೫೧ವಸಂತವಾಡಿರಿಶಶಿಮುಖಿಯರು
ರಾಗ : ಮೋಹನ ತಾಳ : ಆದಿತಾಳ

ವಸಂತವಾಡಿರಿ ಶಶಿಮುಖಿಯರು ಕೂಡಿ
ವಸುಧೇಗೊಡೆಯ ಜಿನರಾಜರಿಗೆ
ಬಿಸಜಮುಖಿಯರೆಲ್ಲ ನಸುನಗೆಯಿಂದಲಿ
ಎಸೆವಷ್ಟ ಗಂಧದ ಓಕುಳಿಯಾಡಿರಿ || ಪಲ್ಲವಿ

ಚಂದ್ರದಿಂದೊಪ್ಪುವ ನಂದೀಶ್ವರ ದ್ವೀಪ
ದಂದವ ಮನದೊಳು ಭಾವಿಸುತ
ಇಂದ್ರಾದಿಸುರರೆಲ್ಲ ಜಯ ಜಯವೆಂದು
ಕುಂದದರ್ಚಿಪರು ಜಿನರಾಜರ್ಗೆ ಜಯವೆಂದು || ೧

ನಂದೀಶ್ವರದ್ವೀಪಮಂದರದೆಶೆ ನಾಲ್ಕ
ರಿಂದಲಿ ಶೋಭಿಸುತ್ತಿರುವ
ಬಂಧುರದಧಿಮುಖ ಅಂಜನರತಿಕರ
ದಿಂದಲಿ ರಾಜಿಪ ಜಿನರಿಗೆ ಭಕ್ತಿಯೊಳ್ || ೨

ದೆಶೆಯೊಂದರೊಳಗೆ ಎಸೆವ ತ್ರಯೋದಶ
ಅಸಮರತ್ನದಿ ನೆಲೆಗೊಂಡ
ಬಸದಿಗಳಿರಲದರೊಳಗೆ ವರ್ತಿಸುತಿಹ
ಶಶಿಕೋಟಿಭಾಸ ಜಿನೇಶರ್ಗೆ ಜಯವೆಂದು || ೩

ಜಿನಗೃಹವೊಂದರೊಳ್ ಘನಬಿಂಬ ನೂರೆಂಟು
ಮಿನುಗುವ ರತ್ನಖಚಿತದಿ ನನು ಐ
ದುನೂರುತ್ಸೇಧದಿ ರಾಜಿಪ
ಜನರಿಗೆ ಜಯಜಯವೆಂದು ಬೇಗದಿ ಬಂದು || ೪

ಐದುಸಾವಿರದ ಆರ್ನೂರ
ಪದಿನಾರು ವೈಡೂರ್ಯಖಚಿತಬಿಂಬಗಳು
ಐದು ಕಲ್ಯಾಣದೊಡೆಯರಾಗಿ
ನಿಂದಿಹ ವೈಭವದಿಂದಲಿ ಜಿನರಡಿಗೆರಗಿ || ೫

ಆಷಾಢಕಾರ್ತ್ತಿಕಫಾಲ್ಗುಣಮಾಸದಿ
ವಾಸವರತಿ ಸಂಭ್ರಮದಿ ತಾಳ
ದಷ್ಟಮಿಯಿಂದೆಂಟು ದಿವಸ ಪರಿ
ಸಾಸಿರ ನಾಮವ ಭಜಿಸುತ್ತ ಜಿನರ || ೬

ಮಹಾಮಹಿಮೆಯಿಂ ಮಹದಭಿಷೇಕವ
ಮಹಾಶ್ರೀವೀತರಾ ಗರಿಗೆ
ಬಹುವಸ್ತುಗಳಗೂಡಿ ಎಸೆವರು ಕ್ಷೀರವ
ಬಹುರತ್ನದರ್ಘ್ಯಗಳಿಂದಲಿ ಪೂಜಿಸಿ || ೭

ಜಯಭೇರಿ ಸಿಂಹನಾದವು ಶಂಖ ಮೊದಲಾದ
ನಯನಾಟ್ಯಾನೃತ್ಯಗೀತಗಳು
ಭಯವಿಲ್ಲದರುಹನ ಪಾದಮೂಲದೊಳಾಗ
ಜಯಜಯವೆಂದು ಪಾಡುವರು ತೋಷದಿ ನಿಂದು || ೮

ಪದಿನಾಲ್ಕುನದಿಯ ಜಲವ ತಂದರ್ಚಿಸುವರು
ಹೃದಯಶುದ್ಧದಿ ಸುರರೆಲ್ಲ
ಸದಮಲವಾಗಿಹ ಪರಿಮಳಪುಷ್ಪವ
ಒದಗಿಸಿ ಪೂಜಿಸುತ್ತಿಹರು ಸುರರು ಬಂದು || ೯

ಜಲಮೊದಲಾದಷ್ಟವಸ್ತುವಿಂ ಪೂಜಿಸಿ
ಕಲಿಲಹರರ ಸ್ತೋತ್ರಗೈದು
ಒಲವಿನಿಂದರ್ಘ್ಯವ ಕೆಯ್ಗೊಂಡು ಸುರರೆಲ್ಲ ಬಲಗೊಂಬರತಿ
ಚಂದದಲಿ ಮೋದವ ಪೊಂದಿ || ೧೦

ಜಯ ಜಯವೆಂದತಿ ಭಯಭಕ್ತಿಯಿಂದಲಿ ವಿ
ನಯದೊಳ್ ಸುರರೆಲ್ಲ ಕೂಡಿ
ದಯೆಯಿಟ್ಟು ರಕ್ಷಿಸೆಂದೆಲ್ಲರು ವಂದಿಸಿ
ನಯದಿ ಪೋಪರು ಚತ್ತಾರಿಪಾಡ್ಯದೊಳು || ೧೧

೫೨. ಅಸಗನೀತನಲ್ಲಕರ್ಮವ
ರಾಗ : ಮಧ್ಯಮಾವತಿ ತಾಳ : ಏಕತಾಳ

ಅಸಗನೀತನಲ್ಲ ಕರ್ಮವ ಕುಸುರಿ ಒಗೆಯಬಲ್ಲ
ಪೊಸಮಡಿವಾಳನು ಕೊಳೆಯಾತ್ಮನ ತಾಮಸವಿಲ್ಲದೆ ಒಗೆವನು ನೋಡೆಲ್ಲ || ಪಲ್ಲವಿ

ಆರು ತಪದೊಳದ್ದಿ ಪಂಚಾಚಾರದೊಳಗೆ ಹೊದ್ದಿ
ತೋರುವ ಚತುರಾರಾಧನೆಗಳು ಚೌಗಾರಸುತಪದ ಬಿಸಿಲ್ಗಾಯಿಸುತ್ತಿಹ || ೧

ಮೂರುದೇಹದೊಳಗೇ ಬಾನಿಯೊಳಾರು ಕ್ರಿಯೇಯು ಬೆಳಗೆ
ಧೀರತೆ ದಶಧರ್ಮದ ಉಬ್ಬೆಯು ಸುವಿಚಾರದಿ ತಳಕಿ ಒಗೆದು ಹಿಂಡುತ್ತಿಹ || ೨

ವರಗುಪ್ತಿತ್ರಯದಿ ಧ್ಯಾನದ ಸಿರಿಯೊಳು ನಿರಿಗಟ್ಟಿ
ಪರಮಾತ್ಮನು ಮಡಿ ಬಿಳಿದು ಚಿದಂಬರ ಪುರುಷನೆ ಕೊಡು ಶ್ರೀಮುಕ್ತಿಗೆ ಸಲಿಸುತೆ || ೩

೫೩. ಅರಿಯಲಿಲ್ಲವಲ್ಲಆತ್ಮನ
ರಾಗ : ಮಧ್ಯಮಾವತಿ ತಾಳ : ಏಕತಾಳ

ಅರಿಯಲಿಲ್ಲವಲ್ಲ ಆತ್ಮನ ಮರೆದು ಕೆಟ್ಟರೆಲ್ಲ
ಹೊರಗಣ ಸೋಗೆಯ ತಿಂದೊಳಗಿಹ
ರಸದಿರವನರಿಯದಿಹ ಕುರಿಯಂತೆಲ್ಲ || ಪಲ್ಲವಿ

ಆಶಾಮೋಹದಿಂದ ರೌದ್ರಾವೇಶದೊಳಘಬಂಧ
ಮೋಸದಿ ಹೇಸದೆ ಗಾಸುಪಟ್ಟು ಬಹು ನಾಶವಾಗಿ ನರಳುತ್ತಿಹರಾತ್ಮನ || ೧

ಹೊಟ್ಟೆಯ ಹೊರೆವುದಕೇ ಧರ್ಮವ ಬಿಟ್ಟು ಹೋಗುವರಿದಕೇ
ಕೆಟ್ಟಮನದ ಕೇಡಿನ ಬದುಕಿಗೆ ತಲೆಗೊಟ್ಟಳುತಿಹರದ ಬಿಟ್ಟು ನಿಜಾತ್ಮನ || ೨

ಉರಿವರು ಸಿರಿಯಿರಲು ದುಃಖದಿ ನರಳುವರೆಡರಿನೊಳು
ಎರಡರೊಳೊಂದೇ ಭಾವದಿ ಸಂತತ ಪರಮ ನಿರಂಜನಸಿದ್ಧನ ಧ್ಯಾನವು || ೩

೫೪. ಶ್ರೀಗುರುವರನಂಘ್ರಿಯುಗಕೆ
ರಾಗ : ದರ್ಬಾರು ತಾಳ : ರೂಪಕತಾಳ

ಶ್ರೀಗುರುವರನಂಘ್ರಿಯುಗಕೆ ಬಾಗುವೆ ನಾಂ ಮನದ ಬಯಕೆ
ಬೇಗದಿಂ ನೆರವೇರಿಸುಗೆ ವಾಗ್ದೇವಿಯ ಸ್ಮರಿಪೆ ಮಿಗೆ || ಪಲ್ಲವಿ

ವರೆಯುವೆನಾ ನೇಮಿಜಿನಪವರನ ಪಂಚಕಲ್ಯಾಣವ
ಸ್ಮರನ ಮದವ ಮುರಿದು ಮೆರೆವ ಚರಿತೆ ಮನವನಿರಿಸಿ ಕೇಳಿ || ೧

ಮೇರುಗಿರಿಯ ದಕ್ಷಿಣಭರತಾರ್ಯಖಂಡ ವಾರಿಧಿನಡು
ಸೇರಿ ಮೆರೆವ ದ್ವಾರಾವತಿ ಚಾರುಪುರವು ಶೃಂಗಾರದಿಹುದು || ೨

ಸುರಪುರವನು ಸರಿ ಪೋಲುವ ಧರೆಯನಾಳ್ದ ಹರಿಕುಲೇಶ
ಶರಧಿ ವಿಜಯನರಸಿನಿಚಯಸರಸೀರುಹ ತರಣಿಪ್ರಾಯ || ೩

ಭೂವರೇಣ್ಯಗೆಣೆಯಹ ಶಿವದೇವಿಯೆಂಬಳರಸಿಯವಳ
ಭಾವಭಾಗ್ಯವಾವನೊರೆವ ಭಾವಿಸಲ್ಕೆ ದೇವವಿಭವ || ೪

ಇನಿತು ಮೆರೆವ ಜನಪನಲ್ಲಿ ಜಿನಪವರನು ಜನಿಪನೆಂದು
ಅನಿಮಿಷರೊಡೆಯನು ತಿಳಿವುತ ಧನಪನಿಗಪ್ಪಣೆಯನೀಡೆ || ೫

ಸತಿಯು ಗರ್ಭವತಿಯಹ ಮೊದಲತಿಶಯ ಮೂರುತುವಿಡಿಯುತ
ರತುನ ವೃಷ್ಟಿಗರೆದನು ಧನಪತಿಯು ತಾ ಮೂರಾರುಮಾಸ || ೬

ದೇವನಾಥ ಪೇಳ್ದ ತೆರದಿ ದೇವಸತಿಯರೊಗ್ಗುತ ಶಿವ
ದೇವಿಯ ಮನೋಭಾವವರಿತು ಸೇವಿಸಿದರು ತಾವು ನಲಿದು || ೭

ಈ ರೀತಿಯೊಳಿರಲೊಂದಿನ ತೋರಿದ ಪದಿನಾರುಸ್ವಪ್ನ
ಸಾರಮೇನೆಂದೆನುತ ಕೇಳೆ ಭೂರಮಣನು ಪೇಳ್ದನಾಗ || ೮

ರನ್ನೆಯೆ ಕೇಳ್ ನಿನ್ನುದರದಿ ಸನ್ನುತ ಜೀನದೇವನುದಿಪ
ನಿನ್ನು ನಮ್ಮ ಪುಣ್ಯಫಲದೊಳೆನ್ನಲವಳು ಹರುಷದಿರಲು || ೯

ಸುರರು ತಿಳಿದು ಧರಣಿಗಿಳಿದು ಬರುತಲಾ ಗರ್ಭಾವತರಣ
ನಿರುಪಮವರಕಲ್ಯಾಣವ ಪರಮವಿಧದಿಗೈದರವನು || ೧೦

೫೫. ಕೇಳಿಪೇಳ್ವೆಲಾಲಿಸಿ
ರಾಗ : ಬೇಹಾಗ್  ತಾಳ : ಅಟ್ಟತಾಳ

ಕೇಳಿ ಪೇಳ್ವೆ ಲಾಲಿಸಿ ಮುದದಿ ಬಾಲೆಯ ಉದರದಿ
ಬಾಲಚಂದ್ರಮನಂತೆ ಲೀಲೆಯಿಂ ಬೆಳೆದ ಜಿನಪಾಲನು ಮುದದಿ || ೧

ನವಮಾಸ ತುಂಬಲು ಅವನಿಯ ಮನುಜರು
ಭವರೋಗವೈದ್ಯನ ಭಜನೆ ಮಾಡಿದರು || ೨

ಒದಗಿದ ವೈಶಾಖ ಮೊದಲಾ ತ್ರಯೋದಶಿ
ಯದರೊಳು ರಂಜಿಪ ವಿಧುತಾರೆಯೊಳಗೆ || ೩

ಇಂದ್ರನರೇಂದ್ರ ಫಣೀಂದ್ರ ವಂದಿತನೇಮಿ
ಚಂದ್ರನುದ್ಭವಿಸಿದ ಚಂದದೊಳಾಗ || ೪

ಸುರವರಕುಳಿತಿರ್ದ ಹರಿಫೀಠ ಕಂಪಿಸ
ಲರಿತನವಧಿಯಿಂದ ವರಜಿನನುದಯ || ೫

ಉರಗಲೋಕದ ಶಂಖ ಸುರರ ಲೋಕದ ಘಂಟೆ
ವರಜ್ಯೋತಿರ್ಲೋಕದ ಹರಿನಾದ ಕೇಳೇ || ೬

ನಾಲ್ಕು ವಿಧದ ದೇವರ್ನಾಕಪತಿಯು ಶಚೀ
ತಾ ಕೂಡಿ ಬಂದರನೇಕಸಂಭ್ರಮದಿ || ೭

ಬಂದು ಜಿನೇಶನ ಚಂದದಿ ನಮಿಸುತ್ತಾ
ನಂದದೊಳೈದರು ಮಂದರದೆಡೆಗೆ || ೮

ರತುನಪಾಂಡುಕಶಿಲೆಯ ರತುನ ಪೀಠದಿ
ನವರತುನತ್ರಯದ ಜಿನರತುನನನಿರಿಸಿ || ೯

ಕಣ್ಮನ ದಣಿವಂತೆ ಮನ್ಮಥವಿಜಯನ
ಜನ್ಮಾಭಿಷೇಚನ ಸನ್ಮಾನಿಸಿದರು || ೧೦

ಅಷ್ಟವಿಧಾರ್ಚನೆಯಷ್ಟು ಪೂರೈಸಿ ಸಂ
ತುಷ್ಟನಾದನು ಸುರಪಟ್ಟವಾಳುವನು || ೧೧

ತಿರುಗಿ ಪುರಕೆ ಬಂದು ಸುರನುತದೇವನ
ಹರಿವಿಷ್ಟರದಿ ಕುಳ್ಳಿರಿಸಿದರಂದು || ೧೨

ಕಾಮನ ಗೆಲುವಂಥ ನಾ ಮಹಿಮನ ಕಂಡು
ನೇಮಿಚಂದ್ರಮನೆಂಬ ನಾಮದಿ ಕರೆಯೆ || ೧೩

ಸುರಪನು ಸುರಸತಿಯರ ಕೂಡಿ ಕುಣಿದಾಡಿ
ತೆರಳಿದ ಸ್ವರ್ಗಕೆ ಹರುಷದೊಳಾಗ || ೧೪

೫೬. ಪೊರೆಕರುಣದಿಶರಣರ
ರಾಗ : ಕಲ್ಯಾಣಿ ತಾಳ : ಆದಿತಾಳ

ಪೊರೆ ಕರುಣದಿ ಶರಣರ ದೇವ
ನೆರೆ ಸ್ಮರಿಸುವೆ ನಿನ್ನಯ ಪಾದವ || ಪಲ್ಲವಿ

ಸಮವಸರಣದೊಳು ಕಮಲವ ಸೋಂಕದೆ
ವಿಮಲ ರೂಪದೊಳು ನಿಂದನೇ || ೧

ಎಂದೆನುತಲಿ ಸುರವೃಂದಸಹಿತಲಮ
ರೇಂದ್ರನು ನರ್ತ್ತನವಾಡಿದ || ೨

ಪರಿಮಮೂರ್ತಿಯು ಧರೆಯ ಜನರಿಗೆಲ್ಲ
ವರಧರ್ಮಾಮೃತಸಾರವ || ೩

ಸುರಿಯುತ ಭವ್ಯರ ದರಿತವ ನೋಡಿಸಿ
ಮೆರೆದನು ಬಹುಪರಿಯಂತರ || ೪

ಸಮವಸರಣವನು ಯಮಿನುತ ತ್ಯಜಿಸುತ
ವಿಮಲೋರ್ಜಯಂತಗಿರಿ ಶಿಖರದೊಳು || ೫

ಜಾತರೂಪ ನವನಘಾತಿಕರ್ಮವ
ತಾ ತೊರೆದನು ಶುಕ್ಲಧ್ಯಾನದಿ || ೬

ಆಷಾಢದ ಮೊದಲಾ ಸಪ್ತಮಿದಿನ
ಈಶ ಮೋಕ್ಷಲಕ್ಷ್ಮೀಶನಾದ || ೭

ಅರಿಕೃತು ಸಂವತ್ಸರದುತ್ತರಾಯಣ
ಮೆರೆವ ಶೈಶಿರದ ಮೊದಲ ಮಾಸದಿ || ೮

ಧರೆಯೊಳು ಕಾರ್ಕಳ ವರನೇಮೀಶಗೆ
ನೆರಹಿದೈದು ಕಲ್ಯಾಣಸಮಯ || ೯

ಕಾಮವಿಜಯಗುಣಧಾಮ ಮನೋಹರ
ನೇಮಿಶರಧಿವರ್ಣಿಯವರ || ೧೦

ಕರುಣರಸಾಮೃತ ಶಿರದೊಳು ಧರಿಸಿದ
ನೊರೆದನು ಬಿದುರೆಯ ಸುಬ್ಬರಾಯ || ೧೧

ಸುರನುತ ನೇಮೀಶ್ವರನುದಿಸಿದ ಪರಿ
ಬರೆದನು ದೋಷವ ತಿದ್ದುವುದು || ೧೨

೫೭. ಶ್ರೀಸುರನುತಜಿನರಡಿಗೆರಗುತ
ರಾಗ : ಕಾಂಭೋಜಿ ತಾಳ : ಏಕತಾಳ

ಶ್ರೀ ಸುರನುತ ಜಿನರಡಿಗೆರಗುತ ವಾ
ಗೀಶ್ವರಿಗೊಂದಿಸಿ ಮುನಿಗಳಿಗೆರಗಿ
ಲೇಸೆನಿಪಾದಿ ಜಿನರ ಪಂದಕಲ್ಯಾಣ
ದೇಶದೇಶದೊಳರಿವಂತೆ ವರ್ಣಿಪೆ ಸಂ
ತೋಷದಲಿ ಮತಿಯ ಕರುಣಿಸು ಶೋಭನ || ೧

ಜಂಬೂದ್ವೀಪದ ಭರತಾರ್ಯಖಂಡದೊಳು
ಇಂಬಾದ ಸಾಕೇತಪುರವ ಪಾಲಿಸುತ
ಕುಂಬಿನಿ ಪತಿನಾಭಿರಾಜನು ಸುಖದಿಂದ
ಅಂಬುಜಮುಖಿಯರು ದೇವಿಯು ಸಹಿತಲಿ
ಸಂಭ್ರಮಗೂಡಿ ಸುಖದಿರೆ || ೨

ಆರು ಮಾಸಕೆಯೆಂದು ಗರ್ಭಾವತರಣ
ಮಾರಹರನ ಪುಣ್ಯಪ್ರೇರಣೆಯಿಂದ
ಸಾರಸದ್ಗುಣಿ ದೇವೇಂದ್ರನವಧಿಯೊಳ
ಗಾರೈದು ಸಂತೋಷದಿಂದಲಿ ಆ ಕು
ಬೇರನೊಳಿಂತು ನುಡಿದನು || ೩

ಹೊತ್ತು ಮೂರಕೆ ಪರಿನೈದುಮಾಸಾಂಬರ
ರತ್ನದ ಮಳೆಗರೆಯೆನೆ ಕೇಳಿ ಬಂದು
ವಿತ್ತೇಶ ನಾಭಿರಾಜನ ಮನೆ ಮುಂದೆಸೆ
ಬಿತ್ತರದಂಗಣದಲಿಯನುದಿನ ಘನ
ರತ್ನದ ಮಳೆಯ ಗರೆದನು || ೪

ಕುಲಗಿರಿರುಚಕಕುಂಡಲದ ಮಸ್ತಕದಿ
ನೆಲಸಿದ ಶ್ರೀದೇವಿ ಮೊದಲಾದರೆಲ್ಲ
ತಿಳಿದು ದೇವೇಂದ್ರನ ಬೆಸನದಿ  ನಡೆತಂದು
ಲಲನೆ ಶ್ರೀ ಮರುದೇವಿಯ ಪಾದಸೇವೆಯ
ನಲಸದನುದಿನವೊದಗಿರೆ || ೫

ವೀಣೆಮದ್ದಳೆತಾಳಕೊಳಲುತಂಬೂರಿಯೂ
ನಾನಾಪರಿಯ ವಾದ್ಯಗೀತನೃತ್ಯಗಳ
ಸಾನುರಾಗದಿ ಸುರಸತಿಯರರು ನಿರ್ಮಿಸಿ
ಮಾನಿನಿ ಮಣಿಮರುದೇವಿಯ ಚಿತ್ತ
ಕ್ಕಾನಂದ ಮಾಡಿ ದಣಿಯರು || ೬

ಇವು ಮೊದಲಾದ ಸೇವೆಗಳೆಲ್ಲ ಮಾಡಿ
ಉದರಾದಿಯಲ್ಲಿ ಗರ್ಭ ಶೋಧನೆಗೆಂದು
ಒದಗಿಸಿ ದಿವ್ಯೌಷಧಿಗಳನಿರದಿತ್ತು
ಹೃದಯಶೋಧನೆ ಮಾಡಿ ಸ್ವರ್ಗದ ಆಹಾರ
ಅದರಿಂದ ಬಳಿಕ ಕೊಡುವರು || ೭

ಒಂದು ದಿವಸ ರತ್ನ ಕಂಡು ಶ್ರೀಮರುದೇವಿ
ಮಿಂದು ನಾಲ್ನೀರನು ಪರಿಯೆಡೆಗೈದಿ
ಹೊಂದಿ ಕ್ರೀಡಿಸಿ ಸುಖನಿದ್ರೆಯೊಳೊರಗಿರೆ
ಅಂದೆರಡೆಂಟು ಸ್ವಪ್ನವ ಕಂಡು ಹರುಷದಿ
ಮದಗಜಗಮನೆ ಮರುದಿನ || ೮

ಉದಯದೊಳೆದ್ದಂಗಶುಚಿಯಾಗಿ ಪತಿಯೆಡೆ
ಒದಗಿನಿತಾದ ಸ್ವಪ್ನವ ಪೇಳೆ ಕೇಳಿ
ಸುದತಿ ನಿನ್ನುದರದಿ ತ್ರಿಜಗವಿನುತಸ್ವಾಮಿ
ಉದಿಪರೆಂಬುದ ಕೇಳಿ ಜನ್ಮ ಸಫಲವೆಂದು
ಮುದದಿ ಸಂತೋಷ ತಾಳಿದರು || ೯

ಸರ್ವಾರ್ಥಸಿದ್ಧೀಶನಹಮಿಂದ್ರ ಬಂದು
ಮರುದೇವಿಯುದರದೊಳುದಿಸಿದನೆಂದು
ಅರಿದವಧಿಯೊಳಿಂದ್ರ ಎರಡೆಂಟು ಸ್ವರ್ಗದ
ಸುರರ ಭವನವ್ಯಂತರರ ಜ್ಯೋತಿಷ್ಕರ
ಇರದೆ ಸಹವಾಗಿ ನಡೆತಂದ || ೧೦

ಬಂದರಮನೆಯೊಕ್ಕು ಜಿನಜನಕರನು
ವಂದಿಸಿ ಧನ್ಯರಾದಿರಿ ನೀವೆನುತ
ಚಂದದಿಂ ವಸ್ತ್ರಾಭರಣವನಿತ್ತು ಪೂಜಿಸಿ
ಮುಂದುದಯಿಪತನಕ್ಕೆಲ್ಲರು ಬೆಸಗೆಯ್ದು
ದೆಂದು ನಿಯಮಿಸಿ ನಡೆದನು || ೧೧

ಇತ್ತ ಮರುದೇವಿಗೆ ನವಮಾಸ ತೀವೆ
ಉತ್ತಮ ಲಗ್ನದೊಳನಿಮಿಷನುತನ
ಪೆತ್ತಳೆಂದರಿದವಧಿಯೊಳಿಂದ್ರ ಸುರಪತಿ
ಮೊತ್ತದ ಬಳಸಿನೊಳೈರಾವತವೇರಿ
ಅತ್ಯಂತ ಭರದಿ ನಡೆತಂದ || ೧೨

ಬಂದರಮನೆ ಮೇಲೆ ಸುರನಿಕುರುಂಬ
ನಿಂದಿಂದ್ರನಪ್ಪಣೆಯಲಿ ಶಚೀದೇವಿ
ಹೊಂದಿ ಸೂಶಕ ಗೃಹದಲಿ ಜಿನಶಿಶುವನು
ವಂದಿಸಿ ಕೊಂಡೆತ್ತಿ ತನ್ನಾಣ್ಮನಕೆಯ್ಯೊ
ಳಂದು ಕೊಡಲಾಗಿ ಕೆಯ್ಕೊಂಡ || ೧೩

ಹಸ್ತಿಯೊಳಾ ಶಿಶುವನು ನಿಜಬಲದೊಡೆ
ಗೊತ್ತಿಡೆ ಸುರರೆಲ್ಲ ಜಯಜಯವೆನುತ
ಎತ್ತಿದ ಛತ್ರಚಾಮರಸಿಂದ ಸಿಗುರಿದ
ಮೊತ್ತದ ಬಳಸಿನೊಳಾ ಸುರಪಡೆಯನು
ಎತ್ತಿ ಸುರಗಿರಿಗೆ ನಡೆದರು || ೧೪

ಕರಿಗೆಂಟುರದನದ ಮುಖ ಮೂವತ್ತೆರಡು
ಸರಸಿಳೊಂದೊಂದುರದನಕ್ಕೆ ಮೂವ
ತ್ತೆರಡೆಸಲಬ್ಜಗಳದು ಒಂದರೊಳು ಮೂ
ವತ್ತೆರಡೊಂದು ದಳಕ್ಕೆ ನರ್ತನ ನಾರಿಯರು ಮೂ
ವತ್ತೆರಡಾಗಿ ಮುಂದೆ ನಡೆದರು || ೧೫

ಅಡಿಗೊಮ್ಮೆ ಸುರರೆಲ್ಲ ಜಯಜಯವೆನುತ
ನಡೆದರು ವೈಭವದಲಿ ಸುರಗಿರಿಯ
ನಡರಿ ಪ್ರದಕ್ಷಿಣಿವಾಗಿ ಈಶಾನದಿ
ಕಡುಶೋಭೆವಡೆದಿಹ ಪಾಂಡುಕ ಶಿಲೆಯೊಳ
ಗೊಡೆಯನ ನಿಲಿಸೆ ಕ್ರಮಗೂಡಿ || ೧೬

ಬಲಗಡೆಯೊಳು ಸೌಧರ್ಮೇದ್ರ ನೆಡದಿ ನೆಲಸು
ತಲೀಶಾನೇಂದ್ರರು ಗೂಡಿ ಜಿನನ ಕಲಧೌತ
ಕಲಶದಿ ಕ್ಷೀರ ಸಾಗರದಿಂದ
ಜಲ ತೀವಿ ಸುರರೆಲ್ಲ ಕೂಡೆ ಜಿನಗಭಿಷೇಕ
ಬಲು ಭಕ್ತಿಯಿಂದ ಗರೆದರು || ೧೭

ಈ ರೀತಿಯಲಿ ಜನ್ಮಾಭಿಷಷೇಕವ ಮಾಡಿ
ಸಾರವಸ್ತುಗಳಿಂದ ಪೂಜಿಸಿ ಸ್ತುತಿಸಿ
ಭೂರಿವೈಭವಗೂಡಿ ಸಾಕೇತಪುರಕೆಯ್ದಿ
ಆ ರಾಜ ಮಿಥುನವ ಸಿಂಹಪೀಠಾಗ್ರಕ್ಕೆ
ಏರಿಸಿ ನೆಲೆಯ ಗೊಳಿಸಿದ || ೧೮

ಸ್ವಾಮಿಯನಾ ಪೀಠಾಗ್ರದೊಳಿರಿಸಿ
ಭೂಮಿಯೊಳಗೆ ನೀವು ಧನ್ಯರೆಂದೆನಿಸಿ
ಸ್ವಾಮಿ ಜನನೀ ಜನಕರನು ಪೂಜಿಸಿ ಮೋಕ್ಷ
ಗಾಮಿಗೆ ಶ್ರೀ ವೃಷಭೇಶನೆಂಬ
ನಾಮವನಿಟ್ಟು ನಲಿದನು || ೧೯

ದೇವಬಾಲಕರಾಗಿ ಜಿನಬಾಲಕನೊಳು ಸಹ
ವಾಸದಿಂದಂಘ್ರಿ ಸೇವಿಸುವುದೆನುತ
ಆವಾಸದಿ ದೇವೇಂದ್ರನು ಸುರರಿಗೆ ನಿಯಮಿಸಿ
ಭಾವಜಹರನ ಬೀಳ್ಕೊಂಡು ಸಂತೋಷದಿ
ದೇವಲೋಕಕ್ಕೆ ನಡೆದನು || ೨೦

ಬಾಲಕುಮಾರ ಕಾಲಕ್ಕೆ ಯೋಗ್ಯವಾದ
ಲೀಲೆಯೊಳಿರ್ದ ಯೌವ್ವನವಾಗಲಂದು
ಲೋಲಲೋಚನೆಯರ ಮದುವೆಗಿಬ್ಬರ ನಿಂದು
ಬಾಲಕರಂತು ನೂರೊಂದನು ಪಡೆದು ಒ
ಡ್ಡೋಲಗ ಗೊಟ್ಟು ಸುಖದಿರೆ || ೨೧

ಬಾಲಕುಮಾರ ಯೌವನಕಾಲ ಪೋಗೆ
ಮೂರ್ಲೋಕದೊಡೆಯನಿಗೊಂದು ವಾಸರದಿ
ನೀಲಾಂಜನೆ ನಾಟ್ಯವಾಡಿ ಬಯಲಾಗೆ ಕಂಡು
ಕಾಲವಿಜಯಗಂದು ವೈರಾಗ್ಯಮೊದವಿರೆ
ಅಲೌಕಿಕಾಂತಿಕಸುರರಂದು || ೨೨

ಬಂದು ಸ್ವಾಮಿಗೆ ಪ್ರತಿಬೋಧಿಸಿ ಪೋಗೆ
ಇಂದ್ರನು ಸುರಸಮಿತಿಯ ಕೂಡೆ ಬಂದು
ವಂದಿಸಿ ಜಿನರ ಸಿಂಹಾಸನದಗ್ರದೊ
ಳಂದಭಿಷೇಕವ ಮಾಡಿ ಪೂಜಿಸಿ ಸ್ವರ್ಗದ
ಚಂದದುಡಿಗೆಗಳ ತೊಡಿಸಿದ || ೨೩

ಶಿಬಿಕೆಯನೇರಿಸಿ ಭೂಚರ ಖಚರ
ರಭವನಿಗಳೇಳಡಿ ಪೊತ್ತು ನಡೆದು
ವಿಭವದಿ ಮುಂದಕ್ಕೆ ಸುರರೊಂದು ವನದೊಳು
ಶುಭಲಗ್ನದಲಿ ದಿವ್ಯಶಿಲೆಯೊಳು ಸ್ಥಾಪಿಸೆ
ಉಭಯಪರಿಗ್ರಹನುಳಿದನು || ೨೪

ಕುಂತಳ ಕೆಯ್ಯೊಳೆ ಕಿತ್ತಿಡೆ ಸುರಪತಿ
ಯಾಂತನು ರತ್ನದ ಪಡಲಿಗೆ ಕೊಂಡು
ಜಂತು ರಹಿತ ಶರಧಿಯೊಳಿಟ್ಟು ಬಂದು ಪೂಜೆ
ಯಾಂತು ಶ್ರೀ ಪರಿನಿಷ್ಕ್ರಮಣ ಕಲ್ಯಾಣದ
ಇಂತಾಗುಮಾಡಿ ನಡೆದನು || ೨೫

ಆರುಮಾಸಕ್ಕೆ ಎನಗುಪವಾಸವೆನುತ
ಘೋರ ತಪದೊಳಿರ್ದು ಬಳಿಕ ಪಾರಣೆಗೆ
ಊರೊಳು ಬರುತಿರೆ ವಿಧಿಯಲಿ ನಿಲಿಸುವ
ರಾರನು ಕಾಣದೆ ತಿರುಗಿತಿರುಗಿ ಇಂ
ತಾರು ಮಾಸಾಂತ್ಯದೊಳಗೋರ್ವ || ೨೬

ಧಾತ್ರೀಶನೆಂಬೋರ್ವ ಶ್ರೇಯಾಂಸನಂದು
ರಾತ್ರಿಯೊಳಗೆ ಮೇರು ಸುರತರು ಪ್ರಭೃತ
ಹತ್ತಿರಕ್ಕೆ ಬರುವ ಸ್ವಪ್ನವ ಕಂಡು ಬೆಳಗೆದ್ದು
ಸುತ್ರಾಮನುತ ನಾದಿಜಿನಪನ ಬರವನು
ನೇತ್ರದಿ ನೋಡಿಯಿರುತ್ತಿರೆ || ೨೭

ಬರುವ ಸ್ವಾಮಿಯ ಕಂಡು ಪೂರ್ವದಿ ಸರ್ಪ
ಸರಿಸಿಯೊಳಿತ್ತ ದಾನದ ವಿಧಿಭವದ
ಸ್ಮರಣೆಯೊಳರಿದು ಸ್ವಾಮಿಗೆ ವಿಧಿಪೂರ್ವಕ
ಕರೆದೊಯ್ದು ಆಹಾರದಾನವನಿತ್ತಿರೆ ಸ್ವಾಮಿ
ಪರಿಪೂರ್ಣವಾಗಿ ನಡೆದರು || ೨೮

ಸ್ವಾಮಿಗಿತ್ತಾಹಾರ ದಾನದ ಫಲದಿ
ಪೂಮಳೆ ರತ್ನದ ಮಳೆ ಗಂಧವಾತ
ವ್ಯೋಮದಿ ಸುರಭೇರಿ ಜಯ ಜಯನಿನದವು
ಆ ಮಹೀಪತಿಗಳೈದಾಶಯನವು
ಕ್ಷೇಮವನಾಂತು ಸುಖದಿರೆ || ೨೯

ಕೆಲವು ಕಾಲದ ಮೇಲೆ ಕೇವಲಬೋಧ
ಜ್ವಲಿಸಲು ಸುರಪತಿ ಬೆಸನದಿ ಧನದ
ಪೊಳೆವ ಶ್ರೀ ಸಮವಸರಣ ಗಗನದಿ ಮಾಡೆ
ಕಲುಷಾಪಹರನ ಕೇವಲ ಪೂಜೆಗೆನುತಾಗ
ಬಲಯುತನಿಂದ್ರ ನಡೆತಂದ || ೩೦

ಚಂದ್ರಕಾಂತದ ಶಿಲೆಯಗ್ರ ಭಾಗದೊಳು
ನಿಂದು ಶ್ರೀ ಜಿನಪತಿ ದುರಿತವ ಕೆಡಿಸಿ
ಸಂದನು ಮೋಕ್ಷಕೆ ನುತಸುರ ಸಭೆಗೂಡಿ
ಇಂದ್ರನಲ್ಲಿಗೆ ಬಂದು ದೇಹ ಸಂಸ್ಕಾರ ಮಾಡಿ
ಅಂದು ಪೂಜಿಸಿ ನಡೆದನು || ೩೨

ಭರತೇಶನೊಂದಿನೆರಡುವರೆ ದ್ವೀಪದೊ
ಳಿರುವ ವಸ್ತುಗಳೆಲ್ಲ ತರಿಸಿ ಪೂಜಿಸುತ
ಇರುಳು ಪಗಲು ಪದಿನಾಲ್ಕು ದಿವಸ ಸಮವ
ಸರಣ ವಿಸರ್ಜಿಸಿ ಯೋಗದೊಳಿರುವನೆ
ವರವಿಭವದಲ್ಲಿ ಕ್ರಮದಿಂದ || ೩೩

ಜಯಜಯ ತ್ರಿಭುವನನುತ ಜಿನರಾಜ
ಜಯಜಯ ಕೋಟಿ ಚಂದ್ರಾದಿತ್ಯ ತೇಜ
ಜಯಜಯ ಭವ್ಯರ ಸಲಹುವ ಸುರಭೂಜ
ಜಯ ಜಯನಂತ ಚತುಷ್ಟಯ ಗುಣಸಹಜ
ಜಯಿಸೆನ್ನ ನೀನು ಕರುಣದದಿ || ೩೪

ಬಿದುರೆಯ ಗುರುಪಂಡಿತಾರ್ಯರ ದಿವ್ಯ
ಪದಸರಸಿಜಕ್ಕಳಿ ಶಿಶುವಾದ ಶಾಂತ
ಹೃದಯದಿನೆನಿಪ ಚಂದಯ್ಯನು ಪೇಳಿದ
ಮದಹರನಾದಿ ಜಿನರ ಪಂದಕಲ್ಯಾಣ
ಬುಧರು ಲಾಲಿಪುದು ಮುದದಿಂದ || ೩೫

೫೮. ಶ್ರೀಮದನಂತಜಿನೇಂದ್ರರ

ಶ್ರೀಮದನಂತಜಿನೇಂದ್ರರ ವ್ರತವ
ಆ ಮಹಾಸ್ವಾಮಿಯ ವಚನದಮೃತವ
ಪಾವನ ಮಾಡಿದ ಸ್ವಾಮಿಯ ಭಕ್ತರು
ಕಾಮಿಸಿ ಪಡೆದ ತತ್ಫಲದ ಮಹಾತ್ಮೆಯ
ಪ್ರೇಮದೊಳ್ ಬುಧರು ಇದ ಕೇಳಿ ಶೋಭನ || ೧

ಕೃತಯುಗಚಕ್ರೇಶ ಭರತಭೂತನಾಥ
ವ್ರತಗುಣಚಾರಿತ್ರ ಶೀಲವಿಖ್ಯಾತ
ಕ್ಷತ್ರಿಯ ಧರ್ಮದಿ ಧಾತ್ರಿಯ ಪಾಲಿಸಿ
ಕೀರ್ತಿಯ ಮೆರೆಸಿದ ಪಾರ್ಥಿವಾಗ್ರಣಿಯನು
ಪ್ರಾರ್ಥಿಸಿ ನಾನು ಬಲಗೊಂಬೆ || ೨

ಷಡ್ಖಂಡಭೂಮಿಯದೋರ್ದಂಡಭುಜದಿ
ಮಾರ್ಕೊಂಡು ವಿಜಯಾರ್ಧಗಿರಿಯ ದ್ವಾರದೊಳು
ಏರ್ಕೊಂಡು ತೇಜಿಯ ಕಾಕಿಣಿಪ್ರಭೆಯೊಳು
ಬೀಳ್ಕೊಂಡು ವೃಷಭಾದ್ರಿಗೈದಂಕಮಾಲೆಯ
ತಾ ಕಂಡು ಬರೆದು ಮಗುಳಿದ || ೩

ಚಕ್ರದ ಬಲುಮೆಯಿಂ ಭೂ ಚಕ್ರವಗೆಲಿದು
ವಿಕ್ರಮಿಯಿರಲಾ ಚಕ್ರದ ಪ್ರಭೆಯು
ವಕ್ರವಾಗಲು ಕ್ಷೀರ ತಕ್ರವಾದಂದದಿ
ಅಕ್ರಮವೇನಿದನರಿಯಬೇಕೆಂದಾಗ
ಶಕ್ರವಂದಿತನು ನೆನೆದದನು || ೪

ಉರುಭಕ್ತಿಯಿಂದಲಿ ಭರತ ಭೂವರನು
ಗುರುಗಣಧರ ಶ್ರೀವೃಷಭಸೇನರನು
ಚರಣಾರವಿಂದಕೆ ವಂದಿಸಿ ಚಕ್ರದ ರಮಣೀ
ಯಪ್ರಭೇಯು ತಾ ಕುಂದಿದುದೇಕೆಂದು
ಧರಣೇಶ ತಾನು ಬೆಸಗೊಂಡು || ೫

ಕುಂದುತ ಸ್ಥಿತಿಗತಿ ಹುಂಡಾವಸರ್ಪಿಣಿ
ಬಂದಪುದಾ ಕಾಲಮಹಿಮೆಯಿಂದೀಗ
ಕುಂದಿತ ಪ್ರಭೆಯಿಂದ ವಸ್ತುಸಂಚಯವೆಲ್ಲ
ಎಂದು ಪೇಳಲು ಕೇಳೆರಗಿ ಬೀಳ್ಕೊಂಡಾಗ
ಮುಂದೇನು ಇದಕೆ ಪರಿಹಾರ || ೬

ಎಂದು ಬಿನ್ನೈಸಿದ ಭರತಭೂವರಗೆ
ಮಂದರಧೀರ ಮುನೀಂದ್ರ ರು ಮುದದಿ
ಬಂದಿಹುದಿದು ಕಾಲಮಹಿಮೆಯಿದಕೆ ನಾವು
ಒಂದಿಹುದದನುಸುರುವೆವು ಕೇಳೆಂದಾಗ
ತಂದೆ ಮುನಿರಾಯ ಕರುಣಿಸು || ೭

ಆದಿ ಅಜಿತ ಶಂಭವ ಅಭಿನಂದನೇಶ
ಬೋಧಭೂಷಣ ಮಹಾಸುಮತಿ ತೀರ್ಥೇಶ
ಪದ್ಮಲಾಂಛನಧರ ಪದ್ಮಪ್ರಭೇಶರು
ಸುರುಚಿರಮೂರ್ತಿ ಸುಪಾರಿಶ್ವಜಿನರೆಂದು
ಮದನಾರಿಚಂದ್ರಜಿನಪರು || ೮

ಪುಷ್ಪಸಾಯಕವಿಜಯ ಪುಷ್ಟದಂತೇಶ
ದುಶ್ಕರ್ಮಹರವರ ಶೀತಳಜಿನಪ
ಒಪ್ಪುವ ಶ್ರೇಯಾಂಸ ವಾಸುಪೂಜ್ಯೇಶರು
ನಿಷ್ಪನ್ನಹೃದಯರೆಂದರೆನಿಸಿದ ಶ್ರೀಮಹಾ
ದರ್ಪರೆನಿಸಿದ ವಿಮಲೇಶ || ೯

ಇಂತೆಂದು ಪದಿಮೂರು ತೀರ್ಥಕರಂತ್ಯಾ
ನಂತ ಜಿನೇಂದ್ರರು ಜಗದೊಳತ್ಯಂತ
ಶಾಂತಾತ್ಮರಾಗಿ ಸಂಜನಿಸುವರನು ನೀನು
ನೋಂತಭಿಮತಫಲವನು ಪಡೆಯೆಂದು
ಮುಂತಾದ ವಿಧಿಯನುಸುರ್ದರು || ೧೦

ಮಾಸದೊಳಧಿಕವಾದ ವರಭಾದ್ರಪದದ
ಆ ಶುದ್ಧಪಕ್ಷ ತ್ರಯೋದಶೀ ದಿನದ
ನಿಶಿಯೊಳು ಜಾಗರಮಿರ್ದುಪವಾಸದಿ
ಒಸೆದು ನೋಂಪಿಯ ಮಾಡಿ ಪಡೆದು ಸೌಭಾಗ್ಯವ
ಎಸೆದು ನೀವೆಲ್ಲ ಸುಖಿಯಾಗಿ || ೧೧

ಸೃಷ್ಟಿಯೊಳ್ ಹಸ್ತಿನಾಪುರಮದನಾಳ್ವ
ಶ್ರೇಷ್ಠನೆಂದೆನಿಸಿದ ಶಾಂತ ಭೂವರೆಗೆ
ಕೊಟ್ಟು ಕೊಳ್ಳುವ ರಾಜಶ್ರೇಷ್ಠಿ ಸುದರ್ಶನ
ಶ್ರೇಷ್ಠಿಯ ವಲ್ಲಭೆ ಸನ್ಮತಿಯವರಿಗೆ
ಪುಟ್ಟಿದ ಮಗಳು ಗುಣವತೀ || ೧೨

ವ್ರತ ಗುಣ ಚಾರಿತ್ರ ಶೀಲಸಂಪನ್ನೆ
ಅತಿರೂಪಗುಣವತಿ ಯೌವನವಂತೆ
ಕ್ಷಿತಿಯೊಳಗೆಲ್ಲರು ಅತಿಚೆಲ್ವೆಯೆಂದೆಲ್ಲ
ಸ್ತುತಿಸಲು ವಾರ್ತೆಯ ಕೇಳಿದ ಜನರೆಲ್ಲ
ಅತಿಪ್ರೀತರಾಗಿಯಿರುತ್ತಿರೆ || ೧೩

ಅತ್ತ ಚಿತ್ರಾಂಗದವೆಂದೆಂಬ ಪುರದ
ಧಾತ್ರೀಪತಿಯು ತುಂಗಭುಜಬಲನೆಂಬ
ಪ್ರಸ್ತುತವಾರ್ತೆಯ ಕೇಳಿ ಗುಣವತಿಯ
ಯತ್ನದೊಳೈತಂದಿತ್ತಗೆ ಮಾನ್ಯವ
ಆರ್ತಿಯಿಂ ಕೊಡುವೆನೆನುತಲಿ || ೧೪

ಕೃತಕದಿಂ ಕನ್ಯೆಯ ಪೃಥ್ವೀಶ ತರಿಸಿ
ನುತರೂಪಗುಣವತಿಯನ್ನು ಶೃಂಗರಿಸಿ
ಅತಿಶಯಮುಹೂರ್ತದಿ ತುಂಗಭುಜಬಲನಿಗೆ
ಸತಿಯರು ಕೂಡಿ ಶೋಭನವಾಡಿ ಧಾರೆಯ
ಕ್ಷಿತಿಪಾಲಗಾಗ ಗುಣಮಣಿಯ || ೧೫

ಸತ್ಯವಂತೆಯು ಪತಿವ್ರತಧರ್ಮದಿಂದ
ನಿತ್ಯ ಶ್ರೀಜಿನಪೂಜೆ ಗುರುಸೇವೆಯಿಂದ
ಅತ್ಯಂತಭಕ್ತಿಯಿಂ ಭರ್ತನು ಸಹವಾಗಿ
ಅರ್ತಿಯೊಳಿರಲಾಗ ಶ್ರೀಮದನಂತವ್ರತ
ಪ್ರಸ್ತುತವಾಗಿ ಬರಲಂದು || ೧೬

ಶ್ರೀಮದನಂತಜಿನೇಂದ್ರರ ವ್ರತವ
ಆ ಮಹಾಜಿನಮುನಿವಚನಸಮ್ಮತವ
ಪ್ರೇಮದಿ ಮಾಡುವೆ ಅದಕೆ ತಕ್ಕವನು
ನೇಮದಿ ಕೊಡುವುದೆಂದಪ್ಪಣೆಕೊಂಡಾಗ
ಭಾಮಿನೀ ವ್ರತವ ಧರಿಸಿದಳು || ೧೭

ಸುರುಚಿರಭಕ್ತಿಯಿಂದರುಹನಾಲಯದಿ
ಪರಮವೈಭವದಿಂದ ನೋಂಪಿಯನೋಂತು
ಗುರುವರ ಹಸ್ತದಿಂ ಧರಿಸಿದ ದಾರವ
ಕರದೊಳು ವರಸಿದ್ಧಶೇಷೆಯು ಸಹವಾಗಿ
ಭರದಿಂದ ಮನೆಗೈತಂದು || ೧೮

ಮಂದಗಮನೆ ತನ್ನ ಮಂದಿರಕ್ಕೈದಿ
ಗಂಧಪ್ರಸಾದವ ಕೊಟ್ಟು ವಲ್ಲಭಗೆ
ಅಂದಿತ್ತು ವಂದಿಸಿ ನಿಂದಿರ್ದ ಭಾವೆಯ
ಕಂದಿರ್ದ ಮುಖವನು ಕಂಡುಗ್ರಕೋಪದಿ
ಚಂದಿರಾನನೆಯ ಕಳುಹಿದ || ೧೯

ಅನ್ನವುದಕನಿದ್ರೆ ತಾಂಬೂಲ ಬಿಡಿಸಿ
ಇನ್ನು ಫಲಹಾರವಸ್ತುಗಳೆಲ್ಲ ತೊರೆಸಿ
ಚೆನ್ನಾಗಿ ಮಲಗುವ ಹಾಸಿಗೆ ವ್ರತವೆಂದು
ಬನ್ನಬಡಿಸಿದ ಬೋಳ್ಮಂಡೆಯ ಸವಣರ
ಅನ್ಯಾಯವೇನ ಉಸುರಲಿ || ೨೦

ಪುಂಡರಿಕಾನನೆ ಅಂದಿನ ದಿವಸ
ಗಂಡನೊಡನೆ ತಾ ಹೊಂದಿ ಕುಳ್ಳಿರಲು
ಕಂಡಾಗ ದಾರವ ತೋಳೊಳಗಿರ್ದುದ
ಪುಂಡು ಸವಣರ ಮೋಡಿ ದಂಡೆಯಿಂದೆಂದದ
ಕೆಂಡದೊಳಿಕ್ಕಿ ಉರುಹಿದ || ೨೧

ದಹಿಸಲು ಮನದಿ ನಿಶ್ಚಯಿಸಿದಳಿಂತು
ಐಶ್ವರ್ಯವೆಲ್ಲವು ತೊಲಗುವುದೆನುತ
ಗ್ರಹಿಸದೆದಹಿಸಿದ್ದು ಪೂರ್ವದ ಕರ್ಮವು
ದಹಿಸ ಬಹುದೆ ಪಾಪಿ ಉಪದೇಶವಿಲ್ಲದೆಂ
ದಹಿವೇಣೀ ಮನದಿ ಮರುಗಿದಳು || ೨೨

ಅತ್ತಲು ಶಾಸನದೇವತೆ ಮುನಿಯೆ
ಅರ್ಥವು ಮೊದಲಾದ ವಸ್ತುಸಂಚಯವು
ಮತ್ತೆಲ್ಲವದೃಶ್ಯವಾಗಲು ದಾರಿದ್ಯ್ರಾ
ವಸ್ಥೆಯು ದೊರಕೊಳೆರಾಯನು ಸತಿಗೂಡಿ
ಚಿತ್ತೈಸಿದನಂದು ಪುರದಿಂದ || ೨೩

ಅಂತವರೀರ್ವರು ತೊಳಲುತ ಬರುತ
ನಿಂತಿರ್ದ ಮುನಿಗಳು ದೂರದೊಳ್ಕಂಡು
ಅಂತರಂಗದೊಳ್ ನಮಗಿಂತಾದುದುಸುರ್ದರೆ
ಪಂಥವಿಡದೆ ಪಾದಾಕ್ರಾಂತನಾಗುವೆನೆಂದು
ಚಿಂತಿಸುತಾ ರಾಯ ನಡೆತಂದ || ೨೪

ಬಾರಯ್ಯ ಭೂಪಾಲ ತುಂಗವಿಕ್ರಮನೆ
ಮಾರವಿಜಯನಿತ್ತ ಜಿನರ ದಾರವನು
ನಾರೀಗುಣವತಿಯ ತೋಳೊಳಗಿರ್ದುದ
ಸಾರವನರಿಯದೆ ಉರುಹಿದ ಕಾರಣ
ಘೋರಕೋಟಲೆಗೆ ಗುರಿಯಾದೆ || ೨೫

ದಾರವು ಚೋರಾರಿ ಮಾರಿನಿಗ್ರಹವು
ದಾರವು ಘೋರಾಹಿವ್ಯಾಘ್ರಾಪಹರವು
ದಾರವು ದಾರಿದ್ಯ್ರ ದುಃಖಸಂಹಾರವು
ದಾರವು ಘಾತಿಸಂಹಾರವೆಂದರಿಯದೆ
ದಾರವನು ಉರುಹಿದೆ || ೨೬

ದಾರವೆ ಸಕಲಸಂಹಾರಕಾರಣವು
ದಾರವೆ ಮುಕ್ತಿಯ ಕಾಮಿನೀಹಾರ
ದಾರವೆ ಸಕಲಸಂಪದಕೆ ಕಾರಣವು
ದಾರವೆ ವ್ರತಕೆ ಆಧಾರವೆಂದರಿಯದೆ
ದಾರವನು ಉರುಹಿದೆ || ೨೭

ಮಂದಬುದ್ಧಿಯ ಬಿಟ್ಟು ಮುಂದೆ ಈ ವ್ರತವ
ಒಂದೇ ಮನದಿ ಮಾಡೆಬಂದ ದುಷ್ಕೃತವ
ನಂದಿಸಿ ಕಳೆದು ಸಕಲಸಾಮ್ರಾಜ್ಯವ
ತಂದಿತ್ತು ಪಾತಾಳಯಕ್ಷ ರಕ್ಷಿಪನೆನೆ
ವಂದನೆ ಮಾಡಿ ಮರಳಿದ || ೨೮

ಮುನಿವರರಪ್ಪಣೆಯಿಂದಲಿ ವ್ರತವ
ವನಿತೆ ಸಹಿತವಾಗಿ ಕೈಕೊಂಡು ಪಥವ
ವಿನಯದಿ ಬರುತಿರಲೊಂದು ರಾತ್ರಿಯೊಳು
ಕನಸಿನೊಳ್ ಶುಭಫಲ ಸೂಚನೆಯನು ತಿಳಿ
ದನುವಾಗಿ ನಂಬಿ ಇರುತಿರೆ || ೨೯

ತುಂಗಭುಜಬಲರಾಯನಂಗನೆಗೂಡಿ
ಅಂಗಜಮಲ್ಲನ ವ್ರತವನು ಮಾಡಿ
ಭಂಗವಾಗಿಹ ರಾಜ್ಯದಂಗನೆಗೆ ವರನಾಗಿ
ಹಿಂಗದೆ ಸುಖಮಿರ್ದ ತುಂಗ ವಿಕ್ರಮನಿಗೆ
ಮಂಗಳಮಸ್ತು ಶುಭಮಸ್ತು || ೩೦

ವೃದ್ಧಯುವಕದರಿದ್ರಧನಿಕರೆಂದು
ಮುದ್ದು ಯುವತಿ ವೃದ್ಧೆಯೆಂದೆನ್ನದೆ
ಇದ್ದ ವಸ್ತುವಿನೊಳು ಶಕ್ತ್ಯನುಸಾರದಿ
ಶುದ್ಧಭಾವದಿ ನೋಂತು ಪಡೆದ ಸೌಭಾಗ್ಯವ
ಇದ್ದು ನೀವೆಲ್ಲ ಸುಖಿಯಾಗಿ || ೩೧

ಇಂತಿಹ ವ್ರತವನ್ನು ಮಾಡಿದವರಿಗೆ
ಸಂತೋಷದಿಂದನುಮೋದಬಟ್ಟವರ್ಗೆ
ಚಿಂತಿತಫಲವಿತ್ತನಂತಜಿನೇಂದ್ರರು
ಸಂತತ ಸೌಭಾಗ್ಯ ಸಂಪದವಿತ್ತು
ಶಾಂತಮೂರುತಿಯು ಸಲಹಲಿ ಶೋಭನ || ೩೨

೫೯. ಹಿಗ್ಗುವೆಯಾಕೋ
ರಾಗ : ಮಾಂಜಿ ತಾಳ : ಅಟ್ಟತಾಳ

ಹಿಗ್ಗುವೆ ಯಾಕೋ ಈ ದೇಹಕ್ಕೆ || ಪಲ್ಲವಿ

ಹಿಗ್ಗುತ ತಗ್ಗತ ಮುಗ್ಗತ ಕುಗ್ಗುತ
ಅಗ್ನಿಯೊಳಗೆ ದಗ್ಧವಾಗುವ ದೇಹಕ್ಕೆ || ೧

ನವ ವಿಧದ್ವಾರದಿ ಮಲಮೂತ್ರಗಳಿಂದ
ನೀರಿಲ್ಲದಿದ್ದರೆ ನಾರುವ ದೇಹಕ್ಕೆ || ೨

ಏಳುತ್ತ ಬೀಳುತ್ತ ಬಾಳುತ್ತ ಬದುಕುತ್ತ
ಹೇಳದೆ ಹೋಗುವ ಹಾಳಾದ ದೇಹಕ್ಕೆ || ೩

ಆಗಬೋಗಗಳೆಲ್ಲವಾಗ ಮಾಡುತಲಿದೆ
ರೋಗ ಬಂದರೆ ತಾನೇ ಹೋಗುವ ದೇಹಕ್ಕೆ || ೪

ನರರ ಸೇವೆಯ ಮಾಡಿ ನರಕ ಭಾಜನನಾಗಿ
ಉರುಳುತ್ತುರುಳಿ ಬಿದ್ದು ನರಳುವ ದೇಹಕ್ಕೆ || ೫

ಸತಿ ಪುರುಷರು ತಮ್ಮ ರತಿಕ್ರೀಡೆಯನಾಡಿ
ಪ್ರಥಮದಿಂದ್ರಿಯಭವ ಪ್ರತಿಮೆಯೆ ದೇಹಕ್ಕೆ || ೬

ಪುರುಪರಮೇಶನ ಚರಣಕಮಲಗಳಿ
ಗೆರಗದೆಯಿರುವಂಥಾ ಗರ್ವಿಪ ದೇಹಕ್ಕೆ || ೭

೬೦. ದೇಹವಿದ್ದೇನುಸಾರ್ಥ
ರಾಗ : ಕಲ್ಯಾಣಿ ತಾಳ : ಅಟ್ಟತಾಳ

ದೇಹವಿದ್ದೇನು ಸಾರ್ಥ ಪಂಚೇಂದ್ರಿಯದಿಂ
ದೇವ ನಿನ್ನೊಲಿಸದಂಥಾ
ದೇವ ನಿನ್ನನು ನೋಡಿ ಕಣ್ದಣಿ
ಜಾವಜಾವಕೆ ಪಾಡಿ ಮಿಗೆ ಸ
ದ್ಭಾವದಿಂದರ್ಚಿಸುತ ನಮಿಸದ ಹೇಯದವಯವನುಳ್ಳ ಈ ನರ || ಪಲ್ಲವಿ

ಸನ್ನುತಾಗಮವ ನೋಡಿ ನಿನ್ನಯ ನಾಮವನ್ನು ಕೊಂಡಾಡಿ ಪಾಡಿ
ನಿನ್ನ ನಾಮರಸಾಯನಾಮೃತವನ್ನು ಸೇವಿಸದಸ್ಯಸತಿಯಧರಾಮೃತ
ವನುರೆ ಹೇಯದೀಂಟುವ ಕುನ್ನಿಜಿಹ್ವೆಯನುಳ್ಳ ಈ ನರ || ೧

ಅಂಗಜ ಮದಮರ್ದನನ ಭವ್ಯರ ಭವಭಂಗಿಪ ಚಿನುಮಯನ
ಮಂಗಳಾಂಘ್ರಿ ಪಯೋಜಪರಿಮಳ ಭೃಂಗನೆನಿಸದೆ ಪರರ ಹೆಂಗಳ
ಅಂಗಲಿಪ್ತಸುಗಂಧಕೆಳಸುವ ಕೊಂಕು ಘ್ರಾಣಗಳುಳ್ಳ ಈ ನರ || ೨

ಚೆಲುವ ಶ್ರೀ ತವ ಬಿಂಬವ ನೇತ್ರದಿ ಕಂಡು ನಲಿದಭಿಷವ ಮಾಡದ
ಹಲವು ಸಂಭ್ರಮಕೊಲಿದು ಬಾಷ್ಪದ ಜಲವ ತುಳುಕದ ಅನ್ಯಸತಿಯರ
ಚೆಲುವ ದೇಹವ ನೋಡಿ ಮೋಹಿಪ ಕೊಳಕು ನಯನಗಳುಳ್ಳ ಈ ನರ || ೩

ತತ್ತ್ವಶಾಸ್ತ್ರಗಳ ಕೇಳಿ ನಿನ್ನಯ ಸುಚಾರಿತ್ರಕ್ಕಾಮೋದ ತಾಳಿ
ಧಾತ್ರೀಸುಖವನು ತೊರೆದು ಮುಕ್ತಿಗೆ ಪಾತ್ರನೆನಿಸದೆ ವಿಟರ ದುಶ್ಚಾ
ರಿತ್ರವನೆ ನೆರೆ ಕೇಳಿ ಹಿಗ್ಗುವ ಶ್ರೋತ್ರಗಳು ತಳೆದಿರ್ಪ ಈ ನರ || ೪

೬೧. ಧ್ಯಾನವಮಾಡಿರೊ

ಧ್ಯಾನವ ಮಾಡಿರೊ ಜಿನೇಶ್ವರ
ಧ್ಯಾನವ ಮಾಡಿರೋ || ಪಲ್ಲವಿ

ಮಾನವ ಜನರಿಗೆ ಮತಿಕೊಡುವ ಮಹಾತ್ಮನ್ನ
ಸ್ತುತಿ ಮಾಡಿ ಯುಕ್ತಿಲಿಂದ ಗತಿ ಎಂಬೊ ಮುಕ್ತಿಪಡಿರೋ || ೧

ಪರಮ ಪಾವನ ಮೂರ್ತಿ ಧರೆಯೊಳು ಅವರ ಕೀರ್ತಿ
ಅರಹಂತ ದೇವರನ್ನ ಮರಿಯದೆ ಭಜಿಸಿರೊ || ೨

ಮಸಿನ ಮಡಿಉಟ್ಟು ಶಿಸ್ತಿಲಿಂದಲಿ ಬಂದು
ಮನಮುಟ್ಟಿ ಪೂಜಿಸ ಗಡನೆ ಗತಿ ಪಡೆಯಿರೋ || ೩

ತಿಗಡೊಳ್ಳಿ ಊರಲ್ಲಿ ಹೊಸದಾದ ಬಸ್ತಿಯಲ್ಲಿ
ವಾಸ ಮಡಿದ ಪಾಸಮೂರ್ತಿ ಮರಿಕಲ್ಲ ಮಾಡಿದ ಸ್ತುತಿ || ೪

೬೨. ಜೈನಧರ್ಮದಕ್ರಿಯಾ

ಜೈನ ಧರ್ಮದ ಕ್ರಿಯಾ ಹೇಳತೇವ ತಗದ ಬಾಯಾ
ನನ್ನ ಮ್ಯಾಲ ನಿಮ್ಮ ದಯಾ ಇರಬೇಕ ಪೂರ್ಣಾ
ಶಾಂತದಿಂದ ಕೇಳರಿ ಸರ್ವಜನಾ || ಪಲ್ಲವಿ

ಜೈನರಾಗಿ ಜನಿಸಿದ ಬಳಿಕ ಕ್ರಮನೋಡಿ ನಡಿಬೇಕ
ಪಾಪಪುಣ್ಯ ಅರಿಬೇಕ ತಿಳದ ನುಡಿ ಆಡಬೇಕ
ಆಹಾರ ನೋಡಿ ಮಾಡಬೇಕು ನೋಜನಾ
ನೀರ ಸೋಸಿ ಕುಡೀರಿ ಪ್ರತಿದಿನಾ || ೧

ಪಾತಾಳ ಬಟ್ಟಿ ತಗೋಬೇಕ ಜೋಡಪದರ ಮಾಡಬೇಕ
ಬಾಂವಿಯಲ್ಲಿ ಸೋಸಬೇಕ
ಅರವಿ ತೊಳದ ಮಾಡಬೇಕು ಹಸನಾ
ಇದರಂತ ಮಾಡ್ರಿ ಹಾಲುಹೈನಾ || ೨

ಮೈಲಿಗಿ ಬಟ್ಟಿ ಇರಬಾರದ ಉಪಯೋಗ ಮಾಡಿರಬಾರದ
ಚಿದ್ರ ಪದ್ರ ಆಗಿರಬಾರದ
ನಿಮ್ಮ ಮುಂದ ಮಾಡುವೆ ವರ್ಣನಾ
ಇಲ್ಲದಿದ್ರ ಕೊಲ್ಲುವಿರಿ ಕ್ರಿಮಿಗಳನಾ || ೩

ಮಲಿನ ಬಟ್ಟಿ ಇರಬಾರದಂತ ಹೇಳತೇನ ನಾನಿಂತ
ಕೇಳಬಹುದ ಯಾಕಂತ
ಭಗವಂತನ ನೈವೇದ್ಯ ಆಗೋದ ಅನ್ನಾ
ಗುರುಗಳಿಗೆ ಕೊಡತೇರಿ ಆಹಾರವನ್ನಾ || ೪

ನೀರ ಸೋಸಿ ಕುಡಿದಿದ್ದರ ಆಹಾರ ನೋಡಿ ಉಣದಿದ್ದರ
ದಾರಿ ನೋಡಿ ನಡಿದಿದ್ದರ
ಊರ ಸುಟ್ಟ ಮಾಡಿದಂತೆ ದಹನಾ
ತಟ್ಟುವದು ಪಾಪದ ಬಂಧನಾ || ೫

ತಿಗಡೊಳ್ಳಿ ಉರಸಿಸ್ತಿ ಬಸ್ತಿಯಲ್ಲಿ ಭಗವಂತ
ಜಿನೇಶ್ವರ ಅರಿಹಂತ
ಮಾಡುತೇವ ನಾವು ಧ್ಯಾನಾ
ಇದು ಮರಿಕಲ್ಲನ ಕವನಾ || ೬

೬೩. ಜೈನರಾಗಿಹುಟ್ಟಿಬಂದ

ಜೈನರಾಗಿ ಹುಟ್ಟಿಬಂದ ಣಮೋಕಾರ ಮಂತ್ರ ಒಂದ
ಅನಬೇಕ ಬಸ್ತಿಗಿ ಬಂದ ಮನಾ ತೊಳದ ಮಾಡಬೇಕು ಜಳಕ
ಸಂದೇಹವಿಲ್ಲದ ದೊರಕುವದು ಮೋಕ್ಷ ||

ಪುಣ್ಯ ಪಡಿಯುವುದಕ್ಕ ಹುಣವಿ ನೋಂಪಿ ಬೆಳಗಬೇಕು
ಸಿದ್ಧಶಾಸ್ತ್ರ ಓದಬೇಕ ಆಹಿಂಸಾದಿಂದ ಸಾಗಬೇಕ
ಸತ್ಯಾಸತ್ಯೆ ತಿಳದ ನಡಿಯಬೇಕು ||

ತೀರ್ಥಕ್ಷೇತ್ರ ನೋಡಬೇಕು ದಾನಧರ್ಮ ಮಾಡಬೇಕ
ಪುಣ್ಯೇದ ಗಂಟ ಕಟ್ಟಬೇಕ ಮಾಡಿ ಇಟ್ಟಾಂಗ ಸ್ಟಾಕ
ದೊರಕೀತ ಮುಂದೀನ ಜನ್ಮಕ್ಕ ||

ಬೈಲಹೊಂಗಲ ತಾಲೂಕ ತಿಗಡೊಳ್ಳಿ ಊರಚೊಕ್ಕ
ಎಲ್ಲಾರು ಬರಬೇಕು ಜಿನೇಶ್ವರನ ದರ್ಶನಕ
ಮರಿಕಲ್ಲ ಸಖಿ ಹೇಳಿದ ಖಡಕ ||