೨೧. ಭಾವಿಸದಲೆನಾಕೆಟ್ಟೆ
ರಾಗ : ಕಲ್ಯಾಣಿ ತಾಳ : ಅಟ್ಟತಾಳ
ಭಾವಿಸದಲೆ ನಾ ಕೆಟ್ಟೆ ಜಿನೇಶನ ಪಾವನಪದಯುಗವ
ಆವಕಾಲದೊಳವನ ಪದದೊಳು ದೇವವಿಭುನಾಗೇಂದ್ರರಸುರರು
ಭೂವರೇಣ್ಯಖಗೇಂದ್ರಮುಖ್ಯರು ಸೇವೆಗೆಯ್ವುದನರಿಯದಲೆ ನಾಂ || ಪಲ್ಲವಿ
ಸಾಸಿರನಾಮಾಧಿಪ ಮುಕ್ತೀಶನ ಭೂವಲಯದದೊಳ್ನುತನ
ಕೋವಿದಾಗ್ರೇಸರರು ತಮ್ಮಾ ಜೀವಮಾನವನೆಲ್ಲವಂ ಶ್ರೀಭಾವಜಾಂತಕ
ನಡಿಯ ಸ್ಮರಣೆಯೋಳ್ತೀವಿ ಕಳೆದುದನರಿಯದಲೆ ನಾಂ || ೧
ಉಂಡನುಪಮಸುಖವ ಸದೃಷ್ಟಿಯಿಂ ಕಂಡು ಮೂಲೋಕವನು
ಚಂಡಭಾನುವಿಕಾಸಚಿನ್ಮಯ ಪಿಂಡ ಕುನಯವಿತಂಡ ಶಿಖಿ ಬಲುಗಂಡು
ಗಲಿಗಳ ಕಲಿಯ ಬೊಮ್ಮನ ಮಂಡಿಸುತ ಸತ್ಕರಿಸುತಲಿ ನಾಂ || ೨
ಅಜರಾಮರಸುಖಿಯ ಸರ್ವಜ್ಞನ ಭುಜಬಲಿನುತಪದನ ಸುಜನಸಂಘವು
ಭಜಿಸಿ ಪೂರ್ವದಿ ನಿಜದ ತತ್ತ್ವವನರಿದು ಜಪದಿಂದಜನ ರೂಪವನಾಂತು
ಮುದದಿಂ ಭಜನೆಗರ್ಹತೆ ಪಡೆದುದನು ನಾಂ ಭಾವಿಸದಲೆ ನಾ ಕೆಟ್ಟೆ || ೩
೨೨. ಭಾಸುರಾಂಗನೆದೋಷದೂರನ
ರಾಗ : ಜುಂಜೋಟಿ ತಾಳ : ರೂಪಕತಾಳ
ಭಾಸುರಾಂಗನೆ ದೋಷದೂರನೆ ಶ್ರೀಶಜೀನೆಶಾ
ಈಶಸುರ ನರೇಶ ಪಾಲಿಸು ದಾಸನಾದೆನ್ನ || ಪಲ್ಲವಿ
ಕಾಮಮದಹರ ಭೂಮಿಪಾಲಸುತ್ರಾಮವಂದಿತ
ಕೋಮಲಾಂಗನೆ ಪ್ರೇಮದಿಂ ಕೊಡು ಕಾಮಿತಾರ್ಥವ || ೧
ಪೊರೆಯೊ ನಿನ್ನಯ ಚರಣವಾರಿಜಕ್ಕೆರಗಿ ಬೇಡುವೇ
ಸರಸಿಜಾಕ್ಷನೆ ಸ್ಫುರಿತತೇಜನೆ ಹರುಷದೊಳೆನ್ನ || ೨
ಜ್ಞಾನಮೂರ್ತಿಯೆ ಭಾನುಶಶಿನಿಭ ಸಾನುರಾಗದಿಂ
ಮಾನನೀಯನೆ ನಿನ್ನ ರೂಪವ ಧ್ಯಾನಮಾಳ್ಪೆನು || ೩
೨೩. ಈಶಸುರಾಧೀಶವರಜಿನೇಶ
ರಾಗ : ಕಮಾಚ್ ತಾಳ : ರೂಪಕತಾಳ
ಈಶ ಸುರಾಧೀಶ ವರಜಿನೇಶ ಪಾಹಿ ಮಾಂ
ಜಯಜಯ ಈಶ ಸುರಾಧೀಶ || ಪಲ್ಲವಿ
ಅಷ್ಟಮದಹರಾ ದುರಿತಶೈಲಭಂಜನಾ
ಶಿಷ್ಟಜನಸಂತುಷ್ಟಮೋಕ್ಷಪಟ್ಟಕಾಧರಾ || ೧
ನೀರಜಾನನಾ ಭವ್ಯವಾರಮೋಹನಾ
ಸಾರಸುಗುಣಾಪಾರಮಹಿಮ ಮಾರಭಂಜನಾ || ೨
ಭಕ್ತಸನ್ನುತಾ ದೇವನಿಕರವಂದಿತಾ
ಮುಕ್ತಿದಾತ ಸುಖಪ್ರದಾತ ನಿಖಿಳಪೂರಿತಾ || ೩
ಘಾತಿಮಂಡಲಾ ದುರಿತಘಾತನಿರ್ಮಲಾ
ಜಾತರೂಪ ವೀತರಾಗ ಹೇ ತಪೋಜ್ಜ್ವಲಾ || ೪
೨೪. ಶ್ರೀಜಿನೇಶನೇಪೊರೆಯೈ
ರಾಗ : ಶಂಕಾರಾಭರಣ ತಾಳ : ಅಟ್ಟತಾಳ
ಶ್ರೀಜಿನೇಶನೇ ಪೊರೆಯೈ ಭಜಿಪೆನು ನಿನ್ನನು ನಾನು ಸತತವು || ಪಲ್ಲವಿ
ಇಂದ್ರವಂದಿತ ಸಕಲಸದ್ಗುಣಸಾಂದ್ರನಾದ ಮುನಿಜನ
ವೃಂದವಂದಿತನಾದ ಧರ್ಮವ ಹೊಂದಿ ಭವ್ಯರ ಬೋಧಿಸುತ್ತಿಹ || ೧
ಈ ಜಗದೊಳಗುಳ್ಳ ಭವ್ಯರ ರಾಜಿಯನು ನೀ ಸೌಖ್ಯಕೇ
ಭಾಜನರ ಮಾಡಿರುವ ಕ್ರತುಭುಜ ಭ್ರಾಜದಿಂ ರಾರಾಜಿಸುತ್ತಿಹ || ೨
ಭೂಮಿಯೊಳು ರೂಢಿಯನು ಪೊರೆದಿಹ ಈ ಮಹಾಬೆಳ್ಗುಳವ
ಪ್ರೇಮದಿಂದಲಿ ನಿರತ ಪೊರೆಯುವ ರಾಮಣೀಯಕ ಮಹಿಮನೆನಿಸುವ || ೩
೨೫. ಆದಿನಾಥನೆಮೇದಿನೀಶನೆ
ರಾಗ : ಹಿಂದೂಸ್ಥಾನಿ ತೋಡಿ ತಾಳ : ಆದಿತಾಳ
ಆದಿನಾಥನೆ ಮೇದಿನೀಶನೆ ಪಾದಪಂಕಜಕೊಂದಿಪೇ
ಕಾದು ರಕ್ಷಿಸು ಲೋಕವಂದ್ಯನೆ ಪೌದನಾಪುರಾಧೀಶನೇ || ಪಲ್ಲವಿ
ವಾರಿಜಪ್ರಿಯ ತೇಜನೆ ಬಹುಕಾರಣಾತ್ಮಕಮೂರ್ತಿಯೇ
ಪಾರಗೊಳಿಸೈ ಎನ್ನನೀ ಸಂಸಾರಶರಧಿಯಿಂದೀಗಲೇ || ೧
ಹಿಂದೆ ಮಾಡಿದ ಕರ್ಮದಿಂದಲಿ ಇಂದು ಪಡುವೆನು ದುಃಖವ
ತಂದೆಯೇ ನಾಂ ಪೇಳಲಶಕ್ಯವು ಮಂದಮತಿಯಾಗಿರುವೆನು || ೨
ಮೂರುಲೋಕದ ಅಗ್ರಭಾಗದೊಳ್ ಸೇರಿ ನೆಲಸಿದ ಸೌಖ್ಯದಿ
ಬಾರಿಬಾರಿಗು ಧ್ಯಾನಮಾಳ್ಪೆನು ಧೀರ ಕರುಣಿಸು ಪ್ರೇಮದಿ || ೩
ತಂದೆತಾಯಿಗಳಿಲ್ಲ ಎನಗೇ ಬಂಧುಬಳಗವು ತಾನಿಲ್ಲ
ತಂದೆಯೇ ನಾಂ ನೊಂದಿ ಬಂದೆನು ಕಂದನನು ನೀ ಪಾಲಿಸು || ೪
೨೬. ಪುರುಪರಮೇಶಾಕುರುಣಿಸೈ
ರಾಗ : ಫರ್ಜೂ ತಾಳ : ಆದಿತಾಳ
ಪುರುಪರಮೇಶಾ ಕರುಣಿಸೈ ದೇವಾ
ಸುರನರಪೂಜ್ಯನೆ ಪರಮನೆ || ಪಲ್ಲವಿ
ಭೋಗವ ತೊರೆದು ಯೋಗವ ಮಾಡಿ ನೀ
ಸಾಗಿದೆ ಮುಕ್ತಿಗೆ ಜಗದೀಶ || ೧
ಜ್ಞಾನವಿಲ್ಲದೆ ನಿನ್ನ ಧ್ಯಾನವ ಮಾಡದೆ
ಹೀನರಾದೆಮ್ಮನು ಜಿನರಾಜ || ೨
ಸಾಸಿರನಾಮನೆ ಭಾಸುರತೇಜನೆ
ಪೋಷಿಸಿಯೆನ್ನೊಳು ತೋಷಿಸೈ || ೩
೨೭. ಪುರುಹೂತಪೂಜ್ಯನೆಪುರುಜಿನ
ರಾಗ : ಜಂಗಲ್ ತಾಳ : ಆದಿತಾಳ
ಪುರುಹೂತಪೂಜ್ಯನೆ ಪುರುಜಿನನಾಥನೆ ಪರಿಪಾಲಿಸು ಎನ್ನ
ತಿರುಗಿತಿರುಗಿ ಬಹುತಾಪವ ಹೊಂದಿಹೆ ಕರುಣಿಸು ಗತಿಯೆನಗೆ || ಪಲ್ಲವಿ
ಮೇರುಪರ್ವತದೊಳು ಕ್ಷೀರವ ಮಿಂದನೆ ಚಾರುವೈಭವಯುತನೇ
ಮಾರವಿದೂರನೆ ಸೇರಿದೆ ನಿಮ್ಮಡಿ ಸಾರಸುಖವದೋರೈ || ೧
ಕಾಲ ವಿಜಯನೇ ಮೂರ್ಲೋಕದೊಡೆಯನೇ ಬಾಲನ ಬಿನ್ನಪವಾ
ಲೀಲಾ ಮಾತ್ರದಿ ಲಾಲಿಸಿ ಪಾಲಿಸು ಜೋಲಿಗಯ್ಯದೆ ಸುಖವಾ || ೨
ತಂದೆ ತಾಯ್ಗಳು ಬಂಧುಬಳಗವೆಲ್ಲ ಎಂದಿಗು ಸ್ಥಿರವಲ್ಲ
ಕಂದನು ನಿಮ್ಮಯ ನಿಂದು ನಾ ಬೇಡುವೆ ಚಂದದ ಸುಖದೋರೈ || ೩
೨೮. ಕರುಣಾಚರಣಾಧರಣಾ
ರಾಗ : ಮೋಹನ ತಾಳ : ಆದಿತಾಳ
ಕರುಣಾ ಚರಣಾ ಧರಣಾ ಸುಗುಣಾ ಶ್ರೀ || ಪಲ್ಲವಿ
ಪುರುಪರಮೇಶನೇ ಶರಧಿಗಂಭೀರನೇ
ಪುರುಹೂತಸೇವ್ಯನೇ ಪೊರೆವುದು ನಿರತಂ || ೧
ಮಂದರಧೀರನೇ ಸುಂದರಾಕಾರನೇ
ಕಂದರ್ಪವಿಜಯನೇ ವಂದಿಪೆ ನಿನ್ನನೇ || ೨
ಮೆರೆಯುವ ಬೆಳ್ಗುಳ ಪುರವನ್ನು ಪೊರೆಯುವೆ
ಹರುಷವಿತ್ತೆನ್ನನು ಪೊರೆವುದು ನಿರತಂ || ೩
೨೯. ಆದಿಪರಮೇಶನೇಸದೃಶ್ಯನೇ
ಆದಿಪರಮೇಶನೇ ಸದೃಶ್ಯನೆ ಸುಸೇವ್ಯನೇ
ಸಾದರದಿ ನಿನ್ನ ನುತಿಪೇ ಹೇ ದಯಾಬ್ಧಿಚಂದ್ರನೇ || ಪಲ್ಲವಿ
ಕ್ರೂರಘಾತಿಕರ್ಮವೆಂಬ ಶೂರವೈರಿಯನ್ನು ಗೆಲ್ದ
ವೀರನೇ ನಾ ನಿನ್ನ ಚರಣಸಾರಸವನು ನಮಿಸುವೇ || ೧
ಪರಮಕೇಶಲಾಖ್ಯಜ್ಞಾನ ಸೂರ್ಯನುದಯವಾಗಲೊಡನೆ
ಸುರರು ಬಂದು ನಿಂದು ಭಕ್ತಿಭರದಿ ಸ್ತುತಿಯ ಗೈದರು || ೨
ರಾಜರಾಜ ರಚಿತಮಪ್ಪ ಮೂಜಗಕಾಶ್ಚರ್ಯವಾದ
ಭ್ರಾಜಸಮವಸರಣದಲ್ಲಿ ರಾಜಮಾನನಾಗಿ ನೀ || ೩
ಸಾರದಿವ್ಯನಾದದಿಂದ ಸಾರಧರ್ಮಕಥನ ಗೈದು
ಭೂರಿಭವ್ಯಜೀವಗಳನು ಪೊರೆದ ಆದಿಬ್ರಹ್ಮನೇ || ೪
ಕಮಲನಾಭ ನಿನ್ನ ಗುಣಕೆ ಸಮವ ಕಾಣೆನಾರ್ಯವರ್ಯ
ವಿಮಲಹೃದಯದಿಂದ ನಿನ್ನ ಅಮಲ ನಾಮವ ಸ್ಮರಿಸುವೇ || ೫
೩೦. ವೃಷಭೇಶಪಾಲಿಸೆನ್ನನು
ರಾಗ : ತೋಡಿ ತಾಳ : ಆದಿತಾಳ
ವೃಷಭೇಶ ಪಾಲಿಸೆನ್ನನು ಶಶಿಸೂರ್ಯಕೋಟಿತೇಜನೇ
ಶ್ರೀ ಯುತ ಪ್ರಪೂತ ಅನಾಥರಕ್ಷಕ || ಪಲ್ಲವಿ
ಅಕಲಂಕರೂಪನೇ ಮಕರಾಂಕ ನಾಶನೇ
ಸಕಲೋರ್ವಿಗೀಶನೇ ಸುಖದ ಚಿದ್ರೂಪನೇ || ೧
ಮಂದರಧೀರನೇ ವಂದಿಸಿ ಪೂಜಿಪೇ
ಚಂದದಿಂದಲಿ ಅರವಿಂದಂಗಳಿಂದಲಿ || ೨
ಸಾಸಿರನಾಮನೇ ಭಾಸುರತೇಜನೇ
ದಾಸನಾದೆನ್ನನು ಪೋಷಿಸು ಕರುಣದಿಂ || ೩
Leave A Comment