೪೧. ಎಷ್ಟುದೂರಬೆಳಗುಳವೆಂದೆ
ರಾಗ: ಬಿಲಹರಿ
ಎಷ್ಟುದೂರ ಬೆಳಗುಳವೆಂದೆ
ಇಷ್ಟರಲ್ಲಿ ಕಾಣುತ ಬಂದೆ
ಮುಟ್ಟಿ ಜಿನರ ಪಾದವ ಕಂಡೆ || ಪಲ್ಲವಿ
ಶೃಂಗಾರದ ವನವ ಕಂಡೆ
ಭೃಂಗಿಗಳ ಝೇಂಕಾರವ ಕಂಡೆ
ಅಂಗಚಾರಿಯ ಭವನವ ಕಂಡೆ || ೧
ಸಮವಸರಣಾರ ಕಂಡೆ
ಅಮರ ದಿಕ್ಪಾಲಕರ ಕಂಡೆ
ಕಮಲ ಪೀಠವನು ಕಂಡೆ
ವಿಮಲ ಮುನೀಶ್ವರರ ಕಂಡೆ || ೨
ಆದಿಚಕ್ರಿ ಅನುಜನಂತೆ
ಕಾದಿ ಅಣ್ಣನೊಳಗೆ ಗೆಲಿದನಂತೆ
ಸಾಧಿಸಿ ಕಪ್ಪಗೈದನಂತೆ
ಆದಿ ಮೂರುತಿ ಕಂಡನಂತೆ || ೩
ಸತಿಸುತರನ್ನು ಬಿಟ್ಟು
ಯತಿಯಾಕಾಂಕ್ಷೆಯನು ತೊಟ್ಟು
ಗತಿ ಸಾಧಿಸುವುದ ಪಟ್ಟು
ಕ್ಷಿತಿಯೊಳು ಕಷ್ಟಪಟ್ಟು || ೪
ಒತ್ತಿ ಒದರಿ ಹಾರಿತು ಮೇಲೆ
ನೆತ್ತಿಯಲಿ ತಪದಾ ಜ್ವಾಲೆ
ಹೊತ್ತು ಕಡೆಗೆ ಹೊರಸಿಕೊಂಡು
ಸುತ್ತಿಕೈಯೊಳಾಗೀಗಿರಿಯಾ ಎಷ್ಟು || ೫
ಜ್ಯೋತಿಯಂತೆ ಪ್ರಭೆಯದಾತ್ಮ
ಪೂತಿಕರವ ಕಡಿಸಿ ಮಹಾತ್ಮ
ಭೂತದೊಳು ನಿಂದು ಮಹಾತ್ಮ
ಖ್ಯಾತಿಯೊಡೆದ ಪುಣ್ಯಾತ್ಮ ಮಹಾತ್ಮ || ೬
ಮೈಯೆಲ್ಲ ಹಬ್ಬಿದವಂತೆ
ಮಂಡೆ ಕರುಳಿನ ಯೋಗದ ಚಿಂತೆ
ಸ್ವಾಮಿ ನೆಲಸಿದ ಬೆಳ್ಗೊಳವಂತೆ || ೭
ಸುತ್ತ ಬಳಸಿದ ಎಪ್ಪತ್ತು
ರತ್ನ ಖಚಿತ ಬಿಂಬಗಳಿಂದ
ನಿತ್ಯ ವೈಭವ ಲೋಕಹದಿಂದ
ಸ್ವಾಮಿಗೊಪ್ಪಿತು ಅತಿ ಚೆಲುವಿಂದ || ೮
ಭಕ್ತರ ಸಲಹೈದೇವಾ
ಮುಕ್ತಿ ಮಾರ್ಗವ ಕೊಡುವ ಭಾವ
ಕರ್ತೃ ನೀನಲ್ಲದಿನ್ನಾರು ದೇವ
ಸಾರ್ಥಕವಾಯಿತು ನಿಮ್ಮ ನೋಡಿದೊಡಾತ್ಮ || ೯
ದಕ್ಷಿಣಕ್ಕೆ ಕಾಶಿಯಂತೆ
ಲಕ್ಷ್ಮಿ ನೆಲಸಿದ ಬೆಳಗುಳವಂತೆ
ಇಕ್ಷುಚಾಪನ ಗೆದ್ದನಂತೆ
ಮೋಕ್ಷಗಾಮಿ ಗೊಮಟೇಶನಂತೆ || ೧೦
ಕಂಡೆಕಂಡೆ ಕಂಡೆನಿಂದೆ
ಮಂಡಲೇಶನ ಪಾದವಕಂಡೆ
ಕಂಡು ನಿಂದೆ ಕರವ ಮುಗಿದೆ
ಸ್ವಾಮಿ ನೆಲಸಿದ ಬೆಳಗುಳವಂದೇ || ೧೧
ದೇಶಿಗಣದ ಚಾರುಕೀರ್ತಿ
ಭಾಸುರಪಂಡಿತ ಮೂರ್ತಿ
ದೇಶದೊಳು ನಿಮ್ಮ ಕೀರ್ತಿ
ಲೇಸಾಗಿಪರ್ಚಿಸುವ ಮೂರ್ತಿ || ೧೨
ಧರೆಯೊಳಗೆ ಬೆಳ್ಗೊಳ ಪುಟ್ಟಿ
ಮಕ್ಕಳೊದಿಸುವ ಮಠವು ಸ್ವಾಮಿ
ಭಕ್ತಚಂದ್ರಯ್ಯ ಮಾಡಿದ ಪದವು
ಅಕ್ಕರಿಂ ಕೇಳಿರೋ ಜನರು || ೧೩
೪೨. ಭಾವಿಸಿಗುಮ್ಮಟಜಿನಪತಿ
ಭಾವಿಸಿ ಗುಮ್ಮಟ ಜಿನಪತಿಯಾ
ಜೀವನೆ ಪಡೆವಡಿಸಿದತಿಯಾ || ಪಲ್ಲವಿ
ಪುರಹರಿತಾರ್ಚಿತ ಪದಯುಗನಾ
ಭರತಚಕ್ರಿಗೆ ಚಕ್ರಪದವಿತ್ತನಾ
ಕರಕರ ಕೋಟಿ ತನು ಪ್ರಭನಾ || ೧
ಕಾವನ ಕಬ್ಬುವಿಲ್ಲವ ನೇಯ್ದ
ಪೂವಿನಂಬುಗಳ ಮುರಿದ ಮೋಹನ
ಠಾವ ಹಿಡಿದುಟ್ಟ ಸುಮುಕ್ತಿ
ಭಾವಕಿಯೊಡಗೂಡಿದನಿರನಾ || ೨
ನೆಲವೆಣ್ಣಿನ ಮುಖಕಳವಟ್ಟಾ
ತಿಲಕವೆಂದೆನಿಸುವ ಬೆಳ್ಗುಳದ
ಅಲಘು ಗುಣಗ್ರದೊಳಗೆ ನಿಂದ
ಕಲ್ಲಲಿ ವಿದೂರ ಗುಮ್ಮಟ ಜಿನರಾ || ೩
೪೩. ನೋಡಿನಾದಣಿಯೇ
ರಾಗ: ಕಾಂಬೋಜಿ ತಾಳ: ರೂಪಕ
ನೋಡಿ ನಾ ದಣಿಯೇ ದೇವನಾ
ಪಾಡಿ ನಾ ಧಣಿಯೇ
ರೂಢಿಗಧಿಕವಾದ ಬೆಳ್ಗುಳ
ನಾಡ ಪೊರೆವ ಗೋಮಟೇಶನ || ಪಲ್ಲವಿ
ಆದಿಜಿನನ ತನುಜನೊಡನೆ
ಕಾದಿ ಗೆಲಿದ ಭರದೊಳೊಡನೇ
ಬೇಧಿಸಲು ತಾ ಕರ್ಮಗಳನೇ
ಸಾಧಿಸಿದ ಯೋಗಿ ಪಾದವಾ || ೧
ರಾಜ್ಯಧನವು ಕನಕ ಇಂದು
ವ್ಯಾಜ್ಯಕ್ಕಿದುವೆ ಮೂಲವೆಂದು
ತ್ಯಾಜ್ಯಗುಣವ ಪಿಡಿದು ಮುಂದು
ಪೂಜ್ಯನಾದ ನಿನ್ನ ಪಾದವ || ೨
ಬಂಧು ಬಳಗವನ್ನು ತ್ಯಜಿಸಿ
ತಂದೆ ಆದಿ ಜಿನನ ಸ್ಮರಿಸಿ
ನಿಂದು ಕಠಿಣ ತಪವ ಚರಿಸಿ
ಸುಂದರಾಂಗನಾದ ನಿನ್ನನು || ೩
ಚಳಿಯು ಹಸಿವೇ ತೃಷೆ ಇವೆಲ್ಲಾ
ಮಳೆಯ ಬಿಸಿಲ ಗಣನೆ ಇಲ್ಲ
ಇಳೆಗೆ ನೀನೇ ತಪಕೆ ಮಲ್ಲ
ನಳಿನ ಲೋಚನ ಪಾದಯುಗಲವ || ೪
ಎಲ್ಲ ಜನರು ನೋಡಲೆಂದು
ಕಲ್ಲಗುಡ್ಡದ ಮೇಲೆ ನಿಂದು
ಪುಲ್ಲಲೋಚನನಾಗಿ ನಿಂದು
ನಲ್ಲೆಯರರಸನಾದ ನಿನ್ನನು || ೫
ಬಿಳೆಯ ಶಿಲೆಯ ಮೂರ್ತಿಯಲ್ಲಿ
ಚೆಲುವನಾಗಿ ತೋರುತ್ತಲ್ಲಿ
ಇಳೆಯ ಜನರ ಹೃದಯದಲ್ಲಿ
ಜಲಜಲೋಚನ ಪಾದಯುಗಲವ || ೬
ದೇಶದೇಶದ ಜನರ ಮನದಿ
ವಾಸಿಸಿರುವೆ ನಿನ್ನ ಗುಣದಿ
ದೋಷಗಳನು ಕೆಡಿಸಿ ಕ್ಷಣದಿ
ಈಶನಾದ ನಿನ್ನ ಪಾದವ || ೭
೪೪. ಪುರುಪರಮೇಶನಸ್ಮರಿಸಿ
ರಾಗ: ಬೇಹಾಗು ಆದಿ ತಾಳ
ಪುರುಪರಮೇಶನ ಸ್ಮರಿಸಿ ಮನದೊಳಾ
ಪರಮಹಂಸಮುಖ ಮೂರುತಿಯನು
ಹರುಷದಿ ಪೂಜಿಪೆದೇವಿ ಪದ್ಮಣಿಯ
ಚರುಣಾಂಬುಜದೊಳಗೆರಗುವೆನು || ಪಲ್ಲವಿ
ಧರೆಗೆ ಪವಿತ್ರವು ನರಪತಿ ಮೂರ್ತಿ
ವರಪುರದೇವನ ಪುತ್ರನದೂ
ಹರುಷವನೀಯುವ ಚರಿತೆಯ ಪೇಳುವೆ
ಸರಳ ಜೀವಿಗಳು ಲಾಲಿಪುದು || ೧
ಕೊಳದೊಳು ತಾವರೆ ಬಿಳಿಯಿರುತಿರಲು
ಬಿಳಿಕೊಳಯೆನ್ನುವ ಪೆಸರಾಯಿತು
ಇಳೆಯೊಳು ಮುಂದಕೆ ಬಳಕೆಗೆ ಬರುತ
ಬೆಳ್ಗೊಳವೆನ್ನುವ ಊರಾಯಿತು || ೨
ಹಿಂದಕೆ ಕೆಲಮುನಿ ವೃಂದವು ನೆಲಸಿದ
ರಂದಿಗೆ ಪೆಸರು ಅದು ಬದಲು
ಮಂದಿಗಳೆಲ್ಲರೂ ಶ್ರವಣಬೆಳ್ಗೊಳ
ವೆಂದು ಪಾಡಿದರು ಆ ಮೊದಲು || ೩
ಚಂಡ ಪರಾಕ್ರಮಿ ಗಂಡುಗಲಿಯು ಚಾ
ಮುಂಡರಾಯನು ಒಂದಿನದಿ
ಕಂಡನು ಸ್ವಪ್ನದಿ ಬಂಡೆಯೊಳಗಿಹ
ದಿಂಡ ಮೂರ್ತಿಯ ತಾ ಮುದದಿ || ೪
ತಟ್ಟನೆ ಏಳುತ ಬೆಟ್ಟದಾಕಡೆ
ದಿಟ್ಟಿಸಿ ನೋಡಿದನಾತುರದಿ
ರಟ್ಟೆಯ ಬಲವನು ಕೊಟ್ಟು ಬಂಡೆಗೆ
ಬಿಟ್ಟನು ಬಾಣವ ತಾ ಭರದಿ || ೫
ಸಿಡಿಲಿನ ಶಬ್ದವಗೊಡುತಲಿ ಬಾಣವು
ಬಡಿಯಿತು ಬಂಡೆಗೆ ತಾ ಜವದಿ
ನಡುಗಿತು ಭೂಮಿಯು ಒಡೆಯಿತು ಬಂಡೆಯು
ಪುಡಿಪುಡಿಯಾಯಿತು ಆ ಕ್ಷಣದಿ || ೬
ಬೆಟ್ಟದೊಳಗೆ ತಾ ನೆಟ್ಟಗೆ ನಿಂತಿಹ
ದಿಟ್ಟತನದ ಆ ಮೂರ್ತಿಯನು
ದೃಷ್ಟಿಸಿ ನೋಡಿ ಸಂತುಷ್ಟ ಮನದೊಳಾ
ಮುಟ್ಟಿ ಪೂಜಿಸಿದ ಪಾದವನು || ೭
ಬಿಸಿಲಿಗೆ ಕಂದದ ಹಸಿವಿಗೆ ನೊಂದದ
ಅಸಮವೀರ ನೀ ಗೊಮ್ಮಟನು
ವಸುಧೆಗೀಶನು ಕುಸುಮಬಾಣನು
ನಸುನಗೆ ಬೀರುವ ಗೊಮ್ಮಟನೂ || ೮
ಚಳಿಗೆ ನಡುಗದ ಮಳೆಗೆ ನೆನೆಯದ
ಚೆಲುವನೀತನೆ ಗೊಮ್ಮಟನು
ನಳಿನ ವದನನೂ ಸಬಲಕಾಯನೂ
ಇಳೆಗೆ ಮಲ್ಲನೋ ಗೊಮ್ಮಟನೂ || ೯
ನಿದ್ದೆಯ ಮಾಡದೆ ಎದ್ದು ಹೋಗದೆ
ಸದ್ದುಗಯ್ಯದೆ ನಿಂತಿಹನು
ಉದ್ದದೊಳಗೆ ತಾ ಅರವತ್ತಡಿಯಿಂ
ಶುದ್ಧ ದೇಹದೊಳಿರುತಿಹನು || ೧೦
ಎಷ್ಟು ಹೇಳಿದರಷ್ಟಷ್ಟಿರುವುದು
ಕಷ್ಟವು ಎನಗಿದು ವರ್ಣಿಪುದು
ಸ್ಪಷ್ಟದಿ ತಿಳಿಯಂದಿಷ್ಟವುಳ್ಳವರು
ಬೆಟ್ಟದ ಮೇಲೆಯೆ ನೋಡುವುದು || ೧೧
ಹರುಷದಿ ರಾಯನು ತ್ವರಿತದೊಳೆಸಗಿದ
ಪರಿಪರಿ ವಿಧದಾ ವಿಭವದಲಿ
ವರಪ್ರತಿಷ್ಠೆಯಿಂದಿರಿಸಿದ ಪಂಚ
ವರ ಕಲ್ಯಾಣದ ಪೂಜೆಯಲಿ || ೧೨
ಅಂದಿನ ಮೊದಲು ಇಂದಿನ ತನಕ
ಕುಂದಿ ಕುಂದದಾ ಮೂರ್ತಿಯನು
ಮಂದಿಗಳೆಲ್ಲರು ಒಂದೆಡೆ ಸೇರುತ
ಚಂದದಿ ಮಾಳ್ಪರು ಪೂಜೆಯನು || ೧೩
೪೫. ಮುಗಿಲುಮುಟ್ಟುವಮೂರ್ತಿ
ಮುಗಿಲು ಮುಟ್ಟುವ ಮೂರ್ತಿ
ಸುಗುಣ ಶುಭವನ ಕಂಡೆನಯ್ಯ
ಜಗದಗ್ರಗಣ್ಯ ಶ್ರೀಗೊಮಟೇಶಸ್ವಾಮಿ ಕಂಡೆನಯ್ಯ || ಪಲ್ಲವಿ
ಕಳಕಳಿಸುವ ನಗೆಮೊಗದ ಶೃಂಗಾರನ ಕಂಡೆನಯ್ಯ
ನಳಿನೇತ್ರಂಗಳನು ನಾ ಮಾರನಾ ಕಂಡೆನಯ್ಯ
ಸುಳಿಸುರುಳಿಂದ ಶೋಭಿಪ ಜಿನನ ಕಂಡೆನಯ್ಯ
ಇಳೆಯೊಳಧಿಕ ಸುಗುಣ ಮಣಿಹರನ ಕಂಡೆನಯ್ಯ || ೧
ಆದಿರಾಜೇಂದ್ರನ ಸುಖಾರ್ಚಿತ ಕರ್ಮನ ಕಂಡೆನಯ್ಯ
ಆದರದಿಮದ ನೋಡುವರ ಕಣ್ಗೆ ರಮ್ಯನಾ ಕಂಡೆನಯ್ಯ
ಆದಿಕಾಲದ ಚಕ್ರವರ್ತಿಯ ತಮ್ಮನ ಕಂಡೆನಯ್ಯ
ಮೇದಿನಿಯೊಳಧಿಕತಿಶಯವಾದ ಬ್ರಹ್ಮನ ಕಂಡೆನಯ್ಯ || ೨
ಧರೆಯೊಳಧಿಕ ಬೆಳ್ಗೊಳಪುರವಾಸ ಕಂಡೆನಯ್ಯ
ಪರಮ ಕಾರುಣ್ಯದಿ ಸುಗುಣ ವಿಲಾಸನ ಕಂಡೆನಯ್ಯ
ಸಾರಸತ್ಕವಿ ಬಾಹುಬಲಿ ಯತಿಪ್ರೇಮಿಯ ಕಂಡೆನಯ್ಯ
ಕಾಮಿತಾರ್ಥವನೀವ ಕರುಣ ಪ್ರಭಾವವ ಕಂಡೆನಯ್ಯ || ೩
೪೬. ಕರುಣಿಸಿಕಾಯೋಎನ್ನ
ಕರುಣಿಸಿ ಕಾಯೋ ಎನ್ನ ಶ್ರೀ ಗೋಮಟೇಶ
ಕರುಣಿಸಿ ಸಲಹು ಯೆನ್ನ || ಪಲ್ಲವಿ
ಧರೆಯೊಳಧಿಕವಾದ ಪೌದನ ಪುರಪತಿ
ಧರೆಯೊಳಗ್ರಜನೊಳು ಸೆಣಸಿ ನೀ ಜಯಿಸಿದೆ || ೧
ಮಲ್ಲಯುದ್ಧದಿ ನೀನು ಬಲ್ಲಿದನೆನಿಸಿದೆ
ಬಲ್ಲಿದ ಭುಜಬಲಿಯೆನಿಸಿ ನೀ ಮೆರೆದಿಹೆ || ೨
ದೃಷ್ಟಿಯುದ್ಧದಿ ನೀನು ದಿಟ್ಟನುಯೆನಿಸಿ ತಾ
ದಿಟ್ಟದಿ ಜಗದೊಳು ಶ್ರೇಷ್ಠನುಯೆನಿಸಿದೆ || ೩
ಧರೆಯೊಳಗ್ರಜನೊಳ ಸೆಣಸಿದಪಕೀರ್ತಿ
ಹೊರೆಯದೆ ಹೋದೆ ನೀ ವೈರಾಗ್ಯದಿಂದಲಿ || ೪
ಸತಿಸುತರನು ಬಿಟ್ಟು ಅತಿಕಾಂಕ್ಷೆಗಳಿಂದ
ಅತಿಶಯ ಸುಖವೀವ ಜಿನದೀಕ್ಷೆ ಪಡೆದನೆ || ೫
ಸುತಾರ್ಯ ಭಾಂಡವ ನೆಲನ ಮೆಟ್ಟಿದೆ ಹೋಗಿ
ಅತಿ ಭಕ್ತ ಧರಣೇಂದ್ರನಿಂದ ಸ್ಥಳವ ಕೇಳಿ || ೬
ಉಂಗುಷ್ಟದೊಳು ನಿಂದು ತಪಗೈಯ್ಯುತಿರುವಾಗ
ಜಗದೊಳತಿಶಯ ಭರತೇಶ ತಿಳಿದಾಗ ಕರುಣಿಸಿ || ೭
ಬಂದು ಬೋಧಿಸಲಾಗ ಅಂಧಕಾರವ ಕೆಟ್ಟು
ಗಂಧಕುಟಿಯೊಳಗ ನೆಲಸಿದ ದೇವನೆ || ೮
ಕ್ಷಿತಿಯೊಳಧಿಕವಾದ ಬೆಳ್ಗುಳದೊಳು ನಿಂದು
ಯತಿ ಪಂಡಿತಾರ್ಯ್ಯ ಸಲಹುವ ದೇವನೇ || ೯
೪೭. ಹಂಬಲಿಸದಿರುಮನದಿ
ಹಂಬಲಿಸದಿರು ಮನದಿ ಹಲವ ನೆರೆ
ನಂಬು ಶ್ರೀ ಗೋಮ್ಮಟ ಜಿನಪದ
ವಂ ಬಿಡು ಮದವೆಂಟು ಮದತ್ರಯವ ಪೆರಗಿಡು
ಶಂಭಾದಿ ದೋಷಷ್ಟಕವ ಸುಡು ನಿತ್ಯತ್ವ ಸೇವೆಗಳಷ್ಟ
ದೃಢವಿಡಿಯಷ್ಟಾಗಮ ಗುರುಪದವಾ || ೧
ಕೊಲ್ಲದುದೆ ಧರ್ಮವಿದೆನ್ನು ಈ
ಸೊಲ್ಲನು ಕಂಡಿಪುದು ಶ್ರುತವೆನ್ನು
ಎಲ್ಲ ಬಲ್ಲವ ಜಿನನೆನ್ನು ತಾ
ನೆಲ್ಲವ ತೊರೆದಯ್ದವ ಗುರುವೆನ್ನು || ೨
ಗಳಪದಿರಸೃತ ವಾಕ್ಯಂಗಳನು ಮನ
ದೊಳೆಣಿಸದಿರು ಕಳವ ನೀನು
ಎಳಸಿ ನೋಡದಿರನ್ಯ ವಧುಗಳನು
ಹಲಹಲವಕಾಂಕ್ಷೆಗಳಿಂದ ಫಲವೇನು || ೩
ತ್ರಿವಿಧಪಾತ್ರದಿ ನಾಲ್ಕು ದಾನ ಕೊಡು
ತ್ರಿವಿಧ ಕಾಲ ಜಿನಪೂಜೆಯ ಮಾಡು
ವಿವಿಧ ಪರ್ವದಿನದೊಳು ಅಸನವನು ಬಿಡು
ಪುಣ್ಯಗಳಿಸುವ ಮಾರ್ಗವಿದು ನೋಡು || ೪
ಹೊಟ್ಟೆರಡಾಗದೆ ಪರಿಣಮಿಸು ಬಹು
ನಿಷ್ಟುರ ಬಂದಡೆಯಲಿ ಕ್ಷಮಿಸು
ಕೆಟ್ಟದರೊಳು ಮನವನು ಮರಿಸು ಎಡ
ರ್ಪುಟ್ಟಿದೈಯ್ಯಂಗನೆಗೊಲಿಸು || ೫
ಸಜ್ಜನ ಸಂಗವ ಬಿಡಬೇಡ
ದುರ್ಜನ ಗೋಷ್ಠಿಯೊಳಿರಬೇಡ ಪೆರ
ರಾರ್ಜಿತ ಧನಕಾಸೆಯ ಪಡಬೇಡ ನಿಜ
ದುರ್ಜಗವನು ಮರೆಯಲಿಬೇಡ || ೬
ಗುರುಹಿರಿಯರನು ನಿಂದಿಸಬೇಡ ಪಂಚ
ಗುರುಪಾದವ ಬಿಡಬೇಡ
ಯೆರವಿನನೊಡಲ ನಚ್ಚಿರಬೇಡ
ಪೆರಪೆರ ತುಚ್ಚಿತವನು ಸುತ್ತಿರಬೇಡ || ೭
ಪಿಸುಣ ಸಂಪರ್ಕದೊಳಿರಬೇಡ ಪೆರ
ರೆಸಕಕ್ಕೆ ಕಿಸುಕುಳ ಬಡಬೇಡ
ವಿಷಯೆಲ್ಲದಕ್ಕೆ ಮನಗೊಡಬೇಡ ದು
ರ್ವ್ಯಸನಿಳೊಡನಾಡಬೇಡ || ೮
ಶಶಿರವಿ ಕೋಟಿ ಕಿರಣನೆನಿಸಿ
ಕುಸುವ ಬಾಣನ ಪೆರ್ಮೆಯುತ
ಮಿಸಿ ರಂಜಿಸುವ ಶ್ರೀ ಗೊಮ
ಟೇಶನ ಭಜಿಸಿ || ೯
೪೮. ತ್ರಿಭುವನಪತಿಶ್ರೀಭುಜುಬಲಿಯಂತೆ
ತ್ರಿಭುವನಪತಿ ಶ್ರೀಭುಜಬಲಿಯಂತೆ
ಅಭಯವನಿತ್ತವನಂತೆ || ಪಲ್ಲವಿ
ನಾಭಿಯ ಪುತ್ರಾದಿ ಜಿನರ ಸುರನಂತೆ
ಈ ಭೂಮಿಗಾದಿ ಚಕ್ರಿಯ ತಮ್ಮನಂತೆ
ಶ್ರೀ ಭುಜಬಲಿಯಾದ ಮನ್ಮಥನಂತೆ
ಶೋಭಿಪ ಬೆಳ್ಗೊಳದೊಳಗಿರ್ಪನಂತೆ || ೧
ವರಸುರಮಾಭ್ಯಪಾದನ ಭೂಪನಂತೆ
ಶರಯ ಮೇಲೈದು ಬಿಲ್ಲು ತೈದನಂತೆ
ಹರಿತಾಂಗರುಚಿ ಶೌರ್ಯ ವೀರ್ಯ ತಾನಂತೆ || ೨
ಮೇರುವಧಿಕ ಗಂಭೀರ ತಾನಂತೆ
ನಾರಿ ಸುನಂದದೇವಿಯರ ಪುತ್ರನಂತೆ
ನೀರೆಯರೆದ್ದು ಸಾಸಿರ ಸ್ತ್ರೀಯರಂತೆ
ಕಾರುಣ್ಯನಿಧಿ ಕಲ್ಪಮರವಂದ್ಯನಂತೆ || ೩
ಭರತಣ್ಣಗೊಲಿದ ಚಕ್ರದ ಮೂಲವಂತೆ
ಧರಿಸಿತು ರೌದ್ರ ಕಾಮಣ್ಣನಿಗಂತೆ
ಗಿರಿಮೇರು ಎರಡು ಒಂದಿದಿರೊಡ್ಡಿದಂತೆ
ಧರೆಗಧಿಕ ದೇಹಗೆಲ್ಲರಿದಾಯಿತಂತೆ || ೪
ಜಲದೃಷ್ಟಿ ಮಲ್ಲಯುದ್ಧವಗೈದರಂತೆ
ತೊಲಗಿ ಚಕ್ರಿಗೆ ಮಾನಭಂಗವಾಯಿತಂತೆ
ಛಲದಂಕ ಚಕ್ರಕಾಮನೀ ಗೆದ್ದನಂತೆ
ಬಲಗೊಂಡು ಬೆಸನ ತಕ್ಷಣ ಬೇಡಿತಂತೆ || ೫
ಆರುಕಾಂಡ ದೀಪಗಾಯ್ತಪಮಾನವಂತೆ
ಮಾರಣ್ಯವೈರಾಗ್ಯ ತಕ್ಷಣ ಪುಟ್ಟಿತಂತೆ
ಸೇರಿದ ಚಕ್ರಾಧಿಪಾಗೆಂದನಂತೆ
ಮಾರ ನಿಗಮರ್ಪ್ಪೊಮಗೆ ಬಿದ್ದರಂತೆ || ೬
ಬಲ್ಮಿದ ಚಕ್ರಾದಿ ಭಂಗವಾಯಿತಂತೆ
ಪುಲ್ಲನಾಭನು ವಾರಿಮುಖವಿದ್ದನಂತೆ
ಎಲ್ಲ ಭಾಗ್ಯವ ತೃಣಕಿಣಿ ಕಂಡನಂತೆ
ಅಲ್ಲಿಂದ ಕೈಲಾಸಗಿರಿಗೆ ಹೋದನಂತೆ || ೭
ತಾತನ ಸಮವಸರಣ ಹೊಕ್ಕನಂತೆ
ವೀತರಾಗನ ಕಂಡು ಬಲಗೊಂಡನಂತೆ
ಜಾತರೂಪಿನ ಯೋಗ ಕೈಗೊಂಡನಂತೆ
ಭೂತಗಳ್ಗೆರದೊಡೆ ದುಗುಡ ನಿಂತನಂತೆ || ೮
ಚತುರ್ವಿಧ ವಸ್ತು ವರ್ಜಿತವಾಯಿತಂತೆ
ಮತಿಗೆ ವೈವರನಿದ್ದು ಬಲಿಗೈದನಂತೆ
ಜಿತ ಚಿತ್ತವಿಡಿದೇಕೊತ್ಸರ ನಿಂತನಂತೆ
ಖತಿಯ ನಿಂತಣ್ಣ ನೋಡಿ ಬಿರ್ದ್ದನಂತೆ || ೯
ಹುತ್ತಗಳುಭಯ ಭಾಗದೊಳೆದ್ದವಂತೆ
ಸುತ್ತಿಕೊಂಡಾಗ ಭುಜಂಗಳ್ಗಂತೆ
ಹತ್ತಿ ಆವರಿಸಿದ ರಥವಣ್ಣಯಂತೆ
ಇತ್ತ ಶ್ರೀ ಚಕ್ರಿಕೀರ್ತಿ ಮೇರಿದ್ದನಂತೆ || ೧೦
ಬರದಿ ಕೈಲಾಸ ಪರ್ವತಕೋದನಂತೆ
ಧರೆಯೊಳಂಥಾದ್ಯ ತಪಸ ಕಂಡನಂತೆ
ಸ್ಮರಯೋದಿ ಪಾದಪೂಜೆಯಗೈದನಂತೆ
ಶಿರವಾಗಿ ಸಾಷ್ಟಾಂಗವೆರಗಿದನಂತೆ || ೧೧
ಸಿರಿ ರಾಜ್ಯ ತನು ಮೂರಸ್ತಿರವಂತೆ
ಮರುತಗೊಡ್ಡಿದ ಸೊಡರನ ಪರಿಯಂತೆ
ದುರಿತಾದಿಗಕ್ಷಯ ಸಿರಿ ನಿತ್ಯವಂತೆ
ಧರಿಸಿರ್ದ ಖತಿ ಚಕ್ರಿ ಬಿಡಿಸಿದನಂತೆ || ೧೨
ಮದನ ಸಂಜ್ವಲನ ಕ್ರೋಧವ ಬಿಟ್ಟನಂತೆ
ವದನ ಸ್ವಭಾವ ನಿಲ್ಲಿಸಿಕೊಂಡನಂತೆ
ಬೆದರಿ ಘಾತಿಗಳೋರೆಂದೋಡಿದವಂತೆ
ಸಾಧಿಸಿತಾಗವಗೆ ಕೇವಲ ಜ್ಞಾನವಂತೆ || ೧೩
ಮೂರು ಲೋಕಾವರಿಸಿತು ದೀಪ್ತಿಯಂತೆ
ಚಾರು ಶ್ರೀ ಗಂಧಕುಟಿಯೊಳ್ಗಗ್ದನಂತೆ
ಸುರ ಮತೀಂದ್ರರೈದೆರಗಿದರಂತೆ
ಮಾರಶ್ರೀ ನಿರ್ವಾಣಿ ಪತಿಯಾದನಂತೆ || ೧೪
ಭರತಣ್ಣಗನುಜನೊಳ್ಗತಿ ಪ್ರೀತಿಯಂತೆ
ಮರಕತದೊಳ್ಗು ಭಾವಗೈಸಿದನಂತೆ
ಸಿರಿಯ ಪೌದನದಿ ಪೂಜಿಸಿಕೊಂಡನಂತೆ
ಇರಲಿತ್ತ ಕೌಶಲಪುರಿಯೊಪ್ಪಿತಂತೆ || ೧೫
ದಶರಥರಾಯನ ಸುತರಾಮನಂತೆ
ವಸುಧೆಯಾಶ್ವರಿನೊಡಲೈದಿದನಂತೆ
ಪಾಸತ್ತಾದ ಕಣಜ ದೇಶವಿತ್ತಂತೆ
ಕುಶಲದಿ ಚಲಗೊಂಡು ಏರಿದನಂತೆ || ೧೬
ಪಾದನಾದಿಪನಲ್ಮೆಗೈಸಿದನಂತೆ
ಮೋದದಿಂದ ಶಾಸನಾಂಕಿಸಿ ಪೋದನಂತೆ
ಹೋದ ಬಳಿಕ ಕೆಲಕಾಲವಾಯಿತಂತೆ
ಅಂದಿಂದೆ ಚಾಮುಂಡ ನೃಪ ಬಂದನಂತೆ || ೧೭
ವನಮದ್ಯಗಿರಿಯಗ್ರಕೇರಿದನಂತೆ
ಮನಸಿಜ ದೇವನಾಶ್ಚರ್ಯ ಕಂಡನಂತೆ
ಘನತರ ಕೀರ್ತಿ ಕೊಂಡಾಡಿದನಂತೆ
ಮನುಜೇಶ ಬೆಳ್ಗೊಳಗೈಸಿದನಂತೆ || ೧೮
ದೇವಸಮವಸರಣುದಯವಾದಂತೆ
ಭಾವಜದೇವನ ಸ್ಥಾನವಾಯಿತಂತೆ
ತ್ರಿವಿಧ ಬಸದಿ ಪ್ರತಿಷ್ಠೆಯಾಯಿತಂತೆ
ಯೇವೇಳ್ವಗೀರ್ವಾಣು ಮಠವೊಪ್ಪಿತಂತೆ || ೧೯
ಶಾಕ್ತರು ಬಂದು ಪೂಜಿಸಲಾಯಿತಂತೆ
ಸತತ ಮಂಗಲ ಭುಜದೇವಗಂತೆ
ಜಿತಚಿತ್ತಾರವನೊಂದಿ ಸುಗತಿಯಾಯಿತಂತೆ
ಸತತಲಾ ಮಧುರೇಶನೆಸರಾಯಿತಂತೆ || ೨೦
ಎಷ್ಟು ದೊರೆಂದು ಬೆಳ್ಗೂಳ ನೋಡಬಂದೆ
ಕಷ್ಟ ಜೀವಿಸಿ ಭವಭವದೊಳ್ಗು ನೊಂದೆ
ಅಷ್ಟರೊಳ್ಗಪುರಿಯೆಡೆಗೋಗಿ ನಿಂದೆ
ದೃಷ್ಟಿಯೆಷ್ಟಾ ದೂರೊರ್ನಿಸಲಾಗದೆಂದೆ || ೨೧
ವಿತೈಶಗಳ್ಗೊವಲ್ಲದತೀರ್ಥೋದ್ರ ಕಂಡೆ
ಮತ್ತೆ ಚಕ್ರೊರ್ನ್ನಿಸಲ ಸದಳ ಕಂಡೆ
ಹೊತ್ತಿನುಗ್ಗುಭಯ ದ್ರಿಧ್ವಜ ಪಂಕ್ತಿಕಂಡೆ
ಚಿತ್ತ ಜಾರಿಗಳ್ಗಕೂಡೆ ಹೋಗಿ ಕಂಡೆ || ೨೨
ಶ್ರೀಕರನಿಭ ದೊಡ್ಡ ಬಸದಿಯ ಕಂಡೆ
ಲೋಕನಾಥರ ಪಾದಕೆರಗಿದೆ ಮಂಡೆ
ನಾಕಕಾಶ್ಚರಿಯಹ ಮುನಿವಾಸಕಂಡೆ
ಲೋಕಪಾವನ ಪಂಡಿತರ ಪಾದಕಂಡೆ || ೨೩
ವನಮಧ್ಯೆ ಶಿಖರದೆಬ್ಬಾಗಿಲು ಕಂಡೆ ಭ
ವನಕಾಶ್ಚರಿಯಬ್ದಿ ಕಲ್ಯಾಣ ಕಂಡೆ ನ
ವನಿಧಿನಿಧಿಯ ಭಂಡಾರವ ಕಂಡೆ ಭು
ವನಕದ್ಭುತ ಕಲ್ಪವೃಕ್ಷವ ಕಂಡೆ || ೨೪
ದೇವದುಂದುಭಿ ಪಂಚವಿಧರವ ಕಂಡೆ
ಹೇವೇಳ್ವ ನಿತ್ಯದುತ್ಸಹ ಜಾತ್ರೆ ಕಂಡೆ
ಭಾವಜದೇವ ಜನ್ಮಭಾವವ ಕಂಡೆ
ದೇವನೈಸಿರಿ ಶಿಲೆಯುಗ್ರದಿ ಕಂಡೆ || ೨೫
ಹಿಗ್ಗಿತು ಮನ ಕಾಮದೇವನ ಕಂಡು
ಮಗ್ಗಿತು ಎನ್ನೊಳ್ಗಜ್ಜದ ಕರ್ಮದಂಡು
ಬಗ್ಗಿ ಸಾಷ್ಟಾಂಗದೇವನ ಪಾಡಿಕೊಂಡು
ಸುಗ್ಗಿಯಾಯ್ತೆನಗಂಬುಜಾಂಘ್ರಿಯ ಕಂಡು || ೨೬
ಚೆಲುವರಂ ಚೆಲುವಾದಿ ಮನ್ಮಥ ನೀನು
ಚಲದಿಂ ಕುಗುಜಮೆದ್ದೊಂದೊರುಹಿರ್ದ್ದೆ ನೀನು
ನೆಲೆಯಾದ ಶ್ರೀಮುಕ್ತಿಗೊರನಾದೆ ನೀನು
ಬಲಿದಷ್ಟಿ ಕರ್ಮಕಾಯುಧವದಾದಂಥವನು || ೨೭
ಮದನ ನೀನಾಗಷ್ಟಮದ ಬಿದ್ದಭಾವ
ಕುದಿದ ಕಷ್ಟದೋಷಗಳ್ಗೊದ ಭಾವ
ಉದಿಸಿದ ಶ್ರೀ ಪರಂಜ್ಯೋತಿಯೊದಿರವಾ
ಮೊದಲಂತ್ಯವಿರದ ಪ್ರವರ್ಗದೇವಾ || ೨೮
ನಿನ್ನ ಧ್ಯಾನದಿ ಚಿತ್ರಸಫಲವಾಯಿತೆನಗೆ
ನಿನ್ನ ನೀಕ್ಷಿಸಿ ಮಾತ್ರವಪ ಶುದ್ಧವೆನಗೆ
ನಿನ್ನ ಭಜನೆ ಮಾತ್ರ ಕರ್ಮವಾಯಿತೆನಗೆ
ನಿನ್ನಂತೆ ಸುಗತಿಯ ನೀಡು ಮನ್ಮಥಯೆನಗೆ || ೨೯
ಜಯತು ಶ್ರೀಪುರು ಜಿನದಂಗ ಸಂಭವನೆ
ಜಯತು ಶ್ರೀ ಭರತರಾಜೇಂದ್ರನನುಜನೆ
ಜಯತು ಶ್ರೀ ಭುಜಬಲಿ ಪ್ರಥಮ ಮನ್ಮಥನೆ
ಜಯತು ಶ್ರೀ ಕೈವಲ್ಯರತಿಗೆ ಮನ್ಮಥನೆ || ೩೦
ಸಿರಿಗೆ ಮಂದಿರ ತೊವಿನಕೆರೆಯೊಳಗೆ
ದುರಿತಾದಿ ಚಂದ್ರನಾಥನ ವಾಸದೊಳಗೆ
ಸ್ಮರವೈರಿ ಸ್ಮರಣೆಯವರೆದ ಬ್ರಾಹ್ಮಣಗೆ
ಸ್ಥಿರಮುಕ್ತಿ ಸಿರಿಗೊಡು ಕ್ರಮದಿಂದಯೆನಗೆ || ೩೧
೪೯. ತಿಳಿದುಮನದೊಳುಭಾವಿಸಿ
ಉದಯ ರಾಗ
ತಿಳಿದು ಮನದೊಳು ಭಾವಿಸಿ
ತಿಳುಬೆಳಕಿನಂತಿರ್ದ ಜೈನಮಾರ್ಗದ
ನೆಲೆಯಾವಳವನರಿಯದೆ ಜೈನನೆಂದೆನಿಸಬಹುದೇ || ೧
ವ್ರತರಹಿತ ಸಮ್ಯಕ್ತ್ವ ಒಂದನೆಯ
ಸತ್ಪಾತ್ರ ವ್ರತಿಕರಿಂದೈದು ಮದ್ಯಮ
ಪಾತ್ರ ಉನ್ನತ ಮೊದಲಾದ ವ್ರತಿಕರಿಂದಾಕಾಶ
ಯತಿಗುಣಗಳೆಲ್ಲ ಉತ್ತಮ ಪಾತ್ರವು || ೨
ಅಣುವ್ರತಗಳೈದು ಶಿಕ್ಷಾವ್ರತಗಳು ನಾಲ್ಕು
ಗುಣವ್ರತಗಳು ಮೂರು ಈ ಹನ್ನೆರಡರ
ಗುಣ ಸ್ವರೂಪವನಾಂತು ಅತಿಚಾರಗಳ ಕಳೆದು
ಗಣಿತದಲಿ ಎರಡನೆಯ ಜೈನನೆಂದು ತಿಳಿದು || ೩
ಆರು ಆ ನಾಯಕನ ಸೇವೆಯಲಿಪ್ಪಸಂಖ್ಯಾದಿಗಳು
ಮೂರು ಮೂಢವು ಮದಗಳೆಂಟೆಂಬ
ಸೇರಿದಿಪ್ಪತ್ತೈದು ಮಲದೋಷಗಳ ಕಳೆದು
ಸಾರಸದ್ಚಕ್ರಿಯಾಗುತಿದು ತಿಳಿದು || ೪
ಮೂರು ಸಂಧ್ಯಾನದಲಿ ಮನದ ಸಂಚಲವಳಿದು
ಕ್ರೂರಕುಕ್ಷಿತ ರಾಗದ್ವೇಷವನಳಿದು
ಚಾರುಗುರು ಪಂಚನಮಸ್ಕಾರಗಳ ಧಾನಿಸುವವನೇ
ಚಾರು ಗುಣದ ಸಾಮಾಯಿಕನೆಂದು ತಿಳಿದು || ೫
ತಿಂಗಳಿಗೆ ಎರಡು ಅಷ್ಟಮಿ ಎರಡು ಚತುರ್ದಶಿ
ಎಂಬ ಪರ್ವತಿಥಿಗಳ ಉಪವಾಸ ಮೊದಲಾದ
ತಿಥಿಗಳಂನೀಸುವವನೇ ಪ್ರೊಸಪದೋವಾಸಿ ತಿಳಿದು || ೬
ಹಸಿಯ ವಸ್ತುವ ಮೆಲ್ವ ಹಲವಿಪ್ಪ ಸುಖಕೊಳ್ಳ
ಹಸಿಭೂಮಿ ಪಾತ್ರೆಯೊಳು
ಬಿಸಿಯ ಚೆಲ್ಲ ಕುಟಿಲ ಮಾಯಕನಲ್ಲ
ಕುಶಲ ಕಾರುಣ್ಯನಿಧಿ ಸಚಿತ್ತ ವಿರತನು ತಿಳಿದೂ || ೭
ಜಲಲವಣದಿಂ ಕೂಡಿದ ಜ್ಯೋತಿಯಿಂದಲಿರ್ದ
ಹಲವು ಚಕ್ಷುಗಳ ರಾತ್ರಿಯಲಿ ಮೆಲಲೊಲ್ಲ
ಫಲ ತಾಂಬೂಲವ ಕೊಳ್ಳ ಭೈಸಜ್ಜಗಳ ತಾನೊಲ್ಲ
ಬಲು ಜೈನ ರಾತ್ರಿ ಚೋಜನವಿರಥನು ತಿಳಿದು || ೭
ಕಾಸಿ ಉಡಿಗೆಯ ಬಿಟ್ಟು ಕಾಲ ರಕ್ಷೆಯ ಮೆಟ್ಟು
ಕೇಶಗಳ ಕಟ್ಟಿ ಗುಷ್ಠೆಯೊಳು ಕಾಯ್ದಿದ್ದ
ಆಶೆಕ ಮುಖನಲ್ಲ ಹೇಸಿ ಕರುಣತ್ರಯೊಳು ಹೆಣ್ಣ ಬಿಟ್ಟು || ೮
ಇನ್ನೂರ ಹದಿನಾರು ಬ್ರಹ್ಮಚರ್ಯವಬಲಿದ
ಕನ್ಯೆಯರ ಕೂಡೆ ನಗೆನೋಟವ
ಹೆಣ್ಣುಗಳ ಕೊಳ್ಳು ಕೊಡುವ ಹೇಸಿ
ಕೃತ್ಯವ ಬಿಟ್ಟು ಮವನಾಂತನೇ ಬ್ರಹ್ಮಚಾರಿ ತಿಳಿದೂ || ೯
ಹುಸಿ ಜಾತಿಗಳ ಮುಟ್ಟು ಮಸಿಯ ಬರಲೀವ ಬಿಟ್ಟು
ಕೃಷಿ ವಾಣಿಜ್ಯ ಪಶುಪಾಲ್ಯದ ಹಂಬಲದ ಹರಿ
ದ ಶ್ರೀ ಮನ್ನಣೆ ತೊರದು
ಅಸಮಗುಣನಿಧಿ ಆರಂಭ ವಿರತನು || ೧೦
ಹತ್ತು ತನುವಿನ ಕಾಮ್ಯ ಹದಿನಾಲ್ಕು ಮನಕಾಮ್ಯ
ವ್ಯರ್ಥವಾಗಿಪ್ಪತ್ನಾಲ್ಕರಲ್ಲಿ
ಚಿತ್ತದಾಸೆಯ ಬಿಟ್ಟು ಬೆನ್ನ ಹೊನ್ನಣೆ ಮುಟ್ಟಿ
ಸತ್ಯಗುಣನಿಧಿ ಪರಿಗ್ರಹ ವಿರತನು ತಿಳಿದೂ || ೧೧
ಜಿನನಿರೂಪಿತ ತತ್ವ ಜಿಂಹ್ವ ಹಿತಗಳ ನುಡಿವ
ವನಿತೆ ಸುತಬಾಂಧವರ
ಮನವಾರ್ತೆಯ ಕೇಳಿ ಮರಳಿ ಬಾಯಲಿ ಹೇಳಲಿನ್ನ
ಮತಿವಿರತ ನವನತುಳ ಜೈನನೆಂದು ತಿಳಿದೂ || ೧೨
ಚಂಡಿಕೆಯ ಬೋಳಿಸಿದ ದ್ರವ್ಯಸೂತ್ರವಂ ತೆಗೆದ
ಖಂಡ ವಸ್ತ್ರವ ಕಾಚನೆದ್ದಿ ಹೊದ್ದ
ಮುಂಡನಣುವ್ರತ ಭೂ
ಮಂಡಲದೊಳತಿ ಮಾನ್ಯ ಉದ್ಧಿಪ್ಪ ಜೈನನೆಂದು ತಿಳಿದೂ || ೧೩
ಲೋಚು ಕುಂಚವು ಕೃಪಾಕರ ಪಾತ್ರವು ಭೋಜನವು
ಶೌಚಗುಂಡಿಗೆ ಒಮದು ಸ್ಥಾನವಿಲ್ಲ
ಆಚಾರ ಸಿತ್ಕ್ರಿಯದ ನೀತಿ ಪುಸ್ತಕವೊಂದು
ಉಚ್ಚ ಕ್ಷುಲ್ಲುಕ ವ್ರತಿಕ ಉದ್ದಿಷ್ಟನೂ ತಿಳಿದು || ೧೪
ಈ ಪರಿಯ ಸತ್ಯಗುಣವಿರಬೇಕು ಶ್ರಾವಕರಿಗೆ
ಪಾಪಮಯ ಕಡಂಬಕದ ಜೈನವಲ್ಲ
ಕೋಪಗರ್ವವ ಜರಿದು ಕಲಿಸೂತ್ರವನು ಹರಿದು
ಭೂಪ ಮಹಾವ್ರತಿಯಾಗ ಭುವನದೊಳು || ೧೫
ಕಂಕಾಲಿ ಕೂಪಾಲನಂತೆ ಕನಕನ ಸುರಿಯಂತೆ
ಯಕ್ಕೆರವಿ ಶಿವನಾಮ ಜಂಬಕಗೆ
ಮರ್ಕಟವು ಪರಿಯೆನಿಸಿದಂತೆ ಶ್ರಾವಕರು
ಬಕ್ಕ ಬರಿನಾಮದೊಳು ಬೇಗೆಯ ಬೇಡಿ ತಿಳಿದು || ೧೬
ಧರೆಯೊಳುತ್ತಮ ತೀರ್ಥ
ಧರ್ಮ ಶಂಭವ ಕ್ಷೇತ್ರ ಕವಿವರನಾಮ ಕೊಲ್ಲಾ
ಪುರದೊಳು ಗುರುಹಂಸಾ || ೧೭
೫೦. ಕರುಣಿಸುಶ್ರೀಚಂದ್ರನಾಥಾ
ರಾಗ: ಜುಂಜೋಟಿಜಿಲ್ಲ ತಾಳ: ಆದಿತಾಳ
ಕರುಣಿಸು ಶ್ರೀಚಂದ್ರನಾಥ ನಾಥಾಪೂತಾ ಮಹಿತ || ಪಲ್ಲವಿ
ಸ್ಮರದರ್ಪಹರನೇ ಶರಧಿಗಭೀರನೆ
ಹರುಷವನು ತೋರ್ಪುದನು ಪಾರುವೆನು || ೧
ಕಾಲಮದನಹರ ಜಾಲಕಲುಷದೂರ
ಲಾಲಿತರ ಸೇವಿಪರ ಪಾಲಿಪನೆ || ೨
ಕುಂದಕುಸುಮದಿಯರವಿಂದಗಳಿಂದಲಿ
ತಂದರ್ಚಿಸಿ ನಾನೊಂದಿಸಿ ಆನಂದಿಸುವೆನು || ೩
Leave A Comment