೪೧. ಜಯಮಂಗಳಂನಿತ್ಯಶುಭಮಂಗಳಂ

ಜಯ ಮಂಗಳಂ ನಿತ್ಯ ಶುಭಮಂಗಳಂ
ಜಗದೊಳಗೆ ಜಿನಧರ್ಮ ಉದ್ಧಾರೆಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ || ಪಲ್ಲವಿ

ಜಾಲದಲಿ ಸಿಲುಕಿದಾ ಹರಿಣಿಯಂದದಿ ನಿಂದು
ವ್ಯಾಲರಾಜಗೆ ಬುದ್ಧಿ ಹೇಳಿ ಕಲಿಸಿ
ಬಾಲೆ ನೋಡೆಲ್ಲರ ಬಂಧನವನು ಪರಿಹರಿಸಿ
ಲಾಲಿಸಿ ಬಂದಂಥ ಧೀರೆ ಜ್ವಾಲಿನಿದೇವಿಗೆ || ೧

ಭೀಮಲಿಂಗವನೊಡೆದು
ಸ್ವಾಮಿ ಚಂದ್ರಪ್ರಭರ ಕಾಣಿಸಿದೆ ಎಲ್ಲರಿಗೂ ಪ್ರತ್ಯಕ್ಷದಿ
ಅಹಿವೇಣಿ ಕಟ್ಟಾಣಿ ಎಂದೆನಿಪ ಜ್ವಾಲಿನಿಗೆ
ಜಾಣ್ಮೆಯಿಂ ನಿತ್ಯ ಜಯಿಸಿದ ಮಾತೆಗೆ || ೨

ಚಂದಿರಾಗಿರಿಯಿಂದ ಬಂದಾಳಾಕ್ಷಣದೊಳಗೆ
ಬಂದು ನಿಂದಿಹಳು ಸಿಂಹಪುರಿಯೊಳಗೆ
ಚಂದ್ರನಾಥಸ್ವಾಮಿ ಪಾದಸೇವೆಯ ಮಾಳ್ಪ
ಬಂದು ರಕ್ಷಿಪಳಂತೆ ಭಾಗ್ಯದ ನಿಧಿಗೆ || ೩

೪೨. ಮಂಗಳಾರತಿಯತಂದೆತ್ತಿರೆ

ಮಂಗಳಾರತಿಯ ತಂದೆತ್ತಿರೆ ಜಯ ಮಂಗಳ ಶುಭ
ಮಂಗಳ ಶ್ರೀ ಜ್ವಾಲಾಮಾಲಿನಿಗೆ ಮಂಗಳಾರತಿಯ ತಂದೆತ್ತಿರೆ || ಪಲ್ಲವಿ

ಥಳಥಳಿಸುವ ಮುಖ ಹೊಳೆಯುವ ಪಲ್ಲನುಂ
ನೆಲೆಗೊಂಡಿಹ ಚೆಲ್ಪ ಪುರ್ಬುಗಳೂ
ಎಳೆನಗೆ ಮಿನುಗುವ ಬಾಯ್ದೆರೆಗಳನುಳ್ಳ
ಸುಳಿಗುರುಳಿನ ಜ್ವಾಲಾಮಾಲಿನಿಗೆ ಮಂಗಳಾರತಿ || ೧

ಹಾರಪದಕ ಹರಳೋಲೆ ಮುತ್ತಿನ ಬೊಟ್ಟು
ಭಾರಿಯ ಭುಜಕೀರ್ತಿ ಬಾಪುರಿಯೂ
ಮಾರನ ಸತಿಯರು ಗೆಲುವರು ಪೂಸೊಬಗ
ನೀರಜ ಮುಖೀ ಶ್ರೀಜ್ವಾಲಿನೀದೇವಿಗೆ ಮಂಗಳಾರತಿ || ೨

ಸಿಂಹಾಪುರಾಧಿಪ ಶ್ರೀ ಲಕ್ಷೀಸೇನರ
ಉನ್ನತ ಪ್ರಿಯ ಶಿಷ್ಯರಾಗಿರುವ
ಸುನ್ನುತ ಚಂದ್ರಸಾಗರ ವರ್ಣಿಯರಿಗೆ ಪ್ರ
ಸನ್ನವಾಗಿಹ ಶ್ರೀ ಜ್ವಾಲಾಮಾಲಿನಿಗೆ || ೩

೪೩. ಕುಂಜದಳಾಕ್ಷಣಿಕಮಲಿನಿಗೆ

ಕಂಜದಳಾಕ್ಷಣಿ ಕಮಲಿನಿಗೆ
ಮಂಜುಳವೇಣಿ ಮನೋಹರಿಗೆ
ಕುಂಜರಗಮನೆಗೆ ರಂಜಿಪ ಮಹಿಮೆಗೆ
ಭುಜಂಗನ ರಾಣಿ ಭುವನೇಶ್ವರಿಗೆ
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ || ೧

ಪೊಳೆವ ಲೊಕ್ಕಿಯೊಳಿರ್ಪ ಸುಲಲಿತೆಗೆ
ಮಲಯಜಗಂಧಿ ಸುಗಂಧಿನಿಗೆ
ಛಲದಿಂದ ಚರಣವ ನೆನೆದು ಸ್ಮರಿಪರಿಗೆ
ಬಲದ ಪ್ರಸಾದವನೀವಳಿಗೆ || ೨

ಅಂಬುಜಮುಖಿ ಬಿಂಬಾಧರೆಗೆ
ನಂಬಿದ ಭಕ್ತರ ಸಲಹಳಿಗೆ
ತುಂಬು ಜವ್ವನೆ ಮರಿ ದುಂಬಿಗುರುಳ
ಚೆಲ್ವೆ ಪೊಂಬುಜ ಪುರದ ಪದ್ಮಾಂಬಿಕೆಗೆ || ೩

೪೪. ಕಮನೀಯಗಾತ್ರೆಗೆ

ಕಮನೀಯ ಗಾತ್ರೆಗೆ ಕುಮುದ ಸುನೇತ್ರೆಗೆ ಕಮಲಸಮಾನನೆಗೆ
ರಮಣಿಯರೆಲ್ಲರು ನಮಿಸುತಲೆತ್ತಿರಿ ಕಮನೀಯದಾರತಿಯಾ || ೧

ಕಳಕೀರವಾಣಿಗೆ ಸುಲಲಿತ ವೇಣಿಗೆ ಮಲಯಜಗಂಧಿನಿಗೆ
ಕುಲಶಕುಚದ ಕಾಮಿನಿಮಣಿಗೆತ್ತಿಗೆ ಕಮನೀಯದಾರತಿಯಾ || ೨

ಕಂಬುಸುಕಂಠಿಗೆ ಪೊಂಬುಜವಾಸೆಗೆ ಅಂಬೆ ಪದ್ಮಾಂಬಿಕೆಗೆ
ಸಂಭ್ರಮದಿಂದಲಿ ರಂಭೆಯರೆತ್ತಿರೆ ಅಂಬುಜದಾರತಿಯಾ || ೩

ಅರುಹ ಪಾರಿಶ್ವ ಜಿನೇಶನ ಯಕ್ಷಿಗೆ ಪರುಷ ಪದ್ಮಾಂಬಿಕೆಗೆ
ಧರಣರಾಜನ ಪಟ್ಟದರಸಿಗೆ ಬೆಳಗಿರೆ ಮರಕತದಾರತಿಯಾ || ೪

ಮಾನಿನಿಮಣಿ ವನಮಾಲೆಗೊಲಿದು ಪತಿ ದಾನವ ಕರುಣಿಸಿದ
ಜಾಣೆಗೆ ಕಾಳೋರಗವೇಣಿಗೆ ಬೆಳಗಿರೆ ಮಾಣಿಕ್ಯದಾರತಿಯಾ || ೫

ನಿತ್ಯಮಂಗಲ ಕಲ್ಯಾಣ ಸಂಪತ್ತಿಯ ಮುತ್ತೈದೆಯರ ಭಾಗ್ಯ
ಇತ್ತು ಎಮ್ಮನು ಕಾಯೆ ಮುತ್ತಿನಾರತಿಯನು ಎತ್ತುವೆ ಎಲೆ ತಾಯೇ || ೬

ಹಾರ ಪದಕ ಹರಳೋಲೆ ಮೂಗುತಿ ಬಂದಿ ತೋರ ಮುತ್ತಿನ ಸರವು
ಚಾರು ಸುರತ್ನದ ಕಿರೀಟವನಿಟ್ಟಿಹ ನೀರೆಗಾರತಿ ಬೆಳಗಿರೇ || ೭

೪೫. ನವರತ್ನದಾರತಿ
ರಾಗ : ಕಾಂಬೋಧಿ

ನವರತ್ನದಾರತಿ ತವಕದಿಂದೆತ್ತಿರಿ
ಭುವನಾಧಿವಾಸೆಗೆ ಭಕ್ತರ ಪೋಷೆಗೆ || ಪಲ್ಲವಿ

ಲಲಿತಲಲಾಟದೊಳ್ ತಿಲಕದಿಂ ಶೋಭಿಪ
ಲಲನಯರೆಲ್ಲರು ಫಲವನು ಬೇಡುತ || ೧

ಫಣಿಲೋಕ ರನ್ನೆಗೆ ಪರಮಸಂಪನ್ನೆಗೆ
ಜಿನದತ್ತಮಾತೆಗೆ ಗುಣರತ್ನಲೋಲೆಗೆ || ೨

ಧರೆಯೊಳು ಪೊಂಬುಜ ಪುರವರವಾಸೆಗೆ
ಪುರುಷವಿಲಾಸೆಗೆ ಪದ್ಮಿಣಿದೇವಿಗೆ || ೩

೪೬. ಮಂಗಳಂಮಂಗಳಂಭವಂತು

ಮಂಗಳಂ ಮಂಗಳಂ ಭವಂತು ತೇ ಮಂಗಳಂ ಮಂಗಳಂ || ಪಲ್ಲವಿ

ಸಮನಸವಂದ್ಯೆಗೆ ಸುಖಫಲದಾತೆಗೆ
ವಿಮಲಕೋಮಲತರ ರೂಪಿಣಿಗೆ
ಅಮಿತ ಮಹಿಮೆಗೆ ಯಾಶ್ರಿತ ಪೋಷೆಗೆ
ದ್ಯುಮಣೀಂದು ಕೋಟಿ ಸಂಕಾಶಳಿಗೆ ಮಂಗಳಂ ಮಂಗಳಂ || ೧

ಭೃಂಗ ಕುಂತಳೆಗೆ ಭರಿತ ಪೂರ್ಣತೋಷೆಗೆ
ಮಂಗಳಾಕಾರೆ ಸರ್ವೇಶ್ವರಿಗೆ
ತುಂಗ ವಿಕ್ರಮೆಗೆ ಭುಜಂಗನರಾಣಿಗೆ
ಸಂಗೀತ ಲೋಲೆಗೆ ಶುಭಫಲಕಾರೆಗೆ ಮಂಗಳಂ ಮಂಗಳಂ || ೨

ವಾರಿಜನೇತ್ರೆಗೆ ವಾಸವಸ್ತೋತ್ರೆಗೆ
ಭೂರಿದುರಿತ ಭಯ ಹಾರಿಣಿಗೆ
ಘೋರವಿಷ ಸಚರಾಚರದ ಜೀವಗಳಿಗೆ
ದೊರೆಯಾಗಿಹ ಪರುಷ ಪದ್ಮಾಂಬಿಕೆಗೆ ಮಂಗಳಂ ಮಂಗಳಂ || ೩

೪೭. ಆಯಾಸವಹುದೇಪದ್ಮಿಣಿಯೇ

ಆಯಾಸವಹುದೇ ಪದ್ಮಿಣಿಯೇ ನಿನಗಾಯಾಸವಹುದೇ
ದೇವಿ ಮಹಾದೇವಿ! ಭುವನ ಸಂಜೀವಿ! || ಪಲ್ಲವಿ

ಜೀವದಯಾಧಿಕಾರಿಯು ಎಂಬ ಬಿರುದುಳ್ಳ
ಭಾವಜ ವಿಜಯನ ಯಕ್ಷೆ ಪ್ರತ್ಯಕ್ಷಳೇ
ಆಯಾಸವಹುದೇ ಪದ್ಮಿಣಿಯೇ ನಿನಗಾಯಾಸವಹುದೇ || ೧

ಕರಣತ್ರಯದಿ ನಿತ್ಯ ಚರಣಸೇವೆಯಂ ನಿನ್ನ
ನಿರುತ ಭಕ್ತರು ಮಾಳ್ಪ ದುರಿತ ನೀಗಿತು ಎನ್ನ
ಆಯಾಸವಹುದೇ ಪದ್ಮಿಣಿಯೇ ನಿನಗಾಯಾಸವಹುದೇ || ೨

ಸ್ಥಿರವಾಸೆ ವೇಣ್ಪುರ ಹಿರಿಯ ಬಸದಿಯೊಳು
ವರ ಶಾಂತಿನಾಥನ ಪರಮ ಸುಭಕುತಳೆ
ಆಯಾಸವಹುದೇ ಪದ್ಮಿಣಿಯೇ! ನಿನಗಾಯಾಸವಹುದೇ || ೩

೪೮. ಮಂಗಳಂಮಂಗಳಂಪದ್ಮಾವತೇ

ಮಂಗಳಂ ಮಂಗಳಂ ಪದ್ಮಾವತೇ ಮಂಗಳಂ ಮಂಗಳಂ
ಇಂದುವದನೆ ಆರವಿಂದನಯನೆ ಮಕ
ರಂದವಾಸೆಗೆ ಶುಭ ಮಂದಿರೆಗೆ ಕಂದಣವನು ಮಾಡಿ
ಕಂದನ ಸಲಹಿದ ಮಂದಯಾನೆಗೆ ಮಧುಕರ ವಾಣಿಗೆ || ೧

ಅಟ್ಟಿ ದುರುಳ ಹೊಯ್ ದಿಟ್ಟು ಭೂತಳದೊಳು
ಇಷ್ಟ ಸಿದ್ಧಿಯನೀಗ ಕೊಟ್ಟಳಿಗೆ
ಕಟ್ಟಾಣಿ ಮಣಿಗೆ ಕಾರುಣ್ಯಾಬ್ಧಿ ಸೋಮೆಗೆ
ದಿಟ್ಟೆ ಮದಾಂಬಿಕೆ ಪಟ್ಟವರ್ಧನೆಗೆ ಮಂಗಳಂ ಮಂಗಳಂ || ೨

ಕುಕ್ಕುಟಾಹಿಯನೇರಿ ಸೊಕ್ಕಿದ ಗ್ರಹಗಳ
ದಿಕ್ಕಿಗೆ ಬಲಿಯನಿಕ್ಕಿದ ಧೀರೆಗೆ
ಚಿಕ್ಕ ಬ್ರಹ್ಮಾಂಕನ ದುಃಖವ ಪರಿದಿಟ್ಟ
ಚೊಕ್ಕ ಪೊಂಬುಜದ ಪದ್ಮಿಣಿ ದೇವಿಗೆ ಮಂಗಳಂ || ೩

೪೯. ಮಂಗಲಂಧರಣೇಂದ್ರ

ಮಂಗಲಂ ಧರಣೇಂದ್ರ ಪದ್ಮಾವತಿ!
ಶೃಂಗಾರ ರಸಭರಿತೇ || ಪಲ್ಲವಿ

ಧರಣೇಂದ್ರಗತಿಹಿತವಾದ ಸುಪಾಣಿಗೆ
ವರಗುಣ ಭೂಷಣೆಗೆ ವರಕುಕ್ಕುಟೋರಗವಾಹನ ಯಕ್ಷಿಗೆ
ಪರುಷ ಪದ್ಮಾವತಿ ಪರಮ ಪವಿತ್ರೆಗೆ ಮಂಗಲಂ || ೧

ವಾಣಿ ವಿಭವ ಕಲ್ಯಾಣಿ ಪಾಷಾಂಕುಶ
ಪಾಣಿ ಸದ್ಗುಣ ಮಣಿಗೆ ಏಣಾನೇತ್ರೆಗೆ ಪ್ರೇಮದಿಂ ಸಲಹುವ
ಕ್ಷೋಣಿಗಧಿಕ ಕಟ್ಟಾಣಿ ನಿಃಶ್ರೇಣಿಗೆ ಮಂಗಲಂ || ೨

ಖ್ಯಾತಿಕಲಿತ ಪೊಂಬುಚಪುರವಾಸೆಗೆ
ಪ್ರೀತಿ ಕರುಣಾನಿಧಿಗೆ ಭೂತಳದೊಳು ಭಕ್ತರ ಪರಿಪಾಲೆಗೆ
ಭೀತಿ ಹಾರಣಿ ಪದ್ಮಾವತಿ ದೇವಿಗೆ ಮಂಗಲಂ ಧರಣೇಂದ್ರ || ೩

೫೦. ವಾರಣಯಾನೆವೈಯ್ಯಾರಿಣಿಗೆ

ವಾರಣಯಾನೆ ವೈಯ್ಯಾರಿಣಿಗೆ ಶುದ್ಧ
ಸಾರರಸಮ್ಯಕ್ತ್ವೆಗಾರತಿ ಎತ್ತಿರೆ || ಪಲ್ಲವಿ

ದ್ವಾದಶದ್ವಯ ತೀರ್ಥವಸತಿ ವಾಸಿನಿಗೆ
ಬೋಧತ್ರಯಾಂಬಿಕೆಗೆ ಪದ್ಮಾಂಬಿಕೆಗೆ
ವೇದವೇದ್ಯಾಸಾರ ತತ್ವವಿಚಾರೆಗೆ
ಸಾಧಯಾಂಬುಧಿಗಾರತಿ ಎತ್ತಿರೇ ವಾರಣಯಾನೆ || ೧

ಅಷ್ಟೋತ್ತರ ಶತ ನಾಮಾಧಿಕಾರಿಗೆ
ದುಷ್ಟ ದೆವ್ವಗಳ ಮರ್ದಿನಿಗೆ
ಪಟ್ಟವರ್ಧನೆ ಪದ್ಮಗಂಧಿ ಪನ್ನಗವೇಣಿ
ಇಷ್ಟಾರ್ಥದಾಯಿಗಾರತಿ ಎತ್ತಿರೇ || ೨

ನರಸುರನಾಗಾರ್ಚಿತ ಪಾರಿಶ್ವೇಶನ
ಚರಣಾಬ್ಜಯುತ ಭೃಂಗ ಕನಕಲತಾಂಗಿಗೆ
ವರವೇಣುಪುರದ ಹಿರಿಬಸದಿ ಶೋಭಿಪದೇವಿ
ಚರಣ ಕಮಲೆಗಾರತಿಯೆತ್ತಿರೆ || ೩