. ಶ್ರೀಮದನಾದಿವಸ್ತು

ಶ್ರೀಮದನಾದಿ ವಸ್ತುವಿಗೆ
ಸ್ವಾಮಿ ಸರ್ವಜ್ಞ ಸಿದ್ಧರಿಗೆ
ಕಾಮಮದೇಭಹರಿಗೆ ಪರಬ್ರಹ್ಮಗೆ
ಕಾಮಿನ ಫಲಗಳ ನೀವ ಚಿನ್ಮಯನಿಗೆ
ಪ್ರೇಮದಿ ಸಾಷ್ಟಾಂಗದೊಳಗೆರಗುವೆನು
ದ್ಧಾಮ ಸನ್ಮತಿಯ ಸಲಿಸೆಂದು || ೧

ಶಂಭರಾರಿಯ ಮದಹರಗೆ
ಶಂಭು ಚಿದಂಬರೇಶನಿಗೆ
ಅಂಬರಸದೃಶ ದಿಗಂಬರ ಪುರುಷಗೆ
ಕುಂಭಿನಿಜನನಿಕರುಂಬ ಪೂಜಿತನಿಗೆ
ನಂಬಿ ಸಾಷ್ಟಾಂಗದೊಳೆರಗಿ ನುತಿಸುವೆ ಕೃ
ಪಾಂಬುಧಿ ಪಾದಕ್ಕನುದಿನ || ೨

ಶ್ರೀ ಗುರು ಪಂಚಪದಗಳ
ಶ್ರೀಗೆ ನಿಲಯ ನಿಗಮಗಳ
ರಾಗರಸದಿ ಧವಳಾಗಮದಿಂದ
ತೂಗಿ ಕದಳಿ ಸಾರಂಗಗಳಿಂದ
ಬಾಗಿ ಶ್ರೀಚರಣಾಂಬುಜಗಳ ನರ್ಚಿಪೆ
ಶ್ರೀಗಣನಾಥ ಕೃಪೆದೋರು || ೩

ಚಂಪಕ ಕುಂದಕುಮ್ಮಟಗಳವಾ
ತಂಪಿನ ಗಂಧ ಸೌರುಭದ
ಸೋಂಪಿನ ಸುರಭಿಯ ಗುಂಪಿನಿಂದೆಸೆವ
ಇಂಪಿನ ಚರುವಿ ಧೂಪ ಸತ್ಪಲವಾ
ಕೆಂಪ ಶ್ರೀಯಾಂದೇವಿಯ ಪದಕರ್ಚಿಪೆ
ಪೆಂಪಿನ ಸುಮತಿಯ ಸಲಿಸೆಂದು || ೪

ಗಣಧರ ಗುಣಗಣಧರರ
ಪ್ರಣುತ ಭವ್ಯಾಬ್ಜಭಾಸ್ಕರರ
ಅಣಿಯರನಷ್ಟ ವಿಧಾರ್ಚನೆಗಳಲಿ
ಮಣಿದೆರಗುವೆ ಭಾವಿಸಿ ಭಕ್ತಿಯಲಿ
ಪ್ರಣಮದಖಿಲ ತ್ರಿದಶೇಂದ್ರವಂದಿತರಡಿ
ಗುಣಗತನಾಗಿ ನುತಿಸುವೆ || ೫

ಚಂಡಮದೇಭ ಕಂಠೀರವನು
ದ್ದಂಡ ಮಹಾನೀಲೋರಗನು
ಅಂಡಲೆವಘತತಿವಿಪಿನ ಧನಂಜಯ
ತಂಡತಂಡದ ಭವ್ಯಾತ್ಮರ ಪಾಲಿಪ
ಪಂಡಿತಜನನುತ ಶ್ರೀಲಕ್ಷ್ಮೀಸೇನ ಭೂ
ಮಂಡಲಾಚಾರ್ಯ ಕೃಪೆದೋರು || ೬

ಪದಿನಾಲ್ಕನೆಯ ಮನುಕುಲಜ
ನುದಯಂಗೈದಿ ನಾಭಿರಾಜ
ಸುದತಿ ಶಿರೋಮಣಿ ಮರುದೇವಿಯಮ್ಮನ
ನುದರ ಸುಧೋದಯನಾದೀಶ್ವರನ
ಪದುಳ ಪದಂಗಳ ನುತಿಸಿ ಪ್ರಥಮಯುಗ
ಗಧಿದೇವರೆಂದು ಪೊಗಳುವೆ || ೭

ಪರಮೇಶನುದರಾಬ್ಧಿ ಚಂದ್ರ
ನೆರೆ ಚಕ್ರಿ ಭರತರಾಜೇಂದ್ರ
ನರಸುರ ನಾಗಲೋಕವ ಸಾಧಿಸಿದ
ಧರೆಗಾದಿಕುವರನ ಧವಳ ಶೋಭಾನವ
ನೊರೆವೆ ಲಾಲಿಪುದು ರಸಿಕರು
x x x x x x x x x x x x || ೮

ಮೆರೆವಿಂದ್ರನೀಲ ವೇದಿಕೆಯ
ವರ ರತ್ನಜ್ವಲ ಸ್ವರ್ಣನಿಲಯ
ಉರುಮಣಿಕೂಟ ಪವರ್ತನೆ ತರಿದು
ಸುರರು ನಿರ್ಮಿಸಿದರಮನೆಯನೆ ಮೆರೆದು
ಧರಣಿಗಚ್ಚರಿವಡೆದಿಹ ಮಣಿಮಂಟಪ
ತರಣಿಮಂಡಲವ ಪಳಿವುದು || ೯

ಪಚ್ಚೆಯ ಪಾದಪೀಠಗಳು
ಸ್ವಚ್ಚಪ್ರವಾಳ ಕಂಭಗಳು
ಅಚ್ಚರಿ ಮರಕತ ಮಣಿಬೋದಿಗೆಗಳು
ಚೆಚ್ಚಂತಿಹ ವೈಢೂರ್ಯದ ತೊಲೆಗಳು
ಮುಚ್ಚು ವಲಗೆ ಗೋಮೇಧಿಕ ವಜ್ರದ
ಗುಚ್ಚರುಚಿಲೋವೆ ಮೆರೆದುದು || ೧೦

ಮಾಣಿಕಮಣಿ ಪ್ರತ್ಥಳಿಗಳು
ಏಣಾಂಕಾಯತ ದರ್ಪಣಗಳು
ಠಾಣಠಾಣದ ಝಲ್ಲಿ ಕುಚ್ಚು ಪೂಮಾಲೆಯು
ಮಾಣದೆ ನಭವ ಚುಂಬಿಪ ಧ್ವಜಪಂಕ್ತಿಯು
ಕ್ಷೋಣಿಗಪ್ರತಿಗೀರ್ವಾಣರು ರಚಿತ ಕ
ಟ್ಟಾಣಿಮಂಟಪ ಮೆರೆದುದು || ೧೧

ಇಂತಪ್ಪ ವಿಭವಮಂದಿರದಿ
ಸಂತತ ನರಸುರರ್ಮುದಿ
ಚಿಂತಾಮಣಿ ರೂಪಾಂತೊಲು ಬಂದರು
ದಂತಿಮನೆಯರು ಬಾಗಿನವಾಂತರು
ಮುಂತೆ ಮಾಧುರ್ಯ ಪೋಷಣೆಯೊಳಗಿಂದ್ರರ
ಸಂತತಿ ಬಂದು ನೆರೆದುದು || ೧೨

ಮುತ್ತು ಮಾಣಿಕ್ಯ ವೈಢೂರ್ಯದಲಿ
ವೃತ್ತಕುಚೆಯರು ಚೆಲ್ವಿನಲಿ
ಬಿತ್ತರಿಸಿದರತಿ ಚಿತ್ರದ ಹಸೆಯ
ಉತ್ತಮ ನವಮಣಿಖಚಿತದಿಂದೆಸೆಯೆ
ಸುತ್ತ ಸೌರಭ ಕತ್ತುರಿಯ ಸಾರಣೆ ಮುದ
ವೆತ್ತು ರಂಜಿಸಲು ರಚಿಸುತ || ೧೩

ರತ್ನ ದೋಲೆಯು ರತ್ನಾಭರಣ
ಚೆನ್ನಚಿದಂದಬರವರಣ
ವನ್ನು ತಾಳ್ದಾರ್ಯಖಂಡದ ಸೊಬಗಿಯ
ರುನ್ನತ ಸ್ವರ್ಣಕಳಶ ಕನ್ನಡಿಯ
ಚೆನ್ನೆಯರೆಯ್ದಿದರಕ್ಷಯ ಸುಖಸಂ
ಪನ್ನ ಚಿತ್ತೈಸು ಮುದದಿಂದ || ೧೪

ಭುವನವಚ್ಚರಿವಡುವಂಥಾ
ಭವನವಾಸಿಕರ ತತ್ಕಾಂತಾ
ನಿವಹ ದಿವ್ಯಾಂಬರ ಭೂಷಣದಿಂದ
ನವಮಣಿದೊಡಿಗೆಯ ಮುಯ್ಯಗಳ ತಂದ
ನವಯೌವನೆಯರು ಸಹ ಬಂದರು
ರವಿಕಾಂತಿ ತೇಜ ಹಸೆಗೇಳು || ೧೫

ವಿದ್ಯುರ್ಲತೆಯ ರೂಪಾಂತೋಲು
ವಿದ್ಯಾಧರ ದಂಪತಿಗಳು
ಆದ್ಯಂತರು ದಿವ್ಯಾಭರಣಗಳು
ವಿದ್ಯುತ್ಕಾಂತೆಯರಿಳಿವಂದಗಳಿಂ
ಸದ್ಯ ಬಂದರು ಮೂಲೋಕದವರಿಗು
ಪಾದ್ಯ ಬಂದೇರೋ ಹಸೆಯನು || ೧೬

ಕಿನ್ನರೇಂದ್ರನು ಗಂಧರ್ವೇಂದ್ರ
ಸನ್ನುತ ಗರುಡ ಯಕ್ಷೇಂದ್ರ
ಸ್ವರ್ಣಾಬರ ದಿವ್ಯರತ್ನಭೂಷಣವ
ಕಿನ್ನರಿಯರು ತೊಟ್ಟು ದಿವ್ಯಭೂಷಣವ
ಚೆನ್ನೆಯರಾಂತು ಪಾಡುತ ಬಂದರು ಸುಪ್ರ
ಸನ್ನ ಗುಣರನ್ನ ಹಸೆಗೇಳು || ೧೭

ಜ್ಯೋತಿಯ ರೂಪಾಂತವೊಲು
ಜ್ಯೋತಿರ್ಲೋಕದ ದಂಪತಿಗಳು
ಭೂತಳ ಬೆರಗಪ್ಪಾಭರಣಗಳಿಂ
ಮಾತುಗಳಂಗವು ಖರ್ಜೂರ ಫಲಗಳಿಂ
ಪ್ರೀತಿಯೊಳೈತಂದರು ತ್ರಿಭುವನ ವಿ
ಖ್ಯಾತ ಬಂದೇರೋ ಹಸೆಯನು || ೧೮

ಕಲ್ಪಾಮರೇಂದ್ರಮರಿಯರು
ಸ್ವಲ್ಪ ಮಧ್ಯದ ಭಗಿನಿಯರು
ಶಿಲ್ಪ ಸುವಿದ್ಯಾಭೂಷಣ ದಿವ್ಯಾಂಬರ
ದೊಲ್ಪಿಲಿ ದಿವ್ಯಕಾಂತಿಯ ಬೆಳಗುವರ
ಕಲ್ಪವೃಕ್ಷದ ವಸ್ತುವ ತಂದರು ಸುರ
ರೊಳ್ಪ ಸೂಚಿಪನೆ ಹಸೆಗೇಳು || ೧೯

ಹರಳೋಲೆ ಹಸ್ತಕಡಗವ
ಬೆರಲ ಮುದ್ರಿಕೆಹಾರ ಮೆರೆವ
ಚರಣನೂಪುರ ಚಿತ್ರಾಂಬರನುಡಿಸಿ
ವರ ವೋಹನಕರ ಕಂಚುಕಿ ತೊಡಿಸಿ
ಉರಗಿಣಿಯರು ಷಟ್ಖಂಡದರಸುಗಳು
ಪರಿಪಾಲಿಪನರಸಿಯ ಕರೆತನ್ನಿ || ೨೦

ಪೊಂಬರಹದ ಪೀತಾಂಬರದಿಂ ಇಂದು
ಬಿಂಬಾನನೆಯರು ಕಂಬುಕಂಠೆಯರು
ಅಂಬರಚರಿಯರು ಅಮರಾಂಗನೆಯರು
x x x x x x x x x x x x x x
x x x x x x x x x x x x x x x
x x x x x ರಂಬೆಯ ಹಸೆಗೆ ಕರೆತನ್ನಿ || ೨೧

ಮೃಗಮದಗಂಧಗಂಧಿಯರು
ಮೃಗಧರಾಯತವದನೆಯರು
ಅಗಿಲು ಕುಂಕುಮ ಮೃಗಮದವನು ತೀಡಿ
ಮಗಮಗಿಪಲರ್ಗಳ ಮಾಲೆಯ ಸೂಡಿ
ಧಗಧಗಿಸುವ ರತ್ನಹಾರ ಭೂಷಣವಿಟ್ಟು
ನಗೆಮೊಗದರಸಿಯ ಕರೆತನ್ನಿ || ೨೨

ಚಂದ್ರಮುಖಿಯ ಚಿಂತಾಮಣಿಯ
ರುಂದ್ರಕಲೆಯ ಕಾಂತಿಕಣಿಯ
ಇಂದ್ರಾಣಿಯ ಮಣಿಪೀಠವನಡರಿಸಿ
ಇಂದ್ರವೈಭವದ ನರೇಂದ್ರರೊತ್ತಿನೊಳೀಹ
ಸ್ತೀಂದ್ರಗಮನೆಯರ್ನುತಿಸಿರೆ
x x x x x x x x x x x x x x x || ೨೩

ಗಂಗಾದೇವಿಯು ಸಿಂಧುದೇವಿ
ಅಂಗನಾಮಣಿ ಶಶಿದೇವಿ
ಬೆಂಗಡೆಯೊಳು ಬೆಳ್ಳೆಲೆಗಳಿಗೆಯನು
ಕಂಗೊಳಿಪೆಲೆ ಕರ್ಪೂರ ಸಾರವನು
ಇಂಗದೆ ಈವ ಬೆಡಂಗಿಯರೆಸೆಯೆ
ಬೆಳ್ದಿಂಗಳ ಕಾಂತಿ ಪಳಿಯುತ್ತ || ೨೪

ಇತ್ತೆರ ಬತ್ತೀಸಚಾಮರಗ
ಳೆತ್ತಿ ಢಾಳಿಸುವ ನಾರಿಯರ
ಮೊತ್ತವೆ ಕ್ಷೀರಾಂಬುಧಿ ಚಾಮರ ತಲೆ
ಯೊತ್ತಿಲಿ ಚಂದ್ರಮರೋಹಿಣಿಯಂತಿರೆ
ಎತ್ತಿದ ಮುತ್ತಿನ ಛತ್ರಚ್ಛಾಯದಿ ಪುರು
ಷೋತ್ತಮನೆಸೆದನಸಿಯೇಳು || ೨೫

ಆವುಜ ಚೆಂಗು ಮೃದಂಗ
ತೀವಿದ ಸ್ವರವುಪ್ಪಾಂಗ
ಭಾಮೆಯರಾಳಪವು ತಾಳದಂಡಿಗೆ
ಭೂವಳೆಯದ ಬಹುವಾದ್ಯ ಘೋಷಣೆಗೆ
ದೇವಗಣಿಕೆಯರು ನರ್ತನ ಮಾಡುವ
ಭಾವವನೆಂತು ಪೊಗಳುವೆ || ೨೬

ಓರವ ಮಾಧುರ್ಯ ಘೋಷಣದಿ
ಉರಿಗಿಣಿಯರ ಚಮತ್ಕಾರದಿ
ತರಿಝಂ ಝಕ್ಕಿಟಕಿಟತತ್ತೋಗಿಣ
ತರಿಕುತದ್ದಿಣಧಣ ಝಣಾಂತರಿಕ್ಕಣ
ತರಿಚೆಂತರಿಝೇ ಝೇಂತ್ಕೃಣತಮೆನ್ನುತ
ಮೆರೆವ ನರ್ತಿಕಿಯರೆಸೆವರು || ೨೭

ತತ್ತತೇಂಗಿಣಧಿಮಿಕೆನುತ
ವೃತ್ತ ಕುಚೆಯರಾಳಾಪಿಸುತ
ತತ್ತಿತ್ತೈತೈತದಿಂತರಿಕ್ಕಣ
ತತ್ತೋಂಗಿಣ ತರಿಕಿಟಕಿಧಿಕ್ಕಿಟ ತಕ
ಧಿತ್ತಾಂ ಧಿಗಿಧಿಗಿ ಝಣಾಂತರಿಕ್ಕಿಣ
ಧಿತ್ತಿತ್ತೋಂಗೆನುತ ನಟಿಸುತ || ೨೮

ಸರಿಗಮಪದನಿಯೆಂಬೇಳು
ಸ್ವರಗಳ ತಾಳಮೇಳದೊಳು
ಮೆರೆವ ನರ್ತಕಿಯರ ಬಹುವಿದ್ಯಾಧರ
ರುರುತರ ದಿವ್ಯಾವಳಿಗಳ ತೋರ್ಪರ
ಪರಿಪರಿಹಾಸ್ಯರಚನೆಯೊಳು ಸಭೆಗ
ಚ್ಚರಿಯ ಪ್ರಮೋದಕರಮಾಗೆ || ೨೯

ತಂಬಟಕೋಟಿ ಸೂಳೈಸೆ
ತುಂಬಿಪಾಠಕರುಗ್ಗಡಿಸಿ
ಕೊಂಬುಕಾಳೆಗಳೊದರಲು ನಿಸ್ಸಾಳವು
ಕುಂಭಿನಿಯೆದುರು ದುಂಬಿರವವು
ಬೊಂಬಾಯ ಮಾನವೆಸೆದುದು
x x x x x x x x x x x x x || ೩೦

ಮಲಯ ಪರ್ವತ ವಿಜಯಾರ್ಧ
ಕುಲಗಿರಿಗಳೊಳುದಿಸಿರ್ದ
ಕಲಿತ ರಜನಿ ಕುಂಕುಮ ಹಿಮಸಾರವು
ನೆಲಸಿದ ಕಮ್ಮೆಣ್ಣೆಯು ಫಲಕುಸುಮವು
ಸುಲಲಿತಗಂಧ ಕದಂಬ ಸಹಿತ ಸುರ
ನಿಲಯಜರೆಲ್ಲ ನೆರೆದರು || ೩೧

ಸುರಭಿ ಸುಗಂಧದೆಣ್ಣೆಯನು
ಸುರಗಿ ಸೇವಂತಗೆಗಳನು
ಸುರಕಾಂತೆಯರು ಪರಂಜೆಯ ಬಟ್ಟಲೊ
ಳರಸಿನ ಗಂಧ ಕದಂಬವ ತೀಡಿ
ಸುರವಿದ್ರುಮ ಫಲಪುಂಜವನಿರಿಸಲು
ಪರಿಮಳ ಸಭೆಯ ಮುಸುಕಲು || ೩೨

ಮಲ್ಲಿಗೆ ಗಂಧದೆಣ್ಣೆಯನು
ಮೊಲ್ಲೆಮಲ್ಲಿಗೆ ಮಾಲೆಯನು
ಘಲ್ಲುಘಲ್ಲೆಂಬಂದುಗೆಗಳ ರವದೊಳು
ಸಲ್ಲಲಿತಾಂಗಿಯರ್ನಲಿಯುತಯಿಳಿಪಲು
ಪಲ್ಲವ ಪಾಣಿಯ ರಚಿಸುವ
ಸಂಜ್ಞೆಗಳಲ್ಲಿಯುಣ್ಮಿದವು ಸಭೆಯಲ್ಲಿ || ೩೩

ಸಂಪಿಗೆಯೆಣ್ಣೆಯರಿಸಿನವ
ಕಂಪೆಸೆವಲರ ಕುಟ್ಮಳವ
ತಂಪಿನ ಗಂಧಕದಂಬ ಕರ್ಪುರವ
ತಂಪಿನ ದ್ರಾಕ್ಷೆ ಖರ್ಜೂರದ ಫಲವ
ಕೆಂಪೆಯರಾಂತು ಬಂದರು ಭಾಗ್ಯದ ಬಹು
ಕೆಂಪಿನಮೊಗದಸತಿಯರು || ೩೪

ಪರಲ್ಕಚಿತದ ಪೊಂಬಟ್ಟಲೊಳು
ಸುರಭಿ ಸುಗಂಧ ವೀಧಿಗಳು
ವರನಾರಂಗಫಲವು ಕಮ್ಮೆಣ್ಣೆಯು
ಉರುತರ ಕದಳಿ ಸುಪಕ್ವ ಫಲಗಳು
ವೆರಸಿ ಷಟ್ಖಂಡ ಚಕ್ರೇಶ್ವರ
ಗರಿಷಿನೆಣ್ಣೆಯನು ತಿರುಗಿದರು || ೩೫

ಅರಸಿನೆಣ್ಣೆಯ ಹದಮಾಡಿ
ಅರಸಿಯರು ಭಯಂಕರಗೂಡಿ
ದರಹಸಿತಾನನಕೊರಸಿ ಮಿಂಚೆಣ್ಣೆಯ
ಕರಚರಣಕೆ ತಿಗುರಿಡೀ ಕತ್ತುರಿಯ
ವಿರಚಿಸಿ ಪಣೆಯೊಳು ತೀಡೆ ಸುಗಂಧವ
ದೊರೆರಾಯನುರಕೆ ಹಸಿಯೇಳೆ || ೩೬

ಮಗಮಗಿಪಲರ್ಗಳ ಸೂಡಿ
ಅಗಿಲುಕುಂಕುಮ ಸಾರ ತೀಡಿ
ಬಗೆಬಗೆ ಫಲಪುಂಜವ ಮುದಗೂಡಿ
ಜಗದೊಡೆಯನ ಮುಮ್ಮಡಿಲೊಳಗೂಡಿ
ಪೊಗಲೋರೆವಾಣಿ ಮುತ್ತಿನ ಸೇಸೆಯನಿ
ಕ್ಕಘಹರನಡಿಗೆ ಹರಸುತ || ೩೭

ಉಲಿಯ ಕಂಕಣ ಝಣತ್ಕಾರ
ಮೊಳೆಗೆ ನೂಪುರದ ಚೀತ್ಕಾರ
ತೊಳಗುವ ಕರತಳವನು ಪಿಡಿದೆತ್ತಿ
ಥಳಥಳಿಸುವ ತೋಳ್ಗಳಚ್ಚಿವಿಎ ಮುತ್ತೆ
x x x x x x x x x x x x x
x x x x x x x x x x x x x || ೩೮

ಹೆಂಗಳ ಕುಲಶಿರೋಮಣಿಗೆ ಶೃಂಗಾರ
x x x x x ಸೊಬಗಿನ ಕಣಿಯಿಗೆ
ಅಂಗನೆಯರು ನೆರೆದಿಂಗಳವದನೆಗೆ
ಕಂಗೊಳಿಸುವ ಕಮ್ಮೆಣ್ಣೆಯನುರಕೆ
ಹಿಂಗದೆ ತಿಗುರಿಡುತಗಿಲು ಕುಂಕುಮಮೂ
ಲ್ಯಂಗಳ ಸೂಡಿ ಸೊಬಗಿಂದ || ೩೯

ಕಸ್ತೂರಿ ತಿಲಕವನಿಟ್ಟು
ವಿಸ್ತಾರ ಮುತ್ತಿನ ಬೊಟ್ಟು
ಸಿಸ್ತಾಗಲು ಫಲಪುಂಜವ ಕೊಟ್ಟು
ಮಸ್ತಕ ಕಡಿಯಿಂದ ಸೇಸೆಯನಿಟ್ಟು
ವಸ್ತುವಾಹನ ಸಾಮ್ರಾಜ್ಯ ಸುಪುತ್ರರಾ
ರಸ್ತೆಂದು ಹರಸಿ ಮುದದಿಂದ || ೪೦

ಜಯದಿಗ್ವಿಜಯವು ರಸ್ತೆಂ
ಭಯಭವ ವಿಜಯರಾಗೆಂದು
ನಯಯುಗವಿನಯಮದುದಾರರು ಸೇಸೆಯ
ಪ್ರಿಯದಂಪತಿಗಳಿಗಿಕ್ಕೆಯುತ್ಸಹದಿ
ದಯಗುಣನಿಧಿರಿಪುವಿಪಿನಧನಂಜಯ
ಜಯರಾಮೆಗೊಡೆಯ ಸಲಹೆಂದು  || ೪೧

ಭಕ್ತರೊಡೆಯ ಭವ್ಯರೊಡೆಯ
ಶಕ್ತರೊಡೆಯ ಶಾಂತರೊಡೆಯ
ಯುಕ್ತಿಯೊಳಿಹ ಪರಲೋಕವ ಸಾಧಿಸಿ
ವ್ಯಕ್ತಿಯೊಳಖಿಲಕರ್ಮಗಳ ಕೆಡಿಸಿ
ರಕ್ತಿರಮಣಿಯರ ತೊರೆದು ಸರ್ವತ್ರವಿ
ರಕ್ತಿಯಿಂ ಮುಕ್ತಿ ಸತಿಯೊಳು  || ೪೨

ಶ್ರೀ ಮಹಾಭರತರಾಜೇಂದ್ರ
ಶ್ರೀಮದಮಿತಗುಣಸಾಂದ್ರ
ಆ ಮಹಾಪುರು ಪರಮೇಶನ ಕಂದ
ಈ ಮಹಿಗಾದಿಕುಮಾರಕನಾದ
ಭಾವಿಸಿ ಜನನಿಜಕಾಮಕಾಮಿತಫಲ
ಕಾ ಮಹಾಕಲ್ಪಕುಜನಾದೆ   || ೪೩

ಮಣಿಖಚಿತಪರಂಜಿ ಪಾತ್ರೆ
ಗಣಿಮಾಡೆ ಸರಸಿಜನೇತ್ರೆ
ಅಣಿಯರ ನವಮಣಿಖಚಿತದಾರತಿಯ
ಗಣಿಸಬಾರದ ಚಿತ್ರಗೆಲಸದಾರತಿಯ
ಪ್ರಣುತ ಕರ್ಪುರದಾರತಿ ಮೃಗದಾರತಿ
ಫಣಿವೇಣಿಯರೆತ್ತಿ ಬೆಳಗಿರೆ || ೪೪

ಮಂಗಳ ಮಹಿಪರೊಡೆಯಗೆ
ಮಂಗಳ ಸುಜನಪಾಲನಿಗೆ
ಮಂಗಳ ರಿಪುಭಯ ತಿಮಿರಪತಂಗಗೆ
ಮಂಗಳ ಮುನಿಪಾದಾಂಬುಜ ಭೃಂಗಗೆ
ಮಂಗಳ ತ್ರಿಭುವನ ವಿಭವಕಗೆ ಜಯ
ಮಂಗಳಾರತಿಯ ಬೆಳಗಿರೆ || ೪೫

ಮೆರೆವ ಷಟ್ಖಂಡಮಂಡಲಕೆ
ಅರಸು ತಾನಾಗಿಹಪರಕೆ
ಗುರುವೆನಿಪಮರಾಜೇಂದ್ರರ ತಿಳುಹಿ
ಧರಣಿ ಮೂರರ ಭವ್ಯಾತ್ಮರನುಳುಹಿ
ಕರುಣದಿ ಸರ್ವಾತ್ಮರ ರಕ್ಷಿಪ ಜಪ
ದ್ಗುರುವಿಗಾರತಿಯ ಬೆಳಗಿರೆ || ೪೬

ಧರೆಗಾದಿಕುವರಾದಿರಾಜ
ವರವಿದ್ಯಾಧರರ್ಗಧಿರಾಜ
ಮೆರೆವ ಚೌಷಷ್ಟಿವಿದ್ಯಕಧಿರಾಜ
ನೆರೆ ನವನಿಧಿಯಕ್ಷರಿಗಧಿರಾಜ
ಸುರನರಯಕ್ಷರ ಹೃತ್ಕಮಲಕೆ ದಿ
ನರಾಜಗಾರತಿಯ ಬೆಳಗಿರೆ || ೪೭

ಶರನಿಧಿ ಸಮನೆ ಗಂಭೀರಕೆ
ಧರಿಣಿ ಸಾಟಿಯ ಕ್ಷಮಾಗುಣಕೆ
ಸುರತರುವುದಾರಕೆ ಪಾಸಟಿಯಹುದೆ
ವರ ಮಂದರ ಧೈರ್ಯಕೆ ಸರಿಬಹುದೆ
ನೆರೆ ಚಿಂತಾಮಣಿ ಸುರಧೇನುವು ಮಹಾ
ಪುರುಷನಿಗೆಣೆಯೆ ಪೊಗಳಲು || ೪೮

ಧರೆ ಮೇರು ಶರಧಿ ತಾರೆಗಳು
ತರಣಿ ಚಂದ್ರಮನು ಸ್ವರ್ಗಗಳು
ಸ್ಥಿರಕರಮಿರುವನ್ನವು ಸ್ವರ್ಗಗಳು
ನಿರುತಮಂಗಲ ಕಲ್ಯಾಣ ಶೋಭಾನಗಳು
ಪರಮರುಹನ ಚರಣವ ನಂಬಿದರಿಗೆ
ನೆರೆವುದು ನಿರುತ ಸಖಿಯಳೇ || ೪೯

ದಶದಿಕ್ಷಾಲಕರ ಕರ್ಣಗೃಹವು
ಮಿಸುಪನ್ನ ಸುಜನರ ಗೃಹವು
ಒಸಗೆ ಮೇಲೊಸಗೆಯ ಉತ್ಸಾಹದೊಳು
ಕಸವರ ನವವಿಧಪರ ವೃಷ್ಟಿಗಳು
ಎಸೆವುವು ಶಾಸನ ದೇವರ್ಕಳ ನಡಸುವ
ರಸಿಯಳೆ ಭವ್ಯಜನರಿಗೆ || ೫೦

ದೇವದುಂದುಭಿಗಳ ರವದಿ
ದೇವದೇವಿಯರು ಉತ್ಸಹದಿ
ಆವಾಗಳು ನಿಮ್ಮಾಲಯಗಳಲಿ
ಪೂವಿನಮಳೆ ಸುವರ್ಣ ವೃಷ್ಟಿಯಲಿ
ಶ್ರೀಮಂತರು ಜಯವಂತರಾಗಿರಿಯೆಂದು
ದೇವರ್ಕಳೆಲ್ಲ ಹರಸುತ || ೫೧

ಧರಣಿತ್ರಯದ ಬುಧಜನರು
ಸರಸ ಸದ್ಗುಣ ಧನಾಸ್ತು ಧನಾಶಯರು
ಭರತ ಚಕ್ರೇಶ್ವರನ ಧವಳ ಶೋಭನವ
ನಿರುತದಿ ಪಠಿಸುವ ಬಿಡದೆ ಲಾಲಿಸುವ
ಪರಮಪುರುಷರು ಪಾರ್ಣಾಯ ಪುತ್ರೋತ್ಸವ
ಸಿರಿಯ ಸೌಭಾಗ್ಯಯುತರಲ್ತೆ || ೫೨

ನಿತ್ಯಮಂಗಲ ನಿತ್ಯವಿಭವ
ನಿತ್ಯಕಲ್ಯಾಣಸಂಪದವ
ನಿತ್ಯೋತ್ಸವ ನಿರ್ಮಲ ನಿರುಪಮ
ನಿತ್ಯಾನಂದ ನಿವಾಸ ಸದಯ ಸದ್ಧರ್ಮ ಸೌಭಾಗ್ಯ ಸಂ
ಗತ್ಯದಿಂ ನಿತ್ಯ ಸುಖಿಯಾಗಿ
x x x x x x x x x x x x x x x x x || ೫೩