. ಕರೆತಾರೆಸರಸ್ವತಿಪ್ರಾಣ

ಕರೆತಾರೆ ಸರಸ್ವತಿ ಪ್ರಾಣದೊಲ್ಲಭನ
ಮರೆಹೊಕ್ಕ ಜನರ ರಕ್ಷಿಸಿ ಪಾಲಿಸುವನ
ಪರಮ ಸಂತೋಷದಿಂದ ಜಿನನರಿದನ
ಸರಿಯೂರು ಶ್ರವಣಗುಂಡದ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೧

ಭಂಗವಾಡಿಯ ಭವ್ಯ ಜನರ ರಕ್ಷಿಪನ
ತುರಗವನೇರಿ ವೈಯಾಳಿ ಬಿಡುವನ
ಮಂಗಲಮೂರ್ತಿ ಮನ್ಮಥಗೆಲಿದನ
ಶೃಂಗಾರವಡದಿರ್ದ್ದ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೨

ಮಾನಿನಿಯರಿಗೆ ಮಕ್ಕಳ ಕೊಡುವವನ
ನಾನಾದೇಶಕ್ಕೆ ಕೀರ್ತಿಪಡೆದವನ
ಭಾನುಬಿಂಬದ ಪ್ರಕಾಶವುಳ್ಳವನ
ಆನಂದದಿಂದ ಬರುವ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೩

ಭೂತಳದೊಳು ಮಹಾಖ್ಯಾತಿ ಪಡೆದನ
ಶೀತಲ ಜಿನರಿಗೆರಗಿ ನುತಿಸುವನ
ಪ್ರೀತಿಯಿಂದಲಿ ಸರ್ವೆಜನರ ಪಾಲಿಪನ
ನೂತನವಡದಿರ್ದ ಶ್ರೀ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೪

ಜಲದ ಮೇಲ್ಗಂಡು ತೇಲಿಸಿ ಬರುವವನಾ
ಹಲವು ಭೂಷಣಗಳ ತೊಟ್ಟು ಮೆರೆವವನಾ
ಫಲವಿಲ್ಲದವರಿಗೆ ಫಲಕೊಡುವವನಾ
ನಲಿನಲಿದಾಡುವ ಶ್ರೀ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೫

ಬಂದ ಕಂಟಕವನ್ನು ಪರಿಹರಿಸುವನ
ದಂದದಂದಲಿ ಪೂಜೆಯಗೊಂಬುವನ
ಗಂಧಕಸ್ತೂರಿ ಕುಂಕುಮ ಲೇಪಿತನ
ಬಂದಿ ಕೋಲನೆ ಪಿಡಿದ ಶ್ರೀ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೬

ಸ್ವರ್ಗದಾ ಸುಖವ ಸಂಪದವ ಕೊಡುವವನ
ದೀರ್ಘಾಯುಷ್ಯವ ಕೊಟ್ಟು ರಕ್ಷಿಪನ
ವ್ಯಾಘ್ರನಕುದುರೆ ಕಾಲಲಿ ತುಳಿಸಿದವನ ಅ
ರ್ಭಟೆಯೊಳು ಬರುವ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೭

ಬಲ್ಲಿದ ಭೂತಕೋಟಿಗಳ ಬಡಿದನಾ
ಪುಲ್ಲಾಕ್ಷಯರಿಗೆ ಮಕ್ಕಳ ಕೊಡವವನ
ನಲ್ಲೆ ಶಾರದೆಯ ಕೈವಿಡಿದು ಬರುವನ
ಉಲ್ಲಾಸದಿಂದ ಬರುವ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೮

ಮುಕ್ತಿವಲ್ಲಭ ಶೀತಳಜಿನ ಯಕ್ಷನ
ಶಕ್ತಿಯಿಂದಲಿ ರಣಭೂತ ಹೊಡೆದನ
ಭಕ್ತಿಯಿಂದಲಿ ಸ್ವಾಮಿಸೇವೆ ಮಾಳ್ವವನ
ಅರ್ತಿಯಿಂದಲಿ ಮೆರೆವ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೯

ಸನ್ನುತವಾಗಿಹ ತುರಗವೇರಿದನ
ರನ್ನಕುಂಡಲವನ್ನು ಕಿವಿಯೊಳಿಟ್ಟಿವನ
ಚೆನ್ನಾಗಿ ಬರುವ ಶ್ರೀಚೆನ್ನಿಗ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೧೦

ಸ್ಥಿರವಾಗಿ ಶ್ರವಣಗುಂಡದಿ ನೆಲಸಿದವನ
ತುರಗವನೇರಿ ವೈಯಾಳಿಯ ಬಿಡುವನ
ವರವಿತ್ತು ಅಪ್ಪಾಜಿಯ ಸಲಹುವವನ
ಧರೆಯೊಳು ಭಂಗವಾಡಿ ಬ್ರಹ್ಮರಾಯನ
ಕರತಾರೆ ಹಸೆಯ ಜಗುಲಿಗೆ || ೧೧

. ಕರಿಮುಖನಂಘ್ರಿಕೋಮಲ

ಕರಿಮುಖನಂಘ್ರಿಕೋಮಲಕೆರಗುವೆನು
ಕರುಣದಿಂದೊಲವಿತ್ತುದ್ಧರಿಸಯ್ಯ ನೀನು
ವಿರಚಿಪೆ ಶ್ರೀ ರಘುರಾಮ ಜಾನಕಿಯ
ಪರಮ ವೈಭವದಲಿ ವೈಭವದಿಂದ
ಧರಣೀ ಭೂಪಾಲರು ಭೂಸುರರು ವಿವಾಹಕ್ಕೆ
ಪರಿಪರಿ ಭೂರಿ ಭೋಜನವಾಗಿ ಕಡೆಯಲಿ
ವರವೆ ತಾಂಬೂಲ ಪದನಾವ || ೧

ನೀಲವಜ್ರದಲಿ ಪಚ್ಚೆ ತೋಲುಗಳು
ಸಾಲು ಸಲಿನ ಲೋವೇಕತನ ಲೋವೆಗಳು
ಮೇಲುಕಟ್ಟಿನ ಚಪ್ಪರದ ಮಧ್ಯೆ
ಬಾಲೆ ಶ್ರೀಲೋಲಾಡುತ ವಾಸಿಗೆ ಹಾಸಿ
ಮಾಳವ ಗೌಳವ ಕರ್ನಾಟಕದ
ಚೋಳಮಗಧ ಪಾಂಡ್ಯಕ್ಷಿತಿಯ
ಪಾಲಕರು ವಾಲಗಗೊಟ್ಟು ಸಭೆಯಲ್ಲಿ || ೨

ಕಕ್ಕಸ ಕುಚೆಯರು ಅವರೆಲ್ಲ ನೆರೆದು
ಅಕ್ಕರದಿಂದಲಿ ಹಸಿಮಣೆ ಬರೆದು
ಚೊಕ್ಕ ಪೀತಾಂಬರಗಳನಳವಡಿಸಿ
ರಕ್ಕಸಿಪು ರಾಮಸೀತೆ ಕುಳ್ಳಿರಿಸಿ
ಚೊಕ್ಕಕನಕ ಕಂಬ ಜ್ಯೋತಿಯನೊಸಿ
ದಿಕ್ಕುದಿಕ್ಕಿಗೆ ವಾದ್ಯ ಭೋರೆಂದು ಬೆಸಸಿ
ಧಿಕ್ಕನೆ ನೆರೆದ ಸಭೆಯಲ್ಲಿ || ೩

ವಾರಿಜಾಸನ ಮುಖ್ಯ ದಿವಿಜಾದಿ ಸತಿಯು
ಧಾರಿಣಿಪತಿಗಳು ಸರಿಸಮ ಸಭೆಯು
ಭೋರನೆ ಮೊಳಗಲು ವಾದ್ಯಗಳೆಸೆಯಲು
ನಾರಿಯರತಿ ಶೊಭಾನವ ಪಾಡಲು
ಕಿರಭಾಷಿಣಿ ಮುದ್ದು ಮೊಗದಾಂಗನೆಯರು
ತಾರಕಿಯೆಂದದಿ ಹೊಳೆಹೊಳೆವು ತಲೆ
ವಾರಾಣವಾದ ಸಭೆಯಲ್ಲಿ || ೪

ಸೃಷ್ಟೀಶ ದಶರಥ ಬರಸಿದ ವಾಲೆ
ಮುಟ್ಟಿ ಬಂದಿತು ನಾಲ್ಕು ಕಡೆಯಿಂದ ಮೇಲೆ
ಕಟ್ಟಿದ ತರತರದೊಲೆಯ ಬುಟ್ಟಿಗಳು
ಅಷ್ಟಭಾಗದಿಂದೊಡದಡಿಕೆಯದಿರುಗಳು
ಪಟ್ಟೆಯ ರಚಿಸುತ ಮಿಸುನಿಪ ಪರಿಗದ
ಕೊಟ್ಟರು ವೀಳ್ಯಾವ ಶ್ರೇಷ್ಟಭೂಸುರರಿಗೆ
ದಿಟ್ಟ ಶತ್ರುಘ್ನ ಭರತನು || ೫

ನಾಗಬಳ್ಳಿಯು ಪಂಚಬಳ್ಳಿಯ ಎಲೆಯು
ಆಗಾರ ಪುರದೆಲೆ ಮಾಳಾವಿ ಪೊರೆಯು
ಬಾಗಿದ ಚಿಗುರೆಲೆದೊರ್ಗ್ಗ ಬಳ್ಳಿಗಳು
ಆಗಮರಾಜ್ಯದ ಸುಳಿ ಬಳಿಯೆಲೆಯು
ಸಾಗರದೇಶದ ತಿಳುವಾದಿಳೆಗಳು
ನಾಗುರರಸಿನ ಸೊಗಸು ಬಳ್ಳಿಗಳು
ರಾಘವನನು ಜತೆಗದಿತ್ತ || ೬

ಪೊಡವಿ ಪಾಲಕರಿಗೆ ಕೊಡಿಸಿ ವೀಳ್ಯಗಳ
ಕಡೆಯೊಳು ಬಹು ಜಾನ ತಾಂಬೂಲಗಳ
ಬಡನಡು ಬಳುಕುತ ಕಂಸಲದೇವಿಯ
ಮುಡಿಗಳಲ್ಲಾಡುತ ಕೈಕಾಲ ಚದುರೆಯು
ಕಡಗಕಂಕಣಯಿಟ್ಟ ಸೌಮಿತ್ರ ಬಾಲೆಯು
ಮಡದಿ ಜನರಿಗೆಲ್ಲ ಬೀಸುತ ಬರಲು
ಸಡಗರದಿಂದ ಸತಿಯರು || ೭

ಕುಂಭಕುಚದ ಬಾಲೆಯರೆಲ್ಲ ನೆರೆದು
ಅಂಬುಜೇಶನ ರಾಣಿ ನಲವಿಂದ ನಲಿದು
ಜಾಂಬವೈರಿಯ ಸತಿ ಮೊದಲಾಗಿಹಳು
ರಂಭೆಲುರ್ವಣಿ ತಿಲೋತ್ತಮೆಯರು
ಸಂಭ್ರಮದಿಂದಲಿ ನರ್ತನಗೈಯುತ
ಶಂಭುಶಂಕರ ಮನಯಿದರಲ್ಲಿ ನೋದಿದ
ಅಂಬರ ಹೂಮಳೆಯಗರೆದರು || ೮

ಕಮಲಕೊರಕ ಕುಚಯುಗೆಯರು ನೆರೆದು
ಅಮರದಿ ಸತಿಗಳು ನಲವಿಂದ ನಲಿದು
ಹಿಮಕರವದನೆಯರು ಮಕರದಿಂದ
ಗಮಗಮಗಮಿಸುತ ಮಲ್ಲಿಗೆ ಮುಡಿದಾರು
ಸಮಸ್ವರದಿಂದಲೇ ಪಾಡಿ ಶೋಭಾನವ
ಅಮಿತ ಉಲ್ಲಾಸದಿ ಸಲೆಯರೊಗ್ಗಿನಲಿ
ಕುಮುದಗಂಧಿಯರು ನೆರೆದರು || ೯

ದೇಶಾಧಿಪತಿಗಳು ಉಡುಗೊರೆಯೆಸೆಯೆ
ಭಾಸುರಾಶೀರ್ವಾದ ಮಂತ್ರೋಕ್ತವಾಗಿ
ಕೇಶವ ಸೀತಾದೇವಿಗತ್ಯುಕ್ತದಿ
ವಾಸವ ಮೊದಲಾದಮರ ನಾರಿಯರು
ಶಶಿಯನಿಕ್ಕುತ ಢವಳದ ಪದನದ
ವಾಸುವೇಣಿಯರತಿ ಹರುಷದಲಿ ವಿ
ಲಾಸದಿಗಳ ಪಾಡಿ ಪೊಗಳಿದರು || ೧೦

ತುಂಗಪಯೋಧರಿಯಾದ ಬಾಲೆಯರು
ರಂಗರಾನವದೇವ ಜನಕಜೆಯರು
ರಂಗು ಮಾಣಿಕರವರತು ನಗಳಾಗ
ಅಂಗದೀಪ ಸರಿಸಿ ಪರಿಗದೋಳಿಗ
ಭೃಂಗಕುಂತಳೆಯವರತಿ ಹರುಷದಲಿ
ಚಂದ್ರಗಾಮಿಯನುಟ್ಟು ತರುಣಿಯರೀರ್ವರು
ಮಂಗಳಾರತಿಯ ಬೆಳಗೀರೆ || ೧೧

ಮಂಗಲ ಜಯ ಜಯ ರಾಮ ಜಾನಕಿಗೆ
ಮಂಗಲ ಜಯ ಜಯ ಕರವೈರಿ ಸಿರಿಗೆ
ಮಂಗಲ ಜಯ ಜಯ ಶಶಿಕರ ಹರಗೆ
ಮಂಗಲ ಜಯ ಜಯ ಕೃತಿರಿಪುವಿನಯಗೆ
ಮಂಗಲ ಜಯ ಜಯ ಮಧುಸೂಧನಿಗೆ
ಮಂಗಲ ಜಯ ಜಯ ಪೊಡವೀಶನಿಗೆ
ಮಂಗಳಾರತಿಯ ಬೆಳಗೀರೇ || ೧೨

. ಬಲಗೊಂಬೆಶ್ರೀಪದ್ಮಾವತಿಯ

ಒಲಿದಿಹಬೇಕೆಂದು ಮತಿಯ
ಸುಲಲಿತ ಪದಗಳ ಪಾಡುತ ಮುದದಿ
ಲಲನೆಯರೆಲ್ಲರು ನೆರೆದತಿಮುದದಿ
ಚೆಲುವಿ ಪದ್ಮಾವತಿದೇವಿ ಧರಣೇಂದ್ರನ
ಲಲನೆಯರು ಹಸೆಗೆ ಕರೆದಾರು || ೧

ಕಾರುಣ್ಯನಿಧಿ ಕರುಣಾಳು ಸೇರಿದಾ ಜನರ ದಯಾಳು
ವಾರಿಜಮುಖಿ ವನಿತೆಯರ ಕಟ್ಟಾಣಿ
ನೀರೆಯರೊಳಗೆ ನೀನೆನಿಸು ವಾಣಿ
ಧಾರುಣಿಪತಿ ಜಿನದತ್ತ ಚಿಂತಾಮಣಿ
ಬಾರಮ್ಮ ಹಸೆಗೆ ಕರೆದಾರು || ೨

ಪಡೆದ ತಂದೆಯು ಪ್ರಾಣಕೆಣಿಸಿ
ಬಿಡದೆ ತೇಜಿಯನೇರಿಗಮಿಸಿ
ಪೊಡವಿಪತಿ ಜಿನದತ್ತನಿಗಂದು
ದೃಢವಾಗಿ ವರವಿತ್ತು ಹೊಂಬುಚಗೆಂದು
ನಡೆದು ಬರಲು ಲೊಕ್ಕಿಮರ
ದಡಿ ತಳಿರಿಂದ ಒಡತಿ ಬಾ ಹಸೆಗೆ ಕರೆದಾರು || ೩

ಕಂಬು ಕಂಧರೆ ಕಮಲಾಕ್ಷಿ
ಕುಂಭಿನಿಯೊಳು ಜಿನ ಯಕ್ಷಿ
ಬಿಂಬಾಧರೆಬಿಸಜಾಂಬಕಿ ತಾಯೆ
ನಂಬಿದ ಭಕ್ತರ ಬಿಡದೆ ನೀ ಕಾಯೇ
ಹಂಬಲಿಸುವೆ ನಿನ್ನ ಚರಣಕಮಲ ಜಗ
ದಾಂಬೆ ಬಾ ಹಸೆಗೆ ಕರೆದಾರು || ೪

ನೆರೆ ಶುಕ್ರವಾರದಿಂ ಬಂದು ತರುಣಿ
ಪುರುಷರೆಲ್ಲ ನಿಂದು ಮರುಗಮಲ್ಲಿಗೆ ಜಾಜಿ
ಸ್ವರಗಿಯ ತಂದು ಹರುಷದಿ ಪೂಜೆಯ ಮಾಡುವೆನೆಂದು
ಧರಣೆಂದ್ರನರಸಿ ಪದ್ಮಾವತಿಯಮ್ಮಗೆ
ಕುರುಜಿನರಾರತಿಯ ಬೆಳಗೀರೇ ||

. ಪಾಹಿಪನ್ನಗವೇಣಿಸನ್ನುತೆ

ತ್ರಾಹಿ ಜಗಜ್ಜನನಿ ಪಾಹಿ ಪರಾಕು ತಾಯೆ ಪದ್ಮಾವತಿ
ಪಾಹಿಯೆಂದು ಪದಕ್ಕೆರಗಿ ನಾ ಬೇಡುವೆ
ಮೋಹನ ರೂಪೆಮತಿದೋರು || ೧

ಹಸುರು ಪಟ್ಟಿಯ ಶಾಲೆ ಸೆರಗಿಗೆ
ಮಿಸುಪ ಚಿನ್ನದ ಧಾರೆ
ಕುಸುಮ ಗಂಧಿನಿ ನಿನ್ನೆಸೆವ
ನಾಸಿಕದೊಳು ಹೊಸ ಮುತ್ತಿನ ಮಣಿ
ಹಸನದೊಳಿಟ್ಟಹ ಹೊಸ ಚಿನ್ನದ ಗೊಂಬೆ
ಹಸೆಗೆ ಕರೆದಾರು || ೨

ಕಡುಬೆಡಗಿನ ಜಾಣೆ ನಿನಗೆಣೆ
ಪೊಡವಿಯೊಳಗೆ ಕಾಣೆ
ಬಡನಡುವಿನೊಳಿದ್ದಿಹ ಬೆಡಗಿನೊಡ್ಡ್ಯಾಣವು
ಜೆಡೆಗೊಂಡೆ ಚೌರಿರಾಗಟಿಯಿಟ್ಟ ದೇವಿಯ
ಮಡದಿಯರು ಹಸೆಗೆ ಕರದಾರು || ೩

ಜಾಜಿಮಲ್ಲಿಗೆ ಮಾಲೆ ಮುಡಿಯೊಳು
ರಾಜಿಪ್ಪ ಮುದ್ದುಬಾಲೆ
ಮಾಜದೆ ನಿಮ್ಮನು ಪೂಜಿಸಿದವರಿಗೆ
ಸೋಜಿಗದಿಂದಲೇ ಜಾಜಿ ಪೂಗಳನೀವ
ಪೂಜಗದೊಡತಿಯ ಹಸೆಗೆ ಕರೆದಾರು || ೪

ಚಂದಿರನಂತೆ ಹೊಳೆವ ಮೊಗದರ
ವಿಂದದ ನೊಸಲೊಳಗೆ
ಚಂದದಿ ದಟ್ಟ ಕುಂಕುಮ ಮುಂದಲೆ ಬೊಟ್ಟು
ನಿಂದರಾಜಿಪ ಮಾತಂಗ ಗಮನೆಯರು
ಚಂದದಿಂದ ಹಸೆಗೆ ಕರೆದಾರು || ೫

ಲೊಕ್ಕಿಯ ಮರದೊಳಗೆ ನೆಲಸಿಹ
ಅಕ್ಕಪದ್ಮಾವತಿಯ ರಕ್ಕಸ ಕುಚೆಯರು
ಚೊಕ್ಕ ಶೋಭನವ ಇಕ್ಕೆಲದಲಿ ಪಾಡಿ
ಗಕ್ಕನೆ ನಿಮ್ಮನು ಅಕ್ಕರಿಂದ ಹಸೆಗೆ ಕರೆದಾರು || ೬

ಧರೆಯೊಳಧಿಕವಾದ ವಿಂಶತಿ
ಪುರದ ಚಂದ್ರ ಪ್ರಭನೇ ವರ ಮಂ
ದಿರದೊಳು ಸ್ಥಿರವಾಗಿ ನೆಲಸಿಹ
ಪುರುಷ ಮೂರುತಿ ಪದ್ಮಾವತಿಯೆಮ್ಮಗೆ
ಕುರುಜಿನರಾರತಿಯ ಬೆಳಗೀರೇ || ೭