೫೧. ಜಯಮಂಗಳಂಭವತು
ಜಯ ಮಂಗಳಂ ಭವತು ಶುಭ ಮಂಗಳಂ
ಜಯದಂಬೆ ಶ್ರೀಪದ್ಮೆ ಪದುಮಾಂಬೆಗೆ ಜಯ || ಪಲ್ಲವಿ
ಜಯ ಕಮಲ ಲೋಚನೆಗೆ ಜಯ ಕಮಲವಾಸಿನಿಗೆ
ಜಯ ಕಮಲ ಕಟಿನಿ ಜಯ ಕಮಲಾಂಬೆಗೆ
ಜಯ ಕಮಲ ಕರಯುಗಲೆ ಜಯ ಕಮಲಕುಚಯುಗಲೆ
ಜಯ ಕಮಲಪಾದಶ್ರೀ ಜಯ ದೇವಿಗೆ ಜಯ || ೧
ತನುಮನದಿ ನಿನ್ನ ಪದ ವನಜವನು ನೆನೆನೆನೆದು
ಮನುಜರಿಗೆ ಬೇಕಾದ ಘನ ಸೌಭಾಗ್ಯವ
ಅನುದಿನದಲಿತ್ತು ರಕ್ಷಿಸಿ ಪೊರೆದ ಶ್ರೀಫಣಿರಾಜ
ವನಿತೆ ಶ್ರೀ ಪದ್ಮಾಂಬೆ ಜಗದಂಬೆಗೆ ಜಯಮಂಗಳಂ || ೨
ಭೂರಿ ವೈಭವವೆತ್ತ ಸಂಗೀತ ಸಾಹಿತ್ಯ
ವಾರಾಹಿ ನೃತ್ಯ ಗುಣ ಗಂಭೀರೆಗೆ
ಧಾರುಣಿಯೊಳತ್ಯಧಿಕವಾದ ವೇಣ್ಪುರದೊಡತಿ
ನೀರೆ ಪದ್ಮಿಣಿ ದೇವಿ ಶ್ರೀ ಸಂಜೀವಿಗೆ || ೩
೫೨. ಕುಂಕುಮಮರ್ಣೆಗೆ
ಕುಂಕುಮ ಮರ್ಣೆಗೆ ಕುವಲಯನೇತ್ರೆಗೆ
ಕುಶಲದಿಂ ಕುಕ್ಕುಟ ಫಣಿರೂಢೆಗೆ
ಕುರಿತು ಬಂದವರಿಗೆ ಇಷ್ಟಾರ್ಥಕೊಡುವಳ್ಗೆ
ಕುಮುದಕುಚೆಯರಾರತಿ ಎತ್ತಿರೆ ಮಂಗಲಂ ಮಂಗಲಂ
ಪದ್ಮಾವತೇ ಮಂಗಲಂ ಮಂಗಲಂ || ೧
ನಾಗೇಂದ್ರ ರಾಣಿಗೆ ನಯನ ಮೂರುಳ್ಳೆಗೆ
ನಾಗಾರ್ಜುನಗೆ ವರವಿತ್ತಳಿಗೆ
ನಾಗಲೋಕದೊಳಿಹ ಜನರ ರಕ್ಷಿಪಳಿಗೆ
ನಾರಿಯರೊಳಗತಿಕಟ್ಟಾಣಿಗೆ
ಮಂಗಲಂ ಮಂಗಲಂ ಪದ್ಮಾವತೇ ಮಂಗಲಂ || ೨
ಕರ್ನಾಟಕ ದೇಶ ಕನಕಾದ್ರಿವಾಸೆಗೆ
ಕಾಮಿತಾರ್ಥವನೀವ ಕರುಣಾಕರೆಗೆ
ಕರ್ಮವಗೆಲಿದ ಶ್ರೀ ಪಾರ್ಶ್ವನಾಥನ ಯಕ್ಷಿ
ಧರಣೇಂದ್ರನರಸಿ ಪದ್ಮಿಣಿ ದೇವಿಗೆ
ಮಂಗಲಂ ಮಂಗಲಂ ಪದ್ಮಾವತೇ! ಮಂಗಲಂ || ೩
೫೩. ನಂಬಿದೆನಾನಿಮ್ಮಯ
ನಂಬಿದೆ ನಾ ನಿಮ್ಮಯ ಪಾದಯುಗಲವ ಅಂಬುಜವದನೆ ದೇವಿ
ಬೆಂಬಿಡದನುದಿನ ಸಲಹೋ ಎನ್ನನು ಮಾತೆ ರಂಭೆ ಪದ್ಮಾವತಿ ದೇವಿ || ಪಲ್ಲವಿ
ಘೋರೋಪಸರ್ಗವ ಜಯಿಸಿದಾತನ ಯಕ್ಷಿ ಧೀರೆ ನೀ ರಕ್ಷಿಸಮ್ಮ
ಸೇರಿ ನಿಮ್ಮಯ ವಾದ ನಂಬಿದ ಭಕ್ತರ ಕಾರುಣ್ಯ ದೃಷ್ಟಿಯಲಿ || ೧
ನಾಗರಾಜನ ರಾಣಿ ಪಾಲಿಸೆಮ್ಮಯ ಮಾತೆ ಈಗ ನಿಮ್ಮಯ ಪುತ್ರಗೆ
ರೋಗ ಬಂದೆರಗಿ ಹೋಗದೆ ನಿಲ್ಲದು ಬೇಗ ನೀ ಪರಿಹರಿಸಮ್ಮ || ೨
ಕುಸುಮಗಂಧಿನಿ ನಿಮ್ಮ ಶಿಶುವಿನ ಉದರದಿ ಎಸೆದುದಿಸಿದ ರೋಗವು
ಉಸುರಲೊಲ್ಲದೆ ನಾನು ಅಸದಳವೆನ್ನಿಂದ ಬಿಸಜಾಕ್ಷಿ ಪಾಲಿಸಮ್ಮ || ೩
ಮೊದಲೊಮ್ಮೆ ಈ ಶಿಶುವಿಗೆ ಕಂಟಕ ಬಂದು ಒದಗಿದ ವೇಳಯೊಳು
ಸದಮಲ ಗುಣನಿಧಿ ಕಾಯ್ದು ರಕ್ಷಿಸು ಎನ್ನ ಅದರ ಹಾಗೆಯೇ ಪಾಲಿಸಮ್ಮ || ೪
ತಂದೆ ಸಾಕಾರ ಮಗನಿಗೆ ಮುನಿದಟ್ಟಲು ಅಂದವನ ನೀ ರಕ್ಷಿಸಿ
ದಂದದಿ ಶಿಶುವಿನ ಮೇಲೆ ಕರುಣವಿಟ್ಟು ಚಂದದಿ ಸಲಹೋ ದೇವಿ || ೫
ಅಡಿಗೆ ಅಂದುಗೆ ಗೆಜ್ಜೆ ನಡುವಿನೊಡ್ಯಾಣವು ಒಡತಿ ಉಂಗುರ ಚೆಳಕಿ
ಬಿಡದೆ ಸರ್ವಾಭರಣವ ಧರಿಸುವ ದೇವಿ ಕೊಡಿ ಪ್ರಸಾದವನು ಬೇಗ || ೬
ನಿಮ್ಮ ಬಾಲಕಿ ಬಲು ರನ್ನೆ ಚೆನ್ನಮ್ಮನ ಚೆನ್ನಾಗಿ ಸಲಹೊ ದೇವಿ
ಅನ್ನಿಗಳೆಂದು ನೋಡದೆ ಪೂರ್ಣ ದಯೆ ಇಟ್ಟು ರಂಬಾ ಪುಷ್ಪವ ಪಾಲಿಸಮ್ಮ || ೭
ಪೊಡವಿಗಧಿಕ ಮೂಡುಬಿದರೆಯ ಪುರದೊಳು ಒಡತಿ ಹಿರಿಯ ಬಸದಿ
ಧೃಡದಿಂದ ಸ್ಥಿರವಾಗಿ ಇರುವ ಪದ್ಮಾವತಿ ಬಿಡದೆ ಭಕ್ತರ ಪಾಲಿಸಮ್ಮ || ೮
೫೪. ಪರಿಪಾಲಿಸುಪದ್ಮಾವತಿ
ಪರಿಪಾಲಿಸು ಪದ್ಮಾವತಿ ಗುಣವತಿ ಪರಮಪುಣ್ಯಚರಿತೆ
ತರುಣಾರುಣ ಶತಕೋಟಿ ಪ್ರಕಾಶೆ ನೀ ಕರುಣಾ ರಸಭರಿತೇ || ಪಲ್ಲವಿ
ಅಳಿನೀಳಾಲಕಿ ಮಲಯಜಗಂಧಿನಿ ಪುಳಿನ ಸಮಶ್ರೋಣಿ
ಕಳಕಂಠೋಪಮ ಗಾನೆ ಕಲಾವತಿ ಜಲರುಹನಿಭಪಾಣಿ || ೧
ಕುಲಿಶಧರನೆ ಮದಕಳಗಭನೆ ಮುನಿ ಮಂಜುಳ ಸಾರ ವಾಣಿ
ಕಲಶ ಕುಚದ್ವಯೆ ಸುಲಲಿತಾಂಗಿ ಸದ್ವಿಲಸಿತ ಫಣಿವೇಣಿ || ೨
ವಿಕಸಿತ ತಿಲಸುಮ ನಿಂದಿತನಾಸಿಕೆ ಚಕಿತ ಅರುಣ ನೇತ್ರೆ
ಮುಕುರಪಾಲೆ ಮೃದುಸ್ಮಿತೆ ಮನುಮುನಿ ನಿರಕವಿನುತಿ ಪಾತ್ರೆ || ೩
ಅಕಲಂಕೆ ಇಂದುವದನೆ ಕಷ್ಟದಾಯಕಿ ಸಜ್ಜನಮಿತ್ರೆ
ಸಕಲ ಕಲಾಪರಿಪೂರ್ಣೆ ಮಂಗಲಾತ್ಮಿಕೆ ಚಾರುಸುವಾಸೆ || ೪
ವರ ಪಾಶಾಂಕುಶ ಪರಿಶೋಭಿತೆ ಕರೆ ದುರಿತಾವಳಿ ದೂರೆ
ಭರಿತವಿನೋದೆ ಭವ್ಯೌಘಪಾಲಿನಿ ಸುರಚಿರ ಮಣಿಹಾರೇ || ೫
ಧರಣಿಗುತ್ತಮವೆಂದೆನಿಸಿ ಮೆರೆವುತ್ತಿಹ ಸುರನಗರಾಗಾರೆ
ಧರೆಯನಾಳ್ವ ಹಿರಿಯ ಬಸದಿಯೊಳ್ ಗೊಲಿದುರುತ್ತರಗುಣಸಾರೆ || ೬
೫೫. ಪಾಹಿಪದ್ಮಾಂಬಿಕೆಯೆಪಾಲಿಸು
ಪಾಹಿ ಪದ್ಮಾಂಬಿಕೆಯೆ ಪಾಲಿಸು ಸೇವಕರ ಮನದಿಷ್ಟವಾ
ಧೀರೆ ಅನವರತದಲಿ ಸಜ್ಜನ ಸೇವಕರ ರಕ್ಷಾಮಣಿ || ಪಲ್ಲವಿ
ಚರಣ ದಂದುಗೆ ನೂಪುರ ಧ್ವನಿ ಮಿನುಗುತಿಹ ಪೀತಾಂಬರ
ಎರಕದಿಂದೊಡ್ಯಾಣ ಗೆಜ್ಜೆಯ ಸರದ ಕಿಂಕಿಣಿ ಸೌರಭಾ || ೧
ಕಂಚುಕದ ಮೇಲ್ಸರಗಳಲುಗುತ ಮಿಂಚಿನಂದದಿ ಹೊಳೆಯುತ
ಪಂಚಬೆರಳಂಗುಲಿಯು ಹಸ್ತದಿ ಪಂಚ ಕಂಕಣ ಚಳಕಿಯು || ೨
ಪಾಠಕರ ರುಗ್ಗಡದ ಮದ್ದಳೆ ನಾಟ್ಯ ವಾದ್ಯದ ರಭಸಕೆ
ಸಾಟಿ ಇಲ್ಲದೋಲಗದೊಳೊಪ್ಪುವ ಕೋಟಿಸೂರ್ಯಪ್ರಕಾಶಳೇ || ೩
ಮತ್ತೆ ಭುಜಕೀರ್ತಿಗಳು ನಾಸಿಕ ಮೌಕ್ತಿಕಾಮಣಿ ಕರ್ಣದಿ
ಕೆತ್ತಿದೋಲೆ ಕಿರೀಟ ರಾಗದೆ ಸಮಸ್ತ ಸರ್ವಾಭರಣಳೇ || ೪
ಸಂಭ್ರಮಿಪ ಕುಂಕುಮವು ಕಸ್ತೂರಿ ತುಂಬಿಗುರುಳ್ವಸರಗಳೂ
ರಂಬೆ ಪುತ್ಥಳಿ ಬೊಂಬೆ ಸಂತತ ಪೊಂಬುಜದ ಪುರವಾಸಳೆ || ೫
೫೬. ವರವಿತ್ತುಸಲಹಮ್ಮವರದೆ
ವರವಿತ್ತು ಸಲಹಮ್ಮ ವರದೆ ಪದ್ಮಮ್ಮ
ವರದೇವಿ ಎಂದು ನಂಬಿರುವೆ ನಾನಮ್ಮ || ಪಲ್ಲವಿ
ಚರಣಾಯುಧ ಸರ್ಪ ವಾಹನೆಯಮ್ಮ
ವರಚತುರ್ಭುಜೆ ತ್ರಿನೇತ್ರೆ ನೀನಮ್ಮ
ಅರುಹನ ಚರಣಕ್ಕೆ ಅತಿಭಕ್ತೆಯಮ್ಮ
ಅರುಣಾಂಗಿ ರವಿಸಮ ತೇಜೆ ನೀನಮ್ಮ || ೧
ಕರಕರೆ ಕೋಟಲೆ ಬಿಡಿಸು ನೀ ಎಮ್ಮ
ಚರಣ ಭಕುತ ಜನಕೋದ್ಧಾರೆಯಮ್ಮ
ಪುರುಹೂತ ಸಂಪದಕಧಿದೇವಿಯಮ್ಮ
ಧರಣೇಂದ್ರನರಸಿ ಶ್ರೀ ಪದ್ಮಿಣಿಯಮ್ಮ || ೨
ಪಾರಾದ ಸಿದ್ಧಿ ನಿನ್ನಿಂದಲೇ ನಮ್ಮ
ಭೂರಿ ಸಂಪದಕೆ ನೀನಧಿದೇವಿಯಮ್ಮ
ಘೋರ ಪಾಪಂಗಳ ಪರಿಹರಿಸಮ್ಮ
ಸೇರಿದ ಭಕ್ತರ ಸಲುಹುವೆಯಮ್ಮ || ೩
ಪರಮ ಮಂಗಳ ಸರ್ವಜನ ಪಾಲೆಯಮ್ಮ
ಸುರಗಿರಿ ಸಮಧೀರೆ ನೀನು ಕಾಣಮ್ಮ
ವರ ಪಾರ್ಶ್ವನಾಥನ ಯಕ್ಷಿ ನೀನಮ್ಮ
ದುರುಳ ಕಮಠ ಗರ್ವ ಹರಣೆ ನೀನಮ್ಮ || ೪
ಹಿರಿಯ ಬಸದಿಯೊಳು ಇರುತಿರ್ಪೆಯಮ್ಮ
ಪರುಷ ಮೂರುತಿ ಪದ್ಮದಲ ನೇತ್ರೆಯಮ್ಮ
ಕರುಣಾಪಾಂಗದಿ ಎನ್ನ ನೋಡಮ್ಮ
ವರಕವಿ ಜಿನಚಂದ್ರನ ರಕ್ಷಿಸಮ್ಮ || ೫
೫೭. ಯಾಕಿಂತುಕೋಪತಾಯೇ
ಯಾಕಿಂತು ಕೋಪ ತಾಯೇ ಲೋಕಾಂಬೆ ಪದ್ಮಿಣಿ ಕಾಯೇ || ಪಲ್ಲವಿ
ಮಂದರ ಧೀರೆ ನೀನು ಎಂದು ಕಂದನ ಸಲಹಿದಳೆಂದು
ಬಂದೆನು ನಾ ಶರಣೆಂದು ಕುಂದೇನು ಎನ್ನೊಳಗಿಂದು? || ೧
ಕಾವುದು ತವ ನಿಜ ಬಿರುದು ಸೇವಕರನು ದಯೆವೆರೆದು
ನೀವುದು ಸೌಖ್ಯವೆರೆದು ತಾಯೇ ನನ್ನನು ಪೊರೆದು || ೨
ಬಳಲಿಸದಿರು ಜೀವಂತೆ ಇಳೆಯೊಳ್ ಮಹಿಮಾ ನಿನ್ನಂತೆ
ತಳುಮಾಡದೆ ಬೆಳ್ಗುಳವಂತೆ ಬೇಗದಿ ವರವ ಕೊಡುವಂತೆ || ೩
ಧ್ಯಾನಿಸುತ್ತಿರುವೆನು ನಿನ್ನ ಆನಂದ ಮೂರುತಿಯನ್ನ
ದೀನದಯಾಳೊ ಚೆನ್ನಾ ಎನ್ನ ಮನದಿ ಸಲಹಿದಳೆನ್ನ || ೪
ಧ್ಯಾನಿಸುತಿರುವೆನು ನಿನ್ನ ಆನಂದ ಮೂರುತಿಯನ್ನ
ಲೊಕ್ಕೆಯ ವನದೊಳಗಿರುವೆ ಅರ್ತಿಯಿಂ ಬುಧರನ್ನು ಪೊರೆವೆ || ೫
ಭೃತ್ಯನ ಮರೆವುದುಚಿತವೇ ಸತ್ಯಾಂಬೆ ಪದ್ಮಿಣಿಗರುಹೆ
ಯಾಕಿಂತು ಕೋಪ ತಾಯೇ ಲೋಕಾಂಬೆ ಪದ್ಮಿಣಿ ಕಾಯೋ || ೬
೫೮. ಪಾಹಿಮಾಂಪರಮಾತ್ಮರೂಪಿಣಿ
ಪಾಹಿ ಮಾಂ ಪರಮಾತ್ಮರೂಪಿಣಿ ಪಾಹಿ ಪಂಕಜಲೋಚನೆ
ಪಾಹಿ ಪರತರವಸ್ತು ಮೂರುತಿ ಪಾಹಿ ಮಾಂ ಪರಮಾತ್ಮರೂಪಿಣಿ || ಪಲ್ಲವಿ
ಕನಕ ಭೂಷಣೆ ಕಂಜಲೋಚನೆ ಕಾಮಿತದ ಫಲದಾಯಿನೀ
ಮುನಿಹೃದಯ ಸಂಚಾರಿ ಪಾವನ ಪನ್ನಗ ಚರಿತೆ ಮಾಂ ಪರಿಪಾಲಮು || ೧
ಪದ್ಮಲೋಚನೆ ಪರಮಪಾವನೆ ಪದ್ಮನಾಭ ಸುಪೂಜಿತೆ
ಪದ್ಮ ಸನ್ನಿಭ ವದನೆ ವಿಕಸಿತ ಪದ್ಮಗಂಧಿನಿ ಪಾಹಿ ಮಾ || ೨
ಪರುಷ ಪೊಂಬುಜವಾಸೆ ಶಂಕರ ಕಾವ್ಯಮನೋರಥದಾಯಿನೀ
ಸೊಕ್ಕುಜವ್ವನೆ ಸಕಲಸುರಮುನಿ ಸೇವಿತಾಂಘ್ರಿಸುಪದ್ಮಿಣಿ || ೩
೫೯. ತಾಯೆಸರ್ವರರಕ್ಷಾಮಣಿಯೆ
ತಾಯೆ ಸರ್ವರ ರಕ್ಷಾಮಣಿಯೆ ಎನ್ನ
ಕಾಯೊ ಪದ್ಮಾವತೀ ಪರುಷದ ಕಣಿಯೇ || ಪಲ್ಲವಿ
ಜಿನದತ್ತಗೊಲಿದು ವರವಿತ್ತೆ ಮಹಾಕನಕಾರ್ಜುನಗಿತ್ತೆ
ಘನ ಪಾರಿಶ್ವೇಶನ ಭಕ್ತೆ ಬಹುಜನರ ಚಿಂತಾಮಣಿ
ನನ್ನನ್ಯಾಕೆ ಮರೆತೇ ತಾಯೇ ಸರ್ವರ ರಕ್ಷಾಮಣಿಯೇ || ೧
ಜನಿಸಿದಾರಭ್ಯದಿ ನಾನು ಬಹು ಘನಕಷ್ಟಕೊಳಗಾಗಿ
ಚಿಂತೆಯೊಳಿಹೆನು ಮನಸು ನಿಶ್ಚಲವಿಲ್ಲದಿಹೆನು
ದೇವಿ ಎನಗೀಗ ತಿಳಿಯದು ಕಾಯಮ್ಮ ನೀನು || ೨
ಕಾಸು ಹುಟ್ಟುವುದಿಲ್ಲಮ್ಮಾ ಎನ್ನ
ಆಸೆಯ ಬದುಕೆಲ್ಲ ಬಯಲಾಯಿತಮ್ಮಾ
ಲೇಸು ಸುಖವ ಕಾಣೆನಮ್ಮ ಈಗ
ಭಾಷೆಕೊಟ್ಟವರೆಲ್ಲಾ ತಪ್ಪಿದರಮ್ಮ || ೩
ಅರ್ತ್ಥ ಅರ್ತ್ಥವು ವ್ಯರ್ಥವಾಯ್ತು
ಬೇಸತ್ತು ದೇಶವ ತಿರುಗುವದಾಯ್ತು
ಮತ್ತಾರು ಶರಣಾಯ್ತು ಈಗ
ಹೆತ್ತವರಿಗೆ ಮರುಕಿಲ್ಲದೆ ಹೋಯ್ತು || ೪
ಇಳೆ ಎಂಬುದು ಹೂವಾಯ್ತು ಬಹು
ಬಳಗದೊಳಗೆ ಅವಮಾನವಾಯ್ತು
ಪೊಳೆವ ದೇಹವು ಕಂದಿಹೋಯ್ತು
ಕಳೆವ ಕಷ್ಟದಲಿ ಕಾಯುವವರಿಲ್ಲದಾಯ್ತು || ೫
ಧರಣರಾಜನ ಪಟ್ಟ ನಿಮ್ಮ
ತರಳಗೊಲಿದು ಕಷ್ಟವ ಪರಿಹರಿಸಿ
ಹರುಷದಿಂದಲಿ ಸುಖವೆರಸಿ ನಿಮ್ಮ
ಚರಣ ಸೇವಕನ ಬಿಡದೆ ನೀ ಉದ್ಧರಿಸಿ || ೬
ಪೃಥ್ವಿಗಧಿಕ ಪಟ್ಟಣದೊಳು
ಮಹಾಮುಕ್ತಿಗೊಡೆಯ ಶಾಂತಿಜಿನನ ಬಸದಿಯೊಳು
ಅರ್ತಿಯಿಂ ದಕ್ಷಿಣ ಭಾಗದೊಳು ಮಹಾ
ಭಕ್ತವತ್ಸಲೆ ಪದ್ಮಾವತಿ ನೆಲಸಿಹಳು || ೭
ಧರೆಯೊಳಧಿಕವಾದ ಪೊಂಬುಚ್ಚಪುರದ ಮಧ್ಯದೊಳೊಪ್ಪುವ
ಸರಸಿಜಾಸನದೊಳು ಹರುಷದಿಂದಿರುತಿಹ
ಪರುಷ ಮೂರುತಿ ಪದ್ಮಾವತಿ ದೇವಿಯ || ೮
ಬಿಟ್ಟು ಹೋಗುವರೇ ಮನ ನಿಲ್ಲದಮ್ಮ
ಎಷ್ಟು ನೋಡಿದರೂ ನಿಮ್ಮ
ಬಿಟ್ಟು ಹೋಗುವರೇ ಮನ ನಿಲ್ಲದಮ್ಮ || ೯
೬೦. ಆಡಿದರೋಕುಳಿಯಅಮ್ಮಯ್ಯನ
ಆಡಿದರೋಕುಳಿಯ ಅಮ್ಮಯ್ಯನ ನೋಡಿ ಬಂದವರೆಲ್ಲರು
ರೂಢಿಯೊಳಗೆ ಇನ್ನು ಸರಿ ಇಲ್ಲ ನಿಮ್ಮನು
ಬೇಡಿಕೊಂಬೆನು ನಾನು ಬೇಗದಿ ದಯಮಾಡು || ೧
ಉತ್ತರ ಮಧುರೆಯೊಳು ನೀನಿರಲಾಗ
ಮತ್ತೆ ಸಾಕಾರರಾಯನು ಹೆತ್ತ ಸುತಗೆ ಹಸ್ತಕಿತ್ತ ಜಂಬೀರವ
ಮತ್ತೆ ತಾ ಪೈಸೆ ಮಾರಿದತ್ತಗೆ ಕೂಡಿಸಿದೆ || ೨
ಅಡವಿ ಪಟ್ಟಣ ಮಾಡಿದೆ ಅತ್ಯಂತರಿಗೆ ಒಡತಿ ಚಿನ್ನವ ತೋರಿದೆ
ಒಡೆಯನಾಗಿಯೆ ನೀನು ರಾಜ್ಯವ ಭಜಿಸೆಂದು
ಒಡತಿ ಉಂಗುರವಿತ್ತು ಉಳುಹಿದ ಮಹಾದೇವಿ || ೩
ದಂಡ್ಯಾ ರಾವುತರೆಲ್ಲರು ನಿಂತಿರಲಾಗ ಮತ್ತೆ ಮಾನ್ಯರಿಗೆ ಸ್ವಪ್ನದಿ
ಇನ್ಯಾಕೆ ಯೋಚನೆ ತೆಕ್ಕೋ ಸಲಾಮೆಂದು
ಮನ್ನಿಸೆ ಭಕ್ತರ ಸಲಹುವ ಮಹಾದೇವಿ || ೪
ಕನಕ ಪೊಂಬುಚ ಪುರದಿ ಭಕ್ತರನೆಲ್ಲಾ
ಅನುದಿನ ಸಲಹುತಲೀ ಬಿಡದನುದಿನ ನಿನ್ನ ಧ್ಯಾನಿಪನಂತೆಗೆ
ತೊಡರಿದ ಜಡವನ್ನು ಬಿಡಿಸೆಂಬೆ ಮಹಾದೇವಿ || ೫
Leave A Comment