ಕರ್ನಾಟಕವೂ ಏಕೀಕರಣವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕರ್ನಾಟಕದ ಸಾಮಾಜಿಕ – ಆರ್ಥಿಕ – ಸಾಂಸ್ಕೃತಿಕ ಸಂಗತಿಗಳನ್ನು ಕುರಿತಂತೆ ವಿದ್ವತ್‍ಪೂರ್ಣ ಪ್ರಬಂಧಗಳನ್ನೊಳಗೊಂಡ ‘ಮೈಸೂರು ರಾಜ್ಯ’ ಎಂಬ ಸಂಕಲವನ್ನು ಪ್ರಕಟಿಸಿದೆ. ಅದರಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೃಷ್ಣಕುಮಾರ ಕಲ್ಲೂರ ಎಂಬುವವರು ‘ಕನ್ನಡ ನಾಡಿನ ಸಂಚಾರ – ಸಂಪರ್ಕ’ ಎಂಬ ಶೀರ್ಷಿಕೆಯಲ್ಲಿ ಅಧ್ಯಯನ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಅನೇಕ ದೃಷ್ಟಿಯಿಂದ ಪ್ರಬಂಧವು ಮಹತ್ವಪೂರ್ಣವಾದುದಾಗಿದೆ. ಇದು ಕೇವಲ ಚಾರಿತ್ರಿಕ ಕಾರಣಕ್ಕೆ ಮುಖ್ಯವಾಗಿಲ್ಲ. ಕರ್ನಾಟಕವನ್ನು ನಿಮಿತ್ತ ಮಾಡಿಕೊಂಡು ಶ್ರೀ ಕಲ್ಲೂರ ಅವರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಾಂತವಾಗಬಲ್ಲಂತಹ ಅನೇಕ ಬೀಜ ಮಾತುಗಳನ್ನು ಇಲ್ಲಿ ಹೇಳಿದ್ದಾರೆ. ಲೇಖಕರು ತಮ್ಮ ಕನಸನ್ನು, ಹಂಬಲವನ್ನು, ನಿರೀಕ್ಷೆಗಳನ್ನು ಇಲ್ಲಿ ಮಂಡಿಸಿದ್ದಾರೆ. ಅವರು ವಿಷಯವನ್ನು ಪರಿಭಾವಿಸಿಕೊಂಡಿರುವ ರೀತಿ, ಅದಕ್ಕೆ ಅಗತ್ಯವಾದ ಅಂಕಿ – ಸಂಖ್ಯೆಗಳನ್ನು ಕಲೆ ಹಾಕಿಕೊಂಡಿರುವ ಬಗೆ, ನಕ್ಷೆ – ಕೋಷ್ಟಕಗಳನ್ನು ಬಳಸಿಕೊಂಡಿರುವ ಪರಿಗಳನ್ನು ಗಮನಿಸಿದರೆ ಅವರ ಪಾಂಡಿತ್ಯ ಹಾಗೂ ನಿಶಿತಮತಿಯ ಅರಿವು ನಮಗಾಗುತ್ತದೆ. ಇಲ್ಲಿನ ಭಾಷೆ ಆತ್ಮೀಯವಾಗಿದೆ. ಕರ್ನಾಟಕದ ಕನ್ನಡ ನಾಡವರ ಬಗೆಗಿನ ಅವರ ಕಳಕಳಿಯನ್ನು ಇಲ್ಲಿ ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ಸಾರಿಗೆ – ಸಂಚಾರ – ಸಂಪರ್ಕಗಲ ಬೆಳವಣಿಗೆಯೆಂಬುದು ಅವರಿಗೆ ಕೇವಲ ಭೌತಿಕ ಕ್ರಿಯೆಯಾಗಿಲ್ಲ. ಕರ್ನಾಟಕದ ಬಗ್ಗೆ, ಅದರ ಪ್ರಗತಿಯ ಬಗ್ಗೆ ಅವರಿಗಿರುವ ಶ್ರದ್ಧೆ, ಕಾಳಜಿ, ಬದ್ಧತೆ ಹಾಗೂ ಕನಸು – ಇವುಗಳಿಗೆ ಪುರಾವೆಗಳು ಪ್ರಬಂಧದಲ್ಲಿ ತುಂಬಾ ದೊರೆಯುತ್ತವೆ. ಕರ್ನಾಟಕ ರಾಜ್ಯವು ಉದಯವಾದ ೧೯೫೬ರಲ್ಲಿ ಪ್ರಸ್ತುತ ಪ್ರಬಂಧವು ಸಿದ್ಧವಾಗಿದ್ದರೂ ಅಲ್ಲಿ ಚರ್ಚಿತವಾಗಿರುವ ಸಂಗತಿಗಳು, ಅವರು ಗುರುತಿಸಿರುವ ಗುರಿಗಳು, ಲಕ್ಷ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದೇ ಈ ದೀರ್ಘ ಪ್ರಬಂಧವನ್ನು ಪುನರ್ ಮುದ್ರಿಸುತ್ತಿದ್ದೇವೆ. ಈ ಅಧ್ಯಯನ ಪ್ರಬಂಧವು ಎತ್ತುವ ಪ್ರಶ್ನೆಗಳನ್ನು, ಅಲ್ಲಿ ಅಡಗಿಕೊಂಡಿರುವ ತಾತ್ವಿಕ ಸಂಗತಿಗಳನ್ನು, ಅದು ಹೊತ್ತುಕೊಂಡಿರುವ ಕನಸುಗಳನ್ನು ಕುರಿತು ಕೆಲವು ಮಾತುಗಳನ್ನು ಇಲ್ಲಿ ಪ್ರಾಸ್ತಾವಿಕವಾಗಿ ಹೇಳಲು ಪ್ರಯತ್ನಿಸಲಾಗಿದೆ.

ಕರ್ನಾಟಕವನ್ನು ಅನುಭವಿಸುವುದು ಎಂದರೇನು?

‘ಅನುಭವಿಸು’ ಎಂದರೆ ತನ್ನೆದನ್ನಾಗಿ ಮಾಡಿಕೊಳ್ಳುವುದು, ಪ್ರಯೋಜನ ಪಡೆಯುವುದು ಎಂಬೆಲ್ಲ ಅರ್ಥಗಳು ಸಾಧ್ಯ. ನಮ್ಮ ಜ್ಞಾನಶಿಸ್ತುಗಳು ಕೆಲವು ನುಡಿಗಳ ಬಗ್ಗೆ ನೀಡುವ ನಿರ್ವಚನ, ನಿಘಂಟುಗಳು ಕೊಡುವ ಅರ್ಥವಿವರಣೆಗಳನ್ನು ಮೀರಿ ಅವು ಜನ ಸಮುದಾಯದ ಮನೋಭೂಮಿಕೆಯಲ್ಲಿ ಅನುಭವಸ್ಪಂದಿ ಅರ್ಥವನ್ನು ವ್ಯಂಜಿಸುತ್ತಿರುತ್ತವೆ. ಈ ನೆಲೆಯಲ್ಲಿ ‘ಕರ್ನಾಟಕವನ್ನು ಅನುಭವಿಸುವುದು’ ಎಂಬ ಸಂಗತಿಯನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಶ್ರೀ ಕೃಷ್ಣಕುಮಾರ ಕಲ್ಲೂರ ಅವರ ಪ್ರಸ್ತುತ ಅಧ್ಯಯನ ಪ್ರಬಂಧವನ್ನು ಓದಿದಾಗ ನಮಗೆ ಅಲ್ಲಿ ಲೇಖಕರು ಕರ್ನಾಟಕವನ್ನು ಅನುಭವಿಸುತ್ತಿರುವ ಪರಿಯು ಅರಿವಿಗೆ ಬರುತ್ತದೆ. ಅವರು ಕರ್ನಾಟಕವನ್ನು ಉಸಿರಾಡುತ್ತಿರುವ ರೀತಿ ತಿಳಿಯುತ್ತದೆ. ಕರ್ನಾಟಕವೆಂಬುದು ಇಲ್ಲಿ ಕೇವಲ ಮಣ್ಣಲ್ಲ, ನದಿ – ಬೆಟ್ಟವಲ್ಲ, ಜಲಪಾತವಲ್ಲ, ಗಂಧದ ಮರವಲ್ಲ. ಹಾಗಾದರೆ ಅದೊಂದು ಭಾವನೆಯೆ? ಅದೂ ಅಲ್ಲ. ಅದೊಂದು ಭೌತಿಕ, ಸಾಮುದಾಯಿಕ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಗತಿಯಾಗಿದೆ. ಕೃಷ್ಣಕುಮಾರ ಕಲ್ಲೂರ ಅವರು ಕರ್ನಾಟಕವನ್ನು ಭಾವನಾತ್ಮಕ ನೆಲೆಯಲ್ಲಿ ಹೇಗೆ ಉಇಸಿರುಆಡುತ್ತಿದ್ದಾರೊ ಅದೇ ರೀತಿ ಅದರ ಭೌತಿಕ, ಸಾಮುದಾಯಿಕ, ಸಾಂಸ್ಕೃತಿಕ ನೆಲೆಗಳಲ್ಲಿ ಅನುಭವಿಸುತ್ತಿದ್ದಾರೆ. ಆದ್ದರಿಂದಲೇ ಅವರು ಕರಾವಳಿ ಬಗ್ಗೆ ಎಷ್ಟು ಪ್ರಮಾಣಭೂತವಾಗಿ ಮಾತನಾಡಬಲ್ಲರೋ ಅಷ್ಟೇ ಅಧಿಕೃತವಾಗಿ ಚಾಮರಾಜನಗರ ಜಿಲ್ಲೆ/ಕೋಲಾರ ಜಿಲ್ಲೆ ಅಥವಾ ಬೀದರ್ ಜಿಲ್ಲೆ ಬಗ್ಗೆಯೂ ಮಾತನಾಡಬಲ್ಲರು. ಇಡೀ ಕರ್ನಾಟಕವನ್ನು ಅದರ ಎಲ್ಲ ಸಂಕೀರ್ಣತೆ – ವೈವಿಧ್ಯತೆ, ಸಮಗ್ರತೆ, ಸೂಕ್ಷ್ಮತೆಯಲ್ಲಿ ಪರಿಭಾವಿಸಿಕೊಳ್ಳುವುದು ಕಲ್ಲೂರ ಅವರಿಗೆ ಸಾಧ್ಯವಾಗಿದೆ. ಇಲ್ಲಿನ ಲೇಖನವು ಸಂಚಾರ ಸಾರಿಗೆ ಬಗ್ಗೆ ಇದೆ ಎಂಬುದು ನಿಮಿತ್ತ ಮಾತ್ರ ಅವರ ಪ್ರಬಂಧದ ಮೂರನೆಯ ಭಾಗ ‘ಅಭಿವೃದ್ಧಿಯ ಚತುರ್ಮುಖಗಳು’ ಎಂಬುದನ್ನು ಗಮನಿಸಿದಾಗ ಅದು ನಮಗೆ ತಿಳಿಯುತ್ತದೆ. ಭೂಪಟಗಳನ್ನು ಇಲ್ಲಿ ಅವರು ರೂಪಿಸಿರುವ ರೀತಿಯನ್ನು ಗಮನಿಸಿದರೆ ನಮಗೆ ಅದರ ಅರಿವಾಗುತ್ತದೆ. ಕರ್ನಾಟಕ ನಾಡವರ ಸರ್ವಾಂಗೀಣ ಪ್ರಗತಿಯು ಅವರ ಲೇಖನ ಕೃಷಿಯ ಹಿಂದಿನ ಉದ್ದೇಶವಾಗಿದೆ. ಇದನ್ನು ಕೇವಲ ಭಾಷಾಭಿಮಾನವೆಂದೂ, ನಾಡಿನ ಬಗೆಗಿನ ಆರಾಧನೆಯೆಂತಲೂ ಭಾವುಕತೆಯೆಂದೂ ತಳ್ಳಿ ಹಾಕುವುದು ಸಾಧ್ಯವಿಲ್ಲ. ಏಕೆಂದರೆ ಅವರು ಕರ್ನಾಟಕಕ್ಕೆ ಸಂಬಂಧಿಸಿದಂತೆ ಗಟ್ಟಿಯಾದ ಭೌತಿಕ ನೆಲೆಯಲ್ಲಿ ನಿಂತಿದ್ದಾರೆ ಎಂದೇ ಅವರಿಗೆ ಇಲ್ಲಿ ಆರ್ಥಿಕ ಏಕೀಕರಣದ ಬಗ್ಗೆ, ಭೌತಿಕ ಬೆಳವಣಿಗೆ ಬಗ್ಗೆ ಮಾತನಾಡುವುದು ಸಾಧ್ಯವಾಗಿದೆ. ಈ ಬಗ್ಗೆ ಅವರು ಹೀಗೆ ಬರೆಯುತ್ತಾರೆ.

            “ಭಾಷೆಯ ನೆಪದಿಂದ ಒಂದಾದ ಜನಜೀವನವೂ, ಅದರ ವ್ಯಾಪಾರ ಹಾಗೂ ಔದ್ಯೋಗಿಕ ಚಟುವಟಿಕೆಗಳೂ, ಸಾರಿಗೆ ಸಂಪರ್ಕಗಳೂ ಒಂದೇ ಒಂದು ಪ್ರವಾಹವಾಗಿ ಮಡುವು ಗೊಂಡು ಜನತೆಯ ನಿದರ್ಶಕತ್ವವನ್ನು ಅನುಸರಿಸಿ ಹರಿಯಬೇಕಾಗಿದೆ. ಹಲವು ಹಳ್ಳ ನದಿಗಳುಳ್ಳ ಮಹಾನದಿಯನ್ನು ಅಣೆಕಟ್ಟಿನಿಂದ ಮಡುವುಗೊಳಿಸಿ ನಾವು ಅದರ ನೀರನ್ನು ಉಪಯೋಗಿಸುವಂತೆಯೇ, ನಮ್ಮ ಸಂಚಾರ ಸಾಧನಗಳನ್ನು ಕ್ರೋಡೀಕರಿಸಿ ನಾಡಿನ ಔದ್ಯೋಗಿಕ ಹಾಗೂ ವಾಣಿಜ್ಯ ಸಂಪತ್ತಿನ ಏಕೀಕರಣವೂ ಆಗುವಂತೆ ಮಾಡುವುದು ಅವಶ್ಯಕವಾಗಿದೆ” (ಪು. ೬)

ಕರ್ನಾಟಕ ಏಕೀಕರಣ ಜನರನ್ನು ಸಂಘಟಿಸಲು ಭಾಷೆಯ ಒಂದು ಪ್ರಬಲ ಸಾಧನವಾಗಿತ್ತು. ಆದರೆ ಭಾಷೆಯೊಂದೆ ಜನರಲ್ಲಿ ಐಕ್ಯತೆಯನ್ನು ಕಾಪಾಡಬಲ್ಲುದು ಎಂಬುದರ ಬಗ್ಗೆ ಕಲ್ಲೂರ ಅವರಿಗೆ ನಂಬಿಕೆಯಿಲ್ಲ, ಆದ್ದರಿಂದಲೇ ಅವರು ಔದ್ಯೋಗಿಕ – ಭೌತಿಕ – ವಾಣಿಜ್ಯ – ವ್ಯಾಪಾರ ಮುಂತಾದ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ಮಾತನಾಡುತ್ತಾರೆ.

ವಿಮುಖ ಮತ್ತು ಅಭಿಮುಖ ಬೆಳವಣಿಗೆ

ಶ್ರೀ ಕೃಷ್ಣಕುಮಾರ ಕಲ್ಲೂರ ಅವರು ತಮ್ಮ ಪ್ರಬಂಧದಲ್ಲಿ ವಿಮುಖಿ ಬೆಳವಣಿಗೆ ಮತ್ತು ಅಭಿಮುಖಿ ಬೆಳವಣಿಗೆ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ಅವರು ಇಡೀ ಪ್ರಬಂಧಕ್ಕೆ ಒಂದು ತಾತ್ವಿಕ ಚೌಕಟ್ಟನ್ನು ಅವು ಒದಗಿಸಿಕೊಟ್ಟಿವೆ. ಅಭಿವೃದ್ಧಿ ಸಂಬಂಧಿಸಿದಂತೆ ಅವು ಬೀಜ ಮಾತುಗಳಾಗಿವೆ. ಈ ಪರಿಭಾವನೆಗಳ ಆಧಾರದ ಮೇಲೆ ಕಲ್ಲೂರ ಅವರು ತಮ್ಮ ಪ್ರಬಂಧವನ್ನು ಕಟ್ಟಿದ್ದಾರೆ. ಅವರು ತಮ್ಮ ಪ್ರಬಂಧದಲ್ಲಿ ಪ್ರತಿಪಾದಿಸಿರುವ ಪ್ರಮೇಯವನ್ನು ಹೀಗೆ ಸಂಗ್ರಹಿಸಿ ಹೇಳಬಹುದು.

            “ಅಭಿವೃದ್ಧಿಯೆಂಬುದು – ಅದು ಔದ್ಯೋಗಿಕವಾಗಿರಲಿ, ವ್ಯಾಪಾರ – ವಾಣಿಜ್ಯ ಕ್ಷೇತ್ರದ್ದಾಗಿರಲಿ – ಸಾರಿಗೆ – ಸಂಚಾರಕ್ಕೆ ಸಂಬಂಧಿಸಿದ್ದಾಗಿರಲಿ – ನಾಡಿಗೆ – ನಾಡವರಿಗೆ ಅಭಿಮುಖಿಯಾಗಿರಬೇಕು”.

ಪ್ರಸ್ತುತ ಪ್ರಬಂಧದಲ್ಲಿ ಈ ಪ್ರಮೇಯವನ್ನು ಸಾಧಿಸಿ ತೋರಿಸಲು ಅವರು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಅನೇಕ ಮೂಲಗಳಿಂದ ಅಂಕಿ – ಅಂಶಗಳನ್ನು ಕಲೆ ಹಾಕಿಕೊಂಡಿದ್ದಾರೆ. ನಕ್ಷಾಲೆಗಳನ್ನು ಬಳಸಿದ್ದಾರೆ. ಭವಿಷ್ಯವನ್ನು ಕುರಿತಂತೆ ಕೆಲವು ಮಾತನಾಡಿದ್ದಾರೆ. ಈ ಪ್ರಬಂಧದ ಆರಂಭದ ಭಾಗದಲ್ಲಿ ಅವರು ಹೀಗೆ ಹೇಳುತ್ತಾರೆ.

            “ವಿಜಯನಗರದ ಪಥನದ ನಂತರ ತುಂಡು ತುಂಡಾದ ನಮ್ಮ ನಾಡು ಬ್ರಿಟಿಷರ ಆಳ್ವಿಕೆಯಲ್ಲಿ ಇಪ್ಪತ್ತೆಂಟು ಆಡಳಿತಗಳಲ್ಲಿ ಹಂಚಿ ಹೋದುದರಿಂದ ನಮ್ಮ ನಾಡಿನ ಸಂಚಾರ ಸಂಪರ್ಕಗಳ ಬೆಳವಣಿಗೆ ಒಂದು ಸಮಗ್ರವಾದ ರೀತಿಯಲ್ಲಿ ಆಗಲಿಲ್ಲ. ಇದ್ದ ಬಿದ್ದ ಸಂಚಾರ ಸಾಧನಗಳು ಜನಜೀವನವನ್ನು ವಿವಿಧ ಮುಖವಾಗುವಂತೆ ವಿಂಗಡಿಸಿದುವೇ ಹೊರತು ನಾಡಿನ ಏಕಮುಖತೆಗೆ ಕಾರಣವಾಗಲಿಲ್ಲ. ಒಂದೊಂದು ಭಾಗವೂ ನಾಡಿನ ಕೇಂದ್ರಭಾಗದಿಂದ ವಿಮುಖವಾಗಿ, ದೂರದ ಇತರ ಆಡಳಿತ ಕೇಂದ್ರಗಳ ತುದಿಬಾಲಗಳಾಗಿ ರಸ್ತೆ ರೈಲುದಾರಿ ಇತ್ಯಾದಿಗಳ ಬೆಳವಣಿಗೆಗೆ ಸಾಕಾದಷ್ಟು ಅವಕಾಶ ಅವಶ್ಯಕತೆಗಳೆರಡೂ ಇಲ್ಲದಂತಾಗಿ ದುರ್ಲಕ್ಷಿತವಾದವು” (ಪು. ೨)

ಇಷ್ಟೊಂದು ಸುದೀರ್ಘವಾಗಿ ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ. ಪ್ರಬಂಧದಲ್ಲಿ ಕಲ್ಲೂರ ಅವರು ಮಂಡಿಸಿರುವ ವೈಚಾರಿಕ ಆಕೃತಿಗೆ ಸಂಬಂಧಿಸಿದಂತೆ ಕೆಲವು ಬೀಜಮಾತುಗಳು ಇಲ್ಲಿನ ಉದ್ದರಣದಲ್ಲಿವೆ. ಕೋಲಾರ ಚಿನ್ನದ ಗಣಿಗೆ ಶಿವನಸಮುದ್ರದಿಂದ ವಿದ್ಯುತ್ ಸಂಪರ್ಕವನ್ನು ಬ್ರಿಟಿಷರು ಯಾಕೆ ಒದಗಿಸಿದರು? ಸ್ವಾಮಿಹಳ್ಳಿ – ಕೊಟ್ಟೂರು ಮುಂತಾದ ಮೂಲೆ ಕಟ್ಟಿನ ಹಳ್ಳಿಗಳಿಗೂ ರೈಲುದಾರಿ ಯಾಕೆ ಕಲ್ಪಿಸಿದರು? ಅವರು ಸಾರಿಗೆ – ಸಂಪರ್ಕ ಏರ್ಪಡಿಸಿದ ನಗರ ಪಟ್ಟಣ ಹಳ್ಳಿಗಳೆಲ್ಲವೂ ಒಂದೋ ಖನಿಜಗಳ ನಿಕ್ಷೇಪ ಹೊಂದಿದ ಸ್ಥಳಗಳಾಗಿದ್ದವು – ಇಲ್ಲವೇ ವಾಣಿಜ್ಯ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುವ ಹೊಲ – ಗದ್ದೆಗಳಾಗಿದ್ದವು. ತಮ್ಮ ಪ್ರಮೇಯವನ್ನು ಮತ್ತಷ್ಟು ಖಚಿತಗೊಳಿಸುತ್ತ ಕಲ್ಲೂರ ಅವರು ವಿಮುಖ ಬೆಳವಣಿಗೆಯ ನಿದರ್ಶನವನ್ನು ಹೀಗೆ ಮಂಡಿಸಿದ್ದಾರೆ.

            “……..ಈ ರೈಲು ದಾರಿಗಳು ಕರ್ನಾಟಕದ ಕೇಂದ್ರ ಭಾಗದಿಂದ        ವಿಮುಖವಾಗಿ ಕನ್ನದ ನಾಡಿನ ವ್ಯಾಪಾರ ಹಾಗೂ ಮಿಕ್ಕ ಸಾರಿಗೆ ಕರ್ನಾಟಕದಿಂದ ಬಹಿರ್ಮುಖವಾಗಲು ಉಪಯೋಗವಾಗಿವೆಯೇ ಹೊರತು ಕರ್ನಾಟಕದ ವ್ಯಾಪಾರ, ಜನತೆಯ ಓಡಾಟ, ಸಾಮಾಜಿಕ, ರಾಜಕೀಯ ಸಂಬಂಧಗಳು ಏಕೀಕೃತ ಅಥವಾ ಕ್ರೋಢೀಕೃತವಾಗಲು ಸಾಧನಗಳಾಗಿಲ್ಲ” (ಪು. ೪).

ವಸಾಹತುಶಾಹಿಯು ಭಾರತದ – ಕರ್ನಾಟಕದ ಸಂದರ್ಭದಲ್ಲಿ ವಿನಾಶಕಾರಿಯೂ ಹಾಗೂ ಪುನರುಜ್ಜೀವನಕಾರಿಯೂ ಆಗಿತ್ತು ಎಂಬ ಮಾತೊಂದಿದೆ. ಬ್ರಿಟಿಷರು ನಿರ್ಮಿಸಿದ ರೈಲು ದಾರಿಗಳು, ಉದ್ದಿಮೆಗಳು, ಬಂದರುಗಳು, ರಸ್ತೆಗಳು ಆರ್ಥಿಕತೆಗೆ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾದರೂ ಇನ್ನೊಂದು ರೀತಿಯಲ್ಲಿ ಅವು ವಿನಾಶಕಾರಿಯಾದವು. ಇದನ್ನೇ ಕಲ್ಲೂರ ಅವರು ಜನರಿಗೆ, ನಾಡಿಗೆ ವಿಮುಖಿಯಾದ ಬೆಳವಣಿಗೆಯೆಂದು ಕರೆದಿದ್ದಾರೆ. ಅಲ್ಲಿ ಬೆಳವಣಿಗೆಯಿದೆ. ಆದರೆ ನಾಡಿಗೆ ನಾಡವರಿಗೆ ಅಭಿಮುಖವಾಗಿಲ್ಲ. ವಸಾಹತುಶಾಹಿಯ ಕಾಲದಲ್ಲಿ ಹೇಗೋ ಅದೇ ರೀತಿಯಲ್ಲಿ ಇಂದಿಗೂ ನಮ್ಮ ರಾಜ್ಯದ ರೈಲು ಸಾರಿಗೆಯು ಪಶ್ಚಿಮದಲ್ಲಿ ಮುಂಬೈ ಕಡೆಗೆ ಮುಖ ಮಾಡಿಕೊಂಡಿದ್ದರೆ, ದಕ್ಷಿಣದಲ್ಲಿ ಚೆನ್ನೈ ಕಡೆಗೂ ಮತ್ತು ಉತ್ತರದಲ್ಲಿ ಹೈದರಾಬಾದ್ ಕಡೆಗೂ ಮುಖ ಮಾಡಿಕೊಂಡಿದೆ. ಇಂದಿಗೂ ರೈಲು ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ಬಗೆಯಲ್ಲಿ ಕರ್ನಾಟಕವು ಅನ್ಯವಾಗಿ ಪರಕೀಯವಾಗಿ ಉಳಿದಿದೆ.

ಅಭಿಮುಖ ಬೆಳವಣಿಗೆ ಎಂದರೇನು?

ಇಂದು ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಜನರ ಸಹಾಭಾಗಿತ್ವದಿಂದ ಕೂಡಿದ ಅಭಿವೃದ್ಧಿಯ ಬಗೆಗಿನ ಮಾತು ಕೇಳಿಬರುತ್ತಿದೆ. ಅದನ್ನೇ ಕಲ್ಲೂರ ಅವರು ‘ಅಭಿಮುಖ ಬೆಳವಣಿಗೆ’ ಎಂದು ಕರೆದಿದ್ದಾರೆ. ಸಂಚಾರ – ಸಾರಿಗೆ – ಸಂಪರ್ಕ – ವ್ಯಾಪಾರ – ವಾಣಿಜ್ಯ – ಉದ್ದಿಮೆ ಹೀಗೆ ಸಕಲವೂ ಹೇಗೆ ನಾಡಿಗೆ ನಾಡವರಿಗೆ ಅಭಿಮುಖಿಯಾಗಿ ಬೆಳೆಯಬೇಕು ಎಂಬುದನ್ನು ಲೇಖಕರು ಅಭಿವೃದ್ಧಿಯ ಚತುರ್ಮುಖ ಎಂಬ ತಮ್ಮ ಪ್ರಬಂಧದ ಮೂರನೆಯ ಭಾಗದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಗೆ ನಾಲ್ಕು ಮುಖಗಳು.

೧. ಆಡಳಿತದ ಮುಖ

೨. ವ್ಯಾಪಾರ – ಉದ್ದಿಮೆ ಮುಖ

೩. ಅಂತಾರಾಜ್ಯ ಸಂಬಂಧಿ ಮುಖ

೪. ಸಾಂಸ್ಕೃತಿಕ ಮುಖ

ಕಲ್ಲೂರ ಅವರ ಪ್ರಕಾರ ಕರ್ನಾಟಕದಲ್ಲಿ ಆಡಳಿತವು ಬೆಂಗಳೂರಿನಲ್ಲಿ ನೆಲೆಗೊಂಡಿದ್ದರೆ ಕರಾವಳಿಯು ವ್ಯಾಪಾರ ವಾಣಿಜ್ಯದ ಕೇಂದ್ರವಾಗಿದೆ. ಅಂತಾರಾಜ್ಯ ಸಂಬಂಧಗಳಿಗೆ ಗುಲಬರ್ಗಾ – ಬಿಜಾಪುರ ಕೇಂದ್ರಗಳಾಗಿವೆ. ಕಲ್ಲೂರ ಅವರು ೧೯೫೬ರಲ್ಲಿ ಕರ್ನಾಟಕದ ಸಾಂಸ್ಕೃತಿಕ ಮುಕ ಉದಯಿಸಿಲ್ಲ ಎಂದು ಹೇಳುತ್ತ ‘ಹಂಪಿ’ ಯು ಅಂತಹ ಕೇಂದ್ರವಾಗಬೇಕು ಎಂದು ತಮ್ಮ ಕನಸನ್ನು ವ್ಯಕ್ತಪಡಿಸಿದ್ದಾರೆ. ಹಂಪಿ – ಹೊಸಪೇಟೆ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಬೇಕು ಎಂದು ಅವರು ಹೇಳಲು ಅದು ಭೌಗೋಳಿಕವಾಗಿ ರಾಜ್ಯದ ಕೇಂದ್ರವಾಗಿರುವಂತೆ ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕರ್ನಾಟಕದ ನಾಡಿಬಿಂದುವಾಗಿರುವುದು ಕಾರಣವಾಗಿದೆ. ನಾಲ್ಕು ದಿಕ್ಕುಗಳು – ಬೆಂಗಳೂರು, ಕರಾವಳಿ, ಗುಲಬರ್ಗಾ – ಬಿಜಾಪುರ ಮತ್ತು ಹಂಪಿ – ಹೊಸಪೇಟೆ ಹಾಗೂ ನಾಲ್ಕು ಮುಖಗಳು – ಆಡಳಿತ, ವ್ಯಾಪಾರ, ಅಂತಾರಾಜ್ಯ ಸಂಬಂಧ ಮತ್ತು ಸಾಂಸ್ಕೃತಿಕ ಇವು ಒಂದಾಗುವಂತೆ ಸಾರಿಗೆ ಸಂಪರ್ಕ ಸಂಚಾರದ ಸಾಧನಗಳು ರೂಪುಗೊಳ್ಳಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆಯ ರೂಪರೇಶೆಗಳನ್ನು ಪ್ರಬಂಧದಲ್ಲಿ ಲೇಖಕರು ನೀಡಿದ್ದಾರೆ (ನೋಡಿ ನಕ್ಷಾಲೇಖ ೨)

ಆರ್ಥಿಕ ಏಕೀಕರಣ

ಶ್ರೀ ಕೃಷ್ಣಕುಮಾರ ಕಲ್ಲೂರ ಅವರು ಭಾಷೆಯಲ್ಲಿ ಆಧರಿತ ಏಕೀಕರಣ ಬಗ್ಗೆ ಎಷ್ಟು ಕಾಳಜಿಯಿಂದ ಮಾತನಾಡುತ್ತಿದ್ದರೊ ಅದಕ್ಕಿಂತ ಹೆಚ್ಚು ಗಟ್ಟಿಯಾಗಿ ನಾಡಿನ ಆರ್ಥಿಕ ಏಕೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕುರಿತಂತೆ ಅವರ ಮಾತುಗಳು ಹೀಗಿವೆ.

 ” ಭಾರತದ ಮಿಕ್ಕೆಲ್ಲ ರಾಜ್ಯಗಳಂತೆ ನಮ್ಮದೂ ಒಂದು ಭಾಷಾ ರಾಜ್ಯ ಎಂತಲೇ ಅಭಿಮಾನದಿಂದ ಒಪ್ಪೋಣ. ಭಾಷೆಯು ಜನಜೀವನಕ್ಕೆಷ್ಟೋ ಅಷ್ಟೇ ಆಡಳಿತಕ್ಕೂ ಅಗತ್ಯ ಸಾಧನ. ಒಂದು ನಾಡಿಗೆ ಸಂಚಾರ ಸಂಪರ್ಕ ಸಾಧನಗಳು ಎಷ್ಟು ಅಗತ್ಯವೋ ಅದಕ್ಕೂ ಸಾವಿರ ಪಾಲು ಹೆಚ್ಚು ಅಗತ್ಯ ಭಾಷೆ. ಏಕೆಂದರೆ ಅದು ಸಾಮಾಜಿಕತೆಯ ಹಾಗೂ ವಿಚಾರಾದರ್ಶಗಳ ಸಂಚಾರ ಸಂಪರ್ಕಕ್ಕೆ ಅಸಮಾನವಾದ ಸಾಧನ. ಆದರೆ, ನಮ್ಮ ರಾಜ್ಯ ಭಾರತದ ಒಂದು ರಾಜಕೀಯ ಅಂಗ ಹಾಗೂ ಮಿಕ್ಕ ಭಾಷಾ ರಾಜ್ಯಗಳ ಸಹೋದರ ಒಡನಾಡಿ ಎಂಬುದನ್ನು ಮರೆಯಲಾಗದು. ಮೇಲಾಗಿ ಸಂಯುಕ್ತ ಕರ್ನಾಟಕದ ಹೊರಹೊರಗೆ ಭಾಷಾತ್ಮಕವಾಗಿದ್ದರೂ, ನಿಜವಾಗಿ ಅದು ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದವರ ಕೂಗಾಗಿತ್ತು. ಆದುದರಿಂದ ಈಗ ಒಂದಾಗಿರುವ ಸಂಯುಕ್ತ ಕರ್ನಾಟಕವು ಹಿಂದುಳಿದ ಪ್ರದೇಶಗಳದೇ ಒಂದು ಸಂಯುಕ್ತ ರಾಜ್ಯವೆಂತಲೂ, ಭಾಷೆ ಒಂದಾಗಿರು ವುದು ಒಂದು ಹೆಚ್ಚಿನ ಅನುಕೂಲ್ಯ ಎಂತಲೂ ಭಾವಿಸಿಕೊಳ್ಳಬೇಕು. ಆದುದರಿಂದ ಭಾಷೆ, ಸಾಹಿತ್ಯಗಳ ಬೆಳವಣಿಗೆಗಿಂತಲೂ ಹಿಂದುಳಿದ ಪ್ರದೇಶಗಳ ಆರ್ಥಿಕ ಬೆಳವಣಿಗೆಯೇ ಕರ್ನಾಟಕ ರಾಜ್ಯದ ಗುರಿ ಎಂದು ಬಗೆಯಬೇಕು” (ಪು. ೪೧).

ಕರ್ನಾಟಕವನ್ನು ಅದರ ಸಮಗ್ರತೆ, ಉಪಪ್ರದೇಶಗಳು, ಮೂಲೆಕಟ್ಟುಗಳು ಮುಂತಾದ ನೆಲೆಯಿಂದ ಪರಿಭಾವಿಸಿಕೊಂಡಾಗ ಮಾತ್ರ ಮೇಲಿನಂತೆ ಯೋಚಿಸುವುದು ಸಾಧ್ಯವಾಗುತ್ತದೆ. ಕಳೆದ ನಾಲ್ಕು ದಶಕಗಳಿಂದಲೂ ಹೀಗೆ ಕರ್ನಾಟಕವನ್ನು ಅದರ ಎಲ್ಲ ಉಪಪ್ರದೇಶಗಳ ನೆಲೆಯಿಂದ ಪರಿಭಾವಿಸಿಕೊಳ್ಳದೆ ಹೋದುದರಿಂದ ಅಭಿವೃದ್ಧಿಗೆ ಸಂಬಂದಿಸಿದ ಪ್ರಾದೇಶಿಕ ಅಸಮಾನತೆ ಸಮಸ್ಯೆಯು ಇಂದು ವಿಷಮ ಸ್ವರೂಪ ತಳೆದಿದೆ. ಅಭಿವೃದ್ಧಿಯೆಂದರೆ ಅಭಿವೃದ್ಧಿ ಹೊಂದಿದ ಜನಸಮುದಾಯಗಳ ಅಭಿವೃದ್ಧಿಯೆಂತಲೂ ಪರಿಭಾವಿಸುವ ಪರಿಯನ್ನು ಕಲ್ಲೂರ ಅವರು ಟೀಕಿಸುತ್ತಿದ್ದಾರೆ. ಅವರ ಮಾತುಗಳಲ್ಲಿ ಹೇಳುವುದಾದರೆ ‘ನಮ್ಮ ನಿಜ ಕರ್ನಾಟಕವು ಕೊಡಗು, ಕನ್ನಡ ಜಿಲ್ಲೆಗಳು, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಗುಲಬರ್ಗಾ ಪ್ರದೇಶದಲ್ಲಿರುವುದಲ್ಲದೆ ಬೆಂಗಳೂರು, ಮಂಗಳೂರು, ಮೈಸೂರು ನಗರಗಳಲ್ಲಲ್ಲ’ (ಪು. ೩೪೩). ಹಿಂದುಳಿದ ಪ್ರದೇಶ ಹಾಗೂ ಹಿಂದುಳಿದ ಜನಸಮುದಾಯಗಳ ಅಭಿವೃದ್ಧಿ ಮಾತ್ರ ಅಭಿವೃದ್ಧಿಯೆನಿಸಿಕೊಳ್ಳಲು ತಕ್ಕುದಾಗಿದೆ.

ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಸಮಾನತೆಯನ್ನು ಹೇಗೆ ಸಾಧಿಸಿಕೊಳ್ಳಬೇಕು ಎಂಬುದನ್ನು ಅವರು ತಮ್ಮ ಮೂಲ ಸಿದ್ಧಾಂತವಾದ ‘ನಾಡಿಗೆ – ನಾಡವರಿಗೆ ಅಭಿಮುಖಿಯಾದ ಬೆಳವಣಿಗೆ’ ಯ ಚೌಕಟ್ಟಿನಲ್ಲಿ ಮಂಡಿಸಿದ್ದಾರೆ. ಅವರು ಹೇಳುವುದೇನೆಂದರೆ ’ಬೆಂಗಳೂರು ಇನ್ನು ಮುಂದೆ ಉತ್ತರಾಭಿಮುಖಿಯಾಗಬೇಕು’ ಮತ್ತು ’ಉತ್ತರದ ಕನ್ನಡಿಗರು ದಕ್ಷಿಣಾಭಿಮುಖುಗಳಾಗಬೇಕು’. ಮುಂದುವರಿದು ಹೇಳುತ್ತಾರೆ. ದಕ್ಷಿಣದ ಕನ್ನಡಿಗರೂ ಮತ್ತು ಉತ್ತರದ ಕನ್ನಡಿಗರೂ ಪಶ್ಚಿಮಾಭಿಮುಖಿಗಳಾಗಿ ಕರಾವಳಿಯನ್ನು ಪೂರ್ತಿ ಅಭಿವೃದ್ಧಿಪಡಿಸಬೇಕು. ದಕ್ಷಿಣ, ಉತ್ತರ ಹಾಗೂ ಪಶ್ಚಿಮಗಳು ಸೇರಿ ಪೂರ್ಣ ಕರ್ನಾಟಕವಾದಂತಾಗುತ್ತದೆ. ಒಟ್ಟಾರೆಯಾಗಿ ನಾಡು ಆರ್ಥಿಕವಾಗಿ ಸುಭದ್ರವಾಗಬೇಕು. ನಾಡಿನ ಹಿಂದುಳಿದ ಭಾಗಗಳು ಬೆಳೆಯಬೇಕು. ಅದಕ್ಕಾಗಿ ಅವರು ಪರಿಭಾವಿಸಿಕೊಂಡಿರುವ ರೀತಿಯಲ್ಲಿ. ಅಂದರೆ ಉತ್ತರ – ದಕ್ಷಿಣ ಹಾಗು ಪಶ್ಚಿಮಗಳನ್ನು ಒಳಗೊಂಡು ನಾಡಿಗೆ ಹಾಗೂ ಅಲ್ಲಿನ ನಾಡವರಿಗೆ ಅಭಿಮುಖಿಯಾಗಿ ಬೆಳವಣಿಗೆಯಾಗಬೇಕು. ಅವರು ನಾಡು ಹಾಗೂ ನಾಡವರ ಬಗ್ಗೆ ಇಲ್ಲಿ ಮಾತನಾಡುತ್ತಿದ್ದಾರೆ.

ಕರಾವಳಿ ಬಗೆಗಿನ ಕಾಳಜಿ

ಕರಾವಳಿಯ ಮಹತ್ವವನ್ನು ಹಾಗೂ ಗುರುತ್ವವನ್ನು ಕರ್ನಾಟಕವು ಇಂದಿಗೂ ಅರಿತುಕೊಂಡಂತೆ ಕಾಣಲಿಲ್ಲ. ಅದನ್ನು ಕಲ್ಲೂರ ಅವರು ಅತ್ಯ್ಮ್ತ ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಕರಾವಳಿಯ ಆರ್ಥಿಕ – ಭೌತಿಕ ಮಹತ್ವವನ್ನು ಅವರಂತೆ ಪ್ರಾಯಶಃ ಮತ್ತಾರು ಗುರುತಿಸಿದಂತೆ ಕಾಣಲಿಲ್ಲ. ಅವರ ಮಾತಿನಲ್ಲಿ ಹೇಳುವುದಾದರೆ ಯಾವುದೇ ಪ್ರದೇಶಕ್ಕೆ ಕರಾವಳಿಯಿರುವುದೆಂದರೆ ಒಂದು ಭಾಗ್ಯ. ಇಡೀ ಕರ್ನಾಟಕವು ಪಶ್ಚಿಮದ ಕರಾವಳಿಗೆ ಮುಖಮಾಡಿಕೊಂಡು ಬೆಳೆಯಬೇಕು ಎಂಬುದು ಕಲ್ಲೂರ ಅವರ ಆಶಯ. ಕರಾವಳಿಯಲ್ಲಿ ಹುದುಗಿರುವ ಅಭಿವೃದ್ಧಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅದನ್ನು ನಾವು ಅಭಿವೃದ್ಧಿಪಡಿಸಿಲ್ಲ. ಕರಾವಳಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನಾಡಿನ ಅಭಿವೃದ್ಧಿಯ ಬಗ್ಗೆ ನಾವು ಯೋಚಿಸಿಲ್ಲ ಮತ್ತು ಯೋಜನೆಗಳನ್ನು ರೂಪಿಸಿಲ್ಲ. ಮಂಗಳೂರನ್ನು ಬಿಟ್ಟರೆ ನಮಗೆ ಕರಾವಳಿ ಗುಂಟ ಇರುವ ಉಳಿದ ಯಾವುದೇ ಬಂದರನ್ನು ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಬೆಳೆಸಲಾಗಲಿಲ್ಲ. ಕರ್ನಾಟಕದ ಉದಯದೊಂದಿಗೆ ದಕ್ಷಿಣ ಹಾಗೂ ಉತ್ತರ ಕರಾವಳಿಗಳು ಏಕೀಕರಣಗೊಂಡಿದ್ದು ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಅತ್ಯಂತ ಮಹತ್ವದ ಒಂದು ಬದಲಾವಣೆಯಾಗಿದೆ. ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಅತ್ಯಂತ ಮಹತ್ವದ ಒಂದು ಬದಲಾವಣೆಯಾಗಿದೆ. ಆದರೆ ಅದರಿಂದ ನಾವು ಪಡೆದುಕೊಂಡ ಪ್ರಯೋಜನ ಮಾತ್ರ ಶೂನ್ಯ. ಕರಾವಳಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಾರಿಗೆ ವ್ಯವಸ್ಥೆಯನ್ನು ನಾವು ಬೆಳೆಸಲಿಲ್ಲ. ಕರಾವಳಿಯ ಒಂದು ಭಾಗದಲ್ಲಿ ಮೈಸೂರು – ಬೆಂಗಳೂರು ಪ್ರದೇಶವಿದೆ. ಅದರ ಇನ್ನೊಂದು ಭಾಗದಲ್ಲಿ ಗುಲಬರ್ಗಾ = ಬಿಜಾಪುರ ಪ್ರದೇಶವಿದೆ. ಇವೆರಡು ಭಾಗಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಾಡಿನ ವ್ಯಾಪಾರ ವಾಣಿಜ್ಯ ಕರಾವಳಿಗಭಿಮುಖವಾಗಿ ಬೆಳೆಸುವ ಪ್ರಯತ್ನವನ್ನು ನಾವು ಮಾಡಲಿಲ್ಲ. ಹುಬ್ಬಳ್ಳಿ ಕಾರವಾರ ರೈಲುದಾರಿಯ ನಿರ್ಮಾಣವಾಗಲಿಲ್ಲ. ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಹುದುಗಿರುವ ಅಮೂಲ್ಯ ಸಂಪನ್ಮೂಲಗಳನ್ನು ಬರಿದು ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ವಿನಾ ಅವುಗಳ ನಿಜಮಹತ್ವವನ್ನು ನಾವಿನ್ನು ಅರಿತುಕೊಳ್ಳಬೇಕಾಗಿದೆ.

ಕಲ್ಲೂರ ಅವರು ತಮ್ಮ ಪ್ರಬಂಧದ ಪುಟ ೩೨ರಲ್ಲಿ ಕರ್ನಾಟಕದ ‘ಹದಿನಾಲ್ಕು ಅತ್ಯವಶ್ಯಕ ರೈಲು ದಾರಿಗಳು’ ಎಂಬ ಒಂದು ಪಟ್ಟಿ ನೀಡಿದ್ದಾರೆ. ಅವರು ೧೯೫೬ರಲ್ಲಿ ಪಟ್ಟಿ ಮಾಡಿರುವ ಹದಿನಾಲ್ಕು ರೈಲುದಾರಿಗಳಲ್ಲಿ ಒಂದೂ ಸಹ ಇಂದಿಗೂ ನಿರ್ಮಾಣವಾಗದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಇಡೀ ಕರ್ನಾಟಕದ, ಅದರಲ್ಲೂ ಬಾಂಬಾ ಕರ್ನಾಟಕ ಹಾಗೂ ಹೈದರಾಬಾದ್ – ಕರ್ನಾಟಕ ಪ್ರದೇಶದ ಭಾಗ್ಯದ ಬಾಗಿಲನ್ನು ತೆರೆಯಬಹುದಾದ ಚಿತ್ರದುರ್ಗ – ಹೊಸಪೇಟೆ – ಇಳಕಲ್ಲು – ಸೀತಿಮನೆ ರೈಲು ದಾರಿಯನ್ನು ಸರ್ಕಾರ ಜನತೆ – ದುರೀಣರು ಮರೆತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಈ ಮಾರ್ಗವು ಕರ್ನಾಟಕದ ಜೀವನಾಡಿಯಾಗಬಹುದಾಗಿದೆ.

೧. ಇದು ಉತ್ತರ ದಕ್ಷಿಣ ಭಾತರಗಳ ನಡುವಣ ಅಂತರವನ್ನು ಕಡಿಮೆ ಮಾಡುತ್ತದೆ. ಈ ಮಾರ್ಗದಿಂದ ಬಿಜಾಪುರ ಬಾಗಲಕೋಟೆ ಜಿಲ್ಲೆಗಳು ಬೆಂಗಳೂರು ನಗರಕ್ಕೆ ಸುಮಾರು ೧೪೫ ಕಿ.ಮಿ.ನಷ್ಟು ಹತ್ತಿರವಾಗುತ್ತವೆ. ಈ ಬಿಜಾಪುರವು ಬೆಂಗಳೂರಿನಿಂದ ೫೬೯ ಕಿ.ಮಿ. ದೂರದಲ್ಲಿದೆ.

೨. ಈ ಮಾರ್ಗದಿಂದ ವ್ಯಾಪರೋದ್ಯಮಕ್ಕೆ ಅನುಕೂಲವಾಗುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಪೆಟ್ರೋಲ್, ಸಕ್ಕರೆ, ಗೋಧಿ, ಬಾರ್ಯ ತೈಲಗಳನ್ನು ಸಾಗಿಸುವುದಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ದವಸಧಾನ್ಯಗಳನ್ನು, ಎಣ್ಣೆಕಾಳುಗಳನ್ನು, ಹತ್ತಿಯನ್ನು ಸಾಗಿಸಲು ಸುಲಭವಾಗುತ್ತದೆ.

೩. ಈ ಮಾರ್ಗವು ರಾಜ್ಯದ ನಡು ಮಧ್ಯೆ ಹಾದು ಹೋಗುತ್ತದೆ. ಇದರ ಅಕ್ಕಪಕ್ಕಗಳಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲು ಸಾಧ್ಯ. ಬಾಗಲಕೋಟೆ – ಬಿಜಾಪುರ ಜಿಲ್ಲೆಗಳಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳನ್ನು ರಪ್ಪು ಮಾಡಲು, ಗ್ರಾನೈಟ್ ಕಲ್ಲುಗಳನ್ನು ವಿದೇಶಗಳಿಗೆ ಸಾಗಿಸಲು ಇದು ಅನುವು ಮಾಡಿಕೊಡುತ್ತದೆ.

೪. ಈ ಮಾರ್ಗದಲ್ಲಿ ವಿಶ್ವಖ್ಯಾತಿಯ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳು ನೆಲೆಗೊಂಡಿವೆ (ಹಂಪೆ, ತುಂಗಭದ್ರಾ ಜಲಾಶಯ, ಅನೆಗೊಂದಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಕೂಡಲಸಂಗಮ, ಬನಶಂಕರಿ, ಮಹಾಕೂಟ ಇತ್ಯಾದಿ). ಈ ರೈಲು ದಾರಿಯಿಂದ ಕರ್ನಾಟಕದಲ್ಲಿ ಪ್ರವಾಸೋದ್ಯಮವು ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಈ ಬಗೆಯ ಆರ್ಥಿಕ – ವಾಣಿಜ್ಯ – ಸಾಮಾಜಿಕ ದೃಷ್ಟಿಯಿಂದ ಆಯಕಟ್ಟಿನದಾದ ರೈಲುದಾರಿಯ ಬಗ್ಗೆ ಕರ್ನಾಟಕವು ಮರೆತಿರುವುದು ದುರದೃಷ್ಟಕರ. ಕಲ್ಲೂರರವರ ಪ್ರಸ್ತುತ ಪ್ರಬಂಧವು ಸದರಿ ರೈಲುಮಾರ್ಗದ ಬಗ್ಗೆ ಜನರಲ್ಲಿ ಆಸಕ್ತಿ ಕೆರಳಿಸಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. (ಈ ರೈಲು ಮಾರ್ಗದ ವಿವರಗಳಿಗೆ ದಿನಾಂಕ ೧೦.೧೧.೨೦೦೧ರ ಪ್ರಜಾವಾಣಿ ವಿಷ್ಣುತೀರ್ಥ ಅನಂತ ಭಟ್ಟರ ಲೇಖನ ನೋಡಿ).

ಹಂಪಿ – ಅವರ ಕನಸು

ಹಂಪಿಯ ಬಗ್ಗೆ – ಹೊಸಪೇಟೆಯ ಬಗ್ಗೆ ಅವರಿಗಿದ್ದ ಕನಸನ್ನು ಗುರುತಿಸದೆ ಅವರ ಪ್ರಬಂಧದ ಬಗೆಗಿನ ಟಿಪಣಿಯನ್ನು ಮುಗಿಸುವುದು ಸಾಧ್ಯವಿಲ್ಲ. ಅವರ ದೂರದೃಷ್ಟಿಯು ಎಷ್ಟು ಹರಿತವಾಗಿತ್ತು ಎಂಬುದಕ್ಕೆ ಹಂಪಿ ಕುರಿತು ಅವರ ಮಾತುಗಳು ಪ್ರಮಾಣಭೂತವಾಗಿದೆ. ಸೊಂಡೂರು – ಹೊಸಪೇಟೆಯ ಬಳಿ ಒಂದು ಹಿರಿ ಔದ್ಯೋಗಿಕ ಕೇಂದ್ರವು ರೂಪುಗೊಳ್ಳುತ್ತದೆ ಎಂಬ ಮಾತನ್ನು ಅವರು ೧೯೫೬ರಷ್ಟು ಹಿಂದೆಯೇ ಹೇಳಿದ್ದಾರೆ. ಅವರು ಅಂದು ಹೇಳಿರುವ ಮಾತು ಇಂದು ನಿಜವಾಗಿದೆ. ಸಮಗ್ರ ಕರ್ನಾಟಕದ ಆತ್ಮಾಭಿಮಾನದ ಕುರುಹು ಹಂಪೆ ಎಂಬುದು ಅವರ ಒಂದು ನಂಬಿಕೆ. ಇದು ಕೇವಲ ಭಾವನೆಯ ಮಾತಲ್ಲ ಎಂಬುದನ್ನು ಅವರೇ ಹೇಳುತ್ತಾರೆ. ಹಂಪೆಯು ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಬೇಕೆಂಬುದು ಅವರ ಕನಸಾಗಿತ್ತು. ಈಗ ಹಂಪಿ ಪರಿಸರದಲ್ಲಿ ಕನ್ನಡ ವಿಶ್ವವಿದ್ಯಾಲಯವಾಗಿದೆ. ಹಂಪಿಯ ಉತ್ಸವವನ್ನು ಸಂಘಟಿಸಲಾಗುತ್ತಿದೆ. ಅವರ ಕನಸು ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪಮಟ್ಟಿಗಾದರೂ ನನಸಾಗುತ್ತಿದೆ. ನಾಡನ್ನು – ನಾಡವರನ್ನು ಒಳಗು ಮಾಡಿಕೊಂಡು ಅಭಿವೃದ್ಧಿಯನ್ನು ಯೋಗಿಸಿದಾಗ ಇವೆಲ್ಲ ಸಾಧ್ಯವಾಗುತ್ತವೆ. ಇಲ್ಲದಿದ್ದರೆ ಈಗ ಬೆಂಗಳೂರು ವಿಶ್ವಮುಖಿಯಾಗಿ ಜನರಿಗೆ ವಿಮುಖಿಯಾಗಿ ಬೆಳೆಯುವಂತೆ ಬೆಳೆಯುತ್ತದೆ. ಕೊನೆಯದಾಗಿ ನಾವಿಷ್ಟು ಹೇಳಬಹುದು. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅವರ ಅಂತರಾಳದಲ್ಲಿದ್ದ ತುಡಿತವನ್ನು ಪ್ರಸ್ತುತ ಪ್ರಬಂಧವು ನಮಗೆ ತೆರೆದು ತೋರಿಸುತ್ತದೆ. ಕರ್ನಾಟಕದ ಸಾರಿಗೆ ಸಂಪರ್ಕ ಸಂಚಾರಗಳ ಬೆಳವಣಿಗೆಯ ಹೊಣೆ ಹೊತ್ತಮಂದಿ ಕಲ್ಲೂರರಂತೆ ಯೋಚಿಸಿದ್ದನ್ನು ಇದುವರೆಗೂ ನಾವಂತೂ ನೋಡಲಿಲ್ಲ. ಹೀಗೆ ಅವರ ಪ್ರಬಂಧದ ಹಿರಿಮೆ ಗರಿಮೆ ಬಗ್ಗೆ ಬರೆಯುತ್ತ ಹೋಗಬಹುದು. ಆದರೆ ಇಷ್ಟು ಸಾಕು. ಇಲ್ಲಿ ಅವರ ಪ್ರಬಂಧವೇ ನಮ್ಮೆದುರಿಗಿದೆ. ಅದನ್ನು ನಮ್ಮದಾಗಿಸಿಕೊಳ್ಳುವುದರ ಮೂಲಕ ನಾವು ಕರ್ನಾಟಕದ ಬಗ್ಗೆ, ನಾಡವರ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಮನಸ್ಸಿನಲ್ಲಿದ್ದ ತುಡಿತಗಳನ್ನು ಅರಿತುಕೊಳ್ಳಬಹುದು.

– ಟಿ. ಆರ್. ಚಂದ್ರಶೇಖರ