೧೧. ಪಾಹಿಪದ್ಮಿಣಿಮಾಂ

ಪಾಹಿ ಪದ್ಮಿಣಿಮಾಂ ಪಾಹಿ ಗುಣಮಣಿ
ಸಹಾಯವಾಗು ನೀ ಭವ್ಯಾಬ್ಜ ಗುಣಮಣಿಯೇ||          ಪಲ್ಲವಿ

ಪಾಶಮಾಂಕುಶ ಫಕ ಭಯಂಕರೇ
ಲೇಸು ತೋರಿಸೆ ಸಕಲ ಸೌಖ್ಯಮಂದಿರೇ||              ೧

ಕುಂಕುಮಾಂಗಿಯೇ ಶಂಖಕೊರಳ ಜಾಣೆಯೇ
ಬಿಂಕಗಾತಿಯೇ ನಿಷ್ಕಳಂಕ ಚರಿತ್ರೆಯೇ||                ೨

ದೃಢದೀ ಮನದೊಳು ನಿನ್ನಡಿ ನುತಿಸಲು
ದೃಢದೀ ಅನುದಿನ ಸಿರಿಯ ಕೊಡು ಮನದೊಳು||       ೩

ಬಿರಿದ ಪಾಲಿಸಿದೆ ಭವನ ಧರಿಸಿದೆ
ಮೊರಲಿದೆ ನಿಧಿಯೆನ್ನ ಹರುಷಗೊಳಿಸಿದೆ ||              ೪

ಸತ್ಯವಂತೆಯೇ ಕತ್ತಲ್ಬಸದಿ ತಾಯೇ
ಭೃತ್ಯಮಧುರ ಶೈಲಜನಿಗೆ ಭಯನೀಯೇ||              ೫

 

೧೨. ಅಂಬಾನಿನಗೆಂಥ

ಅಂಬಾ ನಿನಗೆಂಥ ನಿರ್ಧಯವೇ
ಚಿಂತತಾರ್ಥವನು ಸಂತೋಷಗೊಳಿಸಿ ಮಾ
ಕಾಂತು ವಿಜಯನೀಕ್ಷಿಸು
ವಂಥ ಸಹಿಸದಿಂದೆಂಥ ನಿರ್ದಯವೇ||                   ಪಲ್ಲವಿ

ಚಿತ್ರವಾಗಿದೆ ಶತಪತ್ರ ಪಾದಂಗಳ
ಸ್ತೋತ್ರವೇ ಗತಿಯೆಂಬ
ಪುತ್ರನ ಪಾಲಿಪದೆಂಥ ನಿರ್ದಯವೇ||                   ೧

ಮಾನವಂತನೆಂದು ಜ್ಞಾನವಂತನೆಂದು
ಮಾನನಿಧಿಯು ಸ
ಮ್ಮಾನವ ಕೊಡದಿಹದಂಥ ನಿರ್ದಯವೇ||               ೨

ಪರಿಕಷ್ಟವ ಪರಿಹಾರವನು ಮಾಡೆಂದು
ನಿರತ ಭಜಿಪ ನಿಮ್ಮ
ತರಳನ ಕರುಣಿಸದೆಂಥ ನಿರ್ದಯವೇ||                  ೩

ಹೊಂಬುಜಾಪುರದೊಳಗಿಂಬಾಗಿ ನೆಲಸಿದ
ಅಂಬಾ ಪದ್ಮಾವತಿಯೇ
ಸಂಭ್ರಮದೊಳಗಿಹದೆಂಥ ನಿರ್ದಯವೇ||                ೪

 

೧೩. ಎಚ್ಚರಿಕೆಎಚ್ಚರಿಕೆಶ್ರುತದೇವಿ

ಎಚ್ಚರಿಕೆ ಎಚ್ಚರಿಕೆ ಶ್ರುತದೇವಿ ಎಚ್ಚರಿಕೆ
ಸಚ್ಚಿನ್ಮಯ ರೂಪದೇವಿ ಎಚ್ಚರಿಕೆ ಶಾರದದೇವಿ
ಸಚ್ಚಿನ್ಮಯ ರೂಪದೇವಿ ಎಚ್ಚರಿಕೆ ||            ಪಲ್ಲವಿ

ಸುರನರೋರಗವಂದ್ಯೆ ಸುರನರ ಪೂಜಿತೆ
ಸುರಚಿರ ಗುಣಭರಿತೆ ಸುಜ್ಞಾನಕಾರೆ||          ೧

ವೀಣಾಮಸ್ತಕಧಾರೆ ವಿನುತ ಜನರ ಪಾಲೆ
ವಿನಯ ಸಿದ್ಧಾಂತಧೀರೆ ವಿನುತ ಜಿನಪಾಲೆ||   ೨

ಸಕಲ ಶಾಸ್ತ್ರವಿರೂಢೆ ಸಕಲ ಜ್ಞಾನ ಪ್ರಕಾಶೆ
ಸಕಲ ಮತಿಯ ಕೊಟ್ಟು ಸಲಹೆ ಜಗಧೀರೆ||     ೩

ಕಾಯಕರ್ಮವಿದೂರೆ ಕಮಲನಯನ ಬಾಲೆ
ಕಾಯ ರಹಿತ ದೇವಿ ಕಮಲಾಸನರೂಢೆ||      ೪

ಭವ್ಯಜನರ ಪಾಲೆ ಭಕ್ತರ ಮಂದಾರೆ
ಭವವಿನಾಶನ ದೇವಿ ಬಾಲನ ಸಲಹೆ||         ೫

ನವಿಲವಾಹನ ರೂಢೆ ನವರತ್ನ ಭೂಷಿಣೆ
ನವಕೋಟಿ ಮುನಿವಂದ್ಯೆ ನಲವಿಂದ ಸಲಹೆ|| ೬

ಬೆಳ್ಗುಳ ಮಠವಾಸೆ ಗುರು ಪಂಡತಾರ್ಯ ಹೋಷೆ
ಬಹುಕೃಪೆಯಿಂದ ಸಲಹೆ ಶ್ರುತ ವಿಶಾರದೆ||    ೭

 

೧೪. ಚಂದ್ರನುತಚಂದ್ರ

ಚಂದ್ರನುತ ಚಂದ್ರನಾಥನ ಭಕ್ತೆ
ಸಾಂದ್ರಸದ್ಗುಣ ಮಣಿಭೂಷ ಪ್ರಶಸ್ತೆ
ತಾಂದ್ರವಿಲಯ ಜಿನಧರ್ಮ ಪ್ರಶಸ್ತಿ ಯಕ್ಷಕು
ಲೇಂದ್ರನು ಶ್ರೀ ವಿಜಯನ ಶಕ್ತೆ ರಕ್ಷಿಸೆನ್ನನು ಮತಿದೋರು||       ೧

ಸಾರಾಂಶಸಾರ ವಿಚಾರಿಸು ಚರಿತೆ
ಘೋರಹಂಕಾರ ವಿಕಾರ ತಾರೆ
ಕಾರುಣ್ಯರೂಪು ಲಾವಣ್ಯ ವಿಸ್ತಾರೆ
ಭೂರಿಗುಣತ್ರಯ ಧಾರೆ ಮನೋಹಾರೆ
ನಿರ್ಮಲಕಾರೆ ಸುಖದೋರೆ||                   ೨

ಅಂಬುಜದಳ ನಿಭಚಾರ ಸುನೇತ್ರೆ
ಕಂಬುಗೊರಳ ಕೋಮಲತೆನುದಾತ್ರೆ
ತುಂಬೆಗುರುಗಳಮುದ್ದು ತುರುಬಿಪ ಚಿತ್ರೆ
ಕೆಂಬಲಗಳ ಹಸಭವ್ಯಾಂಬುಜ ಮಿತ್ರೆ
ರಂಭೆಜ್ವಾಲಿನಿ ಸ್ಥಿರಂಜೀವಿ||                    ೩

ಕಿಂಕಿಣಿ ಸ್ವರಗಳ ಪಾಡುವಲ್ಲಿ
ಕಂಕಣರ ಝಣಝಣಿಸುವಲ್ಲಿ
ಬಿಂಕ ಬಿಂಕದಲಿ ಮುತ್ತಿನ ವಾಲೆಯ ಝಲ್ಲಿ
ಕೊಂಕುಕುರಳ ಶಂಕಿನಿ ನಾರಿಯರಲ್ಲಿ
ಶಂಕಿನಿಯರು ಸ್ತುತಿಯ ಸ್ತುತಿಸಿದಾರು||        ೪

ಕಂಜವಿಷ್ಟರೆ ಭವ್ಯ ಲೋಕ ಪ್ರಸನ್ನೆ
ರಂಜಿತ ಮಣಿಮಯ ಮೌಲಿ ಸಂಪನ್ನೆ
ಭುಂಜಿತ ಸುಖಕಲೆ ಹರಮೋಹನ್ನೆ
ಮಂಜುಜ್ಞಾನಿ ನಿತ್ಯ ಸೊಗುಸುಗಾರ್ತಿ ಬೆನ್ನು
ರಂಭೆ ಜ್ವಾಲಿನಿ ಸ್ಥಿರಂಜೀವಿ||                   ೫

ರತ್ನರಂಜಿತ ಮೂಗುತಿ ಕಂಠಮಾಲೆ
ಯತ್ನಕೃಪಾಶಿರ ಮುತ್ತಿನ ಜಾಲೆ
ರತ್ನಕೀಲಿತ ಭುಪಪೀಠದ ಮ್ಯಾಲೆ
ರತ್ನನಿರ್ಮಿತ ಪೀಠದ ಮೇಲೆ
***** ಜ್ವಾಲಿನಿ ಸಲಹೆಮ್ಮ||                  ೬

ಅಂಗಜ ಹರನ ಪಾದಂಗಳ ನಮಿಸಿ
ಮಂಗಳ ಶ್ರೀ ಜಿನಮತವನು ಧರಿಸಿ
ಶೃಂಗಾರದಿವ್ಯಗಾತ್ರವನು ಶೋಭಿಸಿ
ರಂಗುದುಟಿಯ ಚೆಲ್ವೆ ಧರ್ಮವಿಸ್ತರಿಸಿ
ಹೊಂಗಳೊಳು ನೀ ಶೀಲೆ ಸಲಹೆಮ್ಮ||         ೭

ಗರ್ವಭರಿತ ವ್ಯೆಂತರಗ್ರಹದೂರ್ತೆ
ಸರ್ವಜನರ ಪಾಲಿಪ ಮಹಾದಾತೆ
ನಿರ್ವಾಣ ಪತಿ ಮಸ್ತಕದ ಕೀರ್ತೆ
ಪೂರ್ವಸುಕೃತ ಕರಭೋಗ ಸುವಾರ್ತೆ
ದುರ್ವಾರದೂರ್ತೆ ಸಲಹೆಮ್ಮ||                ೮

 

೧೫. ದೇವಿಯನೋಡುವೆನು
ರಾಗ: ಕಲ್ಯಾಣಿ    ಆಟ ತಾಳ

ದೇವಿಯ ನೋಡುವೆನು ಶ್ರೀ ಜ್ವಾಲಿನಿ ತಾಯೇ
ನಾ ನೋಡುವೆನು ||                  ಪಲ್ಲವಿ

ನೋಡುವೆ ಪಾಡುವೆ ಮಾಡುವೆ ಸ್ತುತಿಗಳ
ಬೇಡಿದ ವರಗಳ ನೀಡುವೆ ಜ್ವಾಲಿನಿದೇವಿಯ
ಅಳಿಮರುಳಿನ ಬಾಲೆ ಕರ್ನದಿ ರಂಜಿಪ ದೇವಿಯೇ||      ೧

ಹೊಸಮುತ್ತಿನ ವಾಲೆ ರ್ಯಾಗಟಿಗೊಂಡವು
ಕ್ಯಾದಿಗಿ ಜಾಜಿಗಳಿಂದ ಜ್ವಾಲಿನಿ ಶೋಭಿಸು
ಭುವನ ಸಂಜೀವಿಯೇ ದೇವಿಯೇ ||                      ೨

ಆಭರಣವ ತೊಟ್ಟು ನಾಸಿಕದೊಳು ಮೂಗುತಿಯನಿಟ್ಟು
ಬಾಲೆಗೆ ಕಪ್ಪು ಬಾವುಲಿ ಜಾಜಿಗಳಿಂದ
ಜ್ವಾಲಿನಿ ಶೋಭಿಪ ಭುವನ ಸಂಜೀವಿಯೇ||              ೩

ಸಿಂಹಪುರಸ್ಥಳದಿ ಸ್ಥಿರಕರದಿರ್ಪ ದಯಾಕರದಿ
ಲಕ್ಷ್ಮೀಸೇನ ಮುನಿಪತಿ ಇಷ್ಟಾರ್ಥವ ಕೊಡುವಂಥ
ಅಕ್ಷಯ ವರಗಳ ಕೊಡುವಂಥ ತಾಯೇ||                ೪

 

೧೬. ಪಾಲಿಸುಪಾಲಿಸು

ಪಾಲಿಸು ಪಾಲಿಸು ಪಾಲಿಸು ತಾಯೇ
ಲೋಲ ಜ್ವಾಲಿನಿ ಎನ್ನ ಅನುದಿನ ಕಾಯೇ||              ಪಲ್ಲವಿ

ಮೊರೆಹೊಕ್ಕ ಸಿಬರ ಕಾಯಬೇಕಮ್ಮ
ಕರುಣಿಸದಿದ್ದರೆ ಕಾಯ್ವರೇ ನಮ್ಮ
ಸೆರೆಗೊಡ್ಡಿ ಬೇಡಿದೆ ಕರುಣಿಸೇ ನಮ್ಮ
ಮೊರೆಯ ಲಾಲಿಸು ತಾಯೇ ಜ್ವಾಲಿನಿಯಮ್ಮ ||         ೧

ಪಟ್ಟಪಟ್ಟಾವಳಿದ ನಿಭವನುಟ್ಟೆ
ಗಟ್ಟಿ ನೀ ರಂಜಿಕೆ ಕಂಚಿಕೆ ತೊಟ್ಟೆ
ಇಟ್ಟನೊಸಲಿಗೆ ಮೇಲು ಮುತ್ತಿನಾ ಬಟ್ಟೆ
ಕೊಟ್ಟು ರಕ್ಷಿಸುಯೆನ್ನ ಅಬಿಷ್ಟಮ ದಿಟ್ಟೆ||                  ೨

ದಾರಿದ್ರ್ಯನೆಡೆಗೊಂಡು ಧಾತುಗುಂದಿದೆನು
ಕ್ರೂರನಂಗಂಗಳಿಂದ ಕಡುನೊಂದೆ ನಾನು
ಪ್ರಾಕು ಕರ್ಮಕೆ ಸಿಕ್ಕಿ ಕಡುನೊಂದೆ ನಾನು
ಸಾರಯ್ಯ ದಯೆಯೆನ್ನ ಸಲಹಬೇಕಿನ್ನು||                 ೩

ಚಂದ್ರಾರ್ಕಕೋಟಿ ಪ್ರಕಾಶದೊಳೆನ್ನ
ಚಂದ್ರ ಜಿನೇಂದ್ರ ಯಕ್ಷಿಣಿಯಮ್ಮ
ಇಂದ್ರಾದಿವಂದಿತೆ ದೇವಿಯಮ್ಮ
ಬಂದ ವಿಘ್ನಗಳನು ಪರಿಹರಿಸಮ್ಮ||                      ೪

ಘನವಾದ ಬೆಳ್ಗೊಳಪುರದ ಭಕ್ತರನು
ಅನುದಿನ ಸಲಹಮ್ಮ ಪುತ್ರಾಪವಿತ್ರರನು
ಕ್ಷಣ ಅಗಲದೆ ಎನ್ನ ಹೃದಯದೊಳಗೆ
ನೀನು ಮನೆ ಮಾಡಿಕೊಂಡರು||                         ೫