೧೧.ಮಾನಿನಿರನ್ನಳೆನೋಡೆ
ಮಾನಿನಿ ರನ್ನಳೆ ನೋಡೆ ಶ್ರೀ ನೇಮಿ
ಜಿನೇಶನನು ಕಾಮಿನಿಯ ದಶಗುಣ ಭಾವೆ ನೀ ನೋಡೆ || ಪಲ್ಲವಿ
ಶ್ರೀಮದಮರೇಂದ್ರ ವಂದ್ಯನ ಕೋಮಲಾಂಗಿ ನೋಡೆ
ಮುಕ್ತಿ ಭಾಮಿನಿಯ ದಶಗುಣದಾಮನ ನೋಡೆ
ತಾಮರಸ ನೇತ್ರನೋಡೆ ಸೋಮಾರ್ಕಕೋಟಿ ಪ್ರಕಾಶ
ದಾ ಮಹಿಮ ನೇಮಿಸ್ವಾಮಿಯ ಕಾಮಿನಿ ನೋಡೆ || ೧
ಶ್ರೀವಾರನ್ನೋಡೆ ಸರ್ವಜೀವ ಬಂಧುವನ್ನ ನೋಡೆ
ಪಾಲಿಸುವ ಜನರ ಪಾಲಿಪ ದೇವನ್ನ ನೋಡೆ
ಭಾವಜನ ಗೆಲ್ದನೋಡೆ ಪಾವನಮೂರ್ತಿಯ ನೋಡೆ
ತಿವಿದ ಸುಜ್ಞಾನಂಬುಧಿಯ ಭಾವ ನೀ ನೋಡೆ || ೨
ಸದ್ಧರ್ಮವನೆಯ್ದು ಜಗದೊಳು ಧರಿಸಿದನ್ನ ನೋಡೆ
ಶುದ್ಧ ಪರಂಜ್ಯೋತಿಯ ವಿದಗ್ದೆ ನೀ ನೋಡೆ
ಶ್ರದ್ಧೆಯಿಂದೆರಗಿಪಂ ಬದ್ಧಕರ್ಮಗಳನ್ನು
ದಗ್ಧ ಮಾಡುವ ದೇವನ ನೋಡೆ || ೩
೧೨.ಆದಿಜಿನೇಶ್ವರನಮೋ
ಆದಿ ಜಿನೇಶ್ವರ ನಮೋ ನಮೋ
ಶುದ್ಧ ಬೋಧದರ್ಶನ ಚಿನ್ಮಯಾಂಗ ನಮೋ ನಮೋ || ಪಲ್ಲವಿ
ಅಜಿತ ಜಿನೇಶ್ವರ ಗಜಲಾಂಛನ ನಮೋ
ವಿಜಿತ ಮದನ ಶಂಭವೇಶ ನಮೋ
ಗಜರಿಪುವಿಷ್ಟರ ಅಭಿನಂದನ ನಮೋ
ತ್ರಿಜಗವಂದಿತ ಸುಮತೀಶ ನಮೋ || ೧
ವಾರಿಜ ಪ್ರಭಜಿನ ಮಾರವಿಜಯ ನಮೋ
ಕಾರುಣ್ಯನಿಧಿ ಸುಪಾರೀಶ್ವ ನಮೋ
ತಾರಾದ್ರಿ ನಿಭ ದೇಹ ಚಂದ್ರನಾಥನೇ ನಮೋ
ಭೂರಿವೈರಿಭವ ಪುಷ್ಟದಂತ ನಮೋ || ೨
ಶೀತಳ ಜಿನಪತಿ ಭೂತಹಿತನೆ ನಮೋ
ಜಾತರೂಪನೇ ಶ್ರೇಯಾಂಶ ನಮೋ
ಪ್ರಾತಿಹಾರ್ಯ್ಯನ್ವಿತ ವಾಸುಪೂಜ್ಯನೇ ನಮೋ
ವೀತರಾಗನೆ ವಿಮಲೇಶ ನಮೋ || ೩
ಅಂತಕವಿಜಯ ಅನಂತಜಿನನೇ ನಮೋ
ಗ್ರಂಥರಹಿತಮರ್ಧನಾಥ ನಮೋ
ಶಾಂತಿ ಜಿನೇಶ್ವರ ಸದ್ಗುಣ ನಿಧಿ ನಮೋ
ಕಂತು ವಿಜಯ ಕುಂಥುನಾಥ ನಮೋ || ೪
ಅರಜಿನ ಪತಿಪರಮಾತ್ಮ ರೂಪನೇ ನಮೋ
ದುರಿತ ವಿಜಯ ಮಲ್ಲಿನಾಥ ನಮೋ
ಸುರನರವಂದಿತ ಮುನಿಸುವೃತ ನಮೋ
ವರಗುಣನಿಧಿ ನೇಮಿಸ್ವಾಮಿ ನಮೋ || ೫
ನೇಮಿ ಜಿನೇಶ್ವರ ಕಾಮಿತಾರ್ಥನೇ ನಮೋ
ಸ್ವಾಮಿ ಪಾರೀಶ್ವ ಜಿನೇಶ ನಮೋ
ಸೋಮರ್ಕೋಟಿ ಪ್ರಕಾಶ ಸಾಸಿರದಷ್ಟ
ಕೊಡೆಯ ವೀರನಾಥ ನಮೋ || ೬
ಅರ್ಹಸಂತತಿ ನಮೋ ಸಿದ್ಧನಿಕರ ನಮೋ
ನಿರುತಮಾಚಾರ್ಯ್ಯರಾ ಗಣವೇ ನಮೋ
ಪರಮ ಧರ್ಮೋಪದೇಶಕ ಸಂಘವೇ ನಮೋ
ವರ ಸರ್ವಸಾಧು ಸಮೂಹವೇ ನಮೋ || ೭
೧೩. ವೃಷಭಜಿನೇಶನೇ
ವೃಷಭ ಜಿನೇಶನೇ ಸುಷುಮ ಶರೀರನೆ
ಕುಸುಮ ಬಾಣನ ಗೆಲಿದವನೆ
ವಿಷಮ ಭವಾಂಬುಧಿಯನು ದಾಂಟಿರುವನೇ
ಅಸಮಾನನು ನೀನೇ || ೧
ಪೂಜಿನ ಸಂತತಿಯ ತ್ಯಜಿಸಿರುವವನೇ
x x x x x x x x x x
ಅಜಿತ ಜಿನೇಶನ ಭಿಜಿಸುವವರ ಮನು
ಭಜಕರ ಸಲಹುವವನೇ || ೨
ಶಂಭವ ಜಿನಪನೇ ನಂಬಿದೆ ದುರಿತ ವಿ
ಡಂಬಿಪನಘ ನೀನೇ
ತುಂಬಿದ ಸಿರಿಯೊಳಗಿಂಬುದೋರಿಪನೇ
ಸಂಭ್ರಮದೊಳಗಿಹನೇ || ೩
ಅಭಿನಂದನ ಜಿನಶುಭ ಪರಿಣಮಣಿ
ವಿಭುದಾರ್ಚಿತ ಪದನೇ
ಕುಭವದಿ ಪುಟ್ಟುತ ನೊಂದೆನು ದೇವನೇ
ವಿಭವದೊಳ್ಪಟ್ಟವನೇ || ೪
ಸುಮತಿನಾಥ ಜಿನ ಕುಮತವ ಖಂಡಿಸಿ
ದಮಲಜ್ಞಾನ ನೀನೇ
ಕಮಲನಾಭನ ಬಾರ್ಮುಖವನು
ವಿಮುಖ ಮಾಡಿದವನೇ || ೫
ಪದ್ಮಪೀಠ ಪದಪದ್ಮ ವಿರಾಜನೇ
ಪದ್ಮಪ್ರಭ ಜಿನನೇ
ಬದ್ಧ ಕರ್ಮವ ಭೇದಿಸಿ ಕಳೆದನೇ
ಶುದ್ಧ ಭಾವದನೇ || ೬
ವಿಮಳ ತೇಜೋಮಯ ಸುಪಾರೀಶ್ವರನೇ
ಅಪವರ್ಗದೊಳಿಹನೆ ಕು
ಸುಮ ಬಾಣನ ಸಂಶ್ರುತಿಯ ಬೈಧಿಸದನೇ
ಜಪಿಸುವೆನಾವನೇ || ೭
ಚಂದ್ರಲಾಂಛನನೇ ಚಂದ್ರ ಜಿನೇಶನೇ
ಇಂದ್ರನಿಲ ತೇಜನೇ
ಮಂದರಾದ್ರಿಯೊಳು ಮಿಂದ ಸುರಾಸುರ
ವೃಂದಪೂಜ್ಯ ಮಹಿಮನೇ || ೮
ಪುಷ್ಪದಂತ ಜಿನರಾಜನೇ ಜಗತು
ತ್ಕೃಷ್ಟನಾಗಿ ಶ್ರುತಿಹನೇ
ದುಷ್ಟ ಭವಾಂಬುಧಿ ತಡಿಗೈಸು ದಯ
ವಿಟ್ಟು ಪಾಲಿಸರುಹನೇ || ೯
ಘಾತಿ ಅಘಾತಿಯ ಘಾತಿಸಿದಾತಗೆ
ಜಾತರೂಪಧರನೇ
ಭೂತ ದಯಾದೊಳತಿ ಪ್ರೀತಿಯುಳ್ಳವನೇ
ಶೀತಳ ಜಿನವರನೇ || ೧೦
ಶ್ರೇಯಾಂಸ ಪದವಸುಗತಿಗೆ ತೋರುವ
ಶ್ರೇಯಾಂಸನು ನೀನೇ
ಮಾಯಾಮೋಹ ಮಾತ್ಸರ್ಯಗಳನು
ಜಯಸಿರುತಹನೇ || ೧೧
ವಸುಮತಿಯೊಳು ಜಸಪಸ
ರಿಸಿ ಮುಕ್ತಿಯ ವಚನಗೈದಿರುವವನೇ
ವಾಸುಪೂಜ್ಯ ಜಿನನೇ ವಿಷಯವ ಕಳೆದ
ಅಸಮಬಲನು ನೀನೇ || ೧೨
ಅಮಲದೀಪ್ತಿಮಯ ವಿಪುಲ ಜಿನೇಶನೇ
ಕಮಲ ಪೀಠದವನೇ
ನಮಿಸುವ ಭವ್ಯರ ಶ್ರಮವ ಹರಿಸುವವನೇ
ಮಮ ಹೃದಯದೊಳಿಹನೇ || ೧೩
ಘನಸಂಪತ್ತಿಯ ವಿನಯದಿಂದ ಕೊಡುವನ
ಘನನಂತ ಜಿನನೇ
ಮನದಿ ಧ್ಯಾನಿಸುವ ಚಿನುಮಯ ರೂಪನೇ
ಮುನಿಜನನತಪದನೇ || ೧೪
೧೪.ಅಮರವಂದಿತನಾದ
ಅಮರವಂದಿತನಾದ ಸುಮತಿ ಶ್ರೀ ಜಿನಪತಿಗೆ
ಅಮಿತಗುಣಿ ಶ್ರೀ ಪದ್ಮಪ್ರಭೇಶ್ವರನಿಗೆ
ಸುಮನ ಸಾರಾಧ್ಯ ಸುಪಾರ್ಶ್ವ ಜಿನಪತಿಗೆ
ಮಮಟವನಾದ ಶ್ರೀ ಚಂದ್ರ ಜಿನನಿಗೆ || ೧
ಪುಷ್ಪನಾಯಕ ವಿಜಯ ಪುಷ್ಪದಂತೇಶ್ವರಗೆ
ನಿಷ್ಟನ್ನ ಹೃದಯ ಶೀತಳ ಜಿನನಿಗೆ
ಒಪ್ಪುತಿಹ ಶ್ರೇಯಾಂಸು ವಾಸುಪೂಜೇಶ್ವರಗೆ
ದರ್ಪಕಾಲಾತಿ ಶ್ರೀ ವಿಮಲ ಜಿನಗೆ || ೨
ಅಂತಕಾಂತಕನೆನಿಪನಂತ ಶ್ರೀ ನಿಜಪತಿಗೆ
ಕಂತುಮದಹರ ಧರ್ಮಶಾಂತಿ ಜಿನಗೆ
ಕುಂಥು ಅರಮಲ್ಲಿಮುನಿ ಸುವ್ರತಗೆ
ಚಿಂತಿತಾರ್ಥವನೀವ ನೇಮಿ ಜಿನಗೆ || ೩
ಪರಮ ಪಾರ್ಶ್ವ ಜಿನಮಹತಿ ಮಹಾವೀರನಿಗೆ
ಧರೆಗೆ ಬೆಳ್ಗೊಳದ ಭಂಡಾರಿ ಗ್ರಹದ
ಹರಿಪೀಠದೊಳು ನೆಲಸಿ ಪಂಡಿತಾರ್ಯರಿಗೆ
ನಿರುತ ಸುಖವೀವ ಚತುರ್ವಿಂಶತಿ ಜಿನರ್ಗ್ಗೆ || ೪
೧೫. ಶ್ರೀಜಗತ್ರಯಭವ್ಯಸಂಚಯ
ಶ್ರೀಜಗತ್ರಯ ಭವ್ಯಸಂಚಯ ಪೂಜಿಪ
ಶ್ರೀ ಚಾ x x x x x x x x ಜಿನರಂ
ರಾಜರೆಮಗೊಲಿದು ಸುಖಮಯದ ಅ x x x x ಪದವಿಯನು || ಪಲ್ಲವಿ
ಪುರುಜಿನೇಶ್ವರ ನಿಮ್ಮ ಕಮಲ
ಚರಣಸರಸಿಜ ಯುಗಮ ನಿಮ್ಮಯ
ಸರಸ ಮಾನಸು ಮಧ್ಯ
ವರ್ತಿಯ ಮಾಡು ನಾಭಿಯನು
ಪರಮಗುಣನಿಧಿ ಅಜಿತ ಜಿ
ವರ ನಿರಘ ಶಂಭವ
ಭೂತ್ರಯಾಟಿ ತಾ ಪಿರಿದು ಕೃಪೆಯಿಂ
ಪಾಲಿಸೆಮಗಭಿನಂದನ ಜಿನೇಂದ್ರಾ || ೧
ಕೂಮತವನ ತರುದಾವ ಪಾವಕ
ಸುಮತಿ ವಲ್ಲಭ ಶಂಕರ
ಕಮಲಲೋಚನ ಪದ್ಮಲಾಂಛನ ಪದ್ಮಾವತಿ ಜಿನಪ
ಅಮರಪತಿನುತ ಪದವಿ ಪಾರಿಶ್ವ
ಭ್ರಮರ ಸನ್ನಿಭ ಕುಜಲ ಕುಂತಳ
ಕಮಲಪಾವನ ಚಂದ್ರ ಜಿನಪತಿ ನೀವು ಶರಣೆಮಗೆ || ೨
ಅವನತಾಪುರ ಮಕುಟ ಮಣಿರುಚಿ
ನಿವಹ ಚುಂಬಿತ ಚಾರು ಪದಯುಗ
ಸುವಿಧಿ ಸೀತಳ ಮಹಾಶ್ರೇಯಾಂಸು ವಾಸುಪೂಜ್ಯರನು
ವಿಮಳ ನಿಪುಣಾನಂತ ಜಿನರಂ
ಭವನ ಪತಿಯಂ ಧರ್ಮಾದವ
x x ವ ಭಯೋರ್ಜಿತ ಶಾಂತಿ ಕುಂತು ಮಲ್ಲಿಮುನಿ ಸುವ್ರತ || ೩
ಕನಕಗಿರಿ ಸಮಧೀರನಮಿಯಂ
ವನದೇವಿ ಜಯಪ x x x x ಮಿಯ
ಧನುಜಪತಿ ನುತ ಪಾರಿಶ್ವನಾಥನು ವೀರಜಿನಪತಿಯ
ಕನಕಭಾಜನದಲ್ಲಿ ರತ್ನದ
ಘನನಿವಾಳಿಯನೆತ್ತಿ ಪೂಜಿಸಿ
ವಿಜಯ ಪೂರ್ವಕದಿಂದ ವಂದಿಸಿ ಮೂರು ಸಂಧಿಯಲಿ || ೪
ನಳಿನ ವದನದ ಕುಲಿಶದಂತದ
ನಳನಳಿಪ ನಳಿತೋಳ ಜಘನದ
ಲಲಿತ ಪರಿಮಳ ಕಲಿತ ಕಾಯದ ಲಾವಣ್ಯ ರಸದ
ಸುಳಿದ ಗುಳಿಯಂತೆಸೆವ ನಾಭಿಯ
ಚೆಲುವಿನಾಲಯದಖಿಲ ಜಿನರು
ಗಳೊಲಿದ ಮಹಾಕಲ್ಯಾಣಕೀರ್ತಿ ಪದವಿಯನು || ೫
ಅಸಿಯನ x x x ನ ದೆಸೆವ ಶಂಕರಿ
ವಸುಧೆಯೊಳಗಣ ರಂಗಮಂಟ
ಪ ಸರಸಿಯೊಳೊಪ್ಪುವ ಪಂಚವರ್ಣದ ರಂಗವಲಿಯಿಕ್ಕಿ
ಮಿಸುಪ ಜನರಂ ನುಡಿಸಿ ನಿಚ್ಚಂ
ಕುಸುಮ ಶರಹರ ಮುನಿಯ ಸೇವೆಯ
ನುಸಿದು ಮಾಳ್ಪಳು ಭಕ್ತಿಭರದಿಂ ಪೂವಲಿಯ ಸೂಸಿ || ೬
ಕೋವಿದಮರ ನಾಗವಂದಿತ
ಪಿವರಾದ್ಭೂತ ಕರ್ಮಕಾನನ
ದಾವ ಪಾವಕ ನಿತ್ಯನಿರ್ಮಲ ಭವ್ಯ ಜನ ಬಂದು
ಕೋವಲಾಮಲ ಮುಕ್ತಿವಲ್ಲಭ
ದೇವ ಜಿಯಾ ಜಿಯಾ ಭೂತ್ರಯಾಧಿಪ
ಪಾವನ ಮ x x x x x x ಕಾರಣ ಪಾಹಿ ಗುಣಸಿಂಧು || ೭
ನಳಿನ x x x x x ಜಿನರ ನುತಿಸಿ
ಒಲಿದು ವಜ್ರದ ಪಡಿಗಳೆರಗಿ
ಬಲದ ಕರದಿಂ ಮುಟ್ಟಿದಾಗಳೆ ಕೀಲುಚ್ಚಿ ತೆರೆಯೇ
ತೊಳಗಿ ಬೆಳಗುವ ಬಿಂಬಶತಮಂ
ಹಲವು ಪರಿಯಲಿ ನುತಿಸಿ ವಂದಿಸಿ
x x x x x x x x x x x x ಕೃತಕೃತ್ಯನಾದನು || ೮
ಆಗಳೆ ಜಿನ ಭವನಪಾಲಕ
ನಾಗದತ್ತನು ದತ್ತಚಿತ್ತನು
ರಾಗರಸದಿಂ ನಮಿಸಿಧೀರನು x x x x x x ನಿಂತೆಂದು
ಶ್ರೀ ಗುಣೋಜ್ವಲ ಭಕ್ತ ಬರ x x x
x x x x x ಜಿನಗ್ರಹದ ಪಡಿಗಳು
ಬೇಗದಿಂದಲಿ ತೆರೆದ ಸುಕೃತದ ಫಲವನು ಕೇಳೈ || ೯
೧೬. ದೇವ ಪಾಲಿಸು ಎನ್ನ
ದೇವ ಪಾಲಿಸು ಎನ್ನ ಪಾರಿಶ್ವನಾಥ
ಭವತಾಪದೊಳು ನಾನು ತೊಳಲುವೆನಯ್ಯ || ಪಲ್ಲವಿ
ಮೂರು ಮೂಢವ ಗೆಲ್ದು ಮೂರು ರತ್ನವ ಸೆಳೆದು
ಮೂರಾರು ದೋಷದ ಬೇರನು ಹರಿದು
ಮೂರು ಮೂಢದಿ ನಾನು ತೊಳಲುತಲಿರುವೆನು
ಮಾರಮರ್ದನ ಬಂದು ಸಲಹೊ ನೀನಿಂದು || ೧
ನಾಲ್ಕು ಗತಿಯ ಗೆಲಿದೆ ನಾಲ್ಕು ಪದವಿಯ ಪಡೆದೆ
ನಾಲ್ಕೇಶನಾಗನಿಂ ಪೂಜೆ ತೆಗೆದಿರುವೆ
ನಾಲ್ಕು ಗತಿಗೆ ಸಿಲ್ಕಿ ನಿನ್ನ ನಾ ಮರೆದೆ
ನಾಲ್ಕರದಿಂದೆನ್ನ ಸಲಹೊ ಜಿನತಂದೆ || ೨
ಪಂಚಸಂಸಾರವ ಸಂಚಿನಿಂ ಗೆಲಿದೆ
ಪಂಚಾಸ್ತಿಕಾಯದ ಭೇದವ ತಿಳಿದೆ
ಪಂಚಬಾಣನ ಬಾಧೆಯೊಳು ನಾ ಸಿಲ್ಕಿದೆ
ಪಂಚತ್ವಹರಿಸೆನ್ನ ಸಲಹೊ ನೀ ಮುಂದೆ || ೩
ಹತ್ತೆಂಟು ದೋಷವ ಹತಮಾಡಿ ಇರುವೆ ನೀ
ಜ್ಯೋತಿ ರೂಪನು ತಾಳಿ ಮುಕ್ತಿಯೊಳಿರುವೆ
ಹತ್ತೆಂಟು ದೋಷದಿ ಸಿಲುಕಿ ನಾನಿರುವೆ
ಮತಿಯಿತ್ತು ಎನ್ನನು ಸಲಹೊ ನೀ ಬಿಡದೆ || ೪
ಕಮಠೊಪ ಸ್ವರ್ಗವ ಜಯಿಸಿದ ದೇವನೆ
ಕಮಲನಾಭನ ಹಮ್ಮು ಮುರಿದವ ನೀನೆ
ಕಮಲ ಪದ್ಮಾಸನಕೆ ರತ್ನ ಖಚಿತ ನೀನೆ
ಕಮನಿಯ ಶ್ರೀ ಮುಕ್ತಿ ಲಕ್ಷ್ಮಿಯರಸನೇ || ೫
ಉರಗಲೋಕಕೆ ಕರ್ತೃ ಧರಣೇಂದ್ರನೊಡೆಯನೆ
ಅರಸಿ ಪದ್ಮಾವತಿದೇವಿ ಸೇವಾಲಂಕೃತನೇ
ಸುರನರವಂದಿತ ಚರಣ ಸಂಪದನೆ
ಸ್ಥಿರದಿಂದ ಭವ್ಯರ ಸಲಹೊ ಜಿನಪನೆ || ೬
ಕ್ಷಿತಿಯೊಳುನ್ನತವಾದ ಬೆಳ್ಗೊಳದೊಳಗಿಹ
ಅತಿಶಯ ಶ್ರೀಚಂದ್ರಗಿರಿಯೊಳಿಪ್ಪವನೆ
ಯತಿ ಪಂಡಿತಾರ್ಯರ ರಕ್ಷಿಪ ದೇವನೆ
ಮತಿಯಿತ್ತು ಸಲಹಯ್ಯ ಪಾರಿಶ್ವ ಜಿನನೆ || ೭
೧೭. ಪುಷ್ಪಕ್ಹೋಗುವಬನ್ನಿ
ಉದಯ ರಾಗ
ಪುಷ್ಪಕ್ಹೋಗುವ ಬನ್ನಿ ಸತ್ಯಶ್ರಾವಕರೆಲ್ಲ
ತಪ್ಪದೆ ಜಿನಂಗರ್ಚಿಸುವ ಬನ್ನಿ || ಪಲ್ಲವಿ
ಅರಳಿದಾ ತಾವರೆ ಮುಳುಗು ಹೊಂಗೇದಿಗೆ
ಇರುವಂತಿಗೆ ಜಾಜಿ ಶಾವಂತಿಗೆ
ಪರಿಮಳವುಳ್ಳಂಥ ಪಾರಿಜಾತದ ಪುಷ್ಪ
ಅರುಹನ ಚರಣಗರ್ಚಿಸುವ ಬನ್ನಿ || ೧
ಮರುಗಮಲ್ಲಿಗೆ ಜಾಜಿ ಸುರಗಿ
ಶಾವಂತಿಗೆ ಥಳಥಳಿಸುವ ಗಿಳಿ ಅಕ್ಷತೆಯು
ಪುಲ್ಲಾಶರನ ಗೆಲಿದ ಆದಿ ಜಿನೇಶನೆ
ಮಲ್ಲಿಗೆ ಅರಳ ಅರ್ಚಿಸುವ ಬನ್ನಿ || ೨
ಬಂದಾರು ಮುದದಿಂದ ಇಂದುವದನೆಯರು
ಚಂದದಿಂದಾರತಿಗಳ ಹಿಡಿದು
ಮಂದರಾಗಿರಿಯಲ್ಲಿ ನಿಂದರು ಸುರರೆಲ್ಲ
ಬಂದು ಹೊಕ್ಕರು ಜಿನಮಂದಿರವ || ೩
ತಪ್ಪದೆ ಬಲಗೊಳಿವಪ್ಪವುಳ್ಳವರೆಲ್ಲ
ಇಪ್ಪತ್ತನಾಲ್ವರ ತೀರ್ಥಂಕರ
ಸರ್ಪನಾ ಹೆಡೆಗಳಿಗಿಪ್ಪ ಜಿನೇಶನೇ ಎತ್ತುವೆ
ಕರ್ಪುರದಾರತಿಯು || ೪
ಭೂತಳದೊಳಗುಳ್ಳ ವೀತರಾಗನೆ ದೇವ
ಖ್ಯಾತಿವಡೆದ ಮರಣಾತಕಿನ್ನು
ವೀತನಲ್ಲದೆ ವರದೇವರು ನಮಗಿಲ್ಲ
ಲೇಸಾಗಿ ಸಲಹು ಶ್ರೀ ಆದಿಜಿನೇಶ || ೫
೧೮. ತೋರಿಸೊದೇವಾ
ತೋರಿಸೊ ದೇವಾ ತೋರಿಸೊ ಭವ
ವಾರಿಧಿಯೊಳು ಕಷ್ಟಪಡುತ್ತಿದ್ದೆನಯ್ಯ || ಪಲ್ಲವಿ
ತಾಯಿತಂದೆಯ ಬಸಿರಲ್ಲಿ ಹುಟ್ಟಿದೆಯೆನ್ನ
ಕಾಯಕೆ ವರಸುಖ ಕೊಡಲಿಲ್ಲವೊ
ಪ್ರಾಯ ಕಂಡೆನಗೊಂದು ಹೆಣ್ಣಕೊರಳಿಗೆ ಕಟ್ಟಿ
ಮಾಯದ ಸಂಕೋಲೆ ಹಾಕಿದರಯ್ಯ || ೧
ಸಿಲ್ಕಿ ಸಂಸಾರ ಸಮುದ್ರದೊಳಗೆ ನಾನು
ಲೆಕ್ಕವಿಲ್ಲದೆ ದುಃಖಬಡುತಿರಲು
ಮಕ್ಕಳೆಂಬ ಬೆಜ್ಜ ಮೈಮೇಲೆ ಬೀಳಲು
ಕಕ್ಕಸವಾಯಿತು ಸೈರಿಸಲಾರೆ || ೨
ತಂದೆತಾಯಿಯು ಸತಿಸುತರು ಬಂಧುಗಳೆಲ್ಲ
ಮುಂದಣಗತಿಯನು ಕೆಡಿಸುವರಲ್ಲದ
ಳಂದದಿ ಸುಖವಿವರೊಬ್ಬರ ಕಾಣದೆ
ಬಂದೆವೊ ನಿಮ್ಮ ಪಾದಬ್ಜದ ಬಳಿಗೆ || ೩
ಹಂಗಿಲ್ಲದವ ಬಂದು ಲಿಂಗದೊಳು ಸೇರಲು
ಕಂಗಳು ಹೊಕ್ಕವು ಕುಚಗಿರಿಯೂ
ಮುಂಗಾಣದೆ ಮನಮೈಯೊಳು ಬೀಳಲು
ಹಿಂಗಿಪರಿಲ್ಲದೆ ಮುಳುಗಿದೆನಯ್ಯ || ೪
ರಾಗದಿಂ ಭಜಕರ್ಗ್ಗೆ ಸೌಖ್ಯದಾಯಕನೆಂದು
ಕೂಗುತ ಆಗಮ ಸಿದ್ಧಾಂತವು
ಭೋಗದಿ ಸಲಹೆನ್ನ ಸ್ಥಿರಸುಖವನು ಕೊಟ್ಟು
ಬೆಳ್ಗುಳಪುರದ ಶ್ರೀ ಆದಿ ಜಿನೇಂದ್ರಾ || ೫
೧೯. ಪಾಲಿಸೆನ್ನಪರಮದೇವ
ಪಾಲಿಸೆನ್ನ ಪರಮದೇವ ಸುರನರೇಂದ್ರ
ಯಾಲವಂದ್ಯಮನುಭಾವಾ
ಪಾಲಿಪಂತೆ ನೀನು ಎನ್ನ ಮೇಲೆ
ಪೂರ್ಣಪ್ರೀತಿಯಿಟ್ಟು || ಪಲ್ಲವಿ
ಕಾಲವಿಜಯ ನಿನ್ನ ನಾನು ಅರಿಯದೆನ್ನ
ನಾಲಿಗಿದ್ದು ಸ್ವಾರ್ಥವೇನು
ಬಾಲತನದಿ ಚರಿಸುತಿರುವ
ಕಾಲಕೆನಗೆ ತಿಳಿಯಲಿಲ್ಲ
ಮೇಲೆ ಬುದ್ದಿಗಲಿತು ನಿನ್ನ ಪಾದಕೆರಗಿ
ಸ್ಮರಿಸುತಿಹೆನು || ೧
ಕರುಣ ದೃಷ್ಟಿಯಿಂದ ನೋಡಿ ಮೋಕ್ಷವನ್ನು
ಶರಣು ತೋರಿ ಕೃಪೆಯ ಮಾಡಿ
ತರುಣಿ ಸೋಮಕೋಟಿ ಕಿರಣ
ಚರಣನಭವಿರಾಜಿತೆನ್ನ ಜನನ
ಮರಣ ಹರಣ ಮಾಡು ಕರುಣನಿಧಿಯೇ
ಶರಣು ಶರಣು || ೨
ಪರಮಭವ್ಯ ಕುಮುದವಿಂದು ಮುನ್ನ
ನರಿಯದೆ ದೊಡ್ಡ ದೇವನೆಂದು
ಅರಿದೆ ಇಂದು ಮೂರು ಲೋಕದೊಡೆಯ ಸಲಹೆನ್ನ
ಧರೆಯೊಳಧಿಕ ಬೆಳ್ಗುಳದಿ
ಪುರದೊಳೆಸೆವ ಆದಿನಾಥ || ೩
೨೦. ಸಾಕಿನ್ನುಸಂಸಾರ
ಸಾಕಿನ್ನು ಸಂಸಾರ ನಾನುನೊಲ್ಲೆನು ನಾನು
ಚಂದ್ರನಾಥನ ಪರಾಕು ಮಾಡದೆ ಎನ್ನ
ಸಂಶಯ ಬಿಡಿಸಯ್ಯ ಚಂದ್ರನಾಥ || ಪಲ್ಲವಿ
ಕರ್ಮರಾಜನೆಂಬ ಕಾಳೋರಗ ಸರ್ಪ ಚಂದ್ರನಾಥ
ದೊಡ್ಡ ವರ್ಮದಿಂದಾತನಟ್ಟುತ ಬರುತಾನೆ ಚಂದ್ರನಾಥ || ೧
ಧರ್ಮವೆನಿಪ ಕೋಟಿಯ ಮರೆಗೊಂಡೆನು ಚಂದ್ರನಾಥ
ನಿಮ್ಮ ಸನ್ಮಾರ್ಗವ ಕಾಣದೆ ಸಿಕ್ಕಿದೆ ನಾನು ಚಂದ್ರನಾಥ || ೨
ಕಷ್ಟಕಾಲಕೆ ಕೆಟ್ಟ ದೇಹದೊಳು ಹೊರಳುವೆ ಚಂದ್ರನಾಥ
ಬಹುದುಷ್ಟಯಮನ ಬಾಧೆಗೆ ಸಿಕ್ಕಿದೆ ನಾನು ಚಂದ್ರನಾಥ || ೩
ಮೆಟ್ಟನೆ ಮುಕ್ತಿಯ ಮೆಟ್ಟಿನೊಳಗೆ ನಾನು ಚಂದ್ರನಾಥ
ನಿಮ್ಮ ಮುಟ್ಟಿ ಪೂಜಿಪ ಪುಣ್ಯ ಎಂದಿಗೆ ಪಡೆದೆನೋ ಚಂದ್ರನಾಥ || ೪
ಆದಿಕಾಲದಿ ನಿನ್ನ ಪದವ ಕಾಣದೆ ಚಂದ್ರನಾಥ
ಇಳೆಯೊಳಗಜ್ಞಾನದಿ ತೊಳಲಿದೆ ಚಂದ್ರನಾಥ || ೫
ಮೇದಿನಿಗತಿಶಯ ವೇಣುಪುರದಲ್ಲಿ ಚಂದ್ರನಾಥ
ನಿಮ್ಮ ಪಾದವ ಕಂಡೆನು ಸಲಹೋ ಚಂದ್ರನಾಥ || ೬
Leave A Comment