ಅನೇಕ ಹೊಸ ರೀತಿಯ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ ಎಂಬ ತೃಪ್ತಿಯ ನಡುವೆಯೂ ಇನ್ನೂ ಸಾಧಿಸುವುದು ಬಹಳಯಿದೆಂಬುದೂ ಮನವರಿಕೆಯಾಗುತ್ತಿದೆ. ಅಧ್ಯಯನಕ್ಕೊಳಗಾಗಬೇಕಾದ ಹಲವಾರು ವಿಷಯಗಳು ಶಾಸನಗಳಲ್ಲಿ ಹುದುಗಿ ಕುಳಿತಿವೆ. ಅವುಗಳ ಬಗ್ಗೆ ಒಂದಿಷ್ಟು ಗಮನ ಹರಿಸಬಹುದು. ಶಾಸನಗಳು ಯಾವುದೋ ಒಂದು ಕಾಲದ ರಾಜಕೀಯ ವಿಷಯವನ್ನೋ ಒಂದು ಘಟನೆಯನ್ನೋ ಅಥವಾ ಯಾರದೋ ಬಲಿದಾನವನ್ನು ಕುರಿತೋ ಹೇಳುತ್ತಿದ್ದಿರ ಬಹುದು. ಆದರೆ ಅವು ಇಂದಿಗೂ ನಮ್ಮ ಗ್ರಾಮ್ಯ ಸಮಾಜದಲ್ಲಿ ಜನರೊಡನೆ ಇವೆ. ಅವುಗಳಲ್ಲಿ ಏನಿದೆಯೆಂಬ ತಿಳುವಳಿಕೆಯಿಲ್ಲದ್ದಿದ್ದರೂ, ಅವುಗಳ ಬಗೆಗೆ ತಮ್ಮದೇ ಆದ ಕಥೆಗಳು,ವಾದಗಳನ್ನು ಮತ್ತು ಅನೇಕ ಕಲ್ಪನೆಯನ್ನು ಹೊಂದಿರುತ್ತಾರೆ. ಎಷ್ಟೋ ಶಾಸನಗಳು, ವೀರಗಲ್ಲು ಮಾಸ್ತಿಕಲ್ಲುಗಳು ಗ್ರಾಮದೇವತೆಗಳಾಗಿ ಕುಲದೈವ ಗಳಾಗಿ ಮಾರ್ಪಾಟಾಗಿವೆ. ಅವುಗಳ ಬಗ್ಗೆ ಜನರಿಗೆ ಭಯಭಕ್ತಿ ಇವೆ. ಆಯಾ ಜನಗಳ ತಿಳಿವಳಿಕೆಗಳಿಗನುಗುಣವಾಗಿ ಅವುಗಳೊಡನೆ ವ್ಯವಹರಿಸುತ್ತಾರೆ. ಒಬ್ಬ ಇತಿಹಾಸಕಾರನಿಗೆ ಅಥವಾ ಅದರ ಬಗ್ಗೆ ಜ್ಞಾನವಿರುವವನಿಗೆ ಅವು ಕೇವಲ ಒಂದು ಬರಹದ ಕಲ್ಲು ಅಥವಾ ಅವರ ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ. ಅವುಗಳೊಂದಿಗೆ ತಲೆ ತಲಾಂತರದಿಂದ ಅವಿನಾಭಾವ ಸಂಬಂಧ ಹೊಂದಿರುತ್ತಾನೆ. ಈ ಪರಿಣಾಮವಾಗಿ ಪ್ರತಿಯೊಬ್ಬರೂ ಶಾಸನಗಳನ್ನು ಕುರಿತು ತಮ್ಮದೇ ಆದ ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಈ ಭಾವನೆಗಳ ಅಧ್ಯಯನ ನಡೆಸಿದರೆ ಗ್ರಾಮ್ಯ ಸಮಾಜದ ಕಲ್ಪನಾ ಜಗತ್ತನ್ನು ಪ್ರವೇಶಿಸಬಹುದಾಗಿದೆ. ಪೂರ್ವಿಕರ ನಿರ್ಮಾಣಗಳು ಈಗಿನವರಲ್ಲಿ ಹೇಗೆ ಪ್ರಸ್ತುತ-ಅಪ್ರಸ್ತುತವಾಗಿದೆಯೆಂಬ ವಿವರಗಳು ದೊರಕುತ್ತವೆ. ಗ್ರಾಮೀಣರ ಅನಕ್ಷರಸ್ಥರ ಮುಗ್ಧಲೋಕದ ಪರಿಚಯವಾಗುತ್ತದೆ. ಈ ಮೂಲಕ ಐತಿಹಾಸಿಕ ಸ್ಮಾರಕಗಳು ಮತ್ತು ಸ್ಥಳೀಯರ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡಬಹುದು.

ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿರುವ ದಾನ ಶಾಸನಗಳ ಬಗ್ಗೆಯೂ ಇನ್ನೂ ವಿಪುಲವಾದ ಅಧ್ಯಯನಗಳಿಗೆ ಅವಕಾಶವಿದೆ. ದಾನಶಾಸನಗಳ ಪ್ರಯೋಜನದ ಮುಖ್ಯವರ್ಗ ಪುರೋಹಿತವರ್ಗ. ದಾನ ಪ್ರಕ್ರಿಯೆಯಲ್ಲಿ, ಇವರ ಪ್ರಾಬಲ್ಯಕ್ಕೆ ಕಾರಣಗಳೇನು? ಇದರ ಪರಿಣಾಮ ಸಮಾಜದ ಮೇಲೆ ಯಾವ ರೀತಿ ಆಯಿತು? ಎಂಬ ಅಧ್ಯಯನ ನಡೆಸಬೇಕಾಗಿದೆ.

ವಲಸೆ ಅಥವಾ ಗುಳೇ ಹೋಗುವುದು ಮಾನವನ ಸಹಜ ಪ್ರಕ್ರಿಯೆ. ಅವನು ಸುಲಭ ಬದುಕಿನ ನಿರ್ವಹಣೆಗೆ ಸೂಕ್ತ ಸ್ಥಳಗಳಿಗೆ ವಲಸೆ ಹೋಗುವುದು ಅನಾದಿ ಕಾಲದಿಂದಲೂ ನಡೆದಿದೆ. ಈ ರೀತಿಯ ವಲಸೆಗೆ ಕಾರಣಗಳು ಹಾಗೂ ಅದರಿಂದ ಉಂಟಾದ ಪರಿಣಾಮಗಳ ವಿವರ ಶಾಸನಗಳಲ್ಲಿ ಕೆಲವೆಡೆ ದೊರೆಯುತ್ತದೆ. ಇಂತಹ ವಿವರಗಳನ್ನುಳ್ಳ ಶಾಸನಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಬಹುದಾಗಿದೆ. ಶಾಸನಗಳಲ್ಲಿ ಹಲವಾರು ಕುಲಕಸುಬುಗಳ ವಿವರಗಳು ದೊರೆಯುತ್ತವೆ. ನಾಯಿಂದರು, ಕುಂಬಾರರು, ಪಾತರದವರು, ಅಡ್ಡರು, ಬೋವಿಗಳು, ಅಗಸರು, ಆಚಾರಿಗಳು, ಗಾಣಿಗರು, ತೋಟಿಗರು, ತಳವಾರರು, ಇನ್ನೂ ಮುಂತಾದವರ ಬಗ್ಗೆ ಶಾಸನಗಳಲ್ಲಿ ದೊರಕುವ ಮಾಹಿತಿಗಳನ್ನಾಧರಿಸಿ ಅಧ್ಯಯನ ನಡೆಸಬೇಕಾಗಿದೆ

ಪಶುಗಳು ನಮ್ಮ ಪೂರ್ವಿಕರ ಮುಖ್ಯ ಸಂಪತ್ತು. ಪಶುಗಳನ್ನು ಹೊರತುಪಡಿಸಿದ ಗ್ರಾಮೀಣ ಸಮಾಜದ ಊಹೆ ಅಸಾಧ್ಯ. ಅವುಗಳ ರಕ್ಷಣೆಗಾಗಿ ಹೋರಾಡಿ ಮಡಿದ ನೂರಾರು ಜನರ ಸ್ಮಾರಕಗಳು (ಗೋಗ್ರಹಣ), ಶಾಸನಗಳು ದೊರಕಿವೆ. ಇವುಗಳನ್ನು ಆಧರಿಸಿ ಪೂರ್ವಿಕರ ಮತ್ತು ಪಶುಗಳ ಗಾಢ ಸಂಬಂಧದ ಬಗ್ಗೆ ವ್ಯಾಪಕ ಅಧ್ಯಯನ ನಡೆಸಬಹುದಾಗಿದೆ.

ಕೊಡಗು ಪ್ರದೇಶದಲ್ಲಿ ಮತ್ತು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ದೊರೆಯುವ ಬ್ರಿಟಿಷರ ಶಾಸನಗಳನ್ನು ಆಧರಿಸಿ ವಸಾಹತುಶಾಹಿ ಪರಿಣಾಮಗಳನ್ನು ಅಭ್ಯಸಿಸಬಹುದಾಗಿದೆ. ಇವುಗಳ ಬಗ್ಗೆ ಯಾರೂ ಗಮನ ಹರಿಸಿಲ್ಲ. ನೂರಾರು ಶಾಸನಗಳಲ್ಲಿ ಮುಸಲ್ಮಾನರ ಚಿತ್ರಣ ಕಂಡುಬರುತ್ತದೆ. ಆ ವಿವರಗಳಲ್ಲಿ ಸೈನಿಕರಾಗಿ, ಅಧಿಕಾರಿಗಳಾಗಿ ಊರಿನ ಮುಖಂಡರಾಗಿ, ಪರೋಪಕಾರಿಗಳಾಗಿ ಕಂಡುಬರುವವರ ಚಿತ್ರಣವು ಇದೆ. ಕೊಡಗಿನ ಕುಂದ ಗ್ರಾಮದ ಜಹಗೀರನಾದ ಹಯತ್ ಖಾನ್ ಸಾಬಿಯು ಬೆಟ್ಟಮಹಾದೇವ ದೇವಾಲಯಕ್ಕೆ ನಂದಿಯ ವಿಗ್ರಹವನ್ನು ಮಾಡಿಸಿದ ವಿಷಯ ತಿಳಿಸುವ ಶಾಸನವೊಂದಿದೆ. ಇಂತಹ ವಿವರಗಳ ಅಧ್ಯಯನಗಳು ಆಗಿ ಕಾಲದ ಕೋಮುಸೌಹಾರ್ದತೆಯ ಪ್ರತೀಕಗಳಾಗಿವೆ.ಇಂತಹವುಗಳ  ಅಧ್ಯಯನ ಆಧುನಿಕ ಕಾಲಕ್ಕೆ ಹೆಚ್ಚು ಪ್ರಸ್ತುತವಾದವುಗಳಾಗಿವೆ.

ಯುದ್ಧದ ಸ್ಥಳದಲ್ಲಿದ್ದ ಸ್ತ್ರೀಯರ ಮಾನ-ಪ್ರಾಣ ಎರಡೂ ಹರಣವಾಗು ತ್ತಿದ್ದವೆಂಬುದಕ್ಕೆ ಪೆಣ್ಬುಯ್ಯಲ್ ಶಾಸನಗಳು ಸಾಕ್ಷಿಯಾಗಿವೆ. ಪೆಣ್ಬುಯ್ಯಲ್ ಶಾಸನಗಳ ಅಧ್ಯಯನದಿಂದ ಸಾಮಾನ್ಯರ ಜನ ಜೀವನದ ಮೇಲೆ ಅದರಲ್ಲೂ ಸ್ತ್ರೀಯರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮಗಳಾಗುತ್ತಿದ್ದವೆಂಬುದನ್ನು ತಿಳಿಯ ಬಹುದಾಗಿದೆ.

ಪುರಾತತ್ವ  ಶೋಧನೆಯಲ್ಲಿ ಪ್ರಾಚೀನ ಸ್ಥಳಗಳು, ಭೂಗತ ದೇವಾಲಯಗಳ ಉತ್ಖನನಕ್ಕೆ ಶಾಸನಗಳಿಂದ ಅಪಾರ ಮಾಹಿತಿ ಲಭ್ಯವಾಗಿದೆ. ಒಂದು ಸ್ಥಳದ ಪ್ರಾಚೀನತೆಯನ್ನರಿಯಲು ಶಾಸನಗಳು ಇಂದಿಗೂ ಪ್ರಮುಖ ಆಕರವಾಗಿವೆ. ಸನ್ನತಿ, ಚಂದ್ರವಳ್ಳಿ, ಗುಡ್ನಾಪುರ, ತಾಳಗುಂದ, ಬಳ್ಳಿಗಾವೆ, ಹಂಪಿಯ ಉತ್ಖನನಗಳಿಗೆ ಶಾಸನಗಳೇ ಪ್ರೇರಣೆಗಳಾಗಿವೆ. ಪ್ರಾಚ್ಯಸ್ಥಳಗಳ ಬಗೆಗೆ ಮಾಹಿತಿ ನೀಡುವ ನೂರಾರು ಶಾಸನಗಳಿವೆ. ಇವುಗಳ ಸೂಕ್ಷ್ಮ ಅಧ್ಯಯನದಿಂದ ಪುರಾತತ್ವ ಶೋಧನೆಗಳನ್ನು ನಡೆಸಬಹುದು.

ಇತ್ತೀಚಿನ ದಿವಸಗಳಲ್ಲಿಯ ಶಾಸನಗಳ ಅಧ್ಯಯನದ ಮುಖ್ಯ ಕೊರತೆಯೆಂದರೆ, ನಡೆದಿರುವ ಬಹುತೇಕ ಅಧ್ಯಯನಗಳು ಇನ್ನೂ ಪುಸ್ತಕ ರೂಪದಲ್ಲಿ ಪ್ರಕಟವಾಗದೇ ಇರುವುದರಿಂದ ಹೊಸ ರೀತಿಯಲ್ಲಿ ನಡೆದ ಅಧ್ಯಯನಗಳು ಓದುಗರಿಗೆ ತಲುಪಿಯೇ ಇಲ್ಲ. ಶಾಸನಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಡೆಸಿರುವ ನೂರಾರು ಅಧ್ಯಯನಗಳು ಇನ್ನೂ ಪ್ರಕಟವಾಗಿಲ್ಲದ ಕಾರಣದಿಂದಾಗಿ ಅನೇಕ ಅಧ್ಯಯನಗಳು  ವಿಶ್ವವಿದ್ಯಾಲಯಗಳಲ್ಲಿಯ ಎಂ.ಫಿಲ್. ಹಾಗೂ ಪಿಎಚ್.ಡಿ. ಪದವಿಯ ನಿಮಿತ್ತದ ಸಂಶೋಧನೆಗಳಾಗಿ ಪುನರಾವರ್ತನೆಯಾಗುತ್ತಿವೆ. ಆದರೂ ಈ ಅವಧಿಯಲ್ಲಿ ಹೆಚ್ಚು ಉತ್ಸಾಹದಾಯಕವಾಗಿಯೇ ಫಲಿತಾಂಶಗಳು ಬಂದಿವೆ.