೩೧. ಸರಸಿಜಭವನರಸಿಯ
ಸರಸಿಜ ಭವನರಸಿಯ ಸರಸ್ವತಿಯನು
ನೆರೆ ಸ್ಮರಿಸುತ ಮುದದಿ
ತರುಣಿ ಪದ್ಮಿನಿಯ ಬಲಗೊಂಡು ಪದ್ಮಾವತಿಯಮ್ಮಗೆ
ತರುಣಿಯರಾರತಿ ಬೆಳಗಿರೇ || ೧
ಚಿನ್ನ ಸರಿಬಣ್ಣದ ಮೈಗಣ್ಣನ
ಸತಿಗಿಮ್ಮಡಿ ರೂಹೋನ್ನತೆ
ನಿನ್ನ ಭಜಿಸುತ ಪದ್ಮಾವತಿಯಮ್ಮಗೆ
ರನ್ನದಾರತಿಯ ಬೆಳಗಿರೇ || ೨
ಸತಿಯರ ಕುಲಕತಿಶಯ ಮಣಿ
ಕ್ಷಿತಿಗತಿನುತ ಸನ್ಮತಿಗಳನಿತ್ತು
ಸತತ ಸಜ್ಜನರ ಸಲಹು ಪದ್ಮಾವತಿಯಮ್ಮಗೆ
ಸತಿಯರಾರರಿಯ ಬೆಳಗಿರೇ || ೩
ಸಂತತ ಸಂತೋಷದಿ ಭಜಿಸುವ
ಚಿಂತಿಸಿ ಮನದಂತರಂಗದೊಳು
ನಿಂತು ಪೂಜಿಸುವ ಮನುಜರ ರಕ್ಷಿಪನಾಗ
ಕಾಂತೆಗಳಾರತಿಯ ಬೆಲಗಿರೇ || ೪
ಅಂಬುಜಮುಖಿ ಬಿಂಬಾಧರೆ ಕರ
ವಾಂಬುಜ ನಯನಾಂಬಿಕೆ ತಾಯೆ
ನಂಬಿದ ಜನರ ಸಲಹು ಹೊಂಬುಚಪುರದ ಪ
ದ್ಮಾಂಬಿಕೆಗಾರತಿಯ ಬೆಳಗಿರೇ || ೫
ಅಂಗಣಮಣಿ ಶೃಂಗಾರದ ಹೊಸ
ಮಂಗಲಮುಖಿ ಸಂಗೀತವಿನೋದೆಗೆ
ಹೊಂಗಳಸ ಕುಚದ ಕುವರಿಯರು ಪದ್ಮಾವತಿಯಮ್ಮಗೆ
ಮಂಗಳರಾತಿಯ ಬೆಳಗಿರೇ || ೬
ಸನ್ನುತ ಗುಣರನ್ನೆ ಮೋಹನೆಗೆ
ಪನ್ನಗ ಕುಲದುನ್ನತಿಯಾಧರ
ನೋನ್ನತ ಸರಸಿ ಗುಣಸರಸಿ ಪದ್ಮಾವತಿಯಮ್ಮಗೆ
ಕನ್ನೆಯರಾರತಿ ಬೆಳಗಿರೇ || ೭
ಬಡನಡು ನಡನಡುಗುವ ಕುಚ ಹೊ
ಮ್ಮಿಡಿ ಮುಡಿ ಕಡು ಬೆಡಗಿನ ಜಾಣೆ
ಬಿಡದೆ ಭಕ್ತರನು ಸಲಹುವ ಪದ್ಮಾವತಿಯಮ್ಮಗೆ
ಬೆಡಗಿನರಾರತಿಯ ಬೆಳಗಿರೇ || ೮
ಮೇರುವಿನಿಂದ ದಕ್ಷಿಣ ಭರತಾರ್ಯ್ಯವನಿ
ವರ ವೇಣುಪುರದೊಳು ಪಾರೀಶ್ವ ಜಿ
ನರ ಬಸದಿಯೊಳು ನೆಲಸಿದ
ನಾರಿ ಪದ್ಮಿಣಿಗೆ ಜಯಜಯತು || ೯
ಮನುವಂಶಾಬುಧಿ ವರ್ಧನ ಚಂದ್ರಗೆ
ಇನಶಶಿಕೋಟಿ ಪ್ರಕಾಶನಿಗೆ
ಘನತರ ಸೌಖ್ಯ ಪ್ರದಾಯಕ
ನೆನಿಸಿದ ಸುರಚಿರಗೊಲಿದಾರತಿಯೆತ್ತಿರೇ || ೧
ಗಜಲಾಂಛನನುಳ್ಳ ಅಜಿತ ಜಿನೇಶಗೇ
ವಿಜಿತ ಮದನ ಸಂಭವನಾಥಗೆ
ಗಜರಿಪುವಿಷ್ಟರ ಅಭಿನಂದನಿಗೆ
ತ್ರಿಜಗದೊಡನೆ ಸುಮತೀಶನಿಗೆ || ೨
ಮಾರಮರ್ಧನ ಪಟುವಾರಿಜ ಪ್ರಭವಿಗೆ
ಕಾರುಣ್ಯನಿಧಿ ಸುಪಾರೀಶ್ವೇಶನಿಗೆ
ತಾರಾದೀಪ ಚಂದ್ರಪ್ರಭೇಶನಿಗೆ
ಭೂರಿ ವೃಭವ ಪುಷ್ಟದಂತನಿಗೆ || ೩
ಭೂತಳಪತಿನುತ ಶೀತಳನಾಥಗೆ
ಜಾತರೂಪಾನ್ವಿತ ಶ್ರೇಯಾಂಶನಿಗೆ
ಪ್ರತಿಹಾರ್ಯ್ಯನುತ ವಾಸುಪೂಜ್ಯನಿಗೆ ಶ್ರೀ
ವೀತರಾಗಗೆ ವಿಮಲೇಶನಿಗೆ || ೪
ಅಂತಕವಿಜಯ ಅನಂತ ಜಿನೇಶಗೆ
ಗ್ರಂಥವರ್ಜಿತ ಧರ್ಮನಾಥನಿಗೆ
ಚಿಂತಿತ ಫಲದ ಪ್ರಶಾಂತ ಜಿನೇಶಗೆ
ಕಂತು ವಿಜಯ ಕುಂಥುನಾಥನಿಗೆ || ೫
ವರಮುಕ್ತಿರಮಣ ಶ್ರೀ ಅರಜಿನನಾಥಗೆ
ದುರಿತ ವಿಜಯ ಮಲ್ಲಿನಾಥಗೆ
ಸುರನರವಂದಿತ ಮುನಿಸುವೃತನಿಗೆ
ಪರಮಪಾವನ ನಮಿನಾಥನಿಗೆ || ೬
ರಾಮಕೇಶವನುತ ನೇಮಿ ಜಿನೇಶಗೆ
ಸ್ವಾಮಿಪಾರೀಶ್ವ ಜಿನೇಶ್ವರಗೆ
ಸೋಮಕೋಟಿ ಪ್ರಕಾಶ ಸಾಸಿರದಷ್ಟು
ನಾಮದೊಡೆಯ ವೀರನಾಥನಿಗೆ || ೭
ಮತಿಶ್ರುತವತಿ ಮನಪ್ಪರಿಯಾಯವೆಂದೆಂಬ
ಚತುರ್ಜ್ಞಾನ ಜ್ಯೋತಿಯ ವರಪಾದಕೆ
ವ್ರತಶೀಲ ಚಾರಿತ್ಯ್ರಗುಣಗಳುಳ್ಳವರೆಲ್ಲ
ಪತಿವ್ರತೆಯರೆಲ್ಲರು ಬಂದಾರತಿಯೆತ್ತಿರೇ || ೮
ವೃಷಭ ಸೇನಾಧಿಗೌತಮಾತ್ಯ ಗಣೇಶಗೆ ಪ
ರುಷದಾರತಿಯಿಂದ ಒಲಿವೊಲಿದು ಪು
ರುಷ ಚಕ್ರಿಯನುಳ್ಳ ಸರಸಿಜಾಂಬಿಕೆಯರು ಹ
ರುಷಶ್ರು ಸೂಸಿ ಆರತಿಯೆತ್ತಿರೇ || ೯
ಕ್ಷಿತಿಗತಿಶಯ ಅಕ್ಷಯ ಪುರಭವ್ಯರ್ಗೆ
ಯತಿಕುಲ ಲಲಿತ ತೀರ್ಥಾಚಾರ್ಯ್ಯಗೆ
ಅತಿ ಪ್ರೀತಿಯಿಂದ ರಕ್ಷಿಪ ಪಾರೀಶ್ವೇಶಗೆ
ಮತಿವಂತೆಗೊಲಿದಾರತಿಯೆತ್ತಿರೆ || ೧೦
೩೨. ಕನಕಪುರದಜಯಂಧರಗೇ
ಕನಕಪುರದ ಜಯಂಧರಗೇ
ವನಿತೆ ಪೃಥ್ವೀದೇವಿ ಸುತಗೇ
ಜನಿಸಿದ ನಾಗಕುಮಾರನ ನೋಡಿ
ವನಿತೆಯರೆಲ್ಲರು ಧವಳವ ಪಾಡಿ
ಘನ ಬೇಗದೊಳಾರತಿಗಳ ಮಾಡಿ
ಮನದರ್ತಿಯಿಂದ ಮಾನಿನಿಯರು ಬೆಳಗಿರೇ || ೧
ದಿಕ್ಕುದಿಕ್ಕಿಗೆ ಕೀರ್ತಿವಡೆದಾ
ಸೊಕ್ಕಿದಾನೆಯ ಕುದುರೆಗಳ ಪಿಡಿದಾ
ಅಕ್ಕಯಿವಳು ತಂಗಿಯೆಂಬುದನರಿದಾ
ಸಕ್ಕರವಿಲ್ಲಾದ ರೂಪಿನಿಂದ ಜರಿದಾ
ಚಿಕ್ಕಪ್ರಾಯದ ಮಾನಿನಿಯರ ಗೆಲಿದಾ
ಕಕ್ಕಸ ಕುಚದ ಕೋಮಲೆಯರು
ಅಕ್ಷತೆಯನಿಟ್ಟಾರತಿಯ ಬೆಳಗೀರೇ || ೨
ವ್ಯಾಲ ಮಹಾವ್ಯಾಲರನು ಓಲೈಸಿ ಬೋಧ್ಯಾಭೇದ್ಯರು
ಲೀಲೆಯಿಂದಲಿ ಬಂದು ಮುಕುಟವರ್ಧನರು
ಸಲಾಗಿ ಬಂದು ಕುಳಿತು ಜೂಜನಾಡಿದರು
ಸೋಲಿಸಿ ಕಳಿಸಿದ ನಾಗಕುಮಾರಗೆ
ಬಾಲೆಯರಾರತಿಯಾ ಬೆಳಗಿರೇ || ೩
ಚಂಡಪ್ರಭನ ಗೆಲಿದವಗೆ ಪ್ರ
ಚಂಡ ಪೃಥ್ವೀದೇವಿ ಸುತಗೇ
ಮಂಡೆ ಬಾಗಿದರ ಮನ್ನಿಸಿ ಕಳಿಪಿದವಗೇ
ದಂಡೆತ್ತಿ ಪರರಾಯರ ಗೆಲಿದವಗೇ
ಕಂಡು ವೇತಾಳನ ನೆಲಕಿಕ್ಕಿಸಿದವಗೆ ಭೂ
ಮಂಡಲಕಧಿಪತಿ ನಾಗಕುಮಾರಗೆ ಕುಂದದಾರತಿಯ ಬೆಳಗಿರೇ || ೪
ರಾಯಾರಾಯರ ಗೆಲಿದವಗೇ
ವಾಯುವೇಗನ ಕೆಡೆದವಗೇ
ಪ್ರಾಯದೈವತ್ತಾರು ದೇಶವ ಹಾಯ್ದು
ತಾಯ ನೆನೆದು ತನ್ನೂರಿಗೈದಿದಗೇ
ಸ್ತ್ರೀಯರು ಎಂಟು ಸಾವಿರ ಮಂದಿ ಬರಲಿ
ಪುರಕೈದಿದ ಮಹಾ ದೊರೆಗಳೊಗ್ಗಿನಲಿ ತನ್ನ
ಪ್ರಿಯಾನಿಗಾರತಿಯ ಬೆಳಗೀರೆ || ೫
ಬಿಡದೆ ಪನ್ನೆರಡು ಯೋಜನವೂ
ನಡೆತರುತಿರಲು ಪಾಳೆಯವೂ
ಪೊಡವಿಪತಿಗಳ ಸಂತೋಷದೊಳಗೆ
ಒಡೆಯನ ಎಡಬಲದೊಳಗಿರಲಾಗ
ಕಡು ಹರುಷದಿನಾನೆಯನೇರಿ ಬೇಗ
ಮಡದಿಯರೆಲ್ಲರು ನಡೆಯಲು ಈ ಭೂಮಂಡಲ
ದೊಡೆಯನಿಗಾರುತಿಯ ಬೆಳಗೀರೆ || ೬
ಉಜ್ಜಂತಗಿರಿಯೊಳು ನಿಂದು ಪ್ರಜ್ವಲಿಸುವ ಸ್ವಾಮಿ ಚೆಂದ
ಮಜ್ಜನದಭಿಷೇಕವ ಮಾಡಿ ಬಂದಾ
ದುರ್ಜನ ಸುಕಂಠನ ತಾನಾಗಿ ಕೊಂದಾ
ಜರ್ಜ್ಜರಿತ ಮಾಡಿ ಸ್ತ್ರೀಯರ ತಂದಾ
ಸೊರ್ಗ ಸೂರ್ಯಪ್ರಭ ನಾಗಕುಮಾರಗೆ
ವಜ್ರದಾರತಿಯ ಬೆಳಗೀರೇ || ೭
ಧರೆಯೊಳು ಅತಿಶಯವಡೆದಾ
ಮರೆವೊಕ್ಕ ಜನರ ಮನ್ನಿಸಿದಾ
ತರುಣಿಯರೆಂಟು ಸಾವಿರ ಮಂದಿ ಬರಲಿ
ಪುರಕೈದಿದ ಮಹಾದೊರೆಗಳೊಗ್ಗಿನಲಿ
ಸುರಿದ ಕನಕವೃಷ್ಟಿ ಮಹಾಪೂರದಲಿ ತಂದೆ ತಾಯಿ
ಗೆರಗಿದ ಪುಣ್ಯ ಪುರುಷನಿಗಾರತಿಯ ಬೆಳಗೀರೆ || ೮
೩೩. ಜಯಮಂಗಳಂನಿತ್ಯ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಜಯ ಪರಬ್ರಹ್ಮ ಶ್ರೀ ಶಾಂತೀಶಗೆ ಜಯ ಮಂಗಳಂ || ಪಲ್ಲವಿ
ಭುವನಕವತರಿಸುವರುದಿಂಗಳೆನೆ ಮಣಿ ಮಳೆಯ
ದಿವದಾದಿ – ಮಧ್ಯಾಂತದೊಳು ಕರೆಯಲೂ
ಭುವನಾಂಬಿಕೆಯೂ ಸ್ವಪ್ನ ಕಾಣಲುದರದಿ ಜನಿಸಿ
ಅವಧಿ-ಮತಿ-ಶ್ರುತವೆಸೆದು ಕಳೆದೋರ್ಪಗೆ ಜಯ || ೧
ಜನನಿಯುದರದಿ ತ್ರಿಜಗ-ದಿರವನರಿದಿರ್ಪವಗೆ
ಮುನಿಗಳಿಗೆ ತತ್ವ ನಿರ್ಣಯದೋರ್ಪಗೆ
ಜನಿಸಿ ಸುರಗಜವೇರಿ ಸುರಸಮಿತಿ ಸಹ ತೆರಳಿ
ಕನಕಾದ್ರಿಯೊಳು ಸುಧಾಬ್ಧಿಯ ಮಿಂದಗೆ ಜಯ || ೨
ತೊಡರಳಿದ ತಪದಿ ಘಾತಿಗಳ ಖಂಡಿಸಿದವಗೆ
ಒಡನೆ ಕೇವಲ ಬೋಧವನು ತಾಳ್ದಗೆ
ಪೊಡವಿಗೈಸಾಸಿರದಿ ಬಿಲ್ಲಂತರಕ್ಕೊಗೆದು
ಸಡಗರಿಪ ಸಮವಸರಣದಿ ನಿಂದಗೆ ಜಯ || ೩
ಲೋಕಕ್ಕೆ ಸದ್ಧರ್ಮ ಸಾರ ವೃಷ್ಟಿಯ ಕರೆದು
ಲೋಕದೊಳು ಬಹಿರ್ವಿಭೂತಿಗಳ ಕಳೆದಗೆ
ನಾಲ್ಕಘಾತಿಗಳ ಬೇರ್ಗಳ ಸುಟ್ಟುರುಹಿದಗೆ
ಲೋಕಾಗ್ರದೊಳು ನಿಂದ ಶ್ರೀಕಾಂತಗೆ ಜಯ || ೪
೩೪. ಜಯಮಂಗಲಂನಿತ್ಯಶುಭ
ಜಯ ಮಂಗಲಂ ನಿತ್ಯ ಶುಭ ಮಂಗಲಂ
ಜಯ ಶೀಲ ವಿಮಲ ನಿತ್ಯಾನಂದಗೆ
ಜಯ ಮಂಗಲಂ ನಿತ್ಯ ಶುಭ ಮಂಗಲಂ || ಪಲ್ಲವಿ
ಇಳೆವೆಣ್ಣನಾಳ್ದ ಜಯವರ್ಮ ಭೂಪಗೆ ಮಹಾ
ಬಲನಾದ ವಿದ್ಯಾಧರಾಧಿಪತಿಗೆ
ತೊಲತೊಲಗುತೀಶಾನ ಕಲ್ಪದೊಳು ಸೌಖ್ಯ ಬೊ
ಬ್ಬುಳಿಸಿ ಮೆರೆಮೆರೆವ ಲಲಿತಾಂಗ ದೇವನಿಗೆ ಜಯ || ೧
ಧರಣಿಪತಿ ವಜ್ರಜಂಘಗೆ ಭೋಗ ಭೂಮಿಜಗೆ
ವರಸುಖಾಂಬುಧಿಗೆ ಶ್ರೀಧರ ದೇವಗೆ
ಸರಸ ಸದ್ಗುಣ ಸಿಂಧು ಸುವಿಧಿಗಚ್ಯುತ ಕಲ್ಪ
ಧರನಾದ ದೇವದೇವೋತ್ತಮನಿಗೆ ಜಯ || ೨
ಸರ್ವ ಭೂಮಿಯನಾಳ್ದ ವಜ್ರನಾಭಿಗೆ ಮಹಾ
ಸರ್ವಾರ್ಥಸಿದ್ಧಿ ಪತಿಗಹಮಿಂದ್ರಗೆ
ಸರ್ವಜ್ಞಗಾದಿ ಪರಮೇಶ್ವರಗೆ ಕೃಪೆಯಿತ್ತು
ಸರ್ವರನು ಕಾಯ್ವ ವರ ಸರ್ವತೋಮುಖಗೆ ಜಯ || ೩
೩೫. ಆರತಿಬೆಳುಗುವೆ
ಆರತಿ ಬೆಳಗುವೆ ಆನಂದದಿಂದಲಿ
ಹರಿಣಲಾಂಛನ ಶಾಂತಿ ಜಿನರಾಜಗೆ
ಕರಿಪುರಪತಿ ವಿಶ್ವಸೇನನ ಪಟ್ಟದ ನಾರಿ
ಐರಾದೇವಿಗೆ ತರುಣನಿಗೆ || ಪಲ್ಲವಿ
ಎರಡೈದು ಎರಡನೆ ಭವದೊಳು ಚಾರಣ
ಮುನಿರಾಜನಿಗೆ ಅನ್ನದಾನವ ಕೊಟ್ಟು
ನರಸುರ ಸುಖ ಸಾಗರದೊಳಗೋಲಾಡಿ
ಪರಮ ಪದವಿಯ ಪಡೆದ ಮಹಾತ್ಮಗೆ || ೧
ಮಾರನ ರೂಪಗೆ ಮಾರನೆನಿಪಗೆ
ಮಾರನ ಚಾಪವ ಮುರಿದಾತಗೆ
ಮೇರುಭೂಧರ ಧೈರ್ಯ ದುರಿತ ವಿಲೋಪಗೆ
ಚಾರುಚಿನ್ಮಯ ಚಿದ್ರೂಪನಿಗೆ ಆರತಿ ಬೆಳಗುವೆ || ೨
ಐದು ಕಲ್ಯಾಣೇಶ ಐದನೆ ಚಕ್ರೇಶ
ಐದು ವಿಥ್ಯಾತ್ವ ವಿನಾಶನಿಗೆ
ಐದಿಂದ್ರಿಯ ಮದ ಮತಂಗ ಮೃಗೇಶಗೆ
ಐದನೆ ಗತಿ ನಿವಾಸನಿಗೆ ಆರತಿ ಬೆಳಗುವೆ || ೩
ಪರಮ ಪುರುಷ ಪರಂಜ್ಯೋತಿ ಪರಬ್ರಹ್ಮ
ಪರಮೇಷ್ಠಿ ಪರಬೋಧ ಕೋಷನಿಗೆ
ಪರದೇವ ಪರವೀರ ಪರಮಾತ್ಮ ಪರಮೇಶ
ಸುರುಚಿರ ತತ್ವ ಪ್ರಕಾಶನಿಗೆ ಆರತಿ ಬೆಳಗುವೆ || ೪
ಭವಕಾಲಕ್ಷ ದ್ರವ್ಯ ರಹಿತನಿಗೆ
ಭುವನತ್ರಯಕ್ಕಧಿನಾಥನಿಗೆ
ದೇವೆಂದ್ರನುತ ಪಾದ ಶ್ರೀಶಾಂತಿನಾಥಗೆ
ತವ ನಿಧಿ ಪುತ್ರನಾದಾತನಿಗೆ ಆರತಿ ಬೆಳಗುವೆ || ೫
೩೬. ಮಂಗಲಾರತಿಯತಂದೆತ್ತಿರೆ
ಮಂಗಲಾರತಿಯ ತಂದೆತ್ತಿರೆ ಜಗದೊಡೆಯ ಶಾಂತಿ
ಜಿನರಾಜನಿಗೆ ಮಂಗಲಾರತಿಯ ತಂದೆತ್ತಿರೆ || ಪಲ್ಲವಿ
ಕರಿಪುರಪತಿ ವಿಶ್ವಸೇನ ನೃಪೇಂದ್ರಗೆ
ತರುಣಿ ಐರಾದೇವಿ ಎಂಬಳಿಗೆ
ವರಸುತನಾಗಿ ಸಂಜನಿಸಿದ ದೇವಗೆ
ಪರಮ ಪುರಷಗಾರತಿ ಎತ್ತಿರೆ ಮಂಗಲಾರತಿಯ || ೧
ಲಕ್ಷಪರಮಾಯುಷಿ ಇಕ್ಷ್ವಾಕುವಂಶಗೆ
ಅಕ್ಷಯ ಸುಖ ಫಲದಾಯಕಗೆ
ಮೋಕ್ಷ ಪದೈಕ ಲಕ್ಷಣ ಕನಕಾಂಗಗೆ
ಅಕ್ಷತ ನಿರಘಗಾರತಿ ಎತ್ತಿರೆ ಮಂಗಲಾರತಿಯ || ೨
ವರಚಕ್ರಿ ನಾಲ್ವತ್ತು ಬಿಲ್ಲುತ್ಸೇದಗೆ
ವರವೀವ ಗರುಡ ಯಕ್ಷೇಂದ್ರನಿಗೆ
ಪರಮ ದಯಾಳು ಮಾನಸಿ ಯಕ್ಷಿದೇವಿಗೆ
ನಿರಘನ ಸ್ತುತಿಸಿ ಆರತಿಯೆತ್ತಿರೆ ಮಂಗಲಾರತಿಯ || ೩
ಕ್ಷಿತಿಯೊಳೈದನೆಯ ಚಕ್ರೇಶಗೆ ಭೂಪಗೆ
ಅತಿ ಸುಖ ಸಂಪತ್ತಲಿರ್ದವಗೆ
ಗತಿ ನಾಲ್ಕು ಸುಲಭದಿ ಗೆಲಿದ ಮಹಾತ್ಮಗೆ
ಅತಿ ಪುಣ್ಯನಿಧಿಗಾರತಿಯೆತ್ತಿರೆ ಮಂಗಲಾರತಿಯ || ೪
ಭವಭವದೊಳು ಬಹು ಸುಖ ಉಂಡದೇವಗೆ
ಭುವನೇಶ ಹರಿಣಿಯ ಲಾಂಛನಗೆ
ಸುವಿದಾದ್ರಿ ಸಮ್ಮೇದ ತುದಿ ಮೋಕ್ಷ ಪಡೆದಂಗೆ
ಭುವನ ಪ್ರಖ್ಯಾತಗಾರತಿಯೆತ್ತಿರೆ ಮಂಗಳಾರತಿಯ || ೫
ಧರೆಯೊಳಗುತ್ತಮ ಹಿರಿಯ ಬಸದಿಯೊಳು
ಸ್ಥಿರವಾಗಿ ನಿಂದ ಶ್ರೀಶಾಂತೀಶಗೆ
ಕರವ ಮುಗಿದು ಸಾಷ್ಟಾಂಗ ಪ್ರಣುತರಾಗಿ
ಪರಮ ಭಕ್ತಿಯೊಳಾರತಿಯೆತ್ತಿರೆ ಮಂಗಳಾರತಿಯ || ೬
೩೭. ಆರತಿಬೆಳಗುವೆನು
ಅರತಿ ಬೆಳಗುವೆನು ನಿನಗೊಂದಾರತಿ ಬೆಳಗುವೆನು
ಮೇರುಗಿರಿ ಸಮ ಧೈರ್ಯ ನಿನಗೊಂದಾರತಿ ಬೆಳಗುವೆನು || ಪಲ್ಲವಿ
ಮದವೆಂಬ ಮದ್ದಾನೆಯನು ಕದನವಿಲ್ಲದೆ ಗೆದ್ದ ಹರಿಯೇ
ಚದುರ ಲಕ್ಷ್ಮೀಪತಿಯೇ ನಿನಗಾರತಿ ಬೆಳಗುವೆನು ||
ಪಂಚಬಾಣನ ಗೆಲಿದನಿಗೆ ಪಂಚೇಂದ್ರಿಯ ನಿಗ್ರಹನು ನೀನೆ
ಪಂಚಕಲ್ಯಾಣಾಧಿಪ ನಿನಗೊಂದಾರತಿ ಬೆಳಗುವನೆ ||
ಸೋಮರವಿಶತ ಕೋಟಿ ತೇಜನೇ ಭೀಮಜನ್ಮಂಬೋಧಿದೂರನೆ
ರಾಮ ರಾವಣ ಪೂಜಿತ ನಿನಗಾರತಿ ಬೆಳಗುವೆನು || ೩
ನರಸುರೋರಗ ವಂದ್ಯನು ನೀನೆ ಹರಿಹರ ಬ್ರಹ್ಮಾದ್ಯನು ನೀನೆ
ಪುರುಷೋತ್ತಮನೆ ನಿನಗೊಂದಾರತಿ ಬೆಳಗುವೆನು || ೪
ಮೂರಾರುಂ ಮೂರಾರು ಗೆಲಿದ ನೂರನಲ್ವತ್ತೆಂಟು
ಧೀರಗಂಭೀರ ನಿನಗೊಲಿದಾರತಿ ಬೆಳಗುವೆನು || ೫
೩೮. ಜಯಮಂಗಳಂನಿತ್ಯಶುಭ
ಜಯ ಮಂಗಳಂ ನಿತ್ಯ ಶುಭಮಂಗಳಂ
ಜಯ ಜಗಜ್ಜನನಿ ಜ್ವಾಲಿನಿದೇವಿ ತೇ
ಜಯ ಮಂಗಲಂ ನಿತ್ಯ ಜ್ವಾಲಿನೀದೇವಿ ತೇ
ಜಯ ಮಂಗಳಂ ನಿತ್ಯ ಶುಭ ಮಂಗಳಂ || ಪಲ್ಲವಿ
ಧವಲಾಂಗಿ ಧವಲಮೌಕ್ತಿಕಹಾರಧಾರಣಿ
ಧವಲಭಾಸುರ ಕುಂಡಲ ಭಾಸಿನಿ
ಧವಲಚಾಮರಧರ ಸ್ತ್ರೀ ಜನವಿರಾಜಿನಿ
ಪ್ರವಿರಾಜ ಸಚ್ಛಾಮಯಕ್ಷರಾಣಿ || ೧
ಪದ್ಮಪಾದೇ ಪದ್ಮದಲ ಸಮವಿಲೋಚನೇ
ಪದ್ಮನಾಭೇ ಪದ್ಮಸೌಗಂಧಿಕೇ
ಪದ್ಮ ಹಸ್ತೇ ಪದ್ಮ ಮಿತ್ರಸಮಕಾಂತಿಕೇ
ಪದ್ಮಾನನೇ ಭಾಸುರ ಮೂರ್ತಿಕೇ || ೨
ಗಜವೈರಿವಾಹನೇ ಝಷಪಾಶಧಾರಿಣಿ
ಕುಜನ ಸಂಹಾರಿಣೀ ಭವ್ಯಜನನಿ
ವೃಜಿನಹರ ಜಿನಬಿಂಬ ಮಣಿ ಮಕುಟಧಾರಣಿ
ಸುಜನಪೋಷಿಣಿ ಸುವಾಂಛಿತದಾಯಿನೀ || ೩
೩೯. ಕಮಲಪಾಣಿಸುಗುಣವೇಣಿ
ಕಮಲಪಾಣಿ ಸುಗುಣವೇಣಿ ಶ್ಯಾಮಮಾಲಿನಿ!
ಸಕಲ ಲೋಕಸುಂದರಾಂಗಿ ಜ್ವಾಲಾಮಾಲಿನಿ || ಪಲ್ಲವಿ
ಅಂಬುಜಾಕ್ಷಿ ಕಂಬುಕಂಠಿ ಶ್ಯಾಮಯಕ್ಷಿಣಿ!
ನಂಬಿದವರ ಸಲಹುತಿಹಳು ಜ್ವಾಲಾಮಾಲಿನಿ || ೧
ಇಂದುವದನೆ ಮಂದಗಮನೆ ಸುಂದರಾಗಿಯೇ
ಚಂದದಿಂದ ಸಲಹುತಿಹಳು ಮಹಿಷವಾಹಿನಿ! || ೨
ರಾಜೀವಾಕ್ಷಿ ಹರಿಸಿ ಪೊರೆವ ಲೋಕನಾಯಕಿ!
ಪಾಲಿಸೆನ್ನ ಲೋಕಮಾತೆ ಜ್ವಾಲಾಮಾಲಿನಿ! || ೩
೪೦. ಮಂಗಳಾರತಿತಂದುಬೆಳಗಿರೆ
ಮಂಗಳಾರತಿ ತಂದು ಬೆಳಗಿರೆ ಚಂದ್ರನಾಥನ ಯಕ್ಷಿಣಿಗೆ
ಅಂಬೆಗೆ ಜಗದಂಬೆಗೆ ಶ್ರೀ ಜ್ವಾಲಾಮಾಲಿನಿ ದೇವಿಗೆ || ಪಲ್ಲವಿ
ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರಪೀಠದಿ ನೆಲೆಸಿದೆ
ತಿದ್ದಿ ತಿಲಕವ ಹಣೆಯೊಳಿಟ್ಟ ಮುದ್ದು ಮಂಗಳದೇವಿಗೆ || ೧
ಹರಿವ ಮಿಂಚಿಸಿಕರೆವರಾಗದೆ ಭರದಿ ಸ್ಥಿರವಾಗಿರುತಿರೆ
ಪರಮ ಭಕ್ತರು ಸ್ಮರಣೆ ಮಾಡಲು ದುರಿತ ಪಿಂಗಿಪ ದೇವಿಗೆ || ೨
ಉಟ್ಟ ಒಡವೆಯ ಕಷ್ಟ ಕಳೆದು ಕೊಟ್ಟಳರಸಿನ ಸಿರಿಯನು
ಹೆತ್ತ ಕುವರನ ತೋರಿದಂತೆ ಭಾನುವಾರದೇವಿಗೆ || ೩
Leave A Comment