ಮಹಿಮೆಯನು ಧ್ಯಾನಿಸು ಭವ್ಯಾ ||            ೧

ರಾಮಪುತ್ರಾದಿ ಮೊದಲಾದ ಪಾವಗಿರಿ ಸ್ಥಾನದಲಿ
ಒಂದು ಕೋಟಿ ಜನರು ಉಜಂತಗಿರಿಯಲ್ಲಿ ಶಂಭುಕುಮಾರಾದಿ
ಕೋಟಿಯು ಎಪ್ಪತ್ತೇರಡು ವರದತ್ತ ಸಾಗರದತ್ತಾಗಿ ಮುನಿಗಳು
ತಾರಾಗಿರಿ ಶಿಖರದಲ್ಲಿ ಮೂರುವರೆ ಕೋಟಿ ಬಲಭದ್ರ ಮೊದಲಾಗಿ
ಯಾದವಂಶವು ಎಂಟುಕೋಟಿ ಗಜಪಂಥದಲ್ಲಿ ಭವ್ಯಾ ||           ೨

ಪಾಂಡವರು ಮೂವರು ಮೊದಲಾಗಿ ಶತ್ರುಂಜಯ ಗಿರಿಯಲ್ಲಿ
ಎಂಟುಕೋಟಿ ಸಿದ್ಧರು ರಾಮ ಸುಗ್ರೀವ ಹನುಮಂತ
ಮಹಾನಿಳಾದಿ ತೊಂಬತೊಂಬತ್ತು ಕೋಟಿಯು ತುಂಗ
ಗಿರಿಯಲ್ಲಿ ಸಂದರು ನಾಗಕುಮಾರಾದಿ ವ್ಯಾಲ ಮಹಾ
ಮೇಧಾಬೇಧ್ಯಾಧಿಗಳು ಕೈಲಾಸಗಿರಿಯಲ್ಲಿ ಎಪ್ಪತ್ತು
ಸಾವಿರಕೆ ಮಲ್ಲಿಗಳಿಗೆ ವಂದಿಸು ಭವ್ಯಾ ||                ೩

ಅಂಗವಂಗಾದಿ ಒಂದೂವರೆಕೋಟಿ ಉ
ತ್ತುಂಗ ಶ್ರವಣಗಿರಿಯಲ್ಲಿ ನಿಂತು ತಪ್ಪದೆ ನಿಂದು
ಕರ್ಮದೂರಾಗಿ ದಹಮುಖರಾಯ ಮೊದಲಾಗಿ
ಒಂದೂವರೆ ಕೋಟಿ ತಾವುಭಯ ತಟದಿ ರೇವತ
ತೀರದಲ್ಲಿ ಶಂಭುನಾಥಗೆ ಕೇವಲ ಜ್ಞಾನ ಮೂರುವರೆಕೋಟಿ
ಸುಖಮಯರಾಗಿ ರೇವತ ಪಾದಾಕ್ಷಣ ಪಚ್ಚ ಮಹಾಭೋಗ
ಕೋಟಿ ಸಿದ್ಧರು ಮುಕ್ತಿಗೆ ಸಂದರು ಭವ್ಯಾ ||   ೪

ರೇವ ತೀರದ ಪಶ್ಚಿಮ ದಿಸೆಯಲ್ಲಿ ಕೋಟಿಸಿದ್ಧರು ಅಂಗ
ವಂಗಾದಿ ನಗರದ ದಕ್ಷಿಣ ದಿಸೆಯಲ್ಲಿ ಚೂಳಕಿಯ ವಾಸದಲ್ಲಿ
ಇಂದ್ರಜಿತು ಕುಂಭಕರ್ಣಾದಿಗಳು ಪಾವಗಿರಿ ಸ್ಥಾನದಲಿ
ಚಲಣಾ ನದಿ ತಡೆಯಲ್ಲಿ ಸುವರ್ಣ ಭದ್ರಾದಿ ನಾಲ್ವರು ಸಿದ್ಧರು
ಪಲಹಟ ಗ್ರಾಮದ ಪಶ್ಚಿಮ ದೆಸೆಯಲ್ಲಿ ದ್ರೋಣಾಗಿರಿ
ಗುರುದತ್ತ ಮೊದಲಾದವರು ಭವ್ಯಾ ||  ೫

ಅಚಲಾಪುರದ ದೆಸೆಯ ಈಶಾನ್ಯ ಮೆಡ್ರುಗಿರಿ
ಮೂರುವರೆಕೋಟಿ ವರಮುಕ್ತನಾಗಿ ವಂಶಸ್ಥಲ ನಗರ
ಪಶ್ಚಿಮ ದೆಸೆಯಲ್ಲಿ ಕುಂತುಗಿರಿ ಕುಲದೇಶಭೂಷಣನು
ಜೆಸುರಾಯ ಮೊದಲಾಗಿ ಕಾಳಿಂಗ ದಶಕೋಟಿ ಶಿಲಾಕೋಟಿ
ಮುನಿಕರ್ಮರಹಿತನಾಗಿ ಗುರುದತ್ತ ವರದತ್ತ
ಮುನಿಪಂಚಸಿದ್ಧಗಿರಿ ಸ್ಥಾನದಲಿ ತಾವು ಮುಕ್ತನಾಗಿ || ೬

ವಿಂದ್ಯಾಚಲದಲಿ ಜಂಬುಸ್ವಾಮಿ ಮತ್ತೆ ಮೇಘನಾಥನು
ಮೇಘವರ ಮುಕ್ತನಾದವರ ಮುಖದಲ್ಲಿರುವ ಅಕ್ರತಿಮ
ಜಿನಾಲಯಕ್ಕೆ ವಂದಿಸುವೆನು ಭಕ್ತಿಯಲ್ಲಿ ಭಾವಪೂಜೆಯ
ಮಾಡಿ ಸುಖಿಯಾಗಿ ಯುಕ್ತಿಯಲ್ಲಿ ಧ್ಯಾನಿಸಿ ನಿಮ್ಮಂತರಂಗದಲ್ಲಿ
ಜ್ಞಾನಸಾಗರ ಕರುಣಿಸು ಭವ್ಯಾ || ೭

 

. ಕಲಿಯುಗದೊಳಗೊಂದು

ಕಲಿಯುಗದೊಳಗೊಂದು ಲಲಿತದೊಳಿರುತಿಹ
ಸಾಧು ಸಜ್ಜನ ಪ್ರಿಯನೂ
ಲಲಿತದಿ ಅಷ್ಟಮ ಚತುರ್ದಶಿ ನಡಸುತ ಸು
ಲಲಿತದೊಳಿಹರು ||           ಪಲ್ಲವಿ

ಜಿನಸಮಯಯೆಂಬುದಿ ಚಾರು ಚಂದ್ರಮರು
ಘನಶೀಲದೊಳಿಹರು
ಘನತರದೊಳಗಕ್ಷತದಿಗೆಯ ತಿಥಿಯನು
ಮನವೊಲಿದೆಸಗುವರು ||   ೧

ಹರುಷದಿ ಬೈಸಜ್ಜ್ಯಶಾಸ್ತ್ರ ಅಭಯ ದಾನವನು
ಉರು ಮುದದಲಿ ಮಾಳ್ಪರು
ಕರುಣದಿ ಮುನಿಗಳಗಹರಥವನು
ಮರುಕದೊಳಗೆ ಮಾಳ್ಪರು ||        ೨

ಘನತರವಾಗಿಹ ನೋಂಪಿ ವ್ರತಗಳ
ಅನುನಯನದಲಿ ಮಾಳ್ಪರು
ಜನಕ ತುಂಕಪ್ಪನು ಜನನಿ ಪದ್ಮವ್ವನು
ತನುಜ ಶಾಂತಪ್ಪನತಿ ಚೆಲುವನು ||  ೩

ಅನಂತನಾಥನ ನೋಂಪಿಯೊಳಗೆ ಬಹು
ಜನರನು ಮನ್ನಿಹರು
ಜನನುತ ಪಂಚಮಿಯ ತಿಥಿಯೊಳ್ಬಹು
ಜನರಿಗೌತಣ ಮಾಳ್ಪರು ||  ೪

ಶಾಂತಿನಾಥನು ಕರುಣದಿ ಸತಿ
ಸುತ ಮಿತ್ರರು ಸಹಿತರ್ಪರು
ಅತಿಶಯದ-ಖಾನಾಪುರದೊಳ
ಗತಿಶಯದ ಸುಖವಿರ್ಪರು ||  ೫

 

. ರಕ್ಷಿಸೊಎನ್ನನುತವನಿಧಿ
ರಾಗಃ ಶಾನರಾಗ

ರಕ್ಷಿಸೊ ಎನ್ನನು ತವನಿಧಿರಾಯನೆ
ದುಷ್ಟವ್ಯಸನದಿಂದ ಬ್ರಷ್ಟಾಗಿ ತೊಳಲಿದೆ
ಕಷ್ಟವ ಹರಿಸೆನ್ನ ಸಲಹೆನ್ನ ತಂದೆ ||   ಪಲ್ಲವಿ

ಕಮಲಲೋಚನನೆ ನೀ ಕರುಣಸಮುದ್ರನೆ
ಕಮಲಪೀಠದೊಳಿಹ ಶ್ರೀ ಜಿನನೇಕ್ಷನೇ
ಕರುಣಿಸು ದಯದಿಂದ ವರಗಳ ಬೇಗ ||        ೧

ಭಕ್ತರಪಾಲನೆ ನೀ ಭವಹರನೇಕ್ಷನೆ
ಭಕ್ತಿಯಿಂದಲಿ ನಿಮ್ಮ ಪಾದವ ಸ್ಮರಿಸುವೆ
ರಕ್ಷಿಸು ನೀಯೆನ್ನ ಮಾಣು ಪ್ರಿಯನೇ ||         ೨

ಗಿರಿಯೊಳಗಿರುವೆ ನೀ ನೆನೆದಾಗ ಬರುವೆ
ಧರೆಯೊಳು ಕೀರ್ತಿಯ ಮೆರೆಸುತಲಿರುವೆ
ಕರುಣಿಸು ದಯದಿಂದ ನೀಯೆನ್ನ ಬಿಡದೆ ||   ೩

ಭೂತಬೇತಾಳದವ ನೀ ಬೆದರಿಪ ದೇವನೆ
ಭೂತಳದೊಳು ಶ್ವೇತ ತರಗ ವಿಭೂಷಣ
ಪ್ರೀತಿಯಿಂ ಮತಿಯಿತ್ತು ಸಲಹೆನ್ನಿದಾತ ||      ೪

ತನನಿಧಿ ಗಿರಿಯೊಳು ನೀ ತವಕದಿಂದಿರುವನೆ
ತವಕದಿ ನಂಬಿದ ಜನರನು ಸಲಹುವ
ಕರುಣಾಮೂರ್ತಿ ಎನ್ನ ತವಕದಿ ಸಲಹೊ ||  ೫

 

. ಸ್ತುತಿಸಲೆನ್ನಳವೆಸ್ತುತಿ
ರಾಗಃ ನಾಟಿ

ಸ್ತುತಿಸಲೆನ್ನಳವೆ ಸ್ತುತಿಸಲೆನ್ನಳವೆ
ಜಿನಸಮವಸರಣಗಳನ್ನು
ಅತಿಶಯದೊಳಿಪ್ಪತ್ತು ಜಿನರ ಸ್ತುತಿಗಳನು ||   ಪಲ್ಲವಿ

ಜಂಬೂದ್ವೀಪದೊಳಗಿರುವ ನಾಲ್ಕು ಸಮವಸರಣ
ಕುಂಭಿನಿಯೊಳೆಸೆದಿರುವ ಜಿನರ ನಾಮಗಳ
ಬೆಂಬಿಡದೆ ಭಜಿಸುವೆನು ಭವತಾಪ ಕೆಡಲೆಂದು
ಶಂಬರಾರಿಗಳದ ಜಿನರ ಸಭೆಯನ್ನು ||         ೧

ಭವತಾಪ ಹರಿಸಿರುವ ಶ್ರೀಮಂದರಾದಿ ಜಿನ
ಭಾವಜನ ಭಂಗಿಸಿದ ಯುಗಮಂದರೇಶಾ
ಭವದೋಷವನು ಗೆಲಿದ ಶ್ರೀ ಬಾಹುಜಿನರಾಜ
ಭವ್ಯ ಜನರಿಗೆ ಪ್ರಿಯ ಸುಭಾಹು ಜಿನದೇವಾ || ೨

ದಾತಕಿ ಖಂಡದೊಳಗಿರುವ ಸಮವಸರಣ
ಪ್ರೀತಿಯಿಂದಷ್ಟರೊಳಗಿರುವ ಜಿನರನ್ನು
ಅತುಳ ಭವಗಳ ಹರಿಸಲೆಂದು ಕೊಂಡುಡುವೆನು
ಅತಿಶಯದ ನಾಮಗಳ ಮನವಚನದಿಂದ ||  ೩

ಅಷ್ಟಕರ್ಮವ ಗೆಲಿದ ಶ್ರೇಷ್ಠಸಂಜಾತ ಜಿನ
ಅಷ್ಟಮಹಾ ಸುಖಕೊಡೆಯ ಸ್ವಯಂ ಪ್ರಭುದೇವ
ಅಷ್ಟಮಹಾ ಪ್ರತಿಹಾರ್ಯ್ಯ ವೃಷಭಾನಂದ ಜಿನ
ಶ್ರೇಷ್ಠ ಮುಕ್ತಿಗೆ ಒಡೆಯ ವಿಶಾಲಜಿನದೇವ ||  ೪

ನರಸುರೋರಗ ವಂದ್ಯ ಅನಂತವೀರ್ಯ ಜಿನ
ವರಭವ್ಯ ಜನಪಾಲ ಸೂರ್ಯ ಪ್ರಭುದೇವಾ
ನರಪತಿ ಸುತ ಪಾದ ವಿಜಯಂದರ ಸ್ವಾಮಿ
ಪರಮ ಪಾವನಮೂರ್ತಿ ಚಂದ್ರಾನಂದ ಸಲಹೆನ್ನ ||     ೫

ಪುಷ್ಕರಾರ್ಧ ದ್ವೀಪದೊಳಗಿರುವ ಜಿನಸಭೆಯ
ಪುಷ್ಕಳದೊಳಿಹ ಎಂಟು ಜಿನರ ಸ್ತುತಿಗಳನು
ಪುಷ್ಕಳಾಗಿಹ ಕರ್ಮ ಕೆಡಲೆಂದು ಪೂಜಿಸುವೆ
ದುಃಷ್ಕಲದೊಳಗೆನ್ನ ಸಲಹೊ ಜಿನತಂದೆ ||     ೬

ಸೂರ್ಯಕೋಟಿ ಪ್ರಕಾಶ ಚಂದ್ರಬಾಹು ಜಿನೇಂದ್ರ
ಧೈರ್ಯಪತಿ ತ್ರಿಭುಜಂಗದೇವ ಗುರುರಾಯ
ಸೂರ್ಯದಿಂ ಕರ್ಮವನು ಗೆಲಿದ ಈಶ್ವರಸ್ವಾಮಿ
ಕಾರ್ಯಕರ್ತಕನಾದ ನೇಮಿ ಪ್ರಭುದೇವಾ ||   ೭

ಮಾರವರ್ಧನನಾದ ವೀರ್ಯ್ಯಸೇನಸ್ವಾಮಿ
ಪರಮಗುಣಗಣಾಧೀರ ಮಹಾಭದ್ರದೇವ
ಈರಾರು ತಪಕೊಡೆಯ ದೇವ ಭದ್ರಸ್ವಾಮಿ
ಉರುಮುಕ್ತಿಪತಿ ಅಜಿತವೀರ್ಯ ಜಿನದೇವಾ || ೮

ಕ್ಷಿತಿಯೊಳತಿಶಯವಾದ ಎರಡೂವರೆ ದ್ವೀಪದೊಳು
ಅತಿಶಯದಿ ನೆಲೆಸಿರುವ ಇಪ್ಪತ್ತು ಜಿನರ
ನುತಿಪ ಶ್ರೀಗುರು ಪಂಡಿತಾರ್ಯರನು ಭವ್ಯರನು
ಅತಿಶಯದಿ ಸಲಹುತಿಹ ಜಿನರೆನ್ನ ರಕ್ಷಿಪುದು || ೯

 

. ಶ್ರೀಮಂದಾರಸ್ವಾಮಿಆದಿ

ಶ್ರೀಮಂದಾರಸ್ವಾಮಿ ಆದಿ ಅಜಿತವೀರ್ಯ್ಯಸ್ವಾಮಿ
ಸಮವರಸರಣವು ಇಪ್ಪತ್ತು
ಸೋಮಾರ್ಕಸಂತ ಪ್ರಭೆಯೊಳಾತ್ಮ ಪಾದವ
ಪ್ರೇಮದಿ ನಮಿಸಿ ಪೇಳುವೆನು ||      ೧

ಜಂಬೂದ್ವೀಪದ ನಾಲ್ಕು ಸಮವಸರಣದೊಳು
ಸಂಭ್ರಮದಿಂದೊಳ ಹೊಕ್ಕು
ಉಭಯ ಕರ್ಮಗಳಲ್ಲಿ ಕೆಡವು ಸತ್ತದೆಂದು
ಶುಭ ಮನದಿಂ ಪೂಜಿಸುವೆನು ||     ೨

ಶ್ರೀಮದಮರಪತಿ ವೃಂದ ವಂದಿತವಾದ
ಸೋಮಸೂರ್ಯಕೋಟಿ ತೇಜ
ಪ್ರೇಮದಿ ನೆನೆವೆನು ಅನುದಿನ ನಿಮ್ಮಯ
ಶ್ರೀಮಂದಾರಸ್ವಾಮಿ ಸಲಹು ||      ೩

ಅಗಣಿತ ಮಹಿಮನೆ ಜಗಕೆ ಪ್ರಸಿದ್ಧನೆ
ಜಗಜಗಿಸುವ ಪಾದಪದ್ಮ
ಹಗಲಿರುಳೆನ್ನದೆ ಭಜಿಸುವೆ ಮನದೊಳು
ಯುಗ ಮಂದಾರಸ್ವಾಮಿ ಸಲಹು || ೪

ಬಹುಕಾಲ ತಿರುಗುತ ಭವ ಅಗ್ನಿಯಿಂ ಬೆಂದೆ
ಮೋಹದೆ ನಿಮ್ಮನರಿಯದೆ
ಮಹಾಪಾದ ನಿಮ್ಮಯ ನಂಬಿದೆ ನಾನೀಗ
ಬಾಹುಸ್ವಾಮಿ ರಕ್ಷಿಸೆನ್ನ ||            ೫

ಶುಭ ಅಶುಭ ಎಣಿಸುತ್ತಿದೆ ಮೂಲೋಕ
ಅಭವ ನಿಮ್ಮ ನಾ ಭಜಿಸದೆ
ಬೊಬ್ಬನಂದದಿ ಬಾಧೆ ಬಿಟ್ಟಿದೆ ನೀವೀಗ
ಸುಬಾಹು ಸ್ವಾಮಿ ಸಲಹೆನ್ನ ||        ೬

ದಾತಕಿ ಖಂಡದೊಳೆಂಟು ಸಮವಸರಣ
ಜ್ಯೋತಿ ರೂಪರ ಕಂಡು ಪೂಜೆ
ಪ್ರೀತಿಯನ್ನಲಿದಾಡೆ ಹೊಗಳುವೆ ಜಿನರನೂ
ನೀತಿ ಸಜ್ಜನರು ಪಾಲಿಪುದು ||        ೭

ಸಂಜಾತಸ್ವಾಮಿ ಪಾದಕಂಜ್ಯ ಕಾಣದೆ
ಭಂಜಿಸಿದೆನು ಬಹುಕಷ್ಟ
ಅಂಜಲಿಯನು ಮುಗಿದೆರಗುವೆ ಈಗೆನ್ನ
ಅಂಜಿಕೆ ಬಿಡಿಸೆನ್ನ ತಂದೆ ||           ೮

ಭಾವಜ್ಯ ಭಂಜನೆ ಸ್ವಯಂ ಪ್ರಭುಸ್ವಾಮಿ ನೀಂ
ಪಾವನ ಚರಣವನರಿಯದೆ
ಭವ ಅಂಬುದಿಯೊಳು ಮುಳುಗಿದೆ ನಾನೀಗ
ದೇವ ಆಲಿಸು ಎನ್ನ ಗುರುವೇ ||       ೯

ಶಶಿರವಿ ಅಗಣಿತ ಪ್ರಭೆಯೊಳಾ ನಿಮ್ಮ ಪಾದ
ಹಸನಾಗಿವಳವನ ಕಾಣದೆ
ಅಸಮ ಸಂಸಾರಾಬ್ದಿ ಸುಳಿಯೊಳು ಸಿಲ್ಕಿದೆ
ವೃಷಭಾನಂದ ಸ್ವಾಮಿ ಸಲಹು ||     ೧೦

ಆಶಾಪಾಶದೊಳು ವಶವಾಗಿ ನಿಮ್ಮ ಪಾದ
ಮಾಡಿಸಿದ ಮತಿಯಿಂದ ಮರೆದು
ದೋಷದಿ ಒಳಗಾಗಿ ಹೇಸದೆ ತಿರುಗಿದೆ
ವಿಶಾಲಸ್ವಾಮಿ ಎನ್ನ ಸಲಹು ||       ೧೧

ಅನಂತಕಾಲಷ್ಟಮದಗೂಡಿ ನಿಮ್ಮಯ
ಉನ್ನತ ಚರಣವ ನೆನೆಯದೆ
ಘನಗತಿಶಯಮಂ ಬೆನ್ನತ್ತೆಂಬುದು
ಅನಂತವೀರ್ಯ್ಯಸ್ವಾಮಿ ಬಿಡಿಸೊ|| ೧೨

ಕಲಿಲ ಹರನೆ ನಿಮ್ಮನರಿದು ನಾ ಸ್ಮರಿಸದೆ
ಬಲೆಯೊಳು ಸಿಲ್ಕಿದೆ ಮನ
ಉಳುವವರಿಲ್ಲೆಂದು ಕಾಲಿಗೆರಗಿದೆ ನಿಂದು
ಪಾಲಿಸು ಸೂರಿಪ್ರಭುಸ್ವಾಮಿ ||       ೧೩

ಭಜಿಸುವೆ ಭಯಭಕ್ತಿಯಿಂದಲಿ ನಾನೀಗ
ವಿಜಯಂದರ ಸ್ವಾಮಿಯ ಪದವ
ವೃಜಿನ ಹರನೆ ತ್ರಿಜಗವಂದ್ಯ ನೀವೆನ್ನ
ನಿಜದೊಳು ಸದಾ ಕಾಣಬೇಕು ||     ೧೪

ಇಂದ್ರಚಂದ್ರ ಧರಣೇಂದ್ರವಂದಿತ ಪಾದ
ಚಂದ್ರನಾ ಕಂಡ ಕಡಲಂತೆ
ಸಾಂದ್ರ ಸುಗುಣದಿಂದ ಉಬ್ಬಿ ನಾ ಪೂಜಿಪೆ
ಚಂದ್ರಾನಂದ ಸ್ವಾಮಿ ಸಲಹೊ ||    ೧೫

ಅಷ್ಟಸಮೂಹ ಶರಣ ಪುಷ್ಕರಾರ್ಧದರೊಳು
ಅಷ್ಟ ಶೋಭೆಯಲಿರುತಿಹರು
ಶ್ರೇಷ್ಠ ಜನರ ಪಾದಕೆರಗಿ ನಾ ಹೊಗಳುವೆ
ಸ್ಟಷ್ಟಾಗಿ ತಿಳಿರಿ ಸಜ್ಜನರೊ ||         ೧೬

ಚೆಂದಚೆಂದದಿ ಸ್ಮರಿಸುವೆ ನಿಮ್ಮಡಿಗಳ
ಬದ್ಧಭವವೆಲ್ಲ ಕೆಡಲೆಂದು
ಹೊಂದಿ ನಿಃಸಂಗದಿ ನೆನೆವೆನು ಮನದೊಳು
ಚಂದ್ರಬಾಹು ಸ್ವಾಮಿ ಸಲಹೊ ||     ೧೭

ತ್ರಿಭುವನ ಜೈಸಿದು ಗತಿಯನು ಪಡೆದಂಥ
ಪ್ರಭುವೆ ನಿಮ್ಮರಿಯದೆ ದುಃಖ
ಅಂಬುಧಿಯೊಳು ಬಿರ್ದ್ದು ಉಂಬೋದು ಈ ಕಷ್ಟ
ತ್ರಿಭುಜಂಗಸ್ವಾಮಿ ಭರಿಸು ||         ೧೮

ಸುಳ್ಳು ಸ್ವಪ್ನವ ಕಂಡು ಮರುಳಾಗಿ ಮರುಗುತ
ಮುಳ್ಳೊಳು ಬಿದ್ದು ಹೊಳ್ಳ್ಯಾಡಿದೆನು
ಅಳತೆಯಿಲ್ಲದ ಸುಖ ಕೊಡಬೇಕೆಂದೆರಗಿದೆ
ಮಲಹರ ಈಶ್ವರ ಸ್ವಾಮಿ||           ೧೯

ಪ್ರೇಮದಿ ನೆನೆವೆನು ಮರೆಯದೆ ಸಲಹೆನ್ನ
ಕೋಮಲಾಂಗನೆ ಕೋಪರಹಿತ
ಕಾಮಿತಫಲವಿತ್ತು ಕರುಣಿಸೆಂದೆರಗಿದೆ
ನೇಮ ಪ್ರಭುಸ್ವಾಮಿ ಪದಕೆ||         ೨೦

ವರಜ್ಞಾನನಂತ ಚತುಷ್ಟಯ ಪಡೆದಂಥ
ಪರಮ ಪಾವನ ಪಾದಕ್ಕೆರಗಿ
ವರಮುಕ್ತಿ ಸ್ಥಿರಪಥ ಬೇಕೆಂದು ಪೂಜಿಸಿದೆ
ವೀರಸೇನಸ್ವಾಮಿ ಪದವ||           ೨೧

ಮಹಾಮಾರಿ ಜೈಸಿ ಮಹಾದೇವನೆಂದೆನಿಸಿದ
ಮಹಾಪಾದಪೂಜೆಯ ಮಾಡದೆ
ಮಹಾದುಃಖ ನನಗಿಂದು ಮಹಾಸುಖಕೊಟ್ಟು ನೀ
ಮಹಾಭದ್ರಸ್ವಾಮಿ ಕರುಣಿಸೊ||      ೨೨

ದೇವಾಧಿದೇವ ನಿಮ್ಮಯ ಪಾದಪದ್ಮವ
ಭಾವಶುದ್ದಿಯೊಳನವರತ
ಭಾವಿಸಿ ನೆನೆವೆನು ಅನುದಿನ ನಿಮ್ಮಯ
ದೇವ ಭದ್ರಸ್ವಾಮಿ ಸಲಹೊ||         ೨೩

ಭಜಿಸುವ ಭಯಭಕ್ತಿಯಿಂದತಿ ನಾನೀಗ
ಅಜಿತವೀರ್ಯ್ಯಸ್ವಾಮಿ ಪದವ
ನಿಜದೊಳು ನೆಲಸಿ ಅರದರೆ ಸದಾಕಾಲ
ನಿಜಲಕ್ಷ್ಮಿ ತಾನೆ ಒಲಿದಳೊ||                   ೨೪

ಇಪ್ಪತ್ತು ಜಿನರನೂ ನೆಪ್ಪಿಟ್ಟು ನೆನೆದರ
ತಪ್ಪದೆ ಅಲ್ಲಿ ಪುಟ್ಟುವರು
ಅಪ್ಪಪ್ಪ ಅಲ್ಲಿಯಾ ಸುಖವೇನು ಹೇಳುವೆ
ಮಲ್ಲಪುರಕೊಡೆಯರಾಗುವರೂ ||    ೨೫

ವೃಷಭಾದಿ ವೀರಜಿನ ವರಪಾದವನೂ
ನಿಶಿ ದಿನದೊಳು ಭಜಿಸುವೆನು
ಅಸಮದರ್ದ್ದರ ಕರ್ಮದಿಂದಹವಹುದೆಂದು
ಸೂಸಿದೆ ಶಿರವ ವರ ಪದಕೆ ||         ೨೬

ಪನ್ನೆರಡಂಗ ಪದಿನಾಲ್ಕು ಪೂರ್ವ್ವುಳ್ಳ
ಚೆನ್ನೆಪುರದ ನಿಮ್ಮ ಪದವ
ಸನ್ನುತ ಪೂಜೆಯ ಮಾಡುವೆನನುದಿನ
ಉನ್ನತ ಮತಿಯಿತ್ತು ಸಲಹೊ ||      ೨೭

ನೀತಿ ಕ್ಷಿತಿಯಿಂದ ಮುಕ್ತಿಗೆ ಹೋಹುವ
ಯತಿ ಪುಂಗ ಪದಕಮಲವನು
ಚಿತ್ತದೊಳಿರಿಸಿ ಅಲ್ಲಿ ಉತ್ಸಾಹದಿಂದ
ನತನಾದೆನು ಮರಳಿ ಮರಳಿ ||      ೨೮

ವರಸ್ತುತಿಯದು ಮತ್ತರಿದ ಅಂತರದೊಳು
ಪರಮ ಭಕ್ತಿಯಲಿ ಮಾಡುವರ್ಗೆ
ಭರದಿಂದ ಪೂರ್ವವೀ ದೇಹ ಸುಖವುಂಡು ಕಡೆಯೊಳು
ಸೇರುವರು ವರಮುಕ್ತಿ ಪುರವಾ ||    ೨೯

 

.ವಸುಧೆಗಧಿಕವಾದದೇವ

ವಸುಧೆಗಧಿಕವಾದ ದೇವಕಾಣಮ್ಮ
ಕುಸುಮಬಾಣನ ಮರ್ಧಿಸಿದ ಕಾಣಮ್ಮ
ವಸುಧೆಯ ಭವ್ಯರ ಭಾಗ್ಯ ಕಾಣಮ್ಮ
ಶಶಿಮುಖಿಯರು ನೋಡುವ ಬನ್ನಿರಮ್ಮ ||     ೧

ಮೇರುಗಿರಿಗೆ ದಕ್ಷಿಣ ಭಾಗವನ್ನು
ಭರತಕ್ಷೇತ್ರದ ಆರ್ಯ್ಯಭಾಂಡವಮ್ಮ
ಸುರಚಿರ ಕೌಶಲ್ಯ ದೇಶದೊಳಮ್ಮ
ಸಿರಿವೆತ್ತ ಅಯೋಧ್ಯನಗರಿ ಕಾಣಮ್ಮ ||         ೨

ಸುರುಪತಿ ನಿರ್ಮಿತ ಪಟ್ಟಣವನ್ನು
ದೊರೆ ಸಿಂಹಸೇನ ಮಹಾರಾಜನಮ್ಮ
ಅರಸಿ ಜಯ ಪತಿದೇವಿ ಕಾಣಮ್ಮ
ಸ್ಥಿರಸಾಮ್ರಾಜ್ಯದೊಳಿರುತಿರ್ದರಮ್ಮ ||        ೩

ಇನ್ನಾರುದಿಂಗಳಿಗುದಯಿಪನಮ್ಮ
ಮುನ್ನ ದೇವೇಂದ್ರ ತಾನರಿದ ಕಾಣಮ್ಮ
ರನ್ನದಾ ಮಳೆಯ ನೀ ಕರೆದು ಬಾರೆಂದು
ಚೆನ್ನ ಕುಬೇರಗೆ ಕಳುಹಿದನಮ್ಮ ||    ೪

ಅಂದು ಜಿನೇಂದ್ರನುದಯವಾಗಲೆಮ್ಮ
ಇಂದ್ರಗಾಸನ ಕಂತನವಾಗಲಮ್ಮ
ಒಂದಾಗಿ ಸುರರೆಲ್ಲ ಕೂಡಿದರಮ್ಮ
ಬಂದು ರಾಜಾಂಗಣದೊಳು ನಿಂದರಮ್ಮ ||    ೫

ಮಡದಿಗೆ ಸ್ವಾಮಿಯ ತರ ಹೇಳಲಮ್ಮ
ಸಡಗರದೊಳು ತಂದು ಕೊಡುವಾಗಲಮ್ಮ
ಕೊಡೆಯ ನೀಶಾನೇಂದ್ರ ಪಿಡಿದ ಕಾಣಮ್ಮ
ಒಡನೆ ಸುರರು ಜಯ ಮೊಳಗಿದರಮ್ಮ ||      ೬

ಸುರಲೋಕದ ವಾದ್ಯ ಮೊಳಗಿದವಮ್ಮ
ಸುರಸತಿಯರು ನರ್ತಿಸುತಿರ್ದ್ದರಮ್ಮ
ಸುರ ಶೈಲದ ಮೇಲಕ್ಕೆ ತಂದರಮ್ಮ
ಸುರುಚಿರ ಸುರಪತಿವೊಂದಿತನಮ್ಮ ||         ೭

ಹೇಮಶೈಲದ ಪೀಠಾಗ್ರದೊಳಮ್ಮ
ಸ್ವಾಮಿಯ ಬಿಜಯಂಗೈಸಿದರಮ್ಮ
ಹೇಮಘಟದೊಳಮೃತನ ತಂದರಮ್ಮ
ಸ್ವಾಮಿಗೆ ಅಭಿಷೇಕವ ಮಾಡಿದರಮ್ಮ ||       ೮

ಮಾರವಿಜಯನಶ್ವಗೇರಿಸಿದರಮ್ಮ
ಮೇರು ವಿಂದ್ಯಾಯೋಧ್ಯಕ್ಕೆ ತಂದರಮ್ಮ
ಚಾರು ಸುರತ್ನಾಪೀಠಾಗ್ರದೊಳಮ್ಮ
ಕಾರುಣ್ಯನಿಧಿಯ ಕುಳ್ಳಿರಿಸಿದರಮ್ಮ || ೯

ಶ್ರೀಮದನಂತ ಜಿನೇಶ್ವರನೆಂದು
ಸ್ವಾಮಿಗೆ ಅಮರಪತಿ ಪೆಸೆರಿಟ್ಟನಮ್ಮ
ಸ್ವಾಮಿಯ ಸೇವೆಯ ಮಾಡಿ ನೀವೆಂದು
ನೇಮಿಸಿ ಸುರ ನಿಲ್ಲಿಸಿ ಹೋದನಮ್ಮ ||         ೧೦

ಅರ್ಹ ಅನಂತ ಜಿನೇಶ್ವರನೆಂದು
ಸುರಪತಿ ಪಟ್ಟವ ಕಟ್ಟಿದರಮ್ಮ
ಧರಣಿಯನೊಲಿದು ನರ್ಚಿಸುತಿದ್ದರಮ್ಮ
ಅರಸಿ ಜಯಾಕ್ಷಿಯಕುಮಾರ ಕಾಣಮ್ಮ ||      ೧೧

ದೇವಗೆಯಪ್ಪನ ಉದಯವಾಗಲಮ್ಮ
ಭಾವಕಿಯರು ರತ್ನ ಮಾಲೆಯ ತಂದರಮ್ಮ
ಭೂವಳಯದ ದೊರೆಗಳಮ್ಮ
ದೇವಗೆ ಮದುವೆಯ ಮಾಡಿದರಮ್ಮ ||         ೧೨

ಮನದೊಳು ಹೇಯವ ಕುದಿಸಿದರಮ್ಮ
ತನುಜಗೆ ಮಜ್ಜನವ ಮಾಡಿದರಮ್ಮ
ಅನುಮಿಷರಾಜರಾಗಳೇ ಬಂದರಮ್ಮ
ಘನಪುಣ್ಯಮೂರ್ತಿಯ ಕೊಂಡೊಯ್ದರಮ್ಮ ||  ೧೩

ಹದಿನಾಲ್ಕು ನದಿಯ ತೀರ್ಥವ ತಂದರಮ್ಮ
ಪದನವಿಜಯಗೆ ಸ್ವಪನ ಮಾಡಿದರಮ್ಮ
ಸದಮಲ ದೀಕ್ಷೆಯ ಧರಿಸಿದರಮ್ಮ
ಮುದದಿಂದ ಇಂದ್ರನೆರಗಿ ಹೋದನಮ್ಮ ||     ೧೪

ಸ್ಥಿರವಾಗಿ ಕುಳಿತು ಧ್ಯಾನದ ಮಾಡಲಮ್ಮ
ಪರಮಶುಕ್ಲ ಧ್ಯಾನ ಉದಯಿಸಿತಮ್ಮ
ಧರೆಯಿಂದ ಗಗನಕ್ಕೆ ನೆಗೆದ ಕಾಣಮ್ಮ
ಸುರನರೋರಗಣ x x x ಧರಮ್ಮ || ೧೫

ದೇವಗಾಸನ ಕಂಪನ ಉದಯವಾಗಲಮ್ಮ
ದೇವ ಕುಭೇರಗೆ ಬೆಸಸಿದನಮ್ಮ
ಸ್ವಾಮಿಗೆ ಸಮವಸರಣವಾಗಲೆಮ್ಮ
ದೇವರ್ಕಳೆಲ್ಲಾ ನೆರೆದು ಬಂದರಮ್ಮ ||         ೧೬

ಮುತ್ತಿನ ಸತ್ತಿಗೆ ಮೂರು ಕಾಣಮ್ಮ
ಮುತ್ತುರತ್ನದ ಮೂರು ಪೀಠ ಕಾಣಮ್ಮ
ಹೊತ್ತಿಯಲಿ ಅಶೋಕ ವೃಕ್ಷಕಾಣಮ್ಮ
ಚಿತ್ತಜ ವಿಜಯನೋಲಗವಾದನಮ್ಮ ||        ೧೭

ಹೇಮ ವರ್ಣದ ದಿವ್ಯದೇಹ ಕಾಣಮ್ಮ
ಸ್ವಾಮಿಗೆ ಇನ್ನೂರು ವಂಶಕಾಣಮ್ಮ
ಭೂಮಂಡಲ ಪುಷ್ಟವೃಷ್ಟಿ ಕಾಣಮ್ಮ
ಚಾಮರದಿವ್ಯ ನಿನಾದ ಕಾಣಮ್ಮ ||   ೧೮

ದೇವಗೆ ಇಕ್ಷ್ವಾಕು ವಂಶ ಕಾಣಮ್ಮ
ಮೂವತ್ತು ಲಕ್ಷದಾಯುಷ್ಯ ಕಾಣಮ್ಮ
ಐವತ್ತು ಧನುವಿನುತ್ತೈದೆ ಕಾಣಮ್ಮ
ಮೂವತ್ನಾಲ್ಕು ಅತಿಶಯವುಳ್ಳವರಮ್ಮ ||      ೧೯

ಧರ್ಮೋಪದೇಶ ಮಾಡಿದರಮ್ಮ
ಸಮ್ಮೇದಗಿರಿಗಾಗಿ ತೆರಳಿದರಮ್ಮ
ನಿರ್ಮಲ ಧ್ಯಾನದೊಳಿರುತಿರ್ದರಮ್ಮ
ಘಮ್ಮನೆ ಮುಕ್ತಿವಲ್ಲಭರಾದರಮ್ಮ ||  ೨೦

ಶರನಿಧಿಯೊತ್ತಿನನಗಿರಿ ಕಾಣಮ್ಮ
ಸಿರಿವೆತ್ತಮಂಡಿತ ಪುರದೊಳಗಮ್ಮ
ಕರವೈರಿ ಪೀಠದೊಳ್ನೆಲಸಿದನಮ್ಮ
ಅರ್ಹ ಅನಂತ ಜಿನೇಶನಮ್ಮ ||      ೨೧

ಬಲದೊಳು ಪಾತಾಳ ಯಕ್ಷ ಕಾಣಮ್ಮ
ಎಡದೊಳನಂತಮತಿ ಯಕ್ಷೆ ಕಾಣಮ್ಮ
ಕೆಲದೊಳು ಬಲ್ಲು ಕಾಲಾಂಚನವಮ್ಮ
ಒಲಿದವರಿಗೆ ವರವೀವನಮ್ಮ ||       ೨೨

ಗುರುಚಾರುಕೀರ್ತಿ ಪಂಡಿತರಾಯಗಮ್ಮ
ವರಮುಕ್ತಿ ಪದವಿಯ ಕೊಡುವ ಕಾಣಮ್ಮ
ದೊರೆ ಚಿಕ್ಕರಾಯ ಭೂಪಾಲನಗಮ್ಮ
ಹಿರಿದು ಸಂಪದವಿತ್ತು ಸಲಹುವನಮ್ಮ ||       ೨೩

ಪಾರ್ಥಿವವೆಂಬ ಸಂವತ್ಸರವಮ್ಮ
ಕಾರ್ತೀಕ ಮಾಸದಷ್ಟಾನೀಕವಮ್ಮ
ಕರ್ತೃ ಅನಂತ ಜಿನೇಶಗಮ್ಮ
ಮುಕ್ತಿ ಸುಖವ ಶಾಂತಿ ಮುನಿಗೀವನಮ್ಮ ||    ೨೪

ಈ ಪದಗಳನೋದಿ ಕೆಳ್ದವರಿಗಮ್ಮ
ಪಾಪವೆಲ್ಲವು ಪರಿಹಾರವಾಗಲಮ್ಮ
ರೂಪು ಸೌಭಾಗ್ಯ ಸಂಪದವಾಗಲಮ್ಮ
ಯಾವತ್ತೂ ಸುಖದೊಳೊಲಾಡುವರಮ್ಮ ||    ೨೫

 

೧೦.ಆದಿಜಿನೇಶ್ವರನಮೋ

ಆದಿಜಿನೇಶ್ವರ ನಮೋ ನಮೋ
ಭೇದವಾದಿಗೆ ಸಿಲುಕದ ಪ್ರಥುಮೆ ನಮೋ ||    ಪಲ್ಲವಿ

ಅಜಿತಶಂಭವ ಅಭಿನಂದನ ಸುಮತೀಶ
ತ್ರಿಜಗವಂದಿತ ಪಾದಪದ್ಮ ನಮೋ
ಸುಜನವಂದಿತ ಸುಪಾರೀಶ್ವಚಂದ್ರಪ್ರಭ
ನಿಜಗುಣಿಪುಷ್ಟಶೀತಳರೇ ನಮೋ ||  ೧

ಶ್ರೇಯೋ ಜಿನವಾಸುಪೂಜ್ಯ ವಿಮಲ ಜಿನ
ಆಯತಮುಕ್ತಿ ಅನಂತನಮೋ
ಕಾಯಜ ಜಯಧರ್ಮ ಶಾಂತಿ ಜಿವನೇ
ಕುಂಥು ಕಾವುದೆನ್ನನು ಅರೆಸ್ವಾಮಿ ನಮೋ ||  ೨

ಮಲ್ಲಿಜಿನೇಶ್ವರ ಮುನಿಸುವ್ರತ ಮುಕ್ತಿ
ವಲ್ಲಭನಮಿನೇಮಿ ಪಾರೀಶ್ವನಮೋ
ಬಲ್ಲಿದ ವೀರಜಿನೇಂದ್ರ ಚೌವೀಶ ನಿ
ಮ್ಮೆಲ್ಲಡಿಗಳಿಗೆರಗುವೆನು ನಮೋ ||