೨೧. ದಳಂದಳಾಂದುಳಂ

ದಳಂದಳಾಂದುಳ ಧುಮುಕೆನುತಾ
ನಳಿನವದನೆ ಕಡೆದಳು ದಧಿಯಾ ||  ಪಲ್ಲವಿ

ಪಂಚರತ್ನದ ಮಂಟಪದೊಳು ಪವಳಧ
ಮಿಂಚುವ ಕಂಬ ಬೆಳ್ಳಿಯ ಮಂಥಣಿ
ಪಂಚಾಮೃತವೆನಿಸುವ ದಧಿಯೊಳು ಸತಿ
ಕಾಂಚನಮಯ ಕಡೆಗೋಲನಿಳುಹಿದಳು ||    ೧

ಪಟ್ಟಾವಳಿನರಿವಿಡಿದೊಂಟಳು ಸತಿ ಹೊಂ
ಬಟ್ಟೆಯ ತೆಗೆದು ನೆಣನ ಪಿಡಿದು
ಹುಟ್ಟುಗೆ ಜಿನರಂತ ಮಾಲೆಯ ಪಾಡುತ
ಗಟ್ಟಿ ಮೊಸರ ಕಡೆದಳು ಮಂಥಣಿಗೆಯೊಳು || ೨

ಭೃಂಗಕುಂತಳೆ ನೊರೆನೊಸಲು ಬಿಂಬಾಧರ
ಅಂಗಜಬಾಣ ನಯನವೆನಿಪ
ತುಂಗಕುಚಕ್ಕೆ ಸೆಳೆನಡು ಬಳುಕಲು ದೇ
ವಾಂಗನೆ ಮೊಸರ ಕಡೆದಳು ಮಂಥಣಿಗೆಯೊಳು ||      ೩

ತೊಡೆಸಂಚಳಿಸಲು ನಡುಬಳುಕಲು ತೊ
ಳೆಡೆಯಾಡಲು ಪಯೋದರವಲುಗೆ
ಮುಡಿ ಸಡಿಲಲು ಕುಂತಣ ಮೊರೆ ನೊಸಲೊಳು
ಕಡುವಿಡಿದಾಡೆ ಬೆಮರು ಬಿಂದುಗಳಿಂದ ||     ೪

ಮಾಳವಿ ಭೈರವಿ ಕಾಮೋದರಿ ಪಾಂ
ಚಾಳ ದೇಶಿರಾಗಗಳಿಂದ ಮಾಳ ವಿ
ಮಲ ಹರಿ ಗುರ್ಜ್ಜರಿಯಿಂದ
ಲೋಲಲೋಚನೆ ಪಾಡಿದಳತಿ ಹರುಷದಿ ||    ೫

ಚರಣದಂದಗೆ ನೋಪುರ ಕಟಿಸೂತ್ರವು
ವರಜಘನದ ಕಿಂಕಿಣಿಧ್ವನಿಯು
ಕೊರಳ ಪದಕ ಹಾರಗಳೋಲೆದಾಡಲು
ಬೆರಳುಂಗುರ ಜಝ್ಝಗೊರೆನಲು ||    ೬

ಕ್ಷಿತಿಯೊಳು ಕುಂತಣ ವಿಷಯದೊಳೊಪ್ಪುವ
ಪತಿಕೊಪಣದ ಚಂದ್ರಪ್ರಭರ
ಕೃತಿಗರ್ಚನೆಗಭಿಷೇಕಕೆ ಮಾನಿನಿ
ಘೃತಬೇಕೆಂದು ಕಡೆದಳತಿ ಹರುಷದಿ ||        ೭

 

೨೨. ಲೆಲೆಲೊಲೆಲೆಲೊಲೆಲೆಲೊ

ಲೆಲೆಲೊ ಲೆಲೆಲೊ ಲೆಲೆಲೊ ಲೆಲೆಲೊ
ಲೆಲೆಲೊ ಲೆಲೆಲೊ ಲೆಲೆಲೊ ||       ಪಲ್ಲವಿ

ಪುರಪರಮೇಶನ ವರಶಾಸನ ವಸು
ಶರದೊಳು ನೋಡಿ ಸಂಭ್ರಮದಿಂದ
ಬರಿದಾನಂದದೊಳಿರವೋಲಾಡುವ
ಗುರುಮಹಿಮೆಯ ಹಾ ಸಂಬಂಧಾ || ೧

ಹಿಮ್ಮೆಟ್ಟಿದ ದರುಶನಕರವಾದಾಂತು
ಹೆಮ್ಮೆಯ ತಪವೆಂಬ ತಳನೇರಿ
ಘಮ್ಮನೆ ದುರಿತವೆಂಬರಿಗಳ ಜಯದೊಳು
ಗಿಮ್ಮಡಿಸುವ ಕಲಿ ಹಾ ಸಂಬಂಧಾ || ೨

ಜಿನರೂಪಿನ ಹೊಸ ದೊರೆಗಳನೊಲೈಸಿ
ಮನವೊಲಿದೆರಗಿ ಮಜ್ಜರೆಡಿಂದಾ
ಕನಲಿ ಬದ್ಧದ ಮನುಜ ನಿಜಸೇವೆಯ
ನನುಗೋದಿಸುವ ಕಲಿ ಹಾ ಸಂಬಂಧಾ ||      ೩

ಸಲೆ ಜಿನರಾಜ ಎನ್ನೊಡೆಯನೆ ಗತಿಯೆಂದು
ತೊಲಗೆಲಾ ತೊಂತುಪ ಕಂಡಕವೆಂಬ
ಬಲುಗಯ್ಯ ಬಂಡನ ಗೆಲಿದು ಗಂಡೇರುವ
ಸಲೆ ಬಿರುದಿನ ಕಲಿ ಹಾ ಸಂಬಂಧಾ ||         ೪

ಕುಂದದೆಸೆ ನೆಗೆವದಾ ಪಟ್ಟಾಂಬರಕೆ
ಚಂದಿರ ಲಕ್ಷ್ಮಿಸೇನ ಒರೆವ
ಚಂದದಿಂದ ಕೊಪಣದಿ ಆರಾಧಿಸುವ
ಚಂದ್ರನಾಥನ ಹೊಸ ಹಾ ಸಂಬಂಧಾ ||       ೫

 

೨೩. ಬಂದುನೋಡಿರೆಲ್ಲನಿಂದು

ಬಂದು ನೋಡಿರೆಲ್ಲ ನಿಂದು ಪಾಡಿರೆಲ್ಲ
ಇಂದ್ರವಂದ್ಯ ಚಂದ್ರನಾಥನ ಚರಣಕಮಲವ ||          ಪಲ್ಲವಿ

ಜಾತಿಜರಾಮರಣವೆಂಬ ಪಾತಕದ ತ್ರಿಪುರವನ್ನು
ಓತು ಸುಟ್ಟು ಮೂಲೋಕವಂದ್ಯನೆನಿಸಿದ ವೀತರಾಗನ
ಘಾತಿಕರ್ಮವನು ಗೆಲಿದ ಅನಂತವೀರ್ಯ್ಯನ ||          ೧

ಇಂಗಡಲ ಚೆಲ್ವ ಸ್ತರಂಗ ಮಾಲೆಗಳನೆ ಪಾ
ಲ್ವಂಗರುಚಿಯೊಳಖಿಲ ಪಾಶಾಂಧಕಾರಮಂ
ಹಿಂಗಿಸಿದ ಅಂಗಜಾರಿಭವ ವಿದೂರ ಮೂರ್ತಿಯನ್ನು ||  ೨

ರಾಗರೋಷರಹಿತನೇ ಶ್ರೀಗದೀಶ ನಮಿತ ಚರಣ
ರೋಗ ನಾಶದುರಿತ ಹಾರಿದ ವಿಜಯವಂದಿತ ಅಘಹರನ
ಬೇಗಬಂದು ನುತಿಸಲವರ ಪಾದ ಹಿಂಗುವುದು ||       ೩

ಇಂದು ಕೋಟಿ ಸೂರ್ಯತೇಜ ಮಂದರಾದ್ರಿ ಧೈರ್ಯಧೀರ
ಕಂದರ್ಪ ವಿಜಯ ಸಕಲ ಗುಣ ವಿಭೂಷಿತ
ಸೌಂದರಾಂಗನ ಕಂದದಖಿಲ ಭಕ್ತಿಯಿಂದ ಭಜಿಸಿರರುಹನಾ ||    ೪

ಮಲೆಯ ದೇಶದೊಳಗೆ ಮೆರೆವ ಸುಲಭ ಪುತ್ತಂಗಡಿಯ ಹೊರದೊ
ರಲಿದು ಪಾಲಿಸುವನಂತ ಸೌಖ್ಯನ
ಚೆಲುವ ಮೂರ್ತಿಯ ಒಲಿದು ಭಜಿಸಿರೆ ||       ೫

 

೨೪. ಪಾಲಿಸೆನ್ನಚಂದ್ರನಾಥ

ಪಾಲಿಸೆನ್ನ ಚಂದ್ರನಾಥ ಕರುಣದಿಂದ
ಲೋಲಮೋಕ್ಷ ಲಕ್ಷ್ಮಿಕಾಂತಾ ||                ಪಲ್ಲವಿ

ಪಾಲಿಸೆನ್ನ ಪ್ರೀತಿಯಿಂದ
ಬಾಲೆ ಲಕ್ಷ್ಮಣ ಪುತ್ರ
ಲೀಲೆಯಿಂದ ಸಲಹುಯೆನ್ನ
ಕಾಲಕಾಲ ಬಳಲಿ ಬಂದೆ ಪಾಲಿಸೆನ್ನ ||         ೧

ಚಂದ್ರಪುರದಧಿನಾಥ ಇಂದು ವರ್ಣ
ದಿಂದಲಿರುವ ಚಂದ್ರನ ಶಾಂತ
ಇಂದುವದನ ಮಹಾಸೇನ ವೃಂದ ನೃಪನ ಪುತ್ರಾ
ಕಂದನಂತೆಯೆನ್ನ ಸಲಹೆ ನೂರೈವತ್ತು ಬಿಲ್ಲುತ್ಸೇದಾ||   ೨

ಹತ್ತು ಲಕ್ಷ ಪೂರ್ವಕಾಲ ರಾಜ್ಯದೊಳಿದ್ದು
ಮತ್ತೆ ಕರ್ಮರಿಪುವ ಗೆಲಿದು
ಸತತ ಮೋಕ್ಷ ಪುರದೊಳಿರುವವ
ಅತಿಶಯದ ಚಂದ್ರನಾಥ ಮತಿಯನಿತ್ತು ಎನ್ನ ಸಲಹೊ||          ೩

ಚಂದ್ರಸೂರ್ಯಕೋಟಿ ತೇಜ
ಇಂದ್ರಲೋಚನದಿಂದ ಮೆರೆವ
ಚಂದ್ರನ ತೇಜ ಇಂದ್ರನಾಗೇಂದ್ರ ನ
ರೇಂದ್ರ ವಂದಿತ ಪಾದಪದ್ಮ ಎಂದು ಅರಿಯೆ
ಇಂದು ಕಂಡೆ ಭವದ ಹರಿಸೊ ಎನ್ನ ತಂದೆ ||            ೪

ಜನನ ಮರಣ ಹರಣ ಜೈಸಿದೆ
ಜನಕನಂತೆ ಜನರಿಗುಪದೇಶ ಮಾಡಿದೆ
ಜನನ ಮರಣದೊಳಗೆ ಸಿಲ್ಕಿ ಬಹಳ ಕಾಲ ತೊಳಲಿ ಬಂದೆ
ಜನನ ಮರಣವನ್ನು ಹರಿಸಿ ಮೋಕ್ಷವನ್ನು ತೋರಿನಿಂದೆ ||         ೫

ಪರಮಭವ್ಯಜನಕೆ ಚಂದ್ರಾ ನಿನ್ನ ನಾನು
ಅರಿಯೆ ಗುಣಗಣ ಸಮುದ್ರ
ಅರೆದೆಯೆಂದು ಮೂರು ಲೋಕ ತುದಿಯ ತೋರಿ ಸಲಹು ತಂದೆ
ಧರೆಯೊಳಧಿಕ ಬೆಳಗೊಳದ ಮಠದೊಳಿರುವ ಚಂದ್ರನಾಥ ||     ೬

 

೨೫. ಜಿನನೆಬಾರೋಜಿನಚಂದ್ರನೇ

ಜಿನನೆ ಬಾರೋ ಜಿನಚಂದ್ರನೇ ಜಿನನೇ ಜಿನನೆ ಬಾರೋ ಜಿನಚಂದ್ರನೇ ಬಾರೋ
ಕನಕಚಂದ್ರಮುನಿಯ ಗುರುವೇ ಅನಂತನಾಥ ಬಾರೋ ||  ಪಲ್ಲವಿ

ಜ್ಞಾನಸಾಗರ ಚಂದ್ರನೇ ಮಾನಗರ್ವರಹಿತನೇ
ಜ್ಞಾನದಿಂದ ಮುಕ್ತಿಯೊಡಗೂಡಿದಪನೇ ಏನ ಹೇಳುವೆ
ಭಾನುಕೋಟಿ ತೇಜ ಅನಂತನಾಥ ಬಾರೋ ||                    ೧

ಅಷ್ಟಗುಣವ ಧರಿಸಿದವನೇ ಸೃಷ್ಟಿಗೊಡೆಯ ನಾಥನೇ
ಕಷ್ಟವಾದವೆಂಟುಗುಣವ ಬಿಟ್ಟವನೇ ನೆಟ್ಟನವನು
ದಿಟ್ಟಕಾಮವನ್ನು ಗೆಲಿದನಂತನಾಥ ಬಾರೋ ||                   ೨

ಅರೆಯ ಪಾತೆಯೊಳಗೆ ಮೆರೆವ ಪರಮಪುರುಷನಂತೆ ನಾಥ
ಧರೆಗೆ ಪೊಸತಾದ ಕನಕಚಂದ್ರಮುನಿಯ ಅರರೆ ಪಾಲಿಸಾ
ವರವನಿತ್ತು ಭವ್ಯರನ್ನು ಪೊರೆವೆ ಬಾರೋ ||             ೩

 

೨೬. ಭಜಿಸಿರೋಭವ್ಯರೆಲ್ಲ

ಭಜಿಸಿರೋ ಭವ್ಯರೆಲ್ಲ ಭವಹರನಾ || ಪಲ್ಲವಿ

ಮುಗುಳು ನಗೆಯು ಮುದ್ದು ಮುಖದಾತನ
ಮಗಮಗಿಸುವ ಪುರ್ಬು ನೊಸಲಿನಾತನ
ಜಗಕೆ ಮೋಹನ ರೂಪ ಮಲ್ಲಿನಾಥನ
ಮುಗುಳೆಂಬನ ಗೆಲಿದ ಮೋಹನ ದೇವನ ||             ೧

ಪದ್ಮಪೀಠದಲಿ ನೆಲಿಸಿದ ಜೀವನ
ಕೂಡೆ ಬದ್ಧ ಕರ್ಮಗಳ ಗೆಲಿದಾತನ
ಶುದ್ಧ ಸುವರ್ಣ ಸುಮನ ಬಾಣನ ನಮ್ಮ
ನುದ್ಧರಿಸುವ ಜಿನ ಶಾಸ್ತ್ರಪಾಲನ ||             ೨

ಭಂಗಭೂಪಾಲ ರಕ್ಷಿಪುದನಾ
ಹಿಂಗಿತ ಜನರೆಲ್ಲ ಮೋಹದೇವನ
ಶೃಂಗಾರಹಾರನುಳಿದಾತನ ನಮ್ಮ
ಭಂಗವಾಡಿಯ ಶಾಂತಿ ಜಿನರಾಜನ||          ೩

 

೨೭. ಕರುಣಿಸೆನ್ನನುಶಾಂತಿ

ಕರುಣಿಸೆನ್ನನು ಶಾಂತಿ ಜಿನನಾಥ ಬೇಗ
ಕರುಣಿವಿಲ್ಲದೆ ಮೋಹಾಸುರ ಎನ್ನ ಕೊಲ್ಲುವಾ || ಪಲ್ಲವಿ

ಮೂರು ಮೂಢವ ತುಳಿದೆ ಮೂರು ರನ್ನವ ತಳೆದೆ
ಮೂರಾರು ದೋಷಗಳ ಬೇರ ಹರಿದೆ
ಮೂರು ಮೂಢದಿ ಬಿರ್ದ್ದು ದೇವ ನಾ ಮರೆದೆ
ಮೂರಾರು ಭವದೊಳಗೆ ಸಲಹೆನ್ನ ತಂದೆ ||   ೧

ನಾಲ್ಕು ಗತಿಯನು ತಡೆದೆ ನಾಲ್ಕು ಪದವಿಯ ಪಡೆದೆ
ನಾಲ್ಕೇಶ ನಿಂ ಪೂಜೆ ತಳೆದು ನೀನಿರುವೆ
ನಾಲ್ಕು ಗತಿಯೊಳು ಸಿಲ್ಕಿ ತೊಳಲಿ ಬಳಲುತ ಬಂದೆ
ನಾಲ್ಕಾರು ಭವದೊಳಗೆ ಕಡೆ ಹಾಯೊ ಮುಂದೆ ||       ೨

ಪಂಚಾಸಂಸಾರವನು ಸಂಚಿನಿಂದಲಿ ಗೆಲಿದೆ
ಪಂಚಸ್ತಿಕಾಯಗಳ ಬೇಧವನು ತಿಳಿದೆ
ಪಂಚಸಂಸಾರವೆಂಬಗ್ನಿಯೊಳು ನಾ ಬಹು ಬೆಂದೆ
ಪಂಚಮ ಚಕ್ರಿ ಕಡೆಹಾಯೊ ಜಿನತಂದೆ ||      ೩

ಅರನಾಯತ ಸೇವೆ ಸಪ್ತ ವ್ಯಸನವ ಹರಿದೆ
ದೂರದಿಂ ಅಷ್ಟಮದಗಳನು ನೀ ಗೆಲಿದೆ
ದುರುಳತನದಲಿ ನಾ ಸಪ್ತವೆಸನದಲಿ ಸಿಲಿಕಿರುವೆ
ಸಾರಸಜ್ಜನ ಪ್ರಿಯನೆ ಸಲಹೆನ್ನ ಜಿನರಾಜ ||   ೪

ಕ್ಷಿತಿಯೊಳತಿಶಯವಾದ ಕಾನಪುರದೊಳಗೆಸೆವ
ಅತಿಶಯದೊಳಗೆಸೆದಿರುವ ಬಸದಿಯೊಳು ನೆಲೆಸಿ
ಮತಿಯಿತ್ತು ಭವ್ಯರಿಗೆ ಕೃಪೆಯಿಂದ ಸಲಹುತಿಹ
ಅತಿಶಯದ ಶಾಂತಿ ಜಿನ ನೀಯೆನ್ನ ಸಲಹೊ ||          ೫

 

೨೮. ಶ್ರೀನೆಯ್ಯೆನೆರಿಸುವ

ಶ್ರೀನೆಯ್ಯೆನೆರಿಸುವ ಬನ್ನಿರೊ ಶ್ರೀ ನೇಮಿ
ಜಿನರಿಗೆ ಶರಣು ಶರಣೆಂಬ ಮುತ್ತೈದೆಯರು ನೆಯ್ಯೆನೇರಿಸು ಬನ್ನಿರೋ ||   ಪಲ್ಲವಿ

ಹಸ್ತಿನಿ ಚಿತ್ತಿನೀ ಮತ್ತೆ ಶಂಕಿನಿ ದೇವ
ಉತ್ತಮಾಪದ್ಮಿನಿ ಭೂಮಿದೇವಿ
ರತ್ನದ ಹೊಂಬಟ್ಟಲೊಳೊಮ್ಮೆಣ್ಣೆ ತಕ್ಕೊಂಡು ||         ೧

ಇಂದು ಮುತ್ತೈದೆಯರು ಮಿಂದು ಮಜ್ಜನವಾಗಿ
ಗಂಧಕದಂಬವ ಮೈಯಸೂಸಿ
ಮಂದಾರಮಲ್ಲಿಗೆಯ ತಂದು ತುರುಬಿಗೆ ಸೂಡಿ ||       ೨

ಪದಕಮಣಿ ಚಿಂತಾಕುಪದ್ಮರಾಗದ ವಾಲೆ
ಒದಗಿದ ಮುತ್ತಿನ ಬೊಟ್ಟನಿಕ್ಕಿ
ಮಂದ ಗಜಗಮನೆಯರು ನಡುಸಣ್ಣ ಜಾಣೆಯರು ||     ೩

ನೆನಗಡಲೆ ತಂಬಿಟ್ಟು ಗೊನೆಯ ಬಾಳೆಯ ಹಣ್ಣು
ಶ್ರೀನೇಮಿಜಿನರಿಗೆ ಮೆನದಿ ಭಜಿಸಿ
ಕನ್ನೆಮುತ್ತೈದೆಯರ್ಗ್ಗೊಲಿದು ಬಾಗಿನವ ಕೊಟ್ಟು ||        ೪

ಗುರುಗುಂಜಿ ಬೆಟ್ಟದಲಿ ನವಿಲುಗಳು ನಲಿವಂತೆ
ಆ ಗರಿಕೆಯ ಕುಂಚ ಹಿಡಿದು
ಆಕಾಶ ಉಂಗುಷ್ಟದಿಂದಾಡಿದೆವು ಎಳ್ಳೆಣ್ಣೆ ತಕ್ಕೊಂಡು || ೫

 

೨೯. ಪೂಜಿಪೆನುನೇಮಿನಾಥನ

ಪೂಜಿಪೆನು ನೇಮಿನಾಥನ ಭವತಾಪ ಹರನ
ಪೂಜಿಪೆನು ನೇಮಿನಾಥನ ||         ಪಲ್ಲವಿ

ಜಲಗಂಧಾಕ್ಷತೆ ಪುಷ್ಪ ಸುಲಲಿತ ಮನದಿಂದ
ಜಲಜ ಸುತನ ಗೆಲ್ದ ಕಲಿವಾರಿ ಜಿನಪನ ||      ೧

ಪರಮಾನ್ನ ಪಾಯಸ ವರ ಭಕ್ಷ್ಯ ಸಹಿತದಲಿ
ಅರುಹನಿಗರ್ಚಿಸುವೆ ವರಮೋಕ್ಷಯಹುದೆಂದು ||        ೨

ದೀಪಧೂಪಗಳನ್ನು ಸುಪವಿತ್ರ ಮನದಿಂದ
ಸ್ವಫಲವಾಗಲಿಯೆಂದು ಪಾಪಹರಗರ್ಪಿಸುವೆ ||         ೩

ಕದಳಿ ಕರ್ಜೂರ ದ್ರಾಕ್ಷಿ ಫಲ ದಾಳಿಂಬ
ಮೃದುಫಲ ಅರ್ಚಿಸುವೆ ಮದನಾರಿ ಜಿನಪಗೆ || ೪

ಅರ್ಗ್ಗ್ಯಪಾದ್ಯಗಳಿಂದ ಜಗದತಿ ದೇವನಿಗೆ
ಸುಗಂಧಪುಷ್ಪಾಂಜಲಿಯ ಸೊಬಗಿಂದಲರ್ಚಿಸುವೆ ||    ೫

ಸುರನರೊರಗವಂದ್ಯ ಸುರಗಣಸೇವಿತಗೆ
ಹರುಷದಿಂದಲಿ ಶಾಂತಿದಾರೆಯನರ್ಚಿಸುವೇ ||         ೬

ಧರೆಯೊಳಗಧಿಕವಾದ ವರಚಂದ್ರಗಿರಿಯೊಳು
ಹರುಷದಿ ನೆಲಸಿಹ ವರನೇಮಿನಾಥನನು ಪೂಜಿಪೆ ||    ೭

 

೩೦. ಜಯಫಣಿಪತಿಪಣಿಸೂನು

ಜಯ ಫಣಿಪತಿ ಪಣಿಸೂನು ವಂದಿತ ಪಾದ
ಜಯನಾಥ ಪತಿನುತ ಚರಣ
ಜಯಮುನಿ ಜನವಂದಿತ ಕ್ರಮಕ್ರಮವಾನೆ
ಜಯಜಯ ಶ್ರೀ ನೇಮಿನಾಥ ||       ೧

ಜಯ ಗರ್ಭಾವತರಣ ಕಲ್ಯಾಣೇಶ
ಜಯಜಯಯೆಂದರಾದಿ ಮಸ್ತಕದೊಳು
ನಯವೆತ್ತ ಬಟ್ಟ ಪಾಲ್ಗಡಲ ನೀರನು ಮಿಂದೆ
ಜಯ ಜಯ ಶ್ರೀ ನೇಮಿನಾಥ ||      ೨

ಜಯ ಬ್ರೂಹದುರ್ಜಯಾಂತ ಗಿರಿಯರ್ನದೊಳು
ಜಯಸಿ ನಮಸ್ತು ಕರ್ಮವನು
ಜಯವೆನಲು ಸುರವಂದ್ಯ ಲೋಕಾಗ್ರಕೂಗೆದಿರ್ದ
ಜಯ ಜಯ ಶ್ರೀ ನೇಮಿನಾಥ ||      ೩

ಜಯಕವಿ ಮಂದರ ಜಯ ಮೇರು ಕವಿಧೀರ
ಜಯ ಜಯ ಶ್ರೀ ನೇಮಿನಾಥ ಎಂದಿಂತು
ಜಿನಪನ ಸ್ತುತಿಸಿ ವಸ್ತ್ರಾದಿಗಳಿಂದ
ಪೂಜಿಸಿ ಮುನಿಗಣವ ||     ೪