೬೧. ಶ್ರೀಪದ್ಮಾಂಬೆಗೆಮಂಗಲಂ

ಶ್ರೀ ಪದ್ಮಾಂಬೆಗೆ ಮಂಗಲಂ
ಚೆಲುವ ಮೂಜಗದೊಡತಿಗೆ ಮಂಗಲಂ || ಪಲ್ಲವಿ

ಭಾಸುರ ಮಣಿಗಣ ಭೂಷೆಗೆ ಈಶೆಗೆ
ಶೆಷನರ್ಧಾಂಗಿಗೆ ಮಂಗಲಂ || ೧

ಸರಸಿಜ ಗಂಧಿಗೆ ಸಾಮಜಯಾನೆಗೆ
ಪರುಷ ಪದ್ಮಾಂಬೆಗೆ ಮಂಗಲಂ || ೨

ಪನ್ನಗ ವೇಣಿಗೆ ಸನ್ನುತವಾಣಿಗೆ
ಚೆನ್ನೆ ಪದ್ಮಾಂಬೆಗೆ ಮಂಗಲಂ || ೩

ನಂಬಿದ ಭಕ್ತರ ಬೆಂಬಿಡದೆ ಸಲಹುವ
ಪೊಂಬುಜದೊಡತಿಗೆ ಮಂಗಲಂ || ೪

೬೨. ರಕ್ಷಿಸೌಸದಯೇಪದ್ಮಣಿಯೇ

ರಕ್ಷಿಸೌ ಸದಯೇ ಪದ್ಮಣಿಯೇ
ರಕ್ಷಿಸೌ ಸದಯೇ ಪದ್ಮಿಣಿಯೇ || ಪಲ್ಲವಿ

ಧೀರೆ ವಿಜಯ ಶ್ರೀ ಪಾರ್ಶ್ವನಾಥನ
ಸಾರ ಭಕುತಿಯಿಂದ ಸೇವಿಪ
ಶೂರ ಫಣಿಪ ರಾಣಿ ಬಹುಗಂಭೀರೆ
ನೀರೆ ತೋರೆ ಕರುಣವ || ೧

ಲಲಿತ ಕುಕ್ಕುಟೋರಗವಾಹನೆ
ಜಲಜನೇತ್ರಯುಗಲೆ ಶೋಭೆ
ಸಲಹು ಎನ್ನ ಶಾಂತೆ ವರ ಸುಶೀಲೆ
ಲೋಲೆ ಬಾಲೆ ಪಾಲಿಸು || ೨

ಧರೆಯೊಳ್ ವೇಣುಪುರದೊಳ್ ನೆಲಸಿ
ಉರುತರ ವರಂಗಳಿತ್ತು
ನಿರುತ ಭಕ್ತರನ್ನು ಪೊರೆವ ಧೀರೆ
ಶೂರೆ ಮಾತೆ ಪಾಲಿಸು || ೩

 

೬೩. ನಂಬಿದೆನಾನಿಮ್ಮ

ನಂಬಿದೆ ನಾ ನಿಮ್ಮ ಅಂಬುಜ ಲೋಚನೆ
ಅಂದುಗೆ ಕಿರುಗೆಜ್ಜೆಯಿಟು ಪದ್ಮಮ್ಮಗೆ
ಗಂಧಕಸ್ತೂರಿಯ ಲೇಪನ ಮಾಡಿ ಆ
ನಂದದಿಂದೊಪ್ಪುವ ಸಂಗೀತಲೋಲೆಗೆ
ಮಂಗಳಾರತಿಯಾ ಬೆಳಗಿರೆ ಶೋಭಾನಾ || ೧

ಮೂಜಗದೊಡೆಯನ ಪಟ್ಟದ ರಾಣೀ
ಅರ್ತಿಯಿಂದಲಿ ಮೆರೆಯುವ ಬಹುಜಾಣೇ
ಪಟ್ಟದೇವಾಂಗ ವಸ್ತ್ರವ ನಿರಿವಿಡಿದುಟ್ಟು
ವಿಸ್ತಾರದಿಂದಲಿ ಬರುವ ಪದ್ಮಮ್ಮಗೆ
ನೂತನದಾರತಿಯಾ ಬೆಳಗಿರೇ ಶೋಭಾನಾ || ೨

ಕಂಕಣ ಕೈಯನು ಬಿಂಕದಿ ತಿರುಗುತ್ತಾ
ನಿಂತು ನಿಂತಾಡುತ ನಗುತ ಮಾತಾಡುತ್ತಾ
ಕೊಂಕಿದ ಕುರುಳನು ಉಗುರಲೇ ತಿದ್ದುತ
ಅಂಬುಜನಾಭನ ಅರಸಿ ಪದ್ಮಮ್ಮಗೆ
ಕುಂಕುಮದಾರತಿಯಾ ಬೆಳಗಿರೇ ಶೋಭಾನಾ || ೩

ಶ್ರೀ ಪದ್ಮಾರಾಜಿಪ ಮಾಣಿಕ್ಯದರಳೇ
ಬಿಗಿದು ಕಟ್ಟಿದ ಮಂಡೆ ಬಿಂಕದ ಕುರುಳೇ
ಯೆಡೆಯೆಡೆಗಮರುವ ಮಲ್ಲಿಗೆಯರಳೇ
ದೊರೆಯು ಧರಣೇಂದ್ರ ನಿಮ್ಮ ಮಡದಿ ಪದ್ಮಮ್ಮಗೆ
ಬೆಡಗಿನಾರತಿಯಾ ಬೆಳಗಿರೇ ಶೋಭಾನಾ || ೪

ಎಂಟು ಮುತ್ತಿನ ಜಂಪು ಎಸಳು ಹೊನ್ನೋಲೆ
ಎಂಟದ ಕಾವಲಿಸರ ಕಂಠಮಾಲೆ
ಸಂಪಿಗೆ ವರ್ಣದ ಸೊಬಗಿನ ಶ್ಯಾಲೆ
ಮಿಂಚುವ ಮೂಗುತಿ ಇಟ್ಟ ಪದ್ಮಮ್ಮಗೆ
ಮಂಟಪದಾರತಿಯಾ ಬೆಳಗೀರೇ ಶೋಭಾನಾ || ೫

ಕೋಗಿಲೆಗಾನದ ಕೊರಳಿನ ಗಣಲೇ
ತಾರಮ್ಮ ಬಿಡು ಮುತ್ತಿನ ಮೊಗ್ಗೆಯರಳೇ
ಹಾರ-ಕಂಕಣ-ಬಂದಿ-ತೋಡತತಿಯನಿಟ್ಟು
ಸ್ವಾಮಿ ಧರಣೇಂದ್ರ ನಿಮ್ಮ ಮಡದಿ ಪದ್ಮಮ್ಮಗೆ
ಬೆಡಗಿನಾರತಿಯಾ ಬೆಳಗಿರೇ ಶೋಭಾನಾ || ೬

ಝಣ ಝಣ ಝಣಿರೆಂಬ ಹೊಳವಿನ ಜಗುಲೀ
ಏರಿ ಮೇಲೊಪ್ಪುವ ಕಾಂಚಿನ ಡಾಮ
ಪಳಕುವ ನಡುವಿಗೆ ಒಪ್ಪುವ ಒಡ್ಯಾಣ
ಕಲ ಕಲದಿಂದಲಿ ಬರುವ ಪದ್ಮಮ್ಮಗೆ
ರತ್ನದಾರತಿಯಾ ಬೆಳಗೀರೆ ಶೋಭಾನಾ ||  ೭

೬೪. ವಾಣಿವರಕಲ್ಯಾಣಿಮಂಗಳಂ

ವಾಣಿ ವರಕಲ್ಯಾಣಿ ಮಂಗಳಂ
ಏಣನಯನೆ ಜಾಣೆ ಜಯಕೃಪಾಣಿ ಮಂಗಳಂ || ಪಲ್ಲವಿ

ಕ್ಷೋಣಿಗಧಿಕ ತ್ರಾಣೆ ನಿಃಶ್ರೇಯ
ಶ್ರೇಣಿ ಮಧುರ ವಾಣಿ ಪನ್ನಗ
ವೀಣಾಪಾಣಿ ಸುರಸು ಪಾಣಿ
ರಮಣಿಮಣಿ ಕಟ್ಟಾಣಿ ವೇಣಿ ಪಾಣಿ || ೧

ಇಂದ್ರ-ಇಂದ್ರ ಇಂದ್ರ ವಂದಿತೇ
ಕಲ್ಪತರು ಜಿನೇಂದ್ರಚಂದ್ರ ಮುಖಸುಬೋಧಿತೇ
ಸಾಂದ್ರ ಸರಸ ಸುಕವಿಹೃದಯ
ಮಂದಿರೇ ಸುಗಂಧಭರಿತೇ
ಇಂದಿರಾಕ್ಷಿ ಮಂದ್ರ ನಿನದೇ
ಬಂಧುರಾಂಗಿ ಪಾಹಿ ಪಾಹಿ ವಾಣಿ || ೨

ಅರುಣ ಚರಣ ಕಿರಣ ರಂಜಿತೇ
ಮರಕತಾಭ ಬರಿತ ನವ್ಯ ದಿವ್ಯ ಭೂಷಿತೇ
ಪರಮ ಶುಭ್ರವಸನ ಯುಕ್ತೇ
ಸ್ಥಿರಗುಣೌಘಚರಿತೆ ಪೂತೇ
ನಿರಘ ನಿರ್ಮಲ ನಿತ್ಯ ತೃಪ್ತೇ
ಶರುಣ ಶರಣು ಪಾಹಿ ಪಾಹಿ ವಾಣಿ || ೩

ಧರೆಯೊಳಧಿಕ ವೇಣ್ಪುರಾದ್ರಿಯಾ
ಶಾಂತಿನಾಥ ಚರಣಭಕ್ತ ಚಾರುಕೀರ್ತಿಯ
ವರದ ಛಾತ್ರ ನಿಲಯದಲ್ಲಿ
ಸ್ಥಿರದಿ ನೆಲೆಸಿ ಮೆರೆವ ಗುರುವೆ
ತರಳ ಬಾಲರನ್ನು ಸುಖದೊಳಿರಸು ವಾಣಿ ಪಾಹಿ ಪಾಹಿ ವಾಣಿ || ೪

 

೬೫. ಶೃಂಗಾರಹಾರಮಾರವಿಜಯ
ರಾಗ : ಕಮಾಚ್  ತಾಳ : ಆದಿತಾಳ

ಶೃಂಗಾರಹಾರ ಮಾರವಿಜಯ ಧೀರ ಮಂಗಳಂ
ಭಂಗವಗೆಲಿದ ಭಾಗ್ಯದೊಡೆಯ ಶ್ರೀಶ ಮಂಗಳಂ || ಪಲ್ಲವಿ

ಜನನಮರಣರಹಿತನಾದ ಜಿನಗೆ ಮಂಗಳಂ
ಘನಶತೇಂದ್ರವಂದ್ಯಪಾದವನಜ ಮಂಗಳಂ || ೧

ಘೋರಕಲುಷದೂರನಾದ ವೀರ ಮಂಗಳಂ
ಚಾರುಮೋಕ್ಷರತಿಯಗೆಲಿದ ಶೂರ ಮಂಗಳಂ || ೨

ಸಂಸಾರಶರಧಿಯನ್ನು ಗೆಲಿದ ಹಂಸ ಮಂಗಳಂ
ಹಿಂಸಾದಿದೋಷರಹಿತಶ್ರೇಯಾಂಸ ಮಂಗಳಂ || ೩

೬೬. ಜಯಮಂಗಳಂನಿತ್ಯ

ಜಯ ಮಂಗಳಂ ನಿತ್ಯ ಶುಭ ಮಂಗಳಂ
ಶುಭ ಮಂಗಳಂ ನಿತ್ಯ ಶ್ರುತದೇವಿಗೆ ಜಯ || ಪಲ್ಲವಿ

ಪುರದೇವರಡಿಗಳಿಗೆ ಎರಗಿ ಪೂಜಿಸಿ ವಾಣಿ
ಚರಣ ಕಮಲವ ಸ್ಮರಿಸಿ ಗುರುಗಳಿಗೆ ನಮಿಸಿ
ವರುಷಕ್ಕೆ ವರುಷಕ್ಕೆ ಬರುವ ಸುರುಚಿರದ ಮಾರ್ನೌಮಿ
ಅರಸಿಯರು ಹತ್ತೈತರುವ ಪರಿಯನುಸುರುವೆನು ಜಯ ಮಂಗಳಂ || ೧

ಪ್ರತಿಪದದಿ ಚಕ್ರಧರೆ ದ್ವಿತಿಯೆಯಲಿ ಕೂಷ್ಮಾಂಡಿ
ತೃತಿಯೆಯೊಳು ಶ್ರೀಗೌರಿ ಚತುರ್ಥಿಯಲಿ ಕಾಳಿ
ನುತಚರಿತೆsನಂತಮತಿ ಪಂಚಮಿಯ ದಿನದಂದು
ಕ್ಷಿತಿನುತೆಯು ಜ್ವಾಲಿನಿಯು ಷಷ್ಠಿದಿನದಿ ಜಯ ಮಂಗಳಂ || ೨

ಎಸೆವ ಸಪ್ತಮಿ ದಿನದಿ ಅಸಮ ಗುಣೆ ಪದ್ಮಿಣಿಯು
ಶಶಿವದನೆ ಬಹುರೂಪಿಣೀ ಅಷ್ಟಮಿಯ ದಿನದಿ
ಲೇಸೆನಿಪ ನವಮಿ ದಿನ ಸುದತಿ ಸಿದ್ಧಾಯಿನಿಯು
ದಶಮಿಯಲಿ ಭಾರತಿಯು ಬಹುಭಾಗ್ಯಯುತೆಯೂ ಜಯ ಮಂಗಳಂ || ೩

ಆಶ್ವೀಜ ಸಿತ ಪಕ್ಷ ಪ್ರತಿಪದೊಂದನೆ ದಿನದಿ
ವಾಸವಾರ್ಚಿನ ಪುರಪರಮೇಶ ಯಕ್ಷಿ
ಲೇಸು ನಮಗಿಷ್ಟಾರ್ಥ ವರಗಳನು ಕೊಡುತಿರುವ ಚ
ಕ್ರೇಶ್ವರೀ ಅಮ್ಮ ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೪

ದ್ವಿತೀಯದರೆರಡನೆ ದಿನದಿ ಅತಿಶಯದಿ ಕೂಷ್ಮಾಂಡಿ!
ಸತಿ-ಸುತರ ಸೌಭಾಗ್ಯದಷ್ಟ ಸಂಪದವ
ಕ್ಷಿತಿಯ ಸುಜನರಿಗಿತ್ತು ಪ್ರತಿದಿನದಿ ಪಾಲಿಸುವ
ನುತಚರಿತೆ ಕೂಷ್ಮಾಂಡಿನಿ ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೫

ಮೂರನೆಯ ತೃತೀಯೆಯೊಳು ವಾರೀಜಾಕ್ಷಿಯು ಗೌರಿ
ವಾರಣದ ಮೇಲೇರಿ ವಾದ್ಯ ಘೋಷದಲೀ
ಭೂರಿ ವಿಭವದಿ ಛತ್ರಚಾಮರ ವಿರಾಜಿಸಲು
ನಾರಿಯರ ಅರಸಿ ಶ್ರೀಗೌರಿ ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೬

ನಾಲ್ಕನೆಯ ಚೌತಿಯೊಳು ಕಾಲಭವನಾ-ರಥದ
ಮೇಲೇರಿ ನಡೆತಂದು ಸುಜನರೆಲ್ಲರಿಗೆ
ಲೇಸ್ಕೊಟ್ಟು ರಕ್ಷಿಸುವ ಮೂರ್ಕಣ್ಣ ಮಾಂಕಾಳಿ
ನೌಕೆಯಲಿ ಬಂದರೈ ನಮ್ಮ ಮನೆಗೆ ಜಯ ಮಂಗಳಂ ||  ೭

ಪಂಚಮೈದನೆ ದಿನದಿ ವಾಂಛಿತಾರ್ಥವ ಭವ್ಯ
ಸಂಚಯಕೆ ಒಲಿದಿತ್ತು ನಿತ್ಯ ರಕ್ಷಿಸುವ
ಪಂಚಬಾಣನ ಗೆಲಿದsನಂತೆ ಜಿನಪದ ಯಕ್ಷಿ!
ಕೆಂಚೆಯೂ ಬಂದರೈ ನಮ್ಮ ಮನೆಗೆ ಜಯ ಮಂಗಳಂ ||  ೮

ಷಷ್ಠಿ ಆರನೆ ದಿನದಿ ಸೃಷ್ಟಿ ಸುಜನರಿಗೆಲ್ಲ
ಅಷ್ಟಮಹದೈಶ್ವರ್ಯ ಕೊಟ್ಟು ರಕ್ಷಿಸುವ
ಅಷ್ಟಭುಜದಿಂದಿರುವ ಇಷ್ಟೆ ಜ್ವಾಲಿನೀ ದೇವಿ!
ದುಷ್ಟ ಮಹಿಷನ ಏರಿ ಜಗಜ್ಯೇಷ್ಠೆ ಬಂದರೈ ನಮ್ಮ ಮನೆಗೆ
ಜಯ ಮಂಗಳಂ || ೯

ಏಳನೆಯ ಸಪ್ತಕದಿ ವ್ಯಾಳರಾಜನ ರಾಣಿ
ಭಾಲದಲಿ ಲೋಚನೆಯು ಭಾಗ್ಯದಾಯಕಿಯು
ವ್ಯಾಳಕುಕ್ಕುಟಾರೂಢೆ ಲೋಲೆ ಪದ್ಮಾವತಿಯು
ಲೀಲೆಯಲಿ ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೧೦

ಅಷ್ಟಮೆಂಟನೆ ದಿನದಿ ಪಟ್ಟದಾನೆಯನೇರಿ
ದಿಟ್ಟಿಸುತ ನಾಲ್ದೆಸೆಯ ಸುಜನರೆಲ್ಲರಿಗೆ
ಇಷ್ಟ ಸುಖಸಂಪದವ ಕೊಟ್ಟು ರಕ್ಷಿಪ ಮಾತೆ
ಇಷ್ಟಮೂರುತಿ ಬಹುರೂಪಿಣಿ! ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೧೧

ಸದಮಲದ ನವಮಿ ದಿನ ಮದಗಣದ ಮೇಲೇರಿ
ಒದಗಿ ನಡೆಯುತ ವಾದ್ಯ ವಿವಿಧ ವೈಭವದಿ
ಸುದತಿಯರ ಕುಲದರಸಿ ಸಿದ್ಧಾಯಿನೀ ಯಕ್ಷಿ ಸಂ
ಮುದದೊಳೈತಂದರೈ ನಮ್ಮ ಮನೆಗೆ ಜಯ ಮಂಗಳಂ || ೧೨

ದಶಮಿ ಹತ್ತನೆ ದಿನದಿ ದೆಸೆ ದೆಸೆಗೆ ವಾದ್ಯರವ
ಪಸರಿಸಲು ಜಪಮಾಲೆ ಪುಸ್ತಕವು ಸಹಿತ
ಎಸೆವ ಹಂಸೆಯನೇರಿ ಶಶಿಮುಖಿಯು ವಾಗ್ದೇವಿ
ಬಿಸಜಾಕ್ಷಿಯೂ ಬಂದರೈ ನಮ್ಮ ಮನೆಗೆ ಜಯ ಮಂಗಳಂ || ೧೩

ಇಂತು ನವವರಾತ್ರೆಯಲಿ ಕುಂತುಹರಯಕ್ಷಿಯರು
ಅಂತರಿಸದೈತಂದು ನವನಿಧಿಗಳಂತೆ
ಸಂತೋಷ-ಸೌಭಾಗ್ಯ-ಸಂಪದವ ನಮಗಿತ್ತು
ಚಿಂಚಿತಾರ್ಥವು ಕೈಗೆ ದೊರಕಿದಂತಾಯ್ತು || ೧೪

೬೭. ಸುರೇಂದ್ರವೃಂದವಂದಿತೇ

ಸುರೇಂದ್ರವೃಂದ ವಂದಿತೇ ದೇವಿ ಮಂಗಲಂ
ಜಿನೇಂದ್ರ ಚಂದ್ರ ಮುಖಸರೋಜ-ಜಾತೆ ಮಂಗಲಂ || ಪಲ್ಲವಿ

ಭಕ್ತವೃಂದವೆಲ್ಲಕೇ ಭುಕ್ತಿಮುಕ್ತಿ ನೀಡುವ
ಪ್ರೇಮದಿಂ ಸಲಹುವ ಸಂಪನ್ನೆ ಮಂಗಲಂ || ೧

ದ್ವಾದಶಾಂಗ ಧಾರಿಣಿ! ವೀಣಾ ಪುಸ್ತಕ ಪಾಣಿ
ಶರಣರ ಪಾಲಿಪ ನಾಗವೇಣಿ! || ೨

ಮಂಗಲಂ ಜಯಾನ್ವಿತೇ ಮಂಗಲಂ ಶುಭಾನ್ವಿತೇ
ಮಂಗಲಂ ಶ್ರೀವರ ಭಾರತೀಗೆ || ೩

೬೮. ಶ್ರೀಜಿನರಾಜಗೆಮಂಗಲಂ

ಶ್ರೀಜಿನರಾಜಗೆ ಮಂಗಲಂ ಚೆಲುವ
ಮೂಜಗದೊಡೆಯಗೇ || ಪಲ್ಲವಿ

ಸುರಮುನಿವಂದ್ಯ ಸುರೇಂದ್ರ ಪೂಜಿತಪದ
ಸರಸಿಜಯುಗಲಗೇ ಜಯ ಮಂಗಲಂ || ೧

ಅಂಗವಿಜಯ ಮುಕ್ತ್ಯಂಗನೆಯರಸ ದಿ
ವ್ಯಾಂಗಶೋಭಿತನಿಗೆ ಜಯಮಂಗಲಂ || ೨

ಮಂಗಲ ಮಹಿಮ ಭುಜಂಗಕೇತನ ಸರ್ವ
ಸಂಗ ರಹಿತನಿಗೆ ಜಯಮಂಗಲಂ || ೩

ವಿಶ್ವಪೂಜಿತ ವಿಶ್ವಲೋಚನ ಸುಜ್ಞಾನ
ವಿಶ್ವವಿನುತನಿಗೆ ಜಯಮಂಗಲಂ || ೪

ವಿಶ್ವದಾತ್ಮಜ ವೇಣುಪುರ ಪಾರ್ಶ್ವನಾಥಗೆ
ನಿತ್ಯಶೋಭಿಪನಿಗೆ ಜಯಮಂಗಲಂ || ೫

೬೯. ಜಯಮಂಗಳಂಸದಾಶುಭ

ಜಯಮಂಗಳಂ ಸದಾ ಶುಭ ಮಂಗಳಂ
ಜಯ ಶೀತಳೇಶ್ವರನ ಯಕ್ಷೇಂದ್ರಗೆ ಜಯ || ಪಲ್ಲವಿ
ಜಲಗಾಮಿನಿ ಶ್ವೇತಹಯವೇರಿ ಸಾಗರದ
ಜಲದ ಮೇಲೇರಿ ರಾರಾಜಿಸುವ ದೇವೇಶ್ವರ
ಜಲಬ್ರಹ್ಮದೇವ ಶರಣೆಂದು ಶರಧಿಯರಾಜ
ಜಲದೇವಿಯರು ಸ್ತುತಿಸಿ ಜಯವೆನ್ನುತಾ ಜಯಾ || ೧

ದೇಶದೇಶಕ್ಕೆ ಬರುವ ಕ್ಷಾಮ ಢಾಮರ ಸತತ
ದೋಷಗಳ ನೀನೀಗಿ ಶಾಂತಿಯನು ನೀ ನೀಡುವೆ
ಭಾಸ್ಕರನ ತೇಜದಲಿ ಪೊಳೆವ ಮೂರುತಿ ನೀನು
ದಾಸನಾಗುಳಿವೆ ನಿನ್ನ ಚರಣದಡಿಯೊಳಗೆ ಜಯ || ೨

ಶ್ರವಣ ಗುಂಡದಿ ಮೆರೆದ ಬಹುಕಾಲ ವೈಭವದ
ಸರ್ವರಕ್ಷಕ ಶ್ರೀವೀರ ಬ್ರಹ್ಮರಾಯನ ಕಟಾಕ್ಷ
ಭುವನ ಮೂರರೊಳೆಲ್ಲ ಇವನ ಕೀರ್ತಿಪ್ರತಾಪ
ಬಾವಿಯೊಳು ತೇಲಿಸುತ ಕಲ್ಗುಂಡನವ ನಮ್ಮ ಭೂಪ ಜಯ || ೩

೭೦. ಎತ್ತಿರಾರತಿಸತ್ಯಮೂರ್ತಿಗೆ

ಎತ್ತಿರಾರತಿ ಸತ್ಯಮೂರ್ತಿಗೆ
ನಿತ್ಯಶಾಂತ ನಿರ್ಮಲಾಂಗ ಬ್ರಹ್ಮದೇವಗೆ || ಪಲ್ಲವಿ

ಕಮಲನಯನ ಕಾರುಣ್ಯಮೂರ್ತಿಗೆ
ದ್ಯುಮಣಿ ತೇಜವೀರ ಶ್ರೀ ಬ್ರಹ್ಮದೇವಗೆ || ೧

ಶೀತಳೇಶನ ಪಾದಸೇವಕ
ಭೂತಳದಿ ಖ್ಯಾತಿಯಿಂದ ಮೆರೆವ ದೇವಗೆ || ೨

ಭೂತಪ್ರೇತ ಪಿಶಾಚಿಗ್ರಹಗಳ
ಭೀತಿಗೊಳಿಸಿ ತೇಜಯೇರಿ ಬರುವದೇವಗೆ || ೩

ಹುಟ್ಟುಬಂಜೆಗೆ ಕೊಟ್ಟು ಸುತರನು
ಇಷ್ಟಸಿದ್ಧಿಯನ್ನು ಕೊಡುವ ಶ್ರೇಷ್ಠ ಮೂರ್ತಿಗೆ || ೪

ವೇಣುಪುರದೊಳು ಅನಂತಗೇಹದಿ
ಕಮಲ ಪೀಠದೊಳಗೆ ನೆಲಸಿ ಮೆರೆವ ದೇವಗ || ೫