ಇಂದು ಸಂಶೋಧನೆಯ ಪರಿಕಲ್ಪನೆ ವ್ಯಾಪಕವಾಗಿದೆ. ಸಾಂಸ್ಕೃತಿಕ ಸಂಶೋಧನೆಯು ಆಧುನಿಕ ಕಾಲಘಟ್ಟದ ಕೊಡುಗೆಯಾಗಿದೆ. ಸಾಂಸ್ಕೃತಿಕ ಸಂಶೋಧನೆಯ ಮುಖ್ಯ ಉದ್ದೇಶ ಗತಕಾಲವನ್ನು ವರ್ತಮಾನಕಾಲದ ಅಗತ್ಯಕ್ಕೆ ತಕ್ಕಂತೆ ಮರುಚಿಂತನೆ ಮಾಡಿಕೊಳ್ಳುವುದು. ಸಂಸ್ಕೃತಿ ಎನ್ನುವುದು ಅರ್ಥಪೂರ್ಣ ಕ್ರಿಯೆಗಳ ವ್ಯವಸ್ಥೆ. ರಾಜಕೀಯ ಹಾಗೂ ಆರ್ಥಿಕ ಶಕ್ತಿಗಳ ಕಾರಣದಿಂದ ಮೂಡುತ್ತದೆ. ಸಂಸ್ಕೃತಿಯನ್ನು ಕುರಿತು ಕನ್ನಡ ನಾಡಿನಲ್ಲಿ ನಡೆದಿರುವ ಅಧ್ಯಯನವು ಎರಡು ನೆಲೆಗಟ್ಟುಗಳಲ್ಲಿ ನಡೆದಿದೆ.

೧. ಸಂಸ್ಕೃತಿ ಶೋಧ, ೨. ಸಂಸ್ಕೃತಿ ಚಿಂತನೆ

ಸಂಸ್ಕೃತಿ ಶೋಧವು ಸಾಂಸ್ಕೃತಿಕ ಚಿಂತನೆಯ ನೆಲೆಗಳನ್ನು ಆಶ್ರಯಿಸುತ್ತದೆ ಮತ್ತು ರೂಪಿಸುತ್ತದೆ. ಸಂಸ್ಕೃತಿ ಚಿಂತನೆಯ ನೆಲೆಯು ಸಾಂಸ್ಕೃತಿಕ ಶೋಧಗಳ ಫಲಿತಾಂಶಗಳನ್ನು ಒಳಗೊಂಡಿರುತ್ತದೆ. ಚರಿತ್ರೆ, ಧರ್ಮ, ಜನಾಂಗಿಕ, ಕಲಾತ್ಮಕ ವಿಷಯಗಳು ಸಾಹಿತ್ಯ ಮುಂತಾದವು ಕನ್ನಡ ಸಂಸ್ಕೃತಿಯ ಚಿಂತನೆಯ ಹಲವು ಮುಖ್ಯ ಕೇಂದ್ರಗಳಾಗಿವೆ. ಸಂಸ್ಕೃತಿ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಕೆಲವು ನಿರ್ದಿಷ್ಟ ಆಸಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಬೆಳೆದಿವೆ. ಸಂಸ್ಕೃತಿಯ ಶೋಧವು ಪ್ರಮುಖವಾಗಿ ಶಾಸನಗಳನ್ನು ಮುಖ್ಯ ಆಕರಗಳೆಂದು, ಸಾಹಿತ್ಯ ಕೃತಿಗಳು, ಐತಿಹ್ಯಗಳು, ಇತರೆ ಕಲೆಗಳನ್ನು ಅನುಷಂಗಿಕ  ಆಕರಗಳೆಂದು ಪರಿಗಣಿಸಿದೆ. ಸಂಶೋಧನೆಯಲ್ಲಿ ಅಂತರಶಿಸ್ತೀಯ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ. ಸಂಶೋಧಕರು ಆಯ್ಕೆ ಮಾಡಿಕೊಂಡ ವಸ್ತುವನ್ನು ಪೂರಕ ಆಕರಗಳೊಡನೆ ಅಧ್ಯಯನಕ್ಕೊಳಪಡಿಸಿ ಅಧ್ಯಯನ ನಡೆಸಿರುವುದುಂಟು.

ಸಾಂಸ್ಕೃತಿಕ ಸಂಶೋಧನೆಯು ಆರಂಭದಲ್ಲಿ ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವಾಗಿ ಪರಿಗಣಿಸಿ ಸಾಂಸ್ಕೃತಿಕ ಕಥನವನ್ನು ರೂಪಿಸುವ ಮಾದರಿಯಾಗಿತ್ತು. ಜೊತೆಗೆ ಗತಕಾಲವನ್ನು ಕಾಲಾನುಕ್ರಮದಲ್ಲಿ ಹೊಂದಿಸುವುದಾಗಿತ್ತು. ಕನ್ನಡ ಸಂಸ್ಕೃತಿ ಚರಿತ್ರೆಯ ಹಳಮೆಯನ್ನು ಸಾಧಿಸುವುದು ಆ ಮೂಲಕ ಅಭಿಮಾನವನ್ನು ಮೂಡಿಸುವುದಾಗಿತ್ತು. ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನಗಳು ಶುದ್ಧ ವೈಜ್ಞಾನಿಕ ನೆಲೆಗಟ್ಟಿಗೆ ಸೇರಲು ಸಾಧ್ಯವಿಲ್ಲ.