೧೧. ಸುವ್ವಾಲಾಲೆಸುವ್ವಿ

ಸುವ್ವಾಲಾಲೆ ಸುವ್ವಿ ಸುವ್ವಾ
ಸುವ್ವನಾತ್ಮನೆಂಬನೆಲ್ಲ ತತ್ಪರದಿ ಕಟ್ಟಿಸು ಮನಿ || ಪಲ್ಲವಿ

ಆರು ತಪದೊಳುನಾಗಿ ಸೊಯಿಗೆ
ಮೂರು ದೇಹದ ಒರಳನಿದು
ನೀರೆ ಧ್ಯಾನದ ಒನಕೆವಿಡಿದು
ಕೇರು ಬೇಗ ಬುದ್ದಿಯ ಮೊರಡಿ || ೧

೧೨. ಪಾಯೋಪಗಮನದೊಳ

ಪಾಯೋಪಗಮನದೊಳತಿಶಯ ಮುರ್ತಿಯು
ಶ್ರೀಯ ಗೆಲಿದ ಮಹಾದೇವನ ಚೆಲುವನ ತೋರಯ್ಯ || ೧

ಮೂರುಲೋಕವಗೊಲಿದೆರಗಿ ಸುತ್ತಿಹರಿಂದ
ವಾರಿಜದಳ ಶೃಂಗಾರವ ನೋಡುವ ತೋರಯ್ಯ || ೨

ಅಲರ ಶರ ಭರದ ಸಮಜಾನುಗ
ಳೊಲವಿನ ಸೊಬಗನುವೀಪರಿಯ ನೋಡುವೆ ತೋರಯ್ಯ || ೩

ಹೊಸ ಮಿಸುಣಿಯ ರತ್ನಕಂಭ ಕದಳಿಗಳ
ಪೊಸದನವೆನ ಲೇಸವಿಹ ಕೊಡೆಗಳ ಚೆಲ್ವ ತೋರಯ್ಯ || ೪

ಧರೆಯೊಳಗತಿಶಯ ದೇವರ ದೇವನಗರಿ
ಪುರದ ವಿಸ್ತಾರವ ನೊರೆವಚ್ಚರಿಯಾಗಿ ತೋರಯ್ಯ || ೫

ಶಂಖದ ಬಿಂಕದ ಅಂಗಕ್ಕೆ ಕೊರಳಿನ
ಪಂಕಜ ಬಾಣನ ಗೆಲಿದ ದೇವನ ಬೇಗ ತೋರಯ್ಯ || ೬

ಆದಿಶೇಷನದಿ ಸಭಾವ ವೀಕ್ಷಿಸಿ ಸುಪ್ರಮೋ
ದದಿ ನಿಂದನೆಂದು ನೃತಿವರ ಸೊಬಗನ ತೋರಯ್ಯ || ೭

೧೩. ನಿನ್ನನೇನಂಬಿಬಂದೆ

ನಿನ್ನನೇ ನಂಬಿ ಬಂದೆನೆಂಬಭಿ ಮಾನವಿಲ್ಲವೇ
ಕನ್ನಡಿ ತಾಯೇ ನೊಂದೆನಯ್ಯ ಕರುಣವಿಲ್ಲದೆ || ಪಲ್ಲವಿ

ಸಂಚಿತ ಫಲದೆಂತು ಮಾಳ್ಪುದೆಂತು ಸೈರಿಪೆ
ಸಂತಸ ವಿರಹದೆಂತು ಮಾಳ್ಪುದೇಕೆ ಅಳುಕಿದೆ || ೧

ಧರಣಿಯೊಳತಿ ತಿರುಕ ದೈವಗಳನು ಸ್ಮರಿಸದೆ
ಭರದಿಂದ ಭಾವದಿಂದ ನಿಮ್ಮಡಿಯ ಮರೆಯದೇ || ೨

ಕೇಶವನು ಪರಿಹರಿಸಿ ಎನಗೆ ಲೇಸದೋರಿಸು
ಈ ಶರೀರವನ್ನು ಸಲಹಿ ಕೀರ್ತಿ ಹಬ್ಬಿಸು || ೩

೧೪. ನಾಮನಸೇಸೈರಿಸದು
ರಾಗ : ಕಾಂಬೋಧಿ

ನಾ ಮನಸೇ ಸೈರಿಸದು ಮಾನ
ನೀ ಮಣಿ ನಾ ಮನಸೇ ಸೈರಿಸದು || ಪಲ್ಲವಿ

ಭಾವಜಹರ ಗೊಮಟೇಶನ ಸುರಚಿರ
ಪಾದಾಭಿಷೇಕವ ಮಾಡದೇ ನಾ || ೧

ಭಕ್ತಜನಂಗಳಿಂತರಿಕೆ ಭಾವತಿ
ಪೂಜಾ ಭಾವವ ನೋಡದೆ ನಾ || ೨

ಪಂಡಿತವಿಮಲ ಸುಪಂಡಿತ ಗುರುಗಳ
ಮಂಡಲ ಸೇವೆಯ ಮಾಡದೇ ನಾ || ೩

೧೫. ತಿಳುಹಿದರಿಲ್ಲವಯ್ಯಾ

ತಿಳುಹಿದರಿಲ್ಲವಯ್ಯಾ ಪೂರ್ವದೊಳಾರು
ತಿಳುಹಿದರಿಲ್ಲವಯ್ಯಾ ಸಣ್ಣವರಾಗಿ
ತಿಳುಹಿದರಿಂದುತನಕ ಕಷ್ಟ ಸಂಸಾರ
ದೊಳಗೆ ನಾ ತೊಳಲುವೆನು || ಪಲ್ಲವಿ

ಹೊಸ ವಿಷಯ ಸುಖ ವಿಷವೆಂದು ಭಾವಿಸಲಜ್ಞಾನ
ರಸವ ಸೇವಿಸಿ ತಾನೆ ಕೆಡುವ ಮೈಯ್ಯತಾಪಕಾಗಿ ಸ
ಲಿಸಿ ನಿತ್ಯಾನಂದ ಶಿವಪಥವ ನೀ ಪಡೆಯೆಂದುತಿರ್ದೆ || ೧

ಕಾಡು ಕಥೆಗೆ ಕಿವಿಗೊಡದಿರು ವಾಸಲೋಕರ ಕಥೆಯ ಕೇಳು
ವಾಕು ಮನವ ಬಯಲಿಗೆ ಬದ್ಧಲಿಸಿದ ರ
ತ್ನಾಕರಾಧೀಶ್ವರನ ನೀ ನೆನೆಯೆಂದುತಿರ್ದೆ || ೨

ರಾಗರೋಷವ ಬಿಡುಕಂದ ನೀ ಕಡು ಶಾಂತ
ನಾಗಿ ಕರ್ಮವಗೆಲ್ಲೆಂದು ಯೋಗಿ ಮಹೇಂದ್ರ ಕೀರ್ತಿಯ
ಹಾಗೆ ಕೃಪವಂತನಾಗಿ ಗೆಲ್ದವನಲುಗಿ ಸದ್ಧರ್ಮವೆನುತಿರ್ದೆ || ೩

೧೬. ನಮೋನಮೋನಮೋ

ನಮೋ ನಮೋ ನಮೋ ನಮೋ ನಮೋ
ನಮೋ ಸ್ವಾಮಿ ನಮೋ ಗುರುವೇ
ನಮೋ ನಿಮ್ಮ ಸಾಮರ್ಥ್ಯಕೆ ಸರಿಯುಂಟೆ
ನಮೋ ಸ್ವಾಮಿ ಕುಮಾರಯೋಗೀಂದ್ರ || ಪಲ್ಲವಿ

ಅಗ್ನಿರಾಜನ ಕುಮಾರ
ನಗ್ನವೇಷಧಾರಿ ಭವ
ಲಗ್ನದೇ ಕರ್ಮವಧ್ಯಾನ
ದಗ್ನಿಯಿಂದ ಸುಟ್ಟೆಯಲ್ಲಾ || ೧

ಸೇರಿದೆಂಟು ಪ್ರಾಯದ ಕು
ಮಾರಮುನಿ ತತಗೈದ
ಕಾರಣಾದಿ ಪರ್ವತ ಕು
ಮಾರಾದ್ರಿಯಾಯಿತಲ್ಲಾ || ೨

ಬೀಸಿ ಆ ಹಳೆಯ ಬೆಟ್ಟದಲ್ಲಿ
ಹೊಸ ಮಲೆಯ ಗುಹೆಯಲ್ಲಿ
ಎಸೆದಿರ್ದ ಕಾರಣ ನಿಮ್ಮ
ಹೆಸರು ತೀರ್ಥವಾಯಿತಲ್ಲ || ೩

ಕ್ರೌಂಚನಾರೊ ಪೊಡಪುರಡಿ
ಮುಂಚೆ ನವವಿಲೆರೆಕಾಯ
ಕಂಚುಕೆಯನಿಳುಹಿ ಮೋಕ್ಷ
ದಂಚಿಗೆಲಾಗಿಸಿದೆಯೆಲ್ಲ || ೪

ಕೀರ್ತಿಸಲಳವೆ ಪುಣ್ಯ
ಮೂರ್ತಿ ರತ್ನಾಕರನ ಸಂ
ಪೂರ್ತಿಯ ಗುರುವೆ ಸ್ವಾಮಿ
ಕಾರ್ತಿಕಯೋಗೇಂದ್ರ ಚಂದ್ರ || ೫

೧೭. ಬಾಬಾಬಾಬಾಬೇಗ
ರಾಗ : ಬೇಹಾಗ್ ತಾಳ : ಆದಿತಾಳ

ಬಾ ಬಾ ಬಾಬಾ ಬೇಗ ಭಾವಜಹರ ಜಿನರಾಜನೆ ನೋಡುವ
ಬಾ ಬಾ ಬಾ ನೀ ಬೇಗನೆ ಭವರೋಗವೈದ್ಯನು
ಭವಗಳ ರೋಗದ ಬೇರ ಕೀಳುವ ಬೇಗ || ಪಲ್ಲವಿ

ಚಂದವ ಬೀರುತ ಸುಂದರವದನದಾ ನಂದದ ಕಳೆಯನು
ಇಂದು ನೋಡುವ ಬೇಗ ಬಾ ಬಾ || ೧

ಮಾರನ ಬಾಧೆಯ ದೂರವ ಮಾಡುತ
ಘೋರಪಾಪವ ಪರಿಹಾರ ಮಾಡುವ ಬೇಗ ಬಾ ಬಾ || ೨

ಚಿಂತೆಗಳೆಲ್ಲವ ಶಾಂತವ ಮಾಡುತ
ಕಂತುವಿಜಯಶ್ರೀ ಅನಂತನ ನೋಡುವ ಬಾ ಬಾ || ೩

೧೮. ಈಶಭೋನಾಕೇಶವಂದಿತ
ರಾಗ : ಕೇತಾರಗೌಳ ತಾಳ : ರೂಪಕತಾಳ

ಈಶ ಭೋ ನಾಕೇಶವಂದಿತ ದೋಷದೂರ ವೀತರಾಗ
ಭಾಸುರಾಂಗ ಭವವಿನಾಶ ತೋಷಭರತೋ ನೌಮಿ ತ್ವಾಂ ಜಿನ || ಪಲ್ಲವಿ

ಕೇವಲಾಮಲಬೋಧಮಂಡಿತ ಶ್ರಾವ್ಯದಿವ್ಯವಚೋಮೃತ
ಸ್ವಾಮಿಪಾದ ಭಕ್ತಭೂತಂ ರಕ್ಷಮಾಂ ಸದಾ ಮುದಾ || ೧

ಶ್ರೀಜಿನೇಶ್ವರ ಭವ್ಯವಂದಿತ ಸ್ವಾತ್ಮಜಾತಸುಖೋದಯ
ಪ್ರಾರ್ಥಯೇsಭಿವಾದಯೇ ಗುಣಾಭಿಸಂಧಿಪೂರ್ವಕಂ || ೨

ಯಾಮಿನೀಪತಿದ್ವಾದಶಾತ್ಮ ಸುಭಾಸುರಾಂಗವಿರಾಜಿತ
ದ್ರವ್ಯಭಾವಭೇದಭಿನ್ನ ಕರ್ಮಜಾಲವಿವರ್ಜಿತ || ೩

೧೯. ಕರುಣಾಂಬುಧೇಕಂತುವೀರದೂರ
ರಾಗ : ಕಾನಡ ತಾಳ : ಆದಿತಾಳ

ಕರುಣಾಂಬುಧೇ ಕಂತುವೀರದೂರ!
ಪಾರುಮಾಡೋ ದೇವಾಧಿದೇವನೇ || ಪಲ್ಲವಿ

ಕಾಲವ್ಯಾಲನನ್ನು ಕಾಲಗಾಣಿಸಿ ನೀ
ಧೂಳಿಗೈದ ದೇವೇಂದ್ರವಂದ್ಯಪಾದ || ೧

ಜ್ಞಾನಮೂರ್ತಿ ನೀನು ಜ್ಞಾನಹೀನನಾದ
ದೀನನನ್ನು ಕಾಯೋ ಕರುಣಾಧರದೇವ || ೨

ಜನ್ಮ ಜನ್ಮದಲ್ಲಿ ನಿರ್ಮಲಾತ್ಮನಾದ
ಚಿನ್ಮ ಯಾತ್ಮನೆ ನೀ ಕಾಣದಿರ್ದೆಯೊ ನಾಥ || ೩

ನಾರಕಾದಿದೇವ ತಾಂತ್ಯಜಾತಿಪಾರಾ
ವಾರದಲ್ಲಿ ಭೂರಿ ದಾರುಣಾರ್ತನಾದೆ || ೪

ಬಾರಿಬಾರಿಗಾಶಾಪಾಶದಲ್ಲಿ ಸಿಲುಕಿ
ಸಾರಧರ್ಮಕಾನು ದೂರನಾದೆ ಬೀಳ್ದೆ || ೫

ಕೇವಲಾವಬೋಧ ಸಾವನೋವನಾಗಿ
ನ್ನಾವ ಭಾವದಿಂದೆ ದೇವ ನೀಗಲಾಪೆ || ೬

ನಿನ್ನ ನಾಮವೆಂಬ ಸಾರಮಂತ್ರದಿಂದೆ
ಖಿನ್ನದೇಹಿಗಳು ಭಿನ್ನಪಾಪರಾಹರ‍್ || ೭

ಮೋಹಜಾಲದಿಂದ ಬಾಹ್ಯನಾದೆ ನೀನು
ದೇಹಭಾರವನ್ನು ನೀಗಿಸಯ್ಯ ನಾಥ || ೮

ದಾರಿಗಾಣದೆ ಸಂಸಾರಕಾನನದಿ
ಭೂರಿತಾಪಗೊಂಡೆ ದಾರಿದೋರೋ ಬೇಗ || ೯

ಪಾವನಾತ್ಮ ನಿನ್ನನಾವಕಾಲಕ್ಕಾನು
ಭಾವಿಸುವೆ ಸ್ವಾಮಿ ಭಾವಭಕ್ತಿಯಿಂದ || ೧೦

೨೦. ಪರಿಪಾಲಿಸೈವರವೀತರಾಗ
ರಾಗ : ಆಭೋಗಿ ತಾಳ : ಆದಿತಾಳ

ಪರಿಪಾಲಿಸೈ ವರವೀತರಾಗ ಮೇರುಧೀರನೇ ಶೂರಾಗ್ರಣಿ
ಪರಮಪಾವನ ಭರದಿ ತೋಷ ಬೀರಿ ಮಾರಾರಿದೇವ ಶ್ರೀವೀತರಾಗ || ಪಲ್ಲವಿ

ಭವಬಂಧನಾಶಕರ ಕೋಮಲಾಂಗ
ಭಾವಶುದ್ಧದಿಂದಲಿ ಶ್ರೀಶನೆ ಪಾಲಿಸೈ || ೧

ತವ ಪಾದಪಂಕಜಯುಗಲವನ್ನು
ರವಿಕೋಟಿತೇಜ ಭಾವಿಸುವೆ ಜಿನ || ೨