೨೧. ಜಯತುಶಾರದದೇವಿ
ರಾಗ : ನಾಟಿ

ಜಯತು ಶಾರದದೇವಿ ಜಯತು ವಾಗ್ದೇವಿ
ಜಯತು ವಿದ್ಯಾದೇವಿ ಭವ್ಯಸಂಜೀವಿ ಜಯತು ಜಯತು || ಪಲ್ಲವಿ

ಜಯತು ತತ್ವೋದ್ಧಾರೆ ಜಯತು ಧರ್ಮವಿಚಾರೆ
ಜಯತು ಶಾಶ್ವತಶೂರೆ ಶರಧಿಗಂಭೀರೆ || ೧

ಜಯತು ಫಣಿನಿಭವೇಣಿ ಜಯತು ವೀಣಾಪಾಣೆ
ಜಯತು ಕೃತಕಲ್ಯಾಣಿ ಜಯತು ಶ್ರುತವಾಣಿ || ೨

ಜಯತು ವಿದ್ಯಾರಂಭೆ ಜಯತು ಸುವಚನಕುಂಭೆ
ಜಯತು ಕುಚಯುಗಕುಂಭೇ ಜಯತು ರುಚಿ ಬ್ರಂಭೆ || ೩

ಜಯತು ಮುನಿಜನ ನೀತೆ ಜಯತು ಮೃಗಮದ ಮಾತೆ
ಜಯತು ಜಿನಮುಖಜಾತೆ ಜಯತು ವಿಖ್ಯಾತೆ || ೪

ಜಯತು ಸರಸಿಜನೇತ್ರ ಜಯತು ಪಾವನಗಾತ್ರೇ
ಜಯತು ತ್ರಿಭುವನಸೂತ್ರೆ ಜಯತು ಸುಪವಿತ್ರೆ || ೫

ಜಯತು ನಿತ್ತೈಶ್ವರ್ಯೆ ಜಯತು ವಿಭುದ ಸಂಪರ್ಯೆ
ಜಯತು ಪಂಡಿತವರ್ಯೆ ಕವಿತಾ ಶುಭಚರ್ಯೆ || ೬

೨೨. ಜಯಮಂಗಲಂನಿತ್ಯಶುಭ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯ ಸುನಂದಾದೇವಿಯಾತ್ಮ ಜನಿಗೆ
ಜಯಮಂಗಲಂ ನಿತ್ಯ ಶುಭಮಂಗಲಂ || ಪಲ್ಲವಿ

ನಾಗನರಸುರಮುನೀಂದ್ರಾದಿ ವಂದಿತಪದದೊಳೆ
ಭೋಗದಾಮೃತವ ಮಳೆಗರೆದವಗೆ
ಪೊಗಲನನ್ಕದವ ಬೇಗ ಮಗ್ಗಿಸಿ ಯಶ
ಶ್ರೀಗೆ ನೆಲೆಯಾದ ಸುಂದರಮೂರ್ತಿಗೆ || ೧

ಭೂಮಿಭಾಮಿನಿ ಹೊನ್ನ ಬಿಟ್ಟು ಭವಕೆಡಿಸಿದಗೆ
ರಾಮರಾವಗ ಪೂಜಿತಾಂಘ್ರಯುಗಗೆ
ಚಾಮುಂಡರಾಜ ಹೃತ್ಕುಮುದ ಚಂದ್ರೋದಯಗೆ
ಶ್ರೀಮಹಾಮೇರು ವಿಭಧ್ಯೆರ್ಯ್ಯಯುತಗೆ || ೨

ಧರೆಗೆ ಬೆಳ್ಳುಳ ಗಿರೀಂದ್ರಾಗ್ರನಿಸನಿಗೆ
ತರಣಿ ಶತಕೋಟಿ ತೇಜೋದ್ಭಾಸಿಗೆ
ಪರಮ ಭವ್ಯಾವಳಿಗೆ ಚಿರಕಾಲ ಸಲಹುತ್ತ
ಸ್ಥಿರನಾದ ಶ್ರೀ ಗೊಮಟೇಶ್ವರನಿಗೆ || ೩

೨೩. ಮಂಗಲಂಮಂಗಲಂಗೊಮ್ಮಟ

ಮಂಗಲಂ ಮಂಗಲಂ  ಗೊಮ್ಮಟ ಜಿನಪತೆ
ಮಂಗಲಂ ಮಂಗಲಂ ಕರ್ಮವಿನಾಶ
ಮಂಗಲಂ ಮಂಗಲಂ ಮುಕ್ತಿಯಕಾಂತ
ಮಂಗಲಂ ಮಂಗಲಂ ದಯಾನಿಧಿ ಮಂಗಲಂ ||

ಆದಿನಾಥನ ಪುತ್ರ ಆಧಾರಯುತನಿಗೆ
ಮೇದಿನಿಯೊಳಗತಿ ಮೆರೆವವಗೆ
ಆದಿ ಚಕ್ರಿಯೊಳು ಯುದ್ಧವ ಮಾಡಿ ಗೆಲಿದವಗೆ
ಆದರ ಮೂರ್ತಿ ಸುನಂದಾದೇವಿ ಗರ್ಭಜಗೆ || ೧

ತ್ರೈನೂರಿಪ್ಪತ್ತೈದು ಬಿಲುತ್ಸೇಧಗೆ
ವೈನದಿ ಮೋಹಶೂರನ ಗೆಲಿದವಗೆ
ತ್ರೈಗುರು ಕೋಟಿ ಕರ್ಮಭಟರನು ಗೆಲ್ದ
ಊನವಿಲ್ಲದ ಮುಕ್ತಿ ಸುಖದೊಳಿರ್ಪವಗೆ || ೨

ಸತಿಸುತರನು ಬಿಟ್ಟು ಯತಿರೂಪ ತಾಳ್ದಗೆ
ಅತಿಸೂಕ್ಷ್ಮದಿಂದ ಪಾಲ್ಮಿಕದಿ ನಿಂದವಗೆ
ಅತಿಶಯದಿಂ ರಥ ಬಳಿ ವಿರಾಜಗೆ
ಅತಿಶಯದಿಂ ಇಂದ್ರಗಿರಿಯೊಳು ನಿಂದವಗೆ || ೩

ಭವ್ಯಜ ಮಿತ್ರಗೆ ಭವಭಯದೂರಗೆ
ನವ್ಯರ ಸುಖದೊಳು ನೆಲಸಿದವಗೆ
ನವಕೋಟಿ ಮುನಿವಂದ್ಯೆ ಗೊಮಟೇಶ್ವರನಿಗೆ
ನವಮಣಿ ಮುಕುರದಂತೆಸೆವ ದೇವನಿಗೆ || ೪

ಧರೆಯೊಳತ್ಯಧಿಕ ಬೆಳ್ಗುಳಗಿರಿಯೊಳು ನಿಂದು
ಸ್ಥಿರದಿಂದ ಭವ್ಯದ ಸಲಹುವಗೆ
ಗುರುಪಂಡಿತಾರ್ಯ ಕರುಣದಿ ರಕ್ಷಿಪ
ವರಮುಕ್ತಿಮತಿ ಗೊಮ್ಮಟ ಜಿನಪತಿಗೆ || ೫

೨೪. ಜಯಮಂಗಲಂನಿತ್ಯಶುಭ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯ ಚೌವೀಸ ಮಹಾಜಿನರಿಗೆ
ಜಯಮಂಗಲಂ ನಿತ್ಯ ಶುಭಮಂಗಲಂ || ಪಲ್ಲವಿ

ಭವಹರಾಧಿಪನಾದ ಆದಿಪರಮೇಶಗೆ
ಭಾವಜನ ಭಂಗಿಸಿದ ಅಜಿತಜಿನಗೆ
ಭವತಾಪವನು ಹರಿಸಿದಮಲ ಶಂಭವ ಜಿನಗೆ
ಭವ್ಯಜನ ಪರಿಪಾಲ ಅಭಿನಂದನ ಜಿನಾಧಿಪಗೆ || ೧

ಕುಸುಮ ಬಾಣನ ಗೆಲಿದ ಸುಮತಿ ಜಿನರಾಜನಿಗೆ
ಅಸಮ ಅಘವನು ಗೆಲಿದ ಪದ್ಮಪ್ರಭುವಿಗೆ
ದೆಸೆಗೆಡಿಸುತಿಹ ಕರ್ಮಗೆಲಿದ ಸುಪಾರೀಶ್ವನಿಗೆ
ಶಶಿಕಾಂತೆಯೊಳೆಸೆವ ಚಂದ್ರಪ್ರಭನಿಗೆ || ೨

ಪುಷ್ಪನಾಯಕ ವಿಜಯ ಪುಷ್ಪದಂತೇಶ್ವರಗೆ
ಪುಷ್ಪಚಾಪನ ಗೆಲಿದ ಶೀತಳೇಶ್ವರಗೆ
ಅಷ್ಟಮಹಾ ಪ್ರತಿಹಾರ್ಯ್ಯ ಶ್ರೇಯಾಂಸನಿಗೆ
ದುಷ್ಟಗುಣಗಣ ಹರನೆ ಶ್ರೀವಾಸುಪೂಜ್ಯನಿಗೆ || ೩

ವಿಪುಲ ನಿರ್ಮಲಕಾರ ಶಶಿಕಾಂತ ವಿಮಲನಿಗೆ
ಅಪರೂಪತರ ರೂಪ ಅನಂತರಾಜನಿಗೆ
ಅಪರಮಿತ ಮೋಹಮರ್ದನ ಧರ್ಮೇಶ್ವರಗೆ
ಅಪರಮಿತ ಸುಖಕೊಡೆಯ ಶಾಂತಿ ಜಿನಪತಿಗೆ || ೪

ಸಮವಸರಣಾಧೀಶ ಕಂತು ಜಿನರಾಜನಿಗೆ
ಸಮತೆಯಿಂ ಭವ ಹರಿಸಿದರ ಜಿನಾಧಿಪಗೆ
ಸುಮವ ಶರವನು ಗೆಲಿದ ಮಲ್ಲಿಜಿನ ದೇವನಿಗೆ
ಕಾಮಮದಹರನಾದ ಮುನಿಸುವ್ರತನಿಗೆ || ೫

ನಾಮಸಾಸಿರಕೊಡೆಯ ನೇಮಿಜಿನಾದೀಶ್ವರಗೆ
ಭೂಮಿಯೊಳಗತಿಶೀಲ ನೇಮಿಜಿನಪತಿಗೆ
ಕಮಠೋಪ ವಿಜಯ ಶ್ರೀಪಾರಿಶ್ವನಾಥನಿಗೆ
ಶ್ರೀ ಮುಕ್ತಿಕಾಂತ ಶ್ರೀ ವರ್ಧಮಾನ ಜಿನಪತಿಗೆ || ೬

ಕ್ಷಿತಿಯೊಳತಿಯಶವಾದ ಬೆಳ್ಗುಳದ ಭಾಂಡಾರಿ
ಬಸ್ತಿಯೊಳು ನೆಲೆಸಿರುವ ಚೌವ್ವೀಸ ತೀರ್ಥರಿಗೆ
ನುಡಿಪ ಶ್ರೀಗುರು ಪಂಡಿತಾರ್ಯರನು ರಕ್ಷಿಸುತಿರ್ಪ
ಅತಿಶಯದ ಶ್ರೀವೀರಾಂತ್ಯ ಜಿನವರರ್ಗ್ಗೆ || ೭

೨೫. ವರವಾಣಿಯೊಳು

ವರವಾಣಿಯೊಳು ಮತಿಬೇಡಿ
ಹರಿಣನೇತ್ರಿಯರೆಲ್ಲ ಕೂಡಿ
ಕರಕಮಲದಿಯಾರತಿಗಳ ಹೂಡಿ
ಸುರಸತಿಯರ ನಿಭಕಾಂತಿಯ ಗೂಡಿ
ಸುರಪತಿವಿನುತ ಶ್ರೀ ಚಂದ್ರ ಜಿನೇಂದ್ರಗೆ
ತರುಣಿಯರಾರತಿಯ ಬೆಳಗಿಗೇ || ೧

ಬಾಲಕೋಗಿಲೆ ಧ್ವನಿಯಿಂದ
ಲೋಲನೇತ್ರೆಯರಾಗದಂ
ಸಾಲಾಗಿ ನಿಮದ ಸತಿಯರ ಚಂದ
ಬಾಲಚಂದ್ರನ ಕಾಂತಿ ಮುಖದೊಳು  ನಿಂದ
ಲೀಲೆಯಿಂದಲಿಯಾರತಿಗಳ ತಂದೆ
ಮೂಲೋಕದೊಡೆಯ ಶ್ರೀ ಚಂದ್ರ ಜಿನೇಂದ್ರಗೆ
ಬಾಲೆಯರಾರತಿಯ ಬೆಳಗಿರೇ || ೨

ಜಗದೊಡೆಯನು ಜಿನಾಧೀಶ
ಸುಗುಣಾರ್ಕ ಕೋಟಿ ಪ್ರಕಾಶ
ಅಗಣಿತ ಗುಣಗಣತರತಿಗೆ ನಿಕೋಶ
ಬಿಗುವೆನಿಸುವ ಘಾತಿಕರ್ಮ ವಿನಾಶ
ಬಗೆದ ಸುಖವನೀವ ಮೋಕ್ಷನಿವಾಸ ತ್ರಿ
ಜಗವಿಯುತ ಶ್ರೀ ಚಂದ್ರ ಜಿನೇಂದ್ರಗೆ
ಸುಗುಣಿಯರಾರತಿಯ ಬೆಳಗಿರೇ || ೩

ಮದನನ ಮದವನು ಮುರಿದ
ಹದನದಿ ಸ್ತ್ರೀಯರ ತೊರೆದ
ಕದನದಿಂದಲಿ ಕರ್ಮರಾಜನ ಗೆಲಿದ
ತ್ರಿದಶವಿನುತ ಶ್ರೀ ಚಂದ್ರಜಿನೇಂದ್ರಗೆ
ಸುದತಿಯರಾರತಿಯ ಬೆಳಗಿರೇ || ೪

ಧರೆಯೊಳಗಧಿಕ ವೇಣುಪುರದಿ
ದೊರೆಚಂದ್ರ ಜಿನನ ಮಂದಿರದಿ
ಭರದಿ ಭವ್ಯರ ಮನೋರಥವನು ಸಲಿಸಿ
ಸ್ಥಿರದಿಂದ ಹೊಸಬಸದಿಯೊಳ್ನೆಲಸಿ
ಅರುಹನೆನಿಪ ಶ್ರೀ ಚಂದ್ರಜಿನೇಂದ್ರಗೆ
ತರುಣಿಯರಾರತಿಯ ಬೆಳಗಿರೇ || ೫

೨೬. ಸುರಚಿರಮಣಿಯ

ಸುರಚಿರ ಮಣಿಯ ಮಂಡಪದೊಳು
ಮಿರುಗುವ ಕಾಂಚನಮಯದ ಹಸೆಯೊಳು
ಧರಣೀಶನಾ ಬಿಟ್ಟ ಪರಿಯನ ಪತಿಯ
ಮರುದೇವಿಯನಿಬ್ಬರ ಸುರಪಕುಳ್ಳಿರಿಸಿ ವಿಭದಲಿ || ೧

ಸಾಲಾಗಿ ಕುಳ್ಳಿರಲು ದೇವರ್ಕಳು
ಆಳಾಪಿಸೆ ಸುರಗಾಯಕರು
ತಾಳಮದ್ದಳೆಯ ಶ್ರುತಿಗೂಡಿ ರಂಬೆ ಮೇನಕೆಯರು
ಲೀಲೇಕೈಮಿಗಲು ನಟಿಸಿದರು || ೨

ಮೊಲಗಿದವಾಗಲು ತೂರ್ಯ್ಯತ್ರಯ
ಒಲವಿನೊಳಿಂದ್ರಾಣಿಯು ಮುತ್ತಿನ
ಸುಲಲಿತಕ್ಷತೆಯ ಪರಿಮಳ ಮಾಲೆಗಳನು
ತಳಿದಾರು ಬಳಸಿನೊಳ್ಬರಲು ದಿವಿಜೆಯರು || ೩

ಆ ಜಿನ ಜನನಿಗೆ ಸಾನದ
ರಾಜನ ಮಾನಿನಿ ಹೂಮಾಲೆಯ
ನೋಜೆಯೊಳೂಡಿಸಿ ಚೆಲುವಿಂದಕ್ಷತೆಯನು ತಳಿದರು
ರಾಜೀವ ನಯನಗೊಲವಿನಲಿ || ೪

ಸುರಲೋಕದ ದಿವ್ಯಾಭರಣಾಂ
ಬರದಿಂದ ಪುಣ್ಯದಂಪತಿಗಳ
ಸುರಪತಿ ಪೂಜಿಸಿದನೊಲವಿನಲಿ ದಿವಿಜಾಂಗನೆಯರು
ಹರಷದೊಳಾರತಿಯ ಬೆಳಗೀರೆ || ೫

ರಾಜಶಿಖಾಮಣಿ ಫಣಿಪತಿಸುರ
ರಾಜಕಿರೀಟಾನತ ಪದ ಜಿನ
ರಾಜಪ್ರಿಯ ಜನಕ ಜಯ ಜಯತುಯೆಂದೆನುತಲಿ ನಾಭಿ
ರಾಜನಿಗಾರತಿಯ ಬೆಳಗೀರೆ || ೬

ಭಾವೆಯರ ಶಿರೋಮಣಿ ತ್ರಿಭುವನ
ಸೇವಿತ ಪದಪದ್ಮ ವಿರಾಜಿತೆ
ಪಾವನ ಚರಿತೆ ಗುಣಭರಿತೆಯೆಂದೆನುತಲಿ ಮರು
ದೇವಿಗಾರತಿಯ ಬೆಳಿಗಿರೇ || ೭

೨೭. ಧರೆಯೊಳಧಿಕವೇಣು

ಧರೆ ಯೊಳಧಿಕ ವೇಣುಪುರದ
ದೊರೆಚಂದ್ರ ಜಿನಮಂದಿರದ
ಪರಿಪರಿ ಸೊಬಗುಗಳಿರದೊರುವುದ
ಕರಚೆಲುವಿನಕಾಂತಿ ಚಿತ್ರ ಮಂಟಪದ
ಸರಸಿಜಾಸನದೊಳು ಸ್ಥಿರವಾಗಿ ನೆಲಸಿದ
ಸರಸ್ವತಿಗಾರತಿಯ ಬೆಳಗೀರೆ || ೧

ಕರುಣಾವಾರುಧೀ ಚಂದ್ರವದನೆ
ಸುರನರವಂದಿತ ಚರಣೇ
ವರಮಣಿ ಮೌಕ್ತಿಕ ಹಾರದ ಭರಣೇ
ಪರಪುಟ ಪಂಚಮ ಸ್ವರದ ಸುಗಾನೆ
ಧರೆಯೊಳು ಸುಜನರ ಪೊರೆವ ಸುಜಾಣೆಗೆ
ತರುಣೆಯರಾರತಿಯ ಬೆಳಗೀರೆ || ೨

ಕಡಗಕಂಕಣ ಕಾಂಚೀಧಾಮ
ನಡುವಿನೊಡ್ಡ್ಯಾಣವು ಹೇಮ
ಎಡೆಎಡೆಯೊಳು ಕಡು ಸೊಬಗಿನ ಸ್ತೋಮ
ಉಡುಪತಿ ಕಾಂತಿಯ ಮಿಗುವ ಸುಧಾಮ
ಪೊಡವಿಯೊಳು ಜನರ ರಕ್ಷಿಸುವ ಸುಪ್ರೇಮಿಗೆ
ಮಡದಿಯರಾರತಿಯ ಬೆಳಗೀರೇ || ೩

ಕರದಿ ಪುಸ್ತಕ ವೀಣಾಪಾಣಿ
ಮೊರೆವ ಜವ್ವನದ ಕಟ್ಟಾಣಿ
ಕರದು ಸುಜ್ಞಾನವನೀವ ಗೀರ್ವಾಣಿ
ಹರುಷದಿ ಭಜಿಸುವ ಜನರಿಗೆ ವಾಣಿ
ಪರಮದಯಾನಿಧಿ ಪನ್ನಂಗವೇಣಿಗೆ
ತರುಣಿಯರಾರತಿಯ ಬೆಳಗೀರೇ || ೪

ಜಿನಮುಖ ಕಮಲ ಸುಜಾತೆ
ಜನಿತ ಜಾಣ್ಣುಡಿಯ ಪ್ರಖ್ಯಾತೆ
ಮುನಿಜನವಂದ್ಯೆ ವನಿತೆ ಲೋಕಮಾತೆ
ಘನಮುಕ್ತಿ ಪದವನು ಕೊಡು ಮಹಾದಾತೆ
ಜಿನನುತ ಗುಣಗುಣಭರಣ ಭೂಷಿತಗೆ
ವನಿತೆಯರಾರತಿಯ ಬೆಳಗೀರೇ || ೫

೨೮. ಪರಮಜಿನೇಂದ್ರನನೆನೆದು

ಪರಮಜಿನೇಂದ್ರನ ನೆನೆದು
ಸರಸಿಜಮುಖಿಯರು ನೆರೆದು
ಕರದಕಂಕಣ ಝಣರವಗಳೆಸೆಯಲು
ಬೆರಳ ಮುದ್ರಿಕೆ ಕಾಂತಿ ಧರೆಗೆ ರಂಜಿಸಲು
ಕಿರುನಡುವಿನ ಕಾಂಚಿಧಾಮ ಹೊಳೆಯಲು
ಧರಣಿರಾಜ ಪಟ್ಟದರಸಿ ಪದ್ಮಾಂಬೆಗೆ
ತರುಣಿಯರಾರತಿಯ ಬೆಳಗೀರೇ || ೧

ಶೀಲಭೂಷಿಣಿಯರು ನೆರೆದು
ನೀಲಕುಂತಳದ ನೀರೆಯರು
ಸಾಲೆಯಸೀರೆಯ ನಿರಿವಿಡಿದುಟ್ಟು
ಮೇಲೆನಿಸಿದ ಹೊನ್ನರವಿಕೆಯ ತೊಟ್ಟು
ಬಾಲೆಯರೊಲಿದು ಬಂಗಾರವನಿಟ್ಟು
ವ್ಯಾಲರಾಜನ ಪಟ್ಟದರಸಿ ಪದ್ಮಾಂಬೆಗೆ ಮೊಗೆ
ಬಾಲೆಯರಾರತಿಯ ಬೆಳಗೀರೇ || ೨

ಸೋಗೆ ಮುಡಿಯ ಸುಗುಣಿಯರು
ಕೋಲೆಗೆ ಸ್ವರದ ಕಾಂತಿಯರು
ಪೂಗಾಲ್ವನಿತೆಯರೂಪವರ ಜರಿದು
ವೇಗ ವಿಳಂಬ ಮಧ್ಯತ್ವರಿತವನರಿತು
ರಾಗದಿ ಢವಳದ ಮಳೆಯನೆ ಕರೆದು
ನಾಗರಾಜನ ರಾಣಿ ಪದ್ಮಾವತಿಯಮ್ಮಗೆ
ಆಗಮದಾರತಿಯ ಬೆಳಗೀರೇ || ೩

ಅಂಗನಾಮಣಿಯರು ಬಂದು
ಶೃಂಗಾರವೆಸವುತ ಬಂದು
ಕಂಗಳಪ್ರಭೆಯಿಕ್ಕೆಲದೊಳು ಬೆಳಗಿ
ಹೆಂಗಳೊಳಿವ ಜಾಣೆಯರೊಳಗೆ
ಹಿಂಗದೆ ವಾದ್ಯದ ಧ್ವನಿಗಳು ಮೊಳಗೆ
ಬೃಂಗನಂತ ಪಾಲ ಪೊರೆವ ಪದ್ಮಾಂಬೆಗೆ
ಮಂಗಳಾರತಿಯ ಬೆಳಗೀರೇ || ೪

ಚಂದ್ರಮುಖದ ಚದುರೆಯರು
ಕಂದರ್ಪರತಿಯ ಹೋಲುವರು
ಮಂದಗಮನದಿ ಮಾನಿನಿಯರು ನಡೆದು
ಹೊಂದಾವರೆ ಹೂವ ತುರುಬಿಗೆ ಮುಡಿದು
ದ್ವಂದ್ವ ಹಸ್ತದಿ ಹರಿವಾಣವ ಪಿಡಿದು
ನಂದಪುರದರಮನೆಯ ಪದ್ಮಾಂಬೆಗೆ
ಚೆಂದದೊಳಾರತಿಯ ಬೆಳಗಿರೇ || ೫

೨೯. ಜಯಜಯಆದಿ

ಜಯಜಯ ಆದಿಜಿನೇಂದ್ರ
ಜಯಜಯ ಬೋಧಾಬ್ದ ಚಂದ್ರ
ಜಯಜಯ ಬುಧಮುನಿಪತಿನುತ ಚರಣ
ಜಯಜಯ ಬೋಧದಿವಾಕರ ಕಿರಣ
ಜಯಜಯ ಬುದ್ಧಕರ್ಮಾಷ್ಟಕ ಹರಣ
ಜಯವೆಂದಾರತಿಯ ಬೆಳಗಿರೇ || ೧

ಜಯಜಯ ಜಯವರ್ಮನೃಪಗೆ
ಜಯಜಯ ಮಹಾಬಾಲಕಗೆ
ಜಯಜಯ ಈಶಾನಕಲ್ಪಧೃವಗೆ
ಜಯಜಯ ಶ್ರೀವಜ್ರಜಂಘನನಿಗೆ
ಜಯಜಯ ಭೋಗಭೂಮಿನಾಳವನಿಗೆ
ಜಯವೆಂದಾರತಿಯ ಬೆಳಗಿರೇ || ೨

ಜಯಜಯ ಶ್ರೀಧರಮರಗೆ
ಜಯಜಯ ಸುವಿಧಿರಾಜನಿಗೆ
ಜಯಜಯ ಅಚ್ಯುತಕಲ್ಪದೀಶನಿಗೆ
ಜಯಜಯ ಶ್ರೀವಾಸುಚಕ್ರೇಶಗೆ
ಜಯಜಯ ಶಾಶ್ವತ ಸಿದ್ಧಿನಾಯಕಗೆ
ಜಯಜಯವೆಂದಾರತಿಯ ಬೆಳಗಿರೇ || ೩

ಜಯಜಯ ಸಾಕೇತಪತಿಗೆ
ಜಯಜಯ ನಾಭಿಭೂಪತಿಗೆ
ಜಯಜಯ ಶ್ರೀಮರುದೇವಿಯಮ್ಮನಿಗೆ
ಜಯಜಯ ಶೋಷಡ ಸ್ವಪ್ನ ಜನಿತೆಗೆ
ಜಯಜಯ ಶ್ರೀಜ್ಞಾನಧರ ಆದಿದೇವಗೆ
ಜಯವೆಂದಾರತಿಯ ಬೆಳಗಿರೇ || ೪

ಜಯಜಯ ಗರ್ಭಾವತರಣ
ಜಯಜಯ ಜನ್ಮಾಭಿಷವಣ
ಜಯಜಯ ಪರಿನಿಷ್ಕ್ರಮಣ ಕಲ್ಯಾಣ
ಜಯಜಯ ಕೇವಲ ಜ್ಞಾನ ಭಾಸ್ಕರಗೆ
ಜಯಜಯ ನಿರ್ವಾಣ ಪತಿಪುರುದೇವಗೆ
ಜಯವೆಂದಾರತಿಯ ಬೆಳಗಿರೇ || ೫

ಜಯಜಯ ತ್ರಿಜಗದಾರಾಧ್ಯ
ಜಯಜಯ ಭುಜಗೇಂದ್ರಸ್ತುತ್ಯ
ಜಯಜಯ ಅಜಹರಿಪೂಜಿತ ಚರಣ
ಜಯಜಯ ಭುಜಗಭೂಷಣನುತ ಚರಣ
ಜಯಜಯ ಜೈನಮತಾಂಬುಧಿ ಚಂದ್ರಗೆ
ಜಯಜಯವೆಂದಾರತಿಯ ಬೆಳಗಿರೇ || ೬

ಜಯಜಯ ಧರೆಗತಿಯಶಯದ
ಜಯಜಯ ಶ್ರೀವೃಷಭಪುರದ
ಜಯಜಯ ಚೈತ್ಯಾಲಯದಿ ರಂಜಿಸಿದ
ಜಯಜಯ ಹರಿಪೀಠದೊಳು ಶೋಭಿಸುವ
ಜಯಜಯ ಸಾಸಿರಕಮಲದೊಳೊಪ್ಪುವ
ಜಯ ಜಯ ಆದಿದೇವನಿಗಾರತಿಯ ಬೆಳಗಿರೇ || ೭

೩೦. ಜಯಚಂದ್ರನಾಥನಿಗೆ

ಜಯಚಂದ್ರನಾಥನಿಗೆ ಜಯ ಇಂದ್ರವಂದಿತಗೆ
ಜಯಚಂದ್ರ ಪುರವಾಸ ಸರ್ವೇಶಗೆ
ಜಯ ಜಯಾಚಂದ್ರ ಲಾಂಛನಗೆ
ಜಯಜಯಾ ರುಂದ್ರಕರುಣಗೆ
ಜಯಜಯಾ ಸಾಂದ್ರ ಸದ್ಗುಣ ಗಂಭೀರಗೆ
ಜಯಜಯಾ ಚಂದ್ರ ಭಾಸ್ಕರ ಕೋಟಿಕಿರಣಗೆ
ಜಯಜಯಾ ಚಂದ್ರವಿಷ್ಟರದಾತಗೆ
ಜಯಜಯಾ ಚಂದ್ರನನ ಜಿನಚಂದ್ರಗೆ
ಜಯವೆಂದಾರತಿಯ ಬೆಳಗಿರೇ || ೧

ಜಯ ಪರಮಪುರುಷನಿಗೆ
ಜಯದುರಿತನಾಶನಿಗೆ
ಜಯನರೋರಗನಮಿತ ನುತಪಾಲಗೆ
ಜಯ ಪರಮ ಪಾವನಗೆ
ಜಯ ಸ್ಮರಣಗೆಲಿದಗೆ
ಜಯ ಜರೆಮರಣವ ತೊರೆದವಗೆ
ಜಯಜಯ ನಿರಘ ನಿರ್ಮಲ ನಿರುಪಮಗೆ
ಜಯಜಯ ನಿರವಂದ್ಯ ನಿರ್ವಿಕಲ್ಪನಿಗೆ
ಜಯಮೋಕ್ಷ ಲಕ್ಷ್ಮೀರಮಣಗೆ
ಜಯವೆಂದಾರತಿಯ ಬೆಳಗಿರೇ || ೨

ಜಯವೀತರಾಗನಿಗೆ
ಜಯಜಾತರೂಪನಿಗೆ
ಜಯಖ್ಯಾತಿವಂತ ಸದ್ಗುಣ ಶಾಂತಗೆ
ಜಯ ಭೂತನಿಗೆ ಜಯ ನೀತಿ ಕೋವಿದಗೆ
ಜಯ ಶತಪರ್ವಪುರದಧಿನಾಥಗೆ
ಜಯ ಯತಿ ಪಂಡಿತಾರ್ಯನುತಿಪಗೆ
ಜಯ ಮತಿಯುತ ಜಿತ ಮದಮಹಿಮಗೆ
ಜಯ ಕ್ಷಿತಿಯೊಳಧಿಕ ಚಂದ್ರನಾಥಗೆ
ಜಯ ವೆಂದಾರತಿಯ ಬೆಳಗಿರೇ || ೩