ಅ. ಮೂಲ ಆಕರಗಳಾದ ಶಾಸನಗಳ ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ ಮತ್ತು ಪ್ರಕಟನೆ.

ಬ. ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಪ್ರಕಟಗೊಂಡ ಶಾಸನಗಳಲ್ಲಿಯ ಮತ್ತು ವಿಷಯದ ವೈವಿಧ್ಯತೆಗನುಗುಣವಾಗಿ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಇತರೆ ಅಧ್ಯಯನವನ್ನು ನಡೆಸಿರುವುದು.)

. ಶಾಸನಗಳ ಪರಿವೀಕ್ಷಣೆ, ಸಂಗ್ರಹಣೆ, ಸಂಪಾದನೆ ಮತ್ತು ಪ್ರಕಟನೆ: ಶಾಸನಗಳ ಸಂಗ್ರಹ, ಸಂಪಾದನೆ ಹಾಗೂ ಪ್ರಕಟನೆಯ ಕಾರ್ಯ ಸಾಂಸ್ಥಿಕ ಹಾಗೂ ವೈಯಕ್ತಿಕ ಮಟ್ಟಗಳೆರಡರಲ್ಲಿಯೂ ನಡೆದಿದೆ. ಶಾಸನಗಳ ಸಂಗ್ರಹ ಕಾರ್ಯವನ್ನು ೧. ಕರ್ನಲ್ ಮೆಕೆಂಝಿ ಯುಗ ೨. ಸರ್ ವಾಲ್ಟೇರ್ ಇಲಿಯಟ್ ಯುಗ ೩. ಜೆ.ಎಫ್.ಪ್ಲೀಟ್ ಮತ್ತು ರೈಸ್ ಯುಗ ೪. ಸ್ವದೇಶಿ ವಿದ್ವಾಂಸರ ಯುಗ ಎಂದು ಗುರುತಿಸಬಹುದಾಗಿದೆ.

ಕನ್ನಡ ನಾಡಿನಲ್ಲಿ ಪ್ರಕಟಿತ ಮತ್ತು ಅಪ್ರಕಟಿತ ರೂಪದ ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಶಾಸನಗಳು ಇವೆ. ಭಾರತದಲ್ಲಿ ಅತಿ ಹೆಚ್ಚು ಶಾಸನಗಳನ್ನು ಹೊಂದಿರುವ ರಾಜ್ಯ ತಮಿಳುನಾಡು. ಅನಂತರದ ಸ್ಥಾನ ಕರ್ನಾಟಕಕ್ಕೆ ಸಲ್ಲುತ್ತದೆ.  ಕನ್ನಡ ನಾಡಿನ ಬಹಳಷ್ಟು ಅಪ್ರಕಟಿತ ಶಾಸನಗಳನ್ನು ಪಾಶ್ಚಾತ್ಯ ಮತ್ತು ಪೌರಾತ್ಯ ಪಂಡಿತರು ಕಷ್ಟಪಟ್ಟು ಸಂಗ್ರಹಿಸಿದ್ದಾರೆ. ಪ್ರಯತ್ನದಿಂದ ಓದಿದ್ದಾರೆ. ಪ್ರಾಮಾಣಿಕತೆಯಿಂದ ಅರ್ಥೈಸಿದ್ದಾರೆ. ೨೦ನೇ ಶತಮಾನದ ಪೂರ್ವದಲ್ಲಿ ಪಾಶ್ಚಾತ್ಯ ವಿದ್ವಾಂಸರೇ ಶಾಸನಗಳ ಅಧ್ಯಯನಕ್ಕೆ ಅಡಿಗಲ್ಲು ಹಾಕಿದವರಾಗಿದ್ದಾರೆ. ಸರ್ ವಿಲಿಯಂ ಜೋನ್ಸ್ ಏಷಿಯಾಟಿಕ್ ಸೊಸೈಟಿಯನ್ನು ಕ್ರಿ.ಶ.೧೭೮೩ರಲ್ಲಿ ಸ್ಥಾಪಿಸಿದ ಮೇಲೆ ಭಾರತದಲ್ಲಿ ಪುರಾತತ್ವ ಕುರಿತು ನಡೆದ ಸಂಶೋಧನೆಯ ವಿವರಗಳನ್ನು ಪ್ರಕಟಿಸಲು ಏಷಿಯಾಟಿಕ್ ರೀಸರ್ಚ್ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮೂರನೆಯ ಸಂಪುಟದಲ್ಲಿ ಸರ್ ವಿಲಿಯಂ ಜೋನ್ಸ್‌ನಿಂದ ಒಂದು ತಾಮ್ರ ಶಾಸನ A Royal Grant of Land in Carnata ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಸಂಸ್ಕೃತ ಭಾಷೆ ಯಲ್ಲಿಯ ಈ ಶಾಸನದ ವಸ್ತು ವಿಜಯನಗರದ ಅರಸರು ತಮಿಳುನಾಡಿನ ಕಂಚಿ ದೇವಾಲಯಕ್ಕೆ ದತ್ತಿ ಕೊಟ್ಟ ವಿಷಯವನ್ನು ಒಳಗೊಂಡಿತ್ತು. ಕರ್ನಾಟಕದ ಅರಸರಿಗೆ ಸಂಬಂಧಿಸಿದ್ದರಿಂದ ಈ ಶಾಸನವು ಕರ್ನಾಟಕದ ಪ್ರಥಮ ಪ್ರಕಟಿತ ಶಾಸನ ಎನ್ನುವ ಖ್ಯಾತಿಗೆ ಒಳಗಾಗಿದೆ.

ಕರ್ನಲ್ ಮಕೆಂಝಿಯು ಟಿಪ್ಪುವಿನ ಮರಣ ನಂತರ, ಮೈಸೂರು ಪ್ರದೇಶದ ಭೌಗೋಳಿಕ ಪರಿವೀಕ್ಷಣಾಧಿಕಾರಿಯಾಗಿ ನೇಮಕಗೊಂಡನು. ಪ್ರಾಚೀನ ಶಿಲ್ಪ, ಶಾಸನ ಮತ್ತು ಹಳೆಯ ಗ್ರಂಥಗಳ ಸಂಗ್ರಹಗಳತ್ತ ಆಸಕ್ತಿಯನ್ನು ದೇಶಿ ವಿದ್ವಾಂಸರ ನೆರಳಿನಿಂದ ತಾಳಿದನು. ಇವನಿಗೆ ನೆರವಾದ ದೇಶಿಯ ವ್ಯಕ್ತಿ ಪಂ.ಕವೆಲ್ಲಿ ಬೋರಯ್ಯ. ಬಹು ಭಾಷಾ ಬಲ್ಲಿದ ತೀಕ್ಷ್ಣಮತಿ ಆಶು ಕವಿಯಾಗಿದ್ದ ಪಂ.ಬೋರಯ್ಯನ ನೆರವಿಲ್ಲದಿದ್ದರೆ ಮೆಕೆಂಝಿಯು ಈ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಿರಲಿಲ್ಲವೆಂದು ತಾನೇ ಹೇಳಿಕೊಂಡಿದ್ದಾನೆ. ಕನ್ನಡ ಭಾಷೆಯ ಶಾಸನವನ್ನು ಮೊದಲು ಓದಿದ ಕೀರ್ತಿ ಬೋರಯ್ಯನಿಗೆ ಸಲ್ಲುತ್ತದೆ. ಏಷಿಯಾಟಿಕ್ ರೀಸರ್ಚ್ ಪತ್ರಿಕೆಯ ಒಂಬತ್ತನೆಯ ಸಂಪುಟದಲ್ಲಿ ಶ್ರವಣಬೆಳಗೊಳಕ್ಕೆ ಸಂಬಂಧಿಸಿದ ಕ್ರಿ.ಶ. ೧೩೬೮ರ ಬುಕ್ಕರಾಯನ ಧರ್ಮಶಾಸನವನ್ನು ಪ್ರಕಟಿಸಿದ್ದು, ಬಹುಶಃ ಇದು ಕನ್ನಡ ಭಾಷೆಯ ಪ್ರಥಮ ಪ್ರಕಟಿತ ಶಾಸನ ಎಂದು ವಿದ್ವಾಂಸರ ಅನಿಸಿಕೆಯಾಗಿದೆ. ಮೆಕೆಂಝಿಯ ಜೊತೆಗೆ ಸಿ.ಪಿ.ಬ್ರೌನ್, ಕೋಲ್‌ಬ್ರುಕ್, ಹೆನ್ರಿ ವಥೆನ್, ವಿಲ್ಸನ್, ಜೇಮ್ಸ್ ಪ್ರಿನ್ಸೆಪ್ ಮುಂತಾದವರು ಕನ್ನಡ ಶಾಸನಗಳ ಪ್ರಕಟಣೆಯಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ವಹಿಸಿದರು. ಕ್ರಿ.ಶ.೧೭೯೧ರಿಂದ ೧೮೩೭ರ ವರೆಗೆ ಸುಮಾರು ಆರುನೂರು ಶಾಸನಗಳ ಸಂಗ್ರಹ ಮೇಲ್ಕಂಡ ಪಾಶ್ಚಾತ್ಯ ವಿದ್ವಾಂಸರಿಂದ ನಡೆಯಿತು.

ಮದ್ರಾಸ್ ಪ್ರಾಂತ್ಯದಲ್ಲಿ ಸಿವಿಲ್ ಸರ್ವೀಸ್‌ನಲ್ಲಿ ಅಧಿಕಾರಿಯಾಗಿದ್ದ ಸರ್ ವಾಲ್ಟರ್ ಇಲಿಯಟ್‌ನಿಂದ ಕನ್ನಡ ಶಾಸನಗಳ ವ್ಯವಸ್ಥಿತ ಅಧ್ಯಯನ ಆರಂಭ ವಾಯಿತೆನ್ನಬಹುದು. ಈತನು ಮುಂಬೈ ಕರ್ನಾಟಕ, ನಿಜಾಮ್ ಕರ್ನಾಟಕದ ಪಶ್ಚಿಮ ಭಾಗ, ಹಳೆ ಮೈಸೂರು ಪ್ರಾಂತದ ಉತ್ತರ ಭಾಗಗಳಿಂದ ೧೩೦೦ ಶಾಸನ ಗಳನ್ನು ಸಂಗ್ರಹಿಸಿ ಇವುಗಳಲ್ಲಿ ೫೯೫ ಶಾಸನಗಳನ್ನು ಆರಿಸಿಕೊಂಡು Carnataka Desh Inscriptions ಹೆಸರಿನಲ್ಲಿ ಕೈ ಬರಹದ ನಾಲ್ಕು ಪ್ರತಿಗಳನ್ನು ಸಿದ್ಧಪಡಿಸಿದನು. ಕೈ ಬರಹದ ಈ ಸಂಪುಟವು ಉತ್ತರ ಕರ್ನಾಟಕದ ಚರಿತ್ರೆಯ ಅಧ್ಯಯನಕ್ಕೆ ಅಗತ್ಯವಾದ ಶಾಸನ ಸಂಪುಟವಾಗಿದೆ. ತಮ್ಮ ಶಾಸನಾಧ್ಯಯನದ ವಿವರವನ್ನು ಲಂಡನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ Hindu Inscriptions ಎಂಬ ಲೇಖನದಲ್ಲಿ ದಾಖಲಿಸಿದ್ದಾನೆ. ಈ ಲೇಖನದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸಗಳ ಅಧ್ಯಯನದಲ್ಲಿ ಹೊಸ ಅಧ್ಯಾಯವೇ ಪ್ರಾರಂಭವಾಯಿತೆನ್ನಬಹುದು. ಈ ಸಂಗ್ರಹವು ಮುಂದೆ ಕರ್ನಾಟಕ್ ದೇಶ್ ಇನ್‌ಸ್ಕ್ರಿಪ್ಷನ್ ಎಂಬ ಹೆಸರಿನಿಂದ ಎರಡು ಸಂಪುಟಗಳಲ್ಲಿ ದೇಶೀಯ ವಿದ್ವಾಂಸರಿಂದ ಪ್ರಕಟವಾಯಿತು. ಶಾಸನಗಳು ಇರುವ ಊರೂರುಗಳನ್ನು ಅಡ್ಡಾಡಿ ಶಾಸನಗಳನ್ನು ಶೋಧಿಸುವ ಹಾಗೂ ಸಂಗ್ರಹಿಸುವ ಕಾರ್ಯ ಮಹತ್ತರವಾದುದಾಗಿದೆ.

ಮೂಲ ಆಕರಗಳಾದ ಶಾಸನಗಳ ಸಂಗ್ರಹದ ಇಪ್ಪತ್ತನೇ ಶತಮಾನದಲ್ಲಿ ಪ್ರಾಂತ್ಯವಾರು ಮಟ್ಟದಲ್ಲಿ ನಡೆದಿರುವುದನ್ನು ಗುರುತಿಸಬಹುದು. ಅವು ಯಾವುವೆಂದರೆ ೧. ಹಳೇ ಮೈಸೂರು ಆಧಿಪತ್ಯ. ೨. ಮದ್ರಾಸ್ ಆಧಿಪತ್ಯ. ೩. ಮುಂಬೈ ಕರ್ನಾಟಕ. ೪.ಹೈದರಾಬಾದ್ ಕರ್ನಾಟಕ (ನಿಜಾಮ್ ಕರ್ನಾಟಕ).

. ಹಳೇ ಮೈಸೂರು ಆಧಿಪತ್ಯ: ಹಳೇ ಮೈಸೂರು ಪ್ರದೇಶದಲ್ಲಿ ಶಾಸನಗಳ ಕುರಿತಾದ ವ್ಯವಸ್ಥಿತವಾದ ಅಧ್ಯಯನ ಬಿ.ಎಲ್.ರೈಸ್‌ರಿಂದ ಪ್ರಾರಂಭವಾಯಿತೆನ್ನ ಬಹುದು. ಶಾಸನಗಳನ್ನು ಓದುವ ಕಾರ್ಯ ಪರಿಪೂರ್ಣತೆಯನ್ನು ಮುಟ್ಟಿದ್ದು ಇವರ ಕಾಲದಲ್ಲಿಯೇ. ಈ ಕೆಲಸದಲ್ಲಿ ದೇಶೀಯ ವಿದ್ವಾಂಸರೂ ಭಾಷೆಯ ವಿಷಯದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಲಿಪಿಯನ್ನು ಓದಿ ಅರ್ಥೈಸುವಲ್ಲಿ ಪಾಶ್ಚಾತ್ಯ ವಿದ್ವಾಂಸರ ಪ್ರಯತ್ನವೇ ಮುಖ್ಯ. ಕನ್ನಡ ನಾಡಿನ ಶಾಸನಗಳ ಸಂಗ್ರಹದಲ್ಲಿ ರೈಸ್‌ರ ಹೆಸರು ಗಮನಾರ್ಹವಾದುದು. ಅವರು ಕ್ರಿ.ಶ.೧೮೮೫ ರಿಂದ ೧೯೦೬ರವರೆಗೆ ಪ್ರಾಚ್ಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಹೊರತಂದ ಎಪಿಗ್ರಫಿಯಾ ಕರ್ನಾಟಿಕಾ ಸಂಪುಟಗಳು ಶಾಸನಗಳ ಪ್ರಕಟನೆಯಲ್ಲಿ ಎದ್ದು ಕಾಣುವಂತಹದ್ದಾಗಿವೆ. ಹಳೇ ಮೈಸೂರು ಭಾಗದ ಸುಮಾರು ೯೦೦೦ ಶಾಸನಗಳು ಹನ್ನೆರಡು ಸಂಪುಟಗಳಲ್ಲಿ ಪ್ರಕಟಗೊಂಡಿವೆ.

ಎಫಿಗ್ರಫಿಯಾ ಕರ್ನಾಟಿಕಾದ ಸ್ವರೂಪ ಎಂದರೆ ಪ್ರತಿಯೊಂದು ಸಂಪುಟವೂ ಸುದೀರ್ಘವಾದ ಪ್ರಸ್ತಾವನೆಯನ್ನು ಹೊಂದಿದ್ದು, ಶಾಸನಗಳ ರೋಮನ್ ಲಿಪ್ಯಂತರ, ಇಂಗ್ಲೀಷ್ ಭಾಷಾಂತರ ಹಾಗೂ ಮೂಲ ಪಾಠಗಳೊಂದಿಗೆ ಪ್ರಕಟವಾಗಿವೆ. ಈ ಕಾರ್ಯ ಬಿ.ಎಲ್.ರೈಸ್ ಅವರ ಅತ್ಯದ್ಭುತವಾದ ಸಾಧನೆಯೆಂದೇ ಗುರುತಿಸಬೇಕು. ರೈಸ್ ನಂತರ ಬಂದ ಆರ್.ನರಸಿಂಹಾಚಾರ್, ಎಂ.ಎಚ್. ಕೃಷ್ಣ, ಕೆ.ಎ. ನೀಲಕಂಠ ಶಾಸ್ತ್ರಿಗಳ ಅವಧಿಯಲ್ಲಿ ಕೋಲಾರ, ಶಿವಮೊಗ್ಗ, ಹಾಸನ, ತುಮಕೂರು, ಮೈಸೂರು ಜಿಲ್ಲೆಯ ಹೆಚ್ಚಿನ ಶಾಸನಗಳು ಆರು ಸಂಪುಟಗಳಲ್ಲಿ ಎಪಿಗ್ರಫಿಯಾ ಕರ್ನಾಟಿಕಾದ ಪುರವಣಿಗಳಾಗಿ ಪ್ರಕಟಗೊಂಡವು. ಹೀಗೆ ರೈಸ್‌ರಿಂದ ಪ್ರಕಟವಾದ E.C. ಸಂಪುಟಗಳು ಹಾಗೂ ಆರ್.ನರಸಿಂಹಾಚಾರ್, ಎಂ.ಎಚ್.ಕೃಷ್ಣ ಮೊದಲಾದ ನಾಡಿನ ಶಾಸನ ತಜ್ಞರಿಂದ ಪ್ರಕಟವಾದ (E.C) ಪುರವಣಿಗಳು ಹಾಗೂ ಪುರಾತತ್ವ ಇಲಾಖೆಯ ವಾರ್ಷಿಕ ವರದಿ (M.A.R)ಗಳಲ್ಲಿ ಸುಮಾರು ೧೩೫೦೦ (೧೩.೨೯೬) ಶಾಸನಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಕಟವಾದವು.

ಬಿ.ಎಲ್.ರೈಸ್‌ರವರು ಸಂಪಾದಿಸಿ ಪ್ರಕಟಿಸಿದ್ದ E.C.ಯ ಸಂಪುಟಗಳು ಸಂಶೋಧಕರಿಗೆ ದುರ್ಲಭವಾಗಿದ್ದ ಸಂದರ್ಭದಲ್ಲಿ ಅವುಗಳನ್ನು ಪರಿಷ್ಕರಿಸಿ ಪ್ರಕಟಿಸು ವಂತಹ ಮಹತ್ವಪೂರ್ಣ ಕಾರ್ಯಯೋಜನೆಯನ್ನು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಹಾ.ಮಾ.ನಾಯಕರು ನಿರ್ದೇಶಕರಾಗಿದ್ದ ಕಾಲದಲ್ಲಿ ಹಮ್ಮಿಕೊಂಡು ಅದರನ್ವಯ ಕೊಡಗು, ಶ್ರವಣಬೆಳಗೊಳ, ಮೈಸೂರು, ಮಂಡ್ಯ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸನಗಳನ್ನೊಳಗೊಂಡ ಹನ್ನೆರಡು ಬೃಹತ್ ಪರಿಷ್ಕೃತ ಶಾಸನ ಸಂಪುಟಗಳು ಹೊರ ಬಂದಿವೆ. ಮೈಸೂರು ಪ್ರಾಂತ್ಯದ ಉಳಿದ ಜಿಲ್ಲೆಗಳ ಪರಿಷ್ಕೃತ ಶಾಸನ ಸಂಪುಟಗಳ ಕಾರ್ಯ ಮಂದಗತಿಯಲ್ಲಿ ನಡೆದಿದ್ದು ಪ್ರಕಟನೆಯ ಕಾರ್ಯ ವಿಳಂಬಗೊಂಡಿದೆ. ಪರಿಷ್ಕೃತ ಎಪಿಗ್ರಫಿಯಾ ಕರ್ನಾಟಿಕಾಗಳ ಸ್ವರೂಪ ರೈಸ್ ಸಂಪುಟಗಳಿಗಿಂತ ಸ್ವಲ್ಪ ವಿಭಿನ್ನವಾಗಿವೆ.

೧. ಕನ್ನಡವಲ್ಲದ ಶಾಸನಗಳಿಗೆ ಕನ್ನಡ ಲಿಪ್ಯಂತರದ ಜೊತೆಗೆ ರೋಮನ್ ಲಿಪ್ಯಂತರದೊಡನೆ ಕೊಡಲಾಗಿದೆ.

೨.  ಬೇರೆ ಬೇರೆ ಮೂಲಗಳಲ್ಲಿ ಪ್ರಕಟವಾಗಿರುವ ಶಾಸನಗಳನ್ನು ಒಂದೆಡೆ ತರಲಾಗಿದೆ.

೩.  ಪ್ರತಿಯೊಂದು ಶಾಸನವೂ ಚಿಕ್ಕ ಪರಿಚಯವನ್ನು ಆಂಗ್ಲಭಾಷೆಯಲ್ಲಿ ಹೊಂದಿದೆ.

೪. ಉಪಯುಕ್ತವಾದ ಅನುಬಂಧಗಳನ್ನು ಒಳಗೊಂಡಿದೆ. ೧) ಶಾಸನಗಳು ದೊರೆ ತಿರುವ ಊರುಗಳ ಅಕಾರಾದಿ. ೨) ವಂಶಾನುಕ್ರಮದಲ್ಲಿ ಶಾಸನಗಳ ಸೂಚಿ. ೩) ಶಬ್ದಸೂಚಿ.

೫. ಪ್ರತಿಯೊಂದು ಸಂಪುಟವು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಸುದೀರ್ಘವಾದ ಪ್ರಸ್ತಾವನೆಯನ್ನು ಒಳಗೊಂಡಿದೆ. ಪ್ರಸ್ತಾವನೆಯಲ್ಲಿ ಆ ಸಂಪುಟಗಳ ಶಾಸನಗಳಲ್ಲಿ ಹುದುಗಿರುವ ರಾಜಕೀಯ ಇತಿಹಾಸ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಶಾಸನಗಳ ಸಾಹಿತ್ಯಕ ಮೌಲ್ಯ, ಛಂದಸ್ಸು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಇದೆ. ಈ ಸಂಪುಟಗಳು ಶಾಸನಗಳನ್ನಾಧರಿಸಿ ಸಂಶೋಧನೆ ಯನ್ನು ಕೈಗೊಳ್ಳುವ ಸಂಶೋಧಕರಿಗೆ ಸಮಯ ಹಾಗೂ ಶ್ರಮದ ಉಳಿತಾಯವನ್ನು ಮಾಡಿವೆ. ಉಳಿದ ಸಂಪುಟಗಳು ನಿರೀಕ್ಷಿಸಿದ ಮಟ್ಟದಲ್ಲಿ ಪ್ರಕಟಗೊಳ್ಳದೆ ಇರುವುದು ಈ ವಿಷಯದ ಆಸಕ್ತರಿಗೆ ಆತಂಕವನ್ನುಂಟು ಮಾಡಿದೆ.

ಇತ್ತೀಚೆಗೆ ರೈಸ್‌ರ ಕಾಲದಲ್ಲಿ ಪ್ರಕಟವಾದ E.C.ಯ ಸಂಪುಟಗಳು ಹಾಗೂ ನಂತರದ ಕಾಲದಲ್ಲಿ ಪ್ರಕಟವಾದ  E.C.ಯ ಪುರವಣಿಗಳನ್ನು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ (I.C.H.R.)ಗಣಕಯಂತ್ರಗಳಲ್ಲಿ ಅಳವಡಿಸಿ ಸಿ.ಡಿ.ರೋಮ್‌ಗಳ ಮೂಲಕ ಹೊರ ತಂದಿರುವುದು ಮಹತ್ತರ ಸಂಗತಿ. ಈ ಪ್ರಯೋಗ ಕರ್ನಾಟಕ್ಕೆ ಮಾತ್ರವಲ್ಲ ಇಡೀ ಇಂಡಿಯಾದಲ್ಲಿಯೇ ಪ್ರಥಮ ಎನಿಸಿದೆ. ಇದರಿಂದಾಗಿ ಸಂಶೋಧಕರಿಗೆ ವಿವಿಧ ರೀತಿಯಲ್ಲಿ  E.C.ಯಲ್ಲಿಯ ಮಾಹಿತಿಗಳು ಅತಿ ಕಡಿಮೆ ವೇಳೆಯಲ್ಲಿ ಲಭ್ಯವಾಗುತ್ತವೆ. ಮೂಲ, ಲಿಪ್ಯಂತರ, ಅನುವಾದ ಮೂರು ರೀತಿಗಳಲ್ಲಿ ಶಾಸನಗಳ ಪಠ್ಯವನ್ನು ಅಳವಡಿಸಲಾಗಿದೆ. ರಾಜನ ಹೆಸರನ್ನು ಸೂಚಿಸಿದರೆ ಆ ರಾಜನ ಹೆಸರಿನಲ್ಲಿ ದೊರೆಯುವ ಶಾಸನಗಳ ಸಂಖ್ಯೆ ಹಾಗೂ ಶಾಸನಗಳ ಪಠ್ಯ ಪಟ್ಟಿಗೆ ಒಂದೆಡೆ ದೊರೆಯಲಿರುವುದು ಇದರ ವಿಶೇಷ. ಒಂದು ಊರಿನಲ್ಲಿರುವ ಶಾಸನಗಳ ಪಟ್ಟಿ ಹಾಗೂ ಪಠ್ಯ ದೊರೆಯುವುದು ಇವೆಲ್ಲ ಬಹಳ ಉಪಯುಕ್ತವಾಗಿದೆ. ನಾಡಿನ ಶಾಸನಗಳನ್ನು ಕುರಿತು ಪಾಶ್ಚಾತ್ಯ ಸಂಶೋಧಕರು ತಾವು ಇರುವ ಸ್ಥಳದಲ್ಲಿಯೇ ಸಂಶೋಧನೆಯನ್ನು ಕೈಗೊಳ್ಳಲು ಅವಕಾಶ ಕಲ್ಪಿತ ವಾಗುತ್ತದೆನ್ನಬಹುದು. ಈ ಮಹತ್ತರವಾದ ಕಾರ್ಯದಲ್ಲಿ ಎಸ್.ಶೆಟ್ಟರ್ ಹಾಗೂ ಎಸ್.ಕೆ ಅರುಣಿಯವರ ಕಾರ್ಯ ಸ್ತುತ್ಯಾರ್ಹವಾದುದು. ಇದೇ ಮಾದರಿಯಲ್ಲಿಯೇ ಕನ್ನಡ ನಾಡಿನ ಎಲ್ಲಾ ಶಾಸನಗಳನ್ನು  ಡಿಜಿಟಲ್ ರೂಪದಲ್ಲಿ ತರಬೇಕಾಗಿದೆ.

. ಮದ್ರಾಸ್ ಆಧಿಪತ್ಯ: ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಶಾಸನ ವಿಭಾಗವು ದಕ್ಷಿಣ ಭಾರತದ ಶಾಸನಗಳನ್ನು South Indian Inscriptions ಹೆಸರಿನಲ್ಲಿ ಹಲವಾರು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಸಂಪುಟಗಳಲ್ಲಿ ಕೆಲವು ಸಂಪುಟಗಳು ಮದ್ರಾಸ್ ಆಧಿಪತ್ಯಕ್ಕೆ ಒಳಪಟ್ಟ ಕನ್ನಡ ಪ್ರದೇಶದ ಕೆಲವು ಶಾಸನಗಳನ್ನು ಒಳಗೊಂಡಿದೆ. ಅವುಗಳೆಂದರೆ S.I.I. ಸಂಪುಟ ೪, ೫, ೬, ೮, ೯ ಭಾಗ ೧ ಮತ್ತು ೨, ೧೭, ೨೪. ಈ ಸಂಪುಟಗಳಲ್ಲಿ ಎನ್.ಲಕ್ಷ್ಮೀನಾರಾಯಣರಾಯರು, ಆರ್.ಶ್ಯಾಮಾಶಾಸ್ತ್ರೀ ಮುಂತಾದ ಶಾಸನತಜ್ಞರ ಫಲವಾಗಿ ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳ ಸುಮಾರು ೯೦೦ ಶಾಸನಗಳು ಪ್ರಕಟವಾಗಿವೆ ಎನ್ನಬಹುದು. E.C. ಸಂಪುಟಗಳಲ್ಲಿ ಈಗಾಗಲೇ ನೋಡಿರುವಂತೆ ಪ್ರಾದೇಶಿಕ ವರ್ಗೀಕರಣ ಇದ್ದರೆ S.I.I. ಸಂಪುಟಗಳಲ್ಲಿ ವಂಶಾನುಕ್ರಮಾಧಾರಿತ ಹಾಗೂ ನೋಡಿರುವಂತೆ ಪ್ರಾದೇಶಿಕ ವರ್ಗೀಕರಣವನ್ನು ಗುರುತಿಸಬಹುದು.

. ಮುಂಬೈ ಕರ್ನಾಟಕ:  ಉತ್ತರ ಕರ್ನಾಟಕದ ಶಾಸನಗಳನ್ನು ಸಂಗ್ರಹಿಸುವ ಕಾರ್ಯ ಜೆ.ಎಫ್.ಪ್ಲೀಟ್‌ರವರಿಂದ ಪ್ರಾರಂಭವಾಯಿತು. ಇವರು ಈ ಭಾಗದ ೨೦೦ಕ್ಕೂ ಮೇಲ್ಪಟ್ಟ ಶಾಸನಗಳನ್ನು ಪ್ರಕಟಿಸಿದ್ದಾರೆ. ಫ್ಲೀಟ್‌ರವರು ಜೆ.ಬಿ.ಬಿ.ಆರ್. ಎ.ಎಸ್. ಪತ್ರಿಕೆ ಹಾಗೂ ಇಂಡಿಯನ್ ಆಂಟಿಕ್ವರಿ ಪತ್ರಿಕೆಗಳಲ್ಲಿ ಈ ಭಾಗದ ಸಂಸ್ಕೃತ ಮತ್ತು ಹಳಗನ್ನಡ ಶಾಸನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿಯವರೆಗೂ ಇತರೆ ಪಾಶ್ಚಾತ್ಯ ವಿದ್ವಾಂಸರು ಸಂಗ್ರಹಿಸಿದ್ದ ಶಾಸನಗಳನ್ನು ಕ್ರಮವಾಗಿ ಜೋಡಿಸಿ Pali Sanskrit Old Canarese Inscriptions from the Bombay Presidency and Parts of Madras Presidency and Mysore ಶೀರ್ಷಿಕೆಯಡಿಯಲ್ಲಿ ಸಂಪುಟವನ್ನು ಪ್ರಕಟಿಸಿದ್ದಾರೆ. ಇವರು ಈ ಭಾಗದ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿರುವಲ್ಲಿ ಅಧ್ಯಯನದ ವ್ಯಾಪ್ತಿಯ ವಿಶಾಲತ್ವವನ್ನು ಗುರುತಿಸಬಹುದು.  ಒಂದೊಂದು ಶಾಸನವನ್ನು ಟೀಕೆಯ ಸಹಿತ ಪ್ರಕಟಿಸಿದ್ದಾರೆ. ಶಾಸನ ದೊರೆತ ಸ್ಥಳ, ಶಾಸನದ ಗಾತ್ರ, ಅದು ಈಗ ಇರುವ ಸ್ಥಿತಿ, ಅದರ ಲಿಪಿ, ಲಿಪಿಯ ವೈಶಿಷ್ಟ್ಯ ಆ ಶಾಸನಗಳ ಭಾಷೆ ಇತ್ಯಾದಿಗಳ ವಿವರ ಇದೆ.

ಮುಂಬೈ ಕರ್ನಾಟಕ ಪ್ರದೇಶದ ಶಾಸನಗಳಲ್ಲಿ ಸುಮಾರು ೨೦೦೦ (೧೯೨೫) ಶಾಸನಗಳು South Indian Inscription ಸಂಪುಟ ೧೧, ೧೫, ೧೮, ೨೦ ಸಂಪುಟಗಳಲ್ಲಿ ಆರ್.ಎಸ್.ಪಂಚಮುಖಿ, ಎನ್. ಲಕ್ಷ್ಮೀನಾರಾಯಣರಾಯರು, ಪಿ.ಬಿ.ದೇಸಾಯಿ. ಜಿ.ಎಸ್.ಗಾಯಿ, ಶ್ರೀನಿವಾಸ ರಿತ್ತಿ, ಬಿ.ಆರ್.ಗೋಪಾಲ ಇವರ ಪರಿಶ್ರಮದಿಂದ ಪ್ರಕಟವಾಗಿವೆ. ಈ ಸಂಪುಟಗಳನ್ನು Bombay Karnataka Inscriptions Vol No. ೧, ೨, ೩, ೪. ಎಂದು ಕರೆಯುತ್ತಾರೆ.

ಮುಂಬೈ ಸರ್ಕಾರದ ವತಿಯಿಂದ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಶಾಸನ, ಹಸ್ತಪ್ರತಿ, ನಾಣ್ಯಗಳ ಸಂಗ್ರಹ ಇತ್ಯಾದಿಗಳನ್ನು ಸಂಗ್ರಹಿಸುವ ಸಲುವಾಗಿ ಕನ್ನಡ ಸಂಶೋಧನಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯ ಮೂಲಕ ೧೫೦೦ ಶಾಸನಗಳನ್ನು ಪರಿವೀಕ್ಷಿಸಿ ಸಂಪಾದಿಸಿ Karnataka Inscriptions ಹೆಸರಿನ ಆರು ಸಂಪುಟಗಳಲ್ಲಿ ಆರ್.ಎಸ್.ಪಂಚಮುಖಿ, ಎ.ಎಂ.ಅಣ್ಣಿಗೇರಿ, ಬಿ.ಆರ್.ಗೋಪಾಲ್ ಅವರು ಪ್ರಕಟಿಸಿದ್ದಾರೆ. ಈ ಸಂಪುಟಗಳಲ್ಲಿ ವಿಸ್ತಾರವಾದ ಪ್ರಸ್ತಾವನೆ ಹಾಗೂ ಟಿಪ್ಪಣಿ ಇಂಗ್ಲೀಷ್‌ನಲ್ಲಿರುವುದನ್ನು ಗುರುತಿಸಬಹುದು. ಹಾಗೆಯೇ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಉತ್ತರ ಕರ್ನಾಟಕದ ಶಾಸನಗಳ ಪರಿವೀಕ್ಷಣೆ, ಪ್ರಕಟನೆಯಂತಹ ಸಾಂಸ್ಥಿಕ ಸಂಯೋಜನೆಯನ್ನು ಹಮ್ಮಿಕೊಂಡು ಅದರನ್ವಯ ಶಾಸನಗಳ ಸೂಚಿಯ ರಚನೆಯಡಿಯಲ್ಲಿ ಧಾರವಾಡ ಹಾಗೂ ವಿಜಾಪುರ ಜಿಲ್ಲಾ ಶಾಸನ ಸೂಚಿ ಹಾಗೂ ಶಾಸನ ಪ್ರಕಟನೆಯ ಮಾಲಿಕೆಯಲ್ಲಿ ಧಾರವಾಡ ತಾಲೂಕಿನ ಶಾಸನಗಳು ಮಾತ್ರ ಪ್ರಕಟವಾಗಿವೆ. ಈ ಮಹತ್ವ ಪೂರ್ವವಾದ ಕಾರ್ಯ ಸ್ಥಗಿತಗೊಂಡಿದೆ.

. ನಿಜಾಮ್ ಕರ್ನಾಟಕ: ಉಳಿದ ಮೂರು ಪ್ರಾಂತಗಳಿಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಾಸನಗಳ ಸಂಗ್ರಹ-ಪ್ರಕಟನೆಯ ಕಾರ್ಯ ಅಷ್ಟಾಗಿ ನಡೆದಿಲ್ಲ ಎನ್ನಬಹುದು. ಹಾಗೆ ನೋಡಿದರೆ ಕನ್ನಡ ನಾಡಿನಲ್ಲಿ ಶಾಸನಗಳ ಸರ್ವೇಕ್ಷಣೆ, ಪ್ರಕಟನೆಯ ಕಾರ್ಯ ಮೊದಲಿಗೆ ಪ್ರಾರಂಭವಾದದ್ದು ಕರ್ನಲ್ ಮೆಕೆಂಝಿ ಹಾಗೂ ಸರ್.ವಾಲ್ಟೇರ್ ಇಲಿಯಟ್‌ನ ಮೂಲಕ ಈ ಭಾಗದಲ್ಲಿಯೇ. ನಿಜಾಮ್ ಕರ್ನಾಟಕ ಭಾಗದ ಸುಮಾರು ೫೦೦ ಶಾಸನಗಳು ಇವರ ಕಾಲದಲ್ಲಿ ಸಂಗ್ರಹಿಸಲ್ಪಟ್ಟಿದ್ದವು. ನಂತರದ ಕಾಲದಲ್ಲಿ ಉಳಿದ ಭಾಗಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಹೇಳಿಕೊಳ್ಳುವಂತಹ ಕೆಲಸ ನಡೆದಿಲ್ಲ ಎನ್ನಬಹುದು.

ಆಂಧ್ರಪ್ರದೇಶ ಸರ್ಕಾರದ Govt Archeaological Series ಮಾಲಿಕೆಯಲ್ಲಿ ಹಾಗೂ ತೆಲಂಗಾಣ ಶಾಸನಮುಲು ಎರಡು ಸಂಪುಟಗಳಲ್ಲಿ ನಿಜಾಮ್ ಕರ್ನಾಟಕದ ಹಾಗೂ ಆಂಧ್ರಪ್ರದೇಶದಲ್ಲಿಯ ಕೆಲವು ಕನ್ನಡ ಶಾಸನಗಳು ಪ್ರಕಟವಾಗಿವೆ. ದೇಶೀಯ ವಿದ್ವಾಂಸರು ವಿರಳವಾಗಿ ಈ ಭಾಗದಲ್ಲಿ ಶಾಸನಗಳ ಸಂಗ್ರಹ-ಪ್ರಕಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಪಿ.ಬಿ.ದೇಸಾಯಿ ಅವರ Jainism in South India and some Jaina Epigraphs ಪುಸ್ತಕದ ಅನುಬಂಧದಲ್ಲಿ ಈ ಭಾಗದ ೫೩ ಶಾಸನಗಳನ್ನು ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದಾರೆ. ವಿ.ಎಸ್.ಕುಲಕರ್ಣಿ ಅವರ Historical and cultural Studies of the region around Basava kalyana ನಿಬಂಧದಲ್ಲಿ ಬೀದರ್ ಜಿಲ್ಲೆಯ ೬೮ ಶಾಸನಗಳ ಪಠ್ಯ ಕೊಟ್ಟಿದ್ದಾರೆ. ವಿ.ಶಿವಾನಂದ ಅವರು ಮೆಕೆಂಝಿ ಸಂಗ್ರಹದಲ್ಲಿದ್ದ ಹಾಗೂ ತಾವು ಸಂಗ್ರಹಿಸಿದ್ದ ಸ್ವಂತದ ಶಾಸನಗಳನ್ನು ಸೇರಿಸಿ ಹೈದರಾಬಾದ್ ಕರ್ನಾಟಕ ಭಾಗದ ಕನ್ನಡ ಶಿಲಾಶಾಸನಗಳು ಎಂಬ ಸಂಪುಟವನ್ನು ಬನಾರಸ್ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮೂಲಕ ಪ್ರಕಟಿಸಿದ್ದಾರೆ. ಹನುಮಾಕ್ಷಿ ಗೋಗಿ ಹಾಗೂ ಬಿ.ಆರ್.ಹಿರೇಮಠ ಅವರು ಮುದೇನೂರು ಹಾಗೂ ಯಡ್ರಾಮಿ ಶಾಸನಗಳನ್ನು ಪ್ರಕಟಿಸಿದ್ದಾರೆ. ಹನುಮಾಕ್ಷಿ ಗೋಗಿ ಅವರ ಸುರಪುರ ತಾಲೂಕಿನ ಶಾಸನಗಳು ಹಾಗೂ ಕಲಬುರ್ಗಿ ಜಿಲ್ಲೆಯ ಶಾಸನಗಳನ್ನು ಉಲ್ಲೇಖಿಸಬಹುದು. ಈ ಭಾಗದ ಶಾಸನಗಳ ವ್ಯವಸ್ಥಿತ ಅಧ್ಯಯನ ತೀರ ವಿರಳ ಎಂದೇ ಹೇಳಬೇಕು.

ಶಾಸನಗಳ ಸರ್ವೇಕ್ಷಣೆ, ಸಂಗ್ರಹಣೆ, ವಾಚನ, ಅಧ್ಯಯನ, ಪ್ರಕಟನ ಕಾರ್ಯ ಶ್ರಮದಾಯಕವಾದುದು. ಆರ್ಥಿಕ ಸಹಾಯ, ತಾಳ್ಮೆ, ಅವಿರತ ಅಧ್ಯಯನ. ಪ್ರಮುಖ ಇಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರದ ಸಹಾಯವಿಲ್ಲದೆ ವೈಯಕ್ತಿಕವಾಗಿ ಶಾಸನಗಳ ಸಂಗ್ರಹ, ಪ್ರಕಟನೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದವರೂ ಕಂಡುಬರುತ್ತಾರೆ. ಅಂತಹವರಲ್ಲಿ ಪ್ರಮುಖರೆಂದರೆ ಕೆ.ಜಿ. ಕುಂದಣ ಗಾರ, ಪಿ.ಬಿ.ದೇಸಾಯಿ, ಎಸ್.ಶೆಟ್ಟರ್, ಶ್ರೀನಿವಾಸ ರಿತ್ತಿ, ಹಂಪನಾ ಮೊದಲಾದವರು. ಕುಂದಣಗಾರರ Inscription in Northern Karnataka and kolhapura state ಸಂಪುಟದಲ್ಲಿ ಒಟ್ಟು ೪೩ ಶಾಸನಗಳು ವಿಸ್ತತವಾದ ಪ್ರಸ್ತಾವನೆ, ಪಠ್ಯ ಹಾಗೂ ಅನುವಾದದೊಂದಿಗೆ ಪ್ರಕಟವಾಗಿದೆ. ಪಿ.ಬಿ.ದೇಸಾಯಿ ಅವರ Studies Epigraphy ಅಥವಾ ಶಾಸನ ಪರಿಚಯದಲ್ಲಿ ೫೩ ಶಾಸನಗಳು ಪ್ರಕಟವಾಗಿವೆ. ಹಂಪನಾರವರು ಸಂಪಾದಿಸಿ ಪ್ರಕಟಿಸಿರುವ ಹೊಂಬುಜದ ಶಾಸನಗಳು ಗಮನೀಯ ವಾದವುಗಳಾಗಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನ ವಿಭಾಗದ ಕಾರ್ಯವನ್ನು ಪ್ರತ್ಯೇಕವಾಗಿಯೇ ಉಲ್ಲೇಖಿಸಬೇಕು. Epigraphia Carnaticaದ ಮಾದರಿಯಲ್ಲಿಯೇ ಕನ್ನಡ ವಿಶ್ವವಿದ್ಯಾಲಯದ ಶಾಸನಗಳ ಸಂಪುಟಗಳು ಮಾಲಿಕೆಯಡಿಯಲ್ಲಿ ಜಿಲ್ಲಾವಾರು ಮಟ್ಟದಲ್ಲಿ ದೇವರಕೊಂಡಾರೆಡ್ಡಿ ಅವರ ಸಂಪಾದಕತ್ವದಲ್ಲಿ ಡಿ.ವಿ. ಪರಮಶಿವಮೂರ್ತಿ, ಕೆ.ಜಿ.ಭಟ್‌ಸೂರಿ, ಕಲವೀರ ಮನ್ವಾಚಾರ್ ಅವರ ನೆರವಿನೊಂದಿಗೆ ಬಳ್ಳಾರಿ, ಕೊಪ್ಪಳ, ಹಂಪೆ ಹಾಗೂ ರಾಯಚೂರು ಬಾಗಲಕೋಟೆ ಜಿಲ್ಲೆಯ ಶಾಸನಗಳು ಪ್ರಕಟವಾಗಿವೆ. ಬೀದರ್ ಗದಗ ಜಿಲ್ಲೆಯ ಶಾಸನ ಸಂಪುಟವು ಸಿದ್ಧಗೊಳ್ಳುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮುಳುಗಡೆ ಗ್ರಾಮಗಳಲ್ಲಿಯ ಶಾಸನಗಳನ್ನು ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ದೊರೆತಿರುವ ಕನ್ನಡ ಶಾಸನಗಳ ಪ್ರಕಟನೆಯಲ್ಲಿ ಆಸಕ್ತಿ ತೋರಿರುವ ಕೆ.ಆರ್.ಗಣೇಶ್, ಎಚ್.ಎಸ್.ಗೋಪಾಲರಾವ್ ಹಾಗೂ ಪಿ.ವಿ.ಕೃಷ್ಣ ಮೂರ್ತಿಯವರ ಕಾರ್ಯವೂ ಉಲ್ಲೇಖಾರ್ಹವಾಗಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯು ಪ್ರತಿವರ್ಷವೂ ನಡೆಸುವ ಕರ್ನಾಟಕ ಇತಿಹಾಸ ಅಧಿವೇಶನದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ಇತಿಹಾಸ ದರ್ಶನ ಹೆಸರಿನಲ್ಲಿ ಸಂಪುಟ ರೂಪದಲ್ಲಿ ಪ್ರಕಟಿಸುತ್ತಿದ್ದು ಇಲ್ಲಿಯವರೆಗೂ ೨೩ ಸಂಪುಟಗಳು ಹೊರಬಂದಿದ್ದು ಸುಮಾರು ಮುನ್ನೂರಕ್ಕೂ ಮೇಲ್ಪಟ್ಟು ಅಪ್ರಕಟಿತ ಶಾಸನಗಳು ಬೆಳಕು ಕಂಡಿವೆ. ಇತರೆ ಕೆಲವು ನಿಯತಕಾಲಿಕೆಗಳು ಮತ್ತು ಮಾನವಿಕಗಳಲ್ಲಿ ಕೆಲವು ಅಪ್ರಕಟಿತ ಶಾಸನಗಳು ಪ್ರಕಟಗೊಂಡಿವೆ.ಅದರಲ್ಲಿಯೂ ಕನ್ನಡ ವಿಶ್ವವಿದ್ಯಾಯ ಶಾಸನಶಾಸ್ತ್ರ ವಿಭಾಗದ ಶಾಸನ ಅಧ್ಯಯನ ನಿಯತಕಾಲಿಕವನ್ನು ಪ್ರತ್ಯೇಕವಾಗಿಯೇ ಉಲ್ಲೇಖಿಸ ಬೇಕು.

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶಾಸನಗಳ ಪರಿವೀಕ್ಷಣೆ ಹಾಗೂ ಪ್ರಕಟನೆಯ ಕಾರ್ಯ ಇತ್ತೀಚಿನ ದಿನಮಾನಗಳಲ್ಲಿ ನಡೆದಿದ್ದರೂ ಯಾವ ಯಾವ ಶಾಸನಗಳು ಎಲ್ಲಿ ಎಲ್ಲಿ ಪ್ರಕಟವಾಗಿವೆ? ಎಷ್ಟು ಪ್ರಕಟಿತ? ಎಷ್ಟು ಅಪ್ರಕಟಿತ? ಪುನರಾವರ್ತನೆ ಎಲ್ಲೆಲ್ಲಿ ತಲೆದೋರಿದೆ ಎಂಬ ವಿಷಯದಲ್ಲಿ ಅಧ್ಯಯನಾಸಕ್ತರಿಗೆ ಸಂದೇಹಗಳು ತಲೆದೋರಿವೆ. ಶಾಸನಗಳು ಪ್ರಕಟವಾಗಿರುವ ಸಂಪುಟಗಳು ಹಾಗೂ ನಿಯತಕಾಲಿಕೆಗಳು ಸರಿಯಾಗಿ ಲಭ್ಯವಿಲ್ಲದ ಕಾರಣ ಪ್ರಕಟವಾಗಿರುವ ಶಾಸನಗಳನ್ನು ಹುಡುಕುವುದು ಮೂಲ ಶಾಸನದ ಹತ್ತಿರ ಹೋಗಿ ಪಡಿಯಚ್ಚು ತೆಗೆದುಕೊಂಡು ಅಭ್ಯಸಿಸುವಷ್ಟೇ ತ್ರಾಸದಾಯಕವಾಗಿದೆ. ಶಾಸನಗಳ ಸಂಗ್ರಹದ ಕಾರ್ಯವನ್ನು ಯಾರು ಯಾವ ಪ್ರದೇಶದಲ್ಲಿ ಕೈಕೊಂಡಿದ್ದಾರೆ ಎಂಬುದರ ಪೂರ್ಣ ಮಾಹಿತಿ ದೊರೆಯದೆ ಇರುವ ಕಾರಣವೋ, ಮತ್ತಾವ ಕಾರಣವೋ ಶಾಸನಗಳ ಪ್ರಕಟನಾ ಕಾರ್ಯದಲ್ಲಿ ಪುನರುಕ್ತತೆ ತಲೆದೋರಿದೆ. ಇತ್ತೀಚಿನ ಹಂಪೆಯ ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟಗಳು ಇದನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರವಹಿಸಿವೆ.

ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಗ್ರಹಿಕೆ

. ಪ್ರಕಟಗೊಂಡ ಶಾಸನಗಳಲ್ಲಿಯ ಮತ್ತು ವಿಷಯದ ವೈವಿಧ್ಯತೆಗನುಗುಣವಾಗಿ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಇತರೆ ಅಧ್ಯಯನವನ್ನು ನಡೆಸಿರುವುದು: ಪ್ರಕಟಗೊಂಡ ಶಾಸನಗಳಲ್ಲಿಯ ವಸ್ತು ವಿಷಯಕ್ಕನುಗುಣವಾಗಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಅಧ್ಯಯನವನ್ನು ನಡೆಸಿರುವುದು. ಶಾಸನಗಳನ್ನು ಶೋಧಿಸಿ ಪ್ರಕಟಿಸಿದ ತಜ್ಞರಲ್ಲಿ ಕೆಲವರು ಶಾಸನಗಳನ್ನಾಧರಿಸಿ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಪ್ರಕಟಗೊಂಡ ಶಾಸನಗಳನ್ನು ವಸ್ತು ವಿಷಯಕ್ಕನುಗುಣವಾಗಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಅಧ್ಯಯನಗಳನ್ನು ನಡೆಸಿದ್ದಾರೆ. ಆರಂಭಕಾಲದಲ್ಲಿ ಶಾಸನಗಳನ್ನು ಸರ್ವೇಕ್ಷಣೆ ಮಾಡಿ ಸಂಪಾದಿಸಿ ಪ್ರಕಟಿಸಿದ ವಿದ್ವಾಂಸರಲ್ಲಿ ಕೆಲವರಾದರೂ ಶಾಸನಗಳನ್ನು ಆಧರಿಸಿ ಇತಿಹಾಸವನ್ನು ರೂಪಿಸಲು ಪ್ರಯತ್ನಿಸಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬಿ.ಎಲ್.ರೈಸ್‌ರ Mysore and Coorg from Inscriptions, mysore gazatter. ಜೆ.ಎಫ್.ಪ್ಲೀಟ್‌ರ Dynasties of the canerese Inscriptions, ಮೊರೆಸ್ ಅವರ ಕದಂಬಕುಲಗಳನ್ನು ಹೆಸರಿಸಬಹುದು. ಆರಂಭದಲ್ಲಿ ಶಾಸನಗಳನ್ನು ಕುರಿತಾದ ಅಧ್ಯಯನ ಕೇವಲ ಇತಿಹಾಸಕ್ಕೆ ಮಾತ್ರ ಸೀಮಿತವಾಗಿತ್ತು. ಇತಿಹಾಸ ಅಧ್ಯಯನ ಕೇವಲ ರಾಜರ ಮತ್ತು ರಾಜಮನೆತನದ ಘಟನೆಗಳಿಗೆ ಸಂಬಂಧಪಟ್ಟ ದಾಖಲೆಗಳೆಂದು ಗ್ರಹಿಸಲಾಯಿತು. ಚರಿತ್ರೆಯ ವಿಷಯವು ರಾಜರ ಹೋರಾಟ, ಗೆಲುವು ಸೋಲುಗಳನ್ನು ವಿವರಿಸುವ ಕೆಲಸಕ್ಕೆ ಮಾತ್ರ ಸೀಮಿತವಾಯಿತು. ಹಿಂದಿನ ರಾಜರು ಆರ್ಥಿಕ, ಸಾಮಾಜಿಕ, ಜೀವನವನ್ನು ರೂಪಿಸುವ ಶಕ್ತಿಯಾಗಿದ್ದರು ಎನ್ನುವ ಪರಿಕಲ್ಪನೆಯಿಂದ ಚರಿತ್ರೆಯನ್ನು ರೂಪಿಸಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆಯ ಅಧ್ಯಯನದಲ್ಲಿ ಶಾಸನಗಳನ್ನು ಮೂಲ ಸಾಮಗ್ರಿಯಾಗಿ ಗ್ರಹಿಸಿದ ಚರಿತ್ರೆಕಾರರು ಅವುಗಳನ್ನು ಪ್ರತಿಯೊಂದು ರಾಜ ಅಥವಾ ರಾಜಮನೆತನದ ವ್ಯಕ್ತಿಗಳ ವೈಯಕ್ತಿಕ ವಿವರವನ್ನು ಮುಖ್ಯವಾಗಿ ವಿವರಿಸುವ ತದನಂತರ ಅನುಬಂಧ ದೋಪಾದಿಯಲ್ಲಿ ರಾಜ ತಾನು ಕಟ್ಟಿಸಿದ ದೇವಾಲಯ, ಬಿಟ್ಟ ದತ್ತಿ, ಕವಿಗಳಿಗೆ ಕೊಟ್ಟ ಆಶ್ರಯ ಇತ್ಯಾದಿ ಬಿಡಿ ಸಂಗತಿಗಳನ್ನು ಆ ಕಾಲದ ಪ್ರಮುಖ ಆರ್ಥಿಕ, ಸಾಮಾಜಿಕ ಕಾರ್ಯಗಳೆಂಬಂತೆ ಗುರುತಿಸುವಷ್ಟಕ್ಕೆ ಸೀಮಿತವಾಗಿ ಬಳಸಿಕೊಂಡಿರು ವುದನ್ನು ಕಾಣಬಹುದಾಗಿದೆ. ಇಲ್ಲೆಲ್ಲಾ ಶಾಸನಗಳ ವಿಷಯಗಳನ್ನು ಇತಿಹಾಸದ ವರದಿಯಂತೆ ಬಳಸಿಕೊಳ್ಳಲಾಗಿದೆ. ಶಾಸನಗಳಲ್ಲಿ ವ್ಯಕ್ತಗೊಂಡ ಅರಸ ಅಥವಾ ಇನ್ನಿತರ ಕಾರ್ಯಗಳೇ ಪ್ರಮುಖ ಎನ್ನುವ ಭಾವನೆಯನ್ನು ತಾಳಿದ ಹಾಗೆ ಕಂಡು ಬರುತ್ತದೆ. ಆರಂಭಕಾಲದ ಚರಿತ್ರೆಕಾರರು ಶಾಸನಗಳನ್ನು ಮೊದಲ ವರ್ಗದ ಆಕರಗಳ ನಿಖರವಾದ ದಾಖಲೆಗಳು ಎಂದು ಪರಿಭಾವಿಸಿದ್ದರಿಂದ ಶಾಸನಗಳು ಕೊಡುವ ಎಲ್ಲಾ ಮಾಹಿತಿಯು ಇವರಿಗೆ ಅತಿಮುಖ್ಯ ಎನಿಸಿಬಿಟ್ಟಿತು. ಶಾಸನಗಳು ವೈಭವೀಕರಿಸುವ ಸಂಗತಿಗಳನ್ನು ಸಂದೇಹಾಸ್ಪದವಾಗಿ ಪರಿಶೀಲಿಸದೆ ಅಧಿಕೃತ ದಾಖಲೆಗಳೆಂದು ಕಣ್ಣುಮುಚ್ಚಿಕೊಂಡು ಸ್ವೀಕರಿಸಿದರು. ಈ ಅಂಶವನ್ನು ಬಿ.ಎಲ್.ರೈಸ್‌ರ Mysore and Coorg from Inscriptions  ಪುಸ್ತಕದಲ್ಲಿ ಗ್ರಹಿಸಬಹುದು. ಪೌರಾಣಿಕ, ಧಾರ್ಮಿಕ, ಪರಿಭಾಷೆಯ ಶಾಸನದ ವಿಷಯವನ್ನು ಅಧಿಕೃತ ಎಂದು ಪರಿಭಾವಿಸಿದರು. ಶಾಸನವಲ್ಲದ ಉಳಿದ ಆಕರಗಳನ್ನು ಕಲ್ಪಿತ, ಅಲೌಕಿಕ ಎಂದು ಪರಿಭಾವಿಸಿ ಗಣನೆಗೆ ತೆಗೆದುಕೊಳ್ಳದ ಕಾರಣ ಈ ವಿಷಯದಲ್ಲಿ ಅವುಗಳನ್ನು ಪೂರಕ ಆಕರಗಳಾಗಿ ಬಳಸುವ ಪ್ರಯತ್ನ ಮಾಡಲಿಲ್ಲ. ಶಾಸನಗಳಂತಹ ಆಕರಗಳ ಸಾಂದರ್ಭಿಕ ನೆಲೆಗಳಿಂದ ಅಭಿವ್ಯಕ್ತವಾಗುವ ಊಹಾಸಾಧ್ಯತೆಗಳನ್ನು ಪೂರಕ ಆಕರಗಳೊಂದಿಗೆ ಹೋಲಿಸುವ ಪ್ರಯತ್ನ ಶಾಸನಗಳನ್ನಾಧರಿಸಿದ ಚರಿತ್ರೆಯ ಅಧ್ಯಯನದಲ್ಲಿ ಗುರುತಿಸಲು ಸಾಧ್ಯವಿಲ್ಲ.

ಗಂಗರ ತಾಮ್ರಪಟಗಳ ನೈಜತೆಯ ಬಗೆಗೆ ಪ್ಲೀಟ್ ಮತ್ತು ರೈಸ್‌ರಲ್ಲಿ ನಡೆದ ವಾದ ವಿವಾದವನ್ನು ಇಲ್ಲಿ ಪ್ರಮುಖ ಅಂಶವಾಗಿ ಉಲ್ಲೇಖಿಸಬಹುದಾಗಿದೆ. ಏಕೆಂದರೆ ಕೂಟ ಶಾಸನಗಳು ಚರಿತ್ರೆಯ ರಚನೆಯಲ್ಲಿ ದಾಖಲಾಗಿ ಹೋಗಿಬಿಟ್ಟಿದ್ದು ಪ್ರಮುಖ ಅಂಶವಾಗಿದೆ. ಕೃತಕ ತಾಮ್ರಶಾಸನಗಳನ್ನು ಮೂಲಸಾಮಗ್ರಿಯನ್ನಾಗಿ ಸ್ವೀಕರಿಸುವಲ್ಲಿ ಇವರೀರ್ವರೂ ವಿಭಿನ್ನ ಧೋರಣೆಯನ್ನು ಅನುಸರಿಸಿದ್ದರು. ರೈಸ್‌ರು ಕೃತಕ ತಾಮ್ರಶಾಸನಗಳನ್ನಾಧರಿಸಿ ಬರೆದ ಗಂಗರ ಚರಿತ್ರೆಯನ್ನು ತಿರಸ್ಕರಿಸುವಂತಹ ಪ್ರಯತ್ನ ನಡೆದಿದ್ದು ಮಹತ್ತರವಾದುದು. ತಾಮ್ರ ಶಾಸನಗಳ ನೈಜತ್ವವನ್ನು ಪೂರಕ ಆಕರಗಳ ಹಿನ್ನೆಲೆಯಲ್ಲಿ ಓರೆಗಲ್ಲಿಗೆ ತಿಕ್ಕಿ ಅವುಗಳ ಅಸ್ತಿತ್ವವನ್ನು ಪ್ರಶ್ನಿಸಿದ್ದನ್ನು ಗಮನಿಸಬಹುದಾಗಿದೆ. ಶಾಸನ ಅಧ್ಯಯನದ ಮೊದಲ ಘಟ್ಟಗಳಲ್ಲಿ ರಾಜಕೀಯ ಅಧ್ಯಯನಕ್ಕೆ ಬಳಕೆಯಾಗಿದ್ದೇ ಹೆಚ್ಚು. ಕರ್ನಾಟಕದ ರಾಜಮನೆತನಗಳ ಅಧ್ಯಯನಕ್ಕೆ ಶಾಸನಗಳು ಮುಖ್ಯ ಆಕರಗಳಾದವು. ದಾನದ ವ್ಯವಸ್ಥೆ, ಅಗ್ರಹಾರಗಳ ವ್ಯವಸ್ಥೆ, ದೇವಾಲಯಗಳ ಅಧ್ಯಯನಗಳು ಈ ಹಂತದಲ್ಲಿ ಹೆಚ್ಚು ನಡೆದವು. ಒಂದು ರೀತಿಯಲ್ಲಿ ಹಿಂದಿನ ಅಧ್ಯಯನಗಳಿಗೆ ಪೂರಕವಾಗಿ ಮತ್ತು ಅಧ್ಯಯನಗಳ ಮುಂದುವರಿಕೆಯ ಭಾಗಗಳಾದಂತೆ ಕಂಡುಬರುತ್ತದೆ. ಈಗಲೂ ಅನೇಕರು ಹೀಗೆಯೇ ಅಧ್ಯಯನ ನಡೆಸುತ್ತಿದ್ದಾರೆ. ಶಾಸನಗಳನ್ನು ನಮ್ಮ ಪರಂಪರೆಯ ಚೌಕಟ್ಟಿನ ಹೊರಗಿಟ್ಟು ನೋಡುವ ಅಗತ್ಯವೇ ಇನ್ನೂ ಅನೇಕರಿಗೆ ಮನಗಂಡಿಲ್ಲ.

ಶಾಸನಗಳ ಸಾಂಸ್ಕೃತಿಕ ಸಂಶೋಧನೆ ೨೦ನೇ ಶತಮಾನದ ಮಧ್ಯಭಾಗದಲ್ಲಿ ಕನ್ನಡ ನಾಡಿನಲ್ಲಿ ವ್ಯವಸ್ಥಿತವಾಗಿ ಕಾಣಿಸಿಕೊಂಡ ಶೈಕ್ಷಣಿಕ ಶಿಸ್ತು. ನಾಡಿನ ಸಾಂಸ್ಕೃತಿಕ ಚರಿತ್ರೆ ಕುರಿತು ಶಾಸನ ಮತ್ತು ಪೂರಕ ಆಕರಗಳ ಮೂಲಕ ನಡೆದಿರುವ ಅಧ್ಯಯನವು ಸಂಶೋಧನಾ ಕ್ಷೇತ್ರದ ಬೇರೆ ಬೇರೆ ಆಯಾಮಗಳನ್ನು ಗುರುತಿಸಲು ನೆರವಾಗಿದೆ. ಸಾಹಿತ್ಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಾಸನಗಳನ್ನು ಕುರಿತು ಅಧ್ಯಯನ ಕೈಗೊಂಡ ಮೇಲೆ ಶಾಸನಗಳನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಉಂಟಾಯಿತು. ಶಾಸನ ಕ್ಷೇತ್ರವು ಹೊಸತನವನ್ನು ರಾಜಕೀಯ ಅಧ್ಯಯನದಿಂದ ಬಿಡಿಸಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಧ್ಯಯನಗಳತ್ತ ತರುವಲ್ಲಿ ಕನ್ನಡ ವಿದ್ವಾಂಸರ ಶ್ರಮ ಅಪಾರವಾದುದು. ಶಾಸನಗಳ ಆಕರಗಳನ್ನು ಬಹುರೂಪದಲ್ಲಿ ಬಳಸಿಕೊಂಡರು. ಪೂರ್ವಜರ ಜೀವನ ಕ್ರಮ ಅರಿಯಲು, ಜನಸಾಮಾನ್ಯರಲ್ಲಿ ಬಳಕೆಯಲ್ಲಿದ್ದ ರೀತಿ ನೀತಿಗಳು ಮತ್ತು ಆಚರಣೆಗಳನ್ನು ಅರಿಯಲು ಶಾಸನಗಳು ಮುಖ್ಯ ಆಕರಗಳೆಂಬ ಅಭಿಪ್ರಾಯ ಹೆಚ್ಚಾಯಿತು. ಈ ಕಾರಣಗಳಿಂದಾಗಿ ಈ ಅವಧಿಯನ್ನು ಪಠ್ಯವಿಮರ್ಶನ ಯುಗವೆಂದು ಕರೆಯಬಹುದು. ಅಲ್ಲಿಯವರೆಗೂ ಐತಿಹಾಸಿಕ ದಾಖಲೆಗಳ ಆಕರಗಳು ಎಂದು ಭಾವಿಸಿದ್ದ ಶಾಸನಗಳನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುವ ಪರಿಕಲ್ಪನೆ ಉಂಟಾಯಿತು. ಶಾಸನಗಳಂತಹ ಆಕರಗಳಿಂದ ಗ್ರಹಿಸಿದ ಸಾಂದರ್ಭಿಕ ನೆಲೆಗಳು ಅಭಿವ್ಯಕ್ತವಾಗುವ ಊಹಾ ಸಾಧ್ಯತೆಗಳನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಪೂರಕ ಶಿಸ್ತುಗಳೊಂದಿಗೆ ಅಧ್ಯಯನ ಮಾಡಲು ಪ್ರಯತ್ನಿಸಿದರು. ರಾಜಮನೆತನಗಳ ಇತಿಹಾಸವು ನಾಡಿನ ಇತಿಹಾಸ ರಚನೆಗೆ ಅಸ್ತಿಪಂಜರದಂತೆ ಎಂದು ಭಾವಿಸಿ, ಈ ಅಸ್ತಿಪಂಜರಕ್ಕೆ ರಕ್ತ ಮಾಂಸಗಳನ್ನು ತುಂಬುವುದು ನಾಡಿನ ಜನತೆಯ ಕುರಿತಾದ ಸಾಂಸ್ಕೃತಿಕ ಅಧ್ಯಯನ ಎಂದು ಗ್ರಹಿಸಿದರು.

ಶಾಸನಗಳ ಸಾಂಸ್ಕೃತಿಕ ಅಧ್ಯಯನವು ಅನ್ವೇಷಣೆ ಮತ್ತು ಪ್ರಕಟನೆಯನ್ನು ಮೀರಿದ್ದು. ಶಾಸನಗಳಲ್ಲಿ ಹುದುಗಿರುವ ಸಂಗತಿಯನ್ನು ಅದುವರೆವಿಗೂ ನಡೆದಿರುವ ಅಧ್ಯಯನದ ಬೆಳಕಿನಲ್ಲಿ ಪೂರಕ ಆಕರಗಳೊಂದಿಗೆ ವಿಶ್ಲೇಷಿಸುವಲ್ಲಿ, ಜ್ಞಾನದಿಗಂತವನ್ನು ವಿಸ್ತರಿಸುವಲ್ಲಿ ಸಾಂಸ್ಕೃತಿಕ ಅಧ್ಯಯನ ಮಹತ್ತರ ಪಾತ್ರ ಪಡೆದಿದೆ. ಶಾಸನ ಗಳನ್ನಾಧರಿಸಿದ ಸಾಂಸ್ಕೃತಿಕ ಸಂಶೋಧನಾ ಬರಹಗಳಲ್ಲಿ ಶಾಸನಗಳು ಹೇಳುವ ಬಿಡಿ ಘಟನೆಗಳೇ ಇತಿಹಾಸವೆನ್ನುವ ಹಳೆಯ ವಿಧಾನಕ್ಕಿಂತ ಮೂಲ ಆಕರಗಳು ತಮ್ಮ ಆಂತರಿಕ ಪ್ರಮಾಣಗಳ ಮೂಲಕ ಬಾಹ್ಯವಾತಾವರಣವೊಂದರ ಗ್ರಹಿಕೆಗೆ ಅವಕಾಶ ಕಲ್ಪಿಸಿಕೊಡುವ ಸಂಸ್ಕೃತಿಯ ವಿನ್ಯಾಸಗಳು ಎಂಬ ನಿಲುವು ಗ್ರಹಿತವಾಗಿದೆ. ಸಾಂಸ್ಕೃತಿಕ ಸಂಶೋಧನಾ ಅಧ್ಯಯನದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ವಿಶ್ಲೇಷಿಸುವಾಗ ಆ ವಿಷಯದಲ್ಲಿ ಇದುವರೆಗೂ ಬೇರೆ ಬೇರೆ ಶಿಸ್ತುಗಳಲ್ಲಿ ದೊರಕುವ ಸಂಗತಿಯನ್ನು ಪರೀಕ್ಷಿಸಿ ಅವುಗಳು ತಮ್ಮ ಅಧ್ಯಯನದ ಸಂದರ್ಭದಲ್ಲಿ ನೀಡುವ ಆಧಾರಗಳ ಮೇಲೆ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅಧ್ಯಯನದಲ್ಲಿ ವ್ಯಕ್ತವಾಗುವ ಸಂಗತಿಗಳನ್ನು ಖಚಿತವಾಗಿ ಮತ್ತು ಸ್ವಲ್ಪ ವಿವರಣಾತ್ಮಕವಾಗಿಯೂ ದಾಖಲಿಸುವುದು. ಶಾಸನಗಳ ಸಾಂಸ್ಕೃತಿಕ ಅಧ್ಯಯನದ ವಸ್ತು ಕ್ಷೇತ್ರಕಾರ್ಯವನ್ನು ಕೆಲವೊಮ್ಮೆ ಅಪೇಕ್ಷಿಸಿರುವುದನ್ನು ಕಾಣಬಹುದಾಗಿದೆ. ಶಾಸನ ಆಕರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಮತ್ತು ತೌಲನಿಕವಾಗಿ ಅಧ್ಯಯನ ಮಾಡುವ ಕ್ರಮ ಪ್ರಾರಂಭವಾಯಿತು. ರೈಸ್ ಮತ್ತು ಫ್ಲೀಟ್‌ರು ಈ ರೀತಿಯ ಅಧ್ಯಯನ ನಡೆಸಿದ್ದರೂ ಸಹ ಅದು ಕೇವಲ ರಾಜಕೀಯ ಚರಿತ್ರೆಗೆ ಮಾತ್ರ ಸೀಮಿತವಾಗಿತ್ತು. ಈ ಹಂತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಕ್ಕೂ ಶಾಸನ ಆಕರಗಳನ್ನು ಬಳಸಿಕೊಳ್ಳಬಹುದೆಂದು ಕಂಡುಕೊಂಡರು, ಶಾಸನ ಅಧ್ಯಯನವನ್ನು ಶಾಸ್ತ್ರದ ರೀತಿ ಆಂದರೆ ಲಿಪಿ ಅಧ್ಯಯನ, ಪಾಠಾಂತರಗಳ ಸಂಪಾದನೆ, ಪಾಠ ನಿಷ್ಕರ್ಷೆ ಮೊದಲಾದ ಸೂತ್ರಗಳ ಮೂಲಕ ನೋಡಲಾರಂಭಿಸಿದರು. ಈ ರೀತಿಯ ಅಧ್ಯಯನದಲ್ಲಿ ಮೊದಲಿಗೆ ಕೇಳಿಬರುವ ಹೆಸರು ಡಾ. ಚಿದಾನಂದಮೂರ್ತಿ ಮತ್ತು ಡಾ. ಎಂ.ಎಂ. ಕಲಬುರ್ಗಿ ಅವರುಗಳದ್ದು. ಈ ಇಬ್ಬರೂ ಶಾಸನ ಅಧ್ಯಯನ ಕ್ಷೇತ್ರವನ್ನು ಹಿಗ್ಗಿಸಿದರು. ಕೆಲವು ಮಾದರಿ ಅಧ್ಯಯನಗಳ ಮೂಲಕ ಶಾಸನಕ್ಷೇತ್ರದ ತರುಣರಿಗೆ ಮಾರ್ಗದರ್ಶಕರಾದರು.  ಶಾಸನಗಳ ಕುರಿತ ವೈವಿಧ್ಯಮಯ ಅಧ್ಯಯನ ಪ್ರಾರಂಭವಾಯಿತು.

ಸಂಸ್ಕೃತಿ ಶೋಧ ಸಹಜವಾಗಿಯೇ ಮೌಲ್ಯ ಶೋಧವಾಗಿದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನವು ರಾಜಕೀಯೇತರ ವಿಷಯಗಳನ್ನು ಶೋಧಿಸುವ, ವಿಶ್ಲೇಷಿಸುವ ಅಂಶಗಳನ್ನು ಒಳಗೊಂಡಿದೆ. ಈ ಸಂಶೋಧನೆಯು ಇಲ್ಲಿಯವರೆಗೂ ಇದ್ದ ಇತಿಹಾಸದ ಸಂಶೋಧನೆಗಿಂತ ಭಿನ್ನವಾದ ಆಯಾಮವನ್ನು ಶಾಸನ ಕ್ಷೇತ್ರಕ್ಕೆ ದೊರೆಕಿಸಿ ಕೊಟ್ಟಿತು. ಅನೇಕ ಹೊಸ ಅಂಶಗಳು ಇದರಿಂದಾಗಿ ಬೆಳಕಿಗೆ ಬಂದವು. ಈ ರೀತಿಯ ಅಧ್ಯಯನವು ಎಂ.ಚಿದಾನಂದಮೂರ್ತಿ ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮೂಲಕ ಪ್ರಾರಂಭವಾಯಿತೆನ್ನಬಹುದು. ಇದರಲ್ಲಿ ಕ್ರಿ.ಶ.೪೫೦ ರಿಂದ ೧೧೫೦ರವರೆಗಿನ ಶಾಸನಗಳನ್ನು ಇಟ್ಟುಕೊಂಡು ಸಾಂಸ್ಕೃತಿಕ ಅಧ್ಯಯನ ಮಾಡಿರುವುದನ್ನು ಗುರುತಿಸಬಹುದಾಗಿದೆ. ಸಂಸ್ಕೃತಿಯ ವಿವಿಧ ಮಜಲು ಗಳಾದ ಧಾರ್ಮಿಕ ವಿವರ, ದೇವಾಲಯ, ವಿದ್ಯಾಭ್ಯಾಸ, ಯುದ್ಧಪದ್ಧತಿ, ವೀರಜೀವನ, ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳ ಕುರಿತ ವಿಶ್ಲೇಷಣೆಯನ್ನು ಶಾಸನಗಳನ್ನಾಧರಿಸಿ ಪೂರಕ ಆಕರಗಳೊಂದಿಗೆ ಅಧ್ಯಯನ ಮಾಡಲಾಗಿದೆ. ಇವರ ಶಾಸನಗಳನ್ನು ಕುರಿತ ವಿಭಿನ್ನ ನೋಟದ ಸಂಶೋಧನೆಯು ನಂತರ ಕಾಲದ ಸಂಶೋಧಕರಿಗೆ ಸಂಸ್ಕೃತಿಯ ವಿವಿಧ ಅಂಗಗಳನ್ನು ಪ್ರತ್ಯೇಕವಾಗಿ ಅಧ್ಯಯನ ಕೈಗೊಳ್ಳುವಲ್ಲಿ ಅನುಕರಣಿಯವಾಗಿರುವುದನ್ನು ಗಮನಿಸಬಹುದು. ಶಾಸನಗಳನ್ನು ಹೊಸನಿಟ್ಟಿನಲ್ಲಿ ನೋಡಲು ಆ ಕ್ಷೇತ್ರದ ಆಸಕ್ತರಿಗೆ ಇದು ಪ್ರೇರಣೆ ಪ್ರಚೋದನೆಯನ್ನು ಒದಗಿಸಿತು. ಅನೇಕ ಹೊಸ ಅಂಶಗಳು ಇದರಿಂದಾಗಿ ಬೆಳಕಿಗೆ ಬಂದವು. ಇವರ ಪರಿಶ್ರಮದಿಂದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಗ್ರಂಥಗಳು ಬೆಳಕು ಕಂಡಂತೆ, ನಾಡಿನ ಬೇರೆ ಬೇರೆ ವಿದ್ವಾಂಸರುಗಳಿಂದ ಕರ್ನಾಟಕದ ವೀರಗಲ್ಲುಗಳು, ಕರ್ನಾಟಕದ ವರ್ತಕರು, ಕರ್ನಾಟಕದಲ್ಲಿ ಸತಿಪದ್ಧತಿ, ಶಾಸನಗಳಲ್ಲಿ ಸ್ತ್ರೀ ಸಮಾಜ, ಮಹಾಸತಿ ಆಚರಣೆ ಒಂದು ಅಧ್ಯಯನ, ಕಲಾ್ಯಣ ಚಾಳುಕ್ಯರ ದೇವಾಲಯಗಳ ಸಾಂಸ್ಕೃತಿಕ ಅಧ್ಯಯನ, ಕರ್ನಾಟಕದ ನಿಸಿಧಿ ಪರಂಪರೆ, ತ್ಯಾಗ, ಬಲಿದಾನ, ವೀರಮರಣ ಸ್ಮಾರಕಗಳು, ಕನ್ನಡ ಶಾಸನ ಶಿಲ್ಪ, ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸ ಕ್ರಮ, ತುಳುನಾಡಿನ ಶಾಸನಗಳ ಅಧ್ಯಯನ, ಹೊಸಪೇಟೆ ತಾಲೂಕು ಕೆರೆಗಳು, ಕೋಲಾರ ಜಿಲ್ಲಾ ಸ್ಥಳನಾಮಗಳು, ಶಾಸನಶಿಲ್ಪ, ಶಾಸನ ಸಂಸ್ಕೃತಿ, ಶಾಸನಗಳ ಪಾರಿಭಾಷಿಕ ಪದಗಳು, ಕರ್ನಾಟಕದ ಪಾಚೀನ ಅಳತೆ ಪದ್ಧತಿಗಳು, ಪ್ರಾಚೀನ ಕರ್ನಾಟಕದ ಶೈವಧರ್ಮ, ಶಾಸನಗಳಲ್ಲಿ ಶಿವಶರಣರು, ಕರ್ನಾಟಕದ ಶಾಸನ ಸಮೀಕ್ಷೆ, ಶಾಸನಗಳಲ್ಲಿ ಗಿಡ ಮರಗಳು, ಶಾಸನಗಳು:ಪ್ರಭುತ್ವ ಜನತೆ, ಯಾಪನೀಯ ಪಂಥ, ಬಂಕಾಪುರ ಶೋಧನೆ, ಚಂದ್ರಕೊಡೆ, ಅನುಶಾಸನ, ಶಾಸನಸಂಜೀವಿನಿ, ನಾಗರಖಂಡ ಎಪ್ಪತ್ತು ಒಂದುಅಧ್ಯಯನ, ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಮುಳುಗುಂದ ನಾಡು, ಬೆಳವೊಲ ಮುನ್ನೂರು, ಪುಲಿಗೆರೆ ನಾಡು, ತರ್ದವಾಡಿನಾಡು, ಶ್ರವಣಬೆಳಗೊಳ: ಒಂದುಅಧ್ಯಯನ, ಶಾಸನಗಳಲ್ಲಿ ಶಿಲ್ಪಾಚಾರಿಯರು, ನಿಡುಗಲ್ಲು ಒಂದು ಅಧ್ಯಯನ, ಸಾವಿಗೆ ಆಹ್ವಾನ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಶಾಸನಗಳ ಸಮಗ್ರ ಅಧ್ಯಯನ, ಇನ್ನೂ ಹತ್ತು ಹಲವು ಉತ್ತಮ ಅಧ್ಯಯನಗಳನ್ನು ಹೆಸರಿಸಬಹುದು. ಈ ಹಂತದಲ್ಲಿ ಸಾಂಸ್ಕೃತಿಕ ಚರಿತ್ರೆಂು ಅಧ್ಯಯನಕ್ಕೆ ಶಾಸನಗಳು ಅನಿವಾರ್ಯ ಆಕರಗಳಾಗಿ ಕಂಡುಬಂದವು.

ಶಾಸನಗಳ ಸಾಂಸ್ಕೃತಿಕ ಅಧ್ಯಯನವು ವ್ಯಾಖ್ಯಾನನಿಷ್ಠ ಶೋಧಕ್ಕೆ ಮಾದರಿಯಾಗಿದೆ. ಘಟನಾನಿಷ್ಠ ಶೋಧದಲ್ಲಿ ಹೊಸ ಆಕರ ಸಾಮಗ್ರಿಗಳು ಪ್ರಮುಖ ಎಂದೆನಿಸಿದರೆ ಈ ಶೋಧದಲ್ಲಿ ಶಾಸನಗಳು ಒದಗಿಸುವ ಮಾಹಿತಿಯನ್ನು ಬೇರೆ ಬೇರೆ ನಿಟ್ಟುಗಳಿಂದ ನೋಡಿ ಈವರೆಗಿನ ಶೋಧ ಮತ್ತು ಆಶಯಕ್ಕಿಂತ ವಿಭಿನ್ನವಾದ ಫಲಿತಾಂಶಗಳನ್ನು ನೀಡುವುದಾಗಿದೆ. ಈ ಅಧ್ಯಯನ ಕ್ರಮದಲ್ಲಿ ಶಾಸನಗಳೆಂಬ ವೈವಿಧ್ಯಪೂರ್ಣ ಸಾಮಗ್ರಿಯನ್ನು ಸಂಸ್ಕೃತಿಯ ಅನ್ವೇಷಣೆಗಾಗಿ ಸಂಯೋಜಿಸುವುದು. ತದನಂತರ ಅಲ್ಲಿ ವ್ಯಕ್ತವಾಗಿರುವ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಗ್ರಹಿಸುವುದು. ಈ ಸಂಶೋಧನೆಯಲ್ಲಿ ಏಕಕಾಲಕ್ಕೆ ಘಟನೆಗಳ ಶೋಧ ಹಾಗೂ ಅವುಗಳ ಹಿಂದಿರುವ ಸಾಂಸ್ಕೃತಿಕ ಶೋಧ ಎರಡು ಸಾಧ್ಯವಾಗುತ್ತದೆ.

ಈ ಅಧ್ಯಯನದಲ್ಲಿ ದಾಖಲೆಯಾಧಾರಿತ ಸಂಶೋಧನೆ ಹಾಗೂ ಕ್ಷೇತ್ರಕಾರ್ಯ ಸಂಶೋಧನೆ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನ ಪದ್ಧತಿಯಲ್ಲಿ ಸಂಸ್ಕೃತಿ ಶೋಧನೆ ಮತ್ತು ಸಮಾಜ ಮುಖ್ಯವಾಗುತ್ತದೆ. ಜೊತೆಗೆ ಸಮಾಜೋಧಾರ್ಮಿಕ ಅಂಶಗಳು ಮುಖ್ಯವಾಗುತ್ತವೆ. ಸಾಂಸ್ಕೃತಿಕ ಅಧ್ಯಯನ ಹುಟ್ಟುಹಾಕಿದ ಹೊಸ ಮಾರ್ಗದಿಂದಾಗಿ ಶಾಸನಗಳ ಅಧ್ಯಯನದಲ್ಲಿ ವಿಭಿನ್ನ ನೆಲೆಯ ಅಧ್ಯಯನ ಪ್ರಾರಂಭವಾದ ಹಾಗೆ ಸಾಹಿತ್ಯ ಕೃತಿಗಳ ಸಾಹಿತ್ಯೇತರ ಅಧ್ಯಯನದ ಕಡೆಗೂ ಹೊರಳಿತು. ಯಾವುದೇ ಕೃತಿ ಸಾಹಿತ್ಯದೊಂದಿಗೆ ಸಾಂಸ್ಕೃತಿಕ ವಾಗಿಯೂ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು. ಸಾಂಸ್ಕೃತಿಕ ಅಧ್ಯಯನದಲ್ಲಿ ಗಮನಿಸಬೇಕಾದ್ದುದು ಅಂತರ್‌ಶಿಸ್ತೀಯತೆ, ಒಂದಕ್ಕಿಂತ ಹೆಚ್ಚು ವಿಷಯಗಳ, ವಿಷಯಶಾಖೆಗಳ ವ್ಯಾಸಂಗವನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡು ನಡೆಸುವ ಅಭ್ಯಾಸವೇ ಅಂತರ್‌ಶಿಸ್ತೀಯ ಅಧ್ಯಯನ. ಅಂತರ್‌ಶಿಸ್ತೀಯ ಅಧ್ಯಯನ ಕನ್ನಡ ಶಾಸನಗಳ ಅಧ್ಯಯನದಲ್ಲಿಯೇ ಮೊದಲಿಗೆ ನಡೆದಿರುವುದು. ಆರಂಭದಲ್ಲಿ ಆರ್.ನರಸಿಂಹಾಚಾರ್ಯರು ಶಾಸನಗಳ ಅಧ್ಯಯನದಲ್ಲಿ ಘಟನಾ ಶೋಧಕ್ಕೆ ಈ ಪದ್ಧತಿಯನ್ನು ಬಳಸಿಕೊಂಡಿದ್ದರು. ನಂತರ ಚಿದಾನಂದಮೂರ್ತಿ ಅವರು ಈ ಪದ್ಧತಿಯನ್ನು ಸುರ್ಪಕವಾಗಿ ಶಾಸನಗಳ ಅಧ್ಯಯನದಲ್ಲಿ ಬಳಸಿಕೊಂಡರು. ಶಾಸನೇತರ ಕ್ಷೇತ್ರಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಸಂಶೋಧನೆಗೆ ವೈವಿಧ್ಯ ಲಕ್ಷಣವನ್ನು ಒದಗಿಸುವ ಕೆಲಸ ಮಾಡಿದರು. ಯಾವುದೇ ವಿಷಯ ಯಾವುದೇ ಅಧ್ಯಯನಕ್ಕೆ ಅಪ್ರಯೋಜಕವಲ್ಲವೆಂಬಂಥ ದೃಷ್ಟಿ ಸಂಶೋಧನಾ ಕ್ಷೇತ್ರದಲ್ಲಿ ಮೂಡಿತು. ಶಾಸನಗಳಲ್ಲಿಯೇ ಉಪೇಕ್ಷಿತವಾಗಿದ್ದ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ಬಂದಿತು. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನವು ಶಾಸನವನ್ನು ಸಾಹಿತ್ಯದಿಂದ, ಸಾಹಿತ್ಯವನ್ನು ಶಾಸನದಿಂದ ಸಮರ್ಥಿಸಿಕೊಳ್ಳುತ್ತ ನಡೆದಿದೆ.

ಚಿದಾನಂದಮೂರ್ತಿ ಅವರ ಪಂಪ ಕವಿ ಮತ್ತು ಮೌಲ್ಯ ಪ್ರಸಾರ ಲೇಖನದಲ್ಲಿ ಶಾಸನಗಳನ್ನು ಆಧರಿಸಿ ಪಂಪಭಾರತ ಹಾಗೂ ಪಂಪನ  ಕಾಲದ ಮೌಲ್ಯಗಳನ್ನು ವಿವೇಚಿಸಿದ್ದಾರೆ. ಪಂಪ ಕವಿಯು ಹೇಳುವ ನನ್ನಿ, ಬೀರ, ಚಾಗ, ಶೌಚ ಮುಂತಾದ ಮೌಲ್ಯಗಳು ಆತನ ಕಾಲದ ಜನಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿದ್ದವು ಎಂಬುದನ್ನು ಆತನ ಕಾಲ ಹಾಗೂ ನಂತರ ಕಾಲದ ಶಾಸನಗಳನ್ನಾಧರಿಸಿ ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಪ್ರಾಚೀನ ಕಾಲದ ಸಾಂಸ್ಕೃತಿಕ ವಿಚಾರಗಳ ವಿಶ್ಲೇಷಣೆ ಇದೆ. ಈ ವಿಧಾನ ಒಂದು ರೀತಿಯಲ್ಲಿ ಸಾಹಿತ್ಯದ ಶಿಸ್ತಿಗೆ ಇತಿಹಾಸದ ಶಿಸ್ತನ್ನು ಅಳವಡಿಸಿ ಪರಿಶೀಲಿಸುವ ಪ್ರಯತ್ನವಾಗಿದೆ. ಇಲ್ಲಿ ಅಪಾರವಾದ ಮಾಹಿತಿಯನ್ನು ಕಾವ್ಯ ಮತ್ತು ಶಾಸನಗಳಿಂದ ಸಂಗ್ರಹಿಸಲಾಗಿದೆ. ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಸಂಕಲಿಸಿ, ವಿಷಯಾನುಗುಣವಾಗಿ ಸಂಯೋಜಿಸಿ ಪ್ರತಿಭಾ ಬಲದಿಂದ ವಿಶ್ಲೇಷಿಸಿ ಸಂಶೋಧನಾ ಫಲಿತಗಳನ್ನು ಈ ವಿಧಾನದ ಮೂಲಕ ಪ್ರಕಟಿಸಿರುವುದನ್ನು ಕಾಣಬಹುದು. ಈ ವಿಧಾನದಲ್ಲಿ ಕ್ಷೇತ್ರಕಾರ್ಯವೂ ಕೆಲವೊಮ್ಮೆ ಮುಖ್ಯ ಎನಿಸುತ್ತದೆ. ಕ್ಷೇತ್ರಕಾರ್ಯದಿಂದ ವ್ಯಕ್ತಗೊಳ್ಳುವ ಮಾಹಿತಿಗಳು ಶಾಸನಗಳಲ್ಲಿಯ ವಿಷಯವನ್ನು ಸ್ಥಿರೀಕರಿಸುತ್ತದೆ. ಜಿನವಲ್ಲಭನ ಕುರಿಕ್ಯಾಲ ಶಾಸನದಲ್ಲಿ ಪ್ರಸ್ತಾಪಿತವಾದ ಪಂಪ ಕವಿಗೆ ಸಂಬಂಧಿಸಿದ ವಿಷಯದಲ್ಲಿ, ಅಂದರೆ ಅರಿಕೇಸರಿಯು ಪಂಪ ಕವಿಗೆ ನಿೀಡಿದ ಧರ್ಮಪುರದ ಅಗ್ರಹಾರದ ಕುರುಹುಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಶೋಧಕರು ಗುರುತಿಸಿದ್ದನ್ನು ಇಲ್ಲಿ ಉದಾಹರಿಸಬಹುದು.

ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ವರ್ತಕರ ಚಟುವಟಿಕೆಗಳನ್ನು ಕುರಿತಾದ ಅಧ್ಯಯನವನ್ನು ಬಿ.ಆರ್.ಹಿರೇಮಠರ ಶಾಸನಗಳಲ್ಲಿ ಕರ್ನಾಟಕದ ವರ್ತಕರು ಎಂಬ ನಿಬಂಧದಲ್ಲಿ ಗುರುತಿಸಬಹುದು. ಇದರಲ್ಲಿ ವರ್ತಕರು, ವರ್ತಕ ಸಂಘಗಳು, ಅವರ ವ್ಯಾಪಾರದ ಸ್ವರೂಪ, ಸಾಮಾಜಿಕ ಧಾರ್ಮಿಕ ಜೀವನ ಮುಂತಾದ ವಿಷಯಗಳ ಬಗೆಗೆ ವಿವರಣೆ ಇದೆ. ವರ್ತಕರು ತಮ್ಮ ವಾಣಿಜ್ಯಕ್ಕೆ ಸೀಮಿತವಾಗಿರದೆ ಸಮಾಜದ ಘಟಕವಾಗಿದ್ದು ಆ ಕಾಲದ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರ ವಿಶ್ಲೇಷಣೆ ಶಾಸನಗಳನ್ನಾಧರಿಸಿ ನಡೆದಿದೆ. ಶಾಸನಗಳಲ್ಲಿ ಹುದುಗಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ಮಹಿಳಾ ಜೀವನಕ್ಕೆ ಸಂಬಂಧಪಟ್ಟ ಅಧ್ಯಯನ ಕೂಡ ನಡೆದಿದೆ. ಸ್ತ್ರೀಯರ ವಿದ್ಯಾಭ್ಯಾಸ, ಕಲೆ, ಧಾರ್ಮಿಕ ಕಲಾಪ, ಆಡಳಿತ, ಯುದ್ಧಗಳಲ್ಲಿ ಭಾಗವಹಿಸಿದ್ದರ ಚಿತ್ರಣ, ಲೋಕೋಪಯೋಗಿ ಕಾರ್ಯಗಳ ವಿವರಗಳನ್ನು ಕುರಿತ ಅಧ್ಯಯನ ಶಾಸನಗಳನ್ನಾಧರಿಸಿ ನಡೆದಿದೆ. ನಿದರ್ಶನಕ್ಕೆ ಚೆನ್ನಕ್ಕ ಎಲಿಗಾರ ಅವರ ಶಾಸನಗಳಲ್ಲಿ ಸ್ತ್ರೀ ಸಮಾಜ. ಸಾಮುದಾಯಿಕ ಬದುಕಿನಲ್ಲಿ ಎಷ್ಟರಮಟ್ಟಿಗೆ ದೇವಾಲಯ ಗಳ ಅವಶ್ಯಕತೆ ಇದ್ದಿತು, ಅವುಗಳ ನಡುವೆ ಪರಸ್ಪರ ಕೋಳು-ಕೊಡುಗೆಗಳೆಂತಹವು, ಸಮುದಾಯವನ್ನು ದೇವಾಲಯಳು ಎಷ್ಟರಮಟ್ಟಿಗೆ ನಿಯಂತ್ರಿಸಿದ್ದವು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಬದುಕಿನಲ್ಲಿ ದೇವಾಲಯಗಳ ಪಾತ್ರವೆಂತಹದ್ದು ಎಂಬಂತಹ ಅಧ್ಯಯನಗಳು ಶಾಸನಗಳನ್ನಾಧರಿಸಿ ನಡೆದಿವೆ. ಉದಾಹರಣೆಗೆ ಎಚ್.ಎಸ್. ಗೋಪಾಲರಾವ್ ಅವರ ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯ ಗಳ ಸಾಂಸ್ಕೃತಿಕ ಅಧ್ಯಯನ, ದೇವರಕೊಂಡಾರೆಡ್ಡಿ ಅವರ ತಲಕಾಡಿನ ಗಂಗರ ದೇವಾಲಯಗಳ ಸಾಂಸ್ಕೃತಿಕ ಅಧ್ಯಯನ ಮೊದಲಾದುವನ್ನು ಗಮನಿಸಬಹುದು.

ಯುದ್ಧದ ಚರಿತ್ರೆ, ಪ್ರಾಚೀನ ಕರ್ನಾಟಕದ ವೀರರ ವೇಷಭೂಷಣಗಳು, ಒಡವೆಗಳು, ಆಯುಧಗಳ ಪ್ರಕಾರಗಳು, ಕನ್ನಡ ನಾಡಿನ ಕ್ಷಾತ್ರದ ಹಿನ್ನೆಲೆಯನ್ನು ಕುರಿತಾದ ಅಧ್ಯಯನ ಇತ್ಯಾದಿಗಳು ಶಾಸನಗಳ ಪಠ್ಯ ಹಾಗೂ ಶಿಲ್ಪಗಳನ್ನಾಧರಿಸಿ ನಡೆದಿರುವುದನ್ನು ಕರ್ನಾಟಕದ ವೀರಗಲ್ಲುಗಳು, ಕನ್ನಡ ಶಾಸನ ಶಿಲ್ಪ ಇತ್ಯಾದಿ ನಿಬಂಧಗಳಲ್ಲಿ ಗುರುತಿಸಬಹುದು. ಮಹಾಸತಿಗೆ ಸಂಬಂಧಿಸಿದ ವಿವರಗಳನ್ನು ಶಾಸನಗಳು ಹಾಗೂ ಪೂರಕ ಆಕರಗಳೊಂದಿಗೆ ವಿಶ್ಲೇಷಣಾತ್ಮಕವಾಗಿ ನಡೆಸಿರುವುದನ್ನು ಬಸವರಾಜು ಕಲ್ಗುಡಿ ಅವರ ಮಹಾಸತಿ ಆಚರಣೆ ಒಂದು ಅಧ್ಯಯನ ಪುಸ್ತಕದಲ್ಲಿ ಗುರುತಿಸಬಹುದು. ಹಾಗೆಯೇ ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರಗಳಾದ ಶ್ರವಣಬೆಳ್ಗೊಳ, ಬಳ್ಳಿಗಾವೆ, ಬನವಾಸಿ, ಪುಲಿಗೆರೆ, ಕುಕನೂರು, ಹಂಪೆ, ಹೊಂಬುಜ ಮುಂತಾದವುಗಳನ್ನು ಕುರಿತು ಶಾಸನಗಳನ್ನಾಧರಿಸಿ ಪೂರಕ ಆಕರಗಳೊಂದಿಗೆ ವ್ಯಾಪಕವಾದ ಅಧ್ಯಯನ ನಡೆದಿದೆ. ಸಿ.ನಾಗಭೂಷಣ ಅವರು ಶಾಸನಗಳನ್ನು ಪೂರಕ ಆಕರಗಳೊಂದಿಗೆ ಅಧ್ಯಯನ ಮಾಡುವುದರ ಮೂಲಕ ಸಾಹಿತ್ಯ-ಸಂಸ್ಕೃತಿಯ ವಿವಿಧ ಮಗ್ಗುಲುಗಳನ್ನು ಶೋಧಿಸುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ,ಸಾಹಿತ್ಯ-ಸಂಸ್ಕೃತಿ ಹುಡುಕಾಟ, ಶಾಸನಗಳು ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳಲ್ಲಿ ವಾಡಿದ್ದಾರೆ. ಪ್ರಾಚೀನ ಕರ್ನಾಟಕದ ಭೌಗೋಳಿಕ ವಿಭಾಗಗಳನ್ನು ಕುರಿತಾದ ಸಾಂಸ್ಕೃತಿಕ ಅಧ್ಯಯನ ನಡೆದಿದೆ. ತರ್ದವಾಡಿ ಒಂದು ಅಧ್ಯಯನ, ನಾಗರಖಂಡ ಎಪ್ಪತ್ತು, ಬೆಳ್ವೊಲ ೩೦೦, ಕೋಗಳಿನಾಡು ೩೦ ಇತ್ಯಾದಿ ಭೌಗೋಳಿಕ ಪ್ರದೇಶಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನವು ಶಾಸನಗಳನ್ನಾಧರಿಸಿ ನಡೆದಿದೆ.

ಶಾಸನಗಳು ಜನಜೀವನದಿಂದ ಮೂಡಿ ಬಂದಿವೆಯಾದ್ದರಿಂದ ಅನೇಕ ಸಾಮಾಜಿಕ ಅಂಶಗಳು ಶಾಸನಗಳಲ್ಲಿ ದೊರೆಯುತ್ತವೆ. ಸಾಂಸ್ಕೃತಿಕ ಅಧ್ಯಯನ ದಿಂದಾಗಿಯೇ ಶಾಸನಗಳು ಇಂದು ಗಣ್ಯಶಿಸ್ತಿನ ವಿಷಯವಾಗಿವೆ. ಸಾಂಸ್ಕೃತಿಕ ಅಧ್ಯಯನ ಇಂದು ಸ್ನಾತಕೋತ್ತರ ಪದವಿಗಳ ತರಗತಿಗಳಲ್ಲಿ ಪಠ್ಯಕ್ರಮದಲ್ಲಿ ಸೇರಿದೆ. ಇದು ಆ ಕ್ಷೇತ್ರದ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅಧ್ಯಯನದಲ್ಲಿ ತಾರ್ಕಿಕತೆ, ಪ್ರಾಮಾಣಿಕತೆ, ಅಧ್ಯಯನದ ಶಿಸ್ತು, ಅರ್ಥೈಸುವಲ್ಲಿನ ವಾಸ್ತವಿಕ ಹಾಗೂ ವೈಜ್ಞಾನಿಕ ಮನೋಭಾವ, ಕಾಲಾನುಕ್ರಮದಲ್ಲಿ ಬದಲಾದ ಮೌಲ್ಯಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವ ಬಗೆ ಇವು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.