ಸಾಹಿತ್ಯದ ಅಧ್ಯಾಪಕರು ಶಾಸನಗಳ ಬಹುಮುಖ ಅಧ್ಯಯನದತ್ತ ತೊಡಗಿದ ಮೇಲೆ ಸಾಂಸ್ಕೃತಿಕ ವಿಷಯಗಳ ಅಧ್ಯಯನಕಷ್ಟೇ ಸೀಮಿತರಾಗದೆ ಸಾಹಿತ್ಯಕ ಅಧ್ಯಯನ, ಭಾಷಿಕ ಅಧ್ಯಯನ, ಛಂದಸ್ಸಿನ ಅಧ್ಯಯನದಲ್ಲಿಯೂ ಶಾಸನಗಳನ್ನು ಆಕರಗಳಾಗಿ ಬಳಸಿಕೊಳ್ಳಬಹುದು ಎಂಬುದನ್ನು ಕೆಲವೊಂದು ಅಧ್ಯಯನಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ಪಂಪಪೂರ್ವ ಯುಗದ ಸಾಹಿತ್ಯದ ಸ್ವರೂಪವನ್ನು ಗುರುತಿಸಲಿಕ್ಕೆ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕನ್ನಡ ಸಾಹಿತ್ಯದ ಪ್ರಥಮ ಘಟ್ಟದ ಅವಶೇಷಗಳು ಎಂದರೆ ಶಾಸನಗಳು. ಪಂಪಪೂರ್ವ ಯುಗದಲ್ಲಿ ಕಾವ್ಯಗುಣವುಳ್ಳ ಬಿಡಿ ಬಿಡಿ ಮುಕ್ತಕಗಳು, ಚಿತ್ರದುರ್ಗದ ತಮಟಕಲ್ಲಿನ ಶಾಸನ, ಶ್ರವಣಬೆಳ್ಗೊಳದ ನಿಷಧಿ ಶಾಸನಗಳಲ್ಲಿ ಕಂಡು ಬಂದಿರುವುದನ್ನು ಗುರುತಿಸಿದ್ದಾರೆ. ನಿಷಧಿ ಶಾಸನಗಳು ಕನ್ನಡ ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ಕರೆಯಲ್ಪಟ್ಟಿವೆ. ಹಾಗೆಯೇ ಸಾಹಿತ್ಯ ಕೃತಿಗಳ ರಚನೆಯ ಕಾಲ, ಕವಿಯ ಕಾಲ, ಜನ್ಮಸ್ಥಳ ಇತ್ಯಾದಿಗಳನ್ನು ಅರಿಯುವಲ್ಲಿ ಶಾಸನಗಳು ಎಷ್ಟರಮಟ್ಟಿಗೆ ನೆರವನ್ನು ನೀಡಿವೆ ಎಂಬುದನ್ನು ಎ.ವೆಂಕಟಸುಬ್ಬಯ್ಯನವರ ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ, ಕವಿಚರಿತೆಯ ಮೂರು ಸಂಪುಟಗಳು, ಗೋವಿಂದ ಪೈ ಅವರ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳು, ಮೈಸೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳ ಸಾಂಸ್ಥಿಕ ಸಾಹಿತ್ಯ ಚರಿತ್ರೆಯ ಸಂಪುಟಗಳು ಹಾಗೂ ಕೆಲವು ನಿಯತಕಾಲಿಕೆಗಳಲ್ಲಿಯ ಲೇಖನಗಳಲ್ಲಿ ಗುರುತಿಸಲಾಗಿದೆ.

ಯಾವುದೇ ಶತಮಾನದ ಸಾಹಿತ್ಯದ ಅಧ್ಯಯನಕ್ಕೆ ಹಿನ್ನೆಲೆಯಾದ ಸಾಮಾಜಿಕ ಜೀವನವನ್ನು ಅರಿಯಲು ಶಾಸನಗಳ ನೆರವು ಅಗತ್ಯ ಎಂಬುದನ್ನು ಚಿದಾನಂದ ಮೂರ್ತಿ ಅವರ ಪಂಪಕವಿ ಹಾಗೂ ಮೌಲ್ಯಪ್ರಸಾರ ಇತ್ಯಾದಿ ಲೇಖನಗಳಲ್ಲಿ ಗುರುತಿಸಬಹುದು. ಹತ್ತನೇ ಶತಮಾನದ ಪಂಪ ರನ್ನರ ಕಾವ್ಯಗಳನ್ನು ಅರ್ಥೈಸಲು ಶಾಸನಗಳ ನೆರವು ಅಗತ್ಯ ಎಂಬುದನ್ನು ಗುರುತಿಸಲಾಗಿದೆ. ಕನ್ನಡ ಸಾಹಿತ್ಯದ ಇಬ್ಬರು ಕವಿಗಳಾದ ಪಂಪ ಹಾಗೂ ಬಸವಣ್ಣನವರಿಗೆ ಸಂಬಂಧಿಸಿದ ಹಾಗೆ ಜಿನವಲ್ಲಭನ ಕುರಿಕ್ಯಾಲ ಶಾಸನ ಹಾಗೂ ಅರ್ಜುನವಾಡ ಶಿಲಾಶಾಸನಗಳನ್ನು ಕುರಿತ ಸಂಶೋಧನಾ ಲೇಖನಗಳು ಮಹತ್ವದವುಗಳಾಗಿವೆ. ಶಾಸನಗಳು ಸಾಹಿತ್ಯದ ದೃಷ್ಟಿಯಿಂದಲೂ ಬಹಳ ಗಮನಾರ್ಹ ಎಂಬುದನ್ನು ಜನಸಾಮಾನ್ಯರಲ್ಲಿ ಮನಗಾಣಿಸು ವಂತಹ ಪ್ರಯತ್ನಗಳು ನಡೆದಿವೆ. ೧೯೨೩ರ ಸುಮಾರಿಗೆಯೆ ಆರ್. ನರಸಿಂಹಾಚಾರ್ಯರು ಶಾಸನಗಳ ಕಾವ್ಯ ಸೌಂದರ್ಯವನ್ನು ಕಂಡುಕೊಂಡು ಅವುಗಳ ಸಂಗ್ರಹವನ್ನು ತರುವ ಪ್ರಯತ್ನವನ್ನು ಶಾಸನ ಪದ್ಯ ಮಂಜರಿ ಪುಸ್ತಕದ ಮೂಲಕ ಮಾಡಿದ್ದಾರೆ. ಶಾಸನ ಸಾಹಿತ್ಯ ಶೈಲಿಯ ಮತ್ತು ಸೊಬಗಿನ ರಸವನ್ನು ಸ್ವಲ್ಪಮಟ್ಟಿಗಾದರೂ ಆಸ್ವಾದನ ಮಾಡಲು ಇಲ್ಲಿ ಅವಕಾಶ ಕಲ್ಪಿತವಾಗಿದೆ. ಮೇವುಂಡಿ ಮಲ್ಲಾರಿ ಮತ್ತು ಎ.ಎಂ.ಅಣ್ಣಿಗೇರಿ ಅವರ ಶಾಸನ ಸಾಹಿತ್ಯ ಸಂಚಯ, ಆರ್.ಸಿ.ಹಿರೇಮಠ ಮತ್ತು ಎಂ.ಎಂ.ಕಲಬುರ್ಗಿ ಅವರ ಶಾಸನ ಸಂಪದ, ಎ.ಎಂ.ಅಣ್ಣಿಗೇರಿ ಮತ್ತು ಆರ್.ಶೇಷಶಾಸ್ತ್ರಿ ಅವರ ಶಾಸನ ಸಂಗ್ರಹಗಳು ಶಾಸನಗಳಲ್ಲಿ ಆಸಕ್ತಿಯುಳ್ಳ ಜನರ ಸಲುವಾಗಿ ರೂಪುಗೊಂಡಿದ್ದು, ಶಾಸನಗಳ ಹಿರಿಮೆಯನ್ನು ಪ್ರಾತಿನಿಧಿಕ ಶಾಸನಗಳ ಮೂಲಕ ಮನಗಾಣಲು ಪ್ರಯತ್ನಿಸಿದೆ.

ಕನ್ನಡ ಭಾಷೆಯ ಚರಿತ್ರೆಯನ್ನು ಅಧ್ಯಯನ ಮಾಡುವಲ್ಲಿ, ಅದರಲ್ಲೂ ಕನ್ನಡ ಸಾಹಿತ್ಯದ ಆರಂಭಕಾಲದಿಂದ ಪಂಪನವರೆಗೆ ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಅರಿಯುವಲ್ಲಿ ಶಾಸನಗಳ ನೆರವು ಅತ್ಯಗತ್ಯ ಎಂಬುದನ್ನು ಈವರೆವಿಗೂ ನಡೆದಿರುವ ಅಧ್ಯಯನದಿಂದ ತಿಳಿಯಬಹುದಾಗಿದೆ. ಕನ್ನಡ ಭಾಷಾ ಅವಸ್ಥಾ ಭೇದಗಳಲ್ಲಿ ಒಂದಾದ ಪೂರ್ವದ ಹಳಗನ್ನಡದ ಸ್ವರೂಪವನ್ನು ತಿಳಿಯಲು ಸಂಬಂಧಿಸಿದ ಪ್ರಯೋಗಗಳನ್ನು ಶಾಸನಗಳಲ್ಲಿಯೇ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಎ.ಎನ್.ನರಸಿಂಹಯ್ಯ, ಜಿಎಸ್.ಗಾಯಿ, ಕೆ.ಕುಶಾಲಪ್ಪ ಗೌಡ, ಎಂ.ಬಿ.ನೇಗಿನಹಾಳ ಅವರ ಅಧ್ಯಯನಗಳನ್ನು ಹೆಸರಿಸಬಹುದು.

ಛಂದಸ್ಸಿನ ಅಧ್ಯಯನದಲ್ಲಿಯೂ ಶಾಸನಗಳನ್ನು ಆಕರಗಳಾಗಿ ಬಳಸಿಕೊಂಡಿರುವ ಪ್ರಯತ್ನವನ್ನು ಗುರುತಿಸಬಹುದಾಗಿದೆ. ಆರಂಭ ಕಾಲದ ಚಂಪೂವಿನ ಛಂದೋ ವೈವಿಧ್ಯತೆಯನ್ನು ತಿಳಿಯುವಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಹೊಸದಾಗಿ ಅಕ್ಷರ ವೃತ್ತ ಗಳನ್ನು ಸ್ವೀಕರಿಸಿದಾಗ ಇದ್ದ ಪರಿಸ್ಥಿತಿಯ ಚಿತ್ರಣವನ್ನು ಶಾಸನಗಳಲ್ಲಿ ಗುರುತಿಸಿರು ವುದನ್ನು ಉಲ್ಲೇಖಿಸಬಹುದು. ಹಾಗೆಯೇ ಕಂದ, ತ್ರಿಪದಿ, ಛಂದೋ ಪ್ರಕಾರಗಳ ರೂಪಗಳ ಪ್ರಾಚೀನ ಪ್ರಯೋಗಗಳು ಶಾಸನಗಳಲ್ಲಿಯೇ ದೊರೆತಿರುವುದನ್ನು ಗುರುತಿಸಲಾಗಿದೆ. ಅಂಶ ಷಟ್ಪದ ಪ್ರಯೋಗಗಳು ಹಾಗೂ ಅಂಶ ಷಟ್ಪದದಲ್ಲಿ ರಚನೆಗೊಂಡ ಏಕೈಕ ಕಾವ್ಯ ಎಂದು ಪರಿಗಣಿತವಾಗಿರುವ ವಿವಾಹ ಪುರಾಣ ಎನ್ನುವ ಕಾವ್ಯ ಶಾಸನಗಳಲ್ಲಿಯೇ ಕಂಡು ಬಂದಿರುವುದನ್ನು ಗುರುತಿಸಲಾಗಿದೆ. ಹರಿಹರನಿಗಿಂತ ಎರಡು ಶತಮಾನಗಳ ಪೂರ್ವದಲ್ಲಿಯೇ ಲಲಿತ ರಗಳೆಯ ಲಕ್ಷಣಗಳನ್ನು ಹೋಲುವ ತೋಮರ ರಗಳೆ ಎಂಬ ವಿಶಿಷ್ಟ ಪ್ರಯೋಗ ಕೋಗಳಿ ಶಾಸನದಲ್ಲಿ ಬಳಕೆಯಾಗಿರುವುದನ್ನು ಗುರುತಿಸಲಾಗಿದೆ. ಭಾಷಿಕ ಹಾಗೂ ಛಂದಸ್ಸು ಇತ್ಯಾದಿಗಳ ಸಮಗ್ರ ಅಧ್ಯಯನದಲ್ಲಿ ಶಾಸನಗಳು ಪ್ರಮುಖ ಆಕರಗಳು ಎಂಬ ನೆಲೆಗಟ್ಟಿನಲ್ಲಿ ಕೆಲಮಟ್ಟಿಗೆ ನಡೆದಿರುವುದನ್ನು ಗುರುತಿಸಬಹುದು.

ಕನ್ನಡ ಶಾಸನಗಳ ಸಾಮಾನ್ಯ ಸ್ವರೂಪ, ಅವುಗಳಲ್ಲಿ ದಾಖಲೆಯಾದ ಇತಿಹಾಸ ಸಮಾಜ ಮೊದಲಾದವುಗಳ ಜೊತೆಗೆ ಅವುಗಳ ಭಾಷೆ, ಛಂದಸ್ಸು ಮೊದಲಾದವು ನಾಡು ನುಡಿಗಳ ಪರಂಪರೆಯನ್ನು ತಿಳಿಯಲು ನಮಗೆ ಅಧಿಕೃತ ಆಕರಗಳಾಗಿವೆ. ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಇವುಗಳಿಂದ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ ಗೊತ್ತಾಗಿದೆ. ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ, ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ. ಗ್ರಂಥಸ್ಥ ಸಾಹಿತ್ಯದ ಸಂಶೋಧನೆಗೆ ಪೂರಕ ಸಾಮಗ್ರಿ ದೊರೆತಿದೆ. ಹೊಸ ಸಂಗತಿಗಳ ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ ಸಾಧ್ಯವಾಗಿವೆ. ಶಾಸನಗಳ ಪ್ರಕಟನೆಯೂ ಅಭ್ಯಾಸವೂ ಪೂರ್ಣ ಗೊಂಡಿಲ್ಲ. ಶಾಸನಗಳ ಭಾಷೆಯ, ಸಾಹಿತ್ಯಗಳ ಬಹುಮುಖ ಅಧ್ಯಯನವು  ವ್ಯವಸ್ಥಿತ ಕ್ರಮಗಳಲ್ಲಿ ಇನ್ನು ನಡೆಯಬೇಕಾಗಿದೆ. ವಾಸ್ತವವಾಗಿ ಸಂಸ್ಕೃತ ಪ್ರಾಕೃತ ಶಾಸನಗಳ ವಿಷಯದಲ್ಲಿ ನಡೆದಿರುವಷ್ಟು ವ್ಯಾಪಕವಾದ ಅಭ್ಯಾಸ ಕನ್ನಡ ಶಾಸನಗಳ ವಿಷಯದಲ್ಲಿ ಆಗಿಲ್ಲ. ಶಾಸನಗಳ ಭಾಷೆ ಛಂದಸ್ಸು ಕವಿಗಳು ಶಬ್ದಗಳ ಮತ್ತು ಸಂದರ್ಭಗಳ ಅಕಾರಾದಿ, ಸಂಕಲನ ಗ್ರಂಥಗಳು, ಸಾಹಿತ್ಯ ವಿವೇಚನೆ, ವಿಶಿಷ್ಟ ಶಬ್ದಗಳ ಮತ್ತು ಸಂದರ್ಭಗಳ ಕೋಶಗಳು ಹೀಗೆ ವಿವಿಧ ಮುಖಗಳಲ್ಲಿ ಕೆಲಸಗಳು ನಡೆಯಬೇಕಾಗಿವೆ.