ಶಾಸನಗಳಂತಹ ಮೂಲ ಆಕರಗಳನ್ನು ಆಧರಿಸಿ ನಡೆಸಿರುವ ಸಾಂಸ್ಕೃತಿಕ ಅಧ್ಯಯನದ ಚೌಕಟ್ಟಿನಲ್ಲಿ ರಚಿತವಾಗಿರುವ ಸಂಶೋಧಕರ ಕೃತಿಗಳು ಹಾಗೂ ಲೇಖನಗಳಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸಿರುವುದು ಕಂಡು ಬರುತ್ತದೆ. ಶಾಸನಗಳು ತಮ್ಮ ಆಂತರಿಕ ಪ್ರಮಾಣಗಳಿಂದ ಹೊರಡುವ ಮಾಹಿತಿಗಳ ಹಿನ್ನೆಲೆಯಲ್ಲಿ ಬಾಹ್ಯವಾತಾವರಣವೊಂದರ ಗ್ರಹಿಕೆಗೆ ಯಾವ ರೀತಿ ಅವಕಾಶ ಕಲ್ಪಿಸಿಕೊಡುತ್ತವೆಂಬ ನಿಲುವನ್ನು ಗುರುತಿಸಬಹುದಾಗಿದೆ.

ಬಿ.ಆರ್. ಗೋಪಾಲರ ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರು ಕೃತಿಯು ಸಂಪೂರ್ಣವಾಗಿ ಶಾಸನಗಳನ್ನಾಧರಿಸಿ ರಚಿತವಾಗಿದೆ. ಈ ಕೃತಿಯಲ್ಲಿ ಶ್ರೀರಾಮಾನುಜರು ಶೈವದೊರೆಗಳಾದ ಚೋಳರಸರ ಉಪಟಳವನ್ನು ತಡೆಯಲಾರದೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದರು ಎಂಬ ಸಾಂಪ್ರದಾಯಿಕ ನಂಬುಗೆಗಳಿಗಿಂತ ಭಿನ್ನವಾಗಿ ಇವರು ಕ್ರಿ.ಶ.೧೧೩೮ ರಿಂದ ೧೧೫೦ರವರೆಗೆ ಕರ್ನಾಟಕದಲ್ಲಿದ್ದರೆಂದು ತೋರಿಸಿದ್ದಾರೆ. ಶಾಸನಗಳು ಒದಗಿಸುವ ಮಾಹಿತಿಯ ಹಿನ್ನೆಲೆಯಲ್ಲಿ ಮೂಲತ: ಜೈನನಾದ ಬಿಟ್ಟಿದೇವನನ್ನು ವಿಷ್ಣುವರ್ಧನನಾಗಿ ಶ್ರೀವೈಷ್ಣವ ಧರ್ಮಕ್ಕೆ  ಮತಾಂತರ ಗೊಳಿಸಿದರು ಎಂಬುದು ಸಾಧಾರವಲ್ಲ. ಆದರೆ ಹೊಯ್ಸಳದೊರೆ ವಿಷ್ಣುವರ್ಧನನ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಬಹಳವಾಗಿದೆ ಎಂಬ ನಿಲುವನ್ನು ವ್ಯಕ್ತಪಡಿಸಿ ದ್ದಾರೆ. ಬೇಲೂರಿನ ಚೆನ್ನಕೇಶವ ದೇವಾಲಯದ ಸ್ಥಾಪನೆಯಲ್ಲಿ ಅವರ ಪಾತ್ರವಿಲ್ಲ ದಿರುವುದನ್ನು, ಮೇಲುಕೋಟೆಗೆ ದೆಹಲಿಯಿಂದ ಶಿಲ್ಪ ಪಿಳ್ಳೈ ವಿಗ್ರಹವನ್ನು ತಂದುದು ಇವೆಲ್ಲವು ಸರಿಯಲ್ಲವೆಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಕೃತಿಯಲ್ಲಿ ಸಾಂಪ್ರದಾಯಿಕ ನಂಬುಗೆಗಳಲ್ಲಿಯ ದೋಷಗಳನ್ನು ಶಾಸನಗಳಂತಹ  ಮೂಲ ದಾಖಲೆಗಳೊಂದಿಗೆ ಹೋಲಿಸಿ ನೋಡಿ ಆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ ಗಳನ್ನು ತಾಳ್ಮೆಯಿಂದ ಪರಿಶೀಲಿಸಿ ವಸ್ತುಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಸಂಪ್ರದಾಯ ನಿಷ್ಠರಿಂದ ಬಹಿಷ್ಕಾರದ ಅವಕೃಪೆಗೆ ಅವರು ಒಳಗಾಗಬೇಕಾದ ಸ್ಥಿತಿಯು ಒದಗಿತ್ತು.

ಎಸ್.ಶೆಟ್ಟರ್ ಅವರ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.೩ರಲ್ಲಿಯ ಕ್ರಿ.ಶ.೧೧೫೦ ರಿಂದ ೧೩೫೦ರವರೆಗಿನ ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಧಾರ್ಮಿಕ ಸಾಮಾಜಿಕ ಜೀವನ ಎಂಬ ಲೇಖನದಲ್ಲಿ ಮೂಲಗಳ ಆಂತರಿಕ ಪ್ರಮಾಣಗಳಿಂದ ಹೊರಡುವ ಸಂಗತಿಗಳನ್ನು ವಿಶ್ಲೇಷಿಸುವುದರ ಮೂಲಕ ಸಾಂಸ್ಕೃತಿಕ ಚರಿತ್ರೆಯ ಅಂಶಗಳನ್ನು ಗುರುತಿಸಿರುವುದನ್ನು ಗಮನಿಸಬಹುದು. ಎಸ್.ಶೆಟ್ಟರ್ ಅವರು ಜೈನಧರ್ಮದ ಅವನತಿಯನ್ನು ಶಾಸನಗಳ ಮೂಲಕ ತಿಳಿದುಕೊಂಡಿದ್ದು ಹೀಗೆ. ಕ್ರಿ.ಶ.೧೨೨೦-೧೩೩೬ರವರೆಗೆ ಸಿಗುವ ಎಲ್ಲಾ ಹೊಯ್ಸಳ ಶಾಸನಗಳನ್ನು ಅಭ್ಯಾಸ ಮಾಡಿದಾಗ ನಮಗೆ ದೊರೆತ ಚಿತ್ರ ಹೀಗಿದೆ. ಇಮ್ಮಡಿ ನಾರಸಿಂಹನು ಸ್ವತಃ ಯಾವ ಬಸದಿಯನ್ನು ಕಟ್ಟಿಸಲಿಲ್ಲ. ದೋರ ಸಮುದ್ರದ ವಿಜಯ ಪಾರ್ಶ್ವ ಬಸದಿಗೆ ಈ ಅರಸನು ದತ್ತಿ ಕೊಟ್ಟನೇನೋ ನಿಜ. ಆದರೆ ಈ ಬಸದಿಯು ೧೨೫೪ರಲ್ಲಿ ಪುನಃ ದುಸ್ಥಿತಿಗಳೊಳಗಾಗಿ ಅಂದಿನ ಅರಸನಾದ ಸೋಮೇಶ್ವರನಿಂದ ಜೀರ್ಣೋ ದ್ಧಾರಗೊಂಡಿತು. ಅಂದರೆ ಎಲ್ಲಿಯೂ ಹೊಯ್ಸಳ ರಾಜರು ಹೊಸ ದೇವಾಲಯ ಗಳನ್ನು ಕಟ್ಟಿಸಿದ್ದು ಕಾಣಿಸುವುದಿಲ್ಲ. ಹಳೆಯ ಬಸದಿಗಳಿಗೆ ದತ್ತಿ ಅಥವಾ ಜೀರ್ಣೋದ್ಧಾರಗಳ ಮಾಡಿಸಿದ ಉಲ್ಲೇಖಗಳು ಕಂಡುಬರುತ್ತವೆ. ವೈಷ್ಣವ ದೇವಾಲಯ ಗಳ ಹೊಸ ನಿರ್ಮಾಣ ಈ ಕಾಲದಲ್ಲಿ ಹೆಚ್ಚು ಆಗಿದೆ. ಈ ವಿವರದಲ್ಲಿ ಘಟನೆಗಳೇ ಇತಿಹಾಸವೆಂದು ತಿಳಿದರೆ ದತ್ತಿ ಮತ್ತು ಜೀರ್ಣೋದ್ಧಾರಗಳು ರಾಜನು ಮಾಡಿದ ಸಾಮಾಜಿಕ ಕಾರ್ಯಗಳಾಗಿ ಪರಿವರ್ತನೆ ಹೊಂದುತ್ತವೆ. ಆದರೆ ಮೂಲತಃ ಈ ಸಂಗತಿಗಳು ಅಂದರೆ ಜಿನಾಲಯಗಳಿಗೆ ಸಂಬಂಧಿಸಿದ ಆ ವಿವರಗಳು ಅಂದು ಹಾಳು ಬೀಳುತ್ತಿದ್ದ ಜಿನಾಲಯಗಳ ಚಿತ್ರಣ ತಿಳಿಸುತ್ತವೆ ಎಂದು ನಿರೂಪಿಸುತ್ತ ಕ್ರಿ.ಶ.೧೧೫೦ಕ್ಕಿಂತ ಹಿಂದೆ ಜೈನರಿಗಿದ್ದ ಪ್ರತಿಷ್ಠಿತಸ್ಥಾನ ಈ ಅವಧಿಯಲ್ಲಿ ಕಳೆದುಕೊಂಡಿದ್ದರೂ ರಾಜ್ಯದ ಹಲವು ಹಿರಿಯ ಅಧಿಕಾರಿಗಳ ವಣಿಕರ ಹಾಗೂ ಸಣ್ಣ ಪುಟ್ಟ ಅಧಿಕಾರಿಗಳ ಪ್ರೋತ್ಸಾಹದಿಂದ ಮುಂದುವರಿಯಲು ಪ್ರಯತ್ನಿಸುತ್ತಿತ್ತು ಎಂಬ ಅಂಶವನ್ನು ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಮಧ್ಯಕಾಲೀನ ಧಾರ್ಮಿಕ ಪರಿಸರದಲ್ಲಿ ಜೈನಧರ್ಮದ ಸ್ಥಿತಿಗತಿಯ ಚಿತ್ರಣ ಯಾವ ರೀತಿ ಶಾಸನಗಳ ಆಧಾರಗಳ ಮೂಲಕ ಗ್ರಹಿತವಾಗಿದೆ ಎಂಬುದನ್ನು ನೋಡಬಹುದಾಗಿದೆ. ಜೈನ ಧರ್ಮದ ಶಾಖೆಯಾದ ಯಾಪನೀಯ ಪಂಥದ ಬಗೆಗೆ ಅಧಿಕೃತವಾಗಿ ಮಾಹಿತಿಗಳೇ ಇಲ್ಲವೆನ್ನುವ ಪರಿಸ್ಥಿತಿಯಲ್ಲಿ ಹಂಪನಾ ಅವರು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ದೊರಕುವ ಈ ಪಂಥಕ್ಕೆ ಸಂಬಂಧಿಸಿದ ಶಾಸನಗಳ ಹಿನ್ನೆಲೆಯಲ್ಲಿ ಕನ್ನಡ ನಾಡಿನಲ್ಲಿ ಆ ಪಂಥದ ಅಸ್ತಿತ್ವ ಹಾಗೂ ಯಾಪನೀಯ ಪಂಥದ ಒಟ್ಟು ಚಿತ್ರಣವನ್ನು ಗುರುತಿಸಿದ್ದು ಬಹು ಮುಖ್ಯವಾದ ಸಂಗತಿ. ಶಾಸನಗಳಲ್ಲಿ ವ್ಯಕ್ತಗೊಂಡಿರುವ ಸಂಗತಿಗಳನ್ನು ಜನಸಮುದಾಯಗಳ ಸಾಂಸ್ಕೃತಿಕ ಲಕ್ಷಣಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಈ ವಿಧಾನದಲ್ಲಿ ಮೂಲ ಆಕರ ಗಳೊಂದಿಗೆ ಅಲಕ್ಷಿಸಲ್ಪಟ್ಟ ಹಾಗೂ ಅನುಷಂಗಿಕ ಆಕರಗಳು ಹಲವೆಡೆ ಬಳಸಲ್ಪಡುತ್ತವೆ. ಮಾಹಿತಿ ಸಂಗ್ರಹಣೆ, ವರ್ಗೀಕರಣ ವಿಶ್ಲೇಷಣೆ, ನಿರೂಪಣೆ ಮೊದಲಾದ ಸಂಶೋಧನಾ ಂಗತಿಗಳ ಅಳವಡಿಕೆ ಪ್ರಮುಖವಾಗಿರುತ್ತದೆ. ವಿವಿಧ ಚಾರಿತ್ರಿಕ ಕಾಲಘಟ್ಟಗಳಂತೆ ಸಾಂಸ್ಕೃತಿಕ ವಿವರಗಳು ಅನೇಕ ಕಾಲ-ಮಿತಿಯ ವ್ಯಾಪ್ತಿಗೊಳಪಟ್ಟಿರು ತ್ತವೆ. ಶಾಸನಗಳು ನೀಡುವ ಮಾಹಿತಿಯು ಸಾಂಸ್ಕೃತಿಕ ಚರಿತ್ರೆಯನ್ನು ಮರುಜೋಡಣೆ ಮಾಡುವ ಕಾರ್ಯವಾಗಿದೆ. ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ತೊಡಗುವವರಿಗೆ ಆಯಾ ಭಾಷೆಯ ಸಾಹಿತ್ಯದ ಪರಿಚಯವಿರಬೇಕು. ಸಾಂಸ್ಕೃತಿಕ ಇತಿಹಾಸದ ಸಂಶೋಧಕರಿಗೆ ಸಮಕಾಲೀನ ಸಾಹಿತ್ಯ ಕೃತಿಗಳು ನೀಡುವ ಮಾಹಿತಿಗಳು ಉಪಯುಕ್ತ ವಾಗಿರುತ್ತವೆ.

ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಖ್ಯಾನಿಷ್ಠ ಸಂಶೋಧನಾ ವಿಧಾನವು ಬಹಳ ಪ್ರಮುಖ ಪಾತ್ರವಹಿಸಿದೆ. ಸಂಖ್ಯಾನಿಷ್ಠ ಶೋಧನೆ ಎನ್ನುವುದು ಎಂ.ಎಂ. ಕಲಬುರ್ಗಿ ಅವರ ಮಾತಿನಲ್ಲಿ ಹೇಳುವುದಾದರೆ ಅಧ್ಯಯನಕ್ಕೆ ಆಯ್ದುಕೊಂಡ ಘಟಕವೊಂದರ ಪ್ರಸಾರದ ವಿರಳತೆ ಸಾಂದ್ರತೆ ಐತಿಹಾಸಿಕ ಬೆಳವಣಿಗೆಯ ವಿರಳತೆ ಸಾಂದ್ರತೆಗಳನ್ನು ನಿರ್ದಿಷ್ಟವಾಗಿ ತಿಳಿದುಕೊಳ್ಳುವುದು, ಸ್ವರೂಪದ ಸ್ಥಿರತೆ-ಬದಲಾವಣೆ ಗಳನ್ನು ಗುರುತಿಸುವುದು ಮತ್ತು ಅವುಗಳ ಹಿಂದಿರುವ ಕಾರಣಗಳನ್ನು ಕಂಡು ಹಿಡಿಯುವುದಾಗಿದೆ. ಶಾಸನಗಳ ಕುರಿತ ಅಧ್ಯಯನದಲ್ಲಿ ಈ ವಿಧಾನ ಕೆಲವೊಮ್ಮೆ ವೈಜ್ಞಾನಿಕ ರೀತಿಯ ಫಲಿತಾಂಶವನ್ನು ನೀಡುತ್ತದೆ.

ಉದಾ: ಚನ್ನಕ್ಕ ಪಾವಟೆ ಅವರ ಶಾಸನಗಳಲ್ಲಿ ಕರ್ನಾಟಕ ಸ್ತ್ರೀ ಸಮಾಜ ಕೃತಿಯಲ್ಲಿ ಸೌರಪಂಥ ಸಂಪ್ರದಾಯದ ನೆಲೆಯನ್ನು ಸಂಖ್ಯಾನಿಷ್ಠ ಸಂಶೋಧನೆಯ ಮೂಲಕ ಕಂಡುಕೊಂಡಿರುವುದನ್ನು ಗುರುತಿಸಬಹುದಾಗಿದೆ. ಪ್ರಾಚೀನ ತಾಂತ್ರಿಕ ಪಂಥಗಳಲ್ಲಿ ಸೌರವು ಒಂದು. ಸೂರ್ಯ ವಿಗ್ರಹಗಳೂ ಸೂರ್ಯಗ್ರಹಣ ಸಂದರ್ಭದಲ್ಲಿ ಚಿತಾಪ್ರವೇಶ ಮಾಡಿದ ಉಲ್ಲೇಖವುಳ್ಳ ಶಾಸನಗಳು ಅಲ್ಲಲ್ಲಿ ಸಿಗುವುದರಿಂದ ಈ ಪಂಥ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದಿತೆಂಬುದು ತಿಳಿದು ಬರುತ್ತದೆ. ಅಂದರೆ ಯಾವ ಯಾವ ಪ್ರದೇಶದಲ್ಲಿ? ಯಾವ ಯಾವ ಶತಮಾನಗಳಲ್ಲಿ? ಎಷ್ಟು ಸಂಖ್ಯೆ ಯಲ್ಲಿ ಸೂರ್ಯ ವಿಗ್ರಹಗಳಿವೆ? ಎಷ್ಟು ಚಿತಾಪ್ರವೇಶ ಘಟನೆಗಳು ಜರುಗಿವೆ? ಎಂಬ ಕೋಷ್ಟಕ ಸಿದ್ಧಪಡಿಸಿ ಅದರಿಂದ ಈ ಉಪಾಸನೆಯ ಭೌಗೋಲಿಕ ಪ್ರಸಾರ, ಐತಿಹಾಸಿಕ ಬೆಳವಣಿಗೆಯನ್ನು ಗುರುತಿಸುವುದು, ರೂಪ-ವ್ಯತ್ಯಾಸವನ್ನು ಕಂಡು ಹಿಡಿಯುವುದು, ಅದರ ಹಿಂದಿರುವ ಕಾರಣಗಳನ್ನು ಶೋಧಿಸುವುದು ಇತ್ಯಾದಿ ವಿವರಗಳನ್ನು ಸಂಖ್ಯಾನಿಷ್ಠ ಸಂಶೋಧನ ವಿಧಾನದ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

ಸೂರ್ಯಗ್ರಹಣ ಸಮಯದ ಚಿತಾಪ್ರವೇಶವನ್ನು ಹಿನ್ನೆಲೆಯಾಗಿಟ್ಟು ಕೊಂಡು ಸಂಶೋಧನೆ ಕೈಗೊಂಡ ಸಂಶೋಧಕರು ಆ ವಿಷಯಕ್ಕೆ ಸಂಬಂಧಿಸಿದ ಒಟ್ಟು ೧೦ಶಾಸನಗಳಲ್ಲಿ ೫ಶಾಸನಗಳು ಹಾನಗಲ್ಲು ತಾಲೂಕಿನ ನೆರೆ ಹೊರೆಯಲ್ಲಿಯೇ ಸಿಗುವುದರಿಂದ ಈ ಪ್ರದೇಶದಲ್ಲಿಯೇ ಸೌರಪಂಥದ ಸಂಪ್ರದಾಯ ಸಾಂದ್ರ ವಾಗಿದ್ದಿತೆಂಬ ಅಂಶ ವ್ಯಕ್ತವಾಗುತ್ತದೆ. ಅದರಲ್ಲಿಯೂ ೧೨ನೇ ಶತಮಾನದಲ್ಲಿಯೇ ಈ ದಾಖಲೆಗಳು ಕಾಣಿಸಿಕೊಳ್ಳುವುದರಿಂದ ಈ ಕಾಲದಲ್ಲಿ ಈ ಆಚರಣೆ ಅಸ್ತಿತ್ವ ದಲ್ಲಿತ್ತೆಂಬ ಗ್ರಹಿಕೆಗೆ ಖಚಿತತೆ ಒದಗಿಸುತ್ತದೆ.

ಹಾಗೆಯೇ ಎಸ್. ಶೆಟ್ಟರ್‌ರವರೂ Memorial stones in south India memorial stone.ಕೃತಿಯಲ್ಲಿ ಸಂಖ್ಯಾ ನಿಷ್ಠ ಸಂಶೋಧನ ವಿಧಾನದ ಮೂಲಕ ಕನ್ನಡ ನಾಡಿನ ನಿಷದಿಗಲ್ಲು, ವೀರಗಲ್ಲು, ಮಾಸ್ತಿಗಲ್ಲು, ಮೊದಲಾದ ಸ್ಮಾರಕ ಶಿಲೆಗಳ ಭೌಗೋಳಿಕ ಪ್ರಸರಣ, ಐತಿಹಾಸಿಕ ಬೆಳವಣಿಗೆಗಳನ್ನು ಅಂಕಿ ಅಂಶಗಳಿಂದ ಅರಿತು ಅಲ್ಲಿ ತೋರುವ ಸಂಖ್ಯಾ ವ್ಯತ್ಯಾಸದ ಹಿಂದಿರುವ ಕಾರಣಗಳನ್ನು ಸಾಮಾಜಿಕ ಒತ್ತಡಗಳನ್ನು ಅಧ್ಯಯನ ಮಾಡಿರುವುದನ್ನು ಗುರುತಿಸಬಹುದಾಗಿದೆ. ಸಂಶೋಧನೆಯ ವಿವರವನ್ನು ಅವರ ಹೇಳಿಕೆಯಲ್ಲಿಯೇ ಉಲ್ಲೇಖಿಸುವುದಾದರೆ, ಕರ್ನಾಟಕದಲ್ಲಿ ಲಭ್ಯವಿರುವ ೨೬೫೦ ಲಿಖಿತ ಸ್ಮಾರಕ ಶಿಲೆಗಳಲ್ಲಿ ವೀರಗಲ್ಲು ೨೨೦೦, ನಿಷದಿಗಲ್ಲು ೩೦೦, ಸತಿಗಲ್ಲು ೧೫೦, ಉಳಿದವು ಸಿಡಿತಲೆ, ಗರುಡಗಲ್ಲು ಇತ್ಯಾದಿ. ಈ ಸ್ಮಾರಕ ಶಿಲೆಗಳು ಕದಂಬರ ಕಾಲವಾದ ೫ನೇ ಶತಮಾನದಿಂದ ಹಿಡಿದು ಒಡೆಯರ ಕಾಲವಾದ ೧೯ನೇ ಶತಮಾನದವರೆವಿಗೂ ಬೆಳೆದು ಬಂದಿವೆ. ಹತ್ತರಿಂದ ೧೩ನೇ ಶತಮಾನದಲ್ಲಿ ಈ ಸಂಖ್ಯೆ ೧೧೦೦ನ್ನು ತಲುಪಿದ್ದು ಇವುಗಳಲ್ಲಿ ಹೊಯ್ಸಳರಿಗೆ ಸಂಬಂಧಿಸಿದವು ೩೭೫. ಬಾದಾಮಿ ಚಾಲುಕ್ಯರ ಕಾಲದಲ್ಲಿ ಒಂದೇ ಒಂದು ಲಿಖಿತ ಸ್ಮಾರಕ ಶಿಲೆ ಸಿಕ್ಕಿದೆ. ಕದಂಬ ರಾಷ್ಟ್ರಕೂಟ, ಗಂಗ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕ್ರಮವಾಗಿ ೯೫.೩೫.೧೫೦ಮತ್ತು ೧೨೫ ಸಿಕ್ಕಿವೆ. ಈ ಲಿಖಿತ ಸ್ಮಾರಕ ಶಿಲೆಗಳನ್ನು ಪ್ರಾದೇಶಿಕ ದೃಷ್ಟಿಯಿಂದ ನೋಡಿದರೆ ಕುತೂಹಲಕಾರಿ ಅಂಶಗಳು ವ್ಯಕ್ತವಾಗುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿ ೭೫೦, ಹಾಸನ ಜಿಲ್ಲೆಯಲ್ಲಿ ೪೭೦, ಮಂಡ್ಯ ಮೈಸೂರು ಜಿಲ್ಲೆ ಸೇರಿ ೩೨೫, ತುಮಕೂರು ಜಿಲ್ಲೆಯಲ್ಲಿ ೨೪೦, ಧಾರವಾಡ ಜಿಲ್ಲೆಯಲ್ಲಿ ೧೮೦, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫೦ ಸಿಗುತ್ತವೆ. ಇಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೆಚ್ಚು ಸಂಖ್ಯೆಯ ಸ್ಮಾರಕಗಳಿರುವುದಕ್ಕೆ ಈ ಪ್ರದೇಶ ಕದಂಬ, ಗಂಗ, ಚಾಲುಕ್ಯ-ಹೊಯ್ಸಳ, ಹೊಯ್ಸಳ-ಕಲಚೂರಿ, ಹೊಯ್ಸಳ-ಸೇವುಣರ ಸೀಮಾ ಪ್ರದೇಶವಾಗಿದ್ದು ಇಲ್ಲಿ ಸಹಜವಾಗಿಯೇ ಯುದ್ಧಗಳು ಪದೇ ಪದೇ ಸಂಭವಿಸಿರಬಹುದು. ಈ ವಿವರಗಳು ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಸಂಖ್ಯಾನಿಷ್ಠ ಸಂಶೋಧನೆಯ ಸ್ವರೂಪ ಮತ್ತು ಮಹತ್ವವನ್ನು ತೋರಿಸುತ್ತದೆ.

ಕವಿರಾಜ ಮಾರ್ಗದಲ್ಲಿ ವ್ಯಕ್ತವಾಗುವ ಆ ಕಾಲದ ಕನ್ನಡ ನಾಡಿನ ಭೌಗೋಳಿಕ ವಿಸ್ತಾರತೆಯನ್ನು ಕುರಿತಾದ ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡ ದೊಳ್ ಎಂಬ ಹೇಳಿಕೆಯಲ್ಲಿಯ ಪ್ರಾಚೀನ ಕರ್ನಾಟಕದ ಭೌಗೋಲಿಕ ವಿಸ್ತಾರದ ವ್ಯಾಪಕತ್ವವನ್ನು ಮಹಾರಾಷ್ಟ್ರದ ಕನ್ನಡ ಶಾಸನಗಳು ಪುಷ್ಠೀಕರಿಸುತ್ತವೆ. ಈ ವಿವರವನ್ನು ಮಹಾರಾಷ್ಟ್ರದಲ್ಲಿ ದೊರೆಯುವ ಕನ್ನಡ ಶಾಸನಗಳನ್ನು ಭೌಗೋಳಿಕ ವಾಗಿ ಹಾಗೂ ಐತಿಹಾಸಿಕವಾಗಿ ಸಮೀಕ್ಷೆ ಮಾಡಿ ಸಂಖ್ಯಾನಿಷ್ಠ ಸಂಶೋಧನಾ ವಿಧಾನದ ಮೂಲಕ ಎಂ.ಎಂ. ಕಲಬುರ್ಗಿಯವರು ಗುರುತಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ನಾಡಿನಲ್ಲಿ ದೊರೆತಂತೆ ಹೆಚ್ಚಿನ ಸಂಖ್ಯೆಯ ಶಾಸನಗಳು ದೊರೆತಿಲ್ಲ. ಕೇವಲ ೧೦೦೦ ಶಾಸನಗಳು ದೊರೆತಿವೆ. ಇವುಗಳಲ್ಲಿ ಪ್ರಾಚೀನ ಶಾಸನಗಳೆಲ್ಲ ಸಂಸ್ಕೃತ ಭಾಷೆಯ ತಾಮ್ರಪಟಗಳು ನಂತರದವು ಕನ್ನಡ ಭಾಷೆಯ ಶಿಲಾಶಾಸನಗಳು. ಒಟ್ಟು ೧ ಸಾವಿರ ಶಾಸನಗಳಲ್ಲಿ ಪ್ರಾಕೃತ ೩೦೦, ಸಂಸ್ಕೃತ ೩೦೦, ಕನ್ನಡ ೩೦೦, ಮರಾಠಿ ಭಾಷೆಯವು ೧೦೦, ಪ್ರಾಕೃತ ಶಾಸನಗಳಾದರೊ ಅಗ್ರಹಾರದ ದತ್ತಿ ದಾಖಲೆಗಳು. ಕನ್ನಡ ಭಾಷೆಯ ಶಾಸನಗಳು ಮಾತ್ರ ದೇವಾಲಯದ ದತ್ತಿ ದಾಖಲೆಗಳಾಗಿದ್ದರೂ ಸಾಹಿತ್ಯಾತ್ಮಕವಾಗಿ ಕೂಡಿವೆ. ಈ ಕನ್ನಡ ಶಾಸನಗಳು ಕರ್ನಾಟಕದ ಹೊರೆಗೆ ಸುತ್ತಲೂ ಅಂಟಿಕೊಂಡಿರುವ ಕೊಲ್ಲಾಪುರ, ಸಾಂಗಲಿ, ನಾಂದೇಡ ಸೊಲ್ಲಾಪುರ, ಉಸ್ಮನಾಬಾದ್ ಜಿಲ್ಲೆಗಳಲ್ಲಿ ದಟ್ಟವಾಗಿ ಹರಡಿದ್ದು ಮರಾಠಿ ಭಾಷೆಯ ಶಾಸನಗಳು ಅಲ್ಲಲ್ಲಿ ವಿರಳವಾಗಿ ಮಾತ್ರ ಕಂಡು ಬರುತ್ತವೆ. ಇದರಿಂದಾಗಿ ಈ ಜಿಲ್ಲೆಗಳ ಪ್ರದೇಶ ಮೂಲತಃ ಕನ್ನಡವೆಂದು ಸ್ಪಷ್ಟವಾಗುತ್ತದೆ. ಕನ್ನಡ ಭಾಷೆಯ ಶಾಸನಗಳು ಈ ಅಂಶವನ್ನು ಪುಷ್ಠೀಕರಿಸುತ್ತವೆ. ಈ ವಿಧಾನವು ಮೌಲ್ಯಯುತವಾಗಿದೆ. ಈ ಸಂಶೋಧನೆಯ ವಿಧಾನದಿಂದ ಹೊರಡುವ ನಿಲುವುಗಳಿಗೆ ಖಚಿತತೆ ಇದೆ.

ಒಂದು ಶಾಸನದಲ್ಲಿ ವ್ಯಕ್ತವಾಗುವ ಸಂಗತಿಯು ಸಂಧಿಗ್ಧತೆಯಿಂದ ಕೂಡಿದ್ದರೆ ಆ ಪದದ ಅರ್ಥ ಸ್ಪಷ್ಟತೆಗಾಗಿ ಬೇರೆ ಶಾಸನಗಳಲ್ಲಿಯ ಮಾಹಿತಿಗಳನ್ನು ಆಧರಿಸಿ ಖಚಿತವಾಗಿ ಗ್ರಹಿಸಲು ಪ್ರಯತ್ನಿಸಿರುವುದಕ್ಕೆ ನಿದರ್ಶನವಾಗಿ ಕಪ್ಪೆ ಅರಭಟನ ಶಾಸನವನ್ನು ಉದಾಹರಿಸಬಹುದಾಗಿದೆ.

ಪ್ರಾಚೀನ ಕನ್ನಡ ಸಂಸ್ಕೃತಿಯ ಒಂದಂಶವನ್ನು ಶಾಸನ ರೂಪದಲ್ಲಿ ಸಾಮಾನ್ಯ ಜನತೆಗೆ ಮನದಟ್ಟು ಮಾಡಿ ಕೊಡುವ ಬಾದಾಮಿ ಶಾಸನದಲ್ಲಿ ಬರುವ ಕಪ್ಪೆ ಅರಭಟ ಎನ್ನುವ ವೀರನ ಹೆಸರಿನ ಹಿಂದೆ ಇರುವ ಕಪ್ಪೆ ಎಂಬುದು ಏನನ್ನು ಸೂಚಿಸುತ್ತದೆಂಬುದು.

ಕ್ರಿ.ಶ. ೧೧೫೬ರ ಮಲ್ಲಾಪುರ ಶಾಸನದಲ್ಲಿ ಬರುವ ಸೇನಭೋವ ಕಪ್ಪೆಯರ ಚಾವುಣಯ್ಯನ ಸ್ವಹಸ್ತ ಲಿಖಿತ ಎಂಬ ವಾಕ್ಯದ ಹಿನ್ನೆಲೆಯಲ್ಲಿ ನೋಡಿದರೆ ಕಪ್ಪೆ ಅರಭಟ ಹೆಸರಿನಲ್ಲಿಯ ಕಪ್ಪೆ ಎಂಬುದು ಮನೆತನದ ಅಥವಾ ವರ್ಗವನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಕಪ್ಪೆ ಎಂಬುದು ಮನೆತನದ ಹೆಸರಾಗಿದ್ದು ಅರಭಟ ಎಂಬ ವ್ಯಕ್ತಿಯು ಈ ಕಪ್ಪೆ ಮನೆತನಕ್ಕೆ ಸೇರಿದ ಒಬ್ಬ ಭಟ್ಟನೋ ಅಥವಾ ಭಟನೋ ಆಗಿರಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಈ ಶಾಸನದಲ್ಲಿಯೇ ಬರುವ ಮಾಧುರ್ಯಂಗೆ ಮಾಧುರ್ಯನ್ ಎಂಬ ವಾಕ್ಯದಲ್ಲಿಯ ಮಾಧುರ್ಯನ್ ಶಬ್ದದ ಅರ್ಥ ಮಧುರತೆಯ ಗುಣವಾಗಿ ಉಳ್ಳವನು ಎಂದು ಪರಿಭಾಷಿಸುವುದು ಎಷ್ಟರಮಟ್ಟಿಗೆ ಸರಿ. ಮಧುರ ಗುಣವಿರುವವನು ಮಾಧುರ್ಯನ್ ಅಲ್ಲ ಮಧುರನ್ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಈ ಅರ್ಥ ಕಪ್ಪೆ ಅರಭಟನ ವೀರತನವನ್ನು ಪ್ರತಿಪಾದಿಸುತ್ತಿರುವ ಸಂದರ್ಭದಲ್ಲಿ ಸರಿಹೊಂದಲಾರದು. ಈ ನಿಟ್ಟಿನಲ್ಲಿ ಮಾಧುರ್ಯನ್ ಶಬ್ದವನ್ನು ಅರ್ಥೈಸಲು ಬೇರೆಬೇರೆ ಆಕರಗಳ ನೆರವನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಟಿ.ವಿ.ವೆಂಕಟಚಲಶಾಸ್ತ್ರಿ ಅವರು ಅನುಸರಿಸಿರುವ ವಿಧಾನವನ್ನು ಇಲ್ಲಿ ಪ್ರಸ್ತಾಪಿಸಬಹುದು.

ಮಹಾ+ದುರ್ಯನ್> ಮಾಧುರ್ಯನ್ ಇವೆರಡು ಪದಗಳು ಪರಿಚಿತ ಸಂಸ್ಕೃತ ಪದಗಳು. ಈ ಶಾಸನದಲ್ಲಿ ಬಳಕೆಯಾಗಿರುವ ಮಾಧುರ್ಯನ್ ಪದವು ಕನ್ನಡದ ಜಾಯಮಾನವನ್ನು ಅನುಸರಿಸಿ ಒಂದು ಸಂಸ್ಕೃತ ಸಮಾಸ ಪದವಾಗಿದೆ. ಉದಾ:ಮಹಾ+ದೇವಂ>ಮಾದೇವ ಆದ ಹಾಗೆ. ದುರ್ಯ ಶಬ್ದಕ್ಕೆ ಅರ್ಥ ಮುಖ್ಯವಾದ ಕಾರ್ಯಗಳನ್ನು ವಹಿಸಿಕೊಳ್ಳಲು ಸಮರ್ಥನಾದವನು. ಮುಂಚೂಣಿಯಲ್ಲಿರತಕ್ಕವನು, ಅಗ್ರಗಣ್ಯ ನಾಯಕ ಇತ್ಯಾದಿ ಅರ್ಥಗಳಿವೆ. ಇವುಗಳಲ್ಲಿ ಯಾವುದಾದರೊಂದು ಅರ್ಥವನ್ನು ಕಪ್ಪೆ ಅರಭಟನಿಗೆ ಅರ್ಥೈಸಿದರೆ, ಈತನು ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನುಳ್ಳ ಅಧಿಕನು ಅಂತಲೋ ಪ್ರಮುಖರ ನಡುವೆ ತಾನೂ ಪ್ರಮುಖ ಎಂದು ಅರ್ಥ್ಯೆಸಬಹುದು.

ಶಾಸನಗಳನ್ನು ಕುರಿತ ಸಂಶೋಧನಾ ಅಧ್ಯಯನ ವಿಧಾನದ ಪ್ರಾರಂಭಿಕ ಘಟ್ಟದಲ್ಲಿ ಶಾಸನಗಳಂತಹ ಆಕರಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಚರಿತ್ರೆಯನ್ನು ಭಾಗಶಃ ಅಥವಾ ಬಿಡಿಯಾಗಿ ಕಟ್ಟುವ ಘಟನಾ ಶೋಧನಿಷ್ಠ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದ್ದರು.

ಉದಾ: ಕ್ರಿ.ಶ.೧೩೬೮ರ ಬುಕ್ಕರಾಯನ ಶ್ರವಣಬೆಳಗೊಳದ ಶಾಸನವನ್ನು ಶೋಧಿಸಿದ ಬಿ.ಎಲ್.ರೈಸ್ ಮತ್ತು ಆರ್.ನರಸಿಂಹಾಚಾರ್ಯರು ಆ ಶಾಸನದಲ್ಲಿ ವ್ಯಕ್ತವಾಗಿರುವ ಮಾಹಿತಿಯನ್ನು ಧರ್ಮಸಮನ್ವಯದ ದ್ಯೋತಕವೆಂಬ ರೀತಿಯಲ್ಲಿ ಗ್ರಹಿಸಿದ್ದರು. ಮತೀಯ ಒಪ್ಪಂದದ ಹಿಂದೆ ಮತೀಯ ಕಲಹ ಇದೆ ಎಂಬ ಅಂಶವನ್ನು ಒತ್ತುಕೊಟ್ಟು ಹೇಳಿರಲಿಲ್ಲ. ಇದು ಧರ್ಮ ಸಮನ್ವಯದ ಶಾಸನವೆಂಬಂತೆ ತೋರಿದ್ದರೂ ಧರ್ಮ ಕಲಹದ ಶಾಸನವಾಗಿಯೂ ಕಂಡುಬರುತ್ತದೆಂಬ ಘಟನೆಯ ಇನ್ನೊಂದು ಮುಖವನ್ನು ಶೋಧಿಸಿ ವ್ಯಕ್ತಪಡಿಸಿದ್ದು ನಂತರದ ಕಾಲದಲ್ಲಿ, ೧೪ನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥಮಾಡಿ ಕೊಂಡ ದೊರೆ ಬುಕ್ಕರಾಯನು ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ ಎರಡೂ ಪಂಗಡಗಳ ಮಧ್ಯೆ ವಿರಸ ಹೆಚ್ಚಾಗದ ರೀತಿಯಲ್ಲಿ ತೀರ್ಪನ್ನು ನೀಡಿದ. ಬುಕ್ಕನ ತೀರ್ಪು ಜೈನ ಮತ್ತು ಶ್ರೀವೈಷ್ಣವ ಮತಗಳ ನಡುವಿನ ಘರ್ಷಣೆಯ ತೀವ್ರತೆಯನ್ನು ಕಡಿಮೆ ಮಾಡಿತೇ ಹೊರತು ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದವಾಗಿದೆ. ಈ ಶಾಸನದಲ್ಲಿಯ ವೈಷ್ಣವ ಮತ್ತು ಜೈನಧರ್ಮಗಳ ನಡುವಿನ ಈ ತಿಕ್ಕಾಟದಲ್ಲಿ ವೈಷ್ಣವ ಧರ್ಮದ ಆಕ್ರಮಣ ಶೀಲತೆಯು ಎದ್ದು ಕಾಣುವುದನ್ನು ಗುರುತಿಸಬಹುದಾಗಿದೆ.