೪೧. ಪೊರೆಯೈಶ್ರೀಜಿನರಾಜ
ರಾಗ : ಕಾನಡ ತಾಳ : ಆದಿತಾಳ
ಪೊರೆಯೈ ಶ್ರೀಜಿನರಾಜ ಪೊರೆಯೈ
ಪೊರೆಯೊ ಶ್ರೀಜಿನರಾಜ ತರಣಿಕೋಟಿತೇಜ
ವರಮುನಿಜಿನರಾಜ ಪರಮಮೋಕ್ಷಕೆ ಬೀಜ || ಪಲ್ಲವಿ
ಭುವಿಯೊಳು ನಾ ಜನಿಸಿ ಭವಸಾಗರದಿ ಮುಳುಗಿ
ಅವಿವೇಕಿಯಾದೆನ್ನ ಜವದಿಂದ ನೀ ಬಂದು || ೧
ಭಾಸುರಾಂಗನೆ ನೀನು ಬೇಸರಗೊಳ್ಳದೆ
ಪ್ರಸಾದವನು ಕೊಟ್ಟು ದಾಸನಾಗಿಹ ಎನ್ನ || ೨
ಧರೆಯೊಳು ಮಂದರಗಿರಿಯೊಳು ನೆಲಸಿಹ
ವರಮುನಿಸುವ್ರತ ಚರಮಾಂಗಧರನೇ || ೩
೪೨. ಬೇಡುವೆನಾಂಬಿಡದೇ
ರಾಗ : ಕಮಾಜ್ ತಾಳ : ಆದಿತಾಳ
ಬೇಡುವೆ ನಾಂ ಬಿಡದೇ ಶ್ರೀ ಜಿನದೇವ
ಬೇಡುವೆ ನಾಂ ಬಿಡದೇ || ಪಲ್ಲವಿ
ಬೇಡುವೆ ವರಗಳ ಪಾಡುವೆ ಗುಣಗಳ
ಗಾಢದಿ ದಯೆಯಿಂದ ನೀಡುತ ಸುಖವನ್ನು || ೧
ಕಾಲಾಂಗಜರ ಗರ್ವ ಜಾಲವ ಕೆಡಿಸಿದೆ
ಮೇಲಾದ ಸುಖವಿತ್ತು ಪಾಲಿಸು ದೇವನೆ || ೨
ಧರೆಯೊಳು ಬೆಳ್ಗುಳ ಪುರವನ್ನು ಪಾಲಿಪ
ವರನಮಿಜಿನಪನೆ ಕರುಣಾಕೃಪೆಯದೋರು || ೩
೪೩. ಜಿನವರಭೋಭಾವಯೇ
ರಾಗ : ಹಿಂದೂಸ್ಥಾನಿ ಕಾಪಿ ತಾಳ : ಆದಿತಾಳ
ಜಿನವರಭೋ ಭಾವಯೇ ಭವಹರಣ ಕೃತಕರಣ || ಪಲ್ಲವಿ
ಪಂಕಜಸನ್ನಿಭ ವರವದನಾಂಚಿತ
ಸುಗುಣರತ್ನಾಕರ ನೇಮಿನಾಥೇಶ್ವರ || ೧
ಮಾನಸಕಲ್ಮಷ ನಾಶನಭಾಸ್ಕರ
ಶರಣಕೃಪಾಕರ ನೇಮಿನಾಥೇಶ್ವರ || ೨
ಮನಸಿಜನಾಶಕ ಶಾಂತರಸಾತ್ಮಕ
ಜ್ಞಾನವಿವರ್ಧಕ ನೇಮಿನಾಥೇಶ್ವರ || ೩
೪೪. ಪಾರಿಶ್ವೇಶಪಾಹಿಸದಾ
ರಾಗ : ಹಿಂದೂಸ್ಥಾನೀ ಭೈರವಿ ತಾಳ : ರೂಪಕತಾಳ
ಪಾರಿಶ್ವೇಶ ಪಾಹಿ ಸದಾ ಶ್ರೀಧರಾರ್ಚಿತ
ಪಾರಗೊಳಿಪ ಯೋಗಿವಂದ್ಯ ಭಕ್ತಸನ್ನುತ
ಸಾರಸಾಕ್ಷ ಧೀರಮಹಿಮನೆ || ಪಲ್ಲವಿ
ಪಾಲಿಸೆನ್ನ ದೇವದೇವ ತ್ರಿದಶಪೂಜ್ಯನೇ
ಕಾಲವಿಜಯ ಕರ್ಮರಹಿತ ಮಾರವಿಜಯನೆ
ಬಾಲತನದಿ ದೀಕ್ಷೆ ತಾಳ್ದನೇ || ೧
ಕಮಠೋಪಸರ್ಗವನ್ನು ಭರದಿ ತಾಳ್ದ ಮಹಿಮನೇ
ಸುಮನವಿಬುಧ ಜನರ ನೀಗ ಪೊರೆವ ದೇವನೇ
ಕಾಮಿತಾರ್ಥವಿತ್ತು ಪೊರೆವನೇ || ೨
ಕಾಮಕ್ರೋಧವನ್ನು ನಾಶಗೈದ ಮಹಿಮನೇ
ಪ್ರೇಮದಿಂದ ಸ್ತುತಿಸುವವರ ಪಾಲಿತಾರ್ಥನೇ
ಸೋಮನಂತೆ ಶಾಂತಚಿತ್ತನೇ || ೩
ಅಷ್ಟಮದವ ನಷ್ಟಗೈದ ಶ್ರೇಷ್ಠದೇವನೇ
ಸೃಷ್ಟಿಯೊಳಗೆ ಪೂಜಿಪರಿಗಭೀಷ್ಟವೀವವನೇ
ಕಷ್ಟವನ್ನು ದೂರ ಮಾಳ್ಪನೇ || ೪
ಚತುರ್ವಿಂಶತಿ ತೀರ್ಥಂಕರ ಬಿಡದೆ ಭಜಿಸುವ
ಕ್ಷಿತಿಯ ವಿಬುಧರುಗಳಿಗೀಗ ಕೊಡುವ ಮುಕ್ತಿಯ
ಅತಿಶಯ ಗತಿಯ ತೋರುವ || ೫
ಧರೆಯ ನೂತನಾದ್ರಿಯಲ್ಲಿ ಸ್ಥಿರದಿ ಮೆರೆಯುವ
ಪರಮಭಕ್ತರನ್ನು ಬೇಗದಿಂದ ಸಲಹುವ
ಪಾರಿಶ್ವೇಶನನ್ನು ಸುತ್ತಿಸುವ || ೬
೪೫. ಪೊರೆಶ್ರೀರಾಮಾರಮಣನೆ
ರಾಗ : ಶಂಕರಾಭರಣದ ಮೂರ್ಛನೆ ತಾಳ : ಆದಿತಾಳ
ಪೊರೆ ಶ್ರೀರಾಮಾರಮಣನೆ ಶ್ರೀರವಿಕಿರಣನೆ
ಕ್ರೂರತಿಮಿರಹರ ಜಯ ಜಯ ಜಯ
ಚಾರುತರ ಪ್ರಕಾಶನೇ ಭೂರಿದುರಿತಹರ ಶೂರಮನ್ಮಥ
ರಿಪು ಧೀರಸುಸುಖರ ಜಯ ಜಯ ಜಯ || ಪಲ್ಲವಿ
ಕಮಠೋಪಸರ್ಗವ ನಿಮಿಷದಿಂ ಜಯಿಸಿದ
ಸುಮನಸರೊಡೆಯನೆ ಸೈ ಸೈ ಸೈ
ಸೋಮನೇ ಶಮ ಪ್ರೇಮನೇ ಕಾಮಿತಫಲದನೆ
ಹೇಮಪ್ರಕಾಶನೆ ಸ್ವಾಮಿ ಪಾರ್ಶ್ವಜಿನ ಜಯ ಜಯ ಜಯ || ೧
ಮಂದಿಪ ಭವ್ಯಜನವೃಂದಕೆ ಸುಪಥವ
ತಂದೆಯೆ ತೋರುವೆ ಜಯ ಜಯ ಜಯ
ಇಂದು ನಾ ನೊಂದಿಪೇ ಅಂದದ ಬೆಳ್ಗೊಳ
ಚಂದದಿ ಪಾಲಿಪ ಬಂಧುರಮತಿಯುತ ಜಯ ಜಯ ಜಯ || ೨
೪೬. ಸಾರಿಬಂದೆನೊದೇವ
ರಾಗ : ಕಾಂಭೋಜಿ ತಾಳ : ರೂಪಕತಾಳ
ಸಾರಿ ಬಂದೆನೊ ದೇವ ಶ್ರೀವೀರನಾಥಾ
ಭೂರಿಗುಣಗಳನಾಂತ ಶ್ರೀರಮಾರಮಣಾ || ಪಲ್ಲವಿ
ಪರಮಾತ್ಮನನು ಮರೆತು ಪರಿಪರಿಯ ಭವಗಳಲಿ
ತಿರುತಿರುಗಿ ಬೇಸತ್ತು ಬಳಲಿ ನೊಂದು
ಸುರವಂದ್ಯ ನಾನೀಗ ವರಚರಣಪದ್ಮದೊಳು
ಶಿರ ಬಾಗಿ ನಮಿಸುತಲಿ ನೀ ಕರುಣಿಸೆಂದು || ೧
ನಾರಿಪೊಮನ್ಮಣ್ಣುಗಳೆ ಸಾರವಸ್ತುಗಳೆಂದು
ಸೇರಿಯವುಗಳ ನಂಬಿ ಸೂರೆ ಹೋಗಿ
ಸೇರಲೋಸುಗ ನಿನ್ನ ಭೂರಿಕೃತಿಗಳ ಗೈವ
ಸಾರಬುದ್ಧಿಯನಿತ್ತು ಪಾರುಗೈಸಯ್ಯಾ || ೨
ಕಲುಷಘಮಸಂತತಿಯ ನೆಲೆಯಳಿಸಿ ಬಲುಮೆಯೊಳು
ಬಲು ಖ್ಯಾತಿಯಂ ತಳೆದ ತ್ರೈಲೋಕ್ಯವಂದ್ಯಾ
ಲಲಿತಮುಕ್ತ್ಯಂಗನೆಯ ನಿಲಯವಾಸನೆ ಬಾಹು
ಬಲಿವಂದ್ಯ ಶ್ರೀಪಾದಸಲಿಲರುಹನೇ || ೩
೪೭. ಸುರಪತಿವಿನುತ
ರಾಗ : ಬೇಹಾಗ್ ತಾಳ : ಆದಿತಾಳ
ಸುರಪತಿವಿನುತ ವರವೀರಜಿನಪಾ
ಕರುಣಿಸು ಸಂತತಂ ಹರುಷದೊಳೆನ್ನ
ಪರಮಭಕ್ತಿಯೊಳ್ನಿನ್ನ ಚರಣಸರೋಜಂ
ಪರಿಪರಿ ವಿಧದೊಳುಪಚರಿಸುವೆ ನಾಂ || ಪಲ್ಲವಿ
ಹರಿವಂಶಜನೇ ದುರಿತವಿದೂರನೇ
ವರಮುಕ್ತಿ ರಮಣನೇ ಪರಮಪಾವನನೇ
ಧರೆಯೊಳು ಪಾವಾಪುರದೊಳು ನಿಂದು
ಪುರುಹೂತಪೂಜ್ಯನೇ ಸ್ಥಿರವೋಕ್ಷಪಡೆದೇ || ೧
ಅಕ್ಷಯವೆನಿಪ ಮೋಕ್ಷವ ಪಡೆದ
ದಕ್ಷನೆ ನೀನೆನ್ನ ರಕ್ಷಿಸು ನಿರತಂ
ಪಕ್ಷ ವರ್ಜಿತನೇ ಲಕ್ಷ್ಯವ ಕೊಡುವ
ಈಕ್ಷಿಸಿ ಶಿವಪದ ಭಿಕ್ಷಾಂದೇಹಿ ಮೇ || ೨
೪೮. ವೀರಜಿನಪಪೊರೆಯೊಕೃಪಾ
ರಾಗ : ದರ್ಬಾರು ತಾಳ : ರೂಪಕತಾಳ
ವೀರಜಿನಪ ಪೊರೆಯೊ ಕೃಪಾ ಮೂರುತಿಯೇ ನೀನು ಎನ್ನ
ವಾರಿಧಿಗುಣಗಭೀರಜೀಯ ತೋರುತ ಕರುಣವನು ಮುದದಿ || ಪಲ್ಲವಿ
ಕುಂಡಲಪುರಿವರೇಶ ನಿಮಗೆ ಮಂಡೆ ಬಾಗಿ ಬೇಡಿಕೊಂಬೆ
ಚಂಡಯಮನ ಬಾಧೆಗಿಡದೆ ಪಂಡಿತಾರ್ಯವಂದ್ಯ ದೇವ || ೧
ಕಮಲನಾಭ ಪೂಜ್ಯ ಎನ್ನ ಶ್ರಮವನೆಲ್ಲ ಪರಿಹರಿಸೋ
ಮಮತೆಯಿಂದ ಬೇಡಿಕೊಂಬೆ ವಿಮಲ ಹೃದಯ ಭವಜೀಯ || ೨
ಪಾವಾಪುರಿಯ ಕೆರೆಯ ಮಧ್ಯ ಕೇವಲಾಂಗ ಮುಕ್ತಿಗೈದೆ
ಜೀವದಯಾಪರನೆ ನಿನ್ನ ಭಾವಿಸುವೆ ಭಕ್ತಿಯಿಂದ || ೩
೪೯. ಅರುಹಶ್ರೀಚರಣವನೆನೆವೆನು
ರಾಗ : ಮೋಹನ ತಾಳ : ಆದಿತಾಳ
ಅರುಹಶ್ರೀಚರಣವ ನೆನೆವೆನು ಅನುದಿನ
ಜಿನರ ಶ್ರೀಚರಣವ ನೆನೆವೆ ನಾನು || ಪಲ್ಲವಿ
ಅರಗಿಳಿಗಳು ಫಲಪುಷ್ಪವ ನೆನೆವಂತೆ
ಅರಹಂತರಡಿಗಳ ನೆನೆವೆ ನಾನು || ೧
ಸಾಧುಸಜ್ಜನರು ಸತ್ಪುರುಷರ ನೆನೆವಂತೆ
ಶ್ರೀಸಿದ್ಧರಡಿಗಳ ನೆನೆವೆ ನಾನು || ೨
ಉತ್ತಮಸತಿ ತನ್ನ ಪುರುಷನ ನೆನೆವಂತೆ
ಆಚಾರ್ಯರಡಿಗಳ ನೆನೆವೆ ನಾನು || ೩
ಹೊಲಕೋದ ಪಶು ತನ್ನ ಕರುವನ್ನು ನೆನೆವಂತೆ
ಉಪಾಧ್ಯಾಯರಡಿಗಳ ನೆನೆವೆ ನಾನು || ೪
ವಸಂತಕೋಗಿಲೆ ವನವನ್ನು ನೆನೆವಂತೆ
ಸಾಧುಗಳಡಿಗಳ ನೆನೆವೆ ನಾನು || ೫
ಇಂತಿವರೈವರ ನೆನೆಯಲು ಅನುದಿನ
ಪಿಂತೆ ಮಾಡಿದ ಪಾಪ ಹರಿಯಲೆಂದು || ೬
ಕಂತುವೈರಿಯ ಗೆಲ್ದ ಶ್ರೀಯಾದಿಜಿನಪನ
ಸಂತಸವನು ತಾಳ್ದು ನೆನೆವೆ ನಾನು || ೭
೫೦. ಆರಸಿರಿಆರತನು
ರಾಗ : ಮೋಹನ ತಾಳ : ಆದಿತಾಳ
ಆರ ಸಿರಿ ಆರ ತನು ಧನಪುತ್ರಮಿತ್ರರು
ಆರಿಗೂ ಸ್ಥಿರವಿಲ್ಲ ಸಂಸಾರದ ವಿಭವ
ಚಾರುಶ್ರೀ ಜಿನಮತವ ನಂಬು ಜೀವನೆ
ನಿನಗೆ ಬೇರೊಂದು ಶರಣಿಲ್ಲವೇ || ಪಲ್ಲವಿ
ಶ್ರೀಯುಯೌವನ ವಿಭವ ಮಾಯ ಮದ ಮಾ
ತ್ಸರ್ಯಕಾಯನಿರ್ಮಲವಂಶ ರೂಪಸೌಭಾಗ್ಯವು
ವಾಯುಗೊಡ್ಡಿದ ಸೊಡರು ಮಿಂಚುಮಂಜಿನ ಪುಂಜ ನೀರ ಬೊಬ್ಬಳಿಕೆಯಂತೆ
ಹೇಯ ಸಂಸಾರವು ಶರೀರ ತಾನಸ್ಥಿರವು
ಶ್ರೇಯಾಂಸಪತಿ ಶಾಂತಿ ಜಿನರ ಪಾದಗಳಿಗೇ
ಕಾಯ ಮನೋವಚನದಲ್ಲಿ ನಂಬು ಜೀವನೇ ನಿನಗೆ ಮತ್ತೊಂದು
ಶರಣಿಲ್ಲವೈ || ೧
ಗುರುರಾಜಮಂತ್ರಿ ಸುರಸೇನೆ ವಜ್ರಾಯುಧವು
ಹರಿವೈರಿಚೌದಂತಮೆನಿಪ ಐರಾವತವು
ಅರಸಿಯರು ರಂಭೆಮೇನಕಿ ತಿಲೋತ್ತಮೆಯು ದೇವ ಕಾಂತೆಯರೆನಿಪರು
ಪಿರಿದು ಆಯುಶ್ಯ ಅಮೃತಾಹಾರವು
ಸುರಪತಿಗೆ ಪರುಷ ಚಿಂತಾಮಣಿಯು ಕಲ್ಪತರು ಗೃಹಗಳಲಿ
ಪರಮೇಶನೊಲುಮೆಯಾಗಿರ್ದ ಇಂದ್ರತ್ವತಕ್ಷಣದೊಳದೃಶ್ಯವಾಯಿತು || ೨
ಈರೇಳು ರತ್ನ ಎಂಬತ್ನಾಲ್ಕುಲಕ್ಷಜನ
ಸೂರ್ಯನ ರಥಕೆ ಮಿಗಿಲೆನಿಪ ರತ್ನದ ರಥವು
ನಾರಿಯರು ತೊಂಬತ್ತಾರುಸಾಸಿರವು ಪದಿನೆಂಟು ಕೋಟಿ ಜಾತ್ಯಶ್ವ
ಶಾರದೆಯ ನೆಲೆಗೆ ಮಿಗಿಲೆನಿಪ ಸಾಕೇತಪುರ
ಮೂರುವರೆಕೋಟಿಬಂಧುಗಳು ಮೈಗಾವಲ
ವೀರಭಟರಿರುತಿರಲು ಕ್ಷಣದೊಳದೃಶ್ಯವಾಯ್ತು ಸಗರೇಂದ್ರಚಕ್ರಧರಗೇ || ೩
ಬಲದೇವವಾಸುದೇವಾದಿಗಳ ಐಶ್ವರ್ಯ
ಹಲವು ದೇಶವು ಹಸ್ತಿ ರಥತುರಗ ಭಂಡಾರ
ಒಲುಮೆಯ ಸ್ತ್ರೀಯರು ಪುತ್ರಸಂತತಿಮಂತ್ರಿಮಂಡಳಿಕ ಸಾಮಂತರಿರಲು
ಜಲಜನಾಭನ ಮಗನಗೆಲುವ ರೂಪಿನ ಸೊಬಗು
ಬಲವಂತ ಶ್ರೀ ರಾಮರಾವಣವಿಭೀಷಣರು
ಕಲಿಕೃಷ್ಣ ದುರ್ಯೋಧನಪಾಂಡವಾದಿಗಳ ಸಿರಿಯು
ಕ್ಷಣದೊಳದೃಶ್ಯವಾಯಿತು || ೪
ದೇವಮಾನವರುರಗಪತಿಯ ವಿಭವವಧ್ರುವವು
ಶ್ರೀವನಿತೆಯುಳಿದ ಮನುಜರಲಿ ಸ್ಥಿರವಾಗಿಹಳೇ
ಜೀವ ಕೇಳಾ ನಿನ್ನ ತನುಧನವು ಮೋಹದಿಂದೇನಾಗದು
ಆವಾವಗತಿಗಳಲಿ ತೊಳಲಿ ಬಳಲಿಯೆ ಬಂದು
ಸಾವು ಹುಟ್ಟುವ ಚತುರ್ಗತಿಗಳ ಭ್ರಮಣೆಯಲಿ ತಿರುಗಿ
ನೋವದಿರು ನಂಬು ಜೀವನೆ ನಿನಗೆ ಬೇರೊಂದು ಶರಣಿಲ್ಲ ವೈ || ೫
ಮಾಡುವುದು ದೇವತಾರ್ಚನೆಯ ಗುರುಪೂಜೆಯನು
ಮಾಡುವುದು ದಾನ ಧರ್ಮಗಳನು ಅನುದಿನವು
ಮಾಡುವುದು ಶೀಲೋಪವಾಸ ಜಪತಪೋ ನಿತ್ಯನೇಮಾದಿಷಟ್ಕರ್ಮಗಳನು
ಆಡುವುದು ಸತ್ಯವನು ಪರವಧುವಿಗೆಳಸದಿರು
ಕೇಡುಳ್ಳ ಸಂಸಾರವನು ನಂಬಿ ಕೆಡಬೇಡ
ಪಾಡಳಿದು ಭಯ ಭಕ್ತಿಯಲಿ ನಂಬು ಜೀವನೆ ನಿನಗೆ ಮತ್ತೊಂದು
ಶರಣಿಲ್ಲವೈ || ೬
ಭವರೋಗವೈದ್ಯ ಬಂಕಾಪುರದ ಶಾಂತೀಶ
ರವಿಕೋಟಿತನುತೇಜ ಚಿನ್ಮಯ ಚಿದಾನಂದ
ಭುವನತ್ರಯಾಧಿಪತಿ ಐದನೆಯ ಚಕ್ರೇಶ ಪದಿನೆಂಟು ದೋಷರಹಿತಾ
ಜಿನಮಾರ್ಗವನು ತೋರಿ ಭವ್ಯಜನಸಂತತಿಗೆ
ಜಿನಪದವಿಯನು ಕೊಡುವ ಅಘಹರನೆ ಚಿದ್ರೂಪ
ಭವಹರ ಭವನಾಶ ಸಂಗಮನ ಬಿನ್ನಪವನೊಲಿದು ರಕ್ಷಿಪುದಯ್ಯಾ || ೭
Leave A Comment