೭೧. ಜಯಮಂಗಲಂಸದಾ

ಜಯಮಂಗಲಂ ಸದಾ ಶುಭ ಮಂಗಲಂ
ಜಯಕ್ಷೇತ್ರಪಾಲ ಸದ್ಗುಣ ಶೀಲಗೆ ಜಯಮಂಗಲಂ || ಪಲ್ಲವಿ

ಧೃತರತ್ನಮಯ ಮುಕುಟ ರತ್ನಕುಂಡಲಹಾರ
ಧೃತ ಶೂರ ಖಡ್ಗಕರ ವಾಲಕರಣೇ
ಜಿತಸುಮನ ಶರರೂಪ ನಾಗಸಂಭವ ವರ್ಣ
ಜಿತ ಚಂಡಕರತೇಜ ವರಧೀರಗೆ ಜಯ ಮಂಗಲಂ || ೧

ಗಜ ವೈರಿ ಪೋತ ಸಮಸಾರ ಮೇಯಾರೂಢ
ಭುಜ ಕಿರೀಟಾದಿ ಭೂಷಣಗೆ
ರಾಜೇಂದ್ರ ಚಂದ್ರ ಪೂಜಿತ ಚರಣ ಕಮಲಯುಗ
ದ್ವಿಜಸೂತ್ರಧರ ಹಿತಕರಭಾಷಗೇ ಜಯಮಂಗಲಂ || ೨

ವ್ಯಂತರಾಮರವಂದ್ಯ ಕೃತಸಜ್ಜನಾಮೋದ
ಭೂತ ಪೈಶಾಚ ಭಯದೂರಕರಗೆ
ಚಿಂತಿತಾರ್ಥವನೀವ ಚಿಂತಾಮಣಿರಾಯನಿಗೆ
ಸಂತತದಿ ಜಿನಗೇಹ ರಕ್ಷಣಕಾರಗೆ || ೩

೭೨. ಮಂಗಳಾರತಿಯತಂದೆತ್ತಿರಿ

ಮಂಗಳಾರತಿಯ ತಂದೆತ್ತಿರಿ ಜಿನಯಜ್ಞ ರಕ್ಷಿತನಾದ ಕ್ಷೇತ್ರಪಾಲಗೆ
ಮಂಗಳಾರತಿಯ ತಂದೆತ್ತಿರೆ || ಪಲ್ಲವಿ

ಉರಗ ಭೂಷಣನಾದ ಅರುಣ ನಿಭಾಂಗಗೆ
ಕರುಣವಾರಿಧಿ ಪೂರ್ಣ ಚಂದ್ರನಿಗೆ
ಅರುಹನು ಭಕ್ತಿಗೆ ವರಬ್ರಹ್ಮಚಾರಿಗೆ
ಸರಸಿಜ ಮುಖಿಯರಾರತಿ ಯೆತ್ತಿರಿ || ೧

ಅಂಗನೆಯರ ರತಿಸುಖವನ್ನು ತೊರೆದಗೆ
ಕಂಗಳು ಮೂರುಳ್ಳ ದಿಗಂಬರಗೆ
ಕಂಗೊಳಿಸುವ ಶ್ವಾನವಾಹನರೂಢಗೆ
ಭೃಂಗ ಕುಂತಳೆಯರಾರತಿ ಯೆತ್ತಿರೆ || ೨

ದಂಡ ಕಮಂಡಲ ಡಮರುಕ್ಷ ಮಾಲಗೆ
ಮಂಡಲಕಧಿಕ ಪ್ರಚಂಡ ಮೂರುತಿಗೆ
ಖಂಡಿತಖಿಲ ವಿಘ್ನತಂಡ ಉದ್ಧಂಡಗೆ
ಶುಂಡಾಲ ಗಮನೆಯರಾರತಿ ಯೆತ್ತಿರೆ || ೩

ಅಷ್ಟ ದಿಕ್ಕುಗಳಲ್ಲಿ ಬೆಟ್ಟಾರಣ್ಯಗಳಲ್ಲಿ
ತುಟ್ಟ ತುದಿಯ ಶಿಖರಾಗ್ರದಲೀ
ಪಟ್ಟಣ ನದಿ ಸಾಗರದಲ್ಲಿ ನೆಲಸಿರ್ಪ
ಝಟ್ಟಿಂಗರಾಯನಿಗಾರತಿಯೆತ್ತಿರೆ || ೪

ಭಸಿತ ಲೇಪಿತನಿಗೆ ಶಶಿಯಧರಿಸಿದಗೆ
ಕುಸುಮಬಾಣವ ಮುರಿದಾತನಿಗೆ
ವಸುಧೆಗಧಿಕ ಹಿರಿಬಸದಿಯೊಳ್ ನೆಲೆಸಿರ್ಪ
ಅಸಮ ಭೈರವಗಾರತಿ ಎತ್ತಿರೆ || ೫

೭೩. ಜಯಮಂಗಳಂಸದಾ
ರಾಗ : ಆನಂದಭೈರವಿ ತಾಳ : ರೂಪಕತಾಳ

ಜಯಮಂಗಳಂ ಸದಾ ಶುಭಮಂಗಳಂ
ಜಯಚತುರ್ವಿಂಶತಿ ಮಹಾಜಿನರಿಗೆ || ಪಲ್ಲವಿ

ಇಂದ್ರಶತವಂದ್ಯ ಶ್ರೀವೃಘಭಜಿನರಾಜನಿಗೆ
ಚಂದ್ರಾರ್ಕ ತನುತೇಜ ಅಜಿತಜಿನಗೆ
ಮಂದರಾಗ್ರದಿ ನಿಂದ ಶಂಭವಜಿನೇಶ್ವರಗೆ
ಕಂದರ್ಪವಿಜಯ ಅಭಿನಂದನರಿಗೆ || ೧

ಅಮರವಂದಿತನಾದ ಸುಮತಿ ಶ್ರೀ ಜಿನಪತಿಗೆ
ಅಮಿತಗುಣಪದ್ಮ ಪ್ರಭೇಶ್ವರನಿಗೆ
ಸುಮನಸಾರಾಬ್ಜಸುಪಾರ್ಶ್ವಜಿನಪತಿಗೆ
ಮಮ ದೇವನಾದ ಶ್ರೀಚಂದ್ರಜಿನಗೆ || ೨

ಪುಷ್ಪಸಾಯಕವಿಜಯ ಪುಷ್ಪದಂತೇಶ್ವರಗೆ
ನಿಷ್ಪನ್ನಹೃದಯ ಶೀತಳಜಿನರಿಗೆ
ಒಪ್ಪುತಿಹ ಶ್ರೇಯಾಂಸ ವಾಸುಪೂಜ್ಯೆಶ್ವರಗೆ
ದರ್ಪಕಾರಾತಿ ಶ್ರೀವಿಮಲ ಜಿನಗೆ || ೩

ಅಂತಕಾಂತಕನೆನಿಪನಂತ ಶ್ರೀಜಿನಪತಿಗೆ
ಕಂತುಮದಹರಧರ್ಮ ಶಾಂತಿಜಿನಗೆ
ಕುಂಥು ಅರಮಲ್ಲಿ ಮುನಿಸುವ್ರತಗೆ ನಮಿಜಿನಗೆ
ಚಿಂತಿತಾರ್ಥವನೀವ ನೇಮಿಜಿನಗೆ || ೪

ಪರಮ ಶ್ರೀಪಾರ್ಶ್ವ ಜಿನ ಮಹತಿ ಮಹಾವೀರನಿಗೆ
ಧರೆಗೆ ಬೆಳ್ಗುಳದ ಭಂಡಾರಿಗೃಹದ
ಹರಿಪೀಠದೊಳು ನೆಲಸಿ ಪಂಡಿತಾಚಾರ್ಯರಿಗೆ
ನಿರತಸುಖವೀವ ಚವ್ವೀಶ ಜಿನರಿಗೆ || ೫

೭೪. ಜಯಮಂಗಲಂಸದಾ
ರಾಗ : ಆನಂದಭೈರವಿ ತಾಳ : ಝಂಪೆತಾಳ

ಜಯಮಂಗಲಂ ಸದಾ ಶುಭಮಂಗಲಂ
ಆದಿಜಿನಪನ ತನುಜನಾದ ಚಕ್ರಿಯ ಕೂಡೆ
ಕಾದು ಗೆಲಿದತಿಭರದಿ ಮೇದಿನಿಯೊಳು
ಭೇದಿಸಿದ ಸಕಲಕರ್ಮವ ಗೆಲ್ದು ಮುಕ್ತಿಯನು
ಸಾಧಿಸಿದ ಬಾಹುಬಲಿ ಜಿನರಾಜಗೆ || ೧

ಪಚ್ಚೆವರ್ಣದ ಕಾಂತಿ ಪರಮಪಾವನ ಶಾಂತಿ
ಹೆಚ್ಚಿ ಕಾಮನ ಸರಳತುಚ್ಛ ಮಾಡಿ
ಎಚ್ಚ ಶ್ರೀ ಸುಜ್ಞಾನ ಕಕ್ಷದೊಳು ತಪವಾಂತು
ಮುಕ್ತಿಯನು ಸಾಧಿಸಿದ ಬಾಹುಬಲಿ ಜಿನರಾಜಗೆ || ೨

ಧರೆಗಧಿಕವಾದ ಸ್ರೀ ಕಾರ್ಕಳಪುರಾಗ್ರದೊಳು
ಸ್ಥಿರವಾಗಿ ನೆಲಸಿರ್ದು ನಿಶ್ಚಿಂತೆಯೊಳ್
ಗುರುಲಲಿತಕೀರ್ತಿಮುನಿಪತಿಯ ತಾ ರಕ್ಷಿಸುವ
ದುರಿತಹರ ಬಾಹುಬಲಿ ಜಿನರಾಜಗೆ || ೩

೭೫. ಮಂಗಳನಿಜಪರಂಜ್ಯೋತಿಗೆ
ರಾಗ : ಸೌರಾಷ ತಾಳ : ಅಟ್ಟತಾಳ

ಮಂಗಳ ನಿಜಪರಂಜ್ಯೋತಿಗೆ ಜಯ
ಮಂಗಳ ಶುಭಮಂಗಳ ಗುರು ಹಂಸನಾಥನಿಗೆ || ಪಲ್ಲವಿ

ಪದಿನೆಂಟು ದೋಷವ ಗೆಲಿದಷ್ಟಕರ್ಮವ ಪಡೆದಷ್ಟ ಗುಣವಿಶ್ವರೂಪನಿಗೆ
ಮದನವಿಜಯನಿಗೆ ಪರಮಾರಹಂತಗೆ ವಿದಿತ ಬೋಧಾಮೃತವೀವನಿಗೆ || ೧

ಬದ್ಧಕರ್ಮಾರಿಪ್ರಬುದ್ಧ ಸುಜ್ಞಾನಸಮುದ್ರ ನಿರಂಜನಸಿದ್ಧರಿಗೆ
ಶುದ್ಧ ರತ್ನತ್ರಯರೂಪಾತ್ಮನಾದ ಪ್ರಸಿದ್ಧ ಬೋಧರಾಚಾರ್ಯರಿಗೆ || ೨

ಸುರನರನಾಗೇಂದ್ರರಿಗುಪದೇಶವ ಪರಿಪಾಲಿಸಿದುಪಾಧ್ಯಾಯರಿಗೆ
ಕರುಣಾಮೃತವೀವ ಸರ್ವಸಾಧುಗಳಿಗೆ ಪರಮಪಾವನ ಪರಬ್ರಹ್ಮರಿಗೆ || ೩

೭೬. ಭವತುಮಂಗಲಂ
ರಾಗ : ಜೋಗುಸಾವೇರಿ ತಾಳ : ಅಟ್ಟತಾಳ ಚಾಪು

ಭವತು ಮಂಗಲಂ ಮಂಗಲಂ ಮಂಗಲಂ || ಪಲ್ಲವಿ

ದೇವ ಭವವಿನಾಶನವನ್ನು ಮಾಡಿ
ದೇವ ಕುವಲಯದೊಳು ಧರ್ಮ ಮಾಡಿ
ದೇವ ಸುವಿದಿಯಿಂ ಮುಕ್ತಿಯೊಳ್ಕೂಡಿ
ದೇವ ತವೆಯದೆ ಸುಖವಿತ್ತೆ ನೋಡಿ || ೧

ದೇವ ಅಮರರಿಂ ಪೂಜೆಯನಾಂತು
ದೇವ ಸಮವಸರಣದೊಳು ನಿಂದು
ದೇವ ಸುಮನದಿ ಕೇಳ್ವರ್ಗೆ ಕಂತು
ದೇವಭ್ರಮ ಹರಿಸಿದೆ ಮನವಾಂತು || ೨

ದೇವ ಮೆರೆಯುವ ಬೆಳ್ಗುಳಪುರವ
ದೇವ ಪೊರೆಯುವ ಗೋಮಟದೇವ
ದೇವ ಹರುಷದೊಳಿರುತಿಹ ಭಾವ
ದೇವ ಪರಿಕಿಸಿ ನೋಡಲಭಾವ || ೩