೧. ಅಷ್ಟಕಂಬದಮಂಟಪ
ಅಷ್ಟಕಂಬದ ಮಂಟಪವಲಂಕರಿಸಿ
ಪಟ್ಟೆಪೀತಾಂಬರಗಳನು ಶೃಂಗರಿಸಿ
ಬಟ್ಟ ಮುತ್ತಿನ ಜಲ್ಲಿಗಳು ತಂದಿರಿಸಿ
ತೊಟ್ಟಿಲ ಕಟ್ಟಿದರಾಗ ಸಂಭ್ರಮದಿ ಜೋ ಜೋ || ೧
ಮೃದುತಲದಲಿ ಹಾಸಿಗೆಯ ಹಾಸಿದರು
ಒಲವಿಂದ ಗಂಧಕಸ್ತೂರಿಯ ಪೂಸಿದರು
ವಿಧವಿಧರಾಗದಿ ಪಾಡುತ ಶಿಸುವನು
ಮುದದಿಂದ ತೊಟ್ಟಿಲೊಳಿರಿಸಿ ತೂಗಿದರು ಜೋ ಜೋ || ೨
ಮುಡಿದಮಲ್ಲಿಗೆ ಸರ ಎಡಬಲಕೋಲೆಯು
ಕಡಗಕಂಕಣ ಬಳೆಗಳು ದನಗೆಯ್ಯೆ
ಬೆಡಗಿಂದ ಢವಳ ಶೋಭಾನವ ಪಾಡುತ್ತ
ಕಡುಜಾಣೆಯೆರಲ್ಲ ತೂಗಿ ಹಾಡಿದರು ಜೋ ಜೋ|| ೩
ಗೌಳಿಗುಜ್ಜರಿನಾಟಿ ಜಂಪೆಗಳಿಂದ
ಸಾಳಂಗ ಕಾಂಬೋಧಿಕಲ್ಯಾಣಿಯಿಂದ
ಮೇಲಾದರಾಗದಿ ಸ್ವರವೆತ್ತಿ ಪಾಡುತ
ಬಾಲೆಯರೆಲ್ಲ ಜೋಯೆನುತ ತೂಗಿದರು ಜೋಜೋ || ೪
ಜೋಜೋ ಜಿನಪಾದ ಸರಸಿಜ ಭೃಂಗ
ಜೋಜೋ ಸಾಕಾರರಾಯನ ಕಂದ
ಜೋಜೋ ಮನಸಿಜ ಸಮರೂಪನೆನುತ
ಜೋಳುಗಪಾಡಿ ತೂಗಿದರು ನಾರಿಯರು ಜೋಜೋ || ೫
ಜನನಿಯ ಗರ್ಭಾಬ್ಧಿ ಚಂದ್ರಾಮ ಜೋಜೋ
ದಿನಕರ ಕೋಟಿಯಂತೆಸೆವನೆ ಜೋಜೋ
ಘನಗುಣಾನ್ವಿತ ಜಿನದತ್ತ ಜೋಯೆಂದು
ವನಜಗಂಧಿಯರೆಲ್ಲ ತೂಗಿ ನಲಿದರು ಜೋಜೋ || ೬
ಸಿರಿಗುರುವಿನ ಮುದ್ದುಕುವರನೆ ಲಾಲಿ
ಧರಣೇಶ ಸಾಕಾರ ತನುಜನೇ ಲಾಲಿ
ತರುಣಿ ಅಂಜನಾ ದೇವಿಕಂದನೆ ಲಾಲೆಂದು
ತರುಣಿಯರೆಲ್ಲ ತೂಗಿ ಪಾಡಿದರು ಜೋಜೋ || ೭
೨. ಜೋಜೋಪುರುಪರಮೇಶನ
ಜೋಜೋ ಪುರಪರಮೇಶನ ಕಂದ
ಜೋಜೋ ಸುನಂದ ನಯನಾನಂದ
ಜೋಜೋ ಭುವಿನುತ ಚರಣಾರವಿಂದ
ಜೋಜೋ ನಿರ್ಮಲ ಸದ್ಗುಣವೃಂದ || ೧
ಮನುಭೂಮಿಪತಿವಂಶ ಲಕ್ಷ್ಮಿಲಲಾಮ
ವನಿತಾಜನನಾಯನಾಭಿರಾಮ
ಅನವದ್ಯಚರಿತ ಸಂಗರ ರಂಗಭೀಮ
ನಿನಗೆಣೆಯುಂಟೇ ಧರಣಿಗಧಿಕವು || ೨
ಕಾಲಲಂದುಗೆ ಗೆಜ್ಜೆ ಝಲ್ಲ ಝಲ್ಲೆನುತಲಿಯೇ
ಚಾಲಿಂದ್ರದೋಲೆ ಕರ್ಣಗಳೊಳ್ಪೆಳೆಯೇ
ಮೇಲು ಮುತ್ತಿನ ಸರಯುರದೊಲಗೋಲೆಯೇ
ಬಾಲೆಯರಿಂತು ತೂಗಿದರು ಬಾಲಕನಾ || ೩
ಬಡನಡು ಬಳುಕೆ ಹೊಂಗೊಡ ಮೊಲೆಯಲುಗೆ
ಕಡೆಗಣ್ಣಕಾಂತಿ ದೆಸೆಯನೆಲ್ಲ ಬೆಳಗೆ
ಮಡಿದ ಮಲ್ಲಿಗೆಗೆ ತುಂಬಿಗಳು ಬಂದೆರಗಿ
ಮಡದಿಯರೆಲ್ಲರು ತೂಗಿದರು ಬಾಲಕನ || ೪
ಆದಿಚಕ್ರೇಶನ ಒಡಹುಟ್ಟಿದನುಜ
ಮೇದಿನಿಯೊಳು ವಿತರನ ಕಲ್ಪ ಭೂಜ
ಆದಿತ್ಯಮಂಡಲ ಸುರಚಿರ ತೇಜ
ಶ್ರೀದಿವಿಜಾನತ ಚರಣ ಸರೋಜ || ೫
ಮೋಹನ ಕಾಯ ಮಕ್ಕಳ ಶಿರೋರನ್ನ
ಸಾಹಸಿ ಸಕಲ ಲಾವಣ್ಯಸಂಪನ್ನ
ಬಾಹುಬಲೀಶ ಕುವರ ಸುಪ್ರಸನ್ನ
ಪಾಹಿಮಾಂ ಸರ್ವೆಸಜ್ಜನ್ಮತಾಸನ್ಯ || ೬
ಮೇರುಧರಾಧರ ಸನ್ನಭದೀರ
ಪಾರಾವಾರ ಸಮಾನ ಗಂಭೀರ
ಕಾರುಣ್ಯ ನಿಧಿ ತ್ರಿಜಗ್ಯೆಕಸುವೀರ
ಚಾರುಕೋಮಲ ನೀಲವರ್ಣ ಶರೀರ || ೭
೩. ಜೋಜೋದಿವಾಕರತೇಜ
ಜೋಜೋ ದಿವಾಕರ ತೇಜ ವಿರಾಜ
ಜೋಜೋ ಆಶ್ರಿತ ಸುರಕಲ್ಪ ಭೂಜ
ಜೋಜೋ ಖಗಚಕ್ರಕೀರ್ತಿಗರ್ಭೇಜ
ಜೋಜೋ ರಜತಾದ್ರಿಯೊಡೆಯನೆ ರಾಜ || ೧
ಜೋಜೋ ಜ್ಯೋತಿ ಉದರ ಸಂಜಾತ
ಜೋಜೋ ಅಂಬರಚರ ಕುಲಪ್ರಖ್ಯಾತ
ಜೋಜೋ ರಾಜಾಂಗಸಪ್ತಾನ್ವಿತ ಪ್ರೀತ
ಜೋಜೋ ವಿದ್ಯಾಂಸಮನೋಭೀಷ್ಟದಾತ || ೨
ಜೋಜೋ ದಯಾನಿಧಿವರ್ಧನ ಚಂದ್ರ
ಜೋಜೋ ಸ್ವರ್ಗಾವತರಣಾವ x x x
ಜೋಜೋ ಏಕಾದಶವರ್ಗಪುರೇಂದ್ರ
ಜೋಜೋ ಮದವೆತ್ತದಂತಿ ಮೃಗೇಂದ್ರ || ೫
೪. ಅಳುವುದ್ಯಾತಕೆಕಂದಾ
ಅಳುವುದ್ಯಾತಕೆ ಕಂದಾ ಅತ್ತರಂಜಿಸು ಗುಮ್ಮಾ
ಏಳಯ್ಯ ಕಾರುಣ್ಯ ನೆಲಸಿದೆ ನಿನ್ನೊಳಗೆ
ವಜ್ರದ ಪಡಿಗಳು ಸೋಂಕಿದ ಕಿರುವೆರ
ಳುಳುಕಿತೆ ನಿನಗಲರಡಿಯ ಕಂದಯ್ಯ || ೧
ಗರಳದಾ ಮಡುವಿನಲಿ ಧುಮುಕಿದಾ ಕಾರಣದಿ
ಚಣವು ನೊಂದಿತೆ ಪುವ್ವಿನ ಮಳೆಯಿಳಿ
ತರಲು ನಿನಗೆ ದೇಹ ಬಳಲಿತೆ ಕಂದಾ || ೨
ಕುರುಹನರಿದು ಪಂಚಗಂಧಿಯರೀ ವಿತರಣದಿ
ಕರಿಯ ಗೆಲಿದು ಹರಿಯಳವಡಿಸುವ ಭೂ
ವರರ ಸೋಲಿಸಿ ಕರ ನೊಂದಿತೆ ನಿನಗೇ || ೩
ದುಷ್ಟ ಚಂಡಪ್ರಭನಾ ಪಿಡಿದು ವಿದ್ಯಾಧರರಾ
ಕುಟ್ಟಿಯಸುರರನು ಕೆಡಹಿದ ಕಾರಣ
ದುಷ್ಟಮೂರುತಿ ಬಳಲಿದುವೆ ಕಂದಯ್ಯ || ೪
ಮೂರು ಕಂಡವ ಸುತ್ತಿ ಬಳಲಿದವೆ ಪದಯುಗಲ
ವಾರಿಜೋದ್ಭವೆಯಾದಿ ರಮಣಿಯರೊಳು ನಲಿ
ದಾರಮೆ ಸುಖದೊಳೋಲಾಡೊ ಕಂದಯ್ಯ || ೫
೫. ಜೋಜೋಜೋಜಯ
ಜೋ ಜೋ ಜೋ ಜೋ ಜಯನೃಪಸುತನೆ
ಜೋ ಜೋ ಜೋ ಜೋ ಪೃಥ್ವಿನಂದನೆ
ಜೋ ಜೋ ಜೋ ಜೋ ಕುರುಕುಲವರನೆ
ಜೋ ಜೋ ಜೋ ಜೋ ವಿಕ್ರಮಂಧರನೇ || ಪಲ್ಲವಿ
ಸುತ್ತಿನ ಲವಣ ಸಮುದ್ರದ ಮಧ್ಯದಲೀ
ನಿಂತ ಮಂದರಗಿರಿ ಬಲದ ಭಾಗದಲೀ
ಅರ್ತ ವಿರಾಜಿತ ಮಗಧ ದೇಶದಲೀ
ಚಿತ್ರದಿ ರಂಜಿಪ ಕನಕಪುರದಲೀ || ೧
ಜನಕ ಜಯಂಧರನೆಂಬ ನೈಪಾಲಾ
ಜನನಿ ಪೃಥ್ವೀದೇವಿಯೆಂಬ ಸುಶೀಲೆ
ವನಧಿ ಶಶಾಂಕ ವಂಶಜನತಿ ಲೋಲ
ತನಯನಾದನು ವಿಕ್ರಮಂಧರ ಬಾಲಾ || ೨
ಬಾಲ ಲೀಲೆಯೊಳು ಜಿನಾಲಯದೆಡೆಯಾ
ಬಾಲಾ ನಾಡುತರರೇ ಚರಣದ ರುಚಿಯಾ
ಜಾಲ ಸೋಂಕಿನಲಿ ಘಟಿತ ವಜ್ರಪಡಿಯಾ ವಿ
ಶಾಲದಿ ಬಿರಿದಾರ ಪುಣ್ಯಕೆ ಸರಿಯೇ || ೩
ಮೊಳಗಿತು ದೇವದುಂದುಭಿ ಪುಷ್ಪಮಾಲೆ
ಯಿಳಿದುದಾಗಸದಿಂದ ಶಿಶುವಿನ ಮೇಲೆ
ಒಳ ಹೊಕ್ಕು ಗರಳೆ ಮಡುವಿನಲಿ ತಡಿಯಲೆ
ಕುಳಿತು ನೋಡಲು ಕಾಳೋರಗನಿರಲೂ || ೪
ಕಂಡಜಗರನ ಪಿಡಿವೆನೆಂದು ಗರಳಾ
ಕುಂಡವ ಧುಮುಕಿದ ಬಾಲನ ಗರಳಾ
ಕುಂಡಲಿ ಪೆಡೆಯೊಳಗಾಂತಿರೆ ಮಹಿಳೆ
ಕಂಡು ದುಮ್ಮಿಕ್ಕಿದಳೇನತಿ ಪ್ರಿಯಳೊ || ೫
ಕೊಡುವುದೆಮಗೆ ಪುತ್ರಿದಾನವನೆಂದೂ
ದೃಢದಿ ಕೇಳಲು ಫಣಿರಾಜನು ಬಂದು
ಪೊಡವಿ ದೇವಿಗೆ ಶಿಸುವಿತ್ತ ತಾನೊಂದೂ
ಪಡೆದನು ನಾಮವ ಫಣಿಸುತನೆಂದು || ೬
ಹೊನ್ನದೊಟ್ಟಿಲೊಳಿಟ್ಟು ಗರಳಮರ್ದನನಾ
ಚನ್ನೆ ನಿರೀಕ್ಷಿಸಿ ಪಾಡುತ ಸುತನಾ
ಉನ್ನತ ಗುಣಗಳ ಧರಿಸಿದ ಮದನಾ
ರನ್ನಮುರಾಂತಕ ಲಕ್ಷ್ಮಿಯ ರಮಣ || ೭
ಜೋ ಜೋ ಚಂದ್ರಪ್ರಭ ಮಾನಾಪಹಾರಿ
ಜೋ ಜೋ ಸುಕಂಠನ ಪ್ರಾಣ ಸಂಹಾರಿ
ಜೋ ಜೋ ನಿಶಾಚರಣೆ ಕರಕುಠಾರಿ
ಜೋ ಜೋ ತ್ರಿಲೋಕಕ್ಕೆ ನೀನೇ ಉದಾರಿ || ೮
ಲಾಲಿ ಮೇಣ್ಸಾಸಿರ ನಾರಿಯರರಸಾ
ಲಾಲಿ ಲಕ್ಷ್ಮೀಲೋಲನೆಂಬ ಶ್ರೀ ಸರಸಾ
ಲಾಲಿ ತ್ರಿಭಾಂಡಕ್ಕೆ ನೀನೊಬ್ಬನರಸಾ
ಲಾಲಿ ಶ್ರೀಮುಕ್ತಿ ಮನೋಹರನೆನಿಸಾ || ೯
೬. ಜೋಜೋಸುಪಾರಿಶ್ವ
ಜೋ ಜೋ ಜೋ ಜೋ ಸುಪಾರಿಶ್ವನಾಥ
ಜೋ ಜೋ ಜೋ ಜೋ ತ್ರೆಲೋಕ್ಯಪ್ರಖ್ಯಾತ
ಜೋ ಜೋ ಜೋ ಜೋ ಶತ ಇಂದ್ರವಂದಿತ
ಜೋ ಜೋ ಜೋ ಜೋ ಮೋಕ್ಷಲಕ್ಷ್ಮಿನಾಥ || ಪಲ್ಲವಿ
ಇನ್ನಾರುದಿಂಗಳಿಗುದಯಿಪರೆಂದು
ಮುನ್ನಾ ದೇವೇಂದ್ರನರಿದ ಕಾಣಮ್ಮ
ರನ್ನದ ಮಣಿಯನು ಕರೆದು ಬಾರೆಂದು
ಚೆನ್ನ ಕುಭೇರಗೆ ಬೆಸಸಿದರಮ್ಮ ಜೋ ಜೋ || ೧
ಸರ್ವಾರ್ಥ ಸಿದ್ಧಿಯಿಂದ ಸ್ವಾಮಿ ತಾ ಬಂದ
ಬ್ರಹ್ಮಲದೇವಿ ಗರ್ಭವಾಸ ತಾ ನಿಂದ
ನವಮಾಸ ತುಂಬಿತು ತಾಯಿಗಾನಂದ
ಜನ್ಮಕಲ್ಯಾಣಕೆ ಶತಯಿಂದ್ರ ತಾ ಬಂದ ಜೋ ಜೋ || ೨
ಗ್ರಾಮದ ನಾರಿಯರು ಎಲ್ಲರೂ ಬಂದು
ತುಂಬಿದ ಕೊಡದಲ್ಲಿ ನೀರನೆ ತಂದು
ಬಮದ ಮುತ್ತೈದೆಯರು ಬಹುಮಾನ ನಿಂದು
ಎಲೆ ಅಡಿಕೆ ಪನಿವಾರ ಕೊಟ್ಟಾರು ತಂದು ಜೋ ಜೋ || ೩
ಇಪ್ಪತ್ತು ದಿನದಲ್ಲಿ ಶುಭದಿನ ನೋಡಿ
ನವರತ್ನ ಖಚಿತದ ಕಾಷ್ಠವ ಮಾಡಿ
ಕನಕ ಸರ್ಪಣಿ ಮಂದಿರಕೆ ತೂಗಾಡಿ
ಬಂದು ಮುತ್ತೈದೆಯರು ಸ್ವಾಮಿ ಪಾದ ಕೊಂಡಾಡಿ ಜೋ ಜೋ || ೪
ಧರೆಗೆ ಉನ್ನತ ಚಿದಗುಂಬಿ ವಾಸ
ಅಮ್ಮನ ದಯದಿಂದ ಆಣ ಪ್ರಕಾಶ
ಬಸ್ತಿಲೆ ಹೋಗವುತ ನಿಮ್ಮ ಪ್ರಕಾಶ
ಭವ್ಯಜನರಿಗೆ ನೀ ಸಲಹು ಸಂತೋಷ ಜೋ ಜೋ || ೫
೭. ಜೋಜೋಜೋಶ್ರೀ
ಜೋ ಜೋ ಜೋ ಜೋ ಶ್ರೀ ಆದಿಜಿನೇಶಾ
ಜೋ ಜೋ ಜೋ ಜೋ ಶ್ರೀ ಧರ್ಮಪ್ರಕಾಶಾ
ಜೋ ಜೋ ಜೋ ಜೋ ಶ್ರೀ ಸದ್ಗುಣಕೋಶ
ಜೋ ಜೋ ಜೋ ಜೋ ಶ್ರೀ ಮುಕ್ತಿಯಕಾಂತಾ || ೧
ಸವಾರ್ಥ ಸಿದ್ದಿಯ ಬಿಟ್ಟು ನೀ ಬಂದು
ಮರುದೇವಿಯ ಶುದ್ಧ ಉ
ದರದೊಳ್ನಿಂದು ಇಂದ್ರನರಿದು ವಿದತ್ತಪತಿ
ಕರೆದಂದು ಅನುಜ್ಞಯನಮಳೆ ಪೇಳ್ವರೆಂದು || ೨
ಅಯೋಧ್ಯಾನಗರಿಗೆ ಹೋಗು ನೀ ಬೇಗ
ನಾಭಿರಾಜನ ಗೃಹ ಬಾಹ್ಯದೊಳಗಾ
ರತ್ನದಾ ಮಳೆಗರೆ ಶ್ರೀಘ್ರದೊಳೀಗ
ಮೂರು ಕಾಲದಿ ಮೂರುವರೆ ಕೋಟಿ ಈಗ || ೩
ಒಂಬತ್ತು ತಿಂಗಳು ತುಂಬಲು ಬೇಗ
ಹಡೆದಳು ಮರುದೇವಿ ವೃಷಭೇಶನಾಗ
ಶಚಿದೇವಿ ಸಹಿತ ಇಂದ್ರನು ಬಂದನಾಗ
ಪ್ರಸೂತಿ ಗೃಹವ ಹೊಕ್ಕಳು ಶಚಿ ಬೇಗ || ೪
ಅಲ್ಲೊಂದು ಮಾಯದ ಶಿಸುವನ್ನ ಇರಿಸಿ
ತೆಗೆದುಕೊಂಡಳು ಸಂಪ್ರೀತಿಯವೆರಸಿ
ಇಂದ್ರನ ಕರಯುಗದೊಳು ತಾನಿರಿಸಿ
ಸ್ತುತಿ ಸಹಸ್ರಗಳಿಂದ ದೇವನಾ ಸ್ತುತಿಸಿ || ೫
ಐರಾವತವನೇರಿಸಿ ಬಂದನಾಗ
ಪಾಂಡಕಾ ಶಿಲೆಯೊಳು ಇರಿಸಿದಾಬೇಗ
ಕ್ಷೀರಜಲವ ತಂದು ಎರೆದರು ಬೇಗ
ಭೋರೆಂಬ ವಾದ್ಯದಿ ಜಯವೆಂದರಾಗಾ || ೬
ಅಂಗವಸ್ತ್ರದಿ ಮೈಯನೊರಸಿದನಾಗ
ಅಂಗಜ ವಿಜಯಗರ್ತಿಯೊಳತಿ ಬೇಗ
ಸುಗಂಧಜಲವ ತಂದು ಪ್ರಕ್ಷಲಿಸುತಾಗ
ಮಂಗಳಾಭರಣ ತೊಡಿಸಿದನಿಂದ್ರನಾಗ || ೭
ಮರಳಿ ಮಾತೆಯ ಮಗ್ಗಿಲೊಳು ದೇವ
ನಿರಿಸಿ ಇಂದ್ರ ಹೋದನು ತನ್ನ ದೇವಿಯ
ವೆರಸಿ ಇತ್ತಲು ನಾಭಿರಾಜನ ಪಟ್ಟ
ದರಸಿ ಮಗನ ಮುಖವ ನೋಡಿ ಸುಖಿಯಾಗಿ ಹರಸಿ || ೮
ವಿಶ್ವಕರ್ಮ ನಿರ್ಮಿಸಿದ ತೊಟ್ಟಿಲವು
ರತ್ನದಿ ನಿರ್ಮಿತ ಚಿತ್ರವು ಕೆಲವು
ಮತ್ತೆ ನಾನಾವಿಧ ಪ್ರತಿಮೆಯ ಚೆಲವು
ಅಭವನಿದ್ರೆಗೈಯ್ಯ ಭವದ ಚೆಲವು || ೯
ನಾಕಾದಿ ಸ್ತ್ರೀಯರು ಎಲ್ಲರೂ ಕೂಡಿ
ಮಲಹರಿ ದೀಪಾಕಿ ರಾಗದಿ ಹಾಡಿ
ನಾನಾ ವರ್ಣಗಳಿಂದ ಜಿನನ ಕೊಂಡಾಡಿ
ಹರುಷ ಕ್ಷೀರಾಬ್ದಿಯೊಳ್ಮುಳುಗಿ ಚೆನ್ನಾಗಿ || ೧೦
ಜಯ ಜಿನಪತಿ ಜಯ ಮನ್ಮಥ ಹರನೇ
ಜಯ ಜಯ ಶಂಭು ಶಂಕರ ಮುಕ್ತಿವರನೇ
ಜಯ ಜಯ ಮಂಗಳ ಕರಮುಕ್ತಿವರನೇ
ಜಯ ಜಯ ನಿರ್ಭಯ ನಿರಘ ನಿರ್ಮಲನೇ || ೧೧
ಪಂಚಕಲ್ಯಾಣ ಪರಂಜ್ಯೋತಿ
ಪಂಚಮಗತಿ ನಾಥ ಪಾವನಮೂರ್ತಿ
ಪಂಚಬಾಣ ಜಿತ ಜಿನಚಕ್ರವರ್ತಿ
ಪಂಚಮ ಜ್ಞಾನಕ್ಕೆ ನೀನಧಿಪತಿ || ೧೨
ಅಷ್ಟಮಂಗಲ ಪ್ರತಿಹಾರ್ಯ ಸಮೇತ
ಅಷ್ಟಮಂಗಲ ಗುಣಮಂಡಿತಗಾತ್ರ
ಅಷ್ಟದಶಾದೋಷ ನಿರ್ಜಿತ ಚಿತ್ರ
ಅಷ್ಟಮ ಪೃಥ್ವಿಸತಿಗೆ ನೀನೆ ಕರ್ತ || ೧೩
ಜಯಸುರ ನರನಾಗವಂದಿತ ಪಾದ
ನಿರುಪಮ ನಿರ್ಮಲ ಕೇವಲ ಬೋಧ
ಜನನ ಮರಣ ಜರೆ ತ್ರಿಪುರ ವಿನಾಶ
ಕೇವಲ ಜ್ಞಾನ ತಿಮಿರ ಜಿನೇಶಾ || ೧೪
ವೃಷಭ ಅಜಿತ ಶಂಭವ ಗುಣರಾಶಿ
ಅಭಿನಂದನ ಸುಮತಿ ಅಪುದ್ವಂಶಿ
ಪದ್ಮಪ್ರಭು ಸರ್ವಜ್ಞ ಪ್ರಕಾಶಿ
ವರಸುಪಾರೀಶ್ವ ಮಹಾತತ್ವ ಭಾಷಿ || ೧೫
ಚಂದ್ರಪ್ರಭ ಪುಷ್ಪದಂತ ಜಿನೇಶಾ
ಶೀತಳ ಶ್ರೇಯಾಂತ ಬುದ್ಧಿ ವಿಶೇಷ
ವಾಸುಪೂಜ್ಯ ವಿಮಲ ಕರ್ಮನಾಶ
ತಾನಂತ ಧರ್ಮಶಾಂತಿ ಕಂಥುಗಣೇಶಾ || ೧೬
ಅರಮಲ್ಲಿ ಮುನಿ ಸುವ್ರತನೇಮಿನಾಥ
ನೇಮಿ ಜಿನೇಂದ್ರ ತ್ರೈಲೋಕ್ಯ ಪ್ರಖ್ಯಾತ
ಪಾರಿಶ್ವ ವರ್ಧಮಾನ ಶ್ರೀ ಮುಕ್ತಿನಾಥಾ
ಇಪ್ಪತ್ತನಾಲ್ವರ ಗುಣಗಾಣ ಕಥಾ || ೧೭
ಸ್ವರ್ಗದಾ ಸ್ತ್ರೀಯರೂ ಎಲ್ಲರೂ ಕೂಡಿ
ಆದಿ ಜಿನೇಂದ್ರನ ಜೋಗುಳ ಪಾಡಿ
ಮನವಚನ ಕಾಯಗಳನು ಶುದ್ಧಿ ಮಾಡಿ
ತಮಗೆ ಸ್ವರ್ಗಪವರ್ಗದ ಸುಖಬೇಡಿ || ೧೮
ಧರೆಯೊಳೊಪ್ಪುವ ಸೇಜಾನುಪುರದ
ನಿರುಪಮ ಚೈತ್ಯಾಲ ವಾಸದೊಳು ತಾ
ಮೆರೆದ ಪರಮ ಭವ್ಯರಿಗೆ ಧರ್ಮಾಮೃತ
ಕರೆದ ಭುಜದಲಿ ಇಂದ್ರಗೆ ಸಮ್ಮತಿವರೆದ || ೧೯
ಹದಿನೆಂಟು ಪದವ ಕಲಿತು ಪಾಡಿದವರಿಗೆ
ಮುದದಿಂದ ಮುತ್ತೈದಿತನವು ಅವರಿಗೆ
ಸದಮಲ ಭಾಗ್ಯಭೋಗವು ಸತಿಪತಿಗೆ ಕ್ರ
ಮದಿಂದ ಪತಿಯಾಹರು ಮುಕ್ತಿ ಸತಿಗೆ || ೨೦
೮. ಶ್ರೀಜಿನರಡಿಗಳಹರುಷದಿ
ಶ್ರೀಜಿನರಡಿಗಳ ಹರುಷದಿ ಪಾಡಿ
ಶ್ರೀ ಶಾರದಾಂಬೆಯ ಗುಣವಕೊಂಡಾಡಿ
ಬಾಲಚಂದ್ರನ ಪೋಲ್ವ ಬಾಲರಮಣಿಯ
ಬಾಲೆಯರೆಲ್ಲ ಜೋ ಎನುತ ತೂಗಿದರು ಜೋಜೋ || ೧
ಕಟ್ಟಿದರ್ ಬೆಳ್ಳಿಯ ಸರಪಣಿಗಳನು
ಇಟ್ಟಿರು ಕನಕದಿಂ ಸಮೆದ ತೊಟ್ಟಿಲನು
ಪಟ್ಟೆಪೀತಾಂಬರ ಹಾಸಿ ಮಗುವನು
ದಿಟ್ಟನಾಗೆನ್ನುತ ಪಾಡೆ ರಾಗವನು ಜೋಜೋ || ೨
ಪೃಥಿವೀದೇವಿಯ ಗರ್ಭನಿಷದದ್ಯುಮಣಿಯೇ
ಕ್ಷತ್ರಿಯವಂಶಾಂಬರದಿನ ಮಣಿಯೇ
ದಿವ್ಯಸುಲಕ್ಷಣ ಭವ್ಯಕುಮಾರ
ದಿವ್ಯರೂಪನೆ ನಾರೀಮೋಹನಮಾರ ಜೋಜೋ || ೩
ತೇಜೋನಿಧಿ ವಿಕ್ರಮಂದ್ರ ಜೋ ಎಂದು
ರಾಜೀವನೇತ್ರೆಯರೊಲಿದು ತೂಗಿದರು ಜೋಜೋ || ೪
ಗೌಳಗುಜ್ಜರನಾಟಿ ಜಂಪೆಗಳಿಂದ
ಸಾರಂಗ ಕಾಂಭೋಜಿ ಕಲ್ಯಾಣಿಯಿಂ
ವಿಧವಿಧಸ್ವರವೆತ್ತಿ ಮದದಿ ಪಾಡುತಲಿ
ಚದುರಬಾಲಕನನು ತೂಗಿದರಾಗ ಜೋಜೋ || ೫
೯. ಜೋಜೋಜೋಜೋಶ್ರೀವೀರನಾಥಾ
ರಾಗ: ಶಂಕರಾಭರಣ ತಾಳ: ತ್ರಿಪುಟತಾಳ
ಜೋ ಜೋ ಜೋ ಜೋ ಶ್ರೀವೀರನಾಥಾ
ಜೋ ಜೋ ಜೋ ಜೋ ಸಿದ್ಧಾರ್ಥ ಕುವರಾ || ಪಲ್ಲವಿ
ರನ್ನದ ತೊಟ್ಟಿಲೊಳಿಟ್ಟು ಬಾಲಕನ
ಚೆನ್ನೆಯರೊಲಿದು ಪಾಡುತ ಮುದ್ದುಸುತನ
ಬಿನ್ನಾಣದಿ ತೂಗಿದರಮತೆ ಜಿನನ
ರನ್ನದ ಬೊಂಬೆಯಂದದಿ ಚೆಲ್ವಸುತನ ಜೋಜೋ || ೧
ಬಿದಿಗೆಯ ಚಂದ್ರನಂದದಿ ಕಳೆ ಬರಲು
ತೊದಲ್ನುಡಿಗಳನಾಡಿ ಕಾಲನ್ನಿಡಲು
ಮುದದಿಂದ ಬಾಲ್ಯದುಡಿಗೆಯ ತೊಡಿಸಲು
ಚದುರನಂಗಣದೊಳಗಾಡುತ್ತಿರಲು ಜೋಜೋ || ೨
ಪ್ರಿಯಕಾರಿಣಿದೇವಿಯ ಮುದ್ದುಕಂದ
ರಾಜಸಿದ್ಧಾರ್ಥನ ನೇತ್ರಕ್ಯಾನಂದ
ಛಾಯಾರೂಪಿನ ಚಂದದೊಳಂದ
ಪ್ರಿಯದಿಂ ಮುದ್ದಿಟ್ಟು ತೂಗುವುದೊಂದು ಚಂದ ಜೋಜೋ || ೩
೧೦. ಜೋಜೋಪುರುಪರಮೇಶ
ರಾಗ: ಕಾಂಬೋಧಿ ತಾಳ: ಚಾಪುತಾಳ
ಜೋ ಜೋ ಪುರುಪರಮೇಶನ ಕಂದ
ಜೋ ಜೋ ಸುನಂದಾ ನಯನಾನಂದ
ಜೋ ಜೋ ಭುವಿ ನುತಚರಣಾರವಿಂದ
ಜೋ ಜೋ ನಿರ್ಮಲಸದ್ಗುಣವೃಂದ ಜೋ ಜೋ || ೧
ಜೋ ಜೋ ಮನು ಭೀಮಿಪತಿವಂಶಲಕ್ಷ್ಮೀಲಲಾಮ
ಜೋ ಜೋ ವನಿತಾಜನನೇತ್ರಾನಂದ
ಜೋ ಜೋ ಅನವದ್ಯಚರಿತಾಭಿರಾಮ
ಜೋ ಜೋ ನಿನಗೆಣೆಯುಂಟೆ ಧಾತ್ರಿಯೊಳು ಜೋ ಜೋ || ೨
ಕಾಲಲಂದುಗೆ ಗೆಜ್ಜೆ ಝಲ್ಲೆನುತೊಲೆಯೇ
ಜಾಲೀಂದ್ರದೋಲೆ ಕರ್ಣಗಳೊಳ್ಪೊಳೆಯೇ
ಮೇಲು ಮುತ್ತಿನ ಸರ ವಕ್ಷದೊಳೊಲೆಯೇ
ಬಾಲೆಯರಿಂತು ತೂಗಿದರು ಬಾಲಕನ ಜೋ ಜೋ || ೩
ಬಡನಡು ಬಲುಕೆ ಪೊಂಗಡ ಮೊಲೆಯಲುಗೆ
ಕಡೆಗಣ್ಣ ಕಾಂತಿದಸೆಯನೆಲ್ಲ ಬೆಳಗೇ
ಮುಡಿದ ಮಲ್ಲಿಗೆಗೆ ತುಂಬಿಗಳು ಬಂದೆರಗೆ
ಮಡದಿಯರೆಲ್ಲ ತೂಗಿದರು ಬಾಲಕನ ಜೋ ಜೋ || ೪
ಆದಿಚಕ್ರೇಶನನುಜ ಕಾಮರೂಪ
ಮೇದಿನಿಯೊಳು ವಿತರಣಕಲ್ಪಭೂಜ
ಆದಿತ್ಯಮಂಡಲಸುರುಚಿರತೇಜ
ಶ್ರೀದಿವಿಜಾನತ ಚರಣಸರೋಜ ಜೋ ಜೋ || ೫
ಮೋಹನಕಾಯ ಮಕ್ಕಳ ಶಿರೋರತ್ನ
ಸಾಹಸಿ ಸಕಲ ಲಾವೆಣ್ಯಿಸಂಪನ್ನ
ಬಾಹುಬಲೀಶ ಕುವರ ಸುಪ್ರಸನ್ನ
ಪಾಹಿಮಾಂ ಸರ್ವಸಜ್ಜನತಾಸನ್ನ ಜೋ ಜೋ || ೬
ಮೇರುಧರಾಧರಸನ್ನಿಭಧೀರ
ಪಾರಾವಾರ ಸಮಾನಗಂಭೀರ
ಕಾರುಣ್ಯನಿಧಿ ಮೂರು ಲೋಕೈಕವೀರ
ಚಾರುಕೋಮಲನೀಲವರ್ಣ ಶರೀರ ಜೋ ಜೋ || ೭
Leave A Comment