೩೧. ಧೀರಚಂದ್ರಶ್ರೀಜಿನಾ
ರಾಗ : ಹಿಂದೂಸ್ಥಾನಿ ಕಾಪಿ ತಾಳ : ಆದಿತಾಳ
ಧೀರಚಂದ್ರ ಶ್ರೀಜಿನಾ ನೀರಜಾತಲೋಚನಾ
ಭೂರಿಭಕ್ತಿಯಿಂದಲಿ ಪರಿಪೂತ ವಂದಿಪೇ || ಪಲ್ಲವಿ
ಕಾಮರೂಪನಿಂದನಾ ಕೃತಸುತ ವಂದನಾ
ಕಾಮಿತಾರ್ಥಚಂದನಾ ಕೋಮಲಾಂಗ ಬಂಧನಾ || ೧
ಫಾಲಕಾಂತಚಂದಿರಾ ಪಾದಪೂತಮಂದಿರಾ
ಬಾಲಚಂದ್ರ ಸುಂದರಾ ಭವಿತಾಬ್ಜಕಂಧರಾ || ೨
ಸಾರದಿವ್ಯವಚನಾ ಕಂತುಶಕ್ತಿಮಥನಾ
ಪಾವನಾತ್ಮರಾಧಾನ ಪಂಡಿತಾರ್ಯಲಾಲನಾ || ೩
೩೨. ಧ್ಯಾನಿಸುವೇಜಿನಪದ
ರಾಗ : ಶಂಕರಾಭರಣ ತಾಳ : ಚಾಪುತಾಳ
ಧ್ಯಾನಿಸುವೇ ಜಿನಪನ ಮನದಿ ಧ್ಯಾನಿಸುವೇ || ಪಲ್ಲವಿ
ವನಜ ಪೀಠದೊಳಿರ್ದು ಅನಿಮಿಷರೆಲ್ಲರಿಂ
ದನವರತದೊಳಿರ್ಪ ಮನುಜರೊಂದಿತನ ಧ್ಯಾನಿಸುವೇ || ೧
ಕುಮತಾಂಧಕಾರವ ನಿಮಿಷದಿಂ ಕೆಡಿಸುತ
ಸಮವಸರಣಧರ ಅಮರೇಂದ್ರನುತನ || ೨
ಮಂದರಗಿರಿಯೊಳು ನಿಂದು ಸದ್ಭವ್ಯರ
ವೃಂದವ ಪೊರೆಯುವ ಚಂದ್ರಜಿನಪನ || ೩
೩೩. ನಂಬಿದೆನಂಬಿದೆಶೀತಲಜಿನಪನೆ
ರಾಗ : ಜಂಗಲ್ ತಾಳ : ಆದಿತಾಳ
ನಂಬಿದೆ ನಂಬಿದೆ ಶೀತಲಜಿನಪನೆ ಪಾಲಿಸು ಬಿಡದೆನ್ನ
ಕುಂಭಿನಿಯೊಳು ನಿನ್ನ ನಂಬಿದ ಭಕ್ತರ ಸಲಹುವ ಮೂರುತಿಯೇ || ಪಲ್ಲವಿ
ಅರಹಂತೇಶನೇ ವರಮುನಿವಂದ್ಯನೇ ಕರುಣಾಕೃಪಕರನೇ
ನಿರುತದಿ ನಿನ್ನನೆ ವರ್ಣನೆಗೈಯುವೆ ಪುರುಪರಮೇಶ್ವರನೇ || ೧
ರತಿಪತಿವಿಜಯನೆ ಅತಿಶಯಶಾಂತನೆ ಖ್ಯಾತಿಯನುಳ್ಳವನೇ
ಗತಿಯೆಂದು ನಿನ್ನನು ಅತಿಶಯದೊಳು ನಾನು ಸ್ತುತಿಸುವೆ ನಾಮವನು || ೨
ಮೂಢ ಮೂರರನು ಗಾಢದಿ ಗೆಲಿದನೆ ಗಾಢಾಂಧಕಾರಹರನೇ
ಕಾಡುವ ಮದಗಳನೋಡಿ ಗೆಲಿದನೆ ನಾಡಾಡಿಗೊಡೆಯ ನೀನೇ || ೩
ಧರೆಯೊಳು ಬೆಳ್ಗುಳ ಪುರಕಧಿಕರ್ತನೆ ನಿರತದೊಳಿರುತಿಹನೇ
ಘೋರದುರಿತಹರ ತ್ವರಿತದಿ ಭವ್ಯರ ಪೊರೆಯುತಲಿರುತಿಹನೇ || ೪
೩೪. ಶ್ರೀವಿಮಲಜಿನರಾಜ
ರಾಗ : ಮೋಹನ ತಾಳ : ಕಲ್ಯಾಣಿ
ಶ್ರೀವಿಮಲ ಜಿನರಾಜ ರಾಜ ಶ್ರೀವಿಮಲಜಿನರಾಜ || ಪಲ್ಲವಿ
ಅಮಲ ಕಮಲದಳ ನಯನವಿಶಾಲ
ವಿಮಲಚರಿತ್ರ ಸುಮಿತ್ರಮಾಂ ಪಾಹಿ ರಾಜಶ್ರೀ || ೧
ದೃಢಭಕ್ತಿಯೊಳ್ನಿನ್ನ ಚರಣವ ಪಿಡಿದು
ಪೊಡಮಟ್ಟು ಬೇಡಿಕೊಂಡರು ದಯೆ ಬಾರದೇ || ೨
ಸ್ಥಿರವಾಸ ಬೆಳ್ಗುಳಪುರವಾಸ ಶ್ರೀಜಿನ
ಗುರುಪಂಡಿತಾಚಾರ್ಯವರ್ಯ ಸುಪಾಲಾ || ೩
೩೫. ಸಮವಸರಣನೆಶ್ರೀ
ರಾಗ : ಬೇಗಡೆ ತಾಳ : ಆದಿತಾಳ
ಸಮವಸರಣನೆ ಶ್ರೀವಿಮಲನಾಥನೇ
ನಾಮ ಸ್ಮರಣೆಗೈವೆ ಭೂರಿಭಕ್ತಿಯಿಂದ || ಪಲ್ಲವಿ
ದೋಷ ಪದಿನೆಂಟ ನಾಶವನ್ನು ಗೈದೇ
ಭಾಸುರಾಂಗತೇಜ ಪೋಷಿಸೆನ್ನ ದೇವಾ || ೧
ಘೋರಕರ್ಮವೆಂಬ ಬೇರ ಕಿತ್ತು ಸುಟ್ಟು
ಸಾರಮೋಕ್ಷದಲ್ಲಿ ಸೇರುತಿರ್ಪುದಿದು || ೨
ಕಾಮಿತಾರ್ಥವನ್ನು ಪ್ರೇಮದಿಂದಲೀವೇ
ಸ್ವಾಮಿ ನಿನ್ನ ಧ್ಯಾನ ನೇಮದಿಂದ ಮಾಳ್ಪೇ || ೩
೩೬. ಹೊಂದಿದೆನಾಬಂದು
ರಾಗ : ಮೋಹನ ತಾಳ : ಅಟ್ಟತಾಳ
ಹೊಂದಿದೆ ನಾ ಬಂದು ವಂದಿಪೆನಿಂದು
ಚಂದದಿ ಸಲಹೋ ಪೊರ್ಣೇದು ವದನಸಿಂಧು
ಹಿಂದೆ ಸಕಲಭವ ಬಂಧುದೊಳಗೆ ಸಿಲುಕಿ
ನೊಂದೆನು ಬಹುಕಾಲ ಕಂದರ್ಪ ವಿಜಯಾ || ಪಲ್ಲವಿ
ಇಂದು ಮೊದಲು ಮನಸಂದು ಪೂಜಿಪೆ ಜಿನ
ತಂದೆ ನೀ ಸಲಹಬೇಕೆಂದು ನಂಬಿದೆ ನಿಮ್ಮ
ಚಂದಚಂದದಿ ನುತಿಪೆ ಯೆನ್ನನು
ಹೊಂದಿ ಕಾಡುವ ಕರ್ಮವನು ಮುದದಿಂದ
ಕೆಡಿಸುವ ದೇವ ನೀನಹುದೆಂದು ಸಾರಿದೆ ನಿಮ್ಮ ಚರಣವ || ೧
ಪುಟ್ಟಿದಂದಿನಿಂದ ಶ್ರೇಷ್ಠನೆಂದೆನಿಸಿ ನೀ
ಕಷ್ಟಪಡಿಸುವುದುಚಿತವೆನ್ನನೊಯಿಸಿ
ಇಷ್ಟದಿಂ ಪೂರ್ಣಕಟಾಕ್ಷವಿಟ್ಟನುಗಾಲ
ಕಷ್ಟವ ತ್ಯಜಿಸತಿಶ್ರೇಷ್ಠ ಶ್ರೀ ಜಿನ
ಪತೇ ಕೊಟ್ಟು ರಕ್ಷಿಸು ಸಂಪದವ ಮನ
ಮುಟ್ಟಿ ಭಜಿಸುವೆ ನಿಮ್ಮ ಪಾದವ
ಅಷ್ಟಗುಣಸಂತುಷ್ಟ ಎನ್ನೊಳ
ಗಿಟ್ಟು ಕರುಣಿಸು ದೇವ ಜಯಜಿನ || ೨
ಪಾವನರೂಪನೇ ಪರಹಿತಚರಿತನೇ
ಜೀವದಯಾಕರಮಾನಂದ ನೀನೇ
ಕಾಯ್ವುದೆನ್ನನು ಕವಿಜನಪರಿಪಾಲನೇ
ಭಾವಜಹರ ಭವರೋಗ ವಿನಾಶನೇ
ದೇವದೇವರದೇವ ನಿಮ್ಮಡಿ
ದಾವರೆಯನೊಂದಿರುವ ಭವ್ಯರ ಕಾಯ್ವ
ದ್ದೇವನಂತ ಜಿನೇಂದ್ರ ಬೇಗದಿ || ೩
೩೭. ಬೇಗದಿಂದಲಿಬನ್ನಿರೈ
ರಾಗ : ಶಂಕರಾಭರಣ ತಾಳ : ಆದಿತಾಳ
ಬೇಗದಿಂದಲಿ ಬನ್ನಿರೈ ಶ್ರೀಜಿನಾಲಯಕ್ಕೆ
ಜ್ಞಾನಮೂರ್ತಿ ಶ್ರೀ ಅನಂತನ ನೋಡುವ || ಪಲ್ಲವಿ
ಅಷ್ಟಕರ್ಮವ ಗೆಲಿದ ಶ್ರೇಷ್ಠಪರಮಾತ್ಮನ
ಸೃಷ್ಟಿ ಮೂರನು ಪರಿಪಾಲಿಪನ
ನಿಷ್ಟೆಯಿಂ ಬೇಡಲಭೀಷ್ಟಸಿದ್ಧಿಯ ಕೊಡುವ
ದಿಟ್ಟ ಅನಂತ ಜಿನೇಂದ್ರನ ಪೂಜೆಗೆ || ೧
ಅಕ್ಷಯ ಸೌಖ್ಯನ ಅನಂತಸುಜ್ಞಾನನ
ಯಕ್ಷಗಂಧರ್ವಸನ್ನು ತಪದನ
ರಕ್ಷಿಸು ನೀನೆಂದು ಅಕ್ಷಯಫಲಗಳ
ಪೇಕ್ಷಿಪ ಜನರಿಗೆ ಈಕ್ಷಿಸಿ ಕೊಡುತಿರ್ಪ || ೨
ಪ್ರೇಮದಿಂ ಭಕ್ತರ ಸಾಮದಿಂ ಪೊರೆವನ
ನಾಮಸಾಸಿರದೊಳು ಮೆರೆವವನ
ಕಾಮನ ಗೆಲಿದಿಳೆಯೊಳ್ ಖ್ಯಾತಿವ
ಡೆದನ ಶ್ರೀಮುಕ್ತ್ಯಂಗನೆಯೆರಸನ ಪೂಜೆಗೆ || ೩
೩೮. ಶ್ರೀಮದನಂತೇಶಾಮುನಿಜನ
ರಾಗ : ಶಂಕರಾಭರಣ ತಾಳ : ಆದಿತಾಳ
ಶ್ರೀಮದನಂತೇಶಾ ಮುನಿಜನ ಪ್ರೇಮಿ ಭಕತಪೋಷಾ
ಗುಣಧಾಮವರಸುತ್ರಾಮವಂದಿತ ನಾಮ ಸರ್ವೇಶಾ || ಪಲ್ಲವಿ
ಭೂತಳದಿ ಮೆರೆವ ಸಾಕೇತಪುರವರವ
ಬಹುನೂತನದಿ ಪೊರೆದಾತ ಮೃಗತತಿ ನಾಥಸೇನಭವ || ೧
ಕ್ಷಿತಿಪತಿಸತಿಯೆನಿಪ ಲಕ್ಷ್ಮೀಮತಿಸುತ ಯತಿಜಿನಪ
ಸ್ಮರಜಿತ ನತಪಾಲಿತ ಮನಿಯುತರಂಜಿತ ಸತತಾನಂದಧೃತಾ ಶ್ರೀಮದ || ೨
ಕಾರ್ಕಳಪುರವಾಸ ಸೋಮಾರ್ಕಕನಕಭಾಸ
ಪದಿನಾರ್ಕೂಡುತಲೆರಡೇರ್ಕೆಯ ದೋಷ ನೀರ್ಕಡಿಗೈದರಸ || ೩
೩೯. ಶಾಂತಿಜಿನೇಂದ್ರನಿಮ್ಮ
ರಾಗ : ಕಲ್ಯಾಣಿ ತಾಳ : ಅಷ್ಟತಾಳ
ಶಾಂತಿಜಿನೇಂದ್ರ ನಿಮ್ಮ ಶ್ರೀಚರಣವ
ಚಿಂತಿಸದೆ ನಾ ಮುನ್ನ ಭ್ರಾಂತಾಗಿ ಕರ್ಮದ
ಕಾಂತಾರದೊಳು ಸಿಲ್ಕಿ ಸಂತಾಪಗೊಳಗಾದೆನು ಶ್ರೀಜಿನದೇವ || ಪಲ್ಲವಿ
ಕಾಮಸಂಹಾರಮಾಡಿದೆ ಸ್ವಾಮಿಯೆ ಮುಕ್ತಿ
ಕೋಮಲೆಯೊಡಗೂಡಿದೆ ಪ್ರೇಮದಿಂದಲಿ ನಿಮ್ಮ
ನಾಮವ ನೆನೆದರೆ ಆ ಮಹಾಕರ್ಮದೂರ ಶ್ರೀ ಜಗತ್ಪಾಲ || ೧
ಮೂರುಶಲ್ಯಗಳ ಬಿಟ್ಟು ನಿರ್ಮಲವಾದ
ಈರಾರುತಪವ ತೊಟ್ಟು ಗಾರುಮಾಳ್ಪಘವೃಕ್ಷ
ಬೇರನೆಲ್ಲವ ಸುಟ್ಟು ಧೀರನೀನಹುದೆ ಸ್ವಾಮಿ ಸಾಸಿರನಾಮಿ || ೨
ಹೆಣ್ಣು ಹೊನ್ನು ಮಣ್ಣನು ನೆನೆದು ಬಲು
ಬಣ್ಣ ಬಡುತಿಹೆನು ನಾಂ ಸನ್ನುತಧ್ಯಾನದೊಳಿನ್ನು ಪಾಲಿಸು ಬೇಗ
ಚೆನ್ನಾಗಿ ಸಲಹೊ ದೇವಾ ಭಕ್ತರ ಕಾಯ್ವಾ || ೩
ಮಂಗಲಮಹಿಮ ನೀನು ಭಕ್ತರಂತ
ರಂಗಾಂಬುಜಕೆ ಭಾನು ಅಂಗಜಹರನ ಪಾದಂಗಳಿಗೆರಗುವೆ
ಹಿಂಗಿಸು ಭವರೋಗವ ಭವ್ಯರ ಕಾಯ್ವಾ || ೪
ರಾಗ ರೋಷವ ಕೆಡಿಸಿ ರಂಜಿಸುವ ಶ್ರೀ
ಮೇಗುಂದದೊಳು ನೆಲಸಿ ಬೇಗದಿಂದಲಿ ನಿಮ್ಮ ನಾಮವ ನೆನೆದರೆ
ಆ ಮಹಾಕರ್ಮದೂರ ಶ್ರೀ ಜಗತ್ಪಾಲಾ || ೫
೪೦. ಜಿನಪತಿಪಾಲಿಸುಬೇಗ
ರಾಗ : ಮೋಹನ ಕಲ್ಯಾಣಿ ತಾಳ : ಆದಿತಾಳ
ಜಿನಪತಿ ಪಾಲಿಸು ಬೇಗ || ಪಲ್ಲವಿ
ಕುನಯವ ಕೆಡಿಸುತ ವಿನಯರ್ಗೆ ಸುಪಥವ
ಅನುನಯದಿಂದಲಿ ತೋರಿದೆ || ೧
ಮಾರನ ಮುರಿದು ಹಮ್ಮೀರನೆನಿಸಿ ಮುಕ್ತಿ
ನಾರಿಮಣಿಗೆ ಕಾಂತನಾದೆಯೈ || ೨
ಮೆರೆಯುವ ಬೆಳ್ಗುಳು ಪುರವನ್ನು ಪೊರೆಯುವ
ಅರಜಿನದೇವನೆ ಪಾಲಿಸೋ || ೩
Leave A Comment