ಕನ್ನಡ ಸಂಶೋಧನೆಯು ಪ್ರವೇಶಿಸಿರುವ ಅನೇಕ ಮಹತ್ವದ ನೆಲೆಗಳಲ್ಲಿ ಶಾಸನ ಶಾಸ್ತ್ರವು ಒಂದು. ಶಾಸನಗಳನ್ನು ಕುರಿತಾದ ಅಧ್ಯಯನವು ಪುರಾತತ್ವ ಇಲಾಖೆಯ ಅಡಿಯಲ್ಲಿ ಪ್ರಾರಂಭ ಕಾಲದಲ್ಲಿ ನಡೆದಿರುವುದನ್ನು ಗಮನಿಸಬಹುದು. ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆ ಇಲ್ಲ ಎನ್ನುವ ಭಾವನೆ ಪಾಶ್ಚಾತ್ಯ ವಿದ್ವಾಂಸರಲ್ಲಿ ಪ್ರಕಟವಾದ ಸಂದರ್ಭದಲ್ಲಿ, ಇತಿಹಾಸದ ಅಧಿಕೃತ ದಾಖಲೆಗಳಿಲ್ಲ ಎಂದು ಆಪಾದಿಸುತ್ತಿದ್ದ ಸಂದರ್ಭದಲ್ಲಿ ಶಾಸನಗಳು ಪ್ರಮುಖ ದಾಖಲೆಗಳಾಗಿ ಅವರಿಗೆ ಕಂಡು ಬಂದವು. ಆರಂಭ ಕಾಲದ ಪಾಶ್ಚಾತ್ಯ ವಿದ್ವಾಂಸರಿಗೆ ರಾಜಕೀಯ ಹಾಗೂ ಸಾಮಾಜಿಕ ಚರಿತ್ರೆಯನ್ನು ಪುನರ‌್ರಚಿಸುವಲ್ಲಿ ಉಳಿದೆಲ್ಲವುಗಳಿಗಿಂತ ಶಾಸನಗಳು ಮಹತ್ತರವಾದವುಗಳು ಎನಿಸಲು ಮುಖ್ಯ ಕಾರಣಗಳೆಂದರೆ ೧.ಬಹುತೇಕ ಶಾಸನಗಳು ತಾನು ಹುಟ್ಟಿದ ಕಾಲಕ್ಕೆ, ಸ್ಥಾನಕ್ಕೆ, ಪರಿಸರಕ್ಕೆ ಸಂಬಂಧಪಟ್ಟವಾಗಿರುವುದು.              ೨.ಶಾಸನಗಳ ಪಾಠಗಳನ್ನು ಬರೆಯಲು ಆರಿಸಿಕೊಂಡ ಶಿಲೆಗಳು ಅಥವಾ ತಾಮ್ರಪಟಗಳ ಸ್ಥಳಗಳು ಸೀಮಿತವಾಗಿರುವುದು. ೩.ಯಾವ ವಿಷಯವನ್ನು ದಾಖಲು ಮಾಡಲು ಶಾಸನಗಳನ್ನು ಬರೆಯಬೇಕಿತ್ತೋ ಆ ವಿಷಯದ ನಿರೂಪಣೆಗೆ ಲಭ್ಯವಿದ್ದ ಜಾಗದಲ್ಲಿ ನಿರ್ದಿಷ್ಟ ಜಾಗವನ್ನು ಮೀಸಲಾಗಿಡಬೇಕಿದ್ದಿತು. ಅಂದರೆ ಶಾಸನ ರಚನೆ ಸಾಂದರ್ಭಿಕವಾದುದು, ನಿರ್ದೇಶಿತವಾದುದು, ತನ್ನ ಅಭಿವ್ಯಕ್ತಿಗೆ ಆಶ್ರಯಿಸಬೇಕಾದ ಪರಿಮಿತಿಯಿಂದ ನಿರ್ಬಂಧಿತವಾದುದಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸನಗಳಲ್ಲಿರುವ ಮಾಹಿತಿಯು ವಾಸ್ತವ ಸಂಗತಿಯಿಂದ ಕೂಡಿದ್ದು ಸತ್ಯದ ಸಂಗತಿಯತ್ತ ಸಾಗುವುದೆಂಬ ಆಶಯವನ್ನು ಕಲ್ಪಿಸಿಕೊಂಡ ಪಾಶ್ಚಾತ್ಯ ಹಾಗೂ ದೇಶೀಯ ವಿದ್ವಾಂಸರಿಗೆ ಶಾಸನಗಳು ಮೊದಲವರ್ಗದ ಆಕರಗಳಾಗಿ ಕಂಡುಬಂದವು.

ಕನ್ನಡನಾಡಿನ ವಿವಿಧ ಅರಸು ಮನೆತನಗಳ, ಸಾಮಂತರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳೆನಿಸಿವೆ. ಕನ್ನಡ ನಾಡಿನಲ್ಲಿ ಪ್ರಕಟವಾಗಿರುವ ಹಾಗೂ ಪ್ರಕಟವಾಗದೆ ಉಳಿದಿರುವ ಒಟ್ಟು ಶಾಸನಗಳ ಸಂಖ್ಯೆ ಸುಮಾರು ಮೂವತ್ತು ಸಾವಿರಗಳಷ್ಟಿದೆ. ತಮಿಳುನಾಡನ್ನು ಬಿಟ್ಟರೆ ಅತಿಹೆಚ್ಚು ಶಾಸನಗಳನ್ನು ಹೊಂದಿದ ರಾಜ್ಯ ಕರ್ನಾಟಕವೇ ಆಗಿದೆ. ಕನ್ನಡ ನಾಡಿನ ಒಳಗೆ-ಹೊರಗೆ ಹಂಚಿ ಹೋಗಿರುವ ಶಾಸನಗಳ ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ, ಪ್ರಕಟನೆಯ ಸುವ್ಯವಸ್ಥಿತವಾದ ಕಾರ್ಯ ಪ್ರಾರಂಭವಾಗಿದ್ದು ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗ ಮತ್ತು ಇಪ್ಪತ್ತನೇ ಶತಮಾನದಲ್ಲಿ ಎಂದು ಹೇಳಬಹುದು. ಶಾಸನಗಳನ್ನು ಕುರಿತಾದ ಸಂಶೋಧನೆ ಎರಡು ನೆಲೆಗಟ್ಟುಗಳಲ್ಲಿ ನಡೆದಿದೆ. ಸುಮಾರು ಇನ್ನೂರು ವರ್ಷಗಳಿಗೂ ಅಧಿಕ ಕಾಲದ ಶಾಸನಕ್ಷೇತ್ರದ ಅಧ್ಯಯನದ  ಚಟುವಟಿಕೆಯನ್ನು ಗಮನಿಸಿದರೆ  ಸಾಧನೆಯ ಹೆಮ್ಮೆಯೊಂದಿಗೆ ಕೆಲವು ಕೊರತೆಗಳ ಪಟ್ಟಿ ನಮ್ಮ ಕಣ್ಮುಂದೆ ನಿಲ್ಲುತ್ತದೆ. ನಾವು ಇಂದಿನ ಮನಸ್ಥಿತಿಯಲ್ಲಿ ಯೋಚಿಸಿ ಇನ್ನೂರು ವರ್ಷದ ಹಿಂದೆಯೂ ಹೀಗೆ ಇರಬೇಕಾಗಿತ್ತು ಎಂಬ ಅಭಿಪ್ರಾಯ ತಳೆಯುವುದು ತಪ್ಪಾದರೂ ಸಹ ಇತರೆ ಮಾನವಿಕ ಅಧ್ಯಯನ ಶಿಸ್ತುಗಳ ಬೆಳವಣಿಗೆಯನ್ನು ಕಂಡಾಗ ಶಾಸನಶಾಸ್ತ್ರವು ನಿರೀಕ್ಷಿತ ಬೆಳವಣಿಗೆ ಆಗಲಿಲ್ಲವೆಂಬುದು ಸತ್ಯವೇ ಆಗುತ್ತದೆ. ಹಾಗೆ ನೋಡಿದರೆ ಕೆಲಸದ ದೃಷ್ಟಿಯಿಂದ ಶಾಸನ ಕ್ಷೇತ್ರದಲ್ಲಿ ಬೇರೆ ಮಾನವಿಕ ಕ್ಷೇತ್ರಗಳಿಗಿಂತಲೂ ಹೆಚ್ಚು ಕೆಲಸ ನಡೆದಿದೆ. ಆದರೆ ಹಾಗೆ ನಡೆದಿರುವ ಅಪಾರವಾದ ಕೆಲಸವು ಕಾಲಮಾನಕ್ಕೆ ತಕ್ಕಂತೆ ಅನ್ವಯ ರೂಪದಲ್ಲಿ ಕಂಡುಕೊಳ್ಳಲಿಲ್ಲವೆಂಬ ಅನಿಸಿಕೆ ವಿದ್ವಾಂಸರಲ್ಲಿ ಉಂಟಾಗಿದೆ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಗಳ  ಕುರಿತ ಪಾಶ್ಚಾತ್ಯರ ವಿಭಿನ್ನ ಅಧ್ಯಯನ ನೆಲೆಗಳು ಕಂಡುಕೊಂಡ ನೂತನ ತತ್ವಗಳು ದೃಷ್ಟಿಕೋನಗಳು ಶಾಸನ ಕ್ಷೇತ್ರಕ್ಕೆ  ಒದಗಿ ಬರಲಿಲ್ಲವೆಂಬ ಕೊರಗು ಇದೆ.ಇದಕ್ಕೆ ಹಲವು ಕಾರಣಗಳನ್ನು ನೀಡಬಹುದು. ಮೊದಲನೆಯದಾಗಿ ಶಾಸನಗಳು ಆಯಾ ಪ್ರದೇಶದ ಭಾಷೆಯಲ್ಲಿ ಇರುವುದು ಮತ್ತು ಹಳಗನ್ನಡ ಲಿಪಿಯಲ್ಲಿರುವುದು. ಈ ಕಾರಣದಿಂದಾಗಿ ಶಾಸನಗಳ ವಿಷಯ ಮತ್ತು ಮಹತ್ವ ಸಾರ್ವತ್ರಿಕವಾಗಿ ಚರ್ಚೆಗೆ ಒಳಗಾಗಲಿಲ್ಲ. ಎರಡೆನೆಯದಾಗಿ ಶಾಸನ ಕ್ಷೇತ್ರದ ಅಧ್ಯಯನಕಾರರಿಗೆ ವ್ಯತ್ಪತ್ತಿ ಜ್ಞಾನವು ಅಗತ್ಯ. ಅಂದರೆ ಭಾಷೆ, ಛಂದಸ್ಸು, ವ್ಯಾಕರಣ, ಪ್ರಾಚೀನ ಲಿಪಿಜ್ಞಾನ ಮತ್ತು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ- ಆಚರಣೆ ಮುಂತಾದ ಶಿಸ್ತುಗಳ ಜ್ಞಾನವಿರಬೇಕು. ಈ ಜ್ಞಾನಗಳನ್ನು ಒಳಗೊಂಡ ಆಧುನಿಕ ಚಿಂತನೆಯ ವಿದ್ವಾಂಸರ ಕೊರತೆ  ಸ್ವಲ್ಪಮಟ್ಟಿಗೆ ಈ ಕ್ಷೇತ್ರಕ್ಕಿದೆ.  ಬುಮಟ್ಟಿಗೆ ಶಾಸನ ಅಧ್ಯಯನವು ಶಾಸ್ತ್ರೀಯ ನೆಲೆಗಟ್ಟಿನ ಚೌಕಟ್ಟಿನಲ್ಲಿಯೇ ನಡೆದುಬಂದಿದೆ.

ಆರಂಭದಲ್ಲಿ ಶಾಸನ ಮತ್ತು ಇದರಲ್ಲಿ ಏನಿದೆಯೆಂಬ ಕುತೂಹಲದ ಫಲವಾಗಿ ಅಧ್ಯಯನಕ್ಕೊಳಗಾದ ಶಾಸನ ಕ್ಷೇತ್ರವು ನಂತರದ ಕಾಲದಲ್ಲಿ ಇತಿಹಾಸ-ಸಂಸ್ಕೃತಿಯ ಆಕರ ಕ್ಷೇತ್ರವಾಗಿ ಕಂಡುಬಂದಿತು. ಆದರೆ ಕೆಲವೊಂದು ಸಣ್ಣಪುಟ್ಟ ಉದಾಹರಣೆಗಳು ಬಿಟ್ಟು ಮಿಕ್ಕ ಬಹುತೇಕ ಅಧ್ಯಯನಗಳು ಶಾಸನಗಳ ವೈಭವೀಕರಣ ಅಥವಾ ವರ್ಣನಾ ಪ್ರಧಾನ ಅಧ್ಯಯನಗಳೇ ಆಗಿವೆ. ಇಂದಿಗೂ ಬಹುತೇಕ ಅಧ್ಯಯನಗಳು ಇದೇ ಮಾದರಿಯಲ್ಲೇ ಸಾಗಿವೆ. ಈವರೆಗಿನ ಶಾಸನಗಳ ಅಧ್ಯಯನವನ್ನು ಪ್ರಮುಖ ವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಪಠ್ಯ ಪ್ರಕಟನ ಕಾಲ, ಪಠ್ಯ ವೈಭವ ಕಾಲ, ಪಠ್ಯ ಅಧ್ಯಯನ ಕಾಲ, ಮತ್ತು ಪಠ್ಯ ವಿಮರ್ಶನ ಕಾಲವೆಂದು ನಾಲ್ಕು ಭಾಗಗಳಾಗಿಯೂ ಗುರುತಿಸಲಾಗಿದೆ. ಬಿ.ಎಲ್. ರೈಸ್, ಆರ್. ನರಸಿಂಹಾಚಾರ್ ಮುಂತಾದ ವಿದ್ವಾಂಸರು ಶಾಸನಗಳ ಪಠ್ಯದ ಪ್ರಕಟನೆಗೆ ಹೆಚ್ಚಿನ ಒಲವು ತೋರಿದರು. ಈ ವಿದ್ವಾಂಸರ ಪ್ರಯತ್ನದ ಫಲವಾಗಿ ಸಾವಿರಾರು ಶಾಸನಗಳು ಹಲವಾರು ಶಾಸನ ಸಂಪುಟಗಳು ಪ್ರಕಟವಾದವು. ಇದು ಬಹಳ  ಮಹತ್ತರವಾದ ಕಾರ್ಯ. ಇದಕ್ಕೆ ದೈಹಿಕ ಶ್ರಮ ಹೆಚ್ಚು, ಇದ್ದ ಅನುಕೂಲದಲ್ಲೇ ಕಷ್ಟಪಟ್ಟು ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಿ ಶಾಸನಗಳನ್ನು ಸಂಗ್ರಹಿಸಿದರು. ಕೆಲವರು ಸರಕಾರಿ ಇಲಾಖೆಯ ಪರವಾಗಿ ಕೆಲಸಮಾಡಿದರೆ ಮತ್ತೆ ೆಲವರು ಸ್ವಂತ ಆಸಕ್ತಿಯಿಂದ ಈ ಕೆಲಸ ಮಾಡಿದರು. ಈ ಅವಧಿಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದಷ್ಟು ವ್ಯವಸ್ಥಿತ ಕೆಲಸ ಉತ್ತರ ಕರ್ನಾಟಕದಲ್ಲಿ ನಡೆಯಲಿಲ್ಲ. ಇದಕ್ಕೆ ಕಾರಣ ಉತ್ತರ ಕರ್ನಾಟಕವು ಮುಂಬಯಿ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕವೆಂದು ಆಡಳಿತ್ಮಾತಕವಾಗಿ ಹಂಚಿ ಹೋಗಿತ್ತು. ಇವರ ನಂತರ ಪ್ರಕಟಿತ ಶಾಸನಗಳನ್ನು ವೈಭವೀಕರಿಸುವ, ಅದೇ ಶ್ರೇಷ್ಠ ಆಕರಗಳು ಎಂಬ ಅತಿ ಉತ್ಸಾಹದ ಅಧ್ಯಯನಗಳು ಹೆಚ್ಚಾಗಿ ನಡೆದವು. ಇದರಲ್ಲಿ ಆರ್.ನರಸಿಂಹಾಚಾರ್, ಎಂ.ಎಚ್. ಕೃಷ್ಣ, ಎನ್. ಲಕ್ಷ್ಮೀ ನಾರಾಯಣರಾವ್, ಆರ್. ಎಸ್. ಪಂಚಮುಖಿ, ಪಿ.ಬಿ. ದೇಸಾಯಿ, ಬಾ.ರಾ. ಗೋಪಾಲ್, ಶೇಷಾದ್ರಿ, ಜಿ.ಎಸ್. ಗಾಯಿ, ಶ್ರೀನಿವಾಸ ರಿತ್ತಿ, ಎಸ್.ಸಿ. ನಂದೀಮಠ, ಕೆ.ಜಿ. ಕುಂದಣಗಾರ, ಮಧುರಚೆನ್ನ ಮುಂತಾದವರು ಮುಖ್ಯರಾಗುತ್ತಾರೆ. ಮೇಲ್ಕಂಡವರಲ್ಲಿ ವಿಮರ್ಶಾತ್ಮಕ ಅಧ್ಯಯನ ಗುಣವಿರಲಿಲ್ಲವೆಂದು ಅರ್ಥವಲ್ಲ. ಎಲ್ಲರೂ ಮಹಾ ವಿದ್ವಾಂಸರೇ. ಆದರೆ ಹೊಸ ಅಧ್ಯಯನ ಸಾಧ್ಯತೆಗಳು ಅವರಿಗೆ ಗೋಚರವಾಗಲಿಲ್ಲ. ಗೋಚರವಾಗಲಿಲ್ಲ ಎಂಬುದಕ್ಕಿಂತ ಅವರಿಗೆ ಅದರ ಅಗತ್ಯ ವಿರಲಿಲ್ಲವೆಂದರೆ ಸರಿಯಾಗುತ್ತದೆ. ಶಾಸನ ಕವಿಗಳು, ಶಾಸನ ಸಾಹಿತ್ಯ ಸಂಚಯ, ಶಾಸನ ಪದ್ಯ ಮಂಜರಿ, ಕರ್ನಾಟಕದ ಅರಸು ಮನೆತನಗಳು ಹೀಗೆ ಇನ್ನೂ ಈ ರೀತಿಯ ಅಧ್ಯಯನಗಳು ಈ ಮಾದರಿಗೆ ಸೇರಿಸಬಹುದು. ಇಲ್ಲಿ ಶಾಸನಗಳಲ್ಲಿ ಕಂಡುಬಂದ ಇತಿಹಾಸದ ಅಂಶಗಳು. ಘಟನೆಗಳು ಆಡಳಿತಾಧಿಕಾರಿಗಳು, ಅವುಗಳ ಸಾಹಿತ್ಯದ ಸೊಬಗು, ಅವುಗಳಲ್ಲಿನ ವೀರರು ಮಹಾಸತಿಯರು ಮತ್ತು ದಾನಿಗಳ ವಿಷಯ, ದಾನದ ವಸ್ತುಗಳು ಮೊದಲಾದವನ್ನು ಬೆರಗಿನಿಂದ ವರ್ಣಿಸುವುದು ಈ ಹಂತದಲ್ಲಿ ಅಷ್ಟಾಗಿ ನಡೆಯಿತು. ಮೂರನೆಯ ಹಂತವಾದ ಪಠ್ಯ ಅಧ್ಯಯನ ಹಂತದಲ್ಲಿ ಶಾಸನಗಳಲ್ಲಿನ ವಿಷಯಗಳನ್ನು ಗಂಭೀರವಾಗಿ ಅಧ್ಯಯನಕ್ಕೊಳಪಡಿಸಿ ಫಲಿತಾಂಶವನ್ನು ಪ್ರಕಟಿಸುವ ಕೆಲಸ ಪ್ರಾರಂಭವಾಯಿತು. ರೈಸ್, ಫ್ಲೀಟ್, ಎಂ.ಎಚ್.ಕೃಷ್ಣ ಮೊದಲಾದವರು ಕೂಡ ಗಾಂರ್ಭೀಯದ ಅಧ್ಯಯನ ನಡೆಸಿದ್ದರೂ ಕೂಡ ಅವರಲ್ಲಿ ಕಂಡುಬರದ ಆಕರ ಬಳಕೆಯ ರೀತಿ ಈ ಹಂತದ ವಿದ್ವಾಂಸರಲ್ಲಿ ಕಾಣಲಾರಂಭಿಸಿತು. ಇದರ ಪರಿಣಾಮವಾಗಿ ಹಿಂದಿನ ಅವಧಿಯ ಅನೇಕ ಅಧ್ಯಯನ ಗಳು ತೀರ್ಮಾನಗಳು ಈ ಅವಧಿಯಲ್ಲಿ ಪರಿಷ್ಕರಣೆಗೊಂಡವು ಮತ್ತು ಹೊಸತನದಲ್ಲಿ ಕಂಡುಬಂದವು,