೧೧. ಮಂಗಲಂವಿಮಲಲಲಿತಾಂಗಿಗೆ

ಮಂಗಲಂ ವಿಮಲ ಲಲಿತಾಂಗಿಗೆ ಜಯ
ಮಂಗಲಂ ಶ್ರೀ ಜ್ವಾಲಿನಿದೇವಿಗೆ || ಪಲ್ಲವಿ

ವರಸಲಧನು ಖಡ್ಗ ಛತ್ರ ಉರಗ ಖಡ್ಗಗಧಾಪಾಂಗಿ
ವೆರಸಿ ತ್ರಿಶೂಲಷ್ಟ ಬಾಹುಗಳಾ
ಉರಿಮಾಲೆ ಮಹಿಷಕೇಶರಿರುಡೆ ಸದ್ಧರ್ಮ
ಚರಿತೆ ಜ್ವಾಲಿನಿ ಸರ್ವಜಿನ ರಕ್ಷೆಗೆ || ೧

ಒಳಿದು ಕರ್ತಗೆ ಉರಿವೆಳಿ ಮುಖವನು ಕೊಟ್ಟು
ಸುಲಭದಿ ಪೆನಗೊಂಡೆ ಆರ್ಯರಿಂದಾ
ಗೆಲಿಸಿ ಡಿಳ್ಳಿಯ ಸುರಿತಾಳನ ಮುಖಭಂಗ
ಗೊಳಿಸಿದ ಕಡಿಯಾಣ ಬಿರಿದಳಿಗೆ || ೨

ಶರಧಿಯೊಳ ಮಾತಿಹ ಪುರುಪರಮೇಶ
ತ್ತರವನರಿಯಲೆಂದು ಸುರಿತಾಳನ
ಕರವ ಪಿಡಿತ ಮುಟ್ಟಿಲೋಡಿಸಲಲ್ಲಗೆ
ಉರುತರ ತೋರಿದ ಮಹಿಮಳಿಗೆ || ೩

ವಾರುಧಿಯೊಳಗಿಹ ಕ್ಷಾರಗೀರವನು ನೆರ
ಳೊರಿಸಿದನಿತಮೃತ ರುಚಿಯ
ತೋರಿ ಮಹಿಮೆಯ ಸುಧಾರುಣಿಯೊಳಗೆ ವಿ
ಸ್ತಾರಗೊಳಿಸಿದ ಜ್ವಾಲಿನಿದೇವಿಗೆ || ೪

ಸೃಷ್ಟಿಯೊಳಗೆ ಅತಿಶ್ರೇಷ್ಠ ಯಕ್ಷದ್ವಯ
ದೃಷ್ಟಪ್ರತಿಷ್ಟ ವಿಶಿಷ್ಟದರೀಚಾಮೂಲ
ಪುರದ ಭವ್ಯರಷ್ಟವನರಿದು ಸಂ
ತುಷ್ಟವಗೊಲಿದ ಜ್ವಾಲಿನಿದೇವಿಗೆ || ೫

೧೨. ಮಂಗಲಂಮಂಗಲಂಜ್ವಾಲಿನಿ

ಮಂಗಲಂ ಮಂಗಲಂ ಜ್ವಾಲಿನಿದೇವಿ
ಮಂಗಲಂ ಮಂಗಲಂ ಭವ್ಯಜನಪಾಲೆ
ಮಂಗಲಂ ಮಂಗಲಂ ಭಕ್ತರಾ ಪ್ರಿಯೆ || ಪಲ್ಲವಿ

ಅಷ್ಟಭುಜದ ದಿಟ್ಟೆ ದ್ರಷ್ಟಮೂರುತಿ ತಾಯೆ
ಶ್ರೇಷ್ಠದಿ ಮೆರೆವ ಶ್ರೀ ಜಗನ್ಮಾತೆಯೇ
ದ್ರಷ್ಟಮೂರುತಿ ವಿಜಯಾಕ್ಷನ ರಾಣಿಯೇ
ಸೃಷ್ಟಿಯೊಳತಿಶಯ ಜಿವಪನ ಭಕ್ತೆ || ೧

ಚಂದ್ರಜಿನನ ಯಕ್ಷೆ ಶಶಿನಿಭ ವದನೆಯೆ
ಚಂದ್ರಪ್ರಕಾಶದ ಮುಕುರ ಶೋಭಿತಳೆ
ಚಂದದಿಂದೆಸೆವ ಮುತ್ತಿನ ಹಾರಲಂಕೃತಿ
ಚಂದದಿಂ ಭವ್ಯರ ಸಲಹುವ ಪ್ರಿಯೆ || ೨

ಮುತ್ತಿನ ಹಾರ ಪದಕ ರತ್ನದೋಲೆಯು ವಿ
ಚಿತ್ರ ತರದ ಹಸ್ತಕಡಗದಿಂದೆಸೆವ
ರತ್ನಖಚಿತದ ವಢ್ಯಾಣ ಭಾಪುರಿಗಳು
ರತ್ನಾವಳಿಯಿಂದ ಮೆರೆವ ಶ್ರೀದೇವಿಯೇ || ೩

ಭವಜನರ ಪಾಲೆ ಭವವಾರುಧಿ ಶೀಲೆ –
ಭವ ವಿನಾಶನ ಯಕ್ಷೆ ಭಕ್ತರಪಾಲೆ
ಭುವನ ಬುಂಭುಕದೇವಿ ಭೂತ ಭಯಂಕರಿ
ಭವಹರನ ಭಕ್ತೆ ಭಕ್ತನ ಸಲಹೆ || ೪

ಧರೆಯೊಳತ್ಯಧಿಕ ಬೆಳ್ಗೊಳಾ ಮಠದೊಳಗಿಹ
ವರಚಂದ್ರನಾಥನ ಬಸದಿಯೊಳಿರುವ
ಗುರುಪಂಡಿತಾರ್ಯಧರಣಿ ವಿಚಕ್ಷಣೆ
ವರಭವ್ಯ ಜಿನಪಾಲೆ ಜ್ವಾಲಿನಿದೇವಿಗೆ || ೫

೧೩. ಜಯಮಂಗಲಂನಿತ್ಯಶುಭ

ಜಯಮಂಗಲಂ ನಿತ್ಯಶುಭಮಂಗಲಂ
ಜಯ ಪರಬ್ರಹ್ಮ ಪಾರೀಶ್ವರಗೆ || ಪಲ್ಲವಿ

ಭುವನಕವತರಿಸುವರುದಿಂಗಳೆನೆ ಮಣಿ ಮಳೆಯ
ದಿವದಾದಿ ಮಧ್ಯಾಂತ್ಯದೊಳು ಕರಿಯಲು
ಭುವನಂಬಿಕೆಯು ಸ್ವಪ್ನಗಾಣಲುಧರದಿ ನೆಲಸಿ
ಅವಧಿಮತಿ ಶ್ರುತವೆನಿದು ಕಳಿದೋರ್ಪಗೆ || ೧

ಜನನಿಯುದರದಿ ತ್ರಿಜಗದಿರವನರಿದಿರ್ಪ್ಪವಗೆ
ಮುನಿಗಳಿಗೆ ತತ್ವನಿರ್ಣಯದೋರ್ಪಗೆ
ಜನಿಸಿ ಸುರಗಜವೇರಿ ಸುರಸಮಿತಿ ಸಹ ತೆರಳಿ
ಕನಕಾದ್ರಿಯೊಳು ಸುಧಾಬ್ದಿಯ ಮಿಂದವಗೆ || ೨

ತೊಡರಳಿದು ತಪದಿ ಘಾತಿಗಳ ಖಂಡಿಸಿದವಗೆ
ಒಡನೆ ಕೇವಲ ಬೋಧವನು ತಾಳ್ದಗೆ
ಪೊಡವಿಗೈಸಾಸಿರದ ಬಿಲ್ಲಂತರಕ್ಕಾಗಿದು
ಸಡಗರಿಪ ಸಮವಸರಣದಿ ನಿಂದವಗೆ || ೩

ಲೋಕಕ್ಕೆ ಸದ್ಧರ್ಮ ಸಾರ ವೃಷ್ಟಿಯ ಕರೆದು
ಲೋಕಿಸಿ ಬಹಿರ್ಪ್ಪ ಭೂತಿಗಳ ಕಳೆದು
ನಾಲ್ಕು ಘಾತಿಗಳ ಬೇರ್ಗಳ ಕಿತ್ತು ಸುಟ್ಟುರುಹಿ
ಲೋಕಾಗ್ರದೊಳು ನಿಂದ ಶ್ರೀಕಾಂತಗೆ || ೪

ಇಳೆಗಧಿಕವಾದ ಬೆಳ್ಗುಳ ಪುರಿ ಚೈತ್ಯಾ
ನಿಳಯದೊಳು ನಳಿನವಿಷ್ಟರದಿ ನೆಲಸಿ
ತೊಳಗಿ ತನುಕಾಂತಿ ತಾಳಿ ಕಿರಿದಾಂಗುಡಿಯಿಟ್ಟು
ಹೊಳೆದು ಪ್ರಜ್ವಲಿಪ ಪಾರೀಶ್ವಗೆ || ೫

 

೧೪. ಆರತಿಬೆಳಗುವೆ

ಆರತಿ ಬೆಳಗುವೆ ನೀರಜವನಿ ದಯ
ವಾರಿಧಿ ಪರಿಹಾರ ಹಾರ ಸರಸ ಗುಣ
ಪಾರೆ ಶ್ರೀ ಪಾರೀಶ್ವನ ವಾರಿಜಪದ ಸಾರೆ || ಪಲ್ಲವಿ

ಆರಡಿ ನೀ ಭೋಗುರುಳ್ಗ ನೀರಜಮುಖಿ ನಿನ್ನ
ಧೀರ ತನು ಸುಮಾರಾ ಮಾರನ ಲಲನೆಯ
ಕಾರವನಿಳಿಕೊಳ್ವ ನೀರೆ ನಿನ್ನಕಾರ
ಕಾರಮಿಪ ಕಾರಣರೂಪ ಕಮಠನ
ಘೋರ ಉಪದ್ರವವುದೋರೆ
ದೂರ ಕೇಳದೆನ್ನಯಪಾರ ದುಃಖವ ದುಂಡೆ
ತಾರಿಸು ಗಂಭೀರೆ ||

ಮೇಲುಮುತ್ತಿನ ದಂಡೆ ವಾಲಿದು  ವಜ್ರದ ಕಂಠ
ಮಾಲೆ ಮೆರೆವ ವೋಲೆ ಲೋಲಾಕ್ಷನ ಗುಣ
ಮಾಲೆ ಲಲಿತಯಿದು ಬಾಲನ ಸುಖಕಾಲೆ
ವಾಲೆ ಕಂಚುಕಿ ತೊಟ್ಟು ಕೀಲದಾಭವನಿಟ್ಟು
ಲೋಲಾಡುವ ಫಣಿಬಾಲೆ
ಬಾಲನನಿಜ ತ್ರಿಪಾಲಿಪ ಚಿನ್ಮಯ
ಪಾಲಿಸು ಮಹಿಮಾ ಪಾಲೆ || ೨

ಭೂವಳಯಧಿಕ ಶ್ರೀವೇಣುಪುರದೊಳೆಸೆವಳು ಆದಿಕವಳಾ
ಕಾವದನು ಪ್ರಭುಶ್ರೀವಳಯ ವಿನುತ
ಪಾವನಧರ ಹವಳ ಹಾವಭಾವದೊಳು
ದೇವ ಶ್ರೀ ವಿರುಳಾವಳು ಸಮನಿಸುವಳಾ
ನೀವನು ದಿನದಲ್ಲಿ ಭವಿಸಿ ಭಕ್ತ ಜನವವಳ ಪರಿವವಗಾ || ೩

೧೫. ಜಯಮಂಗಳವೈ
ರಾಗ : ಬೇಹಾಗ್ ತಾಳ : ಆದಿತಾಳ

ಜಯ ಮಂಗಳ ವೈ ಜಯ ಮಂಗಳ ವೈ
ಜಯಜಯ ಜಯಜಯ ಮಂಗಳ ವೈ
ಮಂಗಳಂ ಜಿನರಾಜಗೇ ಅಂಗಜವಿಜಯಗೆ
ಭಂಗವ ಗೆಲಿದಗೆ ಶೃಂಗಾರಹಾರಗೆ ಮಂಗಳ ವೈ || ಪಲ್ಲವಿ

ದೋಷಪದಿನೆಂಟನು ನಾಶವ ಗೈದಗೆ
ಭಾಸುರತೇಜಗೆ ಮಂಗಳ ವೈ
ಈಶಗೇ ಮುಕ್ತೀಶಗೇ ಸಾಸಿರನಾಮಗೆ
ಲೇಸಿತ್ತು ಪೊರೆವಗೆ ದಾಸನ ದೇವಗೆ ಮಂಗಳ ವೈ || ೧

ಖ್ಯಾತಗೇ ನತಜನ ಪ್ರೀತಗೇ ಸ
ನ್ಮತಿಯುತನಿಗೆ ದೋಷವ ಗೆಲಿದಗೆ
ಅತಿಶಯಯುತನಿಗೆ ಮಂಗಳ ವೈ
ನಾಥಗೇ ಮಹೇಶಗೇ ನೂತನಪುರಿಯಧಿನಾಥಗೇ
ಪೂತಗೆ ರತ್ನತ್ರಯಮಯ ಮಂಗಳ ವೈ || ೨

೧೬. ಮಂಗಲಂಶ್ರೀಚಂದ್ರಪ್ರಭಗೆ
ರಾಗ : ಸುರುಟಿ ತಾಳ : ರೂಪಕತಾಳ

ಮಂಗಲಂ ಶ್ರೀಚಂದ್ರಪ್ರಭಗೆ ಮಂಗಲಾಂಗಗೇ || ಪಲ್ಲವಿ
ಅಂಗಜನ ವಿಭಂಗನಾದ ಮಂಗಲಾತ್ಮಯೋಗನಾದ
ಸಂಗತಾರ್ಥಿಗೀವ ಮೋದ ಶೃಂಗಾರನಿಗೆ ದೇವನುತಗೆ || ೧

ಇಂದ್ರವೃಂದ್ರವಂದ್ಯನಿಗೆ ಮಂದ್ರಗಣ ವಿಭೂಷಣನಿಗೆ
ಸಾಂದ್ರಮುಕ್ತಿಲಕ್ಷ್ಮೀಪ್ರಿಯಗೆ ಚಂದ್ರಪ್ರಭಜಿನೇಂದ್ರವರಗೆ || ೨

ಧರೆಯೊಳಧಿಕ ಬೆಳುಗುಳದಿ ಮೆರೆವ ಶೋಭೆಯಿಂದ ಬಸದಿ
ವರಸದನದಿ ನೆಲಸಿ ಮುದದಿ ಮೆರೆವನಿಗೆ ಕಾಮಹರಗೆ || ೩

೧೭. ಮಂಗಳಂಜಗದಾಂಬದೇವಿಗೆ
ರಾಗ : ಆನಂದಭೈರವಿ ಆದಿತಾಳ

ಮಂಗಳಂ ಜಗದಾಂಬದೇವಿಗೆ
ಮಂಗಳಂ ಪದ್ಮಿಣಿಗೆ || ಪಲ್ಲವಿ

ಧರಣೇಂದ್ರಗತಿಯಂತ ಪಾದಸುಪ್ಪಾಣೆಗೆ
ವರಗುಣಭೂಷಣಗೆ ವರಕುಕ್ಕು
ದೋರುಹ ವಾಹನಯಕ್ಷಗೆ
ಪರಾಕು ಪದ್ಮಾವತಿ ಪರಮಪವಿತ್ರೆಗೆ || ೧

ವಾಣಿವಿಭವ ಕಲ್ಯಾಣಿ ಪಾಶಾಂಕುಶ
ಪಾಣಿಸದ್ಗುಣ ಮಣಿಗೆ
ವೇಣು ನೇತ್ರೆಯೇ ಪ್ರೇಮದಿ ಸಲಹುವ
ಕ್ಷೋಣಿಗಧಿಕ ಕಟ್ಟಾಣಿ ನಿಃಶ್ರೇಣಿಗೆ || ೨

ಖ್ಯಾತಿವೆತ್ತ ನರಸಿಂಹಪುರವಾಸಿಗೆ
ಪ್ರೀತಿ ಕರುಣಾನಿಧಿಗೆ
ವಾತುರ ಎನ್ನ ಭಕ್ರರ ಪರಿಪಾಲಿಪ
ಪ್ರೀತಿಕರುಣ ಪದ್ಮಾವತಿ ದೇವಿಗೆ || ೩

೧೮. ಜಯಮಂಗಲಂನಿತ್ಯ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯ ಸೀಮಂತಿನಿದೇವಿ ಪದ್ಮಾಂಬೆಗೆ
ಜಯ ಮಂಗಳಂ ನಿತ್ಯ ಶುಭಮಂಗಳಂ || ಪಲ್ಲವಿ

ಜಿನದತ್ತರಾಯನ ಜನರರಿಕೆಯೊಳು ಸಲಹಿ
ಜನಕ ಮುನಿದುದ ಕಂಡು ಸಲಹಬೇಕೆಂದು
ಘನಬೇಗದಿಂದ ದಕ್ಷಿಣಕೆ ನಡೆತಂದು
ವನಜಲೋಚನೆ ಲಕ್ಕಿವನದಿ ನೆಲಸಿದಳೆ || ೧

ಕಮಲನೇತ್ರದಳ ನೇತ್ರಳಿಗೆ ಕರುಣಸಾಗರ ಮುಖಿಗೆ
ಕಮಲಪೀಠದೊಳೆಸೆವ ಜಗದಾಂಬೆಗೆ
ಕಮಠೋಪ ವಿಜಯ ಪಾರಿಶ್ವಜಿನಪನ ಯಕ್ಷೆ
ಮಮ ಹೃದಯದೊಳು ನಿಂದು ಸಲಹುವಳಿಗೆ || ೨

ನಿರ್ಗ್ಗುಂಡಿ ತರುವಿನೊಳು ನೆಲಸಿರುವ ದೇವಿಗೆ
ಸುಗುಣದಿಂ ಹರುಷವನು ತೋರಿದಳಿಗೆ
ಮಿಗೆರತ್ನಾಭರಣ ಭೂಷಣದಿ ಮೆರೆವವಳೆ
ಜಗದೊಳತಿಶಯ ಮೂರ್ತಿ ಪದ್ಮಾವತಿದೇವಿಗೆ || ೩

ಧರಣಿರಾಜನ ಪಟ್ಟದರಸಿ ಪದ್ಮಾವತಿಗೆ
ಧರಣಿಯೊಳು ಕೀರ್ತಿಯೊಳು ಮೆರೆವವಳೆ
ಧರಣೇಂದ್ರ ಸಹ ಪರಮ ಜಿನರ ಸೇವೆಯ ಮಾಳ್ಪ
ಸುರುಚಿರ ಗುಣಭರತೆ ಸುಜ್ಞಾನ ಧರೆಗೆ || ೪

ಚಂದ್ರಗಿರಿಯ ನಿವಾಸಿ ಚಂದಿರನ ಸಮಶಾಂತೆ
ಚಂದ್ರವದನೆಯ ನಿಮ್ಮ ಚರಣ ಭಜಿಸುವೆನು
ಚಂದದಿಂ ನೆಲಸಿರುವ ಪದ್ಮಾವತಿ ದೇವಿಗೆ
ಜಯ ಮಂಗಳಂ ನಿತ್ಯ ಶುಭಮಂಗಳಂ || ೫

೧೯. ಜಯಮಂಗಲಂನಿತ್ಯಶುಭ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯ ಮಹಾ ನಂದೀಶ್ವರಾದ್ರಿ ಜಿನರಿಗೆ || ಪಲ್ಲವಿ

ಮುದದಿ ಜಿನನಿಳಯಮಂಜನ ನಾಲ್ಕರೊಳು ನಾಲ್ಕು
ದಧಿ ಮುಖಗಳೀರೆಂಟು ನಿಳಯವನಿತೆ
ಅದರಿಂದ ಮುಂದೆ ರತಿಕರಕೆ ಮೂವ್ವತ್ತೆರಡು
ಸದನದ್ವಾರಪಂಚ ಶ್ರೀ ನಿಳಯಗಳಿಗೆ || ೧

ಮಣಿಮಾಡಗೋಪುರ ದ್ವಾರ ಮಾನಸ್ತಂಭ
ಗಣನೆಯಿಲ್ಲದ ಧ್ವಜಾವಳಿ ತೋರಣ
ಘನವೆತ್ತ ಐದು ವಿಧ ವಾದ್ಯ ಮಂಗಲ ದ್ರವ್ಯ
ಮಿನುಗಿ ನಗೆ ಮಿನುಗುತಿಹ ಜಿನವರರಿಗೆ || ೨

ಇಂದು ರವಿಕೋಟಿ ಕಿರಣವ ಮಿಗುವ ಜಿನಬಿಂಬ
ಅಂದವಡೆದೈನೂರು ಚಾಪಾರಿನ ತಾ
ಮಂದಿರಕೆ ನೂರೆಂಟು ಮಿಂತು ಮೈ ಸಾಸಿರದ
ಮಂದೆಯರು ನೂರುಯೀರೆಣ್ಬರವರ್ಗ್ಗೆ || ೩

ಜನನಾತಿಶಯ ಪತ್ತು ಘಾತಿಕ್ಷಯದಿ ಪತ್ತು
ಅನುಮಿಷರು ರಚಿತ ಪದಿನಾಲ್ಕತಿಶಯ
ವಿನುತಾಷ್ಟ ಪ್ರತಿಹಾರ್ಯ್ಯಗಳಿಂದ ರಾಜಿಸುವ
ಚಿನುಮಯಾತ್ಮಕ ಚಾರು ಚರಣಗಳಿಗೆ || ೪

ಹರಿಯಾದಿ ಸರ್ವ್ವ ವಾಹನವೇರಿ ನಾಲ್ದೆರೆದ
ಸುರರು ನಂದೀಶ್ವರ ಮಹಾದ್ವೀಪಕೆ
ವರುಷದಾಷಾಢ ಕಾರ್ತೀಕ ಫಾಲ್ಗುಣ ಶುಕ್ಲ
ವರಕ್ಷದಷ್ಟಮಿಯೊಳೈಯ್ದಿ ಮುದದಿ || ೫

ಗಿರಿವಸತಿ ಜಿನರುಗಳ ತ್ರಿಪ್ರದಕ್ಷಣಗೊಂಡು
ಸುರರು ಸ್ತುತಿಸಿ ಮಣಿದುಯೊಂದು ದಿವನಾ
ಪರಿಪರಿಯ ಅರ್ಹತಾ ಪೂಜೆಗಳನೆಸಗಿದುರ್ದರ
ದುರಿತ ಕಳೆವರಂತಾ ಜಿನರಿಗೆ || ೬

ಇಳೆಗಧಿಕವಾದ ಬೆಳ್ಗೊಳಪುರಿಯ ಚೈತ್ಯ
ನಿಳಯದೊಳು ನೆಲಸಿ ಪಂಡಿತಯತಿಪಗೆ
ನಲವಿತ್ತು ಅನುಗಾಲಯೆಡವಿಡದೆ ಸತ್ಪೂಜೆ
ಗೊಳುವ ಮಂದಾರದ ಶ್ರೀ ಜಿನವವರಿಗೆ || ೭

೨೦. ಜಯಮಂಗಲಂನಿತ್ಯ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯಶೀಲ ವಿಮಲ ನಿತ್ಯಾನಂದಗೆ || ಪಲ್ಲವಿ

ವಿಳೆವೆಣ್ಣನುಳಿದು ಜಯವರ್ಮಭೂಪಗೆ ಮಹಾ
ಬಲನಾದ ವಿದ್ಯಾಧರಾಧಿಪತಿಗೆ
ತೊಳತೊಳಗುತಿ ಶಾಸ ಕಲ್ಪದೊಳು ಮೆರೆವ ಬ
ಬ್ಬುಳಿಯೆನಿಸಿ ಮೆರೆವ ಲಲಿತಾಂಗ ದೇವನಿಗೆ || ೧

ಧರಣಿಪತಿ ವಜ್ರಜಂಗಗೆ ಭೋಗಭೂಮಿ ಜಗ
ವರ ಸುಖಾಂಬುಧಿಗೆ ಶ್ರೀಧರದೇವಿಗೆ
ಸರಸ ಸದ್ಗುಣ ಸಿಂಧು ಸುವಿಧಿಗಚ್ಚ್ಯುತ ಕಲ್ಪ
ತರುನಾದ ದೇವದೇವೋತ್ತಮನಿಗೆ || ೨

ಸರ್ವಭೂಮಿಯನಾಳ್ದ ವಜ್ರನಾಭಿಗೆ ಮಹಾ
ಸರ್ವಾರ್ಥ ಸಿದ್ಧಿಪತಿಗಹಮಿಂದ್ರಗೆ
ಸರ್ವಜ್ಞಗಾದಿ ಪರಮೇಶ್ವರಗೆ ಸಹಜ ಕೃಪೆಲೋರ್ವಿ
ಸರ್ವರ ಕಾವ ಸರ್ವತೋಮುಖಗೆ || ೩