ಸಾಂಸ್ಕೃತಿಕ ಅಧ್ಯಯನದ ಕ್ರಮಪದ್ಧತಿಯಲ್ಲಿ ಇಲ್ಲಿಯವರೆಗೂ ಬಹುಪಾಲು ಆಕರ ಸಾಮಗ್ರಿಯನ್ನು ವಿಶ್ಲೇಷಣಾತ್ಮಕವಾಗಿ ಅಭ್ಯಸಿಸಿ ಒಂದು ವಿಷಯದ ಅಥವಾ ಸಮಗ್ರ ಬದುಕಿನ ರೂಪನಿಷ್ಠಶೋಧವನ್ನು ಮಾತ್ರ ನಡೆಸಲಾಗಿದೆ. ಅವುಗಳನ್ನು ಇನ್ನು ವ್ಯಾಪಕವಾಗಿ ಅಂದರೆ ವ್ಯಾಖ್ಯಾನಾತ್ಮಕವಾಗಿ ಅಧ್ಯಯನ ಮಾಡಿ ಬದುಕಿನ ಗುಣನಿಷ್ಠ ಶೋಧವಾಗಿ ಮಾಡಬೇಕಾಗಿದೆ ಎಂಬ ನಿಲುವು ಇತ್ತೀಚಿನ ಕೆಲವು ಸಂಶೋಧಕರಲ್ಲಿ ವ್ಯಕ್ತವಾಗಿದೆ.

ವೀರಜೀವನ ಹಾಗೂ ಆತ್ಮಬಲಿ ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಶಾಸನಗಳು ಹಾಗೂ ಇನ್ನಿತರ ಆನುಷಂಗಿಕ ಆಕರಗಳು ನೀಡುವ ಮಾಹಿತಿಗಳು ಪ್ರಾಚೀನ ಕಾಲದಲ್ಲಿ ಸತಿಪದ್ಧತಿ, ವೀರಮರಣ ಪ್ರಕಾರಗಳು ಪ್ರಚಲಿತವಿದ್ದವು ಎಂಬುದನ್ನು ತೋರಿಸಿಕೊಟ್ಟಿವೆ. ಜೊತೆಗೆ ಅವುಗಳ ಆಚರಣೆಯ ವಿಧಾನ, ಐತಿಹಾಸಿಕ ಬೆಳವಣಿಗೆ, ಪ್ರಾದೇಶಿಕ ಪ್ರಸಾರಗಳನ್ನು ಗ್ರಹಿಸುವ ಅಧ್ಯಯನವು ನಡೆದಿದೆ. ಆದರೆ ಇನ್ನೊಂದು ನಿಟ್ಟಿನಿಂದಲೂ ಇವುಗಳನ್ನು ಅಭ್ಯಸಿಸಬೇಕಾಗಿದೆ. ಈ ಪದ್ಧತಿಗಳು ಅಸ್ತಿತ್ವಕ್ಕೆ ಬರಲು ಇದ್ದ ಒತ್ತಡಗಳು, ಜನರು ಅವುಗಳಿಗೆ ತೋರಿಸುತ್ತಲಿದ್ದ ನಿಜವಾದ ಪ್ರತಿಕ್ರಿಯೆಗಳು, ಅವುಗಳ ಒಳಿತು-ಕೆಡುಕುಗಳು ಇತ್ಯಾದಿ ಅಂಶಗಳನ್ನು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಬೇಕಾಗುತ್ತದೆ. ಆತ್ಮಬಲಿಯ ಕುರಿತಾದ ಶಾಸನಗಳು ಹಾಗೂ ಶಿಲ್ಪಗಳಲ್ಲಿಯ ವಿವರಗಳು ಆತ್ಮ ಬಲಿಯ ಬಗೆಗೆ ಗೌರವ ಮೂಡಿಸುತ್ತವೆಯೇ ಹೊರತು ಅವುಗಳ ಹಿಂದೆ ಇದ್ದ ಒತ್ತಡಗಳೇನು ಎಂಬುದನ್ನು ಗ್ರಹಿಸಬೇಕಾಗಿದೆ. ರಾಜತ್ವವು ಜನ ಸಾಮಾನ್ಯರಿಗೆ ವೀರಮರಣದ ಸ್ವರ್ಗ ಪ್ರಾಪ್ತಿ ಎನ್ನುವ ನಂಬಿಕೆಯನ್ನು ಹೇಳುವುದರ ಮೂಲಕ ರಾಜನಿಗೆ ಮನಪೂರ್ವಕವಾಗಿ ದುಡಿಯುವ ತ್ಯಾಗ ಮಾಡುವ ರೀತಿಯಲ್ಲಿ ಯಾವ ರೀತಿ ಪ್ರಚೋದಿಸಲಾಗಿತ್ತು ಎಂಬ ಅಂಶಗಳ ಕಡೆಗೂ ಅಧ್ಯಯನ ಮಾಡಬೇಕಾಗಿದೆ. ರಾಜನಿಗಾಗಿ ಮಡಿದ ವೀರರ ತ್ಯಾಗ, ಬಲಿದಾನಗಳ ವರ್ಣನೆ, ಸ್ಮಾರಕಗಳ ಸ್ಥಾಪನೆ ಒಂದು ದೃಷ್ಟಿಯಿಂದ ರಾಜತ್ವದ ಆರಾಧನೆ ಮತ್ತು ವೈಭವೀಕರಣದ ಸಂಕೇತ ಎಂಬ ಗ್ರಹಿಕೆ ಇಂದು ಕೆಲವರಲ್ಲಿ ಉಂಟಾಗಿದೆ. ರಾಜತ್ವದ ಶ್ರೇಷ್ಠತೆಗಾಗಿ, ರಾಜ ತೋರಿದ ಪ್ರೀತಿಗಾಗಿ ವೇಳೆವಾಳಿಗಳು ತಮ್ಮನ್ನು ತಾವು ಕೊಂದುಕೊಳ್ಳುವುದು ನ್ಯಾಯಯುತವಾಗಿದ್ದಿತೇ? ಎಂಬ ಅನುಮಾನವೂ ಕೆಲವು ಸಂಶೋಧಕರನ್ನು ಕಾಡಿದೆ. ರಾಜತ್ವದ ಮೌಲ್ಯಗಳನ್ನೇ ಸಾಂಸ್ಕೃತಿಕ ಮೌಲ್ಯಗಳೆಂದು ಭಾವಿಸುವುದು ಎಷ್ಟರಮಟ್ಟಿಗೆ ಸರಿ? ಸಂಸ್ಕೃತಿಯನ್ನು ಚರಿತ್ರೆಯ ಒಂದು ಭಾಗವೆಂದು ಪರಿಗಣಿಸಿದರೆ ಅದು ಕೇವಲ ರಾಜರ ಚರಿತ್ರೆಯಷ್ಟೇ ಅಲ್ಲವೇ. ಇದರಿಂದಾಗಿ ಸಂಸ್ಕೃತಿಯ ಪರಿಪೂರ್ಣ ಅಧ್ಯಯನ ಆಯಿತೇ? ಎಂಬ ಪ್ರಶ್ನೆಯು ನಮ್ಮ ಮುಂದಿದೆ.

ಶಾಸನಗಳ ಸಾಂಸ್ಕೃತಿಕ ಅಧ್ಯಯನ ಇಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿದೆ. ಕೆಲವು ಅರೆಕೊರೆಗಳಿದ್ದರೂ ಇಂದು ಈ ಅಧ್ಯಯನದಲ್ಲಿ ಸಮಾಜ ಸಮ್ಮತ ಆಚಾರ-ವಿಚಾರಗಳ ಅಧ್ಯಯನ ಬಲಗೊಳ್ಳುತ್ತಿರುವುದು ಆಶಾದಾಯಕವಾಗಿದೆ. ಇತ್ತೀಚೆಗೆ ಹಲವಾರು ಸಂಶೋಧಕರು ಎಡಪಂಥೀಯ ಗುಣನಿಷ್ಠ ಪ್ರಕಾರದ ಸಂಶೋಧನಾ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಾರೆ. ಇವರು ಶಾಸನಗಳಂತಹ ಆಕರಗಳನ್ನು ಕುರಿತ ಸಾಂಸ್ಕೃತಿಕ ಅಧ್ಯಯನದಲ್ಲಿ ಮಾಹಿತಿಗಳನ್ನು ಯಜಮಾನ್ಯ ದೃಷ್ಟಿಯಿಂದ ಪರಿಗಣಿಸದೆ ಜನಪರ ದೃಷ್ಟಿಯಿಂದ ಗ್ರಹಿಸುವ, ಆ ಘಟನೆಗಳ ಹಿಂದೆ ಅಡಗಿರುವ ನೋವಿನ ನೆಲೆಗಳನ್ನು ಅರಸುವ ಇತ್ಯಾದಿ ಹೊಸ ದೃಷ್ಟಿಕೋನಗಳತ್ತ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಇವರ ಸಂಶೋಧನೆಯಲ್ಲಿ ಇಲ್ಲಿಯವರೆಗಿನ ಶಾಸನಗಳು ನೀಡಿರುವ ಸಂಗತಿಗಳ ಕುರಿತ ಮರು ವ್ಯಾಖ್ಯಾನವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ವೈಚಾರಿಕ ಶೋಧ ಎನಿಸಿದೆ. ಆಕರಗಳ ಕುರಿತ ಇವರ ವೈಚಾರಿಕ ಶೋಧವು ವಿಮರ್ಶೆಯ ಬರವಣಿಗೆಯನ್ನು ಸಮೀಪಿಸುತ್ತಿದೆ ಎಂದೇಳ ಬಹುದಾಗಿದೆ. ಭಾಷಾಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಆರ್ಥಿಕ ತಜ್ಞರುಗಳಿಗೆ ಶಾಸನ ಕ್ಷೇತ್ರವು ಮುಕ್ತವಾಗಿ ತೆರೆದುಕೊಂಡಿತು. ಶಾಸನಗಳ ಅಧ್ಯಯನಕಾರರೂ ಕೂಡ ಬಹು ಆಕರಗಳ ಬಳಕೆಗೆ ಮುಂದಾಗಿ ಕೊಳ್ಳುವ ಕೊಡುವ ಪ್ರಕ್ರಿಯೆ ಬೆಳೆದು ಆರೋಗ್ಯ ಪೂರ್ಣ ಚರ್ಚೆ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶಾಸನ ಆಕರಗಳಿಗೆ ಅಂಟಿದ್ದ ಮಡಿವಂತಿಕೆ ದೂರವಾಗುತ್ತಿದೆ. ಈ ಹಂತದಲ್ಲೂ ಹಿಂದಿನಂತೆಯೇ ಹೊಸ ಶಾಸನಗಳ ಪಾಠ ಪ್ರಕಟಣೆ, ವರ್ಗೀಕೃತ ವಿಂಗಡನೆಗಳು ನಡೆಯುತ್ತಲೇ ಬಂದಿವೆ. ಪ್ರತಿನಿತ್ಯ ಹಲವು ಹೊಸ ಶಾಸನಗಳು ಬೇರೆ ಬೇರೆ ಮೂಲಗಳಲ್ಲಿ ಪ್ರಕಟವಾಗುತ್ತವೆ. ಇವುಗಳನ್ನು ಬಳಸಿಕೊಂಡು ವಿಮರ್ಶಾತ್ಮಕವಾಗಿ ಅಧ್ಯಯನ ನಡೆಸುವವರೂ ಹೆಚ್ಚುತ್ತಿದ್ದಾರೆ. ಈ ವಿಷಯದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.